ನೀಳ್ಗಥೆ – ಚಂದ್ರಿಕಾ ಸುಧೀಂದ್ರ
ತುಂಬು ಶ್ರೀಮಂತರ ಮಗಳಾದ ಲಾವಣ್ಯಾ, ಹಿರಿಯರ ಆಯ್ಕೆಯಂತೆ ಧನುಷ್‌ನನ್ನು ಮದುವೆಯಾಗಿ ಸುಖೀ ಸಂಸಾರದ ಒಡತಿ ಎನಿಸಿದ್ದಳು. ಸ್ಛುರದ್ರೂಪಿ ಹೆಂಡತಿ ಇದ್ದರೂ ಸದಾ ನಿರ್ಲಿಪ್ತನಾಗಿರುತ್ತಿದ್ದ ಗಂಡನಿಗಿಂತ, ಕ್ಲಬ್‌ಗೆ ಬರುತ್ತಿದ್ದ ವೈಭವ್ ಅವಳಿಗೆ ಹೆಚ್ಚು ಆತ್ಮೀಯನೆನಿಸಿದ ?
ಆ ದಿನ ಆಶ್ರಮದಲ್ಲಿ ಸಂಭ್ರಮದ ವಾತಾವರಣ! ಕಾರಣ ಅಲ್ಲಿರುವ ಹೆಣ್ಣುಮಕ್ಕಳೆಲ್ಲರ ಪಾಲಿಗೆ ಅಮ್ಮನಾಗಿರುವ ಇಂದಿರಮ್ಮನ 60ನೇ ಹುಟ್ಟುಹಬ್ಬದ ಆಚರಣೆ. ಅವರಿಗೆ ಹುಟ್ಟುಹಬ್ಬದ ಸಂಭ್ರಮದ ಆಚರಣೆ ಇಷ್ಟವಿಲ್ಲದಿದ್ದರೂ, ಆ ಮಕ್ಕಳ ಅಭಿಮಾನ, ಪ್ರೀತಿ, ವಿಶ್ವಾಸದ ಮಮತೆಗೆ ಮಣಿದು ಅವರೆಲ್ಲರಿಗೂ ಬೇಸರವಾಗಲು ಇಷ್ಟಪಡದ ಇಂದಿರಮ್ಮ ಒಪ್ಪಬೇಕಾಯಿತು. ಸುಮಾರು ವರ್ಷಗಳಿಂದ ಅಲ್ಲಿಯೇ ಬೆಳೆದು, ಆಶ್ರಮದ ಆಗುಹೋಗುಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ ವಿಜಯಾ, ಪ್ರೀತಿ, ಸುಮತಿ ಮೂವರೂ ಇಂದಿರಮ್ಮನ ಅನುರಾಗಕ್ಕೆ ಪಾತ್ರರಾಗಿದ್ದು ಅವರಿಗೆ ಸಹಾಯಕರಾಗಿದ್ದರೆಂದರೆ ತಪ್ಪಾಗಲಾರದು. ಎಲ್ಲರೂ ಕೂಡಿ ಅಮ್ಮನ ಹುಟ್ಟುಹಬ್ಬನ್ನು ಸಂಭ್ರಮದಿಂದ ಆಚರಿಸಲು ನಿಶ್ಚಯಿಸಿದ್ದರು.
ಪ್ರೀತಿಯ ಬಳಿ ಬಂದ ಸುಮತಿ ಅಮ್ಮ ಮೊಟ್ಟೆ ಹಾಕಿರುವ ಕೇಕ್ ತಿನ್ನುವುದಿಲ್ಲವೆಂದು ಅದನ್ನು ಹಾಕದೇ ಮಾಡಬೇಕೆಂದು ಆರ್ಡರ್ ಕೊಟ್ಟು ಬಂದಿದ್ದೇನೆ. ಎಲ್ಲರೂ ಸೇರಿ ಈ ದಿನ ಅಮ್ಮನಿಗೆ ಕೇಕ್ ತಿನ್ನಿಸೋಣವೆಂದಳು. ಅಷ್ಟರಲ್ಲಿ ಒಳ ಬಂದ ಆಳು ಸಿದ್ದನನ್ನು ನೋಡಿ ವಿಜಯಾ ಮುಂದುಗಡೆ ಮಾವಿನ ತೋರಣ ಸರಿಯಾಗಿ ಕಟ್ಟು, ಬಣ್ಣ ಬಣ್ಣದ ದೀಪಾಲಂಕಾರ ಮಾಡಿ, ಸ್ವಾಗತ ಫಲಕ ಬರುವಂತೆ ಮಾಡು ಎಂದಳು.
ಅಡುಗೆ ರಂಗಮ್ಮನಿಗೆ ಹೇಳಿ ಈ ದಿನ ವಿಶೇಷವಾದ ಅಡುಗೆ, ತಿಂಡಿ ಮಾಡಲು ಹೇಳಿ, ಹಾಗೇ ಇಂದಿರಮ್ಮ ಹೆಚ್ಚು ಇಷ್ಟಪಡುವ ಸಿಹಿ ತಿಂಡಿ ಮಾಡು, ಎಲ್ಲ ಶುಚಿ ಮತ್ತು ರುಚಿಯಾಗಿರಬೇಕೆಂದು ಸಲಹೆ ಕೊಡುತ್ತಿದ್ದಳು. ಹಾಗೇ ಸಮಾರಂಭದಲ್ಲಿ ಗಣ್ಯ ವ್ಯಕ್ತಿಗಳಿಗೆ ಹಾಗೂ ಅಮ್ಮನಿಗೆ ಹಾಕಲು ತಂದಿರುವ ಹಾರಗಳನ್ನೆಲ್ಲ ಮುಂದುಗಡೆಯ ದೊಡ್ಡ ಹಾಲ್‌ನಲ್ಲಿ ಜೋಡಿಸಿರಿ ಎಂದು ಆದೇಶಿಸುತ್ತಿದ್ದಳು.
ನಾವು ಅಮ್ಮನಿಗೆ ಏನೇ ಮಾಡಿದರೂ ಅದು ಕಡಿಮೆಯೇ. ನಾವು ಅನಾಥರಾಗಿದ್ದಾಗ ನಮಗೆಲ್ಲ ಆಸರೆ ನೀಡಿ, ವಿದ್ಯಾಭ್ಯಾಸ ಕೊಡಿಸಿ, ಟೈಲರಿಂಗ್, ಕಂಪ್ಯೂಟರ್ ತರಬೇತಿ ಕೊಡಿಸಿ ನಾವು ಜೀವನದಲ್ಲಿ ಒಳ್ಳೆಯವರಾಗಿ ಬಾಳಲು ಅಡಿಪಾಯ ಹಾಕಿಕೊಟ್ಟಿದ್ದಾರೆ. ನಾವು ಅವರಿಗೆ ಎಷ್ಟು ಸೇವೆ ಮಾಡಿದರೂ ಯಾವುದಕ್ಕೂ ಸರಿಸಾಟಿಯಾಗುವುದಿಲ್ಲ. ಹಾಗೆಂದು ಅಮ್ಮ ನಮ್ಮಿಂದ ಏನನ್ನೂ ಬಯಸದೇ ನಿಸ್ವಾರ್ಥ ಮನೋಭಾವದಿಂದ ನಮ್ಮನ್ನು ಸಾಕುತ್ತಿದ್ದಾರೆ. ಅವರ ಋಣದ ಭಾರ ನಮ್ಮ ಮೇಲಿದೆ.
ಪ್ರಮುಖ ವ್ಯಕ್ತಿಗಳು ಮಾತ್ರವಲ್ಲ ಕೊಡುಗೈ ದಾನಿಗಳಾದ ಬೃಹತ್ ಕಂಪನಿ ಮಾಲೀಕರುಗಳಾದ ಶ್ರೀಧರ್ ಮತ್ತು ಸಂಪತ್ ಇಂದು ಆಶ್ರಮಕ್ಕೆ ಆಗಮಿಸುತ್ತಿರುವುದೇ ವಿಶೇಷ. ವಿಶಾಲವಾದ ಹಾಲ್‌ನಲ್ಲಿ ಮೇಜಿನ ಮೇಲೆ ಟೇಬಲ್ ಕ್ಲಾತ್ ಹಾಕಿ ದೇವರ ಫೋಟೋ ಇರಿಸಿ ಬೆಳ್ಳಿ ಕಂಬಗಳಲ್ಲಿ ಎಣ್ಣೆ ಬತ್ತಿ ಹಾಕಿ ಅಮ್ಮನಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಇತ್ತು. ಮತ್ತೊಂದು ಮೇಜಿನ ಮೇಲೆ ಇಂದಿರಮ್ಮ ಸಲ್ಲಿಸಿರುವ ಸೇವೆಯ ಸಾಧನೆಗೆ ಬಂದಿರುವ ಬೆಳ್ಳಿ ಪದಕಗಳು, ಪ್ರಶಸ್ತಿ ಪತ್ರಗಳನ್ನೆಲ್ಲಾ ಜೋಡಿಸಿಡಲಾಗಿತ್ತು.
