ಮಗಳು ರಜನಿಯನ್ನು ಬೀಳ್ಕೊಟ್ಟ ರೇಷ್ಮಾ ನೇರವಾಗಿ ವಿಮಾನ ನಿಲ್ದಾಣದಿಂದ ಮನೆಗೆ ಬಂದು, ಡ್ರಾಯಿಂಗ್‌ ರೂಮಿನಲ್ಲಿದ್ದ ಸೋಫಾದ ಮೇಲೆ ಉದ್ದಕ್ಕೆ ಕಾಲು ಚಾಚಿಕೊಂಡು, ಮೈ ಚೆಲ್ಲಿದಳು. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಸಡಗರ, ಸಂಭ್ರಮ, ಕೇಕೆ, ಕೂಗಾಟ ಎಲ್ಲ ಮುಗಿದು ಮನೆಯ ವಾತಾವರಣ ಸ್ತಬ್ಧವಾಗಿ `ಬಿಕೊ’ ಎನ್ನುತ್ತಿತ್ತು. ಅದು ಗಿಜಿಗುಡುತ್ತಿದ್ದ ಬಂಧುಗಳು, ಅತಿಥಿಗಳು, ಹರಿಬರಿ, ಗಡಿಬಿಡಿ ಎಲ್ಲ ನಿಂತು ಒಂದು ರೀತಿಯಲ್ಲಿ ಮಳೆ ನಿಂತ ಮೇಲಿನ ನಿಶ್ಶಬ್ದದ ಶೂನ್ಯ ಸೃಷ್ಟಿಸಿತ್ತು. ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ಬಂದ ರೇಷ್ಮಾಳ ಕಂಗಳಲ್ಲಿ ನೋವು ಹೆಪ್ಪುಗಟ್ಟಿತ್ತು. ಮಗಳ ಅಗಲುವಿಕೆಯ ನೋವು ಪ್ರವಾಹದಂತೆ ಒತ್ತರಿಸಿ ಬರುತ್ತಿದ್ದರಿಂದ ಅದನ್ನು ತಡೆಯಲು ಕಣ್ಣಿನ ರೆಪ್ಪೆಗಳು ಸತತವಾಗಿ ಸೋಲುತ್ತಿದ್ದವು. ಕಳೆದ 25 ವರ್ಷಗಳಿಂದ ಬದುಕಿನ ಹೋರಾಟದಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದಲೇ ಮುಂದಿಟ್ಟು, ಪ್ರತಿ ಸಮಸ್ಯೆಯನ್ನು ಧೈರ್ಯದಿಂದಲೇ ಮೆಟ್ಟಿ ನಿಂತು ಈ ಸುಖದ ಮಹಲನ್ನು ಕಟ್ಟಿಸಿದ್ದಳು.

ಶ್ಯಾಮರಾಯರದು ಊರಲ್ಲಿ ಬಹು ದೊಡ್ಡ ಹೆಸರು. ಇವರ ಪರಿಚಯವಿರದವರು ಅತಿ ವಿರಳ. ಊರಿನ ಪ್ರತಿಷ್ಠಿತ ವ್ಯಕ್ತಿ, ಗೌರವಸ್ಥ ಮನೆತನ, ಜೊತೆಗೆ ಆಗರ್ಭ ಶ್ರೀಮಂತರು. ಮನೆಯ ಯಜಮಾನರಾಗಿದ್ದ ಶ್ಯಾಮರಾಯರು ಖ್ಯಾತ ವಕೀಲರಾಗಿದ್ದರು. ಬದುಕಿನ  ಮುಸ್ಸಂಜೆಯಲ್ಲಿ ಅದೆಷ್ಟು ಚುರುಕು, ಚೂಟಿಯಾಗಿದ್ದರೆಂದರೆ ಹದಿನಾರರ ಯುವಕರು ನಾಚಿಕೆಪಟ್ಟುಕೊಳ್ಳುವಷ್ಟು ಲವಲವಿಕೆಯಿಂದ ಇರುತ್ತಿದ್ದರು.

ಇಲ್ಲಿಯವರೆಗೂ ಕುಟುಂಬದ ಪ್ರತಿಷ್ಠೆ ಹಾಗೂ ಮರ್ಯಾದೆಯನ್ನು ಜತನದಿಂದ ರಾಯರು ಕಾಪಾಡಿಕೊಂಡು ಬಂದಿದ್ದರು. ಕುಟುಂಬದ ಏಕೈಕ ಹೆಣ್ಣುಮಗಳಾದ ರೇಷ್ಮಾಳ ಕುರಿತು ರಾಯರು ಚಿಂತಿಸುತ್ತಿದ್ದರು. ಅವರು ಚಿಂತಿಸುವುದಕ್ಕೆ ಕಾರಣವಿತ್ತು. ರೇಷ್ಮಾಳಿಗೆ ಜನ್ಮ ನೀಡಿ ತಂದೆ ಎನಿಸಿಕೊಂಡಿದ್ದ ಮಗ ಶಂಭುನಾಥ ತನ್ನ ವಿಪರೀತ ಕುಡಿತದ ಚಟದಿಂದಾಗಿ, ಮನೆಯ ಮರ್ಯಾದೆ ಜೊತೆಗೆ ಹಣ, ಒಡವೆ ಎಲ್ಲವನ್ನೂ ಮಣ್ಣುಪಾಲು ಮಾಡಿಬಿಟ್ಟಿದ್ದ.

ಮಗನನ್ನು ಸರಿದಾರಿಗೆ ತರುವ ರಾಯರ ಪ್ರಯತ್ನಗಳೆಲ್ಲ ವ್ಯರ್ಥವಾಗಿದ್ದವು. ಮಗ ತಮ್ಮಂತೆಯೇ ವಕೀಲಿಗಿರಿ ಮಾಡಿಕೊಂಡು ಸುಖವಾಗಿರಲೆಂದು, ಗೌರವಯುತವಾಗಿ ಬದುಕಲು ಸಹಾಯವಾಗಲಿ ಎಂದು ವಕಾಲತ್ತಿಗೆ ಅನುಕೂಲಾದ ಡಿಗ್ರಿಗಳನ್ನು ಕೊಡಿಸಿದ್ದರು. ಮಗ ಓದಿ ದೊಡ್ಡ ವಕೀಲನಾಗಿ ಹೆಸರು ಮಾಡಿ ತಮ್ಮ ವೃತ್ತಿಗೆ ಸಾಥ್‌ ನೀಡುತ್ತಾನೆ ಎನ್ನುವ ದೊಡ್ಡ ಕನಸು ಕಟ್ಟಿಕೊಂಡ ರಾಯರು ಹೆಮ್ಮೆಯಿಂದ ಓಡಾಡುತ್ತಿದ್ದರು.

ಆದರೆ ಕೆಲವೇ ದಿನಗಳಲ್ಲಿ ಮಗ ರಾಯರ ಕನಸನ್ನು ನುಚ್ಚು ನೂರು ಮಾಡಿಬಿಟ್ಟ. ಕೋರ್ಟ್‌ ಕಛೇರಿಗೆ ಹೋಗೋ ಬದಲು, ಸಾರಾಯಿ ಅಂಗಡಿ ಕಾಯುವ ಕೆಲಸ ಮಾಡಹತ್ತಿದ. ರಾತ್ರಿ ಹಗಲು ಎನ್ನದೆ ಸದಾ ಮತ್ತಿನಲ್ಲೇ ತೇಲಾಡುತ್ತಾ, ಬಾಯಿಗೆ ಬಂದಂತೆ ಕಿರುಚಾಡುವ ಈ ಕುಡುಕ ವಕೀಲನ ಬಳಿ ವಕಾಲತ್ತಿಗಾಗಿ ಯಾರು ಬರುತ್ತಾರೆ? ಅಷ್ಟಕ್ಕೂ ಶ್ಯಾಮರಾಯರ ಸೊಸೆ ಕೂಡ ಜವಾಬ್ದಾರಿಯುತ ಗೃಹಿಣಿಯಾಗಿರಲಿಲ್ಲ. ಗಂಡಮಕ್ಕಳನ್ನು ಅಷ್ಟೋ ಇಷ್ಟೋ ನೋಡಿಕೊಳ್ಳುವುದರ ಹೊರತಾಗಿ ಮಿಕ್ಕುಳಿದ ಸಮಯವೆಲ್ಲ ಜಗಳ, ಬೈಗುಳಕ್ಕೆ ಮೀಸಲಾಗಿರುತ್ತಿತ್ತು. ಇಂತಹ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಎಂತಹ ಸಂಸ್ಕಾರ ದಕ್ಕಬಹುದು? ಜೊತೆಗೆ ಎಂತಹ ಭವಿಷ್ಯ ದೊರಕಬಹುದು? ಎಂದು ತಾತಾ ಶ್ಯಾಮರಾಯರಿಗೆ ಅರ್ಥವಾಗಿ ಹೋಗಿತ್ತು. ಮಗನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲು ಹೋಗದ ರಾಯರಿಗೆ ತಮ್ಮ ಮುದ್ದು ಮೊಮ್ಮಗಳಾದ ರೇಷ್ಮಾಳ ಕುರಿತು ಹೆಚ್ಚು ಚಿಂತೆ. ರೂಪವಂತೆ ಹಾಗೂ ಗುಣವತಿಯಾದ ಇವಳನ್ನು ತಂದೆತಾಯಿ ದಾರಿ ತಪ್ಪಿಸಿಯಾರು ಎನ್ನುವ ಆತಂಕ ಎದೆಯಲಿತ್ತು. ಬೇಜವಾಬ್ದಾರಿ ತಂದೆ ತಾಯಿಯೊಂದಿಗೆ ಮೊಮ್ಮಗಳನ್ನು ಬಿಡಿಲೊಪ್ಪದ ರಾಯರು ಮೆಟ್ರಿಕ್‌ ಪರೀಕ್ಷೆ ಮುಗಿಯುತ್ತಿದ್ದಂತೆ 18 ತುಂಬಿದ ರೇಷ್ಮಾಳಿಗೆ ಸೂಕ್ತ ವರನನ್ನು ನೋಡಿ ಅದ್ಧೂರಿಯಾಗಿ ಮದುವೆ ಮಾಡಿ ತಲೆಯ ಮೇಲಿದ್ದ ಭಾರವನ್ನು ಕೆಳಗಿಳಿಸಿಕೊಂಡರು. ಮೊಮ್ಮಗಳನ್ನು ದಡ ಸೇರಿಸಿದ ತೃಪ್ತಿ ರಾಯರಿಗೆ ಇತ್ತು. ರೇಷ್ಮಾಳ ಕೈಹಿಡಿದ ರಾಜೀವ್ ಗೆ ಬೆಂಗಳೂರಿನಲ್ಲಿ ಬಹುದೊಡ್ಡ ಫರ್ನೀಚರ್‌ ಶೋರೂಂ ಇತ್ತು. ರಾಜೀವ್ ಮನೆಗೆ ಒಬ್ಬನೇ ಮಗ. ತನಗಿದ್ದ ಇಬ್ಬರು ತಂಗಿಯರನ್ನು ಒಳ್ಳೆಯ ಕಡೆ ಮದುವೆ ಮಾಡಿಕೊಟ್ಟಿದ್ದ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಮಕ್ಕಳು ಚಿಕ್ಕಮ್ಮನ ಆಸರೆ, ಲಾಲನೆ ಪಾಲನೆಯಲ್ಲಿ ಸುಖವಾಗಿ ಬೆಳೆದಿದ್ದರು.

