ಕಥೆ - ಡಾ. ದೀಪಾ ಹಿರೇಮಠ್
ಗೊಂಬೆಗಳ ಮದುವೆ ಮಾಡಿ ಆಡುತ್ತಿದ್ದ ಸಾವಿತ್ರಿ ಇದೇ ಗೊಂಬೆಗಳ ಮದುವೆಯ ಹಾಗೆ ತನ್ನ ಜೀವನದಲ್ಲೂ ಮುಂದೆ ನಡೆಯಬಹುದಾದ ಮದುವೆಯನ್ನು ಊಹಿಸಿರಲಿಲ್ಲ. ಅವಳ ಪಾಲಿಗೆ ಮದುವೆ ವರವೋ ಶಾಪವೋ......?
ಚಿಕ್ಕ ಚಿಕ್ಕ ಹಸಿರು ಬಳೆಗಳು, ಕಾಲಿಗೆ ದೊಡ್ಡ ಕಾಲುಂಗುರ, ಕೊರಳಲ್ಲಿ ಕರೀಮಣಿ ಸರ ಸಾವಿತ್ರಿಯ ಖುಷಿಗೆ ಪಾರವೇ ಇಲ್ಲ.... ಗೆಳತಿಯರಿಗೆ ಇಲ್ಲದ ಒಡವೆ ಸಾವಿತ್ರಿಯ ಮೈಮೇಲೆ. ಏನೆಂದು ತಿಳಿಯುವ ಮೊದಲೇ ಸಾವಿತ್ರಿಯ ಮದುವೆ ಮುಗಿದು ಹೋಗಿತ್ತು. ಮೈನೆರೆದ ಸಾವಿತ್ರಿ, ವೈವಾಹಿಕ ಜೀವನ ಅಂದರೇನು ಎಂದು ಗೊತ್ತಿಲ್ಲದೆ ಗಂಡನ ಮನೆ ಸೇರಿದ್ದಳು.
ತನ್ನ ವಯಸ್ಸಿಗಿಂತ ಇಪ್ಪತ್ತು ವರ್ಷ ದೊಡ್ಡವ ಸಾವಿತ್ರಿಯ ಗಂಡ. ಮಕ್ಕಳಾಗಲಿಲ್ಲ ಎಂದು ತಿಳಿದು ಮೊದಲನೇ ಹೆಂಡತಿಯನ್ನು ತೊರೆದ ಭೂಪ. ದೊಡ್ಡಮನೆ, ಅತ್ತೆಮಾವ, ದನ ಕರು. 20 ವರ್ಷ ದೊಡ್ಡ ವಯಸ್ಸಿನ ಗಂಡನೊಂದಿಗೆ ಜೀವನ ತಳ್ಳಲು ಅಣಿಯಾದಳು ಸಾವಿತ್ರಿ. ದಿನಗಳು ಉರುಳಲು ಆ ಜೀವನಕ್ಕೆ ಹೊಂದಿಕೊಂಡಳು ಸಾವಿತ್ರಿ.
ಐದು ವರ್ಷವಾದರೂ ಮಕ್ಕಳಾಗದ ಸಾವಿತ್ರಿಯನ್ನು ಅತ್ತೆ ವೈದ್ಯರಲ್ಲಿಗೆ ಕರೆದೊಯ್ದಳು. ಪರೀಕ್ಷಿಸಿದ ವೈದ್ಯರು ಸಾವಿತ್ರಿಗೆ ಯಾವ ತೊಂದರೆ ಇಲ್ಲ ಎಂದು ವರದಿ ಕೊಟ್ಟರು. ಗಂಡನನ್ನು ಒಮ್ಮೆ ತಪಾಸಣೆಗೆ ಕರೆತರಲು ಹೇಳಿದರು. ಗಂಡಸರಲ್ಲಿಯೂ ತೊಂದರೆ ಇರಬಹುದು ಎಂದು ಗೊತ್ತೇ ಇರದ ಸಾವಿತ್ರಿ ಗಂಡನನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಲು ಹರಸಾಹಸ ಮಾಡಿದಳು.
