ಕಥೆ - ಶಾರದಾ ಕೃಷ್ಣಮೂರ್ತಿ
ಮನೆಗೆ ಹಿರಿಯರಾದ ರಾಧಕ್ಕ ಗೋಪಾಲರಾಯರು ಊರಿನಲ್ಲೇ ಉಳಿದುಬಿಟ್ಟಾಗ, ಕೆಲಸದ ಸಲುವಾಗಿ ಮಕ್ಕಳು ವಿದೇಶಕ್ಕೆ ಹೋಗಿ ನೆಲೆಸಿ, ಮೊಮ್ಮಕ್ಕಳು ಅಲ್ಲಿಯ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡರು. ಇವರೆಲ್ಲ ಅಜ್ಜ ಅಜ್ಜಿಯನ್ನು ನೋಡಲು ಊರಿಗೆ ಬಂದಾಗ ಆ ಹಬ್ಬದ ವಾತಾವರಣ ಹೇಗಿತ್ತು......?
ಇತ್ತೀಚೆಗಷ್ಟೇ ನಿರ್ಮಾಣಗೊಂಡ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಅಂದು ತುಂಬಾ ಸಡಗರ... ಅತೀ ಉತ್ಸಾಹ...ಸಂಭ್ರಮ....! ಎಂದಿಲ್ಲದ ಈ ಅತೀ ಸಂತಸ ಎಲ್ಲರ ಮುಖದಲ್ಲಿ ಮಿಂಚಿದಾಗ ಎಲ್ಲರೂ ಕುತೂಹಲ ಕೌತುಕದಲ್ಲಿ ತಲೆ ತುರಿಸಿಕೊಂಡು... `ಏನು ಉಂಟು ಮಾರಾಯ್ರೇ... ಇಂಥ ಗೌಜಿ ಇದೂಂತ...' ಎಂದು ಮೂಗಿನ ಮೇಲೆ ಹೆಬ್ಬೆರಳು ಇಡದೆ ಇರರು.
ಶಾಲೆಯ ಪ್ರತಿ ಸದಸ್ಯ ವರ್ಗ ಶಿಸ್ತಾಗಿ ಬಂದಾಗಿತ್ತು. ಎಲ್ಲರೂ ಸರಿಯಾದ ವೇಳೆಗೆ ಬಂದಿದ್ದರು. ಆಗಸ್ಟ್ 15, ಜನವರಿ 26ನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದರು. ಆದರೆ ಇಂದಿನ ದಿನ ವಿಜೃಂಭಣೆಯಿಂದ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಆಚರಿಸಲು ಹಮ್ಮಿಕೊಂಡಿದ್ದರು. ಅದು ಏಕೆಂದರೆ ಅಂದು ಕರ್ನಾಟಕ ರಾಜ್ಯೋತ್ಸ ದಿನ!
ಕನ್ನಡಾಂಬೆಯ ಕೀರ್ತನೆ.... ಅವಳ ಅಭ್ಯುದಯ..... ಅವಳನ್ನು ಗುಣಗಾನ ಮಾಡುತ್ತಾ ಸಂಪೂರ್ಣ ಕನ್ನಡಕ್ಕಾಗಿ ತಾಯಿ ಭುವನೇಶ್ವರಿಗಾಗಿ ಅರ್ಪಿಸಿದ ಮಹಾ ಸುದಿನ! ನವೆಂಬರ್ 1 ಕರ್ನಾಟಕ ರಾಜ್ಯೋತ್ಸ ದಿನ. ಅದನ್ನು ಅಚ್ಚುಕಟ್ಟಾಗಿ ಮಾಡಲೆಂದೇ ವಹಿಸಿದ ಪರಿಶ್ರಮ. ಆ ಮಾತೃದೇವಿ ರಾಜರಾಜೇಶ್ವರಿ ನಮಗಿತ್ತ ವರಗಳನ್ನು ಪಡೆದ ನಾವು ಅವಳ ಮಡಿಲಲ್ಲಿ ಬೆಳೆದು ಸುಖ ಸಮೃದ್ಧಿಯಿಂದ ಜೀವನ ನಡೆಸುವಾಗ ಅವಳ ಉಪಕಾರ ಸ್ಮರಿಸಿ ಅವಳಿಗಾಗಿ ಅವಳ ಸ್ತುತಿ ಮಾಡಿ, ಇನ್ನಷ್ಟು ಶಕ್ತಿ ಕೊಡಲಿ ನಮ್ಮೆಲ್ಲರ ಕನ್ನಡಿಗರಲ್ಲಿ ಅವಳ ಹರಕೆಯಿಂದ ನಮ್ಮ ಕರ್ನಾಟಕ ಉತ್ತುಂಗ ಶಿಖರಕ್ಕೇರಲಿ, ಇಡೀ ಜಗತ್ತಿನಲ್ಲೇ ಪುಣ್ಯಭೂಮಿ ಆದ ಭಾರತಾಂಬೆಯ ಮಡಿಲಲ್ಲಿ... ಅದೂ ಕರ್ನಾಟಕದಲ್ಲಿ, ಕನ್ನಡ ನಾಡಿನಲ್ಲಿ ಹುಟ್ಟಿ ಅಲ್ಲ ಬದುಕು ಕಟ್ಟಿಕೊಂಡು ಅವಳಿಗಾಗಿ, ಕನ್ನಡ ಮಾತೆಗಾಗಿ ದುಡಿದು ತಮ್ಮ ಜೀವನ ಮಂಡಿಸಿಟ್ಟವರ ಪರವಾಗಿಯೂ ಅವರಿಗೆ ನಮ್ಮೆಲ್ಲರ ನಮನ ಅರ್ಪಿಸುವ ಮಹತ್ತರ ದಿನ.
ಶಾಲೆ ಸುಣ್ಣ ಬಣ್ಣಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು. ಬಣ್ಣ ಬಣ್ಣದ ಸೇವಂತಿಗೆ, ಮಲ್ಲಿಗೆ, ಜಾಜಿ, ಗುಲಾಬಿ ಹೂಗಳ ಮಾಲೆ ಮತ್ತು ಹಸಿರು ಮಾವಿನೆಲೆಯ ತೋರಣಗಳಿಂದ ಆಹಾ.... ಮಂಟಪ ಮದುವೆ ಮಂಟಪದಂತೆಯೇ ಸುಂದರವಾಗಿ ತೋರುತ್ತಿತ್ತು. ಗಾಳಿ ಬಂದಾಗ, ಇಳಿಬಿದ್ದ ಪುಷ್ಪ ಮಾಲೆಗಳು ತೂಗುತ್ತಾ ಕಂಪು ಬೀರುತ್ತಾ... ಬನ್ನಿ.... ಬನ್ನಿ ಎಂದು ಕರೆಯುವಂತೆ ಅನಿಸುತ್ತಿತ್ತು. ಇವೆಲ್ಲವನ್ನೂ ಮಕ್ಕಳೇ ಅಲಂಕರಿಸಿದ್ದರು ಎಂದು ಗೊತ್ತಾದಾಗ ಎಲ್ಲರಿಗೂ ಆಶ್ಚರ್ಯವಾಯಿತು.
ಅದಲ್ಲದೆ, ಶಾಲೆಯ ಮಹಾದ್ವಾರದ ಬಳಿಯ ಧ್ವಜ ಕಟ್ಟೆಯವರೆಗೂ ಬಿಡಿಸಿದ್ದ ಅನೇಕ ಬಗೆಯ ರಂಗೋಲಿಗಳು ಒಂದಕ್ಕೊಂದು ಅಂದಚೆಂದದ ಬಣ್ಣಗಳಿಂದ ಅಲಂಕೃತವಾಗಿದ್ದವು. ಧ್ವಜ ಕಟ್ಟೆಯ ಕೆಳಗೆ ಬಿಡಿಸಿದ 30 ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ರಾಜ್ಯದ ನಕ್ಷೆ, ಅದರ ಹಿಂದೆ ಚಾಮುಂಡೇಶ್ವರಿಯ ಭಾವಚಿತ್ರ ಎಲ್ಲವೂ ಸುಂದರವಾಗಿ ಮೂಡಿಬಂದಿದ್ದವು. ಎಲ್ಲವನ್ನೂ ಶಾಲೆಯ ಮಕ್ಕಳೇ ಬಿಡಿಸಿದ್ದಂತೂ ಬಹಳ ವಿಶೇಷವಾಗಿತ್ತು.