ಕಥೆ - ಸುಮಾ ವೀಣಾ
ಎಲ್ಲಾ ಸಂದರ್ಭಗಳಲ್ಲೂ ತನ್ನದೇ ಆದ ಆದರ್ಶದ ಮಾತುಗಳಾಡುತ್ತಿದ್ದ ದಮಯಂತಿ, ತನ್ನದೇ ಸಂಸಾರ ಸೊಟ್ಟಗಾದಾಗ, ಅದರಿಂದ ಹೊರಬಂದು ಮುಂದೆ ಹೇಗೆ ಸಮಾಜಮುಖಿಯಾದಳು....?
ಉಪನ್ಯಾಸ ಮಾಲಿಕೆಯೊಂದರಲ್ಲಿ ಭಾಗವಹಿಸಲು ರೈಲ್ವೇ ಸ್ಟೇಷನ್ನಿನ ಫ್ಲಾಟ್ ಫಾರಂನಲ್ಲಿ ರೈಲಿಗಾಗಿ ಕಾದು ಕುಳಿತ ದಮಯಂತಿ ಪರಿಚಯದ ಹೆಂಗಸರನ್ನು ಕಂಡಾಗ ಅವರಿಂದ ಹಿಂದೆ ಹಿಂದೆ ಉಳಿಯುವ ಪ್ರಯತ್ನ ಮಾಡುತ್ತಿದ್ದಳು. ಅವರೆಲ್ಲಾ ಲೇಡೀಸ್ ಕಂಪಾರ್ಟ್ ಮೆಂಟ್ ನಲ್ಲೇ ಪ್ರಯಾಣ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದರು. ದಮಯಂತಿಗೆ ಅವರ ಆ ವಾದ ಏಕೋ ಸರಿಬೀಳಲಿಲ್ಲ. ಎಲ್ಲಾ ವಿಚಾರಗಳಲ್ಲೂ ಪುರುಷರಿಗಿಂತ ನಾವೇನು ಕಡಿಮೆ ಎಂದು ಹೋರಾಟಕ್ಕೆ ಇಳಿಯುವ ಈ ಪ್ರಮೀಳೆಯರು ಇಲ್ಲಿ ಏಕೆ ಮಹಿಳೆಯರ ಬೋಗಿಗೇ ಕಾಯಬೇಕು ಎಂಬುದು ಅವಳ ವಾದ.
ಹಾಲೂಡಿಸುವ ತಾಯಂದಿರು ಇದ್ದರೆ, ಅನಾರೋಗ್ಯದವರಿದ್ದರೆ ಅಡ್ಡಿಯಿಲ್ಲ. ಎಲ್ಲರಂತೆ ಇವರು ನಾವು ಎಲ್ಲರ ಹಾಗೆ ಸಾಮಾನ್ಯ ಬೋಗಿಗಳಲ್ಲೇ ಪ್ರಯಾಣ ಮಾಡಬಹುದಲ್ಲ ಎಂಬುದೇ ಅವಳ ಮನದಿಂಗಿತ. ಆದರೆ ಮಾತನಾಡಲು ಮನಸ್ಸಿಲ್ಲದೆ ನಿರ್ಲಿಪ್ತಳಾದಳು. ಹಳೆಯ ನೆನಪುಗಳು ರೈಲ್ವೇ ಹಳಿಯ ಮೇಲೆ ಗಾಲಿಗಳು ಉರುಳಿದಂತೆ ವೇಗವಾಗಿ ಒಮ್ಮೆ ಸರಿದು ಸರಿದು ಮಾಯವಾಗುತ್ತಿದ್ದವು.
ದಮಯಂತಿ ತನ್ನ ಬದುಕಿನ ಎಲ್ಲ ತಲ್ಲಣ, ತಳಮಳಗಳನ್ನು ಅನುಭವಿಸಿ, ಅನುಭವಿಸಿ ಜಡಕ್ಕೆ ಸರಿದಂತೆ ಸರಿದರೂ ಮತ್ತೆ ಪುಟಿದೆದ್ದು ಸಮಾಜ ಮುಖಿಯಾಗಿದ್ದಳು. ಎಲ್ಲಾ ಸಮಸ್ಯೆಗಳಿಗೆ ತಾನು ತನ್ನನ್ನು ಒಡ್ಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಳು. ಆದರ್ಶಗಳ ಬೆನ್ನು ಹತ್ತಿ ನಡೆದಾಗ ತಪ್ಪುಗಳು, ಅಪಾಯಗಳು ಕಂಡರೂ ಅವೆಲ್ಲವನ್ನೂ ಸರಿದೂಗಿಸಿಕೊಳ್ಳುವೆ ಎಂಬ ಅತೀವ ವಿಶ್ವಾಸವಿದ್ದವಳು. ಸಮಾಜ ಪರಿವರ್ತನೆ ಮಾಡುವೆ ಎಂಬ ಹುಚ್ಚು ಹಠಕ್ಕೆ ಬಿದ್ದು ಕೈ ಸುಟ್ಟುಕೊಂಡಿದ್ದಳು.