ಮದುವೆಯಾದ ನಂತರ ರೇಷ್ಮಾ ಬೆಂಗಳೂರಿಗೆ ಬಂದಳು. ವಿದ್ಯಾಭ್ಯಾಸ ಮುಂದವರಿಸಬೇಕೆಂಬ ಹಂಬಲದಿಂದ ಪರೀಕ್ಷೆಯ ಫಲಿತಾಂಶ ಬರುತ್ತಿದ್ದಂತೆ ಲಗುಬಗೆಯಿಂದ ಬೆಂಗಳೂರಿನಲ್ಲೇ ಅತ್ಯುತ್ತಮ ಕಾಲೇಜೊಂದರಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಸಫಲಳಾದಳು.

ರಾಜೀವ್ ‌ಹಾಗೂ ರೇಷ್ಮಾಳ ನಡುವೆ ವಯಸ್ಸು ಮತ್ತು ಸ್ವಭಾವದಲ್ಲಿ ತೀರಾ ಅಂತರವಿತ್ತು. ರೇಷ್ಮಾ ಚಂಚಲೆ, ವಾಚಾಳಿ ಹಾಗೂ ಮೋಜು ಮಸ್ತಿ ಮಾಡುವುದರಲ್ಲಿ ಮುಂದಾದರೆ, ರಾಜೀವ್ ‌ಗಂಭೀರ ಹಾಗೂ ಶಾಂತ ಸ್ವಭಾವದವನಾಗಿದ್ದ. ದಿನವೆಲ್ಲಾ ಶೋರೂಮಿನಲ್ಲಿ ಕಳೆಯುತ್ತಿದ್ದ ರಾಜೀವ್ ‌ಬಗ್ಗೆ ಅವಳು ಸ್ವಲ್ಪ ಕಾಳಜಿ ತೋರದೆ ನಿರ್ಲಿಪ್ತಳಾಗಿದ್ದಳು.

ಹೊಸ ಜಾಗ, ಹೊಸ ಪಟ್ಟಣ, ಕಾಲೇಜಿನ ಮುಕ್ತ ವಾತಾವರಣ, ಹೊಸ ಹೊಸ ಗೆಳತಿಯರು, ಹೊಸ ಉತ್ಸಾಹ, ಹೊಸ ಆವೇಶ…. ಹೊಸ ಕನಸು… ರೇಷ್ಮಾಳಂತೂ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಯಂತೆ ಹಾರಾಡತೊಡಗಿದಳು. ಮೋಜು, ಮಸ್ತಿಗಳಲ್ಲೇ ಮುಳುಗಿಹೋಗಿದ್ದ ಅವಳನ್ನು ನಿಯಂತ್ರಿಸುವವರೇ ಇಲ್ಲದಂತಾಗಿತ್ತು.

ಇದ್ದಕ್ಕಿದ್ದಂತೆ ಒಂದು ದಿನ ಊರಿಂದ ಚಿಕ್ಕಮ್ಮ ಆಗಮಿಸಿದರು. ಒಮ್ಮೆ ಬಂದು, ಒಂದಿಷ್ಟು ದಿನ ಆರಾಮವಾಗಿದ್ದು, ಎಲ್ಲರನ್ನೂ ವಿಚಾರಿಸಿಕೊಳ್ಳುತ್ತಾ ತಮ್ಮ ಅಂಕೆಯಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಸದಾ ಏನಾದರೊಂದು ವಿಚಾರವನ್ನು ಮುಂದಿಟ್ಟುಕೊಂಡು ಬಡಬಡಿಸುವುದು ಅವರ ಹುಟ್ಟುಗುಣ. ಯಾರೂ ಅವರ ಮಾತಿಗೆ ಎದುರಾಡುವಂತಿರಲಿಲ್ಲ, ಅಷ್ಟು ಕಟ್ಟುನಿಟ್ಟು. ಸಾಮಾನ್ಯವಾಗಿ ರಾಜೀವ್ ‌ಪ್ರತಿನಿತ್ಯ ಶೋರೂಮ್ ಮುಚ್ಚಿಕೊಂಡು ರಾತ್ರಿ 11 ಗಂಟೆಗೆ ಮನೆಗೆ ಬರುತ್ತಿದ್ದ. ಅಂದು ರಾತ್ರಿ ಒಂಬತ್ತಾಗಿತ್ತು. ಬಿಂದಾಸ್‌ ಆಗಿ ಸಿನಿಮಾ ನೋಡಿಕೊಂಡು ಬಂದ ರೇಷ್ಮಾ ಪಡಸಾಲೆಯಲ್ಲಿ ನಾದಿನಿಯರೊಂದಿಗೆ ಹರಟುತ್ತಾ ಕುಳಿತಿದ್ದಳು. ರೇಷ್ಮಾಳನ್ನು ಗಮನಿಸಿದ ಚಿಕ್ಕ ಅತ್ತೆಗೆ ಕೋಪ ನೆತ್ತಿಗೇರಿತ್ತು. ತಕ್ಷಣವೇ ತಮ್ಮನ್ನು ಕಾಣಲು ಬರಹೇಳಿದರು.

“ಎಲ್ಲಿಂದ ಬರ್ತಾ ಇದೀಯಾ….?” ಅವರ ಗಡುಸು ದನಿಯಲ್ಲಿ ಕೋಪ ಅಡಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

“ಈಗಷ್ಟೇ ಸ್ಪೆಷಲ್ ಕ್ಲಾಸ್‌ ಮುಗೀತು ಅತ್ತೆ…” ರೇಷ್ಮಾ ಉತ್ತರಿಸಿದಳು.

“ಆದ್ರೆ…. ನಾನು 5 ಗಂಟೆಗೆ ನಿನ್ನ ಕಾಲೇಜು ಬಳಿಗೆ ಹೋಗಿದ್ದೆ. ಕಾಲೇಜು ಮುಚ್ಚಿತ್ತು……”

ತನ್ನ ಒಂದು ಸುಳ್ಳನ್ನು ಮುಚ್ಚಿಡಲು ಇನ್ನೊಂದು ಸುಳ್ಳನ್ನು ಹೆಣೆಯುವುದು ಈಗ ರೇಷ್ಮಾಳಿಗೆ ಅನಿವಾರ್ಯಾಗಿತ್ತು.

“ಹಾಂ….. ದಾರಿಯಲ್ಲಿ ಬರಬೇಕಾದ್ರೆ ಸೀಮಾ ಸಿಕ್ಕಿದ್ಲು. ಅವಳ ಜೊತೆ ಅವರ ಮನೆಗೆ ಹೋಗಿದ್ದೆ….. ಹಾಗಾಗಿ ಲೇಟಾಯಿತು.”

ಸೀಮಾ, ರಾಜೀವನ ಸ್ನೇಹಿತನ ಪತ್ನಿ. ಅದೇ ಕಾಲೇಜಿನಲ್ಲೇ ಓದುತ್ತಿದ್ದಳು. ಅಲ್ಲೇ ನಿಂತಿದ್ದ ರಾಜೀವ್‌, ಕೋಪೋದ್ರಿಕ್ತನಾಗಿ ತನ್ನ ಕೈಯಲ್ಲಿದ್ದ ಲೋಟವನ್ನು ರೇಷ್ಮಾಳತ್ತ ಜೋರಾಗಿ ಎಸೆದು ಕೂಗಾಡಿದ, “ಸುಳ್ಳು ಹೇಳೋಕೆ ಸ್ವಲ್ಪ ನಾಚಿಕೆ ಆಗಲ್ವಾ? ಸೀಮಾ ಹಾಗೂ ಅರಣ್‌ ಈಗಷ್ಟೇ ಇಲ್ಲಿಂದ ಹೋದ್ರು. ದಿನಪೂರ್ತಿ ಚಿಕ್ಕಮ್ಮ ಒಬ್ಬರೇ ಇರ್ತಾರೆ ಅನ್ನೋ ಜವಾಬ್ದಾರಿ ಬೇಡ್ವಾ ನಿನಗೆ? ಕಾಲೇಜಿಗೆ ಹೋಗೋವರ್ಗೂ ನೆಟ್ಟಗೆ ಇರ್ತೀಯಾ. ಆಮೇಲೆ ನಿನ್ನಿಷ್ಟದಂತೆ  ಬಿಂದಾಸ್‌ ಆಗಿ ಮಸ್ತಿ ಮಾಡೋಕೆ ಶುರು ಮಾಡ್ತೀಯಾ. ನಮ್ಮ ಮನೆಯ ಪ್ರತಿಷ್ಠೆ ಸಂಪ್ರದಾಯ, ಕಟ್ಟುನಿಟ್ಟಿನ ಬಗ್ಗೆ ನಿನಗೆ ಗೊತ್ತಿಲ್ವಾ?” ರಾಜೀವ್ ‌ಕೋಪದಿಂದ ದುರುಗುಟ್ಟಿ ನೋಡುತ್ತಾ ಹೊರಹೋದ.

