ಮಿನಿಕಥೆ  – ಹರಿಣಿ ಸಿದ್ಧಾರ್ಥ 

ಮುಂಬೈನ ದಟ್ಟ ಟ್ರಾಫಿಕ್‌ ಮಧ್ಯೆ ಎಂಟು ವರ್ಷದ ಬಾಲಕಿಯೊಬ್ಬಳು ತನಗೆ ಎಷ್ಟು ಸಾಧ್ಯವೋ ಅಷ್ಟು ವೇಗದಿಂದ ಓಡಿ ಬರುತ್ತಿದ್ದಳು. ಹಾಗೆ ಬರುವಾಗಲೇ ದಾರಿಯಲ್ಲಿ ನಡೆದು ಬರುತ್ತಿದ್ದ ವೃದ್ಧರೊಬ್ಬರ ಕೈ ತಗುಲಿ ಬಿದ್ದು ಬಿಟ್ಟಳು. ಅವರು ಆ ಪುಟಾಣಿ ಹುಡುಗಿಯನ್ನು ಮೆಲ್ಲನೆ ಎತ್ತಿ ನಿಲ್ಲಿಸಿ,

“ಏಕೆ ಓಡಿ ಬಂದೆ?” ಎಂದು ಕೇಳಿದರು.

ಅವಳು ಗಾಬರಿಯಿಂದ ತನ್ನ ಹಿಂದೆ ಕೈ ತೋರಿಸಿದಳು. ಅಲ್ಲಿ ಎರಡು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದವು. ಆ ವೃದ್ಧರು ತಮ್ಮ ಕೋಲಿನಿಂದ ಅವುಗಳನ್ನು ಹೆದರಿಸಿ ಓಡಿಸಿದರು.

ಆ ಪುಟ್ಟ ಹುಡುಗಿ ತನ್ನ ಬ್ಯಾಗ್‌ನಿಂದ ನೀರಿನ ಬಾಟಲಿ ತೆಗೆದು ಕುಡಿದು ಸುಧಾರಿಸಿಕೊಂಡಳು.

“ಈಗ ಸರಿಹೋಯಿತಾ….?” ಎಂದು ವೃದ್ಧರು ಉಪಚರಿಸುವಂತೆ ಕೇಳಿದರು.

“ಎಸ್‌ ಅಂಕಲ್…..! ನಾಯಿಗಳು ಅಟ್ಟಿಸಿಕೊಂಡು ಬಂದದ್ದರಿಂದ ನನಗೆ ಭಯವಾಗಿತ್ತು….” ಎಂದಳು ಹುಡುಗಿ.

“ಸರಿ… ನೀನೀಗ ಎಲ್ಲಿಗೆ ಹೊರಟಿದ್ದೀಯಾ?”

“ಅಂಕಲ್, ನಾನು ಸ್ಕೂಲ್‌ಗೆ ಹೋಗಬೇಕು. ಆದರೆ ಈಗಾಗಲೇ ಶಾಲೆಯ ಸಮಯ ಮೀರಿದೆ. ನನ್ನನ್ನು ಮನೆಗೆ ಬಿಡುತ್ತೀರಾ ಪ್ಲೀಸ್‌….”

ವೃದ್ಧರು ಅವಳನ್ನು ಮನೆಗೆ ಕರೆದೊಯ್ದು ಬಿಟ್ಟರು. ದಾರಿಯಲ್ಲಿ ಸಾಗುವಾಗ ಇಬ್ಬರೂ ಪರಸ್ಪರ ಪರಿಚಯಿಸಿಕೊಂಡರು. ಆ ಪುಟಾಣಿಯ ಹೆಸರು ಉಷಾ. ಥೆರೇಸಾ ಸ್ಕೂಲ್ ‌ನಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಅವಳ ಪೋಷಕರು ನಗರದ ರೈಲ್ವೆ ನಿಲ್ದಾಣದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದರು.

ತಮಗಿದ್ದ ಏಕೈಕ ಮಗುವನ್ನು ಚೆನ್ನಾಗಿ ಓದಿಸಬೇಕೆನ್ನುವುದು ಅವರ ಇರಾದೆಯಾಗಿತ್ತು. ಹಾಗೆಂದೇ ಒಳ್ಳೆಯ ಶಾಲೆಯಲ್ಲಿ ಕಲಿಯಲೆಂದು ಥೆರೇಸಾ ಸ್ಕೂಲ್‌ಗೆ ಸೇರಿಸಿದ್ದರು. ಅವರಿಬ್ಬರೂ ಬೆಳಗ್ಗೆಯೇ ಮನೆ ಬಿಟ್ಟು ಅಂಗಡಿಗೆ ಹೋಗುತ್ತಿದ್ದರು. ಶಾಲೆಗೆ ಹೋದ ಉಷಾ ರಾತ್ರಿ ತಂದೆ ತಾಯಿ ಬರುವವರೆಗೂ ಒಬ್ಬಳೇ ಇರುತ್ತಿದ್ದಳು. ಅವಳಿಗೆ ನಿಧಾನವಾಗಿ ಒಂಟಿತನ ಕಾಡಲಾರಂಭಿಸಿತ್ತು. ಶಾಲೆಯಲ್ಲಿನ ಸ್ನೇಹಿತರೊಂದಿಗೆ ಆಡಿಕೊಂಡಿರುತ್ತಿದ್ದ ಅವಳಿಗೆ ಮನೆಗೆ ಬರುವುದೇ ಬೇಸರವಾಗುತ್ತಿತ್ತು.

ಆದರೆ ಇಂದು ಅವಳಿಗೆ ದೇಹ ಮಾತ್ರ ನೋಯುತ್ತಿರಲಿಲ್ಲ, ಮನಸ್ಸಿನಲ್ಲಿಯೂ ಭಯ ಕಾಡುತ್ತಿತ್ತು.

ಇತ್ತ ಆ ವೃದ್ಧರ ಕುರಿತು ಹೇಳುವುದಾದರೆ ಅವರ ಹೆಸರು ಚಂದ್ರಶೇಖರಯ್ಯ. ವಯಸ್ಸು ಎಪ್ಪತ್ತರ ಆಸುಪಾಸು. ಅವರ ಪತ್ನಿ ಇಹಲೋಕ ತ್ಯಜಿಸಿದ್ದರಿಂದ ಮನೆಯಲ್ಲಿ ಅವರೊಬ್ಬರೇ ಇದ್ದರು. ಇದರಿಂದ ಕೆಲವು ಬಾರಿ ಖಿನ್ನತೆಗೆ ಒಳಗಾದವರಂತೆ ಕಾಣುತ್ತಿದ್ದರು. ವೈದ್ಯರ ಬಳಿಗೆ ಹೋದಾಗೆಲ್ಲಾ, ನೀವು ಆದಷ್ಟು ಹೊರಗಡೆ ಸುತ್ತಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ನೇಹಿತರೊಂದಿಗೆ ಬೆರೆತರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಸಲಹೆ ನೀಡುತ್ತಿದ್ದರು. ಆದ್ದರಿಂದ ಚಂದ್ರಶೇಖರಯ್ಯ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ ನೆಪದಲ್ಲಿ ಹೊರಬರುತ್ತಿದ್ದರು. ಸಮೀಪದಲ್ಲಿದ್ದ ಪಾರ್ಕ್‌ನಲ್ಲಿ ಕೆಲವು ಸಮಯ ಕಳೆಯುತ್ತಿದ್ದರೂ ಕೂಡ ಅವರಲ್ಲಿದ್ದ ಖಿನ್ನತೆ ಸಂಪೂರ್ಣವಾಗಿ ದೂರವಾಗಿರಲಿಲ್ಲ.

ಅವರಿಗೆ ಯಾರೊಂದಿಗಾದರೂ ಸ್ನೇಹ ಬೆಳೆಸಬೇಕೆನಿಸುತ್ತಿತ್ತು. ಆದರೆ ಯಾರೂ ಸರಿಯಾದ ವ್ಯಕ್ತಿ ಸಿಕ್ಕಿರಲಿಲ್ಲ. ಇಂತಹುದರಲ್ಲಿ ಈ ಪುಟ್ಟ ಹುಡುಗಿ ಉಷಾಳ ಪರಿಚಯ ಅವರಿಗೆ ಸಂತಸವನ್ನು ಉಂಟುಮಾಡಿತ್ತು.

ಉಷಾಳಲ್ಲಿದ್ದ ಮುಗ್ಧತೆ, ಕಣ್ಣಿನಲ್ಲಿದ್ದ ಚೆಂದದ ಕನಸು, ಮುದ್ದಾದ ಮಾತು, ನಡೆಯುವ ಶೈಲಿ ಎಲ್ಲ ಚಂದ್ರಶೇಖರಯ್ಯನವರಿಗೆ ಬಹಳ ಹಿಡಿಸಿತ್ತು. ಅಂದಿನಿಂದ ಅವರು ಪ್ರತಿದಿನ ಅವಳ ಶಾಲೆಗೆ ಹೋಗಿ ಅವಳನ್ನು ಮನೆಗೆ ಬಿಟ್ಟು ಬರುತ್ತಿದ್ದರು. ಆ ಸಮಯದಲ್ಲಿ ಉಷಾ ಅವರಿಗೆ ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಘಟನೆಗಳನ್ನು, ಟೀಚರ್‌ ಹೇಳುತ್ತಿದ್ದ ಕಥೆಯನ್ನೂ ಚಾಚೂ ತಪ್ಪದೆ ಹೇಳುತ್ತಿದ್ದಳು. ಇದು ಅವರಿಗೆ ಖುಷಿ ನೀಡುತ್ತಿತ್ತು. ಇದರಿಂದ ಅವರಿಬ್ಬರಲ್ಲಿ ಆತ್ಮೀಯ ಒಡನಾಟ ಬೆಳೆಯಿತು.

ಹೀಗೆ ಕೆಲವು ತಿಂಗಳು ಕಳೆಯಿತು. ಋತುಗಳು ಬದಲಾದಂತೆ ಚಳಿಗಾಲ ಪ್ರಾರಂಭವಾಯಿತು. ಆಗ ಚಂದ್ರಶೇಖರಯ್ಯನವರಿಗೆ ಮೊದಲಿನಂತೆ ಮನೆಯಿಂದ ಹೊರಗೆ ಬರುವುದು ಕಷ್ಟವೆನಿಸತೊಡಗಿತು. ಚಳಿಯ ತೀವ್ರತೆಯನ್ನು ಅವರ ವಯಸ್ಸಾದ ದೇಹ ತಾಳಿಕೊಳ್ಳುತ್ತಿಲ್ಲ ಎನ್ನುವುದನ್ನು ಅವರ ಕುಬ್ಜ ದೇಹವೇ ಹೇಳುತ್ತಿತ್ತು. ಆದರೆ ಇದಾವುದನ್ನೂ ನೋಡದೆ ಉಷಾಳನ್ನು ಕರೆದೊಯ್ಯಲು ಪ್ರತಿ ದಿನ ಶಾಲೆಯ ಬಳಿ ಹಾಜರಾಗುತ್ತಿದ್ದರು.

ಅಂದೂ ಸಹ ಉಷಾ ಮತ್ತು ಅವಳ ಸೂಪರ್‌ ಹೀರೋ ಇಬ್ಬರೂ ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ದಾರಿಯ ನಡುವೆ ಮಾರ್ಕೆಟ್‌ ರಸ್ತೆಯಲ್ಲಿ ಬರುತ್ತಿರುವಾಗ ಇದ್ದಕ್ಕಿದ್ದಂತೆ ದಟ್ಟ ಹೊಗೆ ಆವರಿಸಿಕೊಂಡಿತು. ಹೊಗೆ ಅದೆಷ್ಟು ದಟ್ಟವಾಗಿತ್ತೆಂದರೆ ಪರಸ್ಪರ ಒಬ್ಬರಿಗೊಬ್ಬರೂ ಕಾಣಿಸುತ್ತಿರಲಿಲ್ಲ. ಜೊತೆಗೆ ಜನರ ಹಾಹಾಕಾರ ಕೇಳತೊಡಗಿತು. ಎಲ್ಲರೂ ದಿಕ್ಕಾಪಾಲಾಗಿ ಓಡತೊಡಗಿದರು. ಉಷಾ ತಪ್ಪಿಸಿಕೊಳ್ಳುತ್ತಾಳೆಂಬ ಭಯದಲ್ಲಿ ಅವಳ ಕೈಯನ್ನು ಬಲವಾಗಿ ಹಿಡಿದಿದ್ದ ಚಂದ್ರಶೇಖರಯ್ಯನವರು ಅವಳನ್ನು ಎಳೆದುಕೊಂಡು ದಾಪುಗಾಲು ಹಾಕುತ್ತಾ ಸಾಗಿದರು. ಅಷ್ಟರಲ್ಲಿ ಅಲ್ಲಿ ಒಂದೆಡೆ ಬೆಂಕಿ ಕಾಣಿಸಿಕೊಂಡಿತು. ಅದ್ಯಾರೋ ಒಬ್ಬರು “ಬಾಂಬ್‌…! ಬಾಂಬ್‌…!!” ಎಂದು ಕೂಗಿದ್ದು ಕೇಳಿಸಿತು.

ಮತ್ತೆಲ್ಲ ಕ್ಷಣಾರ್ಧದಲ್ಲಿ ನಡೆದೇ ಹೋಗಿತ್ತು. ಅದೊಂದು ದೊಡ್ಡ ದುರಂತ. ಮಾರುಕಟ್ಟೆಯ ಕೇಂದ್ರ ಭಾಗದಲ್ಲಿ ಬಾಂಬ್‌ ಸ್ಛೋಟಿಸಿದ್ದರ ಪರಿಣಾಮ ಸುಮಾರು ಹನ್ನೆರಡು ಜನರು ಸತ್ತು, ನೂರಾರು ಮಂದಿ ಗಾಯಗೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ಅಲ್ಲಿ ಸ್ಮಶಾನ ಸ್ವರೂಪದ ದೃಶ್ಯ ಏರ್ಪಾಟಾಯಿತು.

ಇದಾದ ಅರ್ಧ ಗಂಟೆಯಲ್ಲಿ ಟಿ.ವಿ. ಸೇರಿ ಎಲ್ಲಾ ಮಾಧ್ಯಮಗಳ ಮೂಲಕ ಸುದ್ದಿ ದೇಶವ್ಯಾಪಿ ಹರಡಿತು. ಉಷಾಳ ಪೋಷಕರು ಆ ಹೊತ್ತಿಗೆ ಅಲ್ಲಿಗೆ ಓಡಿಬಂದರು. ಇಬ್ಬರ ಮುಖದಲ್ಲಿಯೂ ಗಾಬರಿಯಿತ್ತು. ಮಗಳಿಗಾಗಿ ಎಷ್ಟು ಹುಡುಕಿದರೂ ಉಷಾ ಸಿಗಲಿಲ್ಲ.

ಹೀಗೆ ಹುಡುಕುತ್ತಿದ್ದಾಗ ಉಷಾಳ ತಾಯಿಗೆ ಒಂದು ಜಾಗದಲ್ಲಿ ಉಷಾಳ ನೀರಿನ ಬಾಟಲಿ ಬಿದ್ದಿರುವುದು ಕಂಡಿತು. ತಕ್ಷಣ ಆಕೆ ಪತಿಯನ್ನು ಕೂಗಿ ಕರೆದು ಮಗಳ ಬಾಟಲಿ ಎತ್ತಿಕೊಂಡು ಅಳ ತೊಡಗಿದರು. ಮತ್ತೆ ಅದೇ ಜಾಗದಲ್ಲಿ ತುಸು ಮುಂದೆ ಹೋದಾಗ ಉಷಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿತು.

ತಕ್ಷಣ ಬಾಟಲಿಯಲ್ಲಿದ್ದ ನೀರನ್ನು ಅವಳ ಮುಖಕ್ಕೆ ಸಿಂಪಡಿಸಿದಾಗ ಉಷಾ ನಿಧಾನಾಗಿ ಕಣ್ಣು ತೆರೆದಳು. ಅವಳ ಶಾಲಾ ಬ್ಯಾಗ್‌ ಮತ್ತೆಲ್ಲೋ ಬಿದ್ದು ಸುಟ್ಟುಹೋಗಿತ್ತು.

ನಂತರ ಅವಳನ್ನು ಎತ್ತಿಕೊಂಡು ಮನೆಗೆ ಹೋದ ಆ ದಂಪತಿ ಟಿ.ವಿ. ಆನ್‌ ಮಾಡಿದರು. ಮತ್ತೆ ಅದೇ ಬಾಂಬ್‌ ಸ್ಛೋಟದ ವರದಿ ಪ್ರಸಾರವಾಗುತ್ತಿತ್ತು. ಅಲ್ಲಿನ ವರದಿಗಾರ ವರದಿ ಮಾಡುತ್ತಿದ್ದ ಇಂದಿನ ಬಾಂಬ್‌ ಸ್ಛೋಟದಲ್ಲಿ ಒಬ್ಬ ವಯೋವೃದ್ಧರು ತಮ್ಮೊಂದಿಗಿದ್ದ ಪುಟ್ಟ ಹುಡುಗಿಯನ್ನು ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಆ ಹುಡುಗಿಯನ್ನು ತಮ್ಮೆಲ್ಲ ಬಲ ಪ್ರಯೋಗಿಸಿ ದೂರಕ್ಕೆ ತಳ್ಳಿದ ಆ ವೃದ್ಧರು ಪ್ರಬಲ ಬಾಂಬ್‌ ಸ್ಛೋಟಕ್ಕೆ ಸಿಕ್ಕಿ ಸುಟ್ಟು ಕರಕಲಾದ ದೃಶ್ಯ ಮಾತ್ರ ಹೃದಯ ಕಲಕುವಂತಿತ್ತು.

ಇದನ್ನು ಕೇಳಿದ ಉಷಾಳ ಕಣ್ಣಿಲ್ಲಿ ನೀರು ಧಾರೆ ಧಾರೆಯಾಗಿ ಸುರಿಯತೊಡಗಿತು.

Tags:
COMMENT