ಗಂಡಸಿನ ಅಹಂ ಅಡ್ಡ ಬಂದಿತು. ಸಾವಿತ್ರಿಯ ಗಂಡ ಕೊನೆಗೂ ವೈದ್ಯರ ಬಳಿಗೆ ಹೋಗಲಿಲ್ಲ. ಏನೂ ಅರಿಯದ ಸಾವಿತ್ರಿ ಬಂಜೆತನದ ಪಟ್ಟ ಏರಿದಳು. ನಾನು ಗಂಡಸು ನಾನು ಏನು ಬೇಕಾದರೂ ಮಾಡಬಲ್ಲೇ, ಎಲ್ಲ ನನ್ನಿಂದಲೇ ಎಂದ ಸಾವಿತ್ರಿಯ ಗಂಡ ಕುಡಿಯುವುದು, ಕಾರ್ಡ್ಸ್ ಆಡುವುದು, ಸಿಗರೇಟು ಇತ್ಯಾದಿ ದಿನನಿತ್ಯದ ಅಭ್ಯಾಸಗಳಾದ. ಊಟ, ನಿದ್ದೆಗೆ ಮಾತ್ರವೇ ಮನೆಗೆ ಬರುವುದು ಜೀವನದ ರೂಢಿಯಾಯಿತು.
ಗಂಡನ `ನಾನು' ಎಂಬ ಅಹಂಗೆ ಸಾವಿತ್ರಿಯ ಜೀವನ ಬಲಿಯಾಯಿತು. ಸಾವಿತ್ರಿ ಮನೆಯೊಳಗೂ, ಮನೆಯ ಹೊರಗೂ ಬಂಜೆ, ವಾರಸುದಾರನ ಕೊಡಲಾರದ ಹೆಣ್ಣು, ಕುಡುಕ ಗಂಡನ ಹೆಂಡತಿ, ಅಪಶಕುನಿ ಎನ್ನುವ ಪಟ್ಟಗಳು ಅವಳಿಗೆ ಯಥೇಚ್ಛವಾಗಿ ಸಿಕ್ಕವು.
ಗಂಡನ ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರು ತಮ್ಮ ತಮ್ಮ ಸೂರು ಹಿಡಿದು ಹೊರಟುಹೋದರು. ಅತ್ತೆ ಮಾವ ತೀರಿಕೊಂಡ ಮೇಲೆ ಸಾವಿತ್ರಿಯ ಸ್ಥಿತಿ ಹೇಳತೀರದು. ಬದುಕಿನ ನೋವುಗಳನ್ನು ಅನುಭವಿಸಿದ ಸಾವಿತ್ರಿ ಎಲ್ಲದಕ್ಕೂ ಸಿದ್ಧ ಎನ್ನುವಂತೆ ಮತ್ತೆ ಮತ್ತೆ ಎದ್ದು ನಿಂತಳು.
ಕೂಡಿಟ್ಟ ಹಣ ಕುಡಿಕೆಗೆ ಸಾಲದು. ಅಸಹಾಯಕ ಹೆಣ್ಣು ಆದರೂ ತನ್ನ ಗಂಡನನ್ನು ಬಿಟ್ಟುಕೊಡದ ಸಾವಿತ್ರಿ ಕಷ್ಟದ ದಿನಗಳನ್ನು ನೋಡತೊಡಗಿದಳು.
ಕುಡಿತ ಹಾಗೂ ತನ್ನ ಕೆಟ್ಟ ಚಟಕ್ಕೆ ಇದ್ದ ಹೊಲ ದನ, ಕರು ಅಲ್ಪಸ್ವಲ್ಪ ಆಸ್ತಿಯನ್ನು ಮಾರಿಕೊಂಡ ಸಾವಿತ್ರಿಯ ಗಂಡ. ಜೊತೆಗೆ ಮುದಿತನ, ಗಂಡ ಬಿದ್ದು ಸೊಂಟ ಮುರಿದು ಹಾಸಿಗೆ ಹಿಡಿದ. ಅಲ್ಲಿ ಇಲ್ಲಿ ಹೇಗೋ ದುಡ್ಡಿನ ವ್ಯವಸ್ಥೆ ಮಾಡಿ ಗಂಡನನ್ನು ಬದುಕಿಸಿಕೊಂಡಳು.