ಅವನು ಇಂದು ಕೋಪ ಮಾಡಿಕೊಳ್ಳುವುದಕ್ಕೂ ಒಂದು ನಿರ್ದಿಷ್ಟ ಕಾರಣವಿತ್ತು. ಮದುವೆಯಾಗಿ ಒಂದು ವರ್ಷ ಕಳೆದರೂ ಯಾವ ವಿಚಾರದಲ್ಲೂ, ಎಂದೂ ಅವಳನ್ನು ಗದರಿಸಿರಲಿಲ್ಲ. ಆದರೆ ಇಂದು ರೇಷ್ಮಾಳ ಸುಳ್ಳು, ಬೂಟಾಟಿಕೆಯಿಂದಾಗಿ ಚಿಕ್ಕಮ್ಮನ ಎದುರು ತಲೆ ತಗ್ಗಿಸುವಂತಾಗಿತ್ತು. ಅವನಲ್ಲಿ ಕೋಪ ಇಮ್ಮಡಿಗೊಂಡಿತ್ತು.

ಈ ಎಲ್ಲಾ ಘಟನೆಯಿಂದಾಗಿ ರೇಷ್ಮಾ ಕುದ್ದುಹೋದಳು. ಕೋಪವನ್ನು ಹತ್ತಿಕ್ಕಲಾಗದೆ ಬಸುಗುಡುತ್ತಿದ್ದಳು. ತನ್ನನ್ನು ಚಿಕ್ಕವಳೆಂದು ಪರಿಗಣಿಸದೆ ತನ್ನ ಪತಿ ಎಲ್ಲರೆದುರು ಅವಮಾನ ಮಾಡಿದ್ದನ್ನು ನೆನೆದು ರಾತ್ರಿಯಲ್ಲಿ ನಿದ್ದೆ ಮಾಡದೆ ಅಳುತ್ತಾ ಕೂತಿದ್ದಳು.

ಬೆಳ್ಳಂಬೆಳಗ್ಗೆ ಯಾರಿಗೂ ತಿಳಿಸದೆ ರೇಷ್ಮಾ ತವರುಮನೆಗೆ ವಾಪಸ್ಸು ಬಂದಳು. ಮನೆಯಲ್ಲಿ ಯಾರೂ ಕೂಡ ಏನನ್ನೂ ಕೇಳಲಿಲ್ಲ. ಪ್ರತಿಯೊಂದನ್ನು ಸೂಕ್ಷ್ಮವಾಗಿ  ನೋಡಿ, ಕೇಳಿ, ಬುದ್ಧಿಮಾತು ಹೇಳಿ ಸಂತೈಸುತ್ತಿದ್ದ ಅಜ್ಜಿ 6 ತಿಂಗಳ ಹಿಂದೆ ದೈವಾಧೀನರಾಗಿದ್ದರು. ಅದೇ ವೇಳೆ ತಕ್ಷಣವೇ ರಾಜೀವ್ ಫೋನ್‌ ಮಾಡಿ ರೇಷ್ಮಾ ಮನೆಗೆ ತಲುಪಿರುವುದನ್ನು ಖಚಿತಪಡಿಸಿಕೊಂಡು ಮತ್ತೆ ಫೋನ್‌ ಮಾಡುವ ಗೋಜಿಗೆ ಹೋಗಲಿಲ್ಲ.

ಮೂರು, ನಾಲ್ಕು  ದಿನಗಳು ಕಳೆದ ಮೇಲೆ ರೇಷ್ಮಾ ತವರಿಗೆ ಬಂದು, ಗಂಡನ ಮನೆಯಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ ಹೇಳತೊಡಗಿದಳು. ಎಲ್ಲಾ ಸ್ಟೋರಿಯನ್ನು ಕೇಳಿಸಿಕೊಂಡ ತಾಯಿ ಮಗಳಿಗೆ ಬುದ್ಧಿ ಹೇಳುವುದನ್ನು ಬಿಟ್ಟು, ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವಂತೆ ಮಗಳನ್ನು ವಹಿಸಿಕೊಂಡು ಕೂಗಾಡಲು ಶುರುವಿಟ್ಟುಕೊಂಡರು.

“ಏನು ಅನ್ಕೊಂಡಿದ್ದಾರೆ ಅವರು. ನನ್ನ ಮಗಳ ಮೇಲೆ ಕೈ ಮಾಡುವದಂದ್ರೇನು….? ಕೇಸ್‌ ಹಾಕಿದ್ರೆ ಆಗ ಗೊತ್ತಾಗುತ್ತೆ….”

ತನ್ನ ಕ್ರೂರ ದಾಂಪತ್ಯದ ಹಿನ್ನೆಲೆಯಿಂದಾಗಿ ಆಕೆ ಮಗಳ ಬದುಕು ಹೀಗಾಯಿತಲ್ಲ ಅನ್ನೋ ನೋವಿನಿಂದ ಇನ್ನಷ್ಟು ಆಕ್ರೋಶಗೊಂಡರು. ಮಗಳ ಮೇಲಿನ ಅತಿಯಾದ ಮಮಕಾರದಿಂದಾಗಿ ಬಿರುಕುಬಿಟ್ಟ ಸಂಬಂಧವನ್ನು ಬೆಸುಗೆ ಹಾಕುವ ಬದಲಿಗೆ, ದೂರ ಮಾಡುತ್ತ ಅವರ ಪ್ರಯತ್ನ ಸಾಗಿತ್ತು. ರೇಷ್ಮಾ ಅದಕ್ಕೆ ತಕ್ಕಂತೆ ತನ್ನ ಗಂಡನ ಮನೆಯ ಘಟನೆಯನ್ನು ರಸವತ್ತಾಗಿ ಬಣ್ಣಿಸುವಲ್ಲಿ ಸಫಲಳಾಗಿದ್ದಳು. ಗಂಡನ ಮನೆಯಲ್ಲಿ ತಾನು ಪಟ್ಟ ಕಷ್ಟಗಳನ್ನು ನೆನೆಯುತ್ತಾ, “ನನಗೆ ಇಂದಿಗೂ ಕೂಡ ನನ್ನ ನಾದಿನಿಯರನ್ನು ಜ್ಞಾಪಿಸಿಕೊಂಡಾಗೆಲ್ಲಾ… ಅವರಿಗಿಂತ ಹೆಚ್ಚಾಗಿ ನನ್ನ ತಾಯಿಯ ಮೇಲೆ ವಿಪರೀತ ಕೋಪ ಬರುತ್ತದೆ. ನನ್ನ ತಾಯಿಯ ಮಾತು ಕೇಳಿ ಗಂಡನ ಮನೆ ತೊರೆದು ನನ್ನ ಅತ್ಯಮೂಲ್ಯ 5 ವರ್ಷಗಳನ್ನು ಹಾಳು ಮಾಡಿಕೊಂಡೆ. ಆದರೆ ಈಗ ನೆನಪಿಸಿಕೊಂಡಾಗೆಲ್ಲಾ….. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಗಿದೆ ಅನ್ನಿಸುತ್ತದೆ,”  ಗತ ಜೀವನದ ಹಸಿರಾದ ನೆನಪನ್ನು ಹಾಗೆ ನೆನೆಯುತ್ತಾ ನೆನಪಿನಂಗಳಕ್ಕೆ ಜಾರಿದಳು……

ಇಂಟರ್‌ ಮೀಡಿಯೆಟ್‌ ಪರೀಕ್ಷೆ ಹತ್ತಿರ ಬಂದಿತ್ತು. ಎಂತಹ ಪರಿಸ್ಥಿತಿಯಲ್ಲೂ ವಿದ್ಯಾಭ್ಯಾಸವನ್ನು ನಿಲ್ಲಿಸಲೇಬಾರದೆಂದು ನಿರ್ಧರಿಸಿದ ರೇಷ್ಮಾ ಪರೀಕ್ಷೆ ಬರೆಯುವುದಕ್ಕಾಗಿ ಮೈಸೂರಿನಲ್ಲಿರುವ ದೂರದ ಸಂಬಂಧಿಯಾದ ವಿಜಿ ಮಾಮನ ಮನೆಗೆ ಬಂದಿಳಿದಳು. ರೇಷ್ಮಾ ಮನೆಗೆ ಬರುತ್ತಿದ್ದಂತೆ ದುಷ್ಟಬುದ್ಧಿಯ ಪ್ರತಿರೂಪದಂತಿರುವ ಇಬ್ಬರು ಗಂಡುಮಕ್ಕಳು, ಹುಡುಗಿಯರನ್ನು ನೋಡಿಯೇ ಇಲ್ಲವೇನೋ ಎಂಬಂತೆ ಸದಾ ಚಪಲ ಚೆನ್ನಿಗರಾಯರಂತೆ ಅವಳ ಹಿಂದೆ ಮುಂದೆ ಸುತ್ತಲು ಶುರುಮಾಡಿದರು. ಅದ್ಯಾವ ಪರಿ ಅವಳನ್ನು ಹಿಂಸಿಸುತ್ತಿದ್ದರೆಂದರೆ ಇಡಿಯಾಗಿ ನುಂಗಿಹಾಕುವಂತೆ ಅವಳ ಮೇಲೆ ಮುಗಿಬೀಳುತ್ತಿದ್ದರು. ಅದೊಂದು ದಿನ ರಾತ್ರಿ ಎಲ್ಲರೂ ಮಲಗಿದ ಮೇಲೆ ಯಾರೋ ಅವಳ ಸೊಂಟವನ್ನು ನೇವರಿಸಿದಂತಾಗಿ ದಿಗಿಲುಗೊಂಡಳು. ಎದ್ದು ಅತ್ತ ಇತ್ತ ನೋಡಿದರೆ ಯಾರೂ ಕಾಣಿಸಲಿಲ್ಲ. ಗಾಬರಿಯಿಂದ ಓಡಿ ಹೋಗುತ್ತಿರುವುದು ಕಾಣಿಸಿತು. ಆಗಿನಿಂದ ಬಾಗಿಲನ್ನು ಭದ್ರಪಡಿಸಿಕೊಂಡು ಮಲಗುತ್ತಿದ್ದಳು. ಹೀಗೆ ಹಲವಾರು ಚಿತ್ರ ವಿಚಿತ್ರ ಅಸಹ್ಯ ಘಟನೆಗಳ ಅಗ್ನಿಪರೀಕ್ಷೆಯನ್ನು ಎದುರಿಸಿ, ಅನುಭವಿಸಿ ಸಾಕು ಸಾಕೆನಿಸಿ ತವರಿಗೆ ಮರಳಿ ಬಂದಳು.

ಮನೆಗೆ ಮರಳಿ ಬಂದ ಕೆಲವು ದಿನಗಳಲ್ಲಿ ತನ್ನ ತಾಯಿಯ ಅಜ್ಞಾನ, ಅವ್ಯವಹಾರಿಕ ಎಡವಟ್ಟಿನ ಸಲಹೆಯಿಂದಾಗಿ ತನ್ನ ಚಿಕ್ಕಮ್ಮನ ಮಗಳ ಜೊತೆ ರೇಷ್ಮಾ ದೆಹಲಿಗೆ ಹೋಗುವ ಅವಕಾಶ ಲಭಿಸಿತು. ಇಲ್ಲೇ ಇದ್ದು ಬಿದ್ದು ಹೋಗುವುದಕ್ಕಿಂತ ದೊಡ್ಡ ಸಿಟಿಗೆ ಹೋಗಿ ಜೀವನಕ್ಕೊಂದು ದಾರಿ ರೂಪಿಸಿಕೊಳ್ಳಬೇಕೆಂಬ ಕನಸಿನೊಂದಿಗೆ ದೆಹಲಿ ತಲುಪಿದಳು. ಮಹಾನಗರ ದೆಹಲಿಯಲ್ಲಿ ತನ್ನ ಇಷ್ಟದ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಿಕೊಂಡು, ಯಾವುದಾದರೊಂದು ಚಿಕ್ಕ ಬೊಟಿಕ್‌ನ್ನು ತೆರೆದು ಬದುಕನ್ನು ಕಟ್ಟಿಕೊಳ್ಳಬೇಕೆಂಬ ನಿರೀಕ್ಷೆಯಿಂದಿದ್ದಳು. ಆದರೆ ದಿನಕಳೆದಂತೆ ತನ್ನ ಅಕ್ಕನ ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಪುಕ್ಕಟೆ ಮನೆಗೆಲಸದವಳಾಗಿ ಬಂದಿದ್ದೇನೆ ಎನಿಸಿತು. ಪ್ರತಿ ವಾರದ ಅಂತ್ಯದಲ್ಲಿ ಮಕ್ಕಳಿಬ್ಬರನ್ನು ರೇಷ್ಮಾ ಸುಪರ್ದಿಗೆ ಬಿಟ್ಟು ಆರಾಮವಾಗಿ ತಡರಾತ್ರಿ ಪಾರ್ಟಿಗಳಿಗೆ ತೆರಳುತ್ತಿದ್ದರು. ರೇಷ್ಮಾಳ ಜೊತೆ ಮಕ್ಕಳು ಚೆನ್ನಾಗಿ ಹೊಂದಿಕೊಂಡಿದ್ದರಿಂದ ಅವರನ್ನು ನಿಭಾಯಿಸುವುದು ಕಷ್ಟವೆನಿಸಲಿಲ್ಲ. ಅವಳಿಗೂ ಮಕ್ಕಳೆಂದರೆ ಬಹಳ ಇಷ್ಟ. ಆದರೆ ರೇಷ್ಮಾಳಿಗೆ ತಾನು ಇಲ್ಲಿಗೆ ಬಂದಿರುವ ಉದ್ದೇಶವೇ ಬೇರೆಯಾಗಿತ್ತು. ತನ್ನ ಕನಸು ಸಾಕಾರಗೊಳ್ಳುವುದರತ್ತ ತವಕಿಸುತ್ತಿದ್ದಳು. ಅದೊಂದು ದಿನ ಸಂಜೆ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು, ಅಕ್ಕನ ಗಂಡ ಒಬ್ಬರೇ ಇದ್ದಾಗ ಬಲು ಸಂಕೋಚದಿಂದ, “ಭಾವಾ, ದೆಹಲಿಯಲ್ಲಿ ಯಾವುದಾದರೂ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಬಗ್ಗೆ ಮಾಹಿತಿ ಇದ್ದರೆ ಹೇಳ್ತೀರಾ? ನನಗೆ ಆ ಕೋರ್ಸ್‌ ಮಾಡಿ ಜೀವನಕ್ಕೊಂದು ದಾರಿ ಮಾಡ್ಕೋಬೇಕು ಅಂತ ಅನಿಸಿದೆ. ಎಷ್ಟು ದಿನ ಅಂತ ಮನೆಯಲ್ಲಿ ಹೀಗೆ ಇರಲಿ….?”

ಭಾವ ನಗುತ್ತಾ, “ಆರಾಮಗಿರಿ ರೇಷ್ಮಾ….. ನಿಮಗೆ ಇಲ್ಲೇನಾದರೂ ತೊಂದರೆಯಾಗ್ತಾ ಇದೆಯಾ? ನಿಮಗೇನಾದರೂ ಕೊರತೆ ಇದ್ದರೆ ಹೇಳಿ ಅದನ್ನು ನಾವು ಪೂರೈಸ್ತೀವಿ. ಇದಕ್ಕಿಂತ ಇನ್ನೇನು ಬೇಕು ನಿಮಗೆ? ಈ ಕೋರ್ಸ್‌ಗಳೆಲ್ಲಾ ಯಾವುದಕ್ಕೂ ಉಪಯೋಗಕ್ಕೆ ಬರಲ್ಲ…. ಆರಾಮಾಗಿರಿ,” ಎಂದರು.

ಭಾವನ ಮಾತಿನ ಒಳಮರ್ಮವನ್ನು ಅರಿತ ರೇಷ್ಮಾ, `ನನ್ನ ಬದುಕಿನ ಬಗ್ಗೆ ಇವರಿಗೆ ಸ್ವಲ್ಪ ಕಾಳಜಿ ಇಲ್ಲ. ತಾನು, ತನ್ನ ಹೆಂಡತಿ, ತನ್ನ ಮಕ್ಕಳು ಮಾತ್ರ ಸುಖವಾಗಿದ್ದರೆ ಸಾಕು ಅನ್ನೋ ಸ್ವಾರ್ಥ ಮನೋಭಾವ ಇವರದು. ಬಿಟ್ಟಿ ಚಾಕರಿ ಮಾಡಿಸಿಕೊಂಡು, ತನ್ನನ್ನು ಗಾಣದ ಎತ್ತಿನಂತೆ ದುಡಿಸಿಕೊಳ್ಳುವುದಕ್ಕಿಂತ ಊರು ಸೇರುವುದೇ ವಾಸಿ ಎನಿಸಿತು. ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿ ಮರುದಿವಸವೇ ಊರು ತಲುಪಿದಳು.

ಊರಲ್ಲಿ ಮನೆಯ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ದುಡಿವ ಕೈಗಳು ದುಡಿಮೆ ಇಲ್ಲದೆ ನಿಂತಿದ್ದ. ಅಪ್ಪಾಜಿಗೆ ಇದ್ದಕ್ಕಿದ್ದಂತೆ ಆರೋಗ್ಯ ಕೈ ಕೊಟ್ಟದ್ದರಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತು. ಲಿವರ್‌ ಸಂಬಂಧಿತ ಕಾಯಿಲೆಯಿಂದಾಗಿ ನರಳುತ್ತಿದ್ದರೂ, ಔಷಧಿ ತರಲು ಹಣವಿಲ್ಲದೆ, ಒದ್ದಾಡುವ ಈ ಪರಿಸ್ಥಿತಿಯಲ್ಲಿ ರೇಷ್ಮಾಳ ಬಗ್ಗೆ ಯೋಚಿಸುವ ಪುರಸತ್ತಾದರೂ ಯಾರಿಗಿತ್ತು? ಇಂತಹ ಸ್ಥಿತಿಯಿಂದ ಹೇಗಾದರೂ ಮಾಡಿ ತನ್ನ ಕುಟುಂಬವನ್ನು ರಕ್ಷಿಸಬೇಕು ಎಂಬ ಪಣ ತೊಟ್ಟು, ಯಾರಿಗೂ, ಯಾವುದಕ್ಕೂ ಎದೆಗುಂದದೆ ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಮನೆಯ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಸುಧಾರಿಸಿ, ಉಳಿದ ಹಣವನ್ನು ಬ್ಯಾಂಕಿನಲ್ಲಿಟ್ಟು ಮುಂದೆ ತಾನು ನಿಭಾಯಿಸಬೇಕಾದ ಜವಾಬ್ದಾರಿಯತ್ತ ಯೋಚಿಸತೊಡಗಿದಳು. ತನ್ನಲ್ಲಿದ್ದ ಚೂರೂಪಾರು ಹಣದಿಂದ ವಿದ್ಯಾಭ್ಯಾಸ ಮುಂದುವರಿಸಿದಳು. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟ ಓದಿ ಬಿ.ಎ. ಪಾಸು ಮಾಡಿದಳು. ಮುಂದೆ ಸಾಹಿತ್ಯದಲ್ಲಿ ಎಂ.ಎ. ಮಾಡಿ ತಾನು ಓದಿದ ಕಾಲೇಜಿನಲ್ಲಿ ಅರ್ಹತೆಯಿಂದಲೇ ಉಪನ್ಯಾಸಕಿ ಕೆಲಸವನ್ನು ಗಿಟ್ಟಿಸಿಕೊಂಡಳು.

ಹರಿಯುವ ನದಿಯ ಹಾಗೆ ದಿನಗಳು ತೇಲಿ ಹೋಗಿದ್ದವು. ಬದುಕಿನ ಹೋರಾಟದಲ್ಲಿ  5 ವರ್ಷ ಸರಿದುಹೋಗಿದ್ದು ತಿಳಿಯಲೇ ಇಲ್ಲ. ಬದಲಾವಣೆ ಪ್ರಕೃತಿ ನಿಯಮ ಅನ್ನೋ ಹಾಗೆ ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಕಷ್ಟಗಳ ಸರಮಾಲೆ ಇನ್ನಷ್ಟು ಉದ್ದವಾಗುತ್ತ ಹೋಯಿತು. ಕಾಯಿಲೆಯಿಂದ ಚೇತರಿಸಿಕೊಳ್ಳಲಾಗದೆ ಅಪ್ಪ ತೀರಿಕೊಂಡರೆ, ಜವಾಬ್ದಾರಿ ಹೊರಬೇಕಾದ ಅಣ್ಣ ದಿಕ್ಕೆಟ್ಟು ಉಂಡಾಡಿ ಗುಂಡನಂತೆ ಊರೆಲ್ಲಾ ಸುತ್ತಾಡುತ್ತಿದ್ದ. ಇದ್ದ ಮನೆ ಸಾಲಕ್ಕೆ ಶೂರಿಟಿಯಾಗಿ ಹರಾಜಿಗೆ ಬಂದಿತ್ತು. ರೇಷ್ಮಾಳ ದುಡಿಮೆಯೊಂದೇ ಮನೆಗೆ ಆಧಾರ.

ಸಮಸ್ಯೆಯ ಆಳವನ್ನು ಲೆಕ್ಕಚಾರ ಹಾಕಿದ ರೇಷ್ಮಾ ಗರಬಡಿದವಳಂತೆ ಕುಳಿತಿದ್ದಳು. ಮುಂದೇನು? ಎನ್ನುವ ಯಕ್ಷ ಪ್ರಶ್ನೆ ಅವಳೆದುರಿಗೆ ಬಂದಿತ್ತು. ರೇಷ್ಮಾಳ ಅತ್ತೆಮನೆಯ ಅಗಾಧ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಣ್ಣ ರೇಷ್ಮಾಳ ತಲೆ ಕೆಡಿಸಲು ಆರಂಭಿಸಿದ. ಹೇಗಾದರೂ ಮಾಡಿ ರೇಷ್ಮಾಳನ್ನು ಪುಸಲಾಯಿಸಿ ಗಂಡನಿಗೆ ಡೈವೋರ್ಸ್‌ ಕೊಡಿಸಿಬಿಟ್ಟರೆ, ಪರಿಹಾರದ ಹಣ, ದಕ್ಕುವ ಆಸ್ತಿಯಿಂದ ಮನೆಯ ಸಮಸ್ಯೆಯನ್ನು ನಿವಾರಿಸಬಹುದು ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ ಯಾವುದೇ ಪರಿಸ್ಥಿತಿಯಲ್ಲೂ ಸ್ವಾಭಿಮಾನ ಮೀರಿ ಗಂಡನ ಮನೆಯ ಆಸ್ತಿಯ ಬಗ್ಗೆ ಅವಳು ನಿರೀಕ್ಷೆ ಇಟ್ಟುಕೊಂಡವಳಲ್ಲ.

ಅಣ್ಣನ ಒತ್ತಡ, ಲಾಲಸೆ ರೇಷ್ಮಾಳನ್ನು ಚಿಂತೆಗೀಡು ಮಾಡಿತ್ತು. ಡೈವೋರ್ಸ್‌ ನೀಡಿದರೆ ಕೈ ತುಂಬಾ ಪರಿಹಾರದ ಹಣವೇನೋ ಸಿಗಬಹುದು. ಆದರೆ ಸಮಾಜದಲ್ಲಿ ಗಂಡನ ತೊರೆದ ಹೆಣ್ಣಿನ ಪರಿಸ್ಥಿತಿ, ತಿರಸ್ಕಾರ, ಶೋಷಣೆ ಒಂದೆಡೆಯಾದರೆ ಮನೆ ಮರ್ಯಾದೆ ಏನಾಗಬೇಡ? ಮುಂದೆ ಮಕ್ಕಳ ಭವಿಷ್ಯ? ಹೀಗೆ ಹಲವಾರು ವಿಚಾರಗಳು ತಲೆಯಲ್ಲಿ ಸುಳಿದಾಡಿದಾಗ ಬದುಕು ಒಂದು ರಣರಂಗ ಎನಿಸಿತು.

ಇತ್ತೀಚೆಗಂತೂ ರೇಷ್ಮಾಳಿಗೆ ರಾಜೀವ್ ನೆನಪು ತುಂಬಾ ಕಾಡುತ್ತಿತ್ತು. ಪ್ರತಿ ಕ್ಷಣ ನೆಮ್ಮದಿ ಇಲ್ಲದೆ ಒದ್ದಾಡುತ್ತಿದ್ದಳು. ತನ್ನಿಂದಾದ ಸ್ವಯಂಕೃತ ಅಪರಾಧವೇ ಇವತ್ತಿನ ಪರಿಸ್ಥಿತಿಗೆ ಕಾರಣ ಎಂದು ಅವಳಿಗೆ ಮನವರಿಕೆ ಆಗಿದೆ. ಹಾಗಾಗಿ ರಾಜೀವನ ಬಗ್ಗೆ ಆಗಾಗ್ಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾಳೆ.

ಈಗ ರಾಜೀವ್ ‌ನ ಬಿಸ್‌ನೆಸ್‌ ಇನ್ನಷ್ಟು ವಿಸ್ತಾರವಾಗಿತ್ತು. ಅವನು ತನ್ನ ಪರಿಶ್ರಮ, ಪ್ರಯತ್ನದಿಂದ ವ್ಯವಹಾರವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಬೇಕೆನ್ನುವ ಮಹದಾಸೆಯಿಂದ ರಾತ್ರಿ ಹಗಲೆನ್ನದೆ ಬಿಡುವಿಲ್ಲದೆ ಓಡಾಡುತ್ತಿದ್ದ. ಇಷ್ಟಾದರೂ ರಾಜೀವ್‌ಮರುಮದುವೆ ಮಾಡಿಕೊಂಡಿಲ್ಲ. ಇನ್ನೊಬ್ಬಳು ಹುಡುಗಿಯ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಅದೇ ಅವನ ದೊಡ್ಡತನ. ಆ ಗುಣವೇ ರೇಷ್ಮಾಳನ್ನು ಮೂರ್ಖಳನ್ನಾಗಿಸಿತ್ತು.

ಇತ್ತೀಚೆಗಂತೂ ಡೈವೋರ್ಸ್‌ ನೀಡುವಂತೆ ಸಾಕಷ್ಟು ಒತ್ತಡ ಹೇರುತ್ತಿದ್ದ ಅಣ್ಣನ ಬಗ್ಗೆ ಅಸಹ್ಯ ಮೂಡಿತು. ಎಲ್ಲವನ್ನೂ ಅಳೆದು ಸುರಿದು ಕೊನೆಗೊಂದು ನಿರ್ಧಾರಕ್ಕೆ ಬಂದ ರೇಷ್ಮಾ ಫೋನ್‌ ಕೈಗೆತ್ತಿಕೊಂಡು ರಾಜೀವನಿಗೆ ಫೋನಾಯಿಸಿದಳು.

“ಹಲೋ….”

“ಹಲೋ….. ಯಾರು?”

ಬಹಳ ದಿನಗಳ ನಂತರ ಮೊದಲ ಬಾರಿಗೆ ರಾಜೀವ್ ‌ದನಿ ಕೇಳಿದ ರೇಷ್ಮಾಗೆ ಗಂಟಲು ಕಟ್ಟಿದಂತಾಗಿ ಆನಂದದಿಂದ ಮಾತೇ ಹೊರಡದಾಯಿತು.

“ಹಲೋ….ಹಲೋ….!” ರಾಜೀವ್ ‌ಮತ್ತೆ ಮತ್ತೆ ಕೇಳಿದ.

“…….”

“ಯಾರು….. ರೇಷ್ಮಾ….!” ರಾಜೀವ್‌, ಅವಳೇ ಇರಬಹುದೆಂದು ಕಲ್ಪಿಸಿ ಕೇಳಿದ.

“ಹೌದು ರೀ…… ನಾನೇ ರೇಷ್ಮಾ…… ನೀವು ಹೇಗಿದ್ದೀರಿ?”

ಎಷ್ಟೋ ದಿನಗಳಿಂದ ಹೆಪ್ಪುಗಟ್ಟಿದ ದನಿ ಒಮ್ಮೆಲೇ ಹೊರಬಂದಂತೆ ಉತ್ಕಟತೆ, ಆನಂದ ಏಕಕಾಲದಲ್ಲಿ ಮೇಳೈಸಿತ್ತು. ಅವನ ದನಿ ಅವಳ ಕಿವಿಯಲ್ಲಿ ಕೊಳಲು ಇನಿದನಿಯಂತೆ ಇಂಪಾಗಿ ಕೇಳಿಸಿ, ಸಂಭ್ರಮದಿಂದ ಹುಚ್ಚೆದ್ದ ನವಿಲಿನಂತೆ ನರ್ತಿಸಬೇಕೆಂಬ ಆಸೆ ಮೊಳೆಯಿತು. ಕಳೆದುಹೋದ ನಿಧಿ ಮತ್ತೆ ಕೈಗೆ ಸಿಕ್ಕಿದಷ್ಟು ಆನಂದವಾಗಿ ಕುಣಿದಾಡಿದಳು.

“5 ವರ್ಷ, 8 ತಿಂಗಳು, 25 ದಿನಗಳು, 2 ಗಂಟೆಗಳ ನಂತರ ಹೇಗೆ ನನ್ನ ಜ್ಞಾಪಕಾಯಿತು…..?”

“ನೀವು ನನ್ನ ಬಗ್ಗೆ ಏನು ನಿರ್ಧಾರ ಮಾಡಿದ್ದೀರಿ….?” ರೇಷ್ಮಾ ಒಂದೇ ಉಸಿರಿನಲ್ಲಿ ಕೇಳಿದಳು.

“ನೀನು ನನ್ನ ಬಗ್ಗೆ ಏನು ಡಿಸೈಡ್‌ ಮಾಡಿದೆ…. ಅದನ್ನು ಮೊದಲು ಹೇಳು.”

“ನಾನು ಡೈವೋರ್ಸ್‌ ನೀಡಲ್ಲ…. ಮತ್ತೆ ನಿಮ್ಮ ಜೊತೆ ಸಂಸಾರ ಮಾಡೋಕೆ ಸಿದ್ಧಳಾಗಿದ್ದೀನಿ.”

“ಹಾಗಾದರೆ ಬಂದು ಬಿಡು…… ನಾನು ನಿನಗೋಸ್ಕರ ಕಾಯುತ್ತಿರುತ್ತೀನಿ,” ಎಂದು ರಾಜೀವ್ ಆಹ್ವಾನ ನೀಡುತ್ತಿದ್ದಂತೆ ರೇಷ್ಮಾಳಿಗೆ ಜಗವೆಲ್ಲಾ ಅನುರಾಗದ ಅಲೆಗಳಂತೆ ಕಂಡವು.

ಮಾರನೇ ದಿನ ಬೆಳ್ಳಂಬೆಳಗ್ಗೆ ಲಗುಬಗೆಯಲ್ಲಿ ರೆಡಿಯಾದ ರೇಷ್ಮಾ ಮನೆಯಲ್ಲಿ ಯಾರಿಗೂ ತಿಳಿಸದೆ ನೇರವಾಗಿ ರಾಜೀವನ ಮನೆಗೆ ಹೋದಳು. ದಿನಗಳು ಕ್ಷಣಗಳಂತೆ ಉರುಳಿ, ವರ್ಷ ಕಳೆದಿದ್ದು ಗೊತ್ತೇ ಆಗಿಲ್ಲ. ಅಷ್ಟರಮಟ್ಟಿಗೆ ರೇಷ್ಮಾ ಬದಲಾಗಿದ್ದಳು. ಆಮೇಲೆ ಹೇಮಂತ್‌, ರಜನಿ ಹುಟ್ಟಿದರು. ಬದುಕು ಅವಳಿಗೆ ಎಂತಹ ಗಟ್ಟಿತನದ ಪಾಠ ಕಲಿಸಿಕೊಟ್ಟಿದೆ ಅಂದರೆ ಬದುಕು ಜವಾಬ್ದಾರಿ ಎನ್ನುವ ಬುನಾದಿ ಮೇಲೆ ನಿಂತಿರುತ್ತದೆ ಎನ್ನುವ ಸತ್ಯದ ಅರಿವಾಯಿತು.

ಎಲ್ಲ ಕೆಲಸದಲ್ಲೂ ಕಟ್ಟುನಿಟ್ಟು. ತಾನು ಓದಿರುವ ಕಾಲೇಜಿನಲ್ಲೇ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ ರೇಷ್ಮಾ ಈಗ ಆ ವಿಭಾಗದ ಮುಖ್ಯಸ್ಥೆಯಾಗಿದ್ದಾಳೆ. `ಹಾರ್ಡ್‌ ವರ್ಕ್‌ ಪೇಸ್‌ ಹೈ ರಿಟರ್ನ್‌’ ಎನ್ನುವ ಮಾತನ್ನು ಸಾಬೀತು ಮಾಡಿದಳು. ಕಾಲೇಜಿನಲ್ಲಂತೂ ರೇಷ್ಮಾಳನ್ನು  `ಲೇಡಿ ಹಿಟ್ಲರ್‌’ ಎಂದೇ ಹುಡುಗರು ಕರೆಯುತ್ತಿದ್ದರು.

ಹೆಸರಿಗೆ ಅನ್ವರ್ಥಕವಾಗಿರುವಂತೆ ಹಿಟ್ಲರ್‌ನಂತೆ ನಿಷ್ಠುರವಾದಿ. ಅವಳ ನಿಲುವು, ಯಾವುದೇ ಮೇಕಪ್‌ ಇಲ್ಲದ ಕಠೋರ ಮುಖಚರ್ಯೆ, ಲಿಪ್‌ಸ್ಟಿಕ್‌ ಕಾಣದ ತುಟಿ, ಅಗಲವಾದ ಹಣೆ, ತುಸು ದೊಡ್ಡ ದೊಡ್ಡ ಕಣ್ಣುಗಳು, ಅದರ ಮೇಲೆ ವಿರಾಜಮಾನವಾಗಿರುವ ದಪ್ಪ ಕನ್ನಡಕ…. ಒಟ್ಟಾರೆ ಈ `ಲೇಡಿ ಹಿಟ್ಲರ್‌’ದು ಕಲರ್‌ಫುಲ್ ಯಕ್ತಿತ್ವ. ಆ ವ್ಯಕ್ತಿತ್ವಕ್ಕೆ ತಕ್ಕಂತ ದೊಡ್ಡ ದನಿ. ಒಮ್ಮೆ ಕಿರುಚಿದಳೆಂದರೆ, ಇಡೀ ತರಗತಿಯಲ್ಲಿ ನೀರವ ಮೌನ. ಬಾಹ್ಯವಾಗಿ ಕಠೋರವೆನಿಸಿದರೂ ಆಂತರ್ಯದಲ್ಲಿ ಕೋಮಲತೆ ತುಂಬಿದ ಭಾವ. ಹೊರಗೆ ಎಷ್ಟು ಕಟ್ಟುನಿಟ್ಟೋ ತರಗತಿಯಲ್ಲಿ ಅಷ್ಟೇ ಪ್ರೀತಿಯಿಂದ, ಮಧುರವಾಗಿ ಪಾಠ ಮಾಡುತ್ತಾ ವಿದ್ಯಾರ್ಥಿಗಳ ಮನಗೆಲ್ಲುತ್ತಿದ್ದಳು.

ತನ್ನ ಪಾಠ ಹೇಳುವ ವಿಶೇಷ ಕೌಶಲ್ಯದಿಂದ ಅರ್ಥಶಾಸ್ತ್ರದಂತಹ ಜಟಿಲ ವಿಷಯವನ್ನು ತುಂಬ ಸರಳವಾಗಿ ನಿರೂಪಿಸುತ್ತಿದ್ದಳು. ಹಾಗಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಅದರಲ್ಲೂ ಯುವತಿಯರು ರೇಷ್ಮಾಳ ಬೋಧನೆಗೆ ಮನಸೋತು ಅರ್ಥಶಾಸ್ತ್ರವನ್ನೇ ಮುಖ್ಯ ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ, ಪ್ರತಿ ವರ್ಷ ಕಾಲೇಜಿನ ಟಾಪರ್‌ ಕೂಡ ಅರ್ಥಶಾಸ್ತ್ರದ ವಿದ್ಯಾರ್ಥಿಯೇ ಆಗಿರುವುದರಿಂದ ರೇಷ್ಮಾಳ ಹೆಸರು ಇನ್ನಷ್ಟು ಖ್ಯಾತಿ ಗಳಿಸಿತು.

ರೇಷ್ಮಾ ಮದುವೆಯಾದ ಹೊಸತರಲ್ಲಿ ಇದ್ದ ರೀತಿಗೂ ಈಗಿನ ರೀತಿಗೂ ಹೋಲಿಕೆ ಮಾಡಿ ನೋಡಿದ್ದಲ್ಲಿ ಆಶ್ಚರ್ಯವಾಗುತ್ತದೆ. ಅವಳು ಬೆಳೆದ ಬಗೆ, ಜೀವನದ ಗತಿಯನ್ನು ಬದಲಾವಣೆ ಮಾಡಿಕೊಂಡ ರೀತಿ ಎಲ್ಲ ಒಂದು ಕನಸೋ ಎಂಬಂತೆ ಭಾಸವಾಗುತ್ತದೆ. ಮುದ್ದಾದ ಮಕ್ಕಳು ಬಯಸಿದ್ದೆಲ್ಲವನ್ನೂ ಕ್ಷಣಮಾತ್ರದಲ್ಲಿ ತನ್ನ ಕಾಲಬುಡಕ್ಕೆ ತಂದು ಸುರಿಯುವ ಹೆಮ್ಮೆಯ ಪತಿ, ಬೊಗಸೆ ಬೊಗಸೆಯಾಗಿ ಪ್ರೀತಿ ಸ್ಛುರಿಸುವ ಮನೆ ಮಂದಿ, ಚಂದದ ಮನೆ, ಸದಾ ಸಂತಸದಿಂದ ತುಂಬಿದ ವಾತಾವರಣ. ರಾಜೀವನಿಗಂತೂ ತನ್ನ ಹೆಮ್ಮೆಯ ಪತ್ನಿಯ ಮೇಲೆ ಅಪರಿಮಿತ ಅಭಿಮಾನ. ರೇಷ್ಮಾ ಏನು ಹೇಳಿದರೂ ಅದನ್ನು ಕಾರ್ಯಗತಗೊಳಿಸುತ್ತಿದ್ದ. ಮಗಳು ರಜನಿ ಅಮ್ಮನ ಆಣತಿಯಂತೆ ತನ್ನೆಲ್ಲಾ ಕೆಲಸ ಕಾರ್ಯಗಳಲ್ಲಿ ಯಾರನ್ನೂ ಅವಲಂಬಿಸದೆ ತಾನೇ ಮಾಡಿಕೊಳ್ಳುತ್ತಿದ್ದಳು.

ಹೇಮಂತ್‌ ಹಾಗೂ ರಜನಿ ಇಬ್ಬರೂ ರೇಷ್ಮಾಳ ತದ್ರೂಪು. ರಜನಿ ತೆಳ್ಳಗೆ ಬಳ್ಳಿಯಂತೆ ಆಕರ್ಷಕವಾಗಿದ್ದಳು. ಈಗಷ್ಟೆ ಎಂ.ಎಸ್ಸಿ ಪರೀಕ್ಷೆ ಬರೆದಿದ್ದಳು. ಹೇಮಂತ್‌ ಎಂ.ಬಿ.ಎ ಮುಗಿಸಿ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌ ಆಗಿ ನಿಯುಕ್ತಿಗೊಂಡಿದ್ದ. ಅವನು ಸಿಂಧಿ ಹುಡುಗಿಯೊಬ್ಬಳನ್ನು ಇಷ್ಟಪಟ್ಟಿದ್ದ. ತಂದೆ ತಾಯಿಯ ಅನುಮತಿ ಪಡೆದುಕೊಂಡು ಆಗಾಗ ಅವಳನ್ನು ಭೇಟಿ ಮಾಡುತ್ತಿದ್ದ. ರಜನಿಯ ಮದುವೆಯ ನಂತರವೇ ತನ್ನ ಮದುವೆ ಎಂದು ಹುಡುಗಿಗೆ ತಿಳಿಸಿದ್ದ.

ಆದರೆ ಇತ್ತೀಚೆಗೆ ರಜನಿ ಮದುವೆ ಹೆಸರು ಹೇಳಿದಾಕ್ಷಣವೇ ಮಾರು ದೂರ ಹೋಗುತ್ತಿದ್ದಳು. ಬಹುಶಃ ತಾಯಿಯ ಏರುಪೇರಿನ ವೈವಾಹಿಕ ಬದುಕು, ಆ ಹೋರಾಟ ಎಲ್ಲ ಗೊತ್ತಿದ್ದರಿಂದ ಮದುವೆ ಬಗ್ಗೆ ಯಾವುದೇ ಕುತೂಹಲ ಉಳಿದಿರಲಿಲ್ಲ. ಮಗಳ ನಿರಾಸಕ್ತಿಯನ್ನು ಗಮನಿಸಿದ ರೇಷ್ಮಾ  ಪ್ರೀತಿಯಿಂದ ಮಗಳ ತಲೆ ನೇವರಿಸುತ್ತಾ, “ರಜೂ…. ಮದುವೆ ಅಂದ್ರೆ ಯಾಕೆ ಅಷ್ಟೊಂದು ಯೋಚನೆ ಮಾಡ್ತೀಯ…? ಮದುವೆ ಅನ್ನೋದು ನಮಗೆ ನಾವು ಹಾಕಿಕೊಳ್ಳುವ ಸಂಪ್ರದಾಯದ ಬೇಲಿ. ಅಲ್ಲಿ ಅದಕ್ಕೆ ಯಾವುದೇ ಷರತ್ತುಗಳಿರುವುದಿಲ್ಲ.

“ಮದುವೆ ಎಂತಹ ಒಂದು ಪವಿತ್ರವಾದ ಬಂಧವೆದರೆ ಆ ಪ್ರೇಮದ ದಾರದಿಂದ ನಿನ್ನನ್ನು ನೀನು ಎಷ್ಟು ಬಿಗಿಯಾಗಿ ಬಂಧಿಸಿಕೊಳ್ಳುತ್ತೇವೆಯೋ ಅಷ್ಟೇ ಯುಕ್ತಳಾಗುತ್ತಾ ಹೋಗುತ್ತಿ. ಎಷ್ಟು ನಮ್ರತೆಯಿಂದ ತಲೆ ಬಾಗಿ ನಡೆಯುತ್ತೀಯೋ ಅಷ್ಟೇ ಎತ್ತರಕ್ಕೆ ಹೋಗುತ್ತಿ….

“ಆದರೆ ನಾನು ಮದುವೆಯಾದ ಹೊಸತರಲ್ಲಿ ಮುಗ್ಧತೆ ನನ್ನನ್ನು ಅತಿಯಾಗಿ ಆವರಿಸಿಕೊಂಡು ಚಿಕ್ಕ ಹುಡುಗಿಯಂತೆ ಆಡುತ್ತಿದ್ದೆ. ಮುಂದೆ ದಿನಗಳು ಕಳೆದು ಪರಿಪಕ್ವತೆ ಬೆಳೆದಾಗ ನಮ್ಮಿಬ್ಬರ ಸ್ವಾಭಿಮಾನ, ನಾನು ಎನ್ನುವ ಅಹಂ ನಮ್ಮ ಸಂತೋಷನ್ನೆಲ್ಲಾ ಕಿತ್ತುಕೊಂಡಿತ್ತು. ಸುಖ, ನೆಮ್ಮದಿ ಒಂದಿಷ್ಟು ಕಾಲ ನಮ್ಮಿಂದ ದೂರವೇ ಉಳಿಯಿತು.

“ಗಂಡ ಹೆಂಡತಿ ನಡುವೆ ಒಂದು ನವಿರಾದ ಹೊಂದಾಣಿಕೆ ಇರಬೇಕು. ಸರಿ ಎನಿಸುವ ವಿಚಾರಗಳಿಗೆ ಇಬ್ಬರು ತಲೆ ಬಾಗಿ ಒಪ್ಪಿಕೊಳ್ಳುವ, ಸ್ವೀಕರಿಸುವ ಗುಣವಿದ್ದರೆ ಬಾಳು ತುಂಬಾ ಸುಲಭ, ಅಷ್ಟೇ ರೋಮಾಂಚಕ. ಆಗ ಅಲ್ಲಿ ಅಹಂಕಾರದ ಗೋಡೆ ಸರಿದು ಪ್ರೇಮದ ಮಹಲು ನಿರ್ಮಾಣವಾಗುತ್ತದೆ,” ಎಂದು ವಿವರಿಸಿದಳು.

ಬೆಳಗ್ಗೆಯಿಂದ ರೇಷ್ಮಾಳ ಮೊಬೈಲ್‌ಗೆ ರಾಜೀವ್ ನ ಕರೆ ಬಂದಿತ್ತು. ಲಗುಬಗೆಯ ಓಡಾಟದಲ್ಲಿ ರಿಸೀವ್ ‌ಮಾಡರಲಿಲ್ಲ. ಕರೆ ಸ್ವೀಕರಿಸಿದಾಗ, “ರೇಷೂ….. ನೋಡು ಇಲ್ಲಿ ರಜನಿ ಪಾರ್ಲರ್‌ಗೆ ಹೋಗುವುದಕ್ಕೆ ಬಿಲ್‌ಕುಲ್ ‌ಒಪ್ಪುತ್ತಾ ಇಲ್ಲ. ಇದು ಅವಳದೇ ಮದುವೆಯ ಸಂಭ್ರಮ. ಸೀರೆ ಉಟ್ಕೋಳಲ್ಲ ಅಂತ ಹಠ ಮಾಡಿ ಚೂಡಿದಾರ್‌ ಹಾಕ್ಕೊಂಡು ಮಂಟಪದಲ್ಲಿ ನಿಂತಿದ್ದಾಳೆ. ನೀನಾದ್ರೂ ಬಂದು ಬುದ್ಧಿ ಹೇಳಿ ಲೈಟಾಗಿ ಮೇಕಪ್‌ ಮಾಡಿ ಹೋಗಬಾರ್ದಾ….?”

ಸಂಜೆಯಾಗುತ್ತಿದ್ದಂತೆ ಮದುವೆಯ ಸಂಭ್ರಮ ಕಳೆಕಟ್ಟಿತ್ತು. ಸಾಲಂಕೃತಾದ ಮಂಟಪ ಜಗಮಗಿಸುವ ಬೆಳಕಿನೊಂದಿಗೆ ಹೊಸ ಲೋಕವೊಂದನ್ನು ಸೃಷ್ಟಿಸಿತ್ತು. ಚಿಕ್ಕಮ್ಮನ ಸಂತೋಷಕ್ಕಂತೂ ಪಾರವೇ ಇರಲಿಲ್ಲ. ಏನು ಮಾಡಬೇಕೆಂದು ತೋಚದೆ ಅತ್ತಿಂದಿತ್ತ ಓಡಾಡುತ್ತಿದ್ದರು. ಹೇಮಂತ್‌ ಹರಿಬರಿಯಲ್ಲಿ ಬಂದು ಬಾಗಿಲ ಬಳಿ ನಿಂತು ಡೆಕೋರೇಟ್‌ ಮಾಡುವವರಿಗೆ ಸಲಹೆ ನೀಡುತ್ತಿದ್ದ.

ಮದುವೆಯ ತಯಾರಿ ಆರಂಭವಾದಾಗಿನಿಂದ ಮನೆಯ ಯಜಮಾನನಂತೆ ಓಡಾಡಿಕೊಂಡು ದರ್ಬಾರು ನಡೆಸುತ್ತಿದ್ದ. ಚಿಕ್ಕಮ್ಮನನ್ನು ಕೈ ಹಿಡಿದುಕೊಂಡು ಅಕ್ಕರೆಯಿಂದ ಸ್ವಾಗತಿಸಿ ಒಳ ಕರೆದುಕೊಂಡು ಹೋದ. “ಬನ್ನಿ, ಚಿಕ್ಕಮ್ಮ ನಮಸ್ತೆ. ಅಮ್ಮ ರೂಮಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.” ಇಡೀ ಮದುವೆಯ ವಾತಾವರಣವನ್ನು ಗಮನಿಸಿದ ಚಿಕ್ಕಮ್ಮನಿಗೆ ಯುದ್ಧ ಗೆದ್ದು ಬಂದ ಸಾರ್ಥಕತೆ ಮುಖದ ಮೇಲೆ ಮಿನುಗುತ್ತಿತ್ತು. ಅಚ್ಚಕಟ್ಟಾಗಿ ಸಿಂಗರಿಸಿಕೊಂಡ ಮನೆ, ಮದುವೆ ಮಂಟಪ ಅರಮನೆಯಂತೆ ಕಂಗೊಳಿಸುತ್ತಿತ್ತು. ಮನೆ ತುಂಬೆಲ್ಲ ಅತಿಥಿಗಳದ್ದೇ ಓಡಾಟ, ಕಾರುಬಾರು. ಎಲ್ಲಾ ಕಾರ್ಯಕ್ರಮಗಳು ಪೂರ್ವ ನಿಯೋಜನೆಯಂತೆ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಸಾಂಗವಾಗಿ ನೆರವೇರುತ್ತಿತ್ತು.

ಅಷ್ಟರಲ್ಲಿ ಚಿಕ್ಕಮ್ಮನನ್ನು ಸ್ವಾಗತಿಸಲು ಓಡೋಡಿ ಬಂದ ರೇಷ್ಮಾ ವಿನಮ್ರತೆಯಿಂದ ಕೈ ಮುಗಿದು ನಮಿಸಿದಳು. ನಿರಂತರ ಓಡಾಟದಿಂದ ರೇಷ್ಮಾ ಸ್ವಲ್ಪ ಸುಸ್ತಾದವಳಂತೆ ಕಾಣುತ್ತಿದ್ದಳು. ತಿಳಿ ನೀಲಿ ಬಣ್ಣದ ರೇಷ್ಮೆ ಸೀರೆಯುಟ್ಟು, ಕೈ ತುಂಬ ಕಡು ನೀಲಿ ಬಣ್ಣದ ಬಳೆಗಳನ್ನು ಧರಿಸಿದ್ದಳು. ಕಾಲಲ್ಲಿ ಬೆಳ್ಳಿ ಕಾಲ್ಗೆಜ್ಜೆ, ಕಿವಿಯಲ್ಲಿ ಮಿಂಚು ದೊಡ್ಡದಾದ ವಾಲೆ, ಕೊರಳಲ್ಲಿ ಇಳಿಬಿಟ್ಟ ಉದ್ದನೆಯ ಸರ, ವಿಶಾಲವಾದ ಹಣೆಯಲ್ಲಿ ದುಂಡನೆಯ ಬೊಟ್ಟಿಟ್ಟಿದ್ದ ರೇಷ್ಮಾ ಸಾಕ್ಷಾತ್‌ ಮಹಾಲಕ್ಷ್ಮಿಯಂತೆ ಕಾಣಿಸುತ್ತಿದ್ದಳು.

ತಕ್ಷಣಕ್ಕೆ ಗುರುತಿಸಲಾರದಷ್ಟು ಬದಲಾಗಿದ್ದಳು ರೇಷ್ಮಾ. ಒಂದರ್ಥದಲ್ಲಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದಳು. ರೇಷ್ಮಾಳ ಅಪೂರ್ವ ತಯಾರಿ ನೋಡಿ ರೇಗಿಸಬೇಕೆಂದು ಚಿಕ್ಕಮ್ಮ ಜೋರಾಗಿ….. “ಲೇ ರೇಷ್ಮಾ…. ನಿನ್ನ ಇವತ್ತಿನ ಅಪ್ರತಿಮ ಸೌಂದರ್ಯಕ್ಕೆ ಮಾರುಹೋಗಿ ಮದುಮಗ ತಬ್ಬಿಬ್ಬಾಗಿ ಮದುವೆ ಹುಡುಗಿಯನ್ನು ಬಿಟ್ಟು ನಿನಗೇ ತಾಳಿ ಕಟ್ಟಿಬಿಟ್ಟಾನು…. ಹುಷಾರ್!” ಎನ್ನುತ್ತಿದ್ದಂತೆ ನೆರೆದಿದ್ದವರೆಲ್ಲಾ ಗೊಳ್ಳೆಂದು ನಕ್ಕರು.

ಇದನ್ನೆಲ್ಲಾ ಮಂಟಪದ ಮೂಲೆಯಲ್ಲಿ ಕುಳಿತು ಗಮನಿಸುತ್ತಿದ್ದ ರಾಜೀವ್ ‌ತಮಾಷೆಯಾಗಿ, “ಚಿಕ್ಕಮ್ಮ… ಬಹುಶಃ ಇಂದು ಮಗಳ ಜೊತೆಗೆ ತಾಯಿಯನ್ನೂ ಬೀಳ್ಕೊಡಬೇಕೋ ಏನೋ ಗೊತ್ತಿಲ್ಲ,” ಎಂದು ಛೇಡಿಸಿದ.

ರೇಷ್ಮಾಳಂತೂ ಎಲ್ಲರ ಹೊಗಳಿಕೆಯಿಂದ ಉಬ್ಬಿ ಹೋಗಿದ್ದಳು. ಹಾಲು ಬೆಳ್ಳಗಿದ್ದ ಮುಖ ನಾಚಿಕೆಯಿಂದ ಕೆಂಪೇರಿತು. ಸಂಭ್ರಮ ಸಲ್ಲಾಪದ ಸದ್ದು ಎಲ್ಲಾ ಕಡೆ ಮೊಳಗುತ್ತಿರುವಂತೆ ರೇಷ್ಮಾ ತನ್ನ ಚಿಕ್ಕಮ್ಮನನ್ನು ರಜನಿಯ ರೂಮಿಗೆ ಕರೆದೊಯ್ದಳು. ಇನ್ನು ಸ್ವಲ್ಪ ಹೊತ್ತಿನಲ್ಲೇ ಗಂಡನ ಮನೆಗೆ ಹೊರಡುವುದರಲ್ಲಿದ್ದ ರಜನಿಗೆ ಇಷ್ಟು ದಿನ ತನ್ನ ಉಸಿರಿಗೆ ಉಸಿರಾಗಿದ್ದ ತಂದೆತಾಯಿ, ಅಣ್ಣ ಎಲ್ಲರನ್ನೂ ತೊರೆದು ಹೋಗಬೇಕಾಗಿದ್ದರಿಂದ ಎದೆಯೊಳಗೇನೋ ತಳಮಳ, ಕಣ್ಣಲ್ಲಿ ಮಡುಗಟ್ಟಿದ ದುಃಖದಿಂದ ಕಂಗಳು ತೇವವಾಗಿತ್ತು. ರೇಷ್ಮಾ ಮಗಳನ್ನು ತಬ್ಬಿಕೊಳ್ಳುತ್ತಾ ಪ್ರೀತಿಯ ಅಪ್ಪುಗೆಯಿಂದ ಸಂತೈಸಿದಳು. ಆಗ ಚಿಕ್ಕಮ್ಮ ಪರಿಸ್ಥಿತಿಯನ್ನು ತಿಳಿಗೊಳಿಸಲೆಂದು, “ನೋಡು…. ಗಂಡನ ಮನೆಗೆ ಹೊಡಬೇಕಾದರೆ ಒಂದೇ ಒಂದು ಹನಿ ಕಣ್ಣೀರು ಭೂಮಿಗೆ ಬಿತ್ತೋ…. ಹುಷಾರ್‌! ನಿನ್ನ ತಾಯಿ ಪಟ್ಟಿರುವ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.”

ಚಿಕ್ಕಮ್ಮನ ಬೆದರಿಕೆಯ ಮಾತು ಕೇಳಿ ರಜನಿ ಫಳಕ್‌ ಎಂದು ನಕ್ಕಳು. ಆದರೂ ಕಣ್ಣಲ್ಲಿ ಮಾತ್ರ ನೀರು ತುಂಬಿಕೊಂಡಿತ್ತು. ತಕ್ಷಣವೇ ರೇಷ್ಮಾ ತನ್ನ ಸೀರೆಯ ಸೆರಗಂಚಿನಿಂದ ರಜನಿಯ ಕಣ್ಣೊರೆಸಿದಳು.

ಸ್ಟೇಜ್‌ ಮೇಲೆ ಬಂಧುಮಿತ್ರರೆಲ್ಲರೂ ಗ್ರೂಪ್‌ ಫೋಟೋ ತೆಗೆಸಿಕೊಳ್ಳಲು ಸಜ್ಜಾಗುತ್ತಿದ್ದರು. ರೇಷ್ಮಾಳ ಕುಟುಂಬದ 4 ಮಣಿಗಳಿಂದ ಪೋಣಿಸಿದ ದಾರಕ್ಕೆ ಇನ್ನೊಂದು ಮಣಿ ಸೇರಿಕೊಂಡಿತು. ಈ ಎಲ್ಲಾ ಸಂತಸ ಸಂಭ್ರಮವನ್ನೆಲ್ಲಾ ಪ್ರೀತಿಯಿಂದ ಗಮನಿಸುತ್ತಿದ್ದ ಚಿಕ್ಕಮ್ಮನಿಗೆ ರೇಷ್ಮಾಳ ಹಿಂದಿನ ಹೋರಾಟ, ಪಟ್ಟ ಕಷ್ಟ ಎಲ್ಲ ಶೂನ್ಯವೆನಿಸಿತು. ಬಹಳ ಹಿಂದೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಭಾಷಣ ಸ್ಪರ್ಧೆಯಲ್ಲಿ ರಜನಿ ಹೇಳಿದ ಪ್ರತಿಯೊಂದು ಮಾತುಗಳು ಚಿಕ್ಕಮ್ಮನ ಕಿವಿಯಲ್ಲಿ ಇಂದು ಮಾರ್ದನಿಸುತ್ತಿದ್ದವು. ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣ ಕುರಿತು ಸುದೀರ್ಘವಾಗಿ ಅಷ್ಟೇ ಗಂಭೀರವಾಗಿ ತನ್ನ ಅಭಿಪ್ರಾಯ ಮಂಡಿಸುತ್ತಾ ಅತ್ಯಂತ ಭಾವುಕಳಾಗಿ ಮಾತನಾಡಿದ್ದಳು, `ಸುಂದರವಾದ ಬದುಕಿಗೆ ಪ್ರೇಮದ ದಾರ ಅತಿ ಮುಖ್ಯ. ಅದನ್ನು ಕ್ಷುಲ್ಲಕ ಕಾರಣಕ್ಕಾಗಿ ಹರಿಯದಿರಿ. ಅಕಸ್ಮಾತ್‌ ಹರಿದರೂ ಮತ್ತೆ ಜೋಡಿಸುವ ಪ್ರಯತ್ನ ಮಾಡಿ. ಬದುಕುವ ಸೂತ್ರ ಹರಿದ ಗಾಳಿಪಟದಂತೆ ಆಗದಿರಲು ಪ್ರೇಮದ ದಾರವನ್ನು ಗಟ್ಟಿಯಾಗಿ ಬಂಧಿಸಿಡಿ.’

ಅಂಥ ಭಾವೋದ್ವೇಗದ ಮಾತುಗಳು ಇಂದು ಅವಳ ಕುಟುಂಬದ ಆ ಸಂಭ್ರಮವನ್ನು ಕಂಡಾಗ ನಿಜ ಎನ್ನಿಸಿತು. ರೇಷ್ಮಾಳ `ಪ್ರೇಮದ ದಾರ’ ಒಮ್ಮೆ ತುಂಡಾದರೂ ಮತ್ತೆ ಅದನ್ನು ಬಿಗಿಯಾಗಿ ಕಟ್ಟಿದಳು. ಅದು ಎಷ್ಟು ಬಿಗಿಯಾಗಿ ಬೆಸುಗೆ ಹಾಕಿದ್ದಳೆಂದರೆ ಹಿಂದೆ ಹರಿದ ಕುರುಹು ಕಾಣದಷ್ಟು ಬಿಗಿಯಾಗಿ ಬೆಸೆದಿದ್ದಳು. ಅವಳ ಸತ್ಯಸಂಧತೆ, ವಿಶಾಲ ಹೃದಯ, ಮಾನವೀಯತೆಯ ಪರಿ ಇಂದು ಅವಳ ಬದುಕನ್ನು ಸಾರ್ಥಕವಾಗಿಸಿತ್ತು. ತನ್ನ ನಿಷ್ಕಲ್ಮಶವಾದ ಪ್ರೀತಿಯಿಂದ ಎಲ್ಲಾ ಗಂಟುಗಳನ್ನೂ ಅಷ್ಟೇ ಮೃದುವಾಗಿ ಪೋಣಿಸಿತ್ತು, ಪ್ರೇಮದ ದಾರ ಸಂತಸದ ಬದುಕಿಗೆ ಆಧಾರ ಎನ್ನುವುದನ್ನು ಸಾಬೀತುಪಡಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