ಹಂಚಿದಷ್ಟೂ ಪ್ರೀತಿ ಉಕ್ಕಿ ಹರಿಯುವ ಅಮೃತಧಾರೆ!

“ಅಮ್ಮಾ…. ಹೋಗಿ ಬರುತ್ತೇನೆ…..” ಎಂದು ಹೇಳಿ ಅವಸರವಸರವಾಗಿ ಕೆಲಸಕ್ಕೆ ಹೊರಟು ನಿಂತಿದ್ದ ಮಗಳನ್ನು ಬಾಗಿಲಿನವರೆಗೂ ಬಂದು ನಿಂತು ಬೀಳ್ಕೊಂಡರು ಪಾರ್ವತಮ್ಮ. ನೀಳಕಾಯದ ಚೆಲುವಿನ ಮಗಳು…. ಸೆರಗನ್ನು ಬೀಸುತ್ತ ಸರಸರ ನಡೆದು ಹೋಗುವುದನ್ನೇ ಪ್ರೀತಿ ತುಂಬಿದ ಕಣ್ಣುಗಳಿಂದ ದಿಟ್ಟಿಸುತ್ತ ನಿಂತರು.

“ಪಾರೂ….. ಪಾರೂ….” ಎಂದು ಒಳಗಿನಿಂದ ಪತಿ ಶಿವಮೂರ್ತಿಗಳು ಕರೆದಾಗಲೇ ಪಾರ್ವತಮ್ಮನಿಗೆ ಎಚ್ಚರವಾದುದು, ನಿಧಾನವಾಗಿ ನಡೆದು ಪತಿಯ ಬಳಿ ಬಂದರು.

ಮನಸ್ಸಿನ ತುಂಬ ಅವರಿಗೆ ಬೆಳೆದು ನಿಂತ ಮಗಳ ಆಲೋಚನೆಯೇ! ಮಗಳ ಮದುವೆಯ ಚಿಂತೆ ಬೆಳೆದು ಹೆಮ್ಮರವಾಗಿ ನಿಂತಿತ್ತು. ಅವರ ಪತಿ ಶಿವಮೂರ್ತಿಗಳೋ ಇಂಥ ವಿಷಯಗಳಲ್ಲಿ ವಿನಾಕಾರಣ ತಲೆಬಿಸಿ ಮಾಡಿಕೊಳ್ಳುವವರಲ್ಲ. ಅವರಿಗೆ ತಾವಾಯಿತು, ತಮ್ಮ ಪಾಡಾಯಿತು ಎಂಬಂಥ ಸ್ವಭಾವ. ಪಾರ್ವತಮ್ಮ ತಮ್ಮ ಮಾವನವರನ್ನು ನೋಡಿರಲಿಲ್ಲವಾದರೂ, ತಮ್ಮ ಮಗಳು ಹಠಮಾರಿತನದಲ್ಲಿ ತಾತನನ್ನೇ ಹೊತ್ತಿದ್ದಾಳೆ ಎಂದು ಪತಿಯಿಂದ ಕೇಳಿ ತಿಳಿದಿದ್ದರು. ನೀಳಕಾಯದ ವ್ಯಕ್ತಿತ್ವವನ್ನು ಮಾತ್ರವಲ್ಲದೆ ಸ್ವಭಾವದಲ್ಲೂ ತಾತನ ಹಾಗೆಯೇ ಸಿಟ್ಟು ಹಠಗಳನ್ನು  ಬೆಳೆಸಿಕೊಂಡಿದ್ದಳು.

ಅದೇ ತಮ್ಮ ಮಗಳು ಅರ್ಚನಾ ಗಂಡಾಗಿ ಹುಟ್ಟಿದ್ದಿದ್ದರೆ ಆಗ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ಪಾರ್ವತಮ್ಮ ನಿಡುಸುಯ್ದರು. ಆದರೆ ಅರ್ಚನಾಳೋ ಹೆಣ್ತನದ ಚೆಲುವನ್ನೆಲ್ಲಾ ಪಡೆದಿದ್ದರೂ, ಗುಂಡುಗೂಳಿಯ ಹಾಗೇ ಒರಟೊರಟಾಗೇ ನಡೆದುಕೊಳ್ಳುತ್ತಿದ್ದಳು.

ನಿವೃತ್ತ ಪೊಲೀಸ್‌ ಕಮೀಷನರ್‌ ಆಗಿದ್ದ ಶಿವಮೂರ್ತಿಗಳಿಗೆ, ಗಂಡು ಮಗನ ಸ್ವಭಾವ ಹೊತ್ತು, ತಮ್ಮ ಭುಜದೆತ್ತರಕ್ಕೂ ಬೆಳೆದು ನಿಂತಿದ್ದ ಮಗಳನ್ನು ಕಂಡರೆ, ವಿಪರೀತ ಹೆಮ್ಮೆ. ಮೊದಮೊದಲು ಪಾರ್ವತಮ್ಮ ತಮಗೆ ಒಂದೇ ಒಂದು ಹೆಣ್ಣಾಯಿತಲ್ಲ ಎಂದು ಕೊರಗಿದಾಗಲೆಲ್ಲ, ಶಿವಮೂರ್ತಿಗಳು ತಾವೇ ಠೇಂಕಾರದಿಂದ, “ಅಲ್ವೇ…… ಪಾರೂ… ಅರ್ಚನಾ ಅಂಥ ಒಬ್ಬಳು ಮಗಳಿರುವಾಗ ನಮಗೇನೇ ಕೊರತೆ…?” ಎಂದು ಅವಳನ್ನು ತಮ್ಮ ಮಗನಂತೆಯೇ ಬೆಳೆಸಿದ್ದರು. ಗಂಡು ಮಕ್ಕಳೇ ಕುಟುಂಬಕ್ಕೆ ಆಸ್ತಿ ಎಂಬ ವಿಷಯವನ್ನು ಅಲ್ಲಗಳೆಯುತ್ತಿದ್ದರು. ಪುಟ್ಟ ವಯಸ್ಸಿನಿಂದಲೇ ಅರ್ಚನಾ ತನಗೆ ಸರಿತೋರಿದ್ದನ್ನು ಮಾತ್ರ ಮಾಡುತ್ತ, ತನ್ನಿಷ್ಟದಂತೆಯೇ ಬೆಳೆದಳು. ಅವಳಿಗೆ ತಾನು ಮುಂದೆ ಗೃಹಿಣಿಯಾಗಿ ಬಾಳುವುದಕ್ಕಿಂತ ತನ್ನ ಸ್ವಂತ ಕಾಲ ಮೇಲೆ ನಿಂತು, ದುಡಿದು ಗಳಿಸಬೇಕು ಎಂದು ಆಶಿಸುತ್ತಿದ್ದಳು. ಸಣ್ಣ ವಯಸ್ಸಿನಿಂದಲೇ ಎಂದೆಂದೂ ಮದುವೆಯಾಗಬಾರದು ಎಂದು ನಿರ್ಧರಿಸಿದ್ದಳು. ಇದು ಪಾರ್ವತಮ್ಮನವರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅರ್ಚನಾ ಓದಿನಲ್ಲಿ ಅಪಾರ ಶ್ರದ್ಧೆ ವಹಿಸಿ ತನ್ನಿಷ್ಟದಂತೆಯೇ ಸ್ನಾತಕೋತ್ತರ ಪದವಿಯಲ್ಲಿ ಸಾಹಿತ್ಯವನ್ನು ಆರಿಸಿಕೊಂಡು, ಕೊನೆಗೆ ಕಾಲೇಜೊಂದರಲ್ಲಿ ಲೆಕ್ಚರರ್‌ ಕೆಲಸಕ್ಕೆ ಸೇರಿ, ಜೀವನವನ್ನು ತನಗೆ ಬೇಕಾದಂತೆ ರೂಪಿಸಿಕೊಂಡಳು.

ಆ ದಿನ ಮತ್ತಷ್ಟು ಹೆಚ್ಚಾಗಿ ಮಗಳ ಬಗ್ಗೆ ಚಿಂತಿಸುತ್ತ, ಅವಳನ್ನು ಕಳುಹಿಸಿಕೊಟ್ಟು, ಬಾಗಿಲು ಹಾಕಿದ ನಂತರ, ಆರಾಮವಾಗಿ ದಿನಪತ್ರಿಕೆ ಓದುತ್ತ ಕುಳಿತಿದ್ದ ಪತಿರಾಯರ ಬಳಿ, ಸಿಡಿಮಿಡಿ ಎನ್ನುತ್ತ ಬಂದು ಕುಳಿತು.“ಏನೂಂದ್ರೆ…. ನನ್ನ ಮಾತು ಕೇಳ್ತಿದ್ದೀರಾ….?”

ತಮ್ಮ ಯೋಚನೆಗಳಿಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೆ ನಿರಾಳವಾಗಿ, ಹರಟುತ್ತ, ಮಗಳನ್ನು ರೇಗಿಸುತ್ತ, ಮನೆ ಕ್ಲಬ್ಬು ಎಂದು ಸುತ್ತಿಕೊಂಡು ಹಾಯಾಗಿದ್ದ ಪತಿರಾಯರನ್ನು ಆಗಾಗ ಅವರು ಗದರಿಕೊಳ್ಳುತ್ತಿದ್ದುದುಂಟು.

“ಏನೇ…..ಅದು ಮಹರಾಯ್ತಿ….” ತಮ್ಮ ಪ್ರಿಯ ಪತ್ನಿ ಯಾವ ಗಹನವಾದ ವಿಚಾರ ಚರ್ಚಿಸಲಿಕ್ಕೆ ಬಂದಿದ್ದಾರೆ ಎಂದು ಚೆನ್ನಾಗಿಯೇ ತಿಳಿದಿದ್ದ ಶಿವಮೂರ್ತಿಗಳು ಸಾವಧಾನವಾಗಿ ತಾವು ಹಿಡಿದಿದ್ದ ದಿನಪತ್ರಿಕೆಯಿಂದ ತಲೆಯೆತ್ತಿ ಕೇಳಿದರು.

ಸದಾ ಗಾಬರಿ ಕಳವಳದಲ್ಲಿ ಮುಳುಗಿರುತ್ತಿದ್ದ ಪಾರ್ವತಿಯನ್ನು ಕಂಡು ಅವರಿಗೆ ಅಯ್ಯೋ ಪಾಪ ಎನಿಸುತ್ತಿತ್ತು. ಅರ್ಚನಾಳಿಗಿನ್ನೂ ಮದುವೆಯಾಗಿಲ್ಲ ಎಂದು ಸದಾ ಆಕೆ ಚಿಂತಿಸುತ್ತಿದ್ದರು. ಈ ದಿನ ಅವರು ಹೆಚ್ಚಾಗಿ ಕಳವಳ ಪಡುತ್ತಿರುವುದಕ್ಕೆ ಕಾರಣ, ನಿನ್ನೆ ತಾನೇ ಅರ್ಚನಾಳಿಗಾಗಿ ತೋರಿಸಿದ್ದ ಏಳನೇ ವರನನ್ನೂ ಅವಳು ಸಾರಾಸಗಟಾಗಿ ನಿರಾಕರಿಸಿದ್ದಳು. ಎಂ.ಬಿ.ಎ. ಮುಗಿಸಿ ವಿದೇಶದಲ್ಲಿ ಕೆಲಸದಲ್ಲಿದ್ದ ವರನನ್ನು ಪಾರ್ವತಮ್ಮನ ತಂಗಿಯೇ ತೋರಿಸಿದ್ದರು.

ವರ ಅವಳನ್ನು ಒಂದು ಮದುವೆ ಮಂಟಪದಲ್ಲಿ  ನೋಡಿದ್ದ.  ಅವಳ ಅಂದಚೆಂದಗಳಿಗೆ ಮಾರುಹೋಗಿ, ಅವಳ ವೈಯಕ್ತಿಕ ವಿಷಯ ಸಂಗ್ರಹಿಸಿ, ಹಿರಿಯರ ಮೂಲಕ ಹೆಣ್ಣು ನೋಡುವುದಕ್ಕೆ ಬಂದಿದ್ದ. ಯಾವೊಂದು ವಿವರಣೆಯನ್ನೂ ಕೊಡದೆ ಅರ್ಚನಾ ಈ ವರನನ್ನು “ಬೇಡ,” ಎಂದು ನಿರಾಕರಿಸಿದ್ದಳು.

“ಏನೂಂದ್ರೆ…. ನಾವು ಅರ್ಚನಾಳ ಮದುವೆ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬರುವುದೊಳ್ಳೆಯದು. ಅವಳು ಹೀಗೆ ಎಲ್ಲಾ ವರಗಳನ್ನೂ ಬೇಡ ಎನ್ನುತ್ತಾ ಹೋದರೆ, ಜೀವಮಾನ ಪೂರ್ತಿ ಒಂಟಿಯಾಗಿ ಉಳಿಯ ಬೇಕಾಗುತ್ತದೆ. ಈಗಾಗಲೇ ಅವಳಿಗೆ 25 ತುಂಬಿದೆ ಎಂದು ನೆನಪಿದಿ ತಾನೇ?”

ಶಿವಮೂರ್ತಿಗಳು ಪತ್ನಿಯ ಬೆನ್ನು ತಟ್ಟಿ ಸಮಾಧಾನಪಡಿಸುತ್ತ, “ಯೋಚನೆ ಮಾಡಬೇಡ. ಪಾರೂ, ಅರ್ಚನಾ ಇನ್ನೂ ಚಿಕ್ಕ ಹುಡುಗಿ. ನಾವು ಬಲವಂತ ಮಾಡಿದಷ್ಟೂ ಅವಳು ನಿರಾಕರಿಸುತ್ತಾ ಹೋಗುತ್ತಾಳೆ. ಅವಳ ಹಠಮಾರಿ ಸ್ವಭಾವ ನಿನಗೆ ಗೊತ್ತೇ ಇದೆ. ಅವಳಿಗೆ ಒಬ್ಬ ತಕ್ಕ ಹುಡುಗ ಸಿಕ್ಕಿದಾಗ, ತಾನೇ ಆರಿಸಿಕೊಳ್ಳುತ್ತಾಳೆ. ಅದರ ಬಗ್ಗೆ ನನಗೆ ವಿಶ್ವಾಸ ಇದ್ದೇ ಇದೆ,” ಎಂದರು.

ತಾವು ತಮ್ಮ ಪತಿಯಂತೆಯೇ ಮಗಳ ಮದುವೆಯ ವಿಷಯದಲ್ಲಿ ನಿರಾಳವಾಗಿರಬೇಕೆಂದು ಪಾರ್ವತಮ್ಮ ನೂರನೇ ಸಲ ಅಂದುಕೊಂಡರೂ ಅದೇಕೋ ಆಗುತ್ತಿರಲಿಲ್ಲ. ಇವರ ಬಳಿ ಹೇಳಿ ತಲೆ ಚಚ್ಚಿಕೊಂಡರೇನು ಲಾಭ? ಎಂದುಕೊಳ್ಳುತ್ತಾ ಅವರು ತಮ್ಮ ಬೆಳಗಿನ ಕೆಲಸ ಮುಗಿಸಲು, ಭಾರವಾದ ಹೃದಯ ಹೊತ್ತು ಅಡುಗೆಮನೆಗೆ ಹೊರಟರು. 25 ವರ್ಷಗಳು! ತಮಗೆ ಅಷ್ಟು ವಯಸ್ಸಾಗಿದ್ದಾಗ ಅರ್ಚನಾ 6 ವರ್ಷದ ಮಗಳಾಗಿದ್ದಳು. ಇವಳೋ ಇನ್ನೂ ಕನ್ಯೆಯಾಗಿ ಉಳಿದಿದ್ದಾಳೆ. ಇವಳ ಕೊರಳಿಗೆ ಮದುವೆಯ ಮೂರು ಗಂಟು ಅದ್ಯಾವಾಗ ಬೀಳುತ್ತದೋ ಎಂದು ಅರ್ಚನಾಳ ಭವಿಷ್ಯದ ಬಗ್ಗೆ ಚಿಂತಿಸತೊಡಗಿದರು.

ಇತ್ತ ಬಸ್‌ ಸ್ಟಾಪಿನಲ್ಲಿ ನಿಂತಿದ್ದ ಅರ್ಚನಾಳ ಮನಸ್ಸೆಲ್ಲಾ ಬಸ್ಸು ಯಾವಾಗ ಬಂದೀತೋ ಎಂದು ಚಿಂತಿಸುತ್ತಿತ್ತು. ಹಿಂದಿನ ರಾತ್ರಿ ಜೋರಾಗಿ ಮಳೆ ಬಂದಿದ್ದರಿಂದ ಎಲ್ಲೆಲ್ಲೂ ಕೊಚ್ಚೆ ರಾಡಿ ಎದ್ದಿತ್ತು. ಆದರೆ ಆ ದಿನ ವಾತಾವರಣ ಬಹಳ ತಾಜಾ ಆಗಿತ್ತು. ಸೋಮವಾರ ಬಂತೆಂದರೆ ಎಲ್ಲರಿಗೂ ಬಹಳ ಗಡಿಬಿಡಿ. ವಾರದ ಇತರ ದಿನಗಳಿಗಿಂತ ಸೋಮವಾರ ಎಲ್ಲರಿಗೂ ಅವಸರ ಜಾಸ್ತಿ ಎಂದುಕೊಂಡಳು ಅರ್ಚನಾ. ಅಷ್ಟರಲ್ಲಿ ಮೂಲೆಯ ತಿರುವಿನಲ್ಲಿ ಬಸ್ಸು ಕಾಣಿಸಿದಂತಾಗಲು ಅರ್ಚನಾ ಸರಸರನೆ ಅತ್ತ ನಡೆಯತೊಡಗಿದಳು. ಆದರೆ ಅಷ್ಟರಲ್ಲಿ ಎದುರಿನಿಂದ ಬಂದ ಕಾರೊಂದು ಅವಳ ಮೇಲೆ ಕೊಚ್ಚೆಯ ನೀರನ್ನು ಹಾರಿಸಿತು.

ತಕ್ಷಣ ಅರ್ಚನಾ ಹಿಂದಕ್ಕೆ  ತಿರುಗಿದರೂ, ಅವಳು ಬೇಗನೆ ಎಚ್ಚೆತ್ತುಕೊಳ್ಳಲಾಗಲಿಲ್ಲ. ತನ್ನ ಸುಂದರವಾದ ಗುಲಾಬಿ ಬಣ್ಣದ ಶಿಫಾನ್‌ ಸೀರೆಯ ಮೇಲೆ ಸಿಡಿದು ಬಿದ್ದ ಕೆಸರಿನಿಂದ ಅವಳು ಅಸಹ್ಯಗೊಂಡಳು. ಯಾರವನು ಹಾಳಾದ ಡ್ರೈವರ್‌! ಎಂದು ಅವಳು ದಿಟ್ಟಿಸಿದಾಗ, ಒಬ್ಬ ಸದೃಢ ತರುಣ ಕಾರಿನಿಂದ ಇಳಿದು ಬಂದು ಅವಳ ಎದುರಿಗೆ ನಿಂತಿದ್ದ.

“ದಯವಿಟ್ಟು ನನ್ನನ್ನು ಕ್ಷಮಿಸಿ,” ನೀಳಕಾಯದ ಸುಂದರ ಯುವಕ ಅವಳಿಗೆ, “ನಿಮಗೇನು ಪೆಟ್ಟಾಗಲಿಲ್ಲ ತಾನೇ?” ಎಂದು ವಿಚಾರಿಸಿದ.

“ನೋಡಿದರೆ ಕಾಣುತ್ತಿಲ್ಲವೇ?”  ಎಂದು ಅರ್ಚನಾ ತನ್ನ ಮೊನಚು ಮಾತಿನ ಚುರುಕು ಮುಟ್ಟಿಸಿದಳು. ಅವನು ಅವಳ ಕಣ್ಣುಗಳನ್ನು ದೃಷ್ಟಿಸಿದಾಗ ಅವಳು ಸುಮ್ಮನಾದಳು.

ತಾನು ಮೊದಲ ಬಾರಿಗೆ ನೋಡುತ್ತಿರುವ ಆ ಸುಂದರ ಯುವಕನ ಆಕರ್ಷಣೆಗೆ ಅವಳು ಒಳಗಾಗದಿರಲಿಲ್ಲ. ಒಬ್ಬರನ್ನೊಬ್ಬರು ದಿಟ್ಟಿಸುತ್ತ ಮಾತಿಲ್ಲದೆ ಅವರು ಸುಮ್ಮನೆ ನಿಂತಿದ್ದರು.

“ನಿಮ್ಮ ಬಸ್ಸು ಮಿಸ್ಸಾಗಿ ಹೋಯಿತು ಅಂತ ಕಾಣಿಸುತ್ತೆ,” ಅವನು ಮೌನವನ್ನು ಮುರಿಯುತ್ತಾ ಹೇಳಿದ, “ನಾನು ನಿಮ್ಮನ್ನು ನಿಮ್ಮ ಆಫೀಸಿನವರೆಗೂ ಡ್ರಾಪ್‌ ಮಾಡಲೇ?” ಮಾತನ್ನು ಮುಂದುವರಿಸುತ್ತಾ, “ನನ್ನ ಹೆಸರು ಸುನೀಲ್‌,” ಎಂದ.

“ನಾನು ಅರ್ಚನಾ……” ಎಂದು ಉತ್ತರಿಸಿದಳು. ಅವಳಿಗೆ ಅಚ್ಚರಿಯಾಗುವಂತೆ ಅವಳ ಧ್ವನಿ ಮೃದುವಾಗಿತ್ತಲ್ಲದೆ ಮೊದಲ ಬಾರಿಗೆ ಪುರುಷ ಸೌಂದರ್ಯಕ್ಕೆ ಮಾರುಹೋದದ್ದಕ್ಕಾಗಿ ಮನಸ್ಸಿನಲ್ಲೇ ಬಹಳ ನಾಚಿಕೊಂಡಳು.

“ನಮ್ಮ ಮನೆ ಇಲ್ಲೇ ಹತ್ತಿರದಲ್ಲಿದೆ. ನಾನು ಈಗಲೇ ನನ್ನ ಉಡುಪನ್ನು ಬದಲಾಯಿಸಿ ಬರುತ್ತೇನೆ. ಆನಂತರ ನೀವು ನನ್ನನ್ನು ಕಾಲೇಜಿನ ಬಳಿ ಡ್ರಾಪ್‌ ಮಾಡಬಹುದು,” ಅವಳ ಮಾತಿಗೆ ನಸುನಗೆಯಿಂದ ಒಪ್ಪಿಗೆಯಿತ್ತು, ಅವಳೊಡನೆ ಮನೆಯತ್ತ ಹೆಜ್ಜೆ ಹಾಕಿದ. ಸುಂದರವಾದ ಯುವಕನೊಡನೆ ಬಾಗಿಲಲ್ಲಿ ನಿಂತುಕೊಂಡಿರುವ ಮಗಳನ್ನು ನೋಡಿ ಪಾರ್ವತಮ್ಮ ಕಣ್ಣು ಕಣ್ಣು ಬಿಡುತ್ತಿರುವಂತೆಯೇ ಅರ್ಚನಾ ಅವಸರಪಡಿಸುತ್ತ ಮನೆಯೊಳಗೆ ಕಾಲಿಟ್ಟಳು.

“ಅಮ್ಮ, ಇವರು ಸುನೀಲ್ ‌ಅಂತ,” ಎಂದು ತಾಯಿ ತಂದೆಯರಿಗೆ ಸುನೀಲ್‌ನನ್ನು ಪರಿಚಯಿಸಿ ಸರಸರನೆ ಒಳಗೆ ಹೋಗಿ ಬೇರೆ ಉಡುಪನ್ನು ಬದಲಿಸತೊಡಗಿದಳು.

“ನಾನೊಬ್ಬ ಆರ್ಕಿಟೆಕ್ಟ್,” ಅವನ ಮಾತುಗಳನ್ನು ಲಕ್ಷ್ಯವಹಿಸಿ ಕೇಳಿಸಿಕೊಳ್ಳುತ್ತಿದ್ದರು.

“ಈ ಕಡೆ ಒಂದು ಹೊಸ ಸೈಟಿನಲ್ಲಿ ಮನೆಯೊಂದರ ಡಿಸೈನಿಗಾಗಿ ಬರುತ್ತಿದ್ದೆ…” ಆನಂತರ ತಾವಿಬ್ಬರೂ ಹೇಗೆ ಭೇಟಿಯಾದೆವೆಂದೂ ವಿವರಿಸತೊಡಗಿದ.

ಅರ್ಚನಾ ಉಡುಪು ಸರಿಪಡಿಸಿಕೊಂಡು ಒಪ್ಪವಾಗಿ ಹೊರಬಂದಾಗ ಮೂವರೂ ಮಾತಿನಲ್ಲಿ ಮುಳುಗಿರುವುದನ್ನು ಕಂಡಳು. ಅವಳಿಗೀಗಾಲೇ ತಡವಾದುದರಿಂದ, ಮನೆಯವರಿಗೆ `ನಮಸ್ಕಾರ’ ಹೇಳಿ ಬೇಗ ಬೇಗ ಬಸ್‌ ಸ್ಟಾಪಿನಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಬಂದರು.

“ಇದೇ ಅವರ ಮೊದಲ ಭೇಟಿ ಪಾರು. ಆದ್ದರಿಂದ ಇಲ್ಲದ ಕಲ್ಪನೆಗಳನ್ನು ಮಾಡಿಕೊಳ್ಳಬೇಡ,” ಹೊರಗೆ ಹೋಗುತ್ತಿದ್ದ ಜೋಡಿಯನ್ನು ನೋಡಿ ಪುಳಕಿತಗೊಳ್ಳುತ್ತಿದ್ದ ಪಾರ್ವತಮ್ಮನವರನ್ನು ಎಚ್ಚರಿಸಿದರು ಶಿವಮೂರ್ತಿ.

“ಅವನೇ ನಮ್ಮ ಅರ್ಚನಾಳಿಗೆ ಗಂಡನಾಗಿ ಬರಬೇಕೆಂದಿದ್ದರೇ….. ಅದನ್ನು ಅವಳು ಮಾತ್ರವೇ ನಿರ್ಧರಿಸಬೇಕಷ್ಟೆ. ಆದ್ದರಿಂದ ಈ ವಿಷಯದಲ್ಲಿ ನೀನೇನೂ ಬಲವಂತ ಮಾಡಬೇಡ,” ಎಂದರು.

ಆದರೆ ಕಲ್ಪನಾಲೋಕದಲ್ಲಿ ಸುನೀಲ್ ‌ಅರ್ಚನಾರ ಮದುವೆಯ ಕನಸನ್ನು ಕಾಣುತ್ತಿದ್ದ ಪಾರ್ವತಮ್ಮನವರನ್ನು ತಡೆಯಲು ಸಾಧ್ಯವೇ?

ಅರ್ಚನಾ ಆ ದಿನ ಕಾಲೇಜಿಗೆ ಹೋಗುವಷ್ಟರಲ್ಲಿ ಸ್ವಲ್ಪ ತಡವಾಯಿತು. ಆದರೆ ದಾರಿಯುದ್ದಕ್ಕೂ ಅವಳು ಕೊಂಚ ಸಂಕೋಚದಿಂದಲೇ ಅವನೊಂದಿಗೆ ಹರಟುತ್ತಿದ್ದಳು. ಅವನ ದೃಢವಿಶ್ವಾಸವನ್ನು ಸೂಚಿಸುವ ಕಪ್ಪು ಕಣ್ಣುಗಳಿಗೆ, ಒರಟು ಮುಖ, ಗುಂಗುರು ಕೂದಲಿಗೆ ಅವಳು ಮಾರುಹೋಗದಿರಲಿಲ್ಲ.

ಮಾರನೇ ದಿನ ಬಸ್‌ ಸ್ಟಾಪಿನ ಬಳಿ ನಿಂತಿದ್ದಾಗ, ಅವಳಿಗರಿವಿಲ್ಲದೆಯೇ ಮನ, ಹಸಿರು ಮಾರುತಿ ಕಾರು ಇತ್ತ ಬರಬಾರದೇ ಎಂದು ಚಡಪಡಿಸತೊಡಗಿತು. ಕೆಲವೇ ಕ್ಷಣಗಳಲ್ಲಿ ಅವನ ಕಾರು ಸಾಕ್ಷಾತ್‌ ಅವಳ ಮುಂದೆ ಬಂದು ನಿಂತಾಗ ಅವಳಿಗೆ ಆಶ್ಚರ್ಯವಾಗದೆ ಇರಲಿಲ್ಲ. ಅವನು ಕಾರಿನ ಬಾಗಿಲು ತೆರೆದು ಅವಳನ್ನು ಒಳಗೆ ಆಹ್ವಾನಿಸಿದ. ಇದುವರೆಗೂ ಬಂದ ಗಂಡುಗಳನ್ನೆಲ್ಲಾ ತಿರಸ್ಕರಿಸುತ್ತ ಹಿರಿತನದಲ್ಲಿ ಬೀಗುತ್ತಿದ್ದ ಅವಳು ಅವನ ಆಹ್ವಾನಕ್ಕೆ ಸೋತು ಶರಣಾದಳು.

“ನಾನು ಅದೇ ಸೈಟಿನ ಬಳಿ ಕೆಲಸದ ನಿಮಿತ್ತ ಹೋಗಬೇಕಾಯಿತು. ಮಧ್ಯದಲ್ಲಿ ಹೇಗೂ ನಿಮ್ಮ ಕಾಲೇಜು ಸಿಗುತ್ತದ್ಲಾ ಅಂತ ಈ ದಾರಿಯಾಗಿ ಬಂದೆ,” ಸುನೀಲ್ ‌ಅವಳಿಗೆ ವಿವರಣೆ ಇತ್ತ.

ಈಗ ಮೊದಲಿನಷ್ಟು ಸಂಕೋಚವಿರಲಿಲ್ಲವಾದ್ದರಿಂದ ಅರ್ಚನಾ ಮತ್ತು ಸುನೀಲ್ ‌ಒಬ್ಬರಿಗೊಬ್ಬರ ಜೊತೆಯನ್ನು ಇಷ್ಟಪಡತೊಗಿದರು. ನಿಧಾನವಾಗಿ ಒಬ್ಬರಿಗೊಬ್ಬರು ಹಲವಾರು ವಿಷಯಗಳನ್ನು ಚರ್ಚಿಸುತ್ತಾ ಹೋದಂತೆ, ಅನೇಕ ವಿಷಯಗಳಲ್ಲಿ ಅವರಲ್ಲಿ ಒಮ್ಮತವಿರುವುದು ಕಂಡುಬಂದಿತು. ಅವರ ಮಾತಿನ ಲಹರಿ ಸಾಹಿತ್ಯದಿಂದ ಸಂಗೀತದವರೆಗೆ, ಕ್ರೀಡೆಯಿಂದ ರಾಜಕೀಯ ಸಿನಿಮಾಗಳವರೆಗೆ ಹರಿದು ಬಂದಿತು.

ಸಾಹಿತ್ಯ ಸಂಗೀತದ ವಿಷಯದಲ್ಲಿ ವಿಶೇಷ ಒಲವಿದ್ದ ಅವರಲ್ಲಿ ಅಭಿಪ್ರಾಯ ಏಕಪ್ರಕಾರವಾಗಿತ್ತು. ಉಷಾ ನವರತ್ನರಾಂರವರ `ಹೊಂಬಿಸಿಲು,’ ಟಿ.ಕೆ. ರಾಮರಾವ್ ರವರ `ಮಣ್ಣಿನ ದೋಣಿ,’ ಕೆ.ಎಸ್‌. ನರಸಿಂಹಸ್ವಾಮಿಯವರ `ಮೈಸೂರು ಮಲ್ಲಿಗೆ’ ಕವನಗಳು ಇಬ್ಬರಿಗೂ ಬಹಳ ಪ್ರಿಯವಾಗಿದ್ದವು. ಆದರೆ ಸಂಭಾಷಣೆಯಲ್ಲಿ ಎಲ್ಲೂ ವೈಯಕ್ತಿಕ ಜೀವನದ ಬಗ್ಗೆ ಮಾತು ಬರಲಿಲ್ಲ.  ಇಲ್ಲ ಬೇಕೆಂದೇ ಅವರು ಹೆಚ್ಚಾಗಿ ಪರಸ್ಪರರ ವೈಯಕ್ತಿಕ ಜೀವನದ ಬಗ್ಗೆ ಕೆದಕಿ ಕೇಳಲು ಹೋಗಲಿಲ್ಲ.

ಹೀಗೆ ಇವರು ಮೂರು ದಿನಗಳ ಕಾಲ ಹಸಿರು ಮಾರುತಿಯಲ್ಲಿ ಕಾಲೇಜಿನತ್ತ ಹೊರಟಾಗ, ಅತ್ತ ಪಾರ್ವತಮ್ಮ ಮನಸ್ಸಿನಲ್ಲೇ ಮಂಡಿಗೆ ಮೆಲ್ಲತೊಡಗಿದರು. ಅವರು ಗಮನವಿಟ್ಟು ನೋಡಿದಾಗ, ಅರ್ಚನಾ ಈಗ ಚೆಲ್ಲು ಚೆಲ್ಲಾಟ ಆಡದೆ, ನಡವಳಿಕೆಯಲ್ಲಿ ಗಾಂಭೀರ್ಯ ತಂದುಕೊಂಡು ಅಲಂಕಾರದಲ್ಲೂ ಶ್ರದ್ಧೆ ವಹಿಸತೊಡಗಿದ್ದಳು. ಕಾರಿನಲ್ಲಿ ಹೋಗಿ ಬಂದದ್ದು ಇವರಿಗೆ ಗೊತ್ತಾದರೂ, ಅರ್ಚನಾ ಆ ವಿಷಯವನ್ನು ಬಣ್ಣಿಸಿ ಮಾತನಾಡಲಿಲ್ಲ. ಶಿವಮೂರ್ತಿಗಳು ಇದನ್ನು ಗಮನಿಸಿದರೂ ಅದಕ್ಕೆ ವಿಶೇಷ ಮಹತ್ವ ಕೊಡಲು ಹೋಗಲಿಲ್ಲ. ಆದರೆ ಮಗಳ ಕಣ್ಣುಗಳಲ್ಲಿ ಹೊಸ ಹೊಳಪನ್ನು ಕಂಡ ನಂತರ ಅವರು ಸುನೀಲ್‌ನ ವಿಷಯದಲ್ಲಿ ಆಸಕ್ತಿ ತಳೆದರು.

ಸುನೀಲ್ ‌ಎಲ್ಲಾ ರೀತಿಯಲ್ಲೂ ಅರ್ಚನಾಳಿಗೆ ತಕ್ಕ ವರನಾಗಿದ್ದ. ಒಬ್ಬ ಉತ್ತಮ ಆರ್ಕಿಟೆಕ್ಟ್, ಒಳ್ಳೆಯ ಅಂತಃಕರಣವುಳ್ಳ ಯಾವುದೇ ದುರ್ನಡತೆ ಇಲ್ಲದ, ಉನ್ನತ ಮನೆತನಕ್ಕೆ ಸೇರಿದ, ಎಲ್ಲಾ ಒಳ್ಳೆಯ ಗುಣಗಳ ಆಕರ್ಷಕ ಹುಡುಗನಾಗಿದ್ದ.

ಇದೇನೋ ಸರಿ. ಆದರೆ ಜೀವನದಲ್ಲಿ ಎಲ್ಲ ನೆನೆಸಿದಂತೆ ನಡೆದುಬಿಟ್ಟರೆ ಚಿಂತೆಗೆಲ್ಲಿ ಜಾಗ? ಇದರಲ್ಲಿ ತೊಡಕೊಂದಿತ್ತು. ಸುನೀಲ್ ಎರಡು ವರ್ಷದ ಮಗಳ ತಂದೆ ಮಾತ್ರವಲ್ಲದೆ, ವಿಧುರನೂ ಆಗಿದ್ದ. ಮೊದಮೊದಲು ಶಿವಮೂರ್ತಿಗಳಿಗೆ ತಮ್ಮ ಒಬ್ಬಳೇ ಮುದ್ದಿನ ಮಗಳನ್ನು ಒಬ್ಬ ವಿಧುರನಿಗೆ ಅದೂ ಮಗುವುಳ್ಳವನಿಗೆ ಕೊಡಲು ಮನಸ್ಸು ಬರಲಿಲ್ಲ. ಇದೇ ವಿಷಯವನ್ನು ಎಲ್ಲಾ ಕೋನಗಳಿಂದಲೂ ಅವರು ಮತ್ತೆ ಮತ್ತೆ ಆಲೋಚಿಸಿದರು. ಅದು ಎಷ್ಟು ಕ್ಲಿಷ್ಟವಾಗಿ ತೋರಿತೋ ಅನಂತರ ಅಷ್ಟೇ ಇಷ್ಟವಾಯಿತು. ಆದರೆ ಈಗ ಇದರ ಅಂತಿಮ ತೀರ್ಮಾನವನ್ನು ನಿರ್ಣಯಿಸಬೇಕಾದದ್ದು ಅರ್ಚನಾಳ ಪ್ರೀತಿ ಮಾತ್ರ. ಇದನ್ನು ಅವರು ಪತ್ನಿಗೆ ಸವಿವರಾಗಿ ತಿಳಿಸಿದಾಗ ಪತಿಯ ಮಾತುಗಳಲ್ಲಿ ಅಡಗಿದ್ದ ನಂಬಿಕೆಯನ್ನು ಗುರುತಿಸಿ ಪಾರ್ವತಮ್ಮ ತಾವು ಸಂತೋಷದಿಂದ ಒಪ್ಪಿದರು. ಈ ವಿಷಯವನ್ನು ಅರ್ಚನಾಳಿಗೆ ತಾವಾಗಿಯೇ ತಿಳಿಸುವುದು ಸರಿಯೇ? ಬೇಡ, ಅದನ್ನು ಅವಳು ತಾನಾಗಿಯೇ ತಿಳಿದುಕೊಳ್ಳಲಿ, ಸುನೀಲ್ ಸ್ವತಃ ತಾನೇ ತಿಳಿಸಿದರೆ ಇನ್ನೂ ಒಳ್ಳೆಯದು. ಓದು ವಿದ್ಯೆ ಕಲಿತು ಪ್ರೌಢವಯಸ್ಕರಾದ ಅವರೇ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲಿ, ಎಂದು ಪಾರ್ವತಮ್ಮ ಶಿವಮೂರ್ತಿಗಳು ಸುಮ್ಮನಾದರು.

ಅರ್ಚನಾ, ತನ್ನ ಪಾಡಿಗೆ ತಾನು ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಳು. ಸುನೀಲ್‌ನ ಬಗ್ಗೆ ಸುಂದರ ಕನಸುಗಳನ್ನು ಕಟ್ಟುವುದು ಮಾತ್ರ ಅವಳ ಕೆಲಸವಾಗಿತ್ತು. ಸುನೀಲ್ ‌ಅವಳೊಂದಿಗೆ ಎಂದೂ ಗಟ್ಟಿಯಾಗಿ ಗದರಿ ಮಾತನಾಡಿದವನೇ ಅಲ್ಲ. ಒಮ್ಮೊಮ್ಮೆ ಅವಳೇ ಅವನೊಂದಿಗೆ ಜಗಳ ತೆಗೆದು, ಅನಂತರ ಕೂಡಲೇ ರಾಜಿಗೆ ಬರುತ್ತಿದ್ದಳು.

ಒಮ್ಮೊಮ್ಮೆ ಅವಳ ಮಹತ್ವಾಕಾಂಕ್ಷಿಯಾದ ವಿವೇಕ ಅವಳಿಗೆ ಸುನೀಲ್ ‌ಬಗ್ಗೆ ಏನೂ ತಿಳಿದಿಲ್ಲವಲ್ಲ ಎಂದು ಗದರುತ್ತಿದ್ದರೆ, ಅವಳ ಹೃದಯ ಅದಕ್ಕೆ ಉತ್ತರವಾಗಿ ತನಗೆಲ್ಲಾ ಗೊತ್ತಿದೆ ಎನ್ನುತ್ತಿತ್ತು. ಒಮ್ಮೊಮ್ಮೆ ಅವಳಿಗೆ ಅವನೂ ಸಹ ತನ್ನ ಬಗ್ಗೆ ಹೀಗೆ ಚಿಂತಿಸುತ್ತಿರಬಹುದೇ ಎಂದು ತರ್ಕಿಸುತ್ತಿದ್ದಳು. ಆದರೆ ಎಂದೂ ಅವರು ಅದರ ಬಗ್ಗೆ ಚರ್ಚಿಸಲಿಲ್ಲ. ಸ್ನೇಹ ಪರಿಪಕ್ವವಾಗಿ, ಪ್ರೇಮ ಆಳವಾಗಿ ಬೇರೂರಿದ ನಂತರ, ಒಂದು ಶುಕ್ರವಾರ ಸುನೀಲ್ ಅರ್ಚನಾಳಿಗೆ ನಂಬಲಾಗದ ವಿಷಯ ತಿಳಿಸಿದ. ಅವರು ಕಾರಿನಲ್ಲಿ ಕುಳಿತು ಕಾಲೇಜಿನತ್ತ ಹೊರಟಿದ್ದರು.

“ನನಗೊಬ್ಬಳು ಪುಟ್ಟ ಮಗಳಿದ್ದಾಳೆ. ಅವಳನ್ನು ನಿನಗೆ ಪರಿಚಯಿಸಬೇಕೂಂತ…. ಅವಳನ್ನು ಈ ದಿನ ನಿಮ್ಮ ಮನೆಗೆ ಕರೆತರಲೇ….?” ಅವನು ಅಂದಿನ ಹವಾಮಾನದ ಬಗ್ಗೆ ತಿಳಿಸುವ ಹಾಗೆ ಬಹಳ ಸಹಜವಾಗಿ ಹೇಳಿದ.

