ಮದುವೆಯ ಸಂದರ್ಭದಲ್ಲಿ ಸ್ನೇಹಾಳ ಸಂಬಳ ಅವಳ ಗಂಡನಷ್ಟೇ ಇತ್ತು. ಆಮೇಲೆ ಅವಳು ಆ ಕೆಲಸ ಬದಲಿಸಿ ಮತ್ತೊಂದು ಎಂಎನ್‌ಸಿ ಕಂಪನಿ ಸೇರಿದ್ದರಿಂದ, ಈಗ ಅವಳ ಸಂಬಳ ಗಂಡನಿಗಿಂತ  3 ಸಾವಿರ ಹೆಚ್ಚಾಗಿತ್ತು. ಒಂದು ವರ್ಷದ ನಂತರ ಅವಳಿಗೆ ಬಡತಿ ದೊರಕಿ, ರೋಹಿತ್‌ಗಿಂತ 8 ಸಾವಿರ ಹೆಚ್ಚು ಗಳಿಸತೊಡಗಿದಳು. ಇತರ ಭತ್ಯೆ, ಅನುಕೂಲಗಳು ಹಿತಕರಾಗಿದ್ದವು. ಪ್ರಮೋಷನ್‌ ದೊರಕಿದ ದಿನ ಸ್ನೇಹಾಳ ಆಫೀಸಿನಲ್ಲಿ ಪಾರ್ಟಿ ನಡೆಯಿತು. ಅವಳ ಬಾಸ್‌ ಪಾರ್ಟಿಯಲ್ಲಿ ಎಲ್ಲರೆದುರು ಅವಳನ್ನು ಬಾಯಿ ತುಂಬಾ ಹೊಗಳಿದರು ಹಾಗೂ ಅವಳ ಸಂಬಳ ಈಗ ವರ್ಷಕ್ಕೆ 1 ಲಕ್ಷ ಹೆಚ್ಚಲಿರುವುದಾಗಿ ಘೋಷಿಸಿದರು. ಆಫೀಸ್‌ನಿಂದ ಮನೆಗೆ ಹೊರಡುವಾಗ ಮಾರ್ಗ ಮಧ್ಯದಲ್ಲಿ ಅವಳ ಗೆಳತಿ ಕವಿತಾ ಕೇಳಿದಳು, ``ಸ್ನೇಹಾ ನಿನ್ನ ಪ್ರಮೋಷನ್‌ ಸುದ್ದಿ ಮನೆಯಲ್ಲಿ ಟೆನ್ಶನ್‌ ಹೆಚ್ಚಿಸಬಹುದೇನೋ?''

``ಅದಂತೂ ಖಂಡಿತಾ ಹೆಚ್ಚುತ್ತದೆ,'' ಎಂದಳು ಸ್ನೇಹಾ.

``ಹಾಗಿದ್ದರೆ ಈಗ ಏನು ಮಾಡುವೆ?''

``ಅದೇ.... ಏನು ಮಾಡಬೇಕೂಂತ ಹೊಳೀತಾನೇ ಇಲ್ಲ.''

``ಮನೆಯಲ್ಲಿ ಜಗಳ ಕದನ ಬೇಡ ಅನಿಸಿದರೆ ಈ ಪ್ರಮೋಷನ್‌ ಕ್ಯಾನ್ಸಲ್ ಮಾಡಿಸಿಬಿಡು. ಏನಂತೀಯಾ?''

``ಸಾಕು ಹೋಗೆ.... ಹುಚ್ಚಿ ತರಹ ಸಲಹೆ ಕೊಡಬೇಡ!''

``ಏ.... ನಾನು ಜೋಕಿಗೆ ಹೇಳಿದ್ದು ಕಣೆ,'' ಎಂದು ತನ್ನ ಬಸ್‌ ಬಂದಿದ್ದರಿಂದ ಕವಿತಾ ಮೊದಲು ಹೊರಟಳು.

