ಮನಸ್ಸೆಂಬುದು ಎಂಥಾ ಮರ್ಕಟ! ನಾನು ಇರುವ ಕಡೆ ನನ್ನ ಮನಸ್ಸಿರುವುದಿಲ್ಲ. ನಾನು ಇಲ್ಲದಿರುವ ಕಡೆಯಲ್ಲೇ ನನ್ನ ಮನಸ್ಸು ಸದಾ ಸುತ್ತುತ್ತಿರುತ್ತದೆ. ಮನೆಗೆ ಬಂದರೆ ಮನಸ್ಸು ಆಫೀಸಿನಲ್ಲಿ ಪ್ರಶಾಂತರೊಡನೆ ಇರುತ್ತದೆ. ಆಫೀಸಿನಲ್ಲಿದ್ದರೆ ಮನಸ್ಸು ಗಂಡ ಮಹೇಶ, ಮಕ್ಕಳ ಮತ್ತು ಪರಿವಾರದ ಬೇಕು ಬೇಡಗಳ ಸಮಸ್ಯೆಯಲ್ಲಿ ಸಿಲುಕಿಕೊಂಡಿರುತ್ತದೆ.
ನಾನು ಇರುವ ಕಡೆಗೆ ನನ್ನ ಮನಸ್ಸನ್ನೂ ಎಳೆದುತಂದು, ಮಾಡುವ ಕೆಲಸವನ್ನು ಮನಸ್ಸಿಟ್ಟು ಮಾಡಬೇಕೆಂದು ಅದೆಷ್ಟು ಪ್ರಯತ್ನಿಸುತ್ತೇನೋ? ಆದರೆ ಬರಿಯ ಹಂಬಲದಿಂದ ಏನಾಗುತ್ತದೆ? ಅಲೆದಾಡುವ ಮನಸ್ಸಿನ ಕುದುರೆಗಳ ಲಗಾಮನ್ನು ಕೆಲವು ಕಾಲ ಬಿಗಿಹಿಡಿಯುತ್ತೇನೆ. ಆದರೆ ಬಹು ಬೇಗ ಲಗಾಮಿನ ಹಿಡಿತ ಸಡಿಲವಾಗಿಬಿಡುತ್ತದೆ. ಕೂಡಲೇ ನಿಯಂತ್ರಣಕ್ಕೆ ಒಳಪಡದೆ ಮನಸ್ಸು ಲಗಾಮಿಲ್ಲದ ಕುದುರೆಯಂತೆ ದಿಕ್ಕು ದಿಶೆ ಅರಿಯದೆ, ಎಲ್ಲಿಂದೆಲ್ಲಿಗೋ ಓಡತೊಡಗುತ್ತದೆ. ಇದೊಂದು ಮರೀಚಿಕೆ ಎಂದು ನನಗೆ ಗೊತ್ತಿದೆ. ಮನಸ್ಸು ಆಶಾಂತಗೊಳ್ಳುವುದರ ಹೊರತಾಗಿ ಇದರಿಂದ ಬೇರೇನೂ ದೊರೆಯುವುದಿಲ್ಲವೆಂದೂ ಅರಿತಿದ್ದೇನೆ.
ಆದರೆ ಅಯ್ಯೋ! ಈ ಕಷ್ಟ ಇಲ್ಲದಿದ್ದರೆ ಎಷ್ಟು ಸುಖವಾಗಿರಬಹುದಾಗಿತ್ತು, ಆ ಸೌಲಭ್ಯ ಇದ್ದಿದ್ದರೆ ಎಷ್ಟು ಸಂತೋಷವಾಗಿ ಇರಬಹುದಾಗಿತ್ತು ಎಂದು ಯಾವಾಗಲೂ ಇಲ್ಲದಿರುವುದನ್ನೇ ಬಯಸುತ್ತಾ, ಅಭಾವಗಳ ಪೂರೈಕೆಗಾಗಿ ನೋವಿನಿಂದ ಮಿಡಿಯುವ ಈ ಮನಸ್ಸನ್ನು ಏನು ಮಾಡುವುದು....?