ಇದನ್ನು ಕೇಳಿಸಿಕೊಂಡ ಅರ್ಚನಾ ಮುಖದಲ್ಲಿ ಯಾವುದೇ ಭಾವನೆ ತೋರಿಸದಿದ್ದರೂ, ಗಂಟಲಲ್ಲಿ ಏನೋ ಸಿಕ್ಕಿಕೊಂಡಂತಾಗಿ, ಉಸಿರು ಬಿಡಲಾಗದೆ ಚಡಪಡಿಸಿದಳು. ಅವಳು ಕನಸು ಮನಸ್ಸಿನಲ್ಲಿಯೂ ಸುನೀಲ್ ‌ವಿವಾಹಿತನಾಗಿರಬಹುದೆಂದು ಬಗೆದಿರಲಿಲ್ಲ. ಅವನನ್ನು ಇನ್ನೂ ಬ್ರಹ್ಮಚಾರಿ ಎಂದೇ ತಿಳಿದಿದ್ದಳು. ಛೇ! ಈ ವಿಷಯನ್ನು ಇವನು ಮೊದಲೇ ತಿಳಿಸದೆ ನನ್ನ ಕೊರಳು ಕೊಯ್ದನಲ್ಲಾ? ಮನಸ್ಸಿನ ಒಳದನಿಯೊದು ಅದಕ್ಕೆ ಉತ್ತರವಾಗಿ, ತಾವಿಬ್ಬರೂ ಎಂದೂ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸಿರಲೇ ಇಲ್ಲವಲ್ಲ ಎಂದು ಸಮಾಧಾನ ಹೇಳಿತು. ಪ್ರೀತಿಯಲ್ಲಿ ಇಷ್ಟು ಆಳವಾಗಿ ಮುಳುಗಿದ ಮೇಲೆ ತಿರಸ್ಕರಿಸಲು ಸಾಧ್ಯವೇ? ಆದರೆ ಅವನು ತನ್ನ ಮದುವೆ ಮಗಳ ಬಗ್ಗೆ ತಿಳಿಸದೆ ವಿಶ್ವಾಸದ್ರೋಹವೆಸಗಿದ್ದಾನೆ ಎಂದೇ ತೀರ್ಮಾನಿಸಿದಳು. ಆದಷ್ಟೂ ತನ್ನ ಭಾವನೆಗಳನ್ನು ನಿಯಂತ್ರಿಸುತ್ತ ಅರ್ಚನಾ ಶಾಂತವಾಗಿ ಕೇಳಿದಳು?

“ಸುನೀಲ್‌, ನಿಮಗೆ ಹೆಂಡತಿ ಮಗಳಿರುವ ವಿಚಾರ ನನಗೇಕೆ ತಿಳಿಸಲೇ ಇಲ್ಲ?”

“ನನಗೊಬ್ಬಳು ಮಗಳಿದ್ದಾಳೆ. ಆದರೆ ನನಗೆ ಹೆಂಡತಿಯಿಲ್ಲ ಅರ್ಚನಾ, ನಾನೊಬ್ಬ ವಿಧುರ.” ಅವನು ತಣ್ಣಗಿನ ದನಿಯಲ್ಲಿ ಇದನ್ನು ಹೇಳಿಮುಗಿಸಿ, ಒಮ್ಮೆಲೇ ಸಮ್ಮಿಶ್ರ ಭಾವನೆಗಳು ಹಾದುಹೋದವು. ಅವಳ ಮುಖವನ್ನೇ ದಿಟ್ಟಿಸಿದ. ಅವಳಲ್ಲಿ ಅಪಾರ ಪ್ರೀತಿಯನ್ನು ಬೆಳೆಸಿಕೊಂಡಿದ್ದ ಸುನೀಲ್‌ಗೆ ಅವಳನ್ನು ತನ್ನ ಎದೆಯಲ್ಲಿ ಹುದುಗಿಸಿಕೊಂಡು ಅವಳ ಎಲ್ಲಾ ಆತಂಕಗಳನ್ನೂ ನಿವಾರಿಸಬೇಕೆನ್ನಿಸಿತು. ಆದರೆ ಅವಳು, ತಾನು ಯಾವ ಸ್ಥಿತಿಯಲ್ಲಿದ್ದೇನೋ ಹಾಗೆ ಸ್ವೀಕರಿಸಲು ಸಿದ್ಧಳಿದ್ದಾಳೋ ಅಥವಾ ಅವಳಿಗೆ ಬೇಕಾದ ಸ್ಥಿತಿಯಲ್ಲಿದ್ದರೆ ಮಾತ್ರ ತನ್ನನ್ನು ಒಪ್ಪುತ್ತಾಳೋ ಎಂಬ ಜಿಜ್ಞಾಸೆಗೆ ಒಳಗಾದ.

“ಹಾಗಾದರೆ ಈ ದಿನ ಸ್ನೇಹಾಳನ್ನು ಕರೆದು ತರಲೇ?” ಎಂದು ಮತ್ತೆ ನೆನಪಿಸಿದ.

“ಖಂಡಿತಾ ಕರೆದುಕೊಂಡು ಬನ್ನಿ. ನಾನು ಸ್ನೇಹಾಳನ್ನು ಎದುರುಗೊಳ್ಳಲು ಕಾಯುತ್ತಿರುತ್ತೇನೆ,” ಕಾಲೇಜಿನ ಮುಂದೆ ಕಾರಿನಿಂದ ಇಳಿಯುತ್ತ ನಿರ್ವಿಕಾರವಾಗಿ ನುಡಿದಳು ಅರ್ಚನಾ.

ಆ ದಿನ ಅವಳ ಮನಸ್ಸು ಏಕಾಗ್ರತೆಯಿಂದ ಕೆಲಸದಲ್ಲಿ ಗಮನವಿಡಲು ಸಾಧ್ಯವಾಗದೆ ಬೇಗನೆ ಮನೆಗೆ ಮರಳಿ ಬಂದಾಗ, ಪಾರ್ವತಮ್ಮನಿಗೆ ಆಶ್ಚರ್ಯವಾಗಲೇ ಇಲ್ಲ. ಅರ್ಚನಾಳ ಮುಖ ನೋಡುತ್ತಲೇ ಅವರಿಗೆ ಎಲ್ಲಾ ತಿಳಿದುಹೋಯಿತು.

“ಹುಷಾರಾಗಿ ಇದ್ದೀಯೇನಮ್ಮಾ?” ಎಂದು ವಿಚಾರಿಸಿಕೊಂಡರು.

“ನಾನು ಸರಿಯಾಗೇ ಇದ್ದೀನಮ್ಮ. ಯಾಕೋ ಸ್ವಲ್ಪ ತಲೆ ನೋಯುತ್ತಿತ್ತು. ಪಾಠ ಮಾಡಲಾಗದೆ ಬಂದುಬಿಟ್ಟೆ,” ಅಡುಗೆಮನೆಗೆ ಬಂದು ಒಂದು ಲೋಟ ತಣ್ಣೀರನ್ನು ಗಟಗಟನೆ ಕುಡಿದವಳೇ, “ನಿನಗೆ ಗೊತ್ತೇನಮ್ಮ…. ಸುನೀಲ್ ವಿಧುರನಂತೆ,” ಎಂದಳು. `ಓ…. ಮಗಳ ಮನಸ್ಸಿನ ದುಗುಡಕ್ಕೆ ಇದೇನಾ ಕಾರಣ?’ ಎಂದುಕೊಂಡ ಪಾರ್ವತಮ್ಮ ಅವಳ ಮುಖವನ್ನೇ ದಿಟ್ಟಿಸಿದಾಗ, ಅರ್ಚನಾಳ ಕಣ್ಣುಗಳಲ್ಲಿ ಸುನೀಲ್‌ನ ಬಗ್ಗೆ ಇದ್ದ ಪ್ರೀತಿಯ ಕಾರಣ, ಸಂದಿಗ್ಧತೆ ಸೆಲೆಯೊಡೆದಿತ್ತು.

“ಅದು ನಮಗೆ ಗೊತ್ತಿತ್ತಮ್ಮ,” ಎಂದರಾಕೆ.

ಈ ಬಾರಿ ಆಶ್ಚರ್ಯಗೊಳ್ಳುವ ಸರದಿ ಅರ್ಚನಾಳದಾಯಿತು. “ಹಾಗಾದರೆ….. ನನಗ್ಯಾಕಮ್ಮ ಹೇಳಲಿಲ್ಲ?”

“ಈ ವಿಷಯವನ್ನು ಅವರೇ ನಿನಗೆ ತಿಳಿಸಲಿ ಎಂದು ನಾವು ಸುಮ್ಮನಿದ್ದೆ. ಈಗ ತಲೆ ಕೆಡಿಸಿಕೊಳ್ಳದೆ ಈ ಕಾಫಿ ಕುಡಿದು, ನಿಮ್ಮ ತಂದೆಯೊಂದಿಗೆ ಮಾತಾಡುತ್ತಿರು. ಬೇಗನೇ ಅಡುಗೆ ಮುಗಿಸುತ್ತೇನೆ. ಊಟವಾದ ನಂತರ ಇದರ ಬಗ್ಗೆ ಮಾತಾಡೋಣ,” ಎಂದರು.

ಪಾರ್ವತಮ್ಮ ತಾವು ಮಗಳಿಗೆ ಸಲಹೆ ಕೊಡುವುದಕ್ಕೆ ಮುನ್ನ, ಮಗಳೇ ಈ ಬಗ್ಗೆ ಚೆನ್ನಾಗಿ ಆಲೋಚಿಸಲಿ ಎಂದು ಆಶಿಸಿದರು.

ಅರ್ಚನಾ ತಂದೆಯ ಬಳಿ ಮಿಕ್ಕೆಲ್ಲ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದಳಾದರೂ ತನಗೇನಾದರೂ ಬೇಕಿದ್ದಲ್ಲಿ ಅದನ್ನು ತಾಯಿಯ ಮುಂದೆ ಮಾತ್ರ ಆಡುತ್ತಿದ್ದಳು. ಈ ವಿಷಯದಲ್ಲಿ ತಮಗಿಂತ ಪಾರ್ವತಿಯೇ ಚೆನ್ನಾಗಿ ವಿಮರ್ಶಿಸಿ ಸಲಹೆ ನೀಡುತ್ತಾಳೆ ಎಂದು ತಿಳಿದಿದ್ದರಿಂದ, ಶಿವಮೂರ್ತಿಗಳು ಈ ವಿಷಯದ ಬಗ್ಗೆ ಮಗಳ ಬಳಿ ಹೆಚ್ಚಾಗಿ ಮಾತು ಬೆಳೆಸಲಿಲ್ಲ. ಜವಾಬ್ದಾರಿಯನ್ನು ಪಾರ್ತಮ್ಮನಿಗೇ ಬಿಟ್ಟರು.