ತಲೆ ಸಿಡಿಯತೊಡಗಿದ್ದರಿಂದ ಮಾಮೂಲಿ ಬದಲಿಗೆ ಸ್ನೇಹಾ ವೋಲ್ವೋ ಬಸ್‌ ಏರಿದಳು. ಬಸ್‌ ಒಳಗಿನ ಹಿತಕರ ತಣ್ಣನೆಯ ವಾತಾವರಣ ಸಹ ಅವಳ ತಲೆನೋವು ತಗ್ಗಿಸಲಿಲ್ಲ. ತನ್ನ ಪ್ರಮೋಷನ್‌ನಿಂದಾಗಿ ಮನೆಯಲ್ಲಿನ ಟೆನ್ಶನ್‌ ಕುರಿತಾಗಿಯೇ ಚಿಂತಿಸತೊಡಗಿದಳು. ಮದುವೆ ನಂತರ ಸ್ನೇಹಾ ಹೊಸ ಎಂಎನ್‌ಸಿ ಕಂಪನಿ ಸೇರಿ, ಒಳ್ಳೆಯ ಪ್ರಗತಿ ಹೊಂದಿದಾಗ ಅವಳ ತಾಯಿ ತಂದೆ ಅವಳಿಗೆ ಬೇರೆ ರೀತಿಯ ಸಲಹೆ ನೀಡಿದ್ದರು.

``ಏನಮ್ಮಾ.... ನೀನು ರೋಹಿತ್‌ ಭವಿಷ್ಯಕ್ಕಾಗಿ ಅಂತ ಏನಾದರೂ ಒಂದಿಷ್ಟು ಉಳಿತಾಯ ಮಾಡ್ತಿದ್ದೀರಿ ತಾನೇ?'' ಒಂದು ಸಂಜೆ ಸ್ನೇಹಾ ಒಬ್ಬಳೇ ಸಿಕ್ಕಾಗ ತಾಯಿ ಸುಲೋಚನಾ ಕೇಳಿದರು.

``ಅಮ್ಮಾ, ಮೊದಲು ನನ್ನ ನಾದಿನಿಯ ಮದುವೆ ಆಗಲಿ ಇರು. ಅದಲ್ಲದೆ ನನ್ನ ಮೈದುನ ಎಂ.ಬಿ.ಎ. ಮಾಡ್ತಿದ್ದಾನೆ. ಅದೆಲ್ಲ ಸೆಟಲ್ ಮಾಡಿ ಆಮೇಲೆ ಉಳಿತಾಯದ ಬಗ್ಗೆ ಯೋಚನೆ ಮಾಡಬೇಕಷ್ಟೆ,'' ಸ್ನೇಹಾ ತುಸು ಚಿಂತಿತಳಾಗಿ ಗಂಭೀರವಾಗಿ ಹೇಳಿದಳು.

``ಒಟ್ಟು ಕುಟುಂಬ ಅಂದ್ರೆ ಹೀಗೆ ನೋಡು.... ಹಡಗಿನಂಥ ಸಂಸಾರ, ಎಷ್ಟು ತಂದು ಸುರಿದರೂ ಸಾಲದು. ಎಲ್ಲಿಯವರೆಗೂ ನೀನು ಆ ಜಾಯಿಂಟ್‌ ಫ್ಯಾಮಿಲಿಗೆ ಅಂಟಿಕೊಂಡರ್ತೀಯೋ ಈ ಕಷ್ಟ ತಪ್ಪಿದ್ದಲ್ಲ. ಇನ್ನು ನೀವು ಸೈಟ್‌, ಮನೆ, ಕಾರು ಅಂತ ಯಾವಾಗ ಮಾಡಿಕೊಳ್ಳೋದು? ಬ್ಯಾಂಕ್‌ ಬ್ಯಾಲೆನ್ಸ್ ಬೆಳೆಯೋದು ಯಾವಾಗ?'' ಸುಲೋಚನಾರ ದೂರಾಲೋಚನೆಗೆ ಸ್ನೇಹಾ ಏನೂ ಉತ್ತರಿಸದಾದಳು.

``ಹಾಗಿದ್ದರೆ ನಾವೇನು ಮಾಡಬೇಕು ಅಂತೀಯಮ್ಮಾ?'' ಸ್ನೇಹಾ ಸಿಡುಕಿದಳು.

``ನಿನಗೇನು ಅಷ್ಟೂ ಗೊತ್ತಾಗೋಲ್ವೇನೇ? 6 ತಿಂಗಳು ಆ ದೊಡ್ಡ ಸಂಸಾರಕ್ಕೆ ಅಂಟಿಕೊಂಡಿದ್ದು ಸಾಕು ಸಾಕು, ಮೊದಲು ಅತ್ತೆಮನೆಯಿಂದ ಬೇರೆಯಾಗಿ ಹೊಸ ಮನೆ ಹೂಡುದನ್ನು ನೋಡು!''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