ರೈಲು ಶರವೇಗದಲ್ಲಿ ಚಲಿಸುತ್ತಿತ್ತು. ಸಂಜನಾ ತನ್ನ ಹಳೆಯ ನೆನಪುಗಳ ತುಂತುರಿನಲ್ಲಿ ಮಿಂದುಹೋಗಿದ್ದಳು. ಅಚಾನಕ್ಕಾಗಿ ಅವಳ ಮೂರು ವರ್ಷದ ಮಗು ರಾಣಿ ಬೋಗಿಯ ಇನ್ನೊಂದು ಬದಿಯತ್ತ ಓಡತೊಡಗಿತು. ಅದೇ ಕ್ಷಣ ಎದುರಿನ ಸೀಟ್‌ನಲ್ಲಿ ಕುಳಿತಿದ್ದ ನವ ವಿವಾಹಿತಿ ಮೇರಿ ಆ ಮಗುವನ್ನು ಅಪ್ಪಿ ಹಿಡಿದುಕೊಂಡಳು.

“ಏಯ್‌ ತುಂಟಿ, ಎಲ್ಲಿಗೆ ಹೋಗುತ್ತಿರುವೆ. ಮಮ್ಮಿ ನಿನ್ನನ್ನು ಎಲ್ಲಿ ಅಂತಾ ಹುಡುಕಾಡಬೇಕು?”

“ಮ್….ಬಿಡು,” ಎನ್ನುತ್ತಾ ರಾಣಿ ಅವಳಿಂದ ಕೊಸರಿಕೊಳ್ಳಲು ಹಣಿಸತೊಡಗಿದಳು.

ಅಷ್ಟರಲ್ಲಿ ವಾಸ್ತವಕ್ಕೆ ಬಂದ ಸಂಜನಾ ಎದ್ದು ಬಂದು ಮಗುವನ್ನು ತೆಕ್ಕೆಗೆ ಎಳೆದುಕೊಳ್ಳುತ್ತಾ, “ಎಲ್ಲಿಗೆ ಹೋಗುತ್ತಿದ್ದೀಯಾ ರಾಣಿ? ರೈಲಿನಲ್ಲಿ ಮಕ್ಕಳು ಕಳೆದುಹೋಗುತ್ತಾರೆಂದು ನಿನಗೆ ಹೇಳಿರಲಿಲ್ಲವೇ? ನನ್ನನ್ನು ಬಿಟ್ಟು ಎಲ್ಲೂ ಹೋಗಬಾರದು ಗೊತ್ತಾಯ್ತಾ…..”

“ಆ ಅಂಕಲ್ ಬಾ ಎಂದು ಕರೆದರು,” ಎಂದು ರಾಣಿ ಬೋಗಿಯ ಮತ್ತೊಂದೆಡೆಗೆ ಬೆರಳು ಮಾಡಿ ತೋರಿಸಿದಳು.

ಸಂಜನಾಗೆ ಗಾಬರಿಯಾಯಿತು. ಮುಂದೆ ಕಣ್ಣುಹಾಯಿಸಿ ನೋಡಿದಳು ಅಂತಹ ಯಾವ ವ್ಯಕ್ತಿಯೂ ಕಾಣಿಸಲಿಲ್ಲ. ಇನ್ನುಳಿದವರೆಲ್ಲ ತಂತಮ್ಮ ಹರಟೆಯ ಲೋಕದಲ್ಲಿ ಕಳೆದುಹೋಗಿದ್ದರು. ಅವರು ಯಾರೂ ಮಗುವನ್ನು ಕರೆದಿರಲಿಕ್ಕಿಲ್ಲ.

ಸಂಜನಾ ಮಗುವನ್ನು ಬಿಗಿಯಾಗಿ ತಬ್ಬಿಕೊಂಡಳು. ಅವಳ ಹಣೆಯ ಮೇಲೆ ಗಾಬರಿಯಿಂದಾಗಿ ಬೆವರು ಮೂಡಿತ್ತು, “ಯಾರೇ ಕರೆದರೂ ನನ್ನನ್ನು ಕೇಳದೆ ಹೋಗಬಾರದು ರಾಣಿ,” ಎಂದು ಮಗುವಿಗೆ ಬುದ್ಧಿ ಹೇಳಿದಳು.

ಬಟ್ಟಲು ಕಂಗಳ ಮುದ್ದಾದ ಮಗು ರಾಣಿ ಹೂಂಗುಟ್ಟಿ ತನ್ನ ಅಮ್ಮನನ್ನು ಇನ್ನಷ್ಟು ಬಿಗಿದಪ್ಪಿಕೊಂಡಿತು. ಹಂಸ ವರ್ಣದ ಸಂಜನಾಳ ಕಡುಗಪ್ಪು ಕಣ್ಣುಗಳಲ್ಲಿ ತೇವ ಸಾಂದ್ರಗೊಂಡಿತ್ತು. ಮೇರಿ ಅಕ್ಕರೆಯಿಂದ ಮಗುವನ್ನೇ ನೋಡುತ್ತಿದ್ದಳು. ಅವಳು ಮಗುವನ್ನು ಕರೆದಾಗ, ಮಗು ಅಡ್ಡಡ್ಡ ಕೈಯಾಡಿಸಿ ಬರುವುದಿಲ್ಲ ಎಂದಿತು. ಸಂಜನಾ ಮೇರಿಯತ್ತ ನೋಡಿದಾಗ ಅವಳು ನಸುನಕ್ಕಳು.

“ನಿಮ್ಮ ಮಗು ತುಂಬಾ ಮುದ್ದಾಗಿದೆ. ನಾನೂ ಅವಳೊಂದಿಗೆ ಸ್ವಲ್ಪ ಹೊತ್ತು ಆಟವಾಡುವೆ,” ಎಂದಳಾದರೂ ಸಂಜನಾ ಮಾತ್ರ ಮೌನವಾಗಿಯೇ ಇದ್ದಳು.

ಮೇರಿಯ ಜೊತೆಗಿದ್ದ ಆಕಾಶ್‌ಗೆ ಸಂಜನಾಳ ವರ್ತನೆ ಇಷ್ಟವಾಗಲಿಲ್ಲವೇನೋ? ಹೀಗಾಗಿ ಆತ ತಕ್ಷಣ, “ಇದೊಳ್ಳೆ ಕಥೆ ಆಯ್ತಲ್ಲಾ! ಅವಳು ನಿನ್ನೊಂದಿಗೆ ಮಾತನಾಡಲೂ ಬಿಗುಮಾನ ಪಡುತ್ತಿದ್ದಾಳೆ. ಅಂಥದರಲ್ಲಿ ನೀನು ಅವಳ ಮಗುವಿನೊಂದಿಗೆ ಆಟವಾಡುವೆನೆಂದು ಹೇಳುತ್ತೀಯಲ್ಲ,” ಎಂದು ಆಕ್ಷೇಪಿಸಿದ.

“ಅವಳು ನಮ್ಮೊಂದಿಗೆ ಮಾತನಾಡಬಾರದೆಂದು ಮೌನವಾಗಿಲ್ಲಾರೀ… ನೀವು ಗಮನಿಸಲಿಲ್ಲವೇನೊ, ಅವಳ ಕಣ್ಣಲ್ಲಿ ನೀರು ತುಂಬಿದೆ. ಅವಳು ತುಂಬಾ ಆತಂಕಗೊಂಡಿದ್ದಾಳೆ. ಅವಳ ಮನಸ್ಸು ಅದೇಕೋ ಹಿಂಜರಿಯುತ್ತಿದೆ. ಏನೋ ನಡೀತಾ ಇದೆ ಇಲ್ಲಿ,” ಎಂದಳು.

“ಬಹುಶಃ ಗಂಡನ ಮನೆಯಲ್ಲಿ ಕಿತ್ತಾಡಿಕೊಂಡು ಬಂದಿರಬೇಕು. ಅದನ್ನು ಕಟ್ಟಿಕೊಂಡು ನಿನಗೇನಾಬೇಕಿದೆ? ಸುಮ್ಮನಿರು,” ಎಂದ.

ಮೇರಿಗೆ ಅದೇಕೊ ಆ ಮಗು ತುಂಬಾ ಇಷ್ಟವಾಗಿಬಿಟ್ಟಿತ್ತು. ರಾಣಿ ಸಂಜನಾಳ ತೊಡೆಯ ಮೇಲೆ ಕುಳಿತುಕೊಂಡು ಕಿಟಕಿಯಾಚೆಗೆ ನೋಡುತ್ತಿದ್ದಳು. ರೈಲು ಸ್ಟೇಷನ್ನೊಂದರಲ್ಲಿ ನಿಂತಾಗ ಕೆಳಗಿಳಿದು ಹೋದ ಆಕಾಶ್‌ ಮೇರಿಗಾಗಿ ಕಾಫಿ ತೆಗೆದುಕೊಂಡು ಬಂದ. ಸಂಜನಾ ಬೋಗಿಯಲ್ಲಿ ಕಾಫಿ ಮಾರಲು ಬಂದವನನ್ನು ಕೂಗಿದಳಾದರೂ, ಅವನಿಗೆ ಅವಳ ಧ್ವನಿ ಕೇಳಿಸಲಿಲ್ಲ. ಇದನ್ನು ಕಂಡ ಆಕಾಶ್‌ ಕಾಫಿ ಮಾರುವನನ್ನು ಗಟ್ಟಿಯಾಗಿ ಕೂಗಿ, “ಏನಪ್ಪ, ಬರಿ ಕಾಫಿ ಕಾಫಿ ಅಂತಾ ಕೂಗ್ತಿಯೋ ಅಥವಾ ಬೇಕು ಎಂದವರಿಗೆ ಕೊಡುವೆಯೋ? ಬಾ ಇಲ್ಲಿ, ಈ ಮೇಡಂಗೆ ಕಾಫಿ ಬೇಕಂತೆ.” ಎಂದ.

ಸಂಜನಾ ತನಗೆ ಕಾಫಿ ಹಾಗೂ ಮಗುವಿಗೆ ಬಿಸ್ಕತ್ತಿನ ಪೊಟ್ಟಣ ತೆಗೆದುಕೊಂಡಳು. ರಾತ್ರಿ ಊಟದ ಸಮಯದಲ್ಲೂ ಹೀಗೇ ಆಯಿತು. ಸಂಜನಾ ಕೂಗುತ್ತಲೇ ಇದ್ದಳು, ಆದರೆ ಅದು ಊಟ ಮಾರುವವನಿಗೆ ಕೇಳಿಸಲೇ ಇಲ್ಲ. ಆಕಾಶ್‌ ಮತ್ತೆ ಊಟ ಮಾರುವವನನ್ನು ಕೂಗಿ ಕರೆದ. ಊಟ ಮಾಡಿದ ನಂತರ ಆಕಾಶ್‌ ಮಲಗಿಬಿಟ್ಟ. ಮೇರಿ ಮಾತ್ರ ಇನ್ನೂ ಎಚ್ಚರದಿಂದಿದ್ದಳು. ರಾಣಿ ಈಗಾಗಲೇ ಒಂದು ಸಾರಿ ಮಲಗಿ ಎದ್ದಿದ್ದಳು. ಸಂಜನಾಳ ಕಣ್ಣಲ್ಲಿ ನಿದ್ದೆಯ ಸುಳಿವೇ ಇರಲಿಲ್ಲ. ಅದ್ಯಾವುದೋ ಆತಂಕದಲ್ಲಿ ಅತ್ತಿತ್ತ ಗಮನಿಸುತ್ತಲೇ ಕುಳಿತಿದ್ದಳು.

ಮೇರಿ ಮಗುವಿನ ಮೇಲಿನ ಅಕ್ಕರೆಯಿಂದ ಮತ್ತೊಮ್ಮೆ ತನ್ನ ಬಳಿ ಬರುವಂತೆ ಸಂಜ್ಞೆ ಮಾಡಿದಳು. ಆದರೆ ಮಗು ಭಯದಿಂದ ನಿರಾಕರಿಸಿ ತನ್ನ ಅಮ್ಮನ ಮಡಿಲಲ್ಲಿ ಇನ್ನಷ್ಟು ಗಟ್ಟಿಯಾಗಿ ಕುಳಿತುಕೊಂಡಿತು.

ಮೇರಿಯ ಬಳಿ ಒಂದು ಚಿಕ್ಕ ಚೆಸ್‌ ಬೋರ್ಡ್‌ ಇತ್ತು. “ಬಾ, ನನ್ನೊಂದಿಗೆ ಆಡು. ನೀನೇ ನನ್ನನ್ನು ಸೋಲಿಸುವೆಯಂತೆ,” ಎಂದು ಮಗುವನ್ನು ಪುಸಲಾಯಿಸಿದಳು.

ಮಗು ಅನುಮತಿ ಕೋರುವ ನೋಟದಲ್ಲಿ ತನ್ನ ಅಮ್ಮನ ಮುಖವನ್ನು ದಿಟ್ಟಿಸಿತು. ನಸುನಕ್ಕ ಸಂಜನಾ, “ಬಾ, ನಾನೂ ಚೆಸ್ ಆಡುತ್ತೇನೆ,” ಎಂದಾಗ ಮಗುವಿನ ಮುಖ ಅರಳಿತು.

“ಆಂಟಿ, ನನಗೆ ಬ್ಲ್ಯಾಕ್‌ ಕಾಯಿಗಳೇ ಬೇಕು,” ಎಂದಿತು ಮಗು. ಆಗ ಸಂಜನಾ, “ಆಟಕ್ಕೂ ಮೊದಲೇ ಹಠ ಶುರು ಮಾಡಿದೆಯಾ?” ಎಂದಳು.

ಅದಕ್ಕೆ ಮೇರಿ, “ಪರವಾಗಿಲ್ಲ ಬಿಡಿ. ಮಕ್ಕಳೆಂದ ಮೇಲೆ ಅದೆಲ್ಲ ಇದ್ದದ್ದೇ,” ಎಂದಳು.

ಮೂವರೂ ಚೆಸ್‌ ಆಡತೊಡಗಿದರು. ಜೊತೆಗೆ ತಮಾಷೆ, ತರ್ಲೆ, ಕೀಟಲೆಗಳೂ ಪ್ರಾರಂಭವಾದವು. ನಿಧಾನವಾಗಿ ಮೇರಿಯೊಂದಿಗೆ ಹೊಂದಿಕೊಂಡ ರಾಣಿ ಅವಳ ತೊಡೆಯೇರಿ ಕುಳಿತುಕೊಂಡಳು. ಇದೇ ಸಂದರ್ಭದಲ್ಲಿ ಮೇರಿ ಎರಡು ಮೂರು ಬಾರಿ ಮಗುವನ್ನು ತಬ್ಬಿ ಮುದ್ದಾಡಿದಳು. ಮೇರಿಗೆ ತುಂಬಾ ಸಂತೋಷವಾಗಿತ್ತು.

“ನಿಮ್ಮ ರಾಣಿ ಥೇಟ್‌ ನಮ್ಮಣ್ಣನ ಮಗಳು ಬಬ್ಲಿ ತರಹಾನೇ ಇದ್ದಾಳೆ. ನನ್ನ ಮದುವೆ ಆದ ನಂತರ ನಾನವಳನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಮಗಳೊಟ್ಟಿಗೆ ಸಮಯ ಕಳೆದು ಖುಷಿಯಾಯಿತು. ನಮ್ಮ ಬಬ್ಲಿಯಂತೂ ಅವರ ಅಪ್ಪ ಅಮ್ಮನನ್ನು ಬಿಟ್ಟು ನನ್ನ ಜೊತೆಯಲ್ಲೇ ಮಲಗೋದು. `ನೀನು ಗಂಡನ ಮನೆಗೆ ಹೋದ ನಂತರ ಅವಳನ್ನು ಸಂಭಾಳಿಸುವುದು ಹೇಗೋ ಏನೋ,’ ಎಂದು ಅಣ್ಣ ಕೆಲವೊಮ್ಮೆ ಚಡಪಡಿಸುತ್ತಿದ್ದ. ಏನಮ್ಮ ರಾಣಿ ನಿಮ್ಮ ಪಪ್ಪನ್ನ ಜೊತೆಯಲ್ಲಿ ಕರೆದುಕೊಂಡು ಬಂದಿಲ್ಲವೇ?” ಎಂದು ಕೇಳಿದಳು.

“ನಮ್ಮ ಪಪ್ಪಾ ಇಲ್ಲ. ತೀರಿ ಹೋಗಿದ್ದಾರೆ,” ಎಂದ ಮಗುವಿನ ಧ್ವನಿ ತೀರಾ ಸಹಜವಾಗಿತ್ತು, ಅದರಲ್ಲಿ ಅಪ್ಪ ಇಲ್ಲ, ತೀರಿ ಹೋಗಿದ್ದಾರೆ ಎಂಬ ನೋವಿನ ಛಾಯೆ ಇರಲೇ ಇಲ್ಲ.

ಮೇರಿ ಸರಕ್ಕನೆ ಸಂಜನಾಳ ಹಣೆಯನ್ನೇ ದಿಟ್ಟಿಸಿದಳು. ಸಂಜನಾಳ ಹಣೆ ಖಾಲಿ ಮೈದಾನದಂತೆ ಭಣಗುಡುತ್ತಿತ್ತು. ಮಗು ಮಾತ್ರ ಚೆಸ್‌ನ ಕಾಯಿಗಳಲ್ಲಿ ತಲ್ಲೀನವಾಗಿತ್ತು.

“ಇವಳ ತಂದೆ…? ಈಗಷ್ಟೆ….?”

“ತೀರಿ ಹೋದರು ಯಾವಾಗ ತೀರಿಹೋದರೆಂದು ತಿಳಿದುಕೊಂಡಾದರೂ ಏನು ಪ್ರೂಯೋಜನ? ಹೋಗಲಿ ಬಿಡಿ,” ಎಂದು ಪ್ರತಿಕ್ರಿಯಿಸಿದ ಸಂಜನಾಳ ವ್ಯತಿರಿಕ್ತ ಹೇಳಿಕೆಯನ್ನು ಕೇಳಿ ಮೇರಿ ಹೈರಾಣಾಗಿಬಿಟ್ಟಳು.

“ಸತ್ತು ಹೋದವರ ನೆನಪಲ್ಲೇ ಜೀವನಪರ್ಯಂತ ಕಾಲ ಕಳೆಯಬೇಕು ಎಂದು ನನಗೆ ಅನಿಸುವುದಿಲ್ಲ. ಸಾರಿ, ನೀನು ಈಗಷ್ಟೇ ಮದುವೆಯಾದವಳು. ನೀನು ನನಗೆ ಆ ಪ್ರಶ್ನೆಯನ್ನೇ ಕೇಳಬಾರದಿತ್ತು,” ಎನ್ನುತ್ತಾ ಸಂಜನಾ ಮಗುವನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಳು.

“ನಿಮ್ಮ ಪತಿ ತೀರಿಹೋಗಿದ್ದಕ್ಕೆ ನಿಮಗೆ ಒಂದಿಷ್ಟೂ ಸಂತಾಪವಿಲ್ಲವೇ? ಇವರಿಲ್ಲದೇ ಹೋದಲ್ಲಿ ನನ್ನ ಬದುಕು ಹೇಗೆ ಎಂದು ಯೋಚಿಸಿದರೇನೆ ನನಗೆ ನಡುಕ ಬರುತ್ತಿದೆ, ಅಂಥದರಲ್ಲಿ ನೀವು…..”

“ಈಗಷ್ಟೆ ಮದುವೆಯಾಗಿರುವೆ. ಅದಕ್ಕೇ ಹಾಗನ್ನಿಸುತ್ತೆ. ಸ್ವಲ್ಪ ದಿನ ಕಳೆಯಲಿ ಆಮೇಲೆ ಗೊತ್ತಾಗುತ್ತೆ. ಮದುವೆಯಾದ ವರ್ಷದಲ್ಲಿ ನನಗೂ ಹಾಗೇ ಅನ್ನಿಸುತ್ತಿತ್ತು. ಆದರೆ ಈ ಗಂಡು ಜಾತಿ ಯಾವತ್ತೂ ನಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ. ಹೋಗಲಿ ಬಿಡು, ಇದನ್ನೆಲ್ಲ ನಾನು ನಿನಗೇಕೆ ಹೇಳುತ್ತಿದ್ದೇನೊ?” ಎಂದ ಸಂಜನಾ ಮಗುವಿಗೆ ನೀರು ಕುಡಿಸಿದಳು. ಅವಳ ಮುಖದಲ್ಲಿ ಕಠೋರ ಭಾವನೆ ಸ್ಪಷ್ಟವಾಗಿ ಗೋಚರಿಸತೊಡಗಿತ್ತು.

“ಈ ಗಂಡಸರೇ ಹೀಗೆ ಅಂತೀರಾ? ಹಾಗಾದರೆ ಆಕಾಶ್‌ ನನ್ನನ್ನು ಗೌರವಿಸದಿದ್ದರೆ, ಪ್ರೀತಿಸದಿದ್ದರೆ, ನನ್ನನ್ನೇಕೆ ಮದುವೆ ಮಾಡಿಕೊಳ್ಳುತ್ತಿದ್ದರು?” ಎಂದು ಕೇಳಿದಳು ಮೇರಿ.

“ಮದುವೆ ಮಾಡಿಕೊಳ್ಳುವುದು, ಜೀವನ ನಿಭಾಯಿಸುವುದು ಎರಡೂ ಬೇರೆ ಬೇರೆ. ರಾಣಿಯ ಅಪ್ಪ, ನಾನು ಐದು ವರ್ಷಗಳ ಕಾಲ ಗೆಳೆಯರಾಗಿದ್ದು ನಂತರವೇ ಮದುವೆಯಾದೆವು. ಆದರೆ ಮದುವೆ ಮಾಡಿಕೊಂಡು ಯಾವುದೋ ಪರೋಪಕಾರ ಮಾಡಿದವನಂತೆ ಆಡುತ್ತಿದ್ದ. ಆರಂಭದಲ್ಲಂತೂ ಅವನು ಹೇಳಿದ್ದಕ್ಕೆಲ್ಲ ನಾನೂ ತಲೆದೂಗುತ್ತಿದ್ದ.

“ಆದರೆ ಪ್ರತಿಯೊಂದಕ್ಕೂ ತಲೆ ತಗ್ಗಿಸಲು ಆಗುವುದಿಲ್ಲವಲ್ಲ…. ಮನೆಯಿಂದ ಫೋನ್‌ ಕಾಲ್ ಬಂದರೆ, ಯಾರು ಫೋನ್ ಮಾಡಿದ್ದು? ಯಾಕೆ ಮಾಡಿದ್ದು? ಎನ್ನುವುದು. ಗೆಳತಿಯರ ಕಾಲ್‌ಗಳು ಬಂದಾಗ ಅವರು ಯಾಕೆ ನಿನಗೆ ಪದೇ ಪದೇ ಕಾಲ್ ಮಾಡುತ್ತಾರೆ? ಎಂದು ಪ್ರಶ್ನಿಸುವುದು, ನಿಮ್ಮ ಭಾವ ಯಾಕೆ ನಿನ್ನನ್ನು ನೋಡಲು ಬರುವುದು? ಎಂದೆಲ್ಲ ನಿರರ್ಥಕ ಪ್ರಶ್ನೆಗಳನ್ನು ಕೇಳಿ, ಕೇವಲ ತಮ್ಮ ಆಲೋಚನೆಗಳನ್ನೇ ಸಾಬೀತುಪಡಿಸಲು ಹವಣಿಸುತ್ತಾರೆ.”

“ನೀವು ಯಾವತ್ತೂ ತಿಳಿಹೇಳುವ ಪ್ರಯತ್ನವನ್ನೇ ಮಾಡಲಿಲ್ಲವೇ?”