ತನ್ನ ಸೋದರತ್ತೆ ಬಾಲ ವಿಧವೆಯಾಗಿ ಬಂದು ಮನೆ ಸೇರಿದಾಗಿನಿಂದ ಅನುಭವಿಸಿದ್ದ ವ್ಯಥೆಗಳನ್ನೇ ಈಕೆ ಕಥೆಗಳನ್ನಾಗಿ ಕೇಳಿ ಬೆಳೆದಳು. ಹಾಗಾಗಿ ಒಂದಿಷ್ಟು ಊರುಗಳನ್ನಲ್ಲದೇ ಇದ್ದರೂ ಒಂದಷ್ಟು ಜನರನ್ನಾದರೂ ಬದಲು ಮಾಡಬೇಕೆಂಬ ಬಯಕೆಯುಳ್ಳವಳು. ಗಂಡ ತೀರಿಕೊಂಡ ಬಳಿಕ ಮಂಗಳ ದ್ರವ್ಯಗಳನ್ನೇಕೆ ತ್ಯಜಿಸಬೇಕು? ಹುಟ್ಟಿದಾಗಿನಿಂದ ಅವೆಲ್ಲಾ ನಮ್ಮ ಬಳುವಳಿಗಳೇ ಅಲ್ವೇ ಎಂದು ಸಾಧ್ಯವಾದಷ್ಟೂ ಜನರಿಗೆ ಅರಿವು ಮೂಡಿಸುವಲ್ಲಿ ಬಹುಪಾಲು ಯಶಸ್ವಿಯೂ ಆಗಿದ್ದಳು. ಋತುಮತಿ ಹೆಣ್ಣುಮಕ್ಕಳನ್ನು ಹೊರಗಿಡುವ ಪದ್ಧತಿ ಏಕೆ? ಹೊರಗೆ ಕೂರಿಸುವ ಬದಲು ವಿಶ್ರಾಂತಿ ಕೊಡಬೇಕು. ಅವರೊಡನೆ ನಯವಾಗಿ ವರ್ತಿಸಿ. ಆ ದಿನಗಳಲ್ಲಿ ಕೋಪ, ಉದ್ವೇಗ ಅವರಲ್ಲಿ ಹೆಚ್ಚಾಗಿರುತ್ತದೆ. ಸ್ವಚ್ಛತೆಯ ಕಡೆಗೆ ಗಮನಕೊಡಿ. ಮೈಲಿಗೆ ಮನೆಗಲ್ಲ.... ನಿಮ್ಮ ಮನಸ್ಸಿಗಾಗಿದೆ ಎಂದೆಲ್ಲಾ ತಿಳಿ ಹೇಳ ಬಯಸಿದ್ದಳು.
ಏನೇ ಆದರೂ ದಮಯಂತಿ ತನ್ನ ಮನೆಯಲ್ಲೇ ತಾನು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಳು. ದಮಯಂತಿಯ ತಮ್ಮಂದಿರು, ಸೊರ ಸೊರನೆ ಹಾರ್ಲಿಕ್ಸ್ ಕುಡಿಯುತ್ತಾ ಬಾಯಿ ಚಪ್ಪರಿಸುತ್ತಿದ್ದಾಗ ಹಿರಿಯರು, `ನೀನೂ ಕುಡಿ,' ಎಂದು ಯಾವತ್ತೂ ಹೇಳಿರಲಿಲ್ಲ. ಪುರುಷಪ್ರಧಾನ ವ್ಯವಸ್ಥೆಯನ್ನು ಮನಸ್ಸಿನಲ್ಲೇ ಶಪಿಸುತ್ತಿದ್ದ ದಮಯಂತಿಗೆ ಗಾಜಿನ ಬಾಟಲಿಯೊಂದು ಬಿದ್ದು ಒಡೆದು ಚೂರಾದ ಸದ್ದು ಕೇಳಿಸಿತು. ಅವಳು ಸರಕ್ಕನೆ ಎದ್ದು ಅಡುಗೆಮನೆಗೆ ಹೋದಳು. ಬೆಕ್ಕೊಂದು ಸರಕ್ಕನೆ ಓಡಿಹೋಯಿತು. ಹಾರ್ಲಿಕ್ಸ್ ಬಾಟಲಿ ಒಡೆದು ಹೋಗಿತ್ತು. `ನನಗೇ ಇಲ್ಲ..... ನೀನು ಬೇರೆ ಬಂದ್ಯಾ.....!' ಎನ್ನುತ್ತಾ ನೆಲದಲ್ಲಿ ಚೆಲ್ಲಿದ್ದ ಹಾರ್ಲಿಕ್ಸ್ ನ್ನು ನೋಡಿ. `ನನಗೆ ಕೊಡಲ್ವಲ್ಲಾ.... ಹೀಗೆ ಆಗಬೇಕು....' ಎಂದು ಹಿಗ್ಗಿದ್ದಳು.