ಎಂದಿನಂತೆ ಮಾಮೂಲಾಗಿ ಊಟ ಮುಗಿಯಿತು. ತಾಯಿಯ ಕೈ ಅಡುಗೆಯ ರುಚಿಯನ್ನು ತುಂಬಾ ಮೆಚ್ಚುತ್ತಿದ್ದ ಅರ್ಚನಾ ಮತ್ತಷ್ಟು ಕೇಳಿ ಬಡಿಸಿಕೊಂಡು ತಿಂದಳು. ಎಲ್ಲರೂ ಒಟ್ಟಾಗಿ ಊಟ ಮಾಡಿದ ಸಂತೃಪ್ತಿ ಅಲ್ಲಿ ತುಂಬಿತ್ತು. ಆನಂತರ ಉಳಿದ ಅಡುಗೆಯನ್ನು ಮುಚ್ಚಿಟ್ಟು ಮೇಜನ್ನು ಶುಚಿಗೊಳಿಸುವಲ್ಲಿ ಅರ್ಚನಾ ತಾಯಿಗೆ ನೆರವಾದಳು. ಹೆಂಗಸರು ಕೆಲಸ ಮುಗಿಸಿ ಬರಲಿ ಎಂದು ಶಿವಮೂರ್ತಿಗಳು ಎಲೆ ಅಡಕೆ ಹಿಡಿದು ತಮ್ಮ ಮಲಗುವ ಕೋಣೆಯಲ್ಲಿ ಹೋಗಿ ಕುಳಿತರು.

ಪತಿಗೆ ಎಲೆ ಮಡಿಸಿಕೊಡುತ್ತಾ ಪಾರ್ವತಮ್ಮ ಮಗಳೊಂದಿಗೆ ಮಾತಿಗಿಳಿದರು, “ಈಗ ನಿನ್ನ ಸಮಸ್ಯೆ ಏನಮ್ಮಾ?”

“ಸುನೀಲ್ ‌ವಿಧುರ ಮಾತ್ರವಲ್ಲದೆ, ಎರಡು ವರ್ಷದ ಮಗಳೂ ಇದ್ದಾಳಂತೆ.”

“ಅದಕ್ಕೆ ಏನಾಯ್ತೀಗ?” ಎಂದರು.

“ಇದೇನು ಹೀಗೆ ಕೇಳುತ್ತಿದ್ದೀ?” ಅರ್ಚನಾ ವಿವರಿಸತೊಡಗಿದಳು, “ಮದುವೆಯೇ ಬೇಡ ಬೇಡ ಅಂತಿದ್ದಳು ಕೊನೆಗೆ ಹೋಗಿ ಹೋಗಿ ಸುನೀಲ್‌‌ನ ಪ್ರೀತಿಯಲ್ಲಿ ಸಿಕ್ಕಿಬಿದ್ದೆ. ಓಹ್‌! ನಾನು ಒಬ್ಬ ವಿಧುರನನ್ನು ಪ್ರೀತಿಸಬೇಕಿತ್ತೆ? ಅದೂ ಮಗಳಿರುವ ತಂದೆಯನ್ನು…. ನನಗೆ ಏನೂ ತೋಚುತ್ತಿಲ್ಲ.”

ಪಾರ್ವತಮ್ಮ ನವಿರಾಗಿ ಮಗಳ ತಲೆಯನ್ನು ನೇವರಿಸುತ್ತಾ, “ಅಲ್ಲಮ್ಮ ಅರ್ಚನಾ….. ನೀನು ಯಾವಾಗಲೂ ಆಶಾವಾದಿಯಾಗಿದ್ದವಳು, ಸಮಸ್ಯೆಗಳನ್ನು ನೀನೇ ನಿವಾರಿಸಿಕೊಳ್ಳುತ್ತಿದ್ದ ರೀತಿ ಕಂಡು ನಾನೇ ಎಷ್ಟೋ ಸಲ ಅಚ್ಚರಿಪಡುತ್ತಿದ್ದೆ. ಕೆಲವು ಸಲ ಬಹಳ ಜಟಿಲವಾಗಿ ತೋರುವ ಸಮಸ್ಯೆಗಳಲ್ಲಿ ಒಮ್ಮೊಮ್ಮೆ ಏನೂ ತೊಡಕೇ ಇರುವುದಿಲ್ಲ. ಅದನ್ನು ಜಾಣ್ಮೆಯಿಂದ ಸರಿ ಮಾಡಿಕೊಳ್ಳಬೇಕು.

“ನೀನು ಬಯಸಿ ಬಯಸಿ  ಸುನೀಲ್‌‌ನನ್ನು ಪ್ರೀತಿಸಿದೆ. ಪ್ರೀತಿ ಎನ್ನುವುದು ಹೇಗೆ ಬೆಳೆಯಿತು, ಏಕೆ ಬೆಳೆಯಿತು ಎನ್ನುವುದು ತರ್ಕಕ್ಕೆ ನಿಲುಕದ ವಿಷಯ. ಪ್ರೀತಿಸುವುದು ಹೆಚ್ಚಲ್ಲ, ಅದೇ ವ್ಯಕ್ತಿಯಿಂದ ಪ್ರೇಮಿಸಲ್ಪಡುವುದು ಮಹತ್ವದ ಸಂಗತಿ.”

“ಅದೆಲ್ಲ  ಸರಿಯಮ್ಮ…. ಅವರು ವಿಧುರ ಎಂಬುದನ್ನು ನಾನು ಸ್ವೀಕರಿಸುತ್ತೇನೆ. ಆದರೆ ಅಮ್ಮ, ಅವರ ಮಗಳನ್ನು ನಾನು ಹೇಗೆ ಒಪ್ಪಿಕೊಳ್ಳಲಿ?”

“ಹಾಗಾದರೆ ಇನ್ನು ಮುಂದೆ ಅವರನ್ನು ನೋಡುವುದು, ಪ್ರೀತಿಸುವುದನ್ನು ಬಿಟ್ಟುಬಿಡು,” ಪಾರ್ವತಮ್ಮ ಎಚ್ಚರಿಸಿದರು.

“ಅದು ಸಾಧ್ಯವೇ ಇಲ್ಲಾ…..! ಸುನೀಲ್‌‌ರನ್ನು ಬಿಟ್ಟು ಬೇರೆ ಯಾವ ಗಂಡಸನ್ನೂ ನಾನು ಮದುವೆಯಾಗಲು ಸಾಧ್ಯವಿಲ್ಲ.”

“ನೀನು ಅವರನ್ನು ಅಷ್ಟೊಂದು ಪ್ರೀತಿಸುತ್ತೀಯ?”

“ಎಲ್ಲದಕ್ಕಿಂತ ಮಿಗಿಲಾಗಿ ಅಮ್ಮ, ಎಲ್ಲಕ್ಕಿಂತ ಹೆಚ್ಚಾಗಿ! ಆದರೆ ನಾನು ಅವರನ್ನು ಉತ್ಕಟವಾಗಿ ಪ್ರೀತಿಸುವ ಹಾಗೆ, ಅವರೂ ನನ್ನನ್ನು ಪ್ರೀತಿಸಲು ಸಾಧ್ಯವೇ? ಅದೂ ಬೇರೊಬ್ಬ ಹೆಂಗಸಿಗೆ ಹುಟ್ಟಿದ ಮಗಳಿಗೆ ತಂದೆಯಾದರಿಂದ, ನನಗೆ ಪ್ರೀತಿ ಸಿಗುತ್ತದೆಯೇ? ಆ ಹುಡುಗಿ ನಮ್ಮಿಬ್ಬರ ಮಧ್ಯೆ ದೊಡ್ಡ ತೊಡಕಾಗಿ ನಿಂತಿದ್ದಾಳೆ.”

“ಅರ್ಚನಾ, ನಾನು ನಿನ್ನನ್ನು ಹೆರುವ ಮೊದಲು ನಿಮ್ಮ ತಂದೆಯನ್ನು ಮಾತ್ರ ಪ್ರೀತಿಸುತ್ತಿದ್ದೆ. ಅದಕ್ಕಾಗಿ ನಿನಗೆ ಪ್ರೀತಿ ಕಡಿಮೆ ಮಾಡಿದೆನಾ? ಅಥವಾ ಅವರನ್ನು ನಾನು ನಿರ್ಲಕ್ಷಿಸಿದ್ದೇನಾ? ನೀನು ನಮ್ಮಿಬ್ಬರನ್ನೂ ಬೇರೆ ಬೇರೆಯಾಗಿ ಪ್ರೀತಿಸುತ್ತೀಯಾ? ಮಗು, ಪ್ರೀತಿ ಎನ್ನುವುದು ಸೇರು ಪಾವುಗಳಲ್ಲಿ ಅಳೆದು ಹಂಚುವಂಥದಲ್ಲ. ಅದು ಸದಾ ಉಕ್ಕಿ ಹರಿಯುವ ನದಿಯಂತೆ, ಎಂದೂ ಬತ್ತದ ಬಟ್ಟಲು. ನೀನು ಪ್ರೀತಿಯನ್ನು ಹಂಚಿದಷ್ಟೂ ಅದು ಮನಸ್ಸಿನಲ್ಲಿ ಮತ್ತಷ್ಟು ಉಕ್ಕಿ ಬರುತ್ತದೆ. ಕೂಡಿ ಬಾಳಿದರೆ ಕೋಟಿ ಸುಖ ಎಂದು ಗೊತ್ತಿಲ್ಲವೇ?

“ಸುನೀಲ್ ‌ತಮ್ಮ ಮಗಳನ್ನು ಮಮತೆಯಿಂದ ನೋಡಿಕೊಳ್ಳುತ್ತಾರೆ ಎಂದ ಮಾತ್ರಕ್ಕೆ ಅವರು ನಿನ್ನನ್ನು ಪ್ರೀತಿಸುವುದಿಲ್ಲ ಎನ್ನುವುದು ಮೂರ್ಖತನ. ಆ ಮಗುವಿನ ವಿಷಯವಾಗಿ ಒಂದು ತೊಡಕು ಎಂದು ಹೇಳಿದೆಯಲ್ಲ, ಅದು ತಪ್ಪು. ಅವಳು ನಿಮ್ಮಿಬ್ಬರ ಒಲವಿನ ಬಾಂಧವ್ಯಕ್ಕೆ ಸುವರ್ಣ ಸೇತುವೆಯಾಗಿ ಬರಲಿದ್ದಾಳೆ. ಮಗುವಿನ ಮಮತೆಯಲ್ಲಿ ಮತ್ಸರವಿರಲು ಸಾಧ್ಯವೇ?

