ಅಣ್ಣನ ಮದುವೆಯಾದ ನಂತರ ಮೊಟ್ಟ ಮೊದಲ ಸಲ ಅವರ ಮನೆಗೆ ಹೊರಟಿದ್ದೆ. ಅಪ್ಪ ಅಮ್ಮ ಕೂಡ ಕಳೆದ ಎರಡು ತಿಂಗಳಿಂದ ಅಣ್ಣನ ಮನೆಯಲ್ಲೇ ಉಳಿದಿದ್ದಾರೆ. ಅಲ್ಲಿ ಅವರು ಹೇಗಿದ್ದಾರೊ ಏನೋ ಅಂತ ಮನಸ್ಸಿಗೆ ಕಳವಳವಾಗಿತ್ತು. ಸ್ವಂತ ಮನೆ ತೊರೆದು, ನೆರೆಹೊರೆ, ಬಂಧು ಬಾಂಧವರನ್ನೆಲ್ಲ ಬಿಟ್ಟು ಅಣ್ಣನ ಮನೆಯಲ್ಲಿ ಇರಲು ಅವರಿಗೆ ಸಾಧ್ಯವಾದೀತೋ ಇಲ್ಲವೋ? ಅಪ್ಪನಂತೂ ಅಚೀಚೆ ಓಡಾಡಿಕೊಂಡು ಹೊತ್ತು ಕಳೆಯಬಲ್ಲರು. ಆದರೆ ಅಮ್ಮ ಇಡೀ ದಿನ ಮನೆಯಲ್ಲೇ ಇರಬೇಕಲ್ಲ. ಈಗಷ್ಟೇ ಅಣ್ಣನಿಗೆ ಮದುವೆ ಆಗಿದೆ. ಅವರಿಬ್ಬರು ಹೊಸತನದ ರೋಮಾಂಚನದಲ್ಲಿ ಸಂತೋಷವಾಗಿಯೇ ಇರುತ್ತಾರೆ. ಅಷ್ಟರಲ್ಲೇ ಅವಳ ತುಟಿಯಂಚಿನಲ್ಲಿ ಮಂದಹಾಸ ಮೂಡಿತು. ಆ ಹೊಸತನದ ದಿನಗಳು ಎಷ್ಟು ಅದ್ಭುತವಾಗಿರುತ್ತವೆ. ಮೈಮನಗಳಲ್ಲೆಲ್ಲ ಹೊಸ ಚೈತನ್ಯ, ತಡರಾತ್ರಿಯವರೆಗೂ ನಿದ್ದ ಬರದಿರುವುದು, ಮುಂಜಾನೆ ತಡವಾಗಿ ಏಳುವುದು, ತನ್ನ ಮದುವೆಯಾದ ಆರಂಭದ ದಿನಗಳೆಲ್ಲ ಅವಳ ಕಣ್ಮುಂದೆ ಸಿನಿಮಾದಂತೆ ಸುಳಿಯುತೊಡಗಿದವು. ಸತೀಶ್, ಬೆಳಗ್ಗೆ ತುಂಬಾ ಹೊತ್ತಿನವರೆಗೂ ಮಲಗಿಯೇ ಇರುತ್ತಿದ್ದ. ಅವನ ಪಕ್ಕದಲ್ಲೇ ಮೌನವಾಗಿ ಮಲಗಿರುತ್ತಿದ್ದ ಇವಳು ನವಿರಾಗಿ ಅವನ ಮೈದಡುವುತ್ತಿದ್ದಳು. ಸತೀಶ್ ಬಾತ್ ರೂಮಿನಿಂದ ಹೊರಬರುತ್ತಿದ್ದಂತೆ ಅವನೊಟ್ಟಿಗೆಯೇ ಡೈನಿಂಗ್ ಟೇಬಲ್‌ನತ್ತ ಹೊರಡುತ್ತಿದ್ದಳು. ತಿಂಡಿ ತಿಂದ ನಂತರ ಸತೀಶ್ ಆಫೀಸ್‌ಗೆ ತೆರಳಿದ ನಂತರ ಮತ್ತೆ ಬೆಡ್ ರೂಮ್ ಸೇರಿಕೊಳ್ಳುತ್ತಿದ್ದಳು. ದಿನಕ್ಕೆ ಕಡಿಮೆಯೆಂದರೂ 7-8 ಬಾರಿ ಸತೀಶ್‌ಗೆ ಫೋನ್ ಮಾಡುತ್ತಿದ್ದಳು. ಪ್ರತಿಕ್ಷಣ ಅವನ ಆಗುಹೋಗುಗಳನ್ನು ಗಮನಿಸುವಳು. ಊಟದ ಸಮಯಕ್ಕೆ ಸರಿಯಾಗಿ ಅವನ ಕಾಲ್ ಬರುತ್ತಿದ್ದಂತೆ, ತಕ್ಷಣ ತಯಾರಾಗಿ ಹೋಗುವಳು. ಸತೀಶ್, ಊಟ ಮುಗಿಸಿ ಕೊಂಚ ವಿಶ್ರಾಂತಿ ಪಡೆದು ಮರಳಿ ಆಫೀಸಿಗೆ ಹೋಗುತ್ತಿದ್ದಂತೆ ಇವಳು ಪ್ರಪಂಚದ ಪರಿವೆಯೇ ಇಲ್ಲದಂತೆ ಬೆಡ್ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡುಬಿಡುತ್ತಿದ್ದಳು.
ಅದೇ ದಿನಗಳಲ್ಲಿ ಅವಳು ಗರ್ಭ ಧರಿಸಿದ್ದಳು, ಇನ್ನೇನು, ಅವಳಿಗೆ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗತೊಡಗಿತ್ತು. ಸತೀಶ್ ಸದಾ ತನ್ನ ಜೊತೆಯಲ್ಲೇ ಇರಲಿ ಎಂದು ಅವಳ ಮನಸ್ಸು ಹಾತೊರೆಯತೊಡಗಿತ್ತು. ಸಣ್ಣ ತಲೆನೋವು ಕಾಣಿಸಿದರೂ, ಅವನೇ ಬಂದು ನಿವಾರಿಸಲಿ ಎಂದುಕೊಳ್ಳುತ್ತಿದ್ದಳು. ತನ್ನ ತನುಮನುಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಸ್ವತಃ ಅನುಭವಿಸುತ್ತಿದ್ದಳು. ಆದರೆ ಈ ಗಂಡಸರು, ಹೆಂಗಸರ ಎಲ್ಲಾ ಸಮಸ್ಯೆಗಳಿಗೂ ತಮ್ಮ ತಾಯಂದಿರೆ ಮದ್ದು ಎಂದುಕೊಳ್ಳುತ್ತಾರೆ. ಹೀಗಾಗಿಯೇ ತಂತಮ್ಮ ಹೆಂಡತಿಯರ ಸಮಸ್ಯೆಗಳನ್ನು ತಾಯಿಯ ಸುಪರ್ದಿಗೆ ಒಪ್ಪಿಸಿಬಿಡುತ್ತಾರೆ.
ಅವಳ ಯೋಚನಾಲಹರಿ ಒಮ್ಮಿಂದೊಮ್ಮೆಲೆ ಹಿಂದಕ್ಕೆ ಸಾಗಿತ್ತು. ಆ ದಿನಗಳಲ್ಲಿ ಸತೀಶ್‌ನ ತಂದೆ ತಾಯಿ ಕೂಡ ಅವರೊಟ್ಟಿಗೇ ಇರುತ್ತಿದ್ದರು. ಅವರ ಒಂಟಿತನದ ಬಗ್ಗೆ ಇವಳಿಗೆ ಯಾವತ್ತೂ ಯೋಚನೆ ಬಂದಿರಲಿಲ್ಲ. ಆ ವೃದ್ಧ ಜೀವಗಳು ಪ್ರತಿದಿನ ಸಂಜೆ ಸತೀಶ್ ಮನೆಗೆ ಬರುವುದನ್ನೇ ಕಾಯುತ್ತಿದ್ದರು. ಅವನು ಬಂದ ತಕ್ಷಣ ಅವನೊಂದಿಗೆ ಮಾತನಾಡಲು ತವಕಿಸುತ್ತಿದ್ದರು. ನಿಜ ಹೇಳಬೇಕೆಂದರೆ ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ, ನಾವು ಇನ್ನೊಬ್ಬರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಅವಳು ಇಡೀ ದಿನ ಬಾಗಿಲು ಮುಚ್ಚಿಕೊಂಡು ಬೆಡ್‌ರೂಮಿನಲ್ಲಿಯೇ ಕೂತಿರುತ್ತಿದ್ದಳು. ತನ್ನ ಅಪ್ಪ, ಅಮ್ಮ ಗೆಳೆಯ ಗೆಳತಿಯರೊಂದಿಗೆ ಫೋನ್‌ನಲ್ಲಿ ಹರಟೆ ಹೊಡೆಯುವುದರಲ್ಲಿ ತಲ್ಲೀನಳಾಗಿ ಇರುತ್ತಿದ್ದಳು. ಆದರೆ ತನ್ನ ಅತ್ತೆ ಮಾವ ಹೇಗೆ ಸಮಯ ತಳ್ಳುತ್ತಿದ್ದಾರೆ ಎಂಬುದನ್ನು ಕೇಳಲು ಹೋಗುತ್ತಿರಲಿಲ್ಲ. ಅಮ್ಮ ಮಾತ್ರ ಪ್ರತಿದಿನ ಸಮಯಕ್ಕೆ ಸರಿಯಾಗಿ ಹೋಗಿ, ಬಾಗಿಲು ತಟ್ಟಿ, ಊಟ ತಿಂಡಿ ಕಾಫಿಗೋಸ್ಕರ ಕರೆದುಬರುತ್ತಿದ್ದರು.