“ಸಾಕಷ್ಟು ಸಲ ತಿಳಿಹೇಳುವ ಪ್ರಯತ್ನ ಮಾಡಿದೆ. ಮದುವೆಗೆ ಮುನ್ನ ಆ ಎಲ್ಲ ಬಂಧು ಬಳಗದವರು ನನಗೆ ಪೋನ್ ಮಾಡುತ್ತಿದ್ದರು. ಮದುವೆಗೆ ಮುಂಚೆ ನಾನು ಅವನನ್ನು ನೋಡಲು ಓಡೋಡಿ ಬರುತ್ತಿದ್ದೆ, ಸುದೀರ್ಘ ಕಾಲ ಅವನೊಂದಿಗೆ ಕಳೆಯುತ್ತಿದ್ದೆ. ಯಾವತ್ತೊಂದು ದಿನ ತಡವಾದೀತು, ನಿನ್ನ ಮನೆಯವರು ಕಾಯುತ್ತಿರಬಹುದು, ನೀನು ಮನೆಗೆ ಹೋಗು ಎಂದಿರಲಿಲ್ಲ ಆ ಮನುಷ್ಯ. ಅದೇ ವಿಶ್ವಾಸವನ್ನು ಮದುವೆಯಾದ ನಂತರ ಕೂಡ ಇಟ್ಟುಕೊಳ್ಳಬೇಕಾಗಿತ್ತು.”

“ಜೀವನದ ಪ್ರತಿಯೊಂದು ಸಂಬಂಧಗಳನ್ನೂ ಗಂಡನನ್ನು ಕೇಳಿಯೇ ನಿರ್ವಹಿಸಬೇಕು ಎಂಬುದೇ ಮದುವೆಯ ಅರ್ಥವಲ್ಲ. ನಾವು ಯಾವತ್ತಾದರೂ ಅವರಂತೆ ವಿಚಾರ ಮಾಡುತ್ತೇವೆಯೇ? ಆದರೆ ರಾಣಿಯ ಪಪ್ಪಾ ತೀರಿ ಹೋಗುವಂಥಹುದು ಆಗಿದ್ದಾದರೂ ಏನು?”

“ಒಂದು ದಿನ ಅಚಾನಕ್ಕಾಗಿ ನನ್ನ ಕಾಲೇಜು ಗೆಳೆಯ ಗೆಳತಿಯರೆಲ್ಲ ನಮ್ಮ ಮನೆಗೆ ಬಂದಿದ್ದರು. ಅವರು ನನಗೆ ಮಾತ್ರವಲ್ಲ, ನಕುಲ್‌ಗೂ ಸ್ನೇಹಿತರಾಗಿದ್ದರು. ಎಲ್ಲರೂ ಒಟ್ಟಿಗೆ ಪಾರ್ಟಿ ಮಾಡಬೇಕೆಂಬ ಹುಮ್ಮಸ್ಸಿನಲ್ಲಿ ಬಂದಿದ್ದರು. ನಮ್ಮ ಕುಟುಂಬಕ್ಕೆ ಭಾರವಾಗಬಾರದೆಂಬ ಕಾರಣಕ್ಕೆ ಪಾರ್ಟಿ ಸಾಮಾನುಗಳನ್ನು ಅವರುಗಳೇ ತೆಗೆದುಕೊಂಡು ಬಂದಿದ್ದರು.

“ಅವರೆಲ್ಲ ತುಂಬಾ ಆಕಸ್ಮಿಕವಾಗಿ ಬಂದಿದ್ದರಾದ್ದರಿಂದ ನಕುಲ್‌ಗೆ ಪಾರ್ಟಿ ವಿಚಾರ ತಿಳಿಸಲಾಗಿರಲಿಲ್ಲ. ಆಗಷ್ಟೇ ಒಂದೈದು ನಿಮಿಷ ಮೊದಲೇ ನಕುಲ್ ‌ಮನೆಯಿಂದ ಹೊರಹೋಗಿದ್ದ. ನಾನು ಅವನ ಮೊಬೈಲ್‌ಗೆ ಕಾಲ್ ‌ಮಾಡಿದೆನಾದರೂ ನಾಟ್‌ ರೀಚೆಬಲ್ ಅಂತ ಬಂತು. ಹೀಗಾಗಿ ಎಸ್‌ಎಂಎಸ್‌ ಕಳುಹಿಸಿದೆ. ಮೆಸೇಜ್‌ ಕಳುಹಿಸಿದ ಎರಡು ಗಂಟೆಗಳ ನಂತರ ನಕುಲ್ ‌ಮರಳಿ ಬಂದದ್ದು.

“ನಾನು ಸುಮಾರು ಹೊತ್ತು ಕಾದು ನೋಡಿದೆ, ನಕುಲ್ ಬರಲೇ ಇಲ್ಲ ಎಂದ ಮೇಲೆ ಎಲ್ಲರಿಗೂ ಊಟಕ್ಕೆ ಬಡಿಸಿದೆ. ನಕುಲ್ ‌ಮರಳಿ ಮನೆಗೆ ಬಂದಾಗ ಎಲ್ಲರಿಗೂ ಐಸ್‌ಕ್ರೀಂ ಸರ್ವ್ ‌ಮಾಡುತ್ತಿದ್ದೆ. ಎಲ್ಲರೂ ಇದ್ದಾಗ ನಕುಲ್ ‌ಶಾಂತನಾಗಿಯೇ ಇದ್ದ. ಆದರೆ ಅವರೆಲ್ಲ ಹೊರಟ ನಂತರ ಸುನಾಮಿಯಂತೆ ಕೆರಳಿ ನಿಂತ.”

ಆಕಾಶ್‌ ಮಲಗಿದ್ದಲ್ಲೇ ಎಲ್ಲ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದ. ಎರಡ್ಮೂರು ಸಲ ಮಗ್ಗುಲು ಬದಲಿಸಿದ. ಅವನಿಗೂ ಎದ್ದು ಕುಳಿತು ಸಂಜನಾಳ ಕಥೆ ಕೇಳಬೇಕು ಎನ್ನಿಸಿತು. ಆದರೆ ಅದ್ಯಾವುದೊ ಅವ್ಯಕ್ತ ಹಿಂಜರಿಕೆಯೊಂದು ಅವನನ್ನು ತಡೆಹಿಡಿದಿತ್ತು. ಮಗು ಅಮ್ಮನ ಮಡಿಲಲ್ಲಿ ಮಲಗಿಬಿಟ್ಟಿತ್ತು. ಸಂಜನಾಳ ಕಣ್ಣಲ್ಲಿ ನೋವಿನ ಅಲೆಗಳು ಸ್ಪಷ್ಟವಾಗಿ ಗೋಚರಿಸತೊಡಗಿದ್ದವು.

ಸಂಜನಾ ಮಾತು ಮುಂದುವರಿಸಿದಳು, “ಬೇಕಾಬಿಟ್ಟಿ ಹೀನಾಯ ಮಾತುಗಳು, ಅವಮಾನ, ಎಲ್ಲವನ್ನೂ ಮೀರಿ ನಾನು ಗಂಡ ಮನೆಯಲ್ಲಿ ಇಲ್ಲದಿರುವಾಗ ಸ್ನೇಹಿತರನ್ನು ಕರೆದುಕೊಂಡು ಎಂಜಾಯ್‌ ಮಾಡುವುದೊಂದೇ ನನ್ನ ಕೆಲಸವಂತೆ. ಇದೇನಾ ಅವನಿಗೆ ನನ್ನ ಮೇಲಿದ್ದ ವಿಶ್ವಾಸ? ಅವನು ನನ್ನ ನಂಬಿಕೆಯ ಕತ್ತುಹಿಸುಕಿ ಸಾಯಿಸಿಬಿಟ್ಟ. ನನ್ನ ಪ್ರೀತಿ, ವಿಶ್ವಾಸ, ಆಸೆ, ಕನಸುಗಳನ್ನೆಲ್ಲ ಗಾಳಿಗೆ ತೂರಿಬಿಟ್ಟ. ಅದೇ ಕ್ಷಣ ಮನೆಯಿಂದ ಹೊರಟುಬಿಡೋಣ ಎಂದುಕೊಂಡೆ.

“ಆ ರಾತ್ರಿ ಅದ್ಹೇಗೆ ಕಳೆದೆನೊ ನನಗೆ ಗೊತ್ತಿಲ್ಲ. ಬೆಳಗ್ಗೆ ಆತ ಎಂದಿನಂತೆ ಕೆಲಸಕ್ಕೆ ಹೊರಟು ನಿಂತಾಗ ನನ್ನಿಂದ ಸಹಿಸಿಕೊಂಡು ಇರಲಾಗಲಿಲ್ಲ. ಬಲವಂತವಾಗಿ ಹಿಡಿದು ಕೂರಿಸಿ ನಡೆದ ಪ್ರತಿಯೊಂದನ್ನೂ ಎಳೆಎಳೆಯಾಗಿ ಬಿಡಿಸಿ ಹೇಳಿ, ಇದರಲ್ಲಿ ನನ್ನದೇನು ತಪ್ಪಿದೆ? ಹೇಳು ಎಂದೆ. ನಿನಗೆ ನನ್ನ ಮೇಲೆ ಯಾಕೆ ಅಂತಹ ಅನುಮಾನ? ಎಂದೂ ಕೇಳಿದೆ.

“ಎಲ್ಲವನ್ನೂ ಕೇಳಿಸಿಕೊಂಡು ಮೌನವಾಗಿದ್ದ. ನಾನು ಓತಪ್ರೋತವಾಗಿ ಬಾಯಿ ಹರಿಬಿಟ್ಟು ಮಾತನಾಡಿದ್ದಕ್ಕಾಗಿ ಕ್ಷಮೆ ಕೂಡ ಯಾಚಿಸಿದೆ. ಇನ್ನು ಮುಂದೆ ಯಾವತ್ತೂ ನಿನಗೆ ನನ್ನ ಬಗ್ಗೆ ಅನುಮಾನ ಮೂಡದಂತೆ ನಡೆದುಕೊಳ್ಳುತ್ತೇನೆ ಎಂಬ ಭರವಸೆಯನ್ನೂ ನೀಡಿದೆ. ನನ್ನ ಮನಸ್ಸು ಘಾಸಿಗೊಂಡು ವಿಲವಿಲನೆ ಒದ್ದಾಡುತ್ತಿದ್ದರೂ, ಸಂಸಾರ ಹಾಳು ಮಾಡಿಕೊಳ್ಳಬಾರದೆಂಬ ಒಂದೇ ಒಂದು ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡೆ.

“ಆದರೆ ಅದೆಲ್ಲ ತುಂಬಾ ದಿನ ಉಳಿಯಲಿಲ್ಲ. ಒಂದು ದಿನ ರಜೆ ಇದ್ದಾಗ ನಕುಲ್ ‌ಮನೆಯಲ್ಲೇ ಇದ್ದ. ನಾನು ಅಡುಗೆಮನೆಯಲ್ಲಿ ಬಿಜಿಯಾಗಿದ್ದಾಗ ನನ್ನ ಮೊಬೈಲ್‌ಗೆ ಯಾವುದೋ ಕಾಲ್ ‌ಬಂತು. ನಕುಲ್ ಫೋನ್‌ ರಿಸೀವ್ ‌ಮಾಡಿದ್ದು ಅತ್ತಲಿನ ಧ್ವನಿ  `ನೀವು ಈವೆಂಟ್‌ ಆರ್ಗನೈಜ್‌ ಮಾಡುತ್ತೀರಲ್ಲವೇ? ನಮಗೊಂದು ಈವೆಂಟ್‌ ಬೇಕಾಗಿತ್ತು,’ ಅದೇನೆಂದುಕೊಂಡನೋ ಏನೋ ನಕುಲ್ ನನ್ನನ್ನು ಕೂಗಿದ.

“ನಾನವತ್ತು ತುಂಬ ಒಳ್ಳೆಯ ಮೂಡ್‌ನಲ್ಲಿದ್ದೆ. ಅದೇ ಲಹರಿಯಲ್ಲಿ ಫೋನ್‌ ಎತ್ತಿಕೊಂಡು ಹಲೋ ಎಂದೆ. ಮತ್ತೆ ಅತ್ತಲಿನ ಧ್ವನಿ, `ನೀವು ಈವೆಂಟ್‌ ಆರ್ಗನೈಜ್‌ ಮಾಡುತ್ತೀರಲ್ಲವೇ? ನಮಗೂ ಒಂದು ಈವೆಂಟ್‌ ಬೇಕಾಗಿತ್ತು ಮಿಸೆಸ್‌ ಸಂಜನಾ,’ ಎಂದು ನನ್ನ ಹೆಸರು ಹಿಡಿದು ಮಾತನಾಡುತ್ತಿರುವ ಆ ವ್ಯಕ್ತಿಯಿಂದಾಗಿ ನಾನು ದಿಗ್ಮೂಢಳಾಗಿಬಿಟ್ಟೆ. ಆ ವ್ಯಕ್ತಿ ಯಾರು ಅಂತಾನೂ ನನಗೆ ಗೊತ್ತಿರಲಿಲ್ಲ.

“ನನಗೆ ಇನ್ನಿಲ್ಲದ ಕೋಪ ಬಂತು. ಚೆನ್ನಾಗಿ ಬಯ್ದೆ. ಇನ್ನೊಂದ್ಸಲ ಯಾರಿಗಾದರೂ ಫೋನ್‌ ಮಾಡುವುದಾದರೆ ನಂಬರ್ ಖಚಿತಪಡಿಸಿಕೊಂಡು ಕಾಲ್ ‌ಮಾಡು. ರಾಂಗ್‌ ನಂಬರ್‌ ಎಂದು ಹೇಳಿದೆ. ಅದಕ್ಕೆ ಅತ್ತಲಿನ ಧ್ವನಿ, `ಇಲ್ಲಾ ಮಿಸೆಸ್‌ ಸಂಜನಾ, ನಿಮ್ಮೊಂದಿಗೆ ಮಾತನಾಡಲೆಂದೇ ಕಾಲ್ ‌ಮಾಡಿರುವುದು.

“ಬಹುಶಃ ನಿಮ್ಮ ಪಕ್ಕ ಬೇರೆ ಇನ್ನಾರೊ ಇದ್ದಿರಬಹುದು ಅದಕ್ಕೆ ಹೀಗೆ ಹೇಳುತ್ತಿರುವಿರೇನೊ, ಪರವಾಗಿಲ್ಲ ಇನ್ನೊಂದು ಸಲ ಕಾಲ್ ‌ಮಾಡ್ತೀನಿ ಬಿಡಿ,’ ಎಂದು ಹೇಳಿ ಕಾಲ್ ಡಿಸ್‌ಕನೆಕ್ಟ್ ಆಯ್ತು. ಇದನ್ನೆಲ್ಲ ಕೇಳಿ ಕಕ್ಕಾಬಿಕ್ಕಿಯಾಗಿದ್ದೆ. ನಿಜವಾಗಲೂ ಅದೊಂದು ರಾಂಗ್‌ ಕಾಲ್ ‌ಆಗಿತ್ತು. ಕೆಲವು ಹುಡುಗರು ತಮಾಷೆಯಾಗಿ ನಗುತ್ತಿದ್ದ ಧ್ವನಿಯೂ ನನಗೆ ಕೇಳಿಸಿತ್ತು.

“ನಕುಲ್ ಮೊವೊಬೈಲ್‌ನ ಸ್ಪೀಕರ್‌ ಮೋಡ್‌ ಆನ್‌ ಮಾಡಿಯೇ ನನ್ನ ಕೈಗೆ ಕೊಟ್ಟಿದ್ದ. ಫೋನ್‌ ಕಟ್‌ ಮಾಡುವಷ್ಟರಲ್ಲಿ ನನ್ನ ಜಂಘಾಬಲವೇ ಉಡುಗಿದಂತಾಗಿತ್ತು. ನಕುಲ್ ಅದೇನು ಯೋಚಿಸುತ್ತಿದ್ದಾನೊ ಏನೋ? ಈ ರಾಂಗ್‌ ನಂಬರ್‌ನವನು ಅದೇನೇನೋ ಮಾತಾಡಿಬಿಟ್ಟನಲ್ಲ? ಎಂದುಕೊಳ್ಳುತ್ತಾ ರಾಂಗ್‌ ನಂಬರ್‌ ಅಂತ ಹೇಳಿದೆ. ಆದರೆ ರಾಂಗ್‌ ನಂಬರ್‌ನವನಿಗೆ ನಿನ್ನ ಹೆಸರು ಹೇಗೆ ಗೊತ್ತಾಯಿತು? ಎಂದು ತಕ್ಷಣ ಮರುಪ್ರಶಿಸಿದ್ದ ನಕುಲ್‌.

“ಅವನಿಗೆ ನಿನ್ನ ಮನೆಯಲ್ಲಿ ಬೇರೆ ಇನ್ನೊಬ್ಬರು ಯಾರೊ ಇದ್ದಾರೆ ಎಂಬುದೂ ಗೊತ್ತಿದೆಯಲ್ಲ ಎಂದು ಸಂಶಾಯಸ್ಪದವಾಗಿ ಹೇಳಿದಾಗ ನಾನು ಬಸವಳಿಯುವುದೊಂದೇ ಬಾಕಿ. ಬಹುಶಃ ನಕುಲ್ ‌ನನ್ನನ್ನು ಕೂಗಿದಾಗಲೇ ಫೋನ್‌ನಲ್ಲಿ ಆ ಕಡೆಗಿರುವ ವ್ಯಕ್ತಿಗೆ ನನ್ನ ಹೆಸರು ಗೊತ್ತಾಗಿರಬೇಕು. ಆದರೆ ಸದ್ಯಕ್ಕೆ ನನ್ನನ್ನು ನಾನು ಹೇಗೆ ಸಮರ್ಥಿಸಿಕೊಳ್ಳುವುದೆಂದು ತಿಳಿಯಲಿಲ್ಲ.

“ಇದಾದ ನಂತರ ಪ್ರತಿದಿನ ನಕುಲ್ ‌ಮನೆಗೆ ಬರುತ್ತಿದ್ದಂತೆಯೇ ನನ್ನ ಮೊಬೈಲ್ ಚೆಕ್‌ ಮಾಡತೊಡಗಿದ. ಅದ್ಯಾರೋ ನನಗೆ ಗಲೀಜು ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರು. ಅದ್ಯಾರು ಅಂತಾನೂ ನನಗೆ ಗೊತ್ತಿರಲಿಲ್ಲ. ಕೆಲವೊಮ್ಮೆ ಲವ್ ಮೆಸೇಜ್‌ ಕೂಡ ಬರುತ್ತಿದ್ದವು.

“ಹೀಗಾಗಿ ನಾನು ಮೊಬೈಲ್ ‌ಸ್ವಿಚ್‌ ಆಫ್‌ ಮಾಡಿಬಿಡುತ್ತಿದ್ದೆ. ನಕುಲ್ ‌ಮನೆಗೆ ಬಂದು ಮೊಬೈಲ್ ‌ಆನ್‌ ಮಾಡಿದ ತಕ್ಷಣ ಧಡಧಡನೇ ಮೆಸೇಜುಗಳು ಬರುತ್ತಿದ್ದವು. ಒಂದು ದಿನ ನಕುಲ್ ‌ಆ ನಂಬರ್‌ಗೆ ಫೋನ್‌ ಮಾಡಿ ಮಾತನಾಡಿದ. ಅದೇನು ಮಾತುಕಥೆಯಾಯಿತೊ ಗೊತ್ತಿಲ್ಲ.

“ನಕುಲ್ ‌ನನ್ನ ಯಾವ ಅಂಗಲಾಚುವಿಕೆಯನ್ನೂ ಕೇಳಿಸಿಕೊಳ್ಳಲಿಲ್ಲ. ಅವತ್ತೇ ಕೊನೆ…. ನಾನು ನಕುಲ್ ‌ಒಟ್ಟಿಗಿದ್ದಿದ್ದು,” ಎಂದ ಸಂಜನಾಳ ಕಣ್ಣಲ್ಲಿ ಕಣ್ಣೀರು ಉಕ್ಕಿ ಹರಿದಿತ್ತು. ಅವಳ ಮನದಾಳದ ನೋವು ಇದೀಗ ಹೊರಹೊಮ್ಮ ತೊಡಗಿತ್ತು.

ಮೇರಿಯ ಮನಸ್ಸು ಕೂಡ ಭಾರವಾಗತೊಡಗಿತ್ತು. ಏನು ಹೇಳಬೇಕೆಂದೇ ಅವಳಿಗೆ ತೋಚದಂತಾಯಿತು.

ಮತ್ತೆ ಮುಂದುವರಿದ ಸಂಜನಾ, “ಅವತ್ತಿನಿಂದಲ್ ನಾನು ಅವನಿಂದ ದೂರಾಗಿಬಿಟ್ಟೆ. ನನಗಿಂತಲೂ ಒಂದು ರಾಂಗ್‌ ನಂಬರ್ ಕಾಲ್ ‌ಮೇಲೆ ಹೆಚ್ಚು ವಿಶ್ವಾಸವಿರುವ ಮನುಷ್ಯನೊಂದಿಗೆ ಬದುಕುವುದೇ ವ್ಯರ್ಥ ಎನಿಸಿಬಿಟ್ಟಿತು.

“ಅವನಿಗೆ ಸ್ವಂತ ತಿಳಿವಳಿಕೆಯೇ ಇಲ್ಲವೇನೊ? ಐದು ವರ್ಷಗಳ ಅನುರಾಗಭರಿತ ಸಂಬಂಧ ಒಂದೇ ಒಂದು ರಾಂಗ್‌ ನಂಬರ್ ಕಾಲ್‌‌ನಿಂದಾಗಿ ಮುರಿದುಬಿತ್ತು. ಅಂದು ಬಹುಶಃ ನಾನೇ ಆತುರಕ್ಕೆ ಬಿದ್ದು ನಕುಲ್‌‌ನನ್ನು ಪ್ರೀತಿಸಿಬಿಟ್ಟೆನೇನೊ, ಕಾಣದ ವಿಶ್ವಾಸಕ್ಕೆ ಬಲಿಯಾದೆನೇನೊ ಎಂದು ಅನಿಸತೊಡಗಿತ್ತು,” ಸಂಜನಾಳ ಕಣ್ಣಂಚಿನಿಂದ ಹನಿಗಳು ಜಾರತೊಡಗಿದವು.

“ಮತ್ತೆ ನಕುಲ್ ‌ಯಾವಾಗ ತೀರಿ….?”

ಮೇರಿಯ ಪ್ರಶ್ನೆ ಕೇಳಿ ನಸುನಕ್ಕ ಸಂಜನಾ, ಕಣ್ಣು ಒರೆಸಿಕೊಳ್ಳುತ್ತಾ, “ಮನುಷ್ಯನ ಶರೀರ ನಿಷ್ಕ್ರಿಯಾದರೆ ಮಾತ್ರ ಅವನು ತೀರಿಹೋದ ಎಂದು ಹೇಳಬೇಕೇ? ನನ್ನ ಪಾಲಿಗೆ ಆ ಮನುಷ್ಯ ಅವತ್ತೇ ತೀರಿಹೋದ. ಅವನಿಂದ ದೂರವಾದ ಮೇಲೆಯೇ ನಾನು ಪ್ರೆಗ್ನೆಂಟ್‌ ಎನ್ನುವುದು ಅರಿವಿಗೆ ಬಂತು.

“ಅವನು ಡೈವೋರ್ಸ್‌ ಪೇಪರ್‌ ಕಳುಹಿಸಿದ್ದ, ಆದರೆ ನಾನು ಇವತ್ತಿನವರೆಗೂ ಅವನಿಗೆ ವಿಚ್ಛೇದನ ನೀಡಿಲ್ಲ. ಅವನು ನನಗೆ ಅದೆಷ್ಟು ಸತಾಯಿಸಿದ್ದಾನೆ, ಅದೆಷ್ಟು ತೊಂದರೆ ಕೊಟ್ಟಿದ್ದಾನೆ, ಅದನ್ನೆಲ್ಲ ಅವನೂ ಅನುಭವಿಸಬೇಕಲ್ಲವೇ?” ಎಂದಳು.

ಆಕಾಶ್‌ ಎದ್ದು ಟಾಯ್ಲೆಟ್‌ಗೆ ತೆರಳಿದ. ಮೇರಿ ಮಗುವಿನತ್ತ ಕಣ್ಣು ಹಾಯಿಸಿದಳು, “ನೀವು ಮಗುವಿನ ಭವಿಷ್ಯದ ಬಗ್ಗೆ ಯೋಚಿಸಲಿಲ್ಲವೇ?”

“ನಿನ್ನ ಅಪ್ಪ ತೀರಿಹೋಗಿದ್ದಾನೆ ಎಂದು ಮಗುವಿಗೆ ಈಗಾಗಲೇ ಹೇಳಿಯಾಗಿದೆ. ನಮ್ಮ ಬದುಕಿನಲ್ಲಿ ಇಲ್ಲದೇ ಇರುವವರು ಇವತ್ತು ಸತ್ತರೇನು, ನಾಳೆ ಸತ್ತರೇನು? ಎಲ್ಲಾ ಒಂದೇ ಅಲ್ಲವೇ…..”

ಟಾಯ್ಲೆಟ್‌ಗೆ ಹೋಗುವ ನೆಪದಲ್ಲಿ ಎದ್ದು ಬಂದಿದ್ದ ಆಕಾಶ್‌, ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಸೀಟ್‌ನಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟ. ಅದಾಗಲೇ ಎದುರಿಗೆ ಕುಳಿತಿದ್ದ ವ್ಯಕ್ತಿ, “ಆ ಹೆಂಗಸು ನಿನಗೆ ಗೊತ್ತಾ? ಅದೇ ನಿನ್ನ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಾಳಲ್ಲ ಅವಳು?” ಎಂದು ಕೇಳಿದ.

ಆಕಾಶ್‌ ಚಕಿತಗೊಂಡು ಅವನತ್ತ ನೋಡಿದ. ಅವನನ್ನು ಕಂಡ ಆಕಾಶ್‌ ಕಕ್ಕಾಬಿಕ್ಕಿಯಾದ. ಆ ವ್ಯಕ್ತಿ ಮಾತು ಮುಂದುವರಿಸಿದ, “ಆ ಹೆಂಗಸು ಮಹಾ ಮೋಸಗಾತಿ. ಇನ್ನೊಬ್ಬರ ಅನುಕಂಪ ಗಿಟ್ಟಿಸಿಕೊಳ್ಳಲು ಏನೇನೊ ಕಟ್ಟುಕಥೆಗಳನ್ನು ಹೇಳುತ್ತಾಳೆ. “ಏಕೆಂದರೆ ಯಾರೂ ಅವಳನ್ನು ಬೇರೆ ದೃಷ್ಟಿಯಲ್ಲಿ ನೋಡಬಾರದಲ್ವ ಅದಕ್ಕೆ. ಅವಳ ಮಗುವಿಗೆ ಇನ್ನೂ ಅವಳ ಬಗ್ಗೆ ಸಂಪೂರ್ಣ ತಿಳಿದಿರಲಿಕ್ಕಿಲ್ಲ. ಆದರೆ ನಾನು ಸುಮ್ಮನಿರಲಾರೆ, ಬಲವಾದ ಸಾಕ್ಷ್ಯಾಧಾರಗಳ ಸಮೇತ ಅವಳನ್ನು ಹಿಡಿದು ಹಾಕಿ ನಾನೂ ನ್ಯಾಯ ಕೇಳುವೆ,” ಎಂದ.

ಈ ಮಾತುಗಳನ್ನು ಕೇಳಿದ ಆಕಾಶ್‌ಗೆ ತುಂಬಾ ಸೋಜಿಗವಾಯಿತು. ಕೆಲವು ಕಾಲ ಯೋಚಿಸುತ್ತಾ ಅವನ ಕಣ್ಣುಗಳನ್ನು ಆಳವಾಗಿ ನೋಡಿದ. ಅಲ್ಲಿ ದ್ವೇಷದ ಹೊಗೆ ಸ್ಪಷ್ಟವಾಗಿತ್ತು.

“ಹಾಗಾದ್ರೆ ನೀವು ಜೀವನಪೂರ್ತಿ ಸಾಕ್ಷ್ಯಾಧಾರಗಳನ್ನು ಹುಡುಕಿಕೊಂಡೇ ಓಡಾಡಬೇಕಾಗುತ್ತದೆ ನಕುಲ್‌,” ಎಂದು ವ್ಯಂಗ್ಯವಾಗಿ ಹೇಳಿದ ಆಕಾಶ್‌, “ಏಕೆಂದರೆ ಸಂಜನಾ ತಾನು ಮಾಡದೆ ಇರುವ ತಪ್ಪಿಗೆ ಈಗಾಗಲೇ ಸಾಕಷ್ಟು ಶಿಕ್ಷೆ ಅನುಭವಿಸುತ್ತಿದ್ದಾರೆ. ನಾನು ನನ್ನ ಗೆಳೆಯರೆಲ್ಲ ಸೇರಿಕೊಂಡು ತಮಾಷೆಗಾಗಿ ಯಾವ್ಯಾವುದೋ ರಾಂಡಮ್ ನಂಬರ್‌ಗಳಿಗೆ ಆ ಎಸ್‌ಎಂಎಸ್‌ಗಳನ್ನು ಕಳುಹಿಸುತ್ತಿದ್ದೆವು. ಕಾಲ್ ‌ಕೂಡ ಮಾಡುತ್ತಿದ್ದೆವು. ನಮ್ಮ ತಮಾಷೆ ಹೀಗೆ ಇನ್ನೊಬ್ಬರ ಬದುಕನ್ನೇ ಆಹುತಿ ತೆಗೆದುಕೊಳ್ಳಬಹುದು ಎಂದುಕೊಂಡಿರಲಿಲ್ಲ.

“ನಮಗಂತೂ ಸಂಜನಾರ ಗುರುತು, ಪರಿಚಯ ಎಂಥದ್ದೂ ಇರಲಿಲ್ಲ. ಆದರೆ ನೀವು ಐದು ವರ್ಷಗಳಿಂದ ಅವರನ್ನೇ ಪ್ರೀತಿಸ್ತಿದ್ರಿ ಅಲ್ವಾ? ಅವರಿಗೆ ಹೀಗೇಕೆ ಅನ್ಯಾಯ ಮಾಡುತ್ತಿದ್ದೀರಿ?” ಎಂದು ಆಕಾಶ್‌ ಸರಿಯಾಗಿ ದಬಾಯಿಸಿದಾಗ ನಕುಲ್‌‌ನ ಬಣ್ಣ ಬಯಲಾಗಿಹೋಯಿತು.

“ಒಬ್ಬ ವಿವಾಹಿತ ಮಹಿಳೆಯ ಜೀವನದೊಂದಿಗೆ ಆಟವಾಡಿಬಿಟ್ಟೆನ್ಲಾ ಎಂದು ನನಗೆ ನನ್ನ ಬಗ್ಗೆಯೇ ಅಸಹ್ಯವಾಗುತ್ತಿದೆ. ಈ ಕೂಡಲೇ ನಾನು ಸಂಜನಾಗೆ ನಡೆದದ್ದನ್ನೆಲ್ಲ ಹೇಳಿ ಕ್ಷಮೆ ಕೇಳುತ್ತೇನೆ.

“ನೀವು ಪ್ರಾಯಶ್ಚಿತ್ತ ಅನುಭವಿಸಬೇಕೆಂದಿದ್ದರೆ, ಮೊದಲು ಸಂಜನಾರರ ಹಿಂದೆ ಗೂಢಚಾರಿಕೆ ಮಾಡುವುದನ್ನು ಬಿಟ್ಟು ಕ್ಷಮೆ ಕೇಳಿ. ಮನಸ್ಸಿನ ಭಾರ ಸ್ವಲ್ಪವಾದರೂ ಕಡಿಮೆಯಾದೀತು,” ಎಂದ ಆಕಾಶ್‌ ಮರಳಿ ತನ್ನ ಸೀಟ್‌ನತ್ತ ಧಾವಿಸಿದ.

ದಿಗ್ಮೂಢನಾದ ನಕುಲ್ ನಿಶ್ಚೇಷ್ಟಿತನಾಗಿಬಿಟ್ಟ. ಕ್ಷಣಾರ್ಧದಲ್ಲಿ ನಡೆದ ಬೆಳವಣಿಗೆಯಿಂದಾಗಿ ಅವನ ಕೈಕಾಲುಗಳು ಮರಗಟ್ಟಿದಂತಾಗಿದ್ದವು. ಸಂಜನಾಗೆ ಮುಖ ತೋರಿಸುವುದಾದರೂ ಹೇಗೆ? ನಿನ್ನ ಮೇಲಿನ ಅಪನಂಬಿಕೆಯಿಂದಲೇ ಹೀಗೆಲ್ಲ ಆಯಿತೆಂದು ಹೇಳುವುದಾದರೂ ಹೇಗೆ? ಏನಾದರಾಗಲಿ, ಕ್ಷಮೆ ಕೇಳಲೇಬೇಕು ಎಂದು ನಿರ್ಧರಿಸಿ ಅವರು ಕುಳಿತಿದ್ದ ಜಾಗದತ್ತ ಹೊರಟ. ಅಲ್ಲಿ ನೋಡಿದರೆ ಆಕಾಶ್‌ ಮತ್ತು ಮೇರಿ ಜೋಲು ಮುಖದೊಂದಿಗೆ ಕುಳಿತಿದ್ದರು. ಆಕಾಶ್‌ ತಲೆ ಮೇಲೆತ್ತಲೂ ಮುಜುಗರಪಡುತ್ತಿದ್ದ.

“ನಿಜ ಹೇಳಬೇಕೆಂದರೆ ನೀವು ಮಾಡಿದ ತಪ್ಪಿಗೆ ಶಿಕ್ಷೆಯೇ ಇಲ್ಲ. ಆದರೂ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ಪಶ್ಚಾತ್ತಾಪಡುತ್ತಿದ್ದೀರಲ್ಲ ಅಷ್ಟು ಸಾಕು. ಈ ನೆಪದಲ್ಲಾದರೂ ಆ ನಕುಲ್ ‌ನನ್ನ ಬಗ್ಗೆ ಎಷ್ಟು ವಿಶ್ವಾಸವಿರಿಸಿದ್ದ ಎಂಬ ಕಠೋರ ಸತ್ಯ ಬೆಳಕಿಗೆ ಬಂತಲ್ಲ, ನಿಮಗೆ ಧನ್ಯವಾದಗಳು…. ನೀವೇನೂ ವ್ಯಥೆಪಡಬೇಡಿ. ನಾನು ನಿಮ್ಮನ್ನು ಕ್ಷಮಿಸಿಯಾಯಿತು,” ಎಂದಳು ಸಂಜನಾ.

“ದಯವಿಟ್ಟು ನನ್ನನ್ನೂ ಕ್ಷಮಿಸಿಬಿಡು ಸಂಜನಾ,” ಎಂಬ ಧ್ವನಿ ಬಂದ ಕಡೆಗೆ ಎಲ್ಲರೂ ಅವಾಕ್ಕಾಗಿ ತಿರುಗಿ ನೋಡಿದರು. ಅಲ್ಲಿ ನಕುಲ್ ನಿಂತಿದ್ದ. ಸಂಜನಾಳ ಕಣ್ಣಲ್ಲಿ ಕ್ರೋಧ ಧುಮ್ಮಿಕ್ಕತೊಡಗಿತು, “ನೀನು ಯಾವಾಗಲೂ ನನ್ನ ಹಿಂದೆಯೇ ಪತ್ತೇದಾರಿಕೆ ಮಾಡುತ್ತೀಯಾ ಅಂತ ನನಗೆ ಗೊತ್ತಿತ್ತು.”

“ಸಾರಿ ಸಂಜನಾ, ನಿನ್ನ ಕ್ಷಮೆ ಕೋರುವ ಅರ್ಹತೆಯೂ ನನಗಿಲ್ಲ. ಆಕಾಶ್‌ ನನಗೆ ಎಲ್ಲ ವಿಷಯ ವಿವರಿಸಿ ಹೇಳಿದ್ದಾನೆ. ನನಗೀಗ ಪಶ್ಚಾತ್ತಾಪವಾಗುತ್ತಿದೆ. ಬಾ ಮನೆಗೆ……”

ಸಂಜನಾ ಗಹಗಹಿಸಿ ನಗತೊಡಗಿದಳು, “ಸರಿಯಾಗಿದೆ. ಆಕಾಶ್‌ ಹೇಳಿಬಿಟ್ಟ. ನೀನು ನಂಬಿಬಿಟ್ಟೆ? ನಾಳೆ ಇನ್ಯಾವುದಾದರೂ ರಾಂಗ್‌ ನಂಬರ್‌ ಅಂತ ಹೇಳಿದರೆ ಅದನ್ನೂ ನಂಬುವೆಯಾ? ನಿನ್ನ ಪ್ರೀತಿ, ವಿಶ್ವಾಸ ಕೂಡ ನಿನ್ನಂತೆಯೇ ಅಪನಂಬಿಕೆಗೆ ಪಾತ್ರವಾದುದು. ಇಷ್ಟು ದಿನ ನೀನು ನನ್ನಿಂದ ವಿಚ್ಛೇದನ ಪಡೆಯಲು ಕಾಯುತ್ತಿದ್ದೆ.

“ಆದರೆ ನಾನು ನಿರಾಕರಿಸುತ್ತಿದ್ದೆ. ಆದರೆ ಇವತ್ತು ನಾನೇ ನಿನಗೆ ವಿಚ್ಛೇದನ ಕೊಡುವೆ. ಏಕೆಂದರೆ, ಶವವನ್ನು ತುಂಬಾ ದಿನ ದಫನ್‌ ಮಾಡದೆ ಹಾಗೇ ಇಟ್ಟರೆ ಕೊಳೆತು ದುರ್ವಾಸನೆ ಬೀರುತ್ತೆ. ನಡೆ ಇಲ್ಲಿಂದ! ನಿನ್ನ ನೆರಳು ಕಂಡರೂ ನನಗೆ ಸಹಿಸಲಾಗುವುದಿಲ್ಲ,” ಎಂದ ಸಂಜನಾ ಬ್ಯಾಗಿನಿಂದ ಬೀಸಣಿಗೆ ತೆಗೆದು ಗಾಳಿ ಬೀಸಿಕೊಳ್ಳತೊಡಗಿದಳು.

ಎಲ್ಲರ ಮುಖಗಳೂ ವಿವರ್ಣಗೊಂಡವು. ಯಾರೊಬ್ಬರಿಗೂ ಸಂಜನಾಳೊಂದಿಗೆ ದೃಷ್ಟಿ ಬೆರೆಸಿ ಮಾತನಾಡುವ ಧೈರ್ಯವಾಗಲಿಲ್ಲ. ಆದರೆ ಸಂಜನಾಳಿಗೆ ಬೀಸುವ ತಂಗಾಳಿಯಲ್ಲಿ ಪರಿಮಳ ಬೆರೆತಂತೆ ಭಾಸವಾಗತೊಡಗಿತ್ತು, ಆಘಾತವೊಂದು ಪರಿಹಾರವಾಗಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