“ಅರ್ಚನಾ ಇದರ ಬಗ್ಗೆ ಮತ್ತಷ್ಟು ಯೋಚಿಸು. ನಿರ್ಧಾರ ನಿನ್ನ ಭವಿಷ್ಯಕ್ಕೆ ಬುನಾದಿಯಾಗಲಿದೆ. ನೀನು ಬಯಸಿದ, ನಿನ್ನನ್ನು ಪ್ರೀತಿಸುತ್ತಿರುವ ಗಂಡಸನ್ನೇ ಮದುವೆಯಾಗುತ್ತಿದ್ದಿ ಎಂಬುದನ್ನು ಮಾತ್ರ ಮರೆಯಬೇಡ.”

ತಾಯಿಯಿಂದ ಬಂದ ಸಲಹೆಗಳನ್ನು ಎಚ್ಚರಿಕೆಯಿಂದ ಕೇಳಿಸಿಕೊಂಡ ಅರ್ಚನಾ ಅನಂತರ ತನ್ನ ರೂಮಿಗೆ ಹೋದಳು. ಪಾರ್ವತಮ್ಮನೂ ಮಗಳಿಗೆ ಸೂಕ್ತವಾದ ಸಲಹೆಗಳನ್ನೇ ಕೊಟ್ಟಿದ್ದೇನೆ, ಮಗಳು ಸಹ ಒಳ್ಳೆಯ ನಿರ್ಧಾರಕ್ಕೆ ಬರುತ್ತಾಳೆ ಎಂಬ ವಿಶ್ವಾಸದಿಂದ ಮಲಗಲು ಹೊರಟರು.

ತನ್ನ ಹಾಸಿಗೆಯಲ್ಲಿ ಉರುಳಿದ ಅರ್ಚನಾ ಮೊದಲಿನಿಂದ ಜರುಗಿದ ಘಟನೆಗಳನ್ನು ಚಿತ್ರಿಸಿಕೊಳ್ಳತೊಡಗಿದಳು. ತಾಯಿಯ ಮಾತುಗಳನ್ನು ನೆನಪಿಸಿಕೊಂಡಳು. ಸುನೀಲ್‌ನ ಒಂದು ಪ್ರೇಮಮಯ ಕಣ್ಣೋಟಕ್ಕಾಗಿ ಅವಳ ಹೃದಯ ಕಾತುರತೆಯಿಂದ ನಿರೀಕ್ಷಿಸುತ್ತಿತ್ತು. ಅಂಥ ಪವಿತ್ರ ಪ್ರೀತಿ, ಸಂತೋಷಗಳನ್ನು ಕಳೆದುಕೊಳ್ಳಲು ಅವಳು ಸುತಾರಾಂ ತಯಾರಿರಲಿಲ್ಲ.

ಮಕ್ಕಳಿಗೆ ಬೇಕಾದುದೆಲ್ಲ ಮಮತೆ ವಾತ್ಸಲ್ಯ. ಅವರಿಗೆ ಗೊತ್ತಿರುವುದೆಲ್ಲ ಮಮತೆಯ ನಲ್ನುಡಿಗಳಷ್ಟೆ. ಥಟ್ಟನೇ, ಅರ್ಚನಾಳಿಗೆ ತನ್ನ ಬಗ್ಗೆಯೇ ಕೆಡುಕೆನಿಸಿತು. ಅವಳು ಸ್ತ್ರೀ ಸಹಜ ಮಾತ್ಸರ್ಯಕ್ಕೊಳಗಾಗಿ ಪತಿಯ ಪ್ರೀತಿ ತನಗೆ ಮಾತ್ರ ಮೀಸಲಾಗಿರಲಿ ಎಂದು ಮಗುವನ್ನು ದ್ವೇಷಿಸುವ ಸ್ವಾರ್ಥಿಯಾಗಿದ್ದಳು.

ಹೌದು! ತಾಯಿ ಹೇಳಿದ್ದೆಲ್ಲ ಅಕ್ಷರಶಃ ನಿಜ. ಪ್ರೀತಿ ಎನ್ನುವ ಹೊಳೆಗೆ ಎಲ್ಲಾದರೂ ಮಿತಿಯುಂಟೇ? ಇದನ್ನೆಲ್ಲ ಚಿಂತಿಸಿಯೇ ಸುನೀಲ್ ‌ತನಗೆ ಯಾವ ವಿಷಯವನ್ನೂ ಮೊದಲೇ ಹೇಳಲಿಲ್ಲವೇನೋ ಎಂದು ಅನ್ನಿಸಿದಾಗ ತಾನು ಮತ್ತಷ್ಟು ಕುಬ್ಜಳಾದಂತೆ ಭಾವಿಸಿದಳು.

ಆಗಲೇ ಅವಳು ಥಟ್ಟನೆ ನಿರ್ಣಯ ಕೈಗೊಂಡಳು. ದೊಡ್ಡ ಭಾರವೊಂದು ಭುಜದಿಂದ ಇಳಿದಂತಾಗಿ, ಹಾಯಾಗಿ ಮಲಗಿ, ಸಣ್ಣ ನಿದ್ದೆ ತೆಗೆದಳು. ಸಂಜೆ ಐದು ಗಂಟೆಯ ಹೊತ್ತಿಗೆ, ಅರ್ಚನಾ ಲಕ್ಷಣವಾಗಿ ಸೀರೆ ಉಟ್ಟುಕೊಂಡು, ಅಲಂಕೃತಳಾಗಿ ಸುನೀಲ್ ‌ಮತ್ತವನ ಮಗಳ ಬರುವಿಗಾಗಿ ಕಾದಳು. ಸ್ವಲ್ಪ ಹೊತ್ತಿಗೆಲ್ಲ ಹಸಿರು ಮಾರುತಿ ಅವರ ಮನೆಯ ಮುಂದೆ ಬಂದು ನಿಂತಿತು. ತನ್ನ ಬಲಿಷ್ಠ ತೋಳುಗಳಲ್ಲಿ ಮಗಳನ್ನು ಎದೆಗವುಚಿಕೊಂಡು ಸುನೀಲ್ ನಡೆದು ಬಂದು, ಅವಳ ಮುಂದೆ ನಿಂತ. “ಓಹ್‌! ಮುದ್ದಾದ ಮಗು,” ಸ್ನೇಹಾಳ ಮುಖ ಕಂಡೊಡನೆ ಸಂಭ್ರಮದಿಂದ ಉದ್ಗರಿಸಿದಳು ಅರ್ಚನಾ. ಮಗು ಬಹಳ ಮುದ್ದಾಗಿತ್ತು. ಅರಳಿದ ಬಟ್ಟಲು ಕಣ್ಣುಗಳು, ಗುಂಗುರು ಗುಂಗುರಾದ ದಟ್ಟ ಕಪ್ಪು ಕೂದಲು, ತುಂಬಿದ ಕೆನ್ನೆ, ಗಲ್ಲಗಳು, ಪುಟ್ಟ ಕೈಗಳು…

ಅರಳಿದ ಅರ್ಚನಾಳ ಮುಖ ಕಂಡೊಡನೆಯೇ ಸುನೀಲ್‌‌ಗೆ ತಾನು ಗೆದ್ದೆ ಎನಿಸಿತು. ತನ್ನ ಮಗಳನ್ನು ಅರ್ಚನಾ ಪ್ರೀತಿಯಿಂದ ಸ್ವಾಗತಿಸುತ್ತಾಳೋ ಇಲ್ಲವೋ ಎಂಬ ಅವನ ಅನುಮಾನ ಹೇಳ ಹೆಸರಿಲ್ಲದೆ ಹೋಯಿತು.

ತನ್ನನ್ನೇ ಕುತೂಹಲದಿಂದ ದಿಟ್ಟಿಸುತ್ತಿದ್ದ ಸ್ನೇಹಾಳತ್ತ, ನಸುನಗುತ್ತ ಕೈ ಚಾಚಿದಳು ಅರ್ಚನಾ. ಅರ್ಚನಾಳ ಮುಖದಲ್ಲಿದ್ದ ವಾತ್ಸಲ್ಯ ಭಾವವನ್ನು ಗುರುತಿಸಿದ ಮಗು ಸ್ವಲ್ಪವೂ ಕೊಸರಾಡದೆ, ಅವಳ ಬಳಿ ಜಿಗಿದು ಬಂದಿತು. ಸುನೀಲ್ ‌ಅರ್ಚನಾ ಇಬ್ಬರೂ ಅಂಗಳದಲ್ಲಿ ಹಾಕಿದ್ದ ಕುರ್ಚಿಗಳತ್ತ ಬಂದು ಕುಳಿತರು. ಒಂದು ಕ್ಷಣ ಇಬ್ಬರೂ ಮಾತಿಲ್ಲದೆ, ಸಂತೋಷದಿಂದ ಮೂಕರಾಗಿದ್ದರು.

ಒಂದು ಕ್ಷಣ ತಡೆದು ಸುನೀಲ್ ‌ಮೃದುವಾಗಿ ಹೇಳಿದ, “ಅರ್ಚನಾ, ನಾನು ನಿನಗೆ ಸ್ನೇಹಾ ಹಾಗೂ ಅವಳ ತಾಯಿಯ ಬಗ್ಗೆ ಮೊದಲೇ ತಿಳಿಸಬೇಕು ಅಂದುಕೊಳ್ಳುತ್ತಿದ್ದೆ. ಆದರೆ ನನಗೆ ಅರಿಯದೆ ಒಂದು ಭೀತಿ ಕಾಡುತ್ತಿತ್ತು. ನನ್ನ ಮನಸ್ಸಿನಾಳದಲ್ಲಿ ನಾನು ಈ ವಿಷಯನ್ನು ನಿನಗೆ ತಿಳಿಸಿದಾಕ್ಷಣ ನಿನ್ನನ್ನು ಕಳೆದುಕೊಳ್ಳಬೇಕಾಗುತ್ತದೇನೋ ಎಂದು ಬಹಳ ಹೆದರಿದ್ದೆ.

“ಅರ್ಚನಾ, ನಾನು ನಿನ್ನನ್ನು ನೋಡಿದ ಮೊದಲ ದಿನವೇ, ಅದೂ ಒದ್ದೆಮುದ್ದೆಯಾಗಿ ನಿಂತಿದ್ದೆಯಲ್ಲ…. ನನ್ನ ಹೃದಯವನ್ನು ಆಗಲೇ ನೀನು ಆಕ್ರಮಿಸಿಬಿಟ್ಟಿದ್ದೆ. ಲತಾಳನ್ನು ಕಳೆದುಕೊಂಡ ನಂತರ ನನ್ನನ್ನು ಮೊದಲ ಬಾರಿಗೆ ಆಕರ್ಷಿಸಿದ ಹೆಣ್ಣು ನೀನೇ.”