ನಾನು ಪೆದ್ದಿಯೋ, ಕುರೂಪಿಯೋ ಅಥವಾ ನೈಪುಣ್ಯ ಇಲ್ಲದವಳಾಗಿದ್ದರೆ ಈ ಆಫೀಸಿನಲ್ಲಿ ಇಷ್ಟೊಂದು ವರ್ಷ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದೆನೇ? ಪ್ರಶಾಂತ್ ಯಾವಾಗಲೋ ನನ್ನನ್ನು ಕೆಲಸದಿಂದ ಕಿತ್ತುಹಾಕುತ್ತಿದ್ದರು, ಅಷ್ಟೇ. ಇದು ಖಾಸಗಿ ಕಂಪನಿ, ಕೆಲಸ ಮಾಡದೆಯೂ ಸಂಬಳ ಎಣಿಸಿಕೊಂಡು ಹೋಗುಬಹುದಾದ ಸರ್ಕಾರಿ ಕೆಲಸ ಏನೂ ಅಲ್ಲ. ಪ್ರಶಾಂತ್ ಕೇವಲ ನನ್ನ ಕೆಲಸವನ್ನಷ್ಟೇ ಅಲ್ಲ, ನನ್ನನ್ನೂ ಮೆಚ್ಚಿಕೊಂಡಿದ್ದಾರೆ ಎಂಬುದು ಬೇರೆ ವಿಷಯ. ನಾನು ಯಾವುದೇ ಕೆಲಸದ ಮೇಲೆ ಅವರ ಕ್ಯಾಬಿನ್ನಿಗೆ ಹೋದರೂ ಅವರು ಅದೆಷ್ಟು ಮೋಹಕ ಮುಗುಳ್ನಗೆ ಸೂಸುತ್ತಾರೆ! ಇಂದಿನವರೆಗೂ ಅವರು ನನ್ನ ಯಾವುದೇ ತಪ್ಪಿಗೂ ಒರಟಾಗಿ ಮಾತನಾಡಿಲ್ಲ. ತಪ್ಪನ್ನೂ ಮೃದುವಾಗಿಯೇ ತೋರಿಸಿಕೊಟ್ಟಿದ್ದಾರೆ, ಸದಾ ಪ್ರೋತ್ಸಾಹವನ್ನೇ ನೀಡುತ್ತಾ ಬಂದಿದ್ದಾರೆ.
ಎಂದಾದರೂ ನಾನು ಯಾವುದೇ ಕೆಲಸವಿಲ್ಲದ ಕಾರಣ ಅವರ ಕ್ಯಾಬಿನ್ನಿಗೆ ಹೋಗದಿದ್ದರೆ, ಅಂದು ಸಂಜೆಯೊಳಗೆ ಅವರು ಏನೋ ಒಂದು ನೆಪದಿಂದ ನನ್ನನ್ನು ತಮ್ಮ ಕ್ಯಾಬಿನ್ನಿಗೆ ಕರೆಸಿಕೊಳ್ಳುತ್ತಾರೆ ಎಂಬುದನ್ನೂ ನಾನು ಗಮನಿಸಿದ್ದೆ. ನಾನು ಪ್ರಶಾಂತರ ಕ್ಯಾಬಿನ್ನಿಗೆ ಹೋಗಿ ಅವರಿಗೆ ನಮಸ್ಕರಿಸುತ್ತಿರುವಂತೆಯೇ, ಅವರು ಮೇಜಿನ ಮೇಲಿನ ಪೇಪರ್ ವೆಯ್ಟ್ ನ್ನು ಗಿರ್ರನೆ ತಿರುಗಿಸುತ್ತ, ``ಯಾಕಿಷ್ಟೊಂದು ಕೋಪ ಗೀತಾ? ನೀವು ಈ ಕಡೆ ತಿರುಗಿಯೂ ನೋಡಬಾರದಷ್ಟು ಕುರೂಪಿ ನಾನಲ್ಲ ತಾನೇ?'' ಎಂದು ಕೇಳುತ್ತಿದ್ದರು.
``ಕ್ಷಮಿಸಿ ಸರ್, ಇವತ್ತು ಬಹಳ ಕೆಲಸ ಇತ್ತು ಅದರಲ್ಲಿ ಮುಳುಗಿದ್ದೆ,'' ನಾನು ನಗುತ್ತಾ ಉತ್ತರಿಸುತ್ತಿದ್ದೆ.
``ಅದೆಂಥ ಕೆಲಸಾರೀ. ನೀವು....'' ಅವರು ಮಾತು ಪೂರೈಸುತ್ತಿರಲಿಲ್ಲ. ಮುಗುಳ್ನಕ್ಕು ಮಾತು ಬದಲಾಯಿಸುತ್ತಿದ್ದರು, ``ಮನೆಯಲ್ಲಿ ಎಲ್ಲರೂ ಆರೋಗ್ಯ ತಾನೇ? ನಿನ್ನೆ ರಾಹುಲನಿಗೆ ಜ್ವರ ಎಂದಿದ್ದಿರಲ್ಲ.... ಜ್ವರ ಬಿಟ್ಟಿದೆ ತಾನೇ? ಡಾಕ್ಟರಿಗೆ ತೋರಿಸಿದಿರಾ? ಮಹೇಶ್ ಕೂಡಾ ಮನೆಯ ಕಡೆ ಸ್ವಲ್ಪ ಗಮನ ಕೊಡುತ್ತಾರೋ, ಇಲ್ಲ ನೀವೋಬ್ಬರೇ ಎಲ್ಲ ನೋಡಿಕೊಳ್ಳಬೇಕೋ?''