“ಲಲಿತಾರನ್ನು ನೋಡಿದರೆ ಬೇಸರವೆನಿಸುತ್ತದೆ. ಕೆಲವು ವರ್ಷಗಳಿಂದಲೂ ಅವರು ಈ ಸಂಸ್ಥೆಗೆ ದುಡಿದಿದ್ದಾರೆ,” ಜೂಲಿ ಹೇಳಿದಳು.

“ಚಿಂತಿಸಬೇಡಿ. ನಾವು ಅವರಿಗೆ ದೊಡ್ಡ ಸೆಂಡಾಫ್‌ ಪಾರ್ಟಿ ಕೊಡೋಣ,” ಅವಳ ಬಾಸ್‌ ಹೇಳಿದರು.

“ಇದು ಒಳ್ಳೆಯ ಯೋಚನೆ. ಅವರಿಗೆ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ.”

“ನೀವಿಷ್ಟೊಂದು ಬೇಸರ ಪಡಬೇಕಾಗಿಲ್ಲ ಜೂಲಿ…..”

ಇಪ್ಪತ್ತು ವರ್ಷದ ಜೂಲಿ, ಲಲಿತಾರ ನಿವೃತ್ತಿಯ ಕುರಿತು ಬಹಳ ಕಾಳಜಿ ತೋರಿಸುತ್ತಿದ್ದಳು. ಈ ಕುರಿತು ಲಲಿತಾ ಬಳಿ ಮಾತನಾಡಲು ಯೋಚಿಸಿದಳು.

“ನನಗಾಗಿ ಚಿಂತಿಸಬೇಡ. ನನಗೆಂದು ಈಗ ಸ್ವಲ್ಪ ಸಮಯ ಸಿಗುತ್ತಿದೆ. ನಾನು ಕಾಲೇಜು ಬಿಟ್ಟು ಇಲ್ಲಿ ಸೇರಿಕೊಂಡಾಗ ಕೇವಲ ಪಾರ್ಟ್‌ಟೈಂ ಕೆಲಸ ಎಂದುಕೊಂಡಿದ್ದೆ. ಆದರೆ ಇದು ಹಾಗಿರಲಿಲ್ಲ.” ಲಲಿತಾ ತಾವು ಮೊದಲಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದರು ಎನ್ನುವುದು ಜೂಲಿಗೆ ತಿಳಿದಿತ್ತು. ಆದರೆ ಕೆಲಸವಿಲ್ಲದೆ ಸುಮ್ಮನೆ ಕೂರಲು ಸಾಧ್ಯವಾಗದೆ ಲಲಿತಾ ಪುನಃ ಕೆಲಸಕ್ಕೆ ಸೇರಿದ್ದರು. ಆದರೆ ಇನ್ನು ಅಂತಹ ಅವಕಾಶವಿಲ್ಲ ಅಥವಾ ಇರಬಹುದೋ? `ನೀವು ನಿವೃತ್ತಿ ಹೊಂದಲು ಇಷ್ಟವಿಲ್ಲದಿದ್ದಲ್ಲಿ ನಿಮ್ಮ ಕೆಲಸವನ್ನು ಮುಂದುವರಿಸಬಹುದಲ್ಲ?’ ಎಂದು ಜೂಲಿ ಹೇಳಬೇಕೆಂದು ಕೊಂಡಿದ್ದಳು. ಆದರೆ ಅವಳ ಬಾಸ್‌ ಅಷ್ಟರಲ್ಲಾಗಲೇ ಲಲಿತಾರ ನಿವೃತ್ತಿಯನ್ನು ಘೋಷಿಸಿಯಾಗಿತ್ತು.

“ನಾನು ಬಹಳ ದೀರ್ಘಕಾಲದಿಂದಲೂ ಕೆಲಸ ಮಾಡುತ್ತಾ ಇದ್ದೇನೆ,” ಲಲಿತಾ ಹೇಳಿದರು. ಆಫೀಸ್‌ನಲ್ಲಿ ಲಲಿತಾರ ನಿವೃತ್ತಿಯ ಕೊನೆ ದಿನ ಏರ್ಪಡಿಸಲಾಗಿದ್ದ ಸೆಂಡಾಫ್‌ ಪಾರ್ಟಿ ಕುರಿತು ಆಕೆ ಏನು ಹೇಳಲಿದ್ದಾರೆ ಎನ್ನುವುದರ ಕುತೂಹಲ ಜೂಲಿಗೆ ಉಸಿರು ಬಿಗಿಹಿಡಿಯುವಂತೆ ಮಾಡಿತ್ತು. ಪಾರ್ಟಿಯಲ್ಲಿ ವಿವಿಧ ಬಗೆಯ ಪಾನೀಯಗಳಲ್ಲದೆ, ವಿಶೇಷವಾಗಿ ಆರ್ಡರ್‌ ಕೊಟ್ಟು ಮಾಡಿದ ಕೇಕ್ ಇತ್ತು. ಲಲಿತಾಗೆ ನೀಡಿದ ಹೂಗುಚ್ಛ ಹಾಗೂ ಗಿಫ್ಟ್ ಗಳು ಬಹಳವೇ ಮೆಚ್ಚುಗೆಯಾಗಿತ್ತು.

“ಒಳ್ಳೆಯ ಪಾರ್ಟಿ ನೀಡಿದಿರಿ. ನಿಮಗೆಲ್ಲ ನನ್ನ ತುಂಬು ಹೃದಯದ ಧನ್ಯವಾದಗಳು,” ಲಲಿತಾ ನುಡಿದರು. ಅತಿಯಾದ ಆನಂದದಿಂದ ಅವರ ಕಣ್ಣುಗಳು ತೇಗೊಂಡಿದ್ದವು. ಗಂಟಲು ಉಬ್ಬಿ ಬಂದಿತ್ತು. ಆಫೀಸ್‌ನ ಇತರೇ ಸಹೋದ್ಯೋಗಿಗಳಿಂದ ನಾಲ್ಕು ಮಾತಾಡುವಂತೆ ಲಲಿತಾರಿಗೆ ಒತ್ತಡ ಬರತೊಡಗಿತು. ಜೂಲಿಗೆ ಮಾತ್ರ ಇವೆಲ್ಲ ಅತಿರೇಕವೆನಿಸಿತು. ಕಡೆಗೆ ಲಲಿತಾ, “ಇಷ್ಟು ವರ್ಷಗಳ ಕಾಲ ನೀವೆಲ್ಲರೂ ಬಹಳ ಸಹಕಾರ ನೀಡಿದ್ದೀರಿ. ಅದಕ್ಕಾಗಿ ನಾನು ಎಂದಿಗೂ ನಿಮಗೆ ಋಣಿ,” ಎಂದರು.

“ನೀವು ನಮ್ಮ ಸಂಸ್ಥೆಯ ಹಿರಿಯ, ಅನುಭವಿ ಉದ್ಯೋಗಿಯಾಗಿದ್ದೀರಿ. ನಾವು ನಿಮ್ಮಿಂದ ಸಾಕಷ್ಟು ಕಲಿತಿದ್ದೇವೆ,” ಮ್ಯಾನೇಜರ್‌ಸುಹಾಸ್‌ ಮಾತಾಡಿದರು.

“ಕೇಳಿ, ಕೇಳಿ…..” ಜೂಲಿ ಸೇರಿದಂತೆ ಎಲ್ಲರೂ ಒಕ್ಕೊರಲಿನಿಂದ ಕೂಗಿ ಹೇಳಿದರು.

ಲಲಿತಾ ಪ್ರಾರಂಭದಿಂದಲೂ ಸಂಸ್ಥೆಗಾಗಿ ಸಾಕಷ್ಟು ಕೆಲಸ ಮಾಡಿದ್ದರು. ಆಕೆ ಎಲ್ಲರೊಡನೆ ಬೆರೆತು, ಎಲ್ಲರ ಮೇಲೆಯೂ ಪ್ರಭಾವ ಬೀರುವ ವ್ಯಕ್ತಿಯಾಗಿದ್ದರು. ಹೀಗಾಗಿಯೇ ಜೂಲಿಗೆ, ಲಲಿತಾ ಸಂಸ್ಥೆಯನ್ನು ತೊರೆಯುತ್ತಿರುವುದು ಓವರ್ ಸಹೋದ್ಯೋಗಿ, ಉತ್ತಮ ಸ್ನೇಹಿತೆಯ ಅಗಲುವಿಕೆಯ ನೋವನ್ನು ಉಂಟುಮಾಡಿತ್ತು.

ಲಲಿತಾ ಮುಂದುವರಿದು, “ಇನ್ನು ನಾನು ನನ್ನ ವಯಸ್ಸಿನವರೊಡನೆ ಸ್ನೇಹ ಬೆಳೆಸುತ್ತೇನೆ,” ಎಂದರು.

`ಹಾಗಾದರೆ ಲಲಿತಾ ವೃದ್ಧಾಶ್ರಮ ಸೇರಲಿದ್ದಾರೆಯೇ? ಹಾಗೇನಾದರೂ ಆದರೆ….?’ ಜೂಲಿ ಯೋಚಿಸಿದಳು.

ಲಲಿತಾ ಮತ್ತು ಜೂಲಿ ಪರಸ್ಪರ ತಮ್ಮ ಮೊಬೈಲ್ ‌ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು. ತನ್ನನ್ನು ಆಗಾಗ ಭೇಟಿಯಾಗುವಂತೆ ಜೂಲಿ, ಲಲಿತಾರನ್ನು ಕೇಳಿಕೊಂಡಳು.

“ನಿನಗೆ ಬಿಡುವಿದ್ದಾಗ ಕರೆ ಮಾಡು,” ಲಲಿತಾ ಹೇಳಿದರು.

ಕೆಲವು ದಿನಗಳ ಬಳಿಕ ಜೂಲಿ ಲಲಿತಾಗೆ ಕರೆ ಮಾಡಿ ಹೋಟೆಲ್‌ಗೆ ಕರೆದಳು. ಲಲಿತಾ ತಮಗೆ ಬಹಳ ಕೆಲಸವಿದ್ದು ಮುಂದಿನ ಶನಿವಾರ ಭೇಟಿಯಾಗೋಣವೆಂದರು. `ಬಹುಶಃ ಲಲಿತಾ ಯಾವುದೋ  ವೈದ್ಯರ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡಿರಬಹುದು, ಇಲ್ಲವೇ ಶಾಪಿಂಗ್‌ ಹೋಗಿರಬಹುದು, ಇಲ್ಲದಿದ್ದರೆ ಮನೆಯಿಂದ ಹೊರಬರುವುದಕ್ಕೆ ಆಗದಿರಬಹುದು…..’ ಜೂಲಿ ತನ್ನಲ್ಲೇ ಯೋಚಿಸಿಕೊಂಡಳು.

ಕಡೆಗೊಮ್ಮೆ ಲಲಿತಾರನ್ನು ಭೇಟಿಯಾದ ಸಮಯದಲ್ಲಿ, “ಜೂಲಿ ಹಣ, ಸಮಯ ಕೈಯಲ್ಲಿರುವಾಗ ವ್ಯರ್ಥ ಮಾಡಬೇಡ. ನೀನೇನು ಮಾಡಬೇಕೆಂದಿದ್ದೀಯೋ ಅದನ್ನು ಈಗಿನಿಂದಲೇ ಪ್ರಾರಂಭಿಸು, ಜೀವನ ಹೇಗಿದೆಯೋ ಹಾಗೆ ಆನಂದಿಸು…..” ಎಂದು ಸಲಹೆ ಇತ್ತರು ಲಲಿತಾ.

“ಸರಿ….“

“ನಿನಗೇನಾದರೂ ಹ್ಯಾಸವಿದೆಯೇ? ಏನಾದರೂ ಆಸಕ್ತಿ?”

“ನನಗೆ ಪೇಂಟಿಂಗ್‌ ಎಂದರೆ ಬಹಳ ಇಷ್ಟ.”

“ಓಹೋ! ನಿಜವಾಗಿ ಬಹಳ ಒಳ್ಳೆಯ ಹವ್ಯಾಸ. ನಿನ್ನ ವೃತ್ತಿ ಜೀವನಕ್ಕೂ ಇದು ನೆರವಾಗಬಲ್ಲದು,” ಲಲಿತಾ ಹೇಳಿದರು.

“ಆದರೆ ನಾನಷ್ಟು ಪರಿಣಿತಳಲ್ಲ!”

“ನಿನಗಿದರಲ್ಲಿ ಪರಿಣಿತಿ ಇರಬೇಕಾಗಿಲ್ಲ. ಅದರಿಂದ ನಿನಗೆ ಆನಂದ ಸಿಗುತ್ತದಲ್ಲವೇ? ಹಾಗೇ ಅಭ್ಯಾಸ ಮುಂದುವರಿಸು…. ಇನ್ನಷ್ಟು ಉತ್ತಮಗೊಳ್ಳುತ್ತದೆ,” ಎಂದರು ಲಲಿತಾ.

ಜೂಲಿ ಸೋಮವಾರ ಕೆಲಸ ಮುಗಿಸಿದ ನಂತರ ಲಲಿತಾರನ್ನು ನೋಡಲೆಂದು ಹೋದಳು. ಆದರೆ ಲಲಿತಾ ಸಿಗಲಿಲ್ಲ.

“ಬಹುಶಃ ಆಕೆ ಪುನಃ ಆಸ್ಪತ್ರೆ ಸೇರಿರಬಹುದು,” ಎಂದು ನೆರೆಮನೆಯವರು ನುಡಿದರು. ಜೂಲಿ ಎರಡು ಮೂರು ಬಾರಿ ಲಲಿತಾರನ್ನು ಭೇಟಿಯಾದಾಗಲೂ ಲಲಿತಾ ತಾವು ಆರೋಗ್ಯವಾಗಿರುವುದಾಗಿಯೇ ತಿಳಿಸಿದರು. ಹೀಗಾಗಿ ಆಸ್ಪತ್ರೆ ವಾಸದ ಕುರಿತು ಜೂಲಿ ತಾನಾಗಿ ಏನನ್ನೂ ಕೇಳಲಿಲ್ಲ. ಬದಲಾಗಿ ಆಫೀಸಿನ ಗಾಸಿಪ್‌ ಸುದ್ದಿಗಳನ್ನು ಹೇಳಿದಳು. ಲಲಿತಾ ಹೆಚ್ಚು ಮಾತಾಡುತ್ತಿರಲೂ ಇಲ್ಲ, ತಮ್ಮ ಕುರಿತಂತೆ ಏನನ್ನೂ ಹೇಳುತ್ತಲೂ ಇಲ್ಲ. ಜೂಲಿ ಕೂಡ ಅದರ ಕುರಿತು ಕೆದಕಲು ಹೋಗಲಿಲ್ಲ. ಒಟ್ಟಾರೆ ಹಿರೀ ಜೀವಕ್ಕೆ ಆದಷ್ಟು ಸಂತೋಷ ನೀಡಲು ಬಯಸುತ್ತಿದ್ದಳು.

ಒಮ್ಮೆ ಜೂಲಿ, ಲಲಿತಾರ ಮನೆಯಿಂದ ಹಿಂದಿರುಗುತ್ತಿದ್ದಾಗ ಒಂದು ವಿಶೇಷ ಚಾರಿಟಿ ಸಂಸ್ಥೆಯೊಂದು ನಡೆಸುತ್ತಿದ್ದ ಚಿತ್ರಕಲೆ ಸಂಬಂಧಿತ ಪರಿಕರಗಳ ಮಾರಾಟ ಮಳಿಗೆಯನ್ನು ನೋಡಿ, ಕೆಲವನ್ನು ಅಲ್ಲಿ ಖರೀದಿಸಿದಳು. ಇದಾದ ನಂತರ ಜೂಲಿ ರಜಾ ದಿನಗಳಲ್ಲಿ ಲಲಿತಾರನ್ನು ಭೇಟಿಯಾಗಲು ಆಗಲಿಲ್ಲ. ಒಮ್ಮೆ ಜೂಲಿ ತನ್ನ ಚಿತ್ರ ಬಿಡಿಸಲು ಪರಿಕರಗಳನ್ನು ತೆಗೆದುಕೊಂಡು ಪಾರ್ಕ್‌ಗೆ ಹೋದಳು. ಇದಕ್ಕೂ ಮುನ್ನ ಅವಳು ಎಂದೂ ಪಾರ್ಕ್‌ನಲ್ಲಿ ಚಿತ್ರ ಬಿಡಿಸಲು ಪ್ರಯತ್ನಿಸಿರಲಿಲ್ಲ. ಅಲ್ಲಿ ಎಷ್ಟು ಸುಂದರ ವಾತಾವರಣವಿರುತ್ತದೆ, ಅಲ್ಲಿ ಜನ ಎಷ್ಟು ಸ್ನೇಹಪರರಾಗಿರುತ್ತಾರೆ ಎನ್ನುವುದನ್ನು ಲಲಿತಾ ಹೇಳಿದ್ದರು. ಜೂಲಿ ಅಲ್ಲಿ ಕುಳಿತು ಒಂದು ನಾಯಿಯ ಚಿತ್ರ ಬಿಡಿಸಿದಳು. ಆದರೆ ಅದರ ಫಲಿತಾಂಶ ಅಷ್ಟು ಉತ್ತಮವಾಗಿರಲಿಲ್ಲ.

“ಇದು ನನ್ನ ನಾಯಿ!”

ಚಿತ್ರ ಬಿಡಿಸುವುದರಲ್ಲಿಯೇ ತಲ್ಲೀನಳಾಗಿದ್ದ ಜೂಲಿ ಒಮ್ಮೆಲೇ ಬಂದ ಪುರುಷ ಧ್ವನಿ ಕೇಳಿ ತಿರುಗಿದಳು. ಆ ವ್ಯಕ್ತಿ ಅವಳ ಚಿತ್ರವನ್ನೇ ನೋಡುತ್ತಿದ್ದ. ಅವನಾಗಲೇ ಜೂಲಿಯ ಚಿತ್ರವನ್ನು ನೋಡಿದ್ದಾಗಿತ್ತು. ಇನ್ನೂ ಅವಳಿಗೆ ಅದನ್ನು ಮುಚ್ಚಿಡಲು ಸಾಧ್ಯವಿರಲಿಲ್ಲ. ಜೂಲಿ ತಾನು ಸ್ವಭಾತಃ ಸ್ವಲ್ಪ ಮುಜುಗರದವಳಾಗಿದ್ದರೂ ಅವನೇ ಅವಳಿಗೆ ಧೈರ್ಯ ತುಂಬುವಂತೆ ಮುಗುಳ್ನಕ್ಕ.

“ನಾನೇನು ದೊಡ್ಡ ಚಿತ್ರಕಾರಳಲ್ಲ. ಸುಮ್ಮನೆ ಚಿತ್ರಿಸಿದೆ. ಚಿತ್ರ ಅಷ್ಟೊಂದು ಚೆನ್ನಾಗಿಲ್ಲ,” ಎಂದಳು ಜೂಲಿ.

“ನನಗೇನೂ ಅವಸರವಿಲ್ಲ. ನಾನಿನ್ನೂ ಸ್ವಲ್ಪ ಸಮಯ ಇಲ್ಲೇ ಇರುತ್ತೇನೆ. ನೀವು ಮತ್ತೊಮ್ಮೆ ಪ್ರಯತ್ನಿಸಿ.”

“ನಿಮಗೇಕೆ ತೊಂದರೆ?”

“ಹಾಗೇನಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗಿಲ್ಲಿ ಹೆಚ್ಚಿನ ಪರಿಚಯದವರು ಇಲ್ಲ. ನನಗೆ ಯಾರೊಂದಿಗಾದರೂ ಮಾತನಾಡಬೇಕು,” ಎನ್ನುತ್ತಾ ಆ ವ್ಯಕ್ತಿ ಜೂಲಿಯ ಪಕ್ಕದಲ್ಲಿ ಕುಳಿತು, ಹತ್ತಿರದ ಹೋಟೆಲ್‌ಗಳು, ಬಸ್‌ ವ್ಯವಸ್ಥೆಯ ಕುರಿತು ಕೇಳಿದನು. ಜೂಲಿ ಎಲ್ಲಕ್ಕೂ ಸಮರ್ಪಕವಾಗಿ ಉತ್ತರಿಸಿದಳು.

ಜೂಲಿ ಎರಡನೇ ಬಾರಿ ನಾಯಿಯ ಚಿತ್ರ ಬಿಡಿಸಿದಳು. ಅದು ಆ ಮೊದಲಿನದಕ್ಕಿಂತಲೂ ಕೆಟ್ಟದಾಗಿತ್ತು. ಇದೀಗ ಜೂಲಿಗೆ ನಾಯಿಗಿಂತಲೂ ನಾಯಿಯ ಮಾಲೀಕನ ಕುರಿತು ಹೆಚ್ಚು ಗಮನವಿತ್ತು.

“ನಿಮಗೇನಾದರೂ ಅಸರವೇ?” ಅವನೇ ವಿನಯದಿಂದ ಕೇಳಿದ.

“ಇಲ್ಲ. ನನಗಿನ್ನೂ ಹೆಚ್ಚಿನ ಅಭ್ಯಾಸದ ಅವಶ್ಯಕತೆ ಇದೆ,” ಜೂಲಿ ಪ್ರಾಮಾಣಿಕವಾಗಿ ಒಪ್ಪಿಕೊಂಡಳು.

“ಹಾಗಾದರೆ ಮುಂದಿನ ವಾರ ನಾನು ಪುನಃ ನಿಮ್ಮನ್ನು ಇಲ್ಲೇ ಭೇಟಿಯಾಗಬಹುದು.”

ಮುಂದಿನ ವಾರ ತಾನು ಲಲಿತಾರನ್ನು ಕಾಣಬೇಕಿರುವ ವಿಚಾರವನ್ನು ಜೂಲಿ ತಕ್ಷಣ ಇವನಿಗೆ ಹೇಳಲಿಲ್ಲ. ನಂತರ ಲಲಿತಾರಿಗೆ ಕರೆ ಮಾಡಿದ ಜೂಲಿ, ತಮ್ಮ ನಾಯಿಯೊಡನೆ ಪಾರ್ಕ್‌ಗೆ ಬಂದು ವಾಕಿಂಗ್‌ ಮಾಡಿ, ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದಳು.

“ನನ್ನ ಆರೋಗ್ಯದ ಬಗ್ಗೆ ನೀನೇನು ಹೆದರಬೇಡ. ನಾನು ಈಗ ನಿನ್ನನ್ನು ಕಾಣುವಷ್ಟು ಬಿಡುವಿಲ್ಲ,” ಎಂದು ಸಮಾಧಾನದಿಂದ ಹೇಳುತ್ತಾ, “ನೀನೇನಾದರೂ ಚಿತ್ರ ಬಿಡಿಸಲು ಪ್ರಯತ್ನಿಸಿದೆಯಾ?” ಲಲಿತಾ ಕೇಳಿದರು.

ಜೂಲಿ ಅಚ್ಚರಿಗೊಂಡಳು. ತಾನು ಚಿತ್ರಕಲೆಗಾಗಿ ಖರೀದಿಸಿದ್ದ ವಸ್ತುಗಳ ಬಗ್ಗೆ ಲಲಿತಾರಿಗೇನೂ ಹೇಳಿರಲಿಲ್ಲ.

“ಇಲ್ಲ. ನಾನೇನೂ ಅಷ್ಟೊಂದು ಉತ್ತಮ ಕಲಾವಿದೆಯಲ್ಲ. ಆದರೆ ಚಿತ್ರ ಬಿಡಿಸುವುದರಿಂದ ಒಂದು ಬಗೆಯ ಖುಷಿ ಸಿಗುತ್ತದೆ,” ಎಂದಳು.

ನಂತರ ಲಲಿತಾ, ಜೂಲಿಯನ್ನು ಭೇಟಿಯಾದಾಗ ಚಿತ್ರಕಲೆಯ ಕುರಿತಾದ ಪ್ರಾಥಮಿಕ ತರಬೇತಿಯ ವಿಚಾರಗಳನ್ನೊಳಗೊಂಡ ಪುಸ್ತಕವನ್ನು ಜೂಲಿಗೆ ನೀಡಿದರು.

“ನೀನು ಚಿತ್ರಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಿಲ್ಲವಾದ್ದರಿಂದ ಇದು ನಿನಗೆ ಬಹಳ ಉಪಯೋಗಕ್ಕೆ ಬರುತ್ತದೆ.”

“ಧನ್ಯವಾದಗಳು.”

ನಂತರ ಅವಳು ಪಾರ್ಕ್‌ಗೆ ಹೋಗುವ ಮುನ್ನ ಪ್ರತಿ ದಿನ ಚಿತ್ರ ಬಿಡಿಸುವುದನ್ನು ಅಭ್ಯಾಸ ಮಾಡತೊಡಗಿದಳು. ಜೊತೆಗೆ ಹೇರ್‌ಸ್ಟೈಲ್ ‌ಹಾಗೂ ವೈವಿಧ್ಯಮಯ ಲಿಪ್‌ಸ್ಟಿಕ್‌ ಬಳಸುವುದನ್ನು ಕಲಿತಳು. ಇದೆಲ್ಲದರಿಂದ ಅವಳಲ್ಲಿ ಆತ್ಮವಿಶ್ವಾಸ ಮೂಡಿತು. ಒಮ್ಮೆ ಪಾರ್ಕ್‌ಗೆ ಹೊರಟ ಅವಳಲ್ಲಿ, `ಅವನು ಅಲ್ಲಿಗೆ ಬರದಿದ್ದರೆ? ಒಂದು ವೇಳೆ ಬಂದರೂ ನನ್ನೊಂದಿಗೆ ಮಾತನಾಡದಿದ್ದರೆ?’ ಎನ್ನುವ ಸಂದೇಹ ಸುಳಿದಾಡಿತು. ಆದರೆ ಅವಳ ಊಹೆ ತಪ್ಪಾಗಿತ್ತು. ಪಾರ್ಕ್‌ನಲ್ಲಿ ಅವನು ಅವಳಿಗಾಗಿಯೇ ಕಾಯುತ್ತಿದ್ದ. ಅವನು ತನ್ನನ್ನು `ರವೀಂದ್ರನ್‌’ ಎಂದು ಪರಿಚಯಿಸಿಕೊಂಡ. ಜೊತೆಗೆ ಇದು ತನ್ನ ನಾಯಿ ಹೆಸರು `ರೂಬಿ’ ಎಂದೂ ಪರಿಚಯಿಸಿದ. ನಂತರ ಇಬ್ಬರೂ ತಮ್ಮ ಇಷ್ಟಾನಿಷ್ಟ ವಿಚಾರಗಳ ಕುರಿತಂತೆ ಸ್ವಲ್ಪ ಹೊತ್ತು ಮಾತನಾಡಿದರು.

“ಇಷ್ಟು ಹೊತ್ತು ನಿನ್ನೊಂದಿಗೆ ಮಾತನಾಡಿ ನನಗೇಕೋ ಗಂಟಲು ಒಣಗಿದಂತಿದೆ. ಇಲ್ಲೇ ಹತ್ತಿರದ ಹೋಟೆಲ್‌ನಲ್ಲಿ ಕಾಫಿ ಕುಡಿಯೋಣವೇ?” ಎನ್ನುತಾ ರವೀಂದ್ರನ್‌, ಜೂಲಿಗೆ ಮಾತನಾಡಲೂ ಅವಕಾಶ ಕೊಡದೆ ಅವಳ ಚಿತ್ರಕಲೆಯ ಪ್ಯಾಡ್‌ನೊಂದಿಗೆ ಹೋಟೆಲ್‌ನತ್ತ ಹೊರಟ. ಹೋಟೆಲ್‌ನಲ್ಲಿ ಲಲಿತಾ ಕೂಡ ಹಾಜರಿದ್ದರು.

“ಪ್ರತಿ ಬುಧವಾರ ದೂರದರ್ಶನದಲ್ಲಿ ಚಿತ್ರಕಲೆ ಕುರಿತು ಕಾರ್ಯಕ್ರಮ ಬರುತ್ತದೆ. ನೀನದನ್ನು ರೆಕಾರ್ಡ್‌ ಮಾಡಿಕೊಳ್ಳಬಹುದು,” ಜೂಲಿಯನ್ನು ಕಂಡ ಲಲಿತಾ ಹೇಳಿದರು.

“ಒಳ್ಳೆಯದು, ನಾನು ಒಂದು ನಾಯಿಯ ಚಿತ್ರ ರಚಿಸುವ ಪ್ರಯತ್ನದಲ್ಲಿದ್ದೆ,” ಜೂಲಿ ಹೇಳಿದಳು, `ಲಲಿತಾ ದಿನವೆಲ್ಲಾ ಟಿ.ವಿ. ನೋಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೇನೋ ಪಾಪ….’ ಎಂದು ಮನಸ್ಸಿನಲ್ಲಿ ಯೋಚಿಸುತ್ತಾ ರವೀಂದ್ರನ್‌ ಕಡೆ ತಿರುಗಿದಳು. ಅವನು ಅವಳ ಚಿತ್ರಪಟದ ಮೇಲೆ ಬ್ರಶ್‌ನಿಂದ ಏನನ್ನೋ ಗೀಚುತ್ತಿದ್ದ. ಲಲಿತಾ ಅವನ ಮತ್ತು ಜೂಲಿಯ ನಡುವೆ ಪರಿಚಯ ಹೇಗಾಯಿತೆಂದು ಕೇಳಲಿಲ್ಲ. ಕೆಲವು ಸಮಯದ ಬಳಿ ಜೂಲಿ ತಾನು ಹೊರಡುವೆನೆಂದು ಎದ್ದಳು.

“ಜೂಲಿ, ಮುಂದಿನ ವಾರ ನಾನು ಆಸ್ಪತ್ರೆಯಲ್ಲಿರಬಹುದೇನೋ…?” ಲಲಿತಾ ಸಾಧಾನವಾಗಿ ನುಡಿದರು.

“ನಾನು ಅಲ್ಲಿಯೇ ನಿಮ್ಮನ್ನು ಭೇಟಿಯಾಗುತ್ತೇನೆ,” ಎಂದಳು ಜೂಲಿ.

“ಅದೂ ಒಳ್ಳೆಯದು. ಅದುವರೆಗೂ ನೀನು ಚಿತ್ರಕಲೆ ಅಭ್ಯಾಸವನ್ನು ನಿಲ್ಲಿಸಬೇಡ ಮುಂದುವರಿಸು.”

ಲಲಿತಾ ಯಾವ ವಾರ್ಡ್‌ನಲ್ಲಿರುತ್ತಾರೆ ಎಂದು ಕೇಳುವುದನ್ನು ಮರೆತಿದ್ದಳು ಜೂಲಿ. ತಿರುಗಿ ಅವಳು ಪಾರ್ಕ್‌ಗೆ ಹೋಗುವವರೆಗೂ ಲಲಿತಾರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಜೂಲಿ ಪಾರ್ಕ್‌ಗೆ ಬಂದಾಗ ಅಲ್ಲಿ ರವೀಂದ್ರನ್‌ ರೂಬಿಯೊಂದಿಗೆ ಇರುವುದನ್ನು ಕಂಡಳು.

“ರೂಬಿ ಆರೋಗ್ಯವಾಗಿದೆಯಾ?” ಕೇಳಿದಳು.

“ಓಹ್‌ ಚೆನ್ನಾಗಿದೆ.” ರವೀಂದ್ರನ್‌ ಅನ್ಯಮನಸ್ಕನಾಗಿದ್ದಾನೆಂದು ಅರಿತ ಜೂಲಿ, “ಏನು ಯೋಚಿಸುತ್ತಿದ್ದೀರಿ?” ಎಂದಳು.

“ಒಂದು ಚಿತ್ರಕಲಾ ಪ್ರದರ್ಶನವಿತ್ತು, ಅದರ ಕುರಿತು…..”

“ಇವತ್ತಾ?”  ಅವನು `ಹೌದು’ ಎಂಬಂತೆ ತಲೆ ಅಲುಗಿಸಿದ.

“ಎಲ್ಲಿಗೆ? ನಾವು ಹೋಗೋಣವೇ?”

`ಸರಿ’ ಎಂಬಂತೆ ಒಪ್ಪಿಗೆ ನೀಡಿದ.

“ನನಗೂ ಚಿತ್ರಕಲೆ ಎಂದರೆ ಬಹಳ ಇಷ್ಟ.”

“ಸರಿ. ನಾವು ಬೇಗನೇ ಹೋದರೆ ಬಸ್ಸು ಸಿಗಬಹುದು,” ಎಂದು ಅವಸರಿಸಿದ.

ಜೂಲಿ ತನ್ನ ಚಿತ್ರಕಲೆಯ ಬ್ಯಾಗ್‌ನೊಂದಿಗೆ ರವೀಂದ್ರನ್‌ನನ್ನು ಹಿಂಬಾಲಿಸಿದಳು.

“ಈ ಬಸ್‌ ಆಸ್ಪತ್ರೆವರೆಗೆ ಮಾತ್ರವೇ ಹೋಗುತ್ತದೆ,” ಬಸ್ಸನ್ನೇರಿದ ಜೂಲಿ ಹೇಳಿದಳು.

“ಅಲ್ಲಿಯೇ ಪ್ರದರ್ಶನ.”

“ಓಹೋ…, ಹಾಗಾದರೆ ನಾನು ಅಲ್ಲಿ ನನ್ನ ಸ್ನೇಹಿತೆ ಲಲಿತಾರನ್ನು ನೋಡಬಹುದು.”

“ಲಲಿತಾ ಚಂದ್ರಶೇಖರ್‌?”

“ಹಾಂ….. ಹೌದು. ನಾನೂ ಅವರೂ ಒಂದೇ ಆಫೀಸ್‌ನಲ್ಲಿ ಕೆಲಸ ಮಾಡಿದ್ದೆವು. ನಿಮಗೆ ಅವರ ಪರಿಚಯ ಹೇಗೆ?”

ಅವನು ಜೇಬಿನಿಂದ ಒಂದು ಆಮಂತ್ರಣ ಪತ್ರಿಕೆಯನ್ನು ಹೊರತೆಗೆದ. ಅದು ಅಂದಿನ ಚಿತ್ರಪ್ರದರ್ಶನದ ಆಹ್ವಾನ ಪತ್ರಿಕೆಯಾಗಿತ್ತು. ಅಲ್ಲಿ ತರಬೇತುದಾರರು, ಆಯೋಜಕರು ಎನ್ನುವ ಒಕ್ಕಣೆಯಡಿಯಲ್ಲಿ ಲಲಿತಾ ಚಂದ್ರಶೇಖರ್‌ ಹೆಸರಿತ್ತು.

“ನೀನು ನಿನ್ನ ಸ್ನೇಹಿತರನ್ನು ಕರೆದುಕೊಂಡು ಬಾ, ಎಂದು ಹೇಳಿದರು,” ಎನ್ನುತ್ತಾ ಈಕೆ ನನ್ನ ದೊಡ್ಡಮ್ಮ ಎಂದು ಹೇಳಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