ಸದಾ ಹಸನ್ಮುಖಿಯಾದ ಇಂದಿರಮ್ಮ ತಲೆಗೆ ಗಂಟು ಹಾಕಿ ಶಾಲನ್ನು ಹೊದ್ದು ಸರಳ ಅಲಂಕಾರದೊಂದಿಗೆ ಸಮಾರಂಭಕ್ಕೆ ಬರಲು ಸಿದ್ಧವಾಗಿದ್ದರು. ಎಲ್ಲರ ಕಷ್ಟಸುಖಗಳನ್ನೂ ಕೇಳಿ ಅದಕ್ಕೆ ಸ್ಪಂದಿಸುತ್ತಿದ್ದ ರೀತಿ ಎಲ್ಲರಿಗೂ ಅಚ್ಚುಮೆಚ್ಚು. ಆಶ್ರಮದ ಎಲ್ಲಾ ಮಕ್ಕಳೂ ಒಟ್ಟಾಗಿ ಇಂದಿರಮ್ಮನನ್ನು ವೇದಿಕೆಗೆ ಕರೆತಂದರು. ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಅದರಂತೆ ಉದ್ಯಮಿಗಳಾದ ಶ್ರೀಧರ್ ಮತ್ತು ಸಂಪತ್‌ರನ್ನು ಸ್ವಾಗತಿಸಲು ಸುಮತಿ, ವಿಜಯಾ ನಿಂತಿದ್ದರು. ಅವರುಗಳು ತೋರುತ್ತಿರುವ ಆದರಕ್ಕೆ ಮೂಕರಾದ ಇಂದಿರಮ್ಮ ಸೋಫಾ ಬಳಿ ಬಂದು ಸಭಿಕರೆಲ್ಲರಿಗೂ ವಂದಿಸಿ ಆಸೀನರಾದರು.
ಮೇಜಿನ ಮೇಲೆ ದೊಡ್ಡ ಆಕಾರದಲ್ಲಿ ಕೇಕ್ ಹಾಗೂ ಮೇಣದ ಬತ್ತಿ ಸಿದ್ಧವಾಗಿತ್ತು. ಎಲ್ಲಾ ಮಕ್ಕಳು ಈ ದಿನ ನೀವೇ ದೀಪ ಬೆಳಗಿಸಿ ಕೇಕ್ ಕತ್ತರಿಸಬೇಕೆಂದೂ ಕೂಗಿದರು. ಎಲ್ಲರ ಇಚ್ಛೆಯಂತೆ ದೀಪ ಬೆಳಗಿಸಿ ಹುಟ್ಟುಹಬ್ಬದ ಕೇಕ್ ಕತ್ತರಿಸಿದರು ಇಂದಿರಮ್ಮ. ತಕ್ಷಣ ಮೊದಲೇ ಏರ್ಪಡಿಸಿದಂತೆ ಅಮ್ಮನ ತಲೆ ಮೇಲೆ ಹೂವಿನ ಸುರಿಮಳೆ ಸುರಿದು ಜೋರಾದ ಚಪ್ಪಾಳೆಯೊಂದಿಗೆ ಹರ್ಷೋದ್ಗಾರ ವ್ಯಕ್ತಪಡಿಸಿದರು. ನಂತರ ಇಬ್ಬರು ಉದ್ಯಮಿಗಳು ಎದ್ದು ನಿಂತು ಇಂದಿರಮ್ಮನಿಗೆ ಮಾಲಾರ್ಪಣೆ ಮಾಡಿ, ಹುಟ್ಟುಹಬ್ಬದ ಶುಭಾಶಯ ಕೋರಿ ಅವರ ಸಾಧನೆಯನ್ನು ಬಾಯಿ ತುಂಬಾ ಹೊಗಳಿ ಬೆಳ್ಳಿಯ ಹೂವಿನ ಬುಟ್ಟಿಯನ್ನು ಅವರಿಗೆ ಸಮರ್ಪಿಸಿ, ಎಲ್ಲರನ್ನೂ ಉದ್ದೇಶಿಸಿ ಎರಡು ಮಾತಾಡಬೇಕೆಂದು ಕೋರಿಕೊಂಡರು.
ಇಂದಿರಮ್ಮ ಎದ್ದು ನಿಂತು ಕಣ್ಣು ತುಂಬಾ ನೀರು ತಂದುಕೊಂಡು ತಮ್ಮ ಕರವಸ್ತ್ರವನ್ನು ಕಣ್ಣಿಗೊತ್ತಿ, ನನಗೇನು ಮಾತಾಡಬೇಕೆಂದೇ ತೋರುತ್ತಿಲ್ಲ. ಎಲ್ಲರೂ ತಿಳಿದಿರುವಂತೆ ನಾನೇನು ಸಾಧಿಸಿಲ್ಲ. ನಾನೂ ಒಂದು ಹೆಣ್ಣು, ಆಶ್ರಯವಿಲ್ಲದೆ ಬದುಕಲಾರಳು ಎಂಬುದಕ್ಕೆ ನಾನು ಇಲ್ಲಿರುವುದೇ ಸಾಕ್ಷಿ. ಹೆಣ್ಣು ಆಸರೆಯಿಲ್ಲದೆ ಸಮಾಜದಲ್ಲಿ ಒಂಟಿಯಾಗಿ ಇರಲಾರಳು ಎನ್ನುವ ನನ್ನ ಸ್ವಂತ ಅನುಭದಿಂದ ಈ ಆಶ್ರಮ ಪ್ರಾರಂಭಿಸಿದೆ. ಅದಕ್ಕೆ ಪೂರಕವಾಗಿ ಅಸಹಾಯಕ ಹೆಣ್ಣುಮಕ್ಕಳು ಅವರವರ ಪರಿಶ್ರಮಕ್ಕೆ ತಕ್ಕಂತೆ ವಿದ್ಯೆ ಪಡೆದು ನೆಲೆ ಕಂಡುಕೊಂಡರು. ನಮ್ಮ ಸಂಸ್ಧೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಿರುವ ಗಣ್ಯ ವ್ಯಕ್ತಿಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಎಲ್ಲರ ಪ್ರೀತಿ, ವಿಶ್ವಾಸವನ್ನು ನಾನು ಯಾವ ಮಾಪನದಿಂದಲೂ ಅಳೆಯಲಾಗುವುದಿಲ್ಲ. ಎಲ್ಲರ ಅಭಿಮಾನಕ್ಕೆ ನಾನು ಋಣಿಯಾಗಿರುವೆ ಎಂದು ಎಲ್ಲರಿಗೂ ವಂದಿಸಿ ಆಸೀನರಾದರು.
ಆ ವರ್ಷ ಆಶ್ರಮದಲ್ಲಿ ಏರ್ಪಡಿಸಿದ್ದ ಕೆಲವು ಆಟಗಳಲ್ಲಿ ಗೆದ್ದಿರುವ ಹಾಗೂ ಶಾಲೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ಕೆಲವು ವಿದ್ಯಾರ್ಥಿನಿಯರಿಗೆ ಉದ್ಯಮಿಗಳೇ ನಗದು ರೂಪದ ಬಹುಮಾನ ವಿತರಿಸಿದರು. ಆಶ್ರಮದಲ್ಲಿ ಎಲ್ಲರಿಗೂ ಹಣ್ಣು ಹಂಪಲನ್ನು ಹಂಚಿದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ವಿಜಯಾ, ಪ್ರೀತಿ, ಸುಮತಿ ಇಂದಿರಮ್ಮನಿಗೆ ಕೇಕ್ ತಿನ್ನಿಸುವ ಮೂಲಕ ಅವರೊಂದಿಗೆ ವೀಡಿಯೋ, ಫೋಟೋಗಳನ್ನು ತೆಗೆಸಿಕೊಳ್ಳುವುದರ ಮೂಲಕ ಸಂಭ್ರಮಪಟ್ಟರು.
