ಆಹಾ! ಹೆಸರು ಹೇಳ್ತಿದ್ದ ಹಾಗೇ ಅದೆಷ್ಟೋ ಆನಂದ, ಅದೇನೋ ಖುಷಿ! ಅಡುಗೆ ಏನೇ ಆಗಿರಲಿ, ಉಪ್ಪು, ಹುಳಿ, ಖಾರಾ ಹೆಚ್ಚು ಕಮ್ಮಿ ಆಗಿದ್ರೂ ಪರವಾಗಿಲ್ಲ ಈ ಒಗ್ಗರಣೆ ಅನ್ನೋದು ಅಚ್ಚುಕಟ್ಟಾಗಿದ್ದರೆ ಎಲ್ಲವನ್ನೂ ಮುಚ್ಚಿಹಾಕ್ಬಿಡುತ್ತೆ. ಹದವಾದ ಪರಿಮಳ ಭರಿತ ಒಗ್ಗರಣೆಗಳಲ್ಲಿ ತರಹೇವಾರಿ ವಿಧಾನಗಳು. ಬರೀ ಬೇಳೆ ಸಾರಿಗೆ ಮನೆಯಲ್ಲಿ ಕಾಯಿಸಿದ ತುಪ್ಪದಲ್ಲಿ ಹಾಕೋ ಇಂಗಿನ ಒಗ್ಗರಣೆ, ಪಲ್ಯಕ್ಕೆ ಸಾಸುವೆ  ಕಡಲೆಬೇಳೆ, ಉದ್ದಿನ ಬೇಳೆಯೊಟ್ಟಿಗೆ ಒಣ ಮೆಣಸಿನಕಾಯಿ ಒಗ್ಗರಣೆ, ಕೋಸಂಬರಿಗೆ ಸಾಸುವೆ, ಹಸಿ ಮೆಣಸಿನಕಾಯಿ ಆಗತಾನೇ ಕಿತ್ತು ಹಾಕೋ ಕರಿಬೇವಿನ ಜೊತೆಗೆ ಘಮಗುಟ್ಟೋ ಇಂಗಿನ ಒಗ್ಗರಣೆ, ