ಕಥೆ – ಕೆ. ವಾರಿಜಾ

ಲಾಕ್‌ ಓಪನ್‌ ಮಾಡಿದಾಗ ಡಾ. ರೋಹನ್‌ಗೆ ನಿನ್ನೆ ನೋಡಿದ ಕೋಣೆಗಿಂತಲೂ ಬಹಳ ವಿಭಿನ್ನವಾಗಿತ್ತು. ಅವನು ಹಿಂದಿನ ದಿನ ನೀಡಿದ್ದ ಒಂದೇ ಒಂದು ಪ್ರಿಸ್‌ಕ್ರಿಪ್ಶನ್‌ ಚೀಟಿ ಕಿಟಕಿ ಸರಳಿನಲ್ಲಿ ಸಿಕ್ಕಿಕೊಂಡಿತ್ತು. ಅದನ್ನು ತೆಗೆದುಕೊಳ್ಳಲು ಹೋದವನಿಗೆ ಚೀಟಿ ಸಿಕ್ಕಿತೇ ?

ಎರಡು ಮೇಜರ್‌ ಹಾರ್ಟ್‌ ಆಪರೇಷನ್ಸ್ ಮುಗಿಸಿ ಮನೆಯತ್ತ ಹೊರಟಿದ್ದ ಡಾ.ರೋಹನ್‌ಗೆ ಅಂದು ಬಹಳ ದಣಿವಾಗಿತ್ತು.  ನಗರದಿಂದ 30 ಕಿ.ಮೀ. ದೂರದಲ್ಲಿತ್ತು ಮನೆ. ಕಾರಿನಲ್ಲಿ ಹೋಗುತ್ತಿದ್ದವನಿಗೆ ಅಂದೇ ತನ್ನ ಮಗನ ಹುಟ್ಟುಹಬ್ಬ ಎನ್ನುವುದು ನೆನಪಾಯಿತು.

ಕಾರಿನ ವೇಗವನ್ನು ಇನ್ನಷ್ಟು ಹೆಚ್ಚಿಸಿ ಹೈವೇನಲ್ಲಿ ಸಾಗುತ್ತಿರುವಾಗಲೇ ಕತ್ತಲು ಆವರಿಸಿಕೊಂಡಿತು. ಬೇರೆ ವಾಹನಗಳೂ ಅತಿ ವೇಗದಲ್ಲಿ ಚಲಿಸುತ್ತಿದ್ದವು. ರೋಹನ್‌ ತನ್ನ ಮಗನ ಕುರಿತು ಯೋಚಿಸುತ್ತಿದ್ದ. ಬೇಸಿಗೆ ರಜೆ ಇದ್ದ ಕಾರಣ ಅಜ್ಜಿ ಮನೆಗೆ ಹೋಗಿದ್ದ ಮಗ ರಂಜಿತ್‌ ಮೊನ್ನೆ ತಾನೇ ವಾಪಸ್ಸಾಗಿದ್ದ. ಮುಂದೆ ನಾಲ್ಕನೇ ತರಗತಿಗೆ ಸೇರಿಸಬೇಕಾಗಿದ್ದು, ಅಡ್ಮಿಷನ್‌, ಇನ್ನಿತರೆ ಕೆಲಸಗಳು ಇನ್ನೂ ಬಾಕಿ ಇದ್ದವು. ಕಾರು ಚಲಿಸುತ್ತಾ ಹತ್ತು ಹನ್ನೆರಡು ಕಿ.ಮೀ. ದೂರ ಬಂದಿತ್ತು. ಅಷ್ಟರಲ್ಲಿ ಬಿಳಿ ಸೀರೆಯುಟ್ಟು ತಲೆಗೆ ಹೂ ಮುಡಿದ ಒಬ್ಬ ತರುಣಿ ಕಾರಿಗೆ ಅಡ್ಡವಾಗಿ ಕೈ ಹಿಡಿದು ನಿಂತಿದ್ದಳು. ರೋಹನ್‌ ತಕ್ಷಣ ಬ್ರೇಕ್‌ ಅದುಮಿದ. ಎರಡು ಸೆಕೆಂಡ್‌ಗಳಲ್ಲಿ ಕಾರಿನ ಮುಂದಿದ್ದ ರೂಪ ಕಾಣಲಿಲ್ಲ.

“ಹೋಟೆಲ್ ರೈನ್‌ ಬೋ, ರೂಮ್ ನಂ.303,” ರೋಹನ್‌ನ ಹಿಂದಿನಿಂದ ದನಿ ಕೇಳಿತು. ಹಿಂದೆ ತಿರುಗಿ ನೋಡಿದರೆ ಆ ತರುಣಿ ಹಿಂದಿನ ಸೀಟಿನಲ್ಲಿ ಕುಳಿತಿದ್ದಳು.

“ನನ್ನನ್ನು ಕೇಳದೆ ನೀನು ಹೇಗೆ ಒಳಗೆ ಬಂದೆ?” ರೋಹನ್‌ ಅಸಮಾಧಾನದಿಂದ ನುಡಿದ. ಇಷ್ಟಕ್ಕೂ ಅವನಿಗೆ ಕಾರಿನ ಬಾಗಿಲು ತೆರೆದ, ಮುಚ್ಚಿದ ಸದ್ದು ಕೇಳಿಸಿರಲಿಲ್ಲ.

“ನನ್ನ ಮಗನಿಗೆ ಕಾರ್ಡಿಯಲ್ ಅಟ್ಯಾಕ್‌ ಆಗಿದೆ. ತುಸು ಬೇಗನೇ ಹೋಗಬಾರದೇ?” ಎಂದಳು.

ಇವನೂ ವೈದ್ಯನಾದ್ದರಿಂದ ಇಲ್ಲ ಎನ್ನಲಾಗದೆ ಕಾರನ್ನು ಹೋಟೆಲ್ ‌ನತ್ತ ತಿರುಗಿಸಿದ.

ಸುಮಾರು ಅರ್ಧ ಗಂಟೆಯ ನಂತರ ಕಾರು ಹೋಟೆಲ್ ಮುಂದೆ ನಿಂತಿತು. ಅಲ್ಲಿನ ಸೆಕ್ಯೂರಿಟಿ ರೋಹನ್‌ನನ್ನು ಕಂಡು ಒಳಬಿಟ್ಟ. ರಿಸೆಪ್ಶನಿಸ್ಟ್ ಸಹ ರೂಮ್ ನಂ.303ನ್ನು ತೋರಿಸಿದಳು.

ಕೋಣೆ ಪ್ರವೇಶಿಸಿದೊಡನೆ ಅಲ್ಲಿ ಮಂಚದ ಮೇಲೆ ಎಂಟು ವರ್ಷದ ಬಾಲಕ ಮಲಗಿರುವುದು ಕಂಡಿತು. ರೋಹನ್‌ ಅವನನ್ನು ಪರೀಕ್ಷೆ ಮಾಡಿದಾಗ ಅದಾಗಲೇ ದೇಹ ತಣ್ಣಗಾಗಿ ಹೋಗಿರುವುದು ಖಚಿತವಾಗಿತ್ತು.

“ಹುಡುಗ ಸತ್ತು ಹೋಗಿದ್ದಾನೆ……”

“ಹೌದೇ…?” ಎನ್ನುತ್ತಾ ಅವಳು ಕೋಣೆಯಲ್ಲಿದ್ದ ಕಿಟಕಿಯ ಕಡೆ ನಡೆದಳು. ಅದೇ ವೇಳೆಗೆ ಅಲ್ಲಿಗೆ ಬಂದ ಮತ್ತೊಬ್ಬ ವ್ಯಕ್ತಿ ತಾನೂ ಸಹ ಡಾಕ್ಟರ್‌ ಎಂದು ಹೇಳಿ ಆ ಹುಡುಗ ಸತ್ತಿದ್ದಕ್ಕೆ ಸರ್ಟಿಫಿಕೇಟ್‌ ನೀಡಿದ. ಹೋಟೆಲ್‌ನಲ್ಲಿ ಈ ಮೂವರ ಹೊರತು ಇನ್ನಾರೂ ಇಲ್ಲವೇನೋ ಎನ್ನುವಷ್ಟು ಮೌನ ಆವರಿಸಿತ್ತು.

ಇದಕ್ಕೂ ಹೆಚ್ಚಿನ ಅಚ್ಚರಿ ಎಂದರೆ ತನ್ನ ಮಗ ಸತ್ತಿದ್ದಾನೆಂದು ತಿಳಿದೂ ಆ ಹೆಂಗಸು ಅಳುವುದಿರಲಿ ಯಾವ ದುಃಖದ ಭಾವನೆಯನ್ನೂ ತೋರ್ಪಡಿಸದೆ ನಿರಾಳಾಳಾಗಿದ್ದಳು. ಇದು ರೋಹನ್‌ಗೆ ಸೋಜಿಗವಾಗಿತ್ತು.

ಕೆಲವು ಸಮಯದ ನಂತರ ರೋಹನ್‌ ಆ ಹೆಂಗಸಿನ ಒಪ್ಪಿಗೆ ಪಡೆದು ಅಲ್ಲಿಂದ ಹೊರಟ. ಎಲ್ಲಾ ಮುಗಿಸಿ ಮನೆಗೆ ಬರುವಾಗ ಮಧ್ಯರಾತ್ರಿ ಎರಡಾಗಿತ್ತು. ರಂಜಿತ್‌ನ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗದಿದ್ದಕ್ಕೆ ರೋಹನ್‌ ಕ್ಷಮೆ ಕೇಳಿದ.

ನಂತರ ರೋಹನ್‌ಗೆ ಆ ಹುಡುಗನ ಸಾವಿನ ಕುರಿತ ಅನೇಕ ಅನುಮಾನಗಳು ಕಾಡತೊಡಗಿದವು. ಮರುದಿನ ಮತ್ತೆ ಅದೇ ಹೋಟಲ್‌ಗೆ ತೆರಳಿ ವಿಚಾರಿಸಲು ನಿರ್ಧರಿಸಿದ.

ಅದರಂತೆ ಮರುದಿನ ಹೋಟೆಲ್ ಹುಡುಕುತ್ತಾ ಆ ದಾರಿಗೆ ಬಂದಾಗ ನಿನ್ನೆ ರೈನ್ ‌ಬೋ ಹೋಟೆಲ್ ಇದ್ದಲ್ಲಿ ಮೂನ್‌ ಲೈಟ್‌ ಹೋಟೆಲ್ ಕಾಣಿಸಿತು. ಒಳ ಹೊಕ್ಕ ರೋಹನ್‌ ಅಲ್ಲಿದ್ದ ರಿಸೆಪ್ಶನಿಸ್ಟ್ ಬಳಿ ಆ ಹೆಂಗಸಿನ ಕುರಿತು ವಿಚಾರಿಸಿದಾಗ ತಾನು ಇಂದಷ್ಟೇ ಕೆಲಸಕ್ಕೆ ಸೇರಿದ್ದೇನೆ, ತನಗೆ ಏನೂ ತಿಳಿದಿಲ್ಲ ಎಂದುಬಿಟ್ಟಳಾಕೆ.

ಮರು ಕ್ಷಣದಲ್ಲಿ ರೋಹನ್‌ಗೆ ನಿನ್ನೆ ತಾನು ಕಂಡದ್ದು ನಿಜವೋ…. ಸುಳ್ಳೋ….? ಎನಿಸತೊಡಗಿತು. ಅಷ್ಟರಲ್ಲಿ ಹೋಟೆಲ್‌ನ ವೇಟರ್‌ ಶ್ರೀನಿವಾಸ್‌ ಅಲ್ಲಿಗೆ ಬಂದ. ರೋಹನ್‌ ಆತನ ಬಳಿ ಆ ಹೆಂಗಸಿನ ಕುರಿತು ಕೇಳಿದಾಗ ಆತ ನಿಜ ಸಂಗತಿಯನ್ನು ತಿಳಿಸಿದ.

“ರೈನ್‌ ಬೋ ಹೋಟೆಲ್‌, ಮೂನ್‌ ಲೈಟ್‌ ಹೋಟೆಲ್ ಎಂದು ಹೆಸರು ಬದಲಾವಣೆಗೊಂಡು ಈಗಾಗಲೇ ಒಂದು ವರ್ಷವಾಗಿದೆ. ಹೋಟೆಲ್‌ನ ಹಳೆಯ ಓನರ್‌ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋದನೆಂದು, ಈಗಿನ ಓನರ್‌ ಬೇರೆ ಊರಿನಲ್ಲಿದ್ದು ಇಲ್ಲಿನ ಆಡಳಿತವನ್ನು ಮೂರು ಜನರಿದ್ದ ಒಂದು ಮ್ಯಾನೇಜ್‌ಮೆಂಟ್‌ ಗ್ರೂಪ್‌ಗೆ ವಹಿಸಲಾಗಿದೆ.

“ಇನ್ನೂ ಹೇಳಬೇಕೆಂದರೆ ಹಳೆಯ ಹೋಟೆಲ್‌ ಓನರ್‌ ಇದ್ದಾಗಲೇ ಅದೊಂದು ದಿನ ಬಿಳಿ ಸೀರೆಯುಟ್ಟ ಹೆಂಗಸೊಬ್ಬಳು ಎಂಟು ವರ್ಷದ ಮಗನೊಂದಿಗೆ ಹೋಟೆಲ್‌ಗೆ ಬಂದು, ರೂಮ್ ನಂ. 303ನ್ನು ಬುಕ್‌ ಮಾಡಿದ್ದಳು. ಆ ಹುಡುಗನಿಗೆ ತೀವ್ರವಾದ ಹೃದಯದ ಸಮಸ್ಯೆ ಇತ್ತು. ಕಾರ್ಡಿಯಲ್ ಅಟ್ಯಾಕ್‌ ಆಗಿದ್ದ ಆ ಹುಡುಗ ಎಂದಿಗೂ ಕೋಣೆಯಿಂದ ಹೊರ ಹೋಗುತ್ತಿರಲಿಲ್ಲ.

“ಹೀಗಿರುವಾಗ ಒಂದು ದಿನ ಆ ಹುಡುಗ ಮಂಚದ ಮೇಲೆ ಮಲಗಿದ್ದವನು ಒಂದೇ ಸಮನೆ ಒದ್ದಾಡುತ್ತಿದ್ದ. ಹಾಗೆ ಮೂರ್ನಾಲ್ಕು ನಿಮಿಷ ಒದ್ದಾಡಿದ ಬಳಿಕ ಒಮ್ಮೆಲೇ ನಿಷ್ಕ್ರಿಯನಾಗಿ ಮಲಗಿದವನು ಮತ್ತೆ ಏಳಲೇ ಇಲ್ಲ.

“ಇಲ್ಲಿನ ಸ್ಥಳೀಯ ವೈದ್ಯರೊಬ್ಬರು ಬಂದು ಪರೀಕ್ಷಿಸಿ ಹುಡುಗ ಸತ್ತು ಹೋಗಿದ್ದಾನೆ ಎಂದು ದೃಢೀಕರಿಸಿದರು. ಆದರೆ ಆ ಹೆಂಗಸು ಮಾತ್ರ ತನ್ನ ಮಗನ ಸಾವನ್ನು ಒಪ್ಪಲು ತಯಾರಿರಲಿಲ್ಲ. ಇನ್ನೊಮ್ಮೆ ಪರೀಕ್ಷೆಗಳನ್ನು ನಡೆಸಲು ಒತ್ತಾಯಿಸಿದಳು. ಜೊತೆಗೆ ಹೃದಯ ತಜ್ಞರಿಂದಲೇ ಪರೀಕ್ಷಿಸಬೇಕೆಂದು ಕೇಳಿದಳು. ಆಗ ಇದೇ ಹೋಟೆಲ್‌ನಲ್ಲಿ ಮತ್ತೊಬ್ಬ ಅತಿಥಿ ಇದ್ದ. ಆತನೂ ವೈದ್ಯನಾದರೂ ಅವನ ಸಲಹೆ ಪಡೆಯಲು ಆ ಮಹಿಳೆ ನಿರಾಕರಿಸಿದಳು.

“ಆಮೇಲೆ ಹೋಟೆಲ್‌ನವರು ಆ ಮಹಿಳೆಯ ಕುಟುಂಬದವರಿಗೆ ಕರೆ ಮಾಡಲು ಹೇಳಿದಾಗ, ಅದಕ್ಕೂ ಅವಳಿಂದ ಯಾವ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹುಡುಗನ ದೇಹವನ್ನು ಯಾರೂ ಮುಟ್ಟದಂತೆ ಹಠ ಹಿಡಿದು ಕುಳಿತಳು. ಇದರಿಂದ ಹೋಟೆ‌ಲ್‌ನವರಿಗೆ ಸಾಕಷ್ಟು ತೊಂದರೆಯಾಗಿತ್ತು. ಅಂದಿನ ಮ್ಯಾನೇಜರ್‌ ಹೋಟೆಲ್ ಓನರ್‌ಗೆ ಕರೆ ಮಾಡಿ ವಿಷಯ ತಿಳಿಸಿದರು.

“ಓನರ್‌ ತಮ್ಮ ಬಳಿಯಿದ್ದ ನಾಲ್ವರು ಹುಡುಗರನ್ನು ಹೋಟೆಲ್‌ಗೆ ಕಳುಹಿಸಿದರು. ಅವರು ಆ ಪುಟ್ಟ ಹುಡುಗನ ದೇಹವನ್ನು ಬಲಾತ್ಕಾರವಾಗಿ  ಹೋಟೆಲ್‌ನಿಂದ ಹೊರತಂದು ನಗರಪಾಲಿಕೆ ಸ್ಮಶಾನದಲ್ಲಿ ಸುಟ್ಟು ಹಾಕಿದರು. ಆ ಹೆಂಗಸನ್ನೂ ಸಹ ಹೋಟೆಲ್‌ನಿಂದ ಹೊರ ಕಳುಹಿಸಲಾಯಿತು.”

“ಹಾಗಾದರೆ ಮುಂದೆ ಆ ಬಿಳಿ ಸೀರೆಯುಟ್ಟ ಮಹಿಳೆ ಏನಾದಳು….?” ಎಂದ ರೋಹನ್‌ ಅಚ್ಚರಿಯಿಂದ.

“ಈ ಘಟನೆಯಾಗಿ ಎರಡು ವಾರದ ನಂತರ ಬಿಳಿ ಸೀರೆಯುಟ್ಟ ಆ ಹೆಂಗಸಿನ ಶವ ಕನಕಪುರ ರಸ್ತೆಯ ಕ್ರಾಸ್‌ ಒಂದರ ಬಳಿ ಪತ್ತೆಯಾಯಿತು,” ಎಂದ ವೇಟರ್‌.

“ಓನರ್‌ ಸತ್ತರೆಂದು ಹೇಳಿದಿರಲ್ಲ….. ಯಾವಾಗ ಹೇಗೆ ಸತ್ತರು?”

“ಹೌದು ಹೋಟೆಲ್‌ನ ಹಳೆಯ ಓನರ್‌ ಸಹ ಆ ಹೆಂಗಸಿನ ಶವ ಸಿಕ್ಕ ಒಂದೆರಡು ದಿನದಲ್ಲಿ ಅವರ ಮನೆ ಇದ್ದ ಅಪಾರ್ಟ್‌ಮೆಂಟ್‌ನ ಮೇಲಿನಿಂದ ಬಿದ್ದು ಸತ್ತರೆಂದು ಪೇಪರ್‌ನಲ್ಲಿ ವರದಿ ಪ್ರಕಟವಾಯಿತು. ಹೀಗೆ ಸಾಯುವುದಕ್ಕೆ ಒಂದು ವಾರ ಮುಂಚಿತವಾಗಿ ಹೋಟೆಲ್‌ನ್ನು ಅವರು ಮಾರಾಟ ಮಾಡಿದ್ದರು.”

“ನಾನು ಆ ರೂಮನ್ನು ನೋಡಲು ಅಭ್ಯಂತರವಿಲ್ಲವೇ?” ರೋಹನ್‌ ಕೇಳಿದಾಗ ಆತನೇ ರೂಮ್ ನಂ. 303ಗೆ ಕರೆದೊಯ್ದು ತೋರಿಸಿದ.

ಆ ಕೋಣೆ ಲಾಕ್‌ ಆಗಿತ್ತು. ಲಾಕ್‌ ಓಪನ್‌ ಮಾಡಿದಾಗ ರೋಹನ್‌ಗೆ ತಾನು ನಿನ್ನೆ ನೋಡಿದ್ದ ಕೋಣೆಗಿಂತ ಬಹಳವೇ ವಿಭಿನ್ನವಾಗಿತ್ತು. ತಾನು ನೋಡಿದ್ದು ಇದೇ ಕೋಣೆ ಎನ್ನಲು ನಿನ್ನೆ ರೋಹಿತ್‌ ನೀಡಿದ್ದ ಒಂದೇ ಒಂದು ಪ್ರಿಸ್‌ಕ್ರಿಪ್ಶನ್‌ ಚೀಟಿ ಕೋಣೆಯ ಕಿಟಕಿ ಸರಳಲ್ಲಿ ಸಿಕ್ಕಿಕೊಂಡಿತ್ತು. ರೋಹನ್‌ ಆ ಚೀಟಿಯನ್ನು ತೆಗೆದುಕೊಳ್ಳುವ ಸಲುವಾಗಿ ಕಿಟಕಿಯತ್ತ ಹೋಗಿ ಕೈ ಚಾಚಿದ. ಅಷ್ಟರಲ್ಲಿ ಅದೆಲ್ಲಿಂದಲೋ ಬೀಸಿದ ಬಲವಾದ ಗಾಳಿಗೆ ಆ ಚೀಟಿ ಅಲ್ಲಿಂದ ಹಾರಿ ಕಟ್ಟಡದ ಕೆಳಗೆ ರಸ್ತೆಯಲ್ಲೆಲ್ಲೋ ಬಿದ್ದು ಮರೆಯಾಯಿತು….!?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