ಕಥೆ - ಸುಮತಿ ಭಟ್
ಕಿರಿಯ ವಯಸ್ಸಿನ ಚಿನ್ಮಯಿ ತನ್ನ ಅಜ್ಜಿಯ ಜೊತೆ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಿದ್ದಳು. ಅದೊಂದು ದಿನ ಅವಳು ಅಜ್ಜಿಯ ಬಳಿ ಅಂಥದ್ದೇನು ವಿಷಯ ತಿಳಿಸಿದಳು? ಅದನ್ನು ಕೇಳಿ ಅಜ್ಜಿ ಏಕೆ ಚಕಿತರಾದರು.....?
ಅದೊಂದು ದಿನ ಚಿನ್ಮಯಿ ನನ್ನ ಹತ್ತಿರ ಕುಳಿತು ಹೋಮ್ ವರ್ಕ್ ಮಾಡುತ್ತಿದ್ದಳು. ಅವಳು ಒಮ್ಮೆಲೇ ಹೇಳತೊಡಗಿದಳು, ``ಅಜ್ಜಿ, ನಿಮ್ಮದೇ ಮಜಾ ನೋಡಿ!''
``ಏಕೆ ಯಾವುದರ ಮಜಾ....?'' ನಾನು ಅವಳಿಂದ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದೆ.
``ನಿಮಗೆ ಯಾವುದೇ ಕೆಲಸ ಮಾಡಬೇಕಾಗಿ ಬರುವುದಿಲ್ಲ.....'' ಇದು ಅವಳ ಉತ್ತರವಾಗಿತ್ತು.
``ಏಕೆ? ನಾನು ನಿಮಗೆ ಮ್ಯಾಗಿ ತಯಾರಿಸಿ ಕೊಡ್ತೀನಿ. ಸೂಪ್ ಮಾಡಿಕೊಡ್ತೀನಿ. ನಿನ್ನ ಫೋನ್ ಚಾರ್ಜ್ ಮಾಡಿಕೊಡ್ತೀನಿ, ನೀನು ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಹೋದ ಪುಸ್ತಕಗಳನ್ನು ಸರಿಯಾಗಿ ಇಡ್ತೀನಿ. ಹೀಗೆ ಅದೆಷ್ಟು ಕೆಲಸಗಳು ಇರುತ್ತವೆ. ಅಂದಹಾಗೆ ನಿನಗೇನು ಕೆಲಸಗಳಿರುತ್ತವೆ?'' ಎಂದು ಕೇಳಿದಿ.
``ಏನ್ ಹೇಳ್ತಿ ಅಜ್ಜಿ..... ನನಗಂತೂ ಕೆಲಸವೇ ಕೆಲಸ.....'' ಎಂದು ಹೇಳಿ ಅವಳು ತಲೆ ಮೇಲೆ ಕೈ ಹೊತ್ತುಕೊಂಡು ಬಹಳ ದುಃಖದ ಧ್ವನಿಯಲ್ಲಿ ಹೇಳಿದಳು.
ಅದೇನು ಕೆಲಸ? ನನಗೂ ಗೊತ್ತಾಗಲೇಬೇಕಲ್ಲ?'' ನಾನು ಕೇಳಿದೆ.
``ಕ್ಲಾಸ್ ಅಟೆಂಡ್ ಮಾಡುವುದು, ಹೋಮ್ ವರ್ಕ್ ಮುಗಿಸಬೇಕು. ಟೆಸ್ಟ್ ಗೆ ತಯಾರಿ ಮಾಡಿಕೊಳ್ಳುವುದು, ಪ್ರಾಜೆಕ್ಟ್ ಗಾಗಿ ಸಿದ್ಧತೆ ಹೀಗೆ ಮಕ್ಕಳಿಗೆ ಎಷ್ಟೊಂದು ಕೆಲಸಗಳಿರುತ್ತವೆ ಅಜ್ಜಿ.....'' ಅವಳು ಒಂದೇ ಸಮನೆ ಮಳೆ ಸುರಿದಂತೆ ಮಾತನಾಡುತ್ತಿದ್ದಳು. ಅವಳ ಎಳೆ ಮನಸ್ಸನ್ನು ಯಾರೋ ನೋಯಿಸಿರುವ ರೀತಿಯಲ್ಲಿತ್ತು ಅವಳ ಮಾತಿನ ಧಾಟಿ.
``ಅದಕ್ಕೆ ಇನ್ನಷ್ಟು ಉಪ್ಪು ಖಾರ ಸವರಿದಂತೆ ಈ ಆನ್ ಲೈನ್ ಕ್ಲಾಸ್ ಗಳು. ಸದಾ ಲ್ಯಾಪ್ ಟಾಪ್ ಮುಂದೆ ಕುಳಿತಿರಬೇಕಾಗುತ್ತದೆ. ಕಣ್ಣು ಪಿಳುಕಿಸದೆ ಅದ್ಹೇಗೆ ಕುಳಿತಿರಬೇಕೆಂದರೆ, ಅತ್ತಿತ್ತ ಕಣ್ಣು ತಿರುಗಿಸಿದರೆ ಸಾಕು, ಮ್ಯಾಮ್ ಕಿರುಚಾಡಲು ಶುರು ಮಾಡುತ್ತಾರೆ.
``ಅದೆಷ್ಟು ಜೋರಾಗಿ ಚೀರುತ್ತಾರೆಂದರೆ, ಮನೆಯ ಎಲ್ಲರಿಗೂ ಈ ವಿಷಯ ತಿಳಿದುಬಿಡುತ್ತದೆ. `ಶ್ರದ್ಧಾ, ನೀನು ಹೋಮ್ ವರ್ಕ್ ಏಕೆ ಮಾಡಿಲ್ಲ?'
`ರಾಹುಲ್ ನಿನ್ನ ರೈಟಿಂಗ್ ಒಂಚೂರು ಚೆನ್ನಾಗಿಲ್ಲ,' `ಮನು, ನಿನ್ನ ಗಮನ ಎಲ್ಲಿದೆ?' ಹೀಗೆ ಎಲ್ಲರನ್ನೂ ಗದರಿಸುತ್ತಲೇ ಇರುತ್ತಾರೆ,'' ಎಂದು ಅವಳು ಬಂಡಾಯದ ಧ್ವನಿ ಎತ್ತಿದಳು.
ನಾನು ಮೌನವಾಗಿ ಕುಳಿತುಕೊಂಡು ಅವಳ ಮಾತನ್ನು ಆಲಿಸುತ್ತಿದ್ದೆ. ಆ ಬಳಿಕ ನಾನು ನಗುತ್ತಾ, ``ಮೊದಲು ಶಾಲೆಯಲ್ಲಿ ಮ್ಯಾಮ್ ನಿಮ್ಮನ್ನು ಗದರಿಸುತ್ತಿರಲಿಲ್ಲವೇ?'' ಎಂದು ಕೇಳಿದೆ.
``ಅಜ್ಜಿ ಇದೇನು ಹೀಗೆ ಕೇಳ್ತಿದೀರಾ? ಅವರೂ ಅಲ್ಲೂ ಗದರುತ್ತಾರೆ, ಇಲ್ಲೂ ಗದರುತ್ತಾರೆ. ಮೇಡಂಗಳ ಕೆಲಸ ಸದಾ ಗದರಿಸುವುದೇ ಅಲ್ವೇ?''
``ಮತ್ತೆ?'' ನನ್ನ ಮುಂದಿನ ಪ್ರಶ್ನೆ.
``ಅಜ್ಜಿ, ನಿಮಗೆ ಗೊತ್ತಾಗುತ್ತಿಲ್ಲವೇ?'' ಅವಳು ಅತ್ಯಂತ ಮುಗ್ಧಳೆಂಬಂತೆ ಕೇಳಿದಳು.
``ಅದೇನು, ವಿಷಯ ನನಗೆ ಅರ್ಥ ಆಗದಿರುವುದು? ನೀನು ಹೇಳಿದರೆ ತಾನೇ ನನಗೆ ಗೊತ್ತಾಗೋದು.....''
``ನಿಲ್ಲಿ ಅಜ್ಜಿ, ನಾನು ನಿಮಗೆ ತಿಳಿಸಿಹೇಳ್ತೀನಿ. ಶಾಲೆಯಲ್ಲಿ ಮೇಡಂ ಗದರಿಸುತ್ತಾರೆ. ಆದರೆ ಅದು ನಮಗೆ ಅಷ್ಟೇನೂ ಕೆಟ್ಟದ್ದೆನಿಸುವುದಿಲ್ಲ. ಏಕೆಂದರೆ ಅಲ್ಲಿ ಎಲ್ಲರಿಗೂ ಗದರಿಕೆ ಕೇಳಬೇಕಾಗಿ ಬರುತ್ತದೆ. ಕ್ಲಾಸಿನಲ್ಲಿ ಎಲ್ಲರೂ ಸರಿಸಮಾನರು. ಒಮ್ಮೊಮ್ಮೆ ಕೆಲವರಿಗೆ ಶಿಕ್ಷೆಯೂ ಸಿಗುತ್ತದೆ. ಆದರೆ ಅದರ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಇಲ್ಲಿ ಯಾರಿಗೆ ಗದರಿದರೂ ಅದು ಅವರ ಮನೆಯಲ್ಲಿರುವ ಪಾಲಕರಿಗೂ ಹಾಗೂ ಫ್ರೆಂಡ್ಸ್ ಮನೆಯವರಿಗೂ ಕ್ಷಣಾರ್ಧದಲ್ಲಿ ಗೊತ್ತಾಗಿಬಿಡುತ್ತದೆ. ಇದು ನಮಗಾಗುವ ಅಪಮಾನ ಅಲ್ವೇ....?''