ಸುನೀಲ್ ‌ಮುಖವನ್ನೇ ದಿಟ್ಟಿಸುತ್ತಿದ್ದ ಅರ್ಚನಾ, ತೀರಿಕೊಂಡ ಹೆಂಡತಿಯ ಹೆಸರನ್ನು ಉಚ್ಚರಿಸುವಾಗ ಅವನ ಮುಖದಲ್ಲಿ ಸುಳಿದ ನೋವನ್ನು ಗಮನಿಸಿದಳು. ಅರ್ಚನಾ ಅವನ ಬಲಿಷ್ಠ ಹಸ್ತಗಳನ್ನು ತನ್ನ ಹಸ್ತಗಳಲ್ಲಿ ತೆಗೆದುಕೊಳ್ಳುತ್ತಾ, “ಸುನೀಲ್‌, ಲತಾರಿಗೆ ಏನಾಗಿತ್ತು?” ಎಂದು ಕೇಳಿದಳು.

“ಸ್ನೇಹಾಳ ಹೆರಿಗೆಯಲ್ಲೇ ಲತಾ ಬಹಳ ಕಷ್ಟ ಅನುಭವಿಸಿದಳು. ಆನಂತರ ಒಂದು ವಾರ ಕಳೆದ ಮೇಲೆ, ಜಾಂಡೀಸ್‌ಗೆ ತುತ್ತಾಗಿ ಬಹಳ ನರಳಿ ಹೋಗಿಬಿಟ್ಟಳು. ಓಹ್‌! ಅರ್ಚನಾ, ನಾನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆ ಗೊತ್ತಾ? ಅವಳು ತೀರಿಕೊಂಡಾಗ ಪ್ರಪಂಚವೇ ಶೂನ್ಯವಾಗಿ ತೋರಿತು. ಸ್ನೇಹಾಳಿಗಾಗಿ ಬದುಕುಳಿದೆ.”

ಅವನು ನಸುನಗುತ್ತಲಿದ್ದ ಸ್ನೇಹಾಳ ಮುಖವನ್ನು ದಿಟ್ಟಿಸಿದ. ಅವನಿಗೆ ಪ್ರೀತಿ ಉಕ್ಕಿ ಬಂತು. ಅರ್ಚನಾಳ ಮಡಿಲಲ್ಲಿ ಹಾಯಾಗಿ ಒರಗಿದ್ದ ಪುಟ್ಟ ಸ್ನೇಹಾ, ಯಾವುದೇ ಜಂಜಾಟಗಳನ್ನರಿಯದೇ ಹಾಯಾಗಿ ಅರ್ಚನಾಳ ಕೈ ಬಳೆಗಳೊಂದಿಗೆ ಆಡುತ್ತಿದ್ದಳು.

ಸ್ನೇಹಾಳಿಂದ ಅರ್ಚನಾಳತ್ತ ನೋಟ ಹರಿಸಿದ ಸುನೀಲ್ ಸಂತೃಪ್ತಿಯ ನಗೆ ನಕ್ಕ. ಅದನ್ನು ಕಂಡು ಅರ್ಚನಾಳ ಹೃದಯ ತುಂಬಿ ಬಂದಿತು. ತಾನು ಕೈಗೊಂಡ ಸಮರ್ಪಕ ನಿರ್ಣಯದ ಬಗ್ಗೆ ಅವಳಿಗೆ ಹೆಮ್ಮೆ ಎನಿಸಿತು.ಸುನೀಲ್ ‌ಮುಂದುರಿಸಿದ, “ನಾನು ನಿನ್ನನ್ನು ನೋಡಿದಾಗ….. ನನ್ನ ಮನಸ್ಸಿಗೆ ಸರಿಯಾಗಿ ಸ್ಪಂದಿಸುವ, ನನ್ನ ವೇದನೆಯನ್ನು ಅರ್ಥೈಸಿಕೊಂಡು ನನ್ನ ಹೃದಯದ ಕರೆಗೆ ಓಗೊಡುವ, ಸ್ನೇಹಾಳಿಗೆ ಮಮತಾಮಯಿ ತಾಯಿಯಾಗುವ ಹೆಣ್ಣು ನೀನೇ ಎಂದು ತೋರಿತು. ಲತಾಳ ಜಾಗವನ್ನು ನೀನು ಮಾತ್ರ ತುಂಬಬಲ್ಲೇ.

“ನಾನು ನಿನ್ನನ್ನು ಲತಾಳೆಂದೇ ಭ್ರಮಿಸಿದ್ದೆ. ಆದರೆ ಲತಾಳಿಗಿಂತ ಚೆಲುವು, ನಡತೆ, ಸ್ವಭಾವದಲ್ಲಿ ನೀನು ಬಹಳವೇ ಭಿನ್ನವಾಗಿದ್ದಿ. ನಾನು ವಿಶ್ವಾಸವಿಟ್ಟು ನಿನ್ನನ್ನು ಪ್ರೀತಿಸಿದೆ. ನನ್ನ ಹೃದಯದ ತುಡಿತಕ್ಕೆ ನೀನು ದ್ರೋಹವೆಸಗಲಿಲ್ಲ.”

ಅವನಲ್ಲಿ ಉಕ್ಕಿ ಬಂದ ಭಾವೋದ್ವೇಗವನ್ನು ತಾಳಲಾಗದೆ, ಪರವಶತೆಯಿಂದ ಅವಳ ಕೈಗಳನ್ನು ತೆಗೆದುಕೊಳ್ಳುತ್ತಾ, “ಅರ್ಚನಾ, ನಾನು ನಿನ್ನನ್ನು ಲತಾಳಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ,” ಎಂದ.

ಮಡಿಲಲ್ಲಿದ್ದ ಸ್ನೇಹಾಳನ್ನು ತಟ್ಟುತ್ತಿದ್ದ ಅರ್ಚನಾ, ಸುನೀಲ್‌ನ ಕಳಕಳಿಯ, ಪ್ರಾಮಾಣಿಕ ಆತ್ಮ ನಿವೇದನೆ, ಪುಳಕಗೊಳ್ಳುತ್ತಿರುವ ಅವನ ಮೈಮನಗಳನ್ನು ಕಂಡು ತಾನೂ ರೋಮಾಂಚಿತಳಾದಳು. ಅವಳ ಹೃದಯ ಧನ್ಯತೆಯಿಂದ ತುಂಬಿ ಬಂದಿತು.

ಇಂಥ ಒಬ್ಬ ಗಂಡಸಿನ ಪ್ರಾಮಾಣಿಕ ಪ್ರೀತಿಗಾಗಿಯೇ ತಾನು ಹಲವು ಗಂಡುಗಳನ್ನು ತಿರಸ್ಕರಿಸಿದ್ದಲ್ಲವೇ? ಅವನ ಆತ್ಮವಿಶ್ವಾಸ ತುಂಬಿದ ನುಡಿಗಳು, ಪ್ರೀತಿಗೆ ತನ್ನ ಜೀವವನ್ನು ಬೇಕಾದರೂ ಆ ಘಳಿಗೆಯಲ್ಲಿ ಅವನಿಗೆ ಸಮರ್ಪಿಸಲು ಅವಳು ಸಿದ್ಧಳಾದಳು.

ಪರಶತೆಯಿಂದ ಅವಳ ಕೈಗಳನ್ನು ತನ್ನ ಕೆನ್ನೆಗೊತ್ತಿಕೊಳ್ಳುತ್ತಿದ್ದವನ ಮನಸ್ಥಿತಿಯನ್ನು ಅರಿತವಳಂತೆ ಅರ್ಚನಾ ಅವನ ಎದೆಗೊರಗಿ ತನ್ನ ಮೈ ಮರೆತಳು.

ಬಾಗಿಲ ಬಳಿ ನಿಂತು ಈ ಅಪೂರ್ವ ದೃಶ್ಯವನ್ನು ವೀಕ್ಷಿಸಿದ ಶಿವವಮೂರ್ತಿ ದಂಪತಿಗಳು ಸಂತೃಪ್ತಿಯಿಂದ ನಕ್ಕರು. ಒಂದು ಕ್ಷಣದಲ್ಲಿ ಅವರು ತಂದೆ ತಾಯಿಗಳಿಂದ, ಅತ್ತೆಮಾಂದಿರಲ್ಲದೆ, ಸ್ನೇಹಾಳಿಗೆ ಅಜ್ಜಿ ತಾತಾ ಕೂಡ ಆದರು.

ಅಂತೂ ಕೊನೆಗೆ ಅರ್ಚನಾ ತಾನು ಪ್ರೀತಿಸುತ್ತಿದ್ದ ಗಂಡಸನ್ನು, ಅದಕ್ಕಿಂತ ಮಿಗಿಲಾಗಿ ತನ್ನನ್ನು ಪ್ರೀತಿಸುವ ಗಂಡಸಿನೊಡನೆ ವಿವಾಹವಾಗಲು ಸಮ್ಮತಿ ಇತ್ತಳು.

ಮದುವೆಗಳು `ಸ್ವರ್ಗದಲ್ಲಿ’ ನಿಶ್ಚಯಿಸಲ್ಪಡುವುದು ನಿಜವಿರಬಹುದಾದರೂ ಆ ಮದುವೆ ಬಾಂಧವ್ಯವನ್ನು ಉಳಿಸಿಕೊಳ್ಳುವ ಹೊಂದಾಣಿಕೆ, ಆತ್ಮಗೌರವ, ಸಹನೆ, ಅನುಸರಣೆಗಳನ್ನು ಈ ಭೂಮಿಯಲ್ಲಿರುವ ಜನ ತಾವಾಗಿ ಉಳಿಸಿಕೊಳ್ಳಬೇಕಾದುದು ಅನಿವಾರ್ಯವಲ್ಲವೇ? ಆ ಬಾಂಧವ್ಯದ ಚಿಗುರು ವಿರಸದ ತಾಪಕ್ಕೆ ಬಾಡದೆ, ಅಹಂಕಾರದ ದಳ್ಳುರಿಗೆ ನಲುಗದೆ ಒಲವಿನ ಪಾತಿಯಲ್ಲಿ ನಲಿಯಬೇಕಾಗಿತ್ತು.

ಸ್ನೇಹಾ ಅರ್ಚನಾ ಸುನೀಲ್ ‌ಒಟ್ಟಾಗಿ ಒಲವಿನ ಬಾಂಧವ್ಯದ ಬಿಗಿತಕ್ಕೆ ಕಂಕಣಬದ್ಧರಾಗಿರಲು ಬಯಸಿದರು.

Tags:
COMMENT