ತಮ್ಮ ರೂಮಿಗೆ ವಿಶ್ರಾಂತಿಗೆಂದು ಬಂದ ಇಂದಿರಮ್ಮ ತಾವು ಹೊದ್ದಿದ್ದ ಶಾಲನ್ನು ಮಡಿಸಿ ಬೀರುವಿನಲ್ಲಿಟ್ಟರು. ಆ ದಿನದ ಸಮಾರಂಭದ ಆನಂದವನ್ನು ಅನುಭವಿಸಿದವರ ಜೊತೆಗೆ ತಮ್ಮ ಜೀವನದ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ನೆನಪಿನಂಗಳಕ್ಕೆ ಜಾರಿದರು.
ಇಂದಿರಮ್ಮನ ಹುಟ್ಟು ಹೆಸರು ಲಾವಣ್ಯಾ. ತಂದೆ ದೊಡ್ಡ ಜಮೀನ್ದಾರರು. ಶ್ರೀಮಂತ ಕುಟುಂಬ. ಹೆಸರೇ ಹೇಳುವಂತೆ ಲಾವಣ್ಯಾ ರೂಪದಲ್ಲಿ ಅಪ್ಸರೆ ಎಂದರೆ ತಪ್ಪಾಗಲಾರದು. ಬಿಳುಪಿನ ಬಣ್ಣ, ವಯಸ್ಸಿಗೆ ತಕ್ಕಂಥ ಮೈಮಾಟ, ನೋಡಲು ಸುರಸುಂದರಿಯಾಗಿ, ನೋಡುವವರ ಕಣ್ಣಿಗೆ ಆಕರ್ಷಣೀಯವಾಗಿದ್ದಳು. ಸ್ವಾಭಾವಿಕವಾಗಿ ಭಾವುಕಳು, ಜೀವನದಲ್ಲಿ ಉನ್ನತವಾದ ಆಸೆಯ ಕನಸನ್ನು ಹೊತ್ತವಳು. ಓದುವುದರಲ್ಲಿ ಸಾಧಾರಣವಾಗಿದ್ದರೂ ಬೇರೆಲ್ಲ ಚಟುವಟಿಕೆಗಳಾದ ಪೇಂಟಿಂಗ್, ಸಂಗೀತ, ಕಸೂತಿ ಎಲ್ಲದರಲ್ಲೂ ನಿಪುಣಳಾಗಿದ್ದಳು. ಕಾಲೇಜಿನಲ್ಲಿ ಹೋಮ್ಸೈನ್ಸ್ ಅವಳ ಐಚ್ಛಿಕ ವಿಷಯವಾದ್ದರಿಂದ ಅಡುಗೆ ಕೆಲಸದಲ್ಲೂ ನಿಪುಣತೆ ಹೊಂದಿದ್ದಳು. ಒಳ್ಳೆಯ ಹಾಡುಗಾರ್ತಿಯಾಗಿದ್ದಳು. ಅವಳಲ್ಲಿರುವ ಆಸಕ್ತಿಗೆ ತಂದೆ, ತಾಯಿ ಇಬ್ಬರೂ ಪ್ರೋತ್ಸಾಹಿಸುತ್ತಿದ್ದರು. ಒಬ್ಬಳೇ ಮಗಳಾಗಿ ಮುದ್ದಿನ ಕಣ್ಮಣಿಯಾಗಿ ಬೆಳೆದಳು. ಲಾವಣ್ಯಾಳ ರೂಪ, ಬುದ್ಧಿಂತಿಕೆಯನ್ನು ಅಕ್ಕಪಕ್ಕದವರು ಹೊಗಳಿದಾಗ ತಂದೆ, ತಾಯಿ ಜಂಭದಿಂದ ಹಿಗ್ಗುತ್ತಿದ್ದರು.
ಲಾವಾಣ್ಯಾ ಏನೇ ಬೇಡಿಕೆ ಇಟ್ಟರೂ ಇಲ್ಲವೆನ್ನದೆ ಅವಳ ಆಸೆ ಪೂರೈಸಲು ತುದಿಗಾಲಲ್ಲಿ ನಿಂತಿದ್ದರು. ಅವಳಿಗಲ್ಲದೆ ನಾವು ಇನ್ಯಾರಿಗೆ ಮಾಡಬೇಕು? ಅವಳು ಸುಖವಾಗಿದ್ದರೆ ಸಾಕು ಎಂದು ತಂದೆ ತಾಯಿ ಆಶಿಸುತ್ತಿದ್ದರು. ಅವಳಿಗೆ ಗೆಳತಿಯರು ಬಹಳ. ಭಾನುವಾರ ಬಂದಿತೆಂದರೆ ಗೆಳತಿಯರೊಂದಿಗೆ ಜಾಲಿ ಟ್ರಿಪ್ ಹೋಗುವುದೆಂದರೆ ಅವಳಿಗೆ ಮಹದಾನಂದ. ಮನಸೋ ಇಚ್ಛೆ ಖರ್ಚು ಮಾಡುವುದು, ಏನು ಬೇಕೆಂದರೆ ಅದನ್ನು ತೆಗೆದುಕೊಳ್ಳುವುದು, ಹೋಟೆಲ್, ಸಿನಿಮಾ ಶೋಕಿ, ತಿರುಗಾಟ ಅವಳಿಗೆ ಕಾಲ ಕಳೆಯಲು ಸಾಧನವಾಗಿತ್ತು. ಶಾಪಿಂಗ್ ಎಂದರೆ ಬಹಳ ಇಷ್ಟ. ಇರುವಷ್ಟು ದಿನ ಜೀವನದಲ್ಲಿ ಮೋಜು ಮಾಡಲೇಬೇಕು ಎನ್ನುವುದು ಅವಳ ಸಿದ್ಧಾಂತ. ಸಿನಿಮಾ ಹಾಡುಗಳ ಗಾಯಕ ಗಾಯಕಿಯರ ಕಂಠಸಿರಿಯನ್ನು ಅನುಕರಣೆ ಮಾಡಿ ಅವರದೇ ಶೈಲಿಯಲ್ಲಿ ಹಾಡಿ ಲಾವಣ್ಯಾ ಎಲ್ಲರಿಂದಲೂ ಚಪ್ಪಾಳೆ, ಶಹಭಾಶ್‌ಗಿರಿ ಪಡೆಯುತ್ತಿದ್ದಳು. ಅವಳ ಪದವಿ ಮುಗಿಯುವುದರೊಳಗೆ ಅವಳ ಮದುವೆ ಮಾಡಬೇಕೆಂದು ಹಿರಿಯರು ಇಚ್ಛಿಸುತ್ತಿದ್ದರು. ಅವಳಿನ್ನೂ ಪಿ.ಯು ಓದುತ್ತಿರುವಾಗಲೇ ಅವಳಿಗೆ ವರಗಳು ಹುಡುಕಿಕೊಂಡು, ಕೇಳಿಕೊಂಡು ಬರುತ್ತಿದ್ದವು. ಹತ್ತಿರದ ನೆಂಟರಿಷ್ಟರು ಬಂದು ಲಾವಣ್ಯಾಳ ಮದುವೆಯ ಬಗ್ಗೆ ಮಾತಾಡಿದಾಗ ವಿದ್ಯೆ ಒಂದು ಘಟ್ಟಕ್ಕೆ ಬರಲಿ ಆನಂತರ ಪ್ರಯತ್ನಿಸೋಣವೆಂದು ಅವಳ ತಂದೆ ತಾಯಿ ಹೇಳಿ ಕಳುಹಿಸುತ್ತಿದ್ದರು.
ಅವಳ ಪದವಿ ಮುಗಿಯುತ್ತಿದ್ದಂತೆ ವರಗಳ ಮನೆಯವರು ತಮ್ಮ ಮನೆಗೆ ಲಾವಣ್ಯಾಳನ್ನು ತಂದುಕೊಳ್ಳಬೇಕೆಂದು ತಂದೆ ತಾಯಿಯರಾದ ಸರೋಜಮ್ಮ, ಗೋಪಾಲರಾವ್ ಬಳಿ ಹೇಳಿದಾಗ ಇಬ್ಬರಿಗೂ ಹಿಗ್ಗೋ ಹಿಗ್ಗು! ತಮ್ಮ ಮಗಳು ಎಂತಹ ಅದೃಷ್ಟವಂತಳು. ಎಷ್ಟೋ ಜನ ಹೆಣ್ಣು ಹೆತ್ತವರು ಜಾತಕ, ಫೋಟೋ ಹಿಡಿದುಕೊಂಡು ಗಂಡಿನ ಮನೆಗಳಿಗೆ ಅಲೆದಾಡುತ್ತಾರೆ. ಆದರೆ ನಮ್ಮ ಲಾವಣ್ಯಾಳಿಗೆ ತಾವೇ ಹುಡುಕಿಕೊಂಡು ಬರುತ್ತಿದ್ದಾರೆಂಬ ಸಂತಸ ಅವರದು.
ಸರೋಜಮ್ಮನ ದೂರದ ಸಂಬಂಧಿ ನಾಗೇಶರಾಯರು ಧನುಷ್ ಎಂಬ ವರನಿಗೆ ತಂದೆ ತಾಯಿ ಇಬ್ಬರೂ ಇಲ್ಲದೆ ಸಾಕಷ್ಟು ಆಸ್ತಿವಂತನೆಂದೂ, ಲಾವಣ್ಯಾಳ ಜಾತಕ ಕೂಡಿ ಹುಡುಗಿಯನ್ನು ನೋಡಲು ಅವನು ಅತ್ತೆ ಮಾವನೊಂದಿಗೆ ಈ ಭಾನುವಾರ ಬರುತ್ತಿದ್ದಾನೆಂದು ತಿಳಿಸಿದಾಗ ಸರೋಜಮ್ಮ, ಗೋಪಾಲರಾವ್ ಬಹಳ ಸಂಭ್ರಮಪಟ್ಟರು.
ಆ ಭಾನುವಾರ ಮನೆಯ ತುಂಬಾ ಸಡಗರ, ವಿಶಾಲವಾದ ಬಂಗಲೆ ವಿಶೇಷವಾಗಿ ಅಲಂಕಾರಗೊಂಡಿತ್ತು. ಹಾಲ್ ನಲ್ಲಿ ಸೋಫಾ ಸೆಟ್ ಹಾಕಿ ನೆಲದ ಮೇಲೆ ರತ್ನಗಂಬಳಿ ಹಾಸಿದ್ದರು. ಅಡುಗೆಯವರಿಗೆ ಹೇಳಿ ವಿಶೇಷ ತಿಂಡಿ ಮಾಡಿಸಿದ್ದರು.
ಸರೋಜಮ್ಮ ಪೀತಾಂಬರ ಸೀರೆಯುಟ್ಟು, ಕಾಸಿನ ಸರ, ಕೈ ತುಂಬಾ ಚಿನ್ನದ ಬಳೆಗಳಿಂದ ಅಲಂಕೃತರಾಗಿದ್ದರು. ಲಾವಣ್ಯವತಿಯಾಗಿದ್ದ ಲಾವಣ್ಯಾಳಿಗೆ ಯಾವ ಅಲಂಕಾರ ಬೇಡವಾಗಿದ್ದರೂ ಸರಳವಾಗಿ ಮೇಕಪ್ ಮಾಡಿಕೊಂಡ ಮೆರೂನ್ ಕಲರ್ ರೇಷ್ಮೆ ಸೀರೆ, ಕೆಂಪಿನ ಸೆಟ್ ತೊಟ್ಟು, ಚಿನ್ನದ ಸರ, ಬಳೆಗಳಿಂದ ದೇವ ಕನ್ನಿಕೆಯಂತೆ ಕಂಗೊಳಿಸುತ್ತಿದ್ದಳು. ಧನುಷ್‌ನ ಸೋದರ ಮಾವ, ಅತ್ತೆ ಹಣ್ಣಿನ ಬುಟ್ಟಿಯೊಂದಿಗೆ ಕಾರಿನಲ್ಲಿ ಬಂದಿಳಿದರು. ಗೋಪಾಲರಾವ್ ದಂಪತಿಗಳು ನಗುಮುಖದಿಂದ ಅವರನ್ನು ಸ್ವಾಗತಿಸಿದರು. ಎಲ್ಲರೂ ಹಾಲ್ ವಲ್ಲಿ ಸೋಫಾದಲ್ಲಿ ಕುಳಿತರು. ಧನುಷ್‌ನನ್ನು ಪರಿಚಯಿಸಿದರು. ಹುಡುಗ ನೋಡಲು ಲಾವಣ್ಯಾಳಷ್ಟು ಚೆನ್ನಾಗಿರಲಿಲ್ಲ. ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದ ಧನುಷ್‌ಗೆ ಲಾವಣ್ಯಾಳ ರೂಪವನ್ನು ನೋಡಿ ಅಪ್ಸರೆಯನ್ನು ಕಂಡಂತಾಯಿತು.
ಏನು ರೂಪ, ಎಂತಹ ನೀಳ ಕೇಶರಾಶಿ, ನನ್ನನ್ನು ಒಪ್ಪುತ್ತಾಳೋ, ಇಲ್ಲವೋ ಎನ್ನುವ ಪ್ರಶ್ನೆ ಒಂದು ಕ್ಷಣ ಅವನ ಮನದಲ್ಲಿ ಮೂಡಿತು. ಲಾವಣ್ಯಾ ತಿಂಡಿ, ಕಾಫಿ ಕೊಟ್ಟು ರತ್ನಗಂಬಳಿಯ ಮೇಲೆ ಕುಳಿತು ಧನುಷ್‌ನನ್ನು ಒಂದು ಕ್ಷಣ ನೋಡಿ ನಿರಾಶಳಾದಳು. ಹಿರಿಯರ ಆದೇಶದಂತೆ ಲಾವಣ್ಯಾ ಪುರಂದರ ದಾಸರ ಪದವನ್ನು ಸುಶ್ರಾವ್ಯವಾಗಿ ಹಾಡಿದಾಗ, ಎಲ್ಲರನ್ನೂ ಗಾನಲೋಕಕ್ಕೆ ಕರೆದೊಯ್ದಂತಾಯಿತು. ಅವಳು ಹಾಡು ನಿಲ್ಲಿಸಿದ ಮೇಲೂ ಎಲ್ಲರಿಗೂ ಮತ್ತೆ ಕೇಳುವ ಆಸೆ.
ಧನುಷ್ ಅತ್ತೆ, ಮಾವ ಇಬ್ಬರೂ ಲಾವಣ್ಯಾಳನ್ನು ಮೆಚ್ಚಿ ಒಳ್ಳೆಯ ಜೋಡಿ ಎಂದು ತೀರ್ಮಾನಿಸಿ ಅಲ್ಲೇ ತಮ್ಮ ಒಪ್ಪಿಗೆ ತಿಳಿಸಿ ಯಾವುದಕ್ಕೂ ನಿಮ್ಮ ಮಗಳನ್ನು ಕೇಳಿ ನಮಗೆ ತಿಳಿಸಿ ಎಂದು ಹೇಳಿ ಹೊರಟರು.
ಲಾವಣ್ಯಾಳ ಮನಸ್ಸಿಗೆ ಧನುಷ್ ಯಾಕೋ ಏನೋ ಹಿಡಿಸಲಿಲ್ಲ. ತನ್ನ ರೂಪದ ಮುಂದೆ ಅವನು ಸಪ್ಪೆ ಎನಿಸಿತು. ಅಲ್ಲದೆ, ಅವಳು ಮದುವೆ ಬಗ್ಗೆ, ಜೀವನದ ಬಗ್ಗೆ ಮಹದಾಸೆ ಹೊಂದಿದ್ದಳು. ಮದುವೆಯಾದರೆ ಬಂಧನಕ್ಕೆ ಒಳಗಾದಂತೆ, ಸ್ವಾತಂತ್ರ್ಯ ಕಿತ್ತುಕೊಂಡಂತೆ, ತಾನು ಈಗ ಗೆಳತಿಯರ ಜೊತೆ ಮೋಜು ಮಾಡುವಂತೆ ಆಗ ಮಾಡಲಾಗುತ್ತದಾ? ಧನುಷ್ ಸ್ವಭಾವ ಹೇಗೋ ಏನೋ? ಇನ್ನೂ ಕೆಲವು ಗಂಡುಗಳನ್ನು ನೋಡಿ ಮನಸ್ಸಿಗೆ ಒಪ್ಪಿಗೆಯಾದ ಮೇಲೆ ಮದುವೆ ಯೋಚನೆ ಮಾಡಬಹುದು, ಆತುರದ ನಿರ್ಧಾರ ಮಾಡುವುದು ಬೇಡವೆನಿಸಿತು. ತಾನು ಜೀವನದಲ್ಲಿ ಹಾಗಿರಬೇಕು, ಹೀಗಿರಬೇಕು ಎನ್ನುವ ಮಹದಾಸೆ ಹೊಂದಿರುವಳು, ಹೀಗಿರುವಾಗ ನನ್ನ ಆಸೆಗೆ ಅಡ್ಡಿಪಡಿಸಿದರೆ? ಎಂದು ಯೋಚಿಸುತ್ತಿದ್ದಳು.
ಇತ್ತ ಲಾವಣ್ಯಾಳ ತಂದೆ ತಾಯಿ, ಧನುಷ್ ನೋಡಲು ಒಳ್ಳೆಯ ಹುಡುಗ. ಲಾವಣ್ಯಾಳಿಗೆ ಅನುರೂಪನಾದ ವರ. ಅತ್ತೆ, ಮಾವ, ನಾದಿನಿಯರ ಕಾಟ ಇಲ್ಲ. ಈ ಹುಡುಗನನ್ನು ಮದುವೆಯಾದರೆ ರಾಣಿಯ ಹಾಗಿರಬಹುದೆಂದು ಲಾವಣ್ಯಾಳಿಗೆ ತಿಳಿ ಹೇಳಿದರು. ಲಾವಣ್ಯಾ ತನ್ನ ಆತ್ಮೀಯ ಗೆಳತಿಯರಿಗೆ ಧನುಷ್ ಫೋಟೋ ತೋರಿಸಿದಾಗ, ಹುಡುಗ ಅಷ್ಟೇನೂ ಚೆನ್ನಾಗಿಲ್ಲ. ನೀನು ಮದುವೆ ವಿಚಾರದಲ್ಲಿ ಒಪ್ಪಿಗೆ ಕೊಟ್ಟು ಆತುರಪಟ್ಟೆ ಎನಿಸ್ತಿದೆ. ನಿನಗೆ ಇವನು ತಕ್ಕವನಲ್ಲ ಎಂದೆಲ್ಲಾ ಹೇಳಿದಾಗ ತನ್ನ ನಿರ್ಧಾರ ತಪ್ಪಾ ಎಂದು ಲಾವಣ್ಯಾ ಒಂದು ಕ್ಷಣ ಯೋಚಿಸಿ ಹೇಗೂ ಒಪ್ಪಿಯಾಗಿದೆ. ಜೀವನ ಹೇಗೆ ಬರುತ್ತದೋ ಹಾಗೆ ಹೊಂದಿಕೊಳ್ಳಬೇಕೆಂದು ನಿರ್ಧರಿಸಿ ಗೆಳತಿಯರ ಟೀಕೆಗೆ ಇರಲಿ ಬಿಡೆ, ಚೆನ್ನಾಗಿ ಬಾಳುವುದು ಮುಖ್ಯ ಎಂದು ಮಾತು ಮುಗಿಸಿದಳು.
ಮದುವೆಯ ಸಿದ್ಧತೆಗಳು ಭರದಿಂದ ಸಾಗತೊಡಗಿದವು. ಲಾವಣ್ಯಾಳಿಗೆ ಭಾರಿ ಬೆಲೆಯ ಜರತಾರಿ ಸೀರೆ, ಮುತ್ತಿನ ನೆಕ್ಲೇಸ್, ಮುತ್ತಿನ ಬಳೆಗಳು, ಹವಳದ ಸೆಟ್ ಎಲ್ಲವನ್ನೂ ತೆಗೆದಿದ್ದರು. ಅದೇ ರೀತಿ ಧನುಷ್ ಮನೆಯಲ್ಲೂ ಅವರ ಅಂತಸ್ತಿಗೆ ತಕ್ಕ ಹಾಗೆ ಭರ್ಜರಿ ಸೀರೆ ಹಾಗೂ ಒಡವೆಗಳನ್ನು ಲಾವಣ್ಯಾಳಿಗೆ ಹಾಕಿದ್ದರು. ಪ್ರಸಿದ್ಧವಾದ ಛತ್ರದಲ್ಲಿ ಮದುವೆ ಏರ್ಪಾಡಾಗಿತ್ತು. ಧಾರೆಯ ಮಂಟಪ ಅಲಂಕಾರಿಕವಾಗಿ ನೋಡಲು ಕಣ್ಣಿಗೆ ಮನೋಹರವಾಗಿತ್ತು. ಗೋಪಾಲರಾವ್ ಕಡೆಯ ಆತ್ಮೀಯ ಸ್ನೇಹಿತರು, ಗಣ್ಯ ವ್ಯಕ್ತಿಗಳು, ಬಂಧುಗಳು ಮದುವೆಗೆ ಬಂದು ವಧೂವರರನ್ನು ಹರಸಿ ಉಡುಗೊರೆಗಳನ್ನು ನೀಡಿದ್ದರು. ಬಂದವರೆಲ್ಲ ಅಡುಗೆಯ ರುಚಿಯ ಬಗ್ಗೆ, ವಿಶೇಷ ವೈಭವದ ಮದುವೆಯ ಬಗ್ಗೆ, ಜೋಡಿಯ ಬಗ್ಗೆ ಹೊಗಳುವವರೇ. ಎಲ್ಲರ ಸಮ್ಮುಖದಲ್ಲಿ ಲಾವಣ್ಯಾ, ಧನುಷ್ ಮದುವೆ ವಿಜೃಂಭಣೆಯಿಂದ ನೆರವೇರಿತು.
ವಿದೇಶ ಪ್ರಯಾಣ ಮಾಡಿ ತಮ್ಮ ಹನಿಮೂನ್ ದಿನಗಳನ್ನು ಕಳೆದರು ಲಾವಣ್ಯಾ ಧನುಷ್. ತನ್ನ ವೈವಾಹಿಕ ಜೀವನ ಪ್ರಾರಂಭಿಸಲು ಲಾವಣ್ಯಾ ಧನುಷ್‌ನ ಹೊಸ ಬಂಗಲೆಗೆ ಕಾಲಿಟ್ಟಳು. ಹೊಸ ಪರಿಸರ, ಹೊಸ ಮುಖಗಳು ಇದೆಲ್ಲ ಅವಳಿಗೆ ಹೊಸದಾಗಿಯೇ ಇತ್ತು. ಧನುಷ್ ಸ್ವಭಾವತಃ ಮಿತ ಭಾಷಿ. ಯಾವ ಭಾವನೆಯನ್ನು ವ್ಯಕ್ತಪಡಿಸುತ್ತಿರಲಿಲ್ಲ. ಲಾವಣ್ಯಾ ಅಷ್ಟೇ ವಾಚಾಳಿ. ಗೆಳತಿಯರ ಜೊತೆ ಮಾತಾಡುತ್ತಾ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದವಳಿಗೆ ಈ ಜೀವನ ಅವಳ ಪಾಲಿಗೆ ಬಂಗಾರದ ಪಂಜರವಾಗಿತ್ತು. ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಗುತ್ತಿತ್ತು. ಧನುಷ್ ಆರ್ಕಿಟೆಕ್ಟ್ ಆಗಿದ್ದರಿಂದ ಡಿಸೈನ್ ಪ್ಲಾನ್‌ಗಾಗಿ ಕೆಲವೊಮ್ಮೆ ಬೇರೆ ಬೇರೆ ಊರುಗಳಿಗೆ ಹೋಗುವ ಸಂದರ್ಭವಿರುತ್ತಿತ್ತು. ಬೆಳಗ್ಗೆ ಧನುಷ್ ಆಫೀಸ್‌ಗೆ ಹೋದರೆ ರಾತ್ರಿನೇ ಮನೆಗೆ ಬರುತ್ತಿದ್ದುದು. ಬಿಡುವಿನ ವೇಳೆ ಹೆಂಡತಿಗೆ ಫೋನ್ ಮಾಡುವ, ವಿಚಾರಿಸುವ ಸ್ವಭಾವವೇ ಇರಲಿಲ್ಲ. ಮನೆಯ ಕೆಲಸಕ್ಕೆ ಆಳುಗಳು, ತೋಟ ನೋಡಿಕೊಳ್ಳಲು ಮಾಲಿಗಳಿದ್ದು ಅಡುಗೆ ಕೆಲಸಷ್ಟೇ ಲಾವಣ್ಯಾಳಿಗೆ ಇರುತ್ತಿತ್ತು. ಅವಳಿಗೆ ಕಾಲ ಕಳೆಯುವುದು ಕಷ್ಟವಾಗುತ್ತಿತ್ತು. ಹೋಗಲಿ ಕೆಲಸಕ್ಕಾದರೂ ಹೋಗೋಣವೆಂದು ಧನುಷ್ ಬಳಿ ಕೇಳಿದಾಗ, ಅಂತಸ್ತಿನ ವಿಚಾರ ಹೇಳಿ, ನೀನು ಕೆಲಸಕ್ಕೆ ಹೋಗಿ ಜೀವನ ನಡೆಸುಂತಹ ದರಿದ್ರವೇನಿದೆ? ನನ್ನ ಬಗ್ಗೆ ಬೇರೆಯವರು ತಪ್ಪು ತಿಳಿಯುತ್ತಾರೆ ಏನೂ ಬೇಡ ಎಂದುಬಿಟ್ಟ. ಆದರೆ ಹೇಗೆ ಕಾಲ ಕಳೆಯುವುದು?
ಒಮ್ಮೆ ಪಕ್ಕದ ಮನೆಯ ಮಾಲಿನಿಯೊಂದಿಗೆ ಮಾತನಾಡುತ್ತಿದ್ದಾಗ, ನೀವೇಕೆ ನಮ್ಮ ಯೂತ್ ಕ್ಲಬ್‌ಗೆ ಸೇರಬಾರದು? ಅಲ್ಲಿಗೆ ಬರುವವರೆಲ್ಲರೂ ಹೈ ಸೊಸೈಟಿ ಜನ. ಜೊತೆಗೆ ಅಲ್ಲಿ ಹೆಚ್ಚಿನ ಮನರಂಜನೆ ಸಿಗುತ್ತದೆ. ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ ಎಂದಾಗ ಲಾವಣ್ಯ ಕ್ಲಬ್‌ಗೆ ಸೇರುವುದಕ್ಕೆ ತನ್ನ ಗಂಡನನ್ನು ಒಪ್ಪಿಸಬೇಕೆಂದು ಸಂತಸದಿಂದ ಖಂಡಿತ ನೀವು ಜೊತೆ ಇರುವುದರಿಂದ ನಾನೂ ಸೇರುತ್ತೇನೆ ಎಂದಳು.
ಧನುಷ್ ಬಳಿ ಲಾವಣ್ಯಾ ತಾನು ಕ್ಲಬ್‌ಗೆ ಸೇರುವ ವಿಚಾರ ತಿಳಿಸಿದಾಗ ಅರೆ ಮನಸ್ಸಿನಿಂದಲೇ ಒಪ್ಪಿಗೆ ನೀಡಿದ. ಏಕೆಂದರೆ ತನ್ನ ಕೆಲವು ಗೆಳೆಯರ ಹೆಂಡತಿಯರು ಸ್ಟೇಟಸ್‌ಗೋಸ್ಕರ ಕ್ಲಬ್‌ಗಳಿಗೆ ಸೇರಿ ಅವರುಗಳ ಬಗ್ಗೆ ಚರ್ಚಿಸುವುದನ್ನು ಕೇಳಿದ್ದ. ಧನುಷ್ ಕೆಲಸದ ಸಲುವಾಗಿ ಬೇರೆ ಊರುಗಳಿಗೆ ಹೋದಾಗ ಲಾವಣ್ಯಾ ಖುಷಿಯಿಂದಲೇ ಅವನೊಂದಿಗೆ ಹೋಗುತ್ತಿದ್ದಳು. ಆದರೆ ಅಲ್ಲಿಗೆ ಹೋದರೂ ಲಾಡ್ಜ್ ನಲ್ಲಿ ಏಕಾಂಗಿಯಾಗಿ ಕಾಲ ಕಳೆಯಬೇಕಾಗುತ್ತಿತ್ತು. ಕಾರಣ ಅವನು ಹೋಗುವ ಕಡೆಗೆಲ್ಲಾ ತಾನು ಹೋಗಲಾಗುತ್ತಿರಲಿಲ್ಲ. ಇಲ್ಲಿರುವಾಗಲೂ ಒಂಟಿ, ಮನೆಯಲ್ಲಿಯೂ ಒಂಟಿ. ಲಾಡ್ಜ್ ನಲ್ಲಿ ಒಂಟಿಯಾಗಿರುವುದಕ್ಕಿಂತ ಮನೆಯಲ್ಲಿರುವುದೇ ವಾಸಿ ಎನಿಸಿ ಅವನು ಎಲ್ಲಿಗೆ ಕರೆದರೂ ನಿರಾಕರಿಸುತ್ತಿದ್ದಳು. ಈಗ ಧನುಷ್ ಒಪ್ಪಿದ ಕೂಡಲೇ ಸಂತಸದಿಂದ ಕ್ಲಬ್‌ಗೆ ಸೇರಿಕೊಂಡಳು. ಹೊಸ ಸದಸ್ಯಳಾಗಿ ಕ್ಲಬ್‌ಗೆ ಸೇರಿದ ಲಾವಣ್ಯಾಳಿಗೆ ಹೊಸದರಲ್ಲಿ ಮುಜುಗರವಾಯಿತಾದರೂ, ಗೆಳತಿ ಮಾಲಿನಿ ಎಲ್ಲರನ್ನೂ ಪರಿಚಯಿಸಿದಾಗ, ಒಬ್ಬೊಬ್ಬರೊಂದಿಗೇ ಬೆರೆತು ಪಳಗಿದಳು. ಒಂದು ದಿನ ಕ್ಲಬ್‌ಗೆ ಹೋಗದಿದ್ದರೆ ಅವಳಿಗೆ ಚಡಪಡಿಸುವಂತಾಗುತ್ತಿತ್ತು.
ಎಲ್ಲರೊಂದಿಗೆ ಸೇರಿ ಕೇರಂ, ಟೇಬಲ್ ಟೆನಿಸ್, ಚೆಸ್ ಆಟಗಳನ್ನು ಆಡುತ್ತಿದ್ದಳು. ಅಲ್ಲಿಗೆ ಬರುವವರಲ್ಲಿ ಮದುವೆಯಾಗಿರುವವರು, ಆಗದವರು, ವಯಸ್ಸಾದವರೂ ಇರುತ್ತಿದ್ದರು. ಲಾವಣ್ಯಾಳ ಆಟದ ಜೊತೆಗೆ ವೈಭವ್ ಎನ್ನುವ ಉತ್ಸಾಹಿ ಯುವಕ ಜೊತೆಯಾದ. ಎಲ್ಲರಿಗೂ ಅವನೇ ಕೇಂದ್ರಬಿಂದು. ಆಕರ್ಷಣೆ ಕಾರಣ ನೋಡಲು ಸ್ಛುರದ್ರೂಪಿ. ಅವನು ಅಲ್ಲಿರುವಷ್ಟು ಹೊತ್ತು ಮಾತನಾಡುತ್ತಾ ನಗಿಸುತ್ತಿದ್ದ. ಅವನ ಸನಿಹವೆಂದರೆ ಲಾವಣ್ಯಾಳಿಗೆ ಬಹಳ ಇಷ್ಟ. ಅವನಿಗೂ ಲಾವಣ್ಯಾಳ ಜೊತೆ ಕಾಲ ಕಳೆಯುವುದೆಂದರೆ ಸಂತಸ. ಸಿನಿಮಾ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವುದರಲ್ಲಿ ವೈಭವ್ ಎತ್ತಿದ ಕೈ. ಅವನಿಗೆ ಧ್ವನಿಗೂಡಿಸುತ್ತಿದ್ದುದು ಲಾವಣ್ಯಾ.ಹೀಗಾಗಿ ಅವರಿಬ್ಬರ ಜೋಡಿ ಎಲ್ಲರಿಗೂ ಇಷ್ಟ. ಅವನು ಅವಳ ಜೊತೆ ರಾಜಕೀಯ, ಸಂಗೀತದ ಬಗ್ಗೆ ಚರ್ಚಿಸುತ್ತಿದ್ದ. ಒಮ್ಮೆ ಕ್ಲಬ್‌ನಲ್ಲಿ ಕೇರಂ ಆಡುತ್ತಾ ಲಾವಣ್ಯಾಳಿಗೆ ತಲೆ ಸುತ್ತಿದಂತಾಗಿ ವೈಭವ್ ಅವಳ ಬಳಿ ಧಾವಿಸಿ ಬಂದು, ಅವಳನ್ನು ಮನೆಗೆ ಬಿಟ್ಟು ಬಂದ. ಆಫೀಸ್‌ನಿಂದ ಮನೆಗೆ ಬಂದ ಧನುಷ್, ಹೇಗೂ ಲಾವಣ್ಯಾ ಈ ಹೊತ್ತಿನಲ್ಲಿ ಮನೆಯಲ್ಲಿರುವುದಿಲ್ಲ. ತಾನೇ ಮನೆ ಬೀಗ ತೆಗೆಯಬೇಕೆಂದುಕೊಂಡ. ಆದರೆ ಮನೆ ಬಾಗಿಲು ತೆರೆದಿರುವುದನ್ನು ಕಂಡು, ಆಶ್ಚರ್ಯವಾಗಿ ಒಳ ಬಂದು ಹೆಂಡತಿ ಮಲಗಿರುವುದನ್ನು ನೋಡಿ ವಿಚಾರಿಸಿದಾಗ ತಲೆಸುತ್ತು ವಿಚಾರ ತಿಳಿದು ಅವಳನ್ನು ವೈದ್ಯರ ಬಳಿ ಕರೆದೊಯ್ದ. ಲಾವಣ್ಯಾ ಗರ್ಭಿಣಿ ಎಂದು ಡಾಕ್ಟರ್ ತಿಳಿಸಿದರು. ಧನುಷ್ ಯಾವ ಭಾವನೆಯನ್ನೂ ವ್ಯಕ್ತಪಡಿಸಲಿಲ್ಲ. ಗಂಡ ಸಂತೋಷ ಪಡುತ್ತಾನೆಂದು ತಿಳಿದಿದ್ದ ಲಾವಣ್ಯಾಳಿಗೆ ಶಾಕ್ ಆಯಿತು. ಗಂಡನ ನಡವಳಿಕೆ ಅವಳಿಗೆ ಆಶ್ಚರ್ಯ, ಬೇಸರವೆರಡೂ ಆಯಿತು. ತಾನು ತಂದೆಯಾಗುತ್ತಿದ್ದೇನೆಂದು ತಿಳಿದ ಬೇರೊಬ್ಬ ವ್ಯಕ್ತಿ ಈ ಜಾಗದಲ್ಲಿದ್ದಿದ್ದರೆ ಎಷ್ಟೊಂದು ಸಂಭ್ರಮಪಟ್ಟು ಅದನ್ನು ಹೆಂಡತಿಯೊಂದಿಗೆ ಹಂಚಿಕೊಳ್ಳುತ್ತಿದ್ದ. ಸಂತೋಷವನ್ನಾಗಲೀ, ದುಃಖವನ್ನಾಗಲಿ ವ್ಯಕ್ತಪಡಿಸದ ತನ್ನ ಗಂಡನನ್ನು ಅರ್ಥ ಮಾಡಿಕೊಳ್ಳುವುದೇ ಅಸಾಧ್ಯ ಎನಿಸಿ, ಯಾವುದಕ್ಕೂ ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು ಎಂದು ನಿಟ್ಟುಸಿರುಬಿಟ್ಟಳು.
ಗಂಡನ ಈ ನಿರ್ಲಿಪ್ತತೆ ಅವಳಿಗೆ ನಿರಾಶೆ ತಂದಿತು. ಸಂತಸದ ಈ ವಿಚಾರನ್ನು ಅವಳು ತನ್ನ ತಂದೆ ತಾಯಿಗೆ ತಿಳಿಸಿದಾಗ ಸಂಭ್ರಮಪಟ್ಟ ಅವರು, ಬಸುರಿ ಬಯಕೆ ಏನಿರುತ್ತದೋ ಏನೋ? ನಿನ್ನನ್ನು ನೋಡಿಕೊಳ್ಳಲು ಹಿರಿಯರು ಯಾರೂ ಇಲ್ಲ. ಇಲ್ಲಿಗೆ ಬಾ, ಒಂದು ತಿಂಗಳಾದರೂ ಇಲ್ಲಿದ್ದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಹೋಗುವಿಯಂತೆ ಎಂದು ಇಬ್ಬರೂ ಬಂದು ಲಾವಣ್ಯಾಳನ್ನು ತವರುಮನೆಗೆ ಕರೆದೊಯ್ದರು.
ಲಾವಣ್ಯಾ ತವರಿನಲ್ಲಿ 7 ತಿಂಗಳಿದ್ದರೂ ಗಂಡ ಫೋನ್ ಮಾಡಲಿಲ್ಲ. ಅವಳನ್ನು ನೋಡಿಕೊಂಡು ಹೋಗಲು ಬರಲಿಲ್ಲ. ಅವಳಿಗೆ ನಿರಾಶೆಯಾಯಿತು. ತಾಯಿಯ ಆರೈಕೆಯಲ್ಲಿ ಲಾವಣ್ಯಾ ದುಂಡಗಾದಳು. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಗಂಡ ತಕ್ಷಣ ಮಗುವನ್ನು ನೋಡಲು ಬರುತ್ತಾನೆಂದು ನಿರೀಕ್ಷೆಯಲ್ಲಿದ್ದಳು. ಆದರೆ ನಾಮಕರಣದ ದಿನ ಧನುಷ್ ಬಂದ. ಗಂಡು ಮಗುವಾಗುತ್ತದೆಂದು ಬಹಳ ಆಸೆಯಾಗಿದ್ದೆ ಎಂದಷ್ಟೇ ಹೇಳಿದ. ಆಗ ಅರ್ಥವಾಯಿತು ಗಂಡು ಮಗುವಾಗಿದ್ದರೆ ಆ ದಿನವೇ ನೋಡಲು ಗಂಡ ಬರುತ್ತಿದ್ದ ಎಂದು.
ಮಗುವಿಗೆ ಸೌಜನ್ಯಾ ಎಂದು ಹೆಸರಿಟ್ಟರು. ತಾಯಿಯಂತೆ ಸೌಜನ್ಯಾ ರೂಪದಲ್ಲೂ, ಬಣ್ಣದಲ್ಲೂ ಅವಳನ್ನೇ ಹೋಲುತ್ತಿದ್ದಳು. ತುಂಬಾ ಮುದ್ದಾಗಿದ್ದಳು. ಮಗು ದೊಡ್ಡದಾಗುತ್ತಿದ್ದಂತೆ ಲಾವಣ್ಯಾ ಗಂಡನ ಮನೆಗೆ ಬಂದಳು. ಮಗುವನ್ನು ನೋಡಿಕೊಳ್ಳಲು ಹೆಂಗಸನ್ನು ನೇಮಿಸಿದ್ದರಿಂದ ಲಾವಣ್ಯಾಳಿಗೆ ಹೆಚ್ಚಿಗೆ ಕೆಲಸ ಇರುತ್ತಿರಲಿಲ್ಲ.
ಹೀಗಾಗಿ ಬಹಳ ದಿನಗಳ ನಂತರ ಕ್ಲಬ್‌ಗೆ ಹೋಗುವ ಮನಸ್ಸಾಯಿತು. ಮಗುವನ್ನು ಸುಂದರಮ್ಮನ ಬಳಿ ಬಿಟ್ಟು ಮತ್ತೆ ಕ್ಲಬ್‌ಗೆ ಬಂದ ಲಾವಣ್ಯಾಳನ್ನು ಎಲ್ಲರೂ ಆತ್ಮೀಯತೆಯಿಂದ ಸ್ವಾಗತಿಸಿದರು. ವೈಭವ್ ಅವಳ ಕೈ ಕುಲುಕಿ ನೀವು ಒಂದು ಮಗುವಿನ ತಾಯಿ ಎಂದು ಪ್ರಮಾಣ ಮಾಡಬೇಕು. ಮೊದಲು ಹೇಗಿದ್ದಿರೋ ಈಗಲೂ ಹಾಗೇ ಇದ್ದೀರಾ, ಆದರೆ ಮೊದಲಿಗಿಂತ ಈಗ ಇನ್ನೂ ಆಕರ್ಷಕವಾಗಿ ಕಾಣುತ್ತೀರ ಎಂದ. ವೈಭವ್ ನ ಕಣ್ಣು ಲಾವಣ್ಯಾಳನ್ನೇ ಹೆಚ್ಚು ಹಿಂಬಾಲಿಸುತ್ತಿತ್ತು. ಧನುಷ್‌ನಲ್ಲಿ ಕಾಣದ ಆಸಕ್ತಿ, ಪ್ರೀತಿಯನ್ನು ಲಾವಣ್ಯಾ ವೈಭವ್ ನಲ್ಲಿ ಕಂಡಳು. ನಮ್ಮ ಕ್ಲಬ್‌ಗೆ ನೀವು ಬಂದಿರುವುದು ಹೊಸ ಕಳೆ ಬಂದಂತಾಗಿದೆ ಎಂದು ಅವಳನ್ನು ಹೊಗಳಿದ. ಕ್ಲಬ್‌ನ ಪ್ರತಿಯೊಬ್ಬರೂ ಲಾವಣ್ಯಾಳನ್ನು ಆತ್ಮೀಯತೆಯಿಂದ ಮಾತನಾಡಿಸಿ ಮಗು ಹುಟ್ಟಿದ್ದಕ್ಕೆ ಪಾರ್ಟಿ ಕೊಡಬೇಕು, ನಿಮ್ಮ ಮಗುವನ್ನು ನೋಡಬೇಕೆಂದು ಬಲವಂತ ಮಾಡಿದಾಗ, ಗಂಡ ಪಾರ್ಟಿ ಎಂದರೆ ಏನನ್ನುತ್ತಾನೋ ಏನೋ ಎಂಬ ಸಂಶಯದಿಂದ ಆಗಲಿ ಎಂದಷ್ಟೇ ಹೇಳಿದಳು.
ಮನೆಗ ಬಂದ ಲಾವಣ್ಯಾ ಗಂಡನಿಗೆ ಪಾರ್ಟಿಯ ವಿಚಾರ ಹೇಳಿದಾಗ ಆಗಲಿ ಎಂದ. ಏಕೆಂದರೆ ಅವನಿಗೂ ಆಫೀಸ್‌ನ ಗೆಳಯರು, ಬಂಧುಗಳು ಮಗುವಿನ ಪಾರ್ಟಿ ಕೇಳುತ್ತಿದ್ದರು. ಇದು ಅವನ ಸ್ವಾಭಿಮಾನದ ಪ್ರಶ್ನೆಯಾದ್ದರಿಂದ ಹೇಗೂ ಮನೆ ವಿಶಾಲವಾಗಿದೆ. ಮನೆ ಮುಂದಿನ ಲಾನ್‌ನಲ್ಲಿ ಏರ್ಪಡಿಸೋಣ. ದೊಡ್ಡ ಹೋಟೆಲ್ ನಿಂದ ಊಟ, ತಿಂಡಿ ತರಿಸೋಣ, ನಿನ್ನ ಕ್ಲಬ್‌ನ ಗೆಳೆಯರನ್ನು ನೀನು ಆಹ್ವಾನಿಸು, ನನ್ನ ಆತ್ಮೀಯರನ್ನು ನಾನು ಕರೆಯುತ್ತೇನೆಂದು ಹೇಳಿದಾಗ ಒಪ್ಪಿದನಲ್ಲ ಎಂದು ಸಮಾಧಾನದ ಉಸಿರುಬಿಟ್ಟಳು.
ಆ ಭಾನುವಾರ ಲಾವಣ್ಯಾಳ ಮನೆಯಲ್ಲಿ ಭರ್ಜರಿ ಔತಣ ಏರ್ಪಾಡಾಗಿತ್ತು. ಬಣ್ಣದ ದೀಪಗಳಿಂದ ಮನೆ ಭವ್ಯವಾಗಿ ಅಲಂಕೃತಗೊಂಡಿತ್ತು. ಲಾವಣ್ಯಾ ಕೆಂಪು ಬಣ್ಣದ ಜರಿ ಸೀರೆ ಉಟ್ಟು ಅದಕ್ಕೆ ಹೊಂದುವ ಕೆಂಪಿನ ಒಡವೆ ಸೆಟ್ ಧರಿಸಿ ಎಲ್ಲರ ಕಣ್ಣಿಗೆ ಅಪ್ಸರೆಯಂತೆ ಕಾಣುತ್ತಿದ್ದಳು.
ಸೌಜನ್ಯಾ ಮುದ್ದಾಗಿ ಜರೀ ಲಂಗ ಹಾಕಿಕೊಂಡು ಮನೆ ತುಂಬಾ ಓಡಾಡಿ ಎಲ್ಲರನ್ನೂ ಆಕರ್ಷಿಸುತ್ತಿದ್ದಳು. ಬಂದವರೆಲ್ಲ ಸೌಜನ್ಯಾಳನ್ನು ಹೊಗಳಿದ್ದೇ ಹೊಗಳಿದ್ದು. ಲಾವಣ್ಯಾ ತನ್ನ ಗೆಳೆಯರನ್ನೆಲ್ಲಾ ಪರಿಚಯಿಸಿದಳು. ಧನುಷ್ ತನ್ನ ಆತ್ಮೀಯರನ್ನು ಪರಿಚಯಿಸಿದ. ತಡವಾಗಿ ಬಂದ ವೈಭವ್ ಎಲ್ಲರ ಗಮನ ಸೆಳೆದ. ಆಕರ್ಷಣೀಯಾಗಿ ಮನ್ಮಥನಂತೆ ಕಾಣುತ್ತಿದ್ದ.
ವೈಭವ್ ತಾನೇ ಮುಂದಾಗಿ ಸೌಜನ್ಯಾಳನ್ನು ಎತ್ತಿಕೊಂಡು ನಿಮ್ಮ ಮಗಳು ನಿಮ್ಮಂತೆಯೇ ಬಹಳ ಮುದ್ದಾಗಿದ್ದಾಳೆ. ನಾನೇ ಒಂದು ದಿನ ಹೇಳದೆ ಕೇಳದೆ ಹಾರಿಸಿಕೊಂಡು ಹೋದರೆ ನೀವು ನನ್ನನ್ನು ಆಕ್ಷೇಪಿಸಬಾರದು ಎಂದು ಮಗುವಿನ ಕೆನ್ನೆಗೆ ಮುತ್ತನಿತ್ತ. ಅವಕ್ಕಾದ ಲಾವಣ್ಯಾ, ಧನುಷ್ ಇಬ್ಬರೂ ಅವನ ಮಾತಿಗೆ ಆಶ್ಚರ್ಯಚಕಿತರಾದರು. ಅವನು ಹೆಚ್ಚಿನ ಆಸಕ್ತಿಯನ್ನು ಲಾವಣ್ಯಾಳ ಮೇಲೆ ತೋರಿಸುತ್ತಿದ್ದಾನೆಂದು ಅವನ ನಡವಳಿಕೆಯಿಂದ ಧನುಷ್ ತಿಳಿದುಕೊಂಡ. ಆದರೆ ಲಾವಣ್ಯಾ ವಾಚಾಳಿ, ಎಲ್ಲರೊಂದಿಗೂ ಸಹಜವವಾಗಿ ಬೆರೆಯುವುದರಿಂದ ವೈಭವ್ ವಿನೋದವಾಗಿ ಮಾತನಾಡುತ್ತಾನೆ ಹೊರತು ಯಾವ ಕೆಟ್ಟ ಉದ್ದೇಶವಿರಲಾರದೆಂದು ಸಮಾಧಾನಪಟ್ಟುಕೊಂಡ. ಎಲ್ಲರನ್ನೂ ಊಟಕ್ಕಾಗಿ ಆಹ್ವಾನಿಸಿದರು. ಅವರ ಕೈ ಕುಲುಕಿದ ಎಲ್ಲರೂ ಔತಣ ಕೂಟ ಚೆನ್ನಾಗಿತ್ತು ಎಂದು ಮಗುವಿಗೆ ಉಡುಗೊರೆ ಕೊಟ್ಟು ಹೊರಟರು.
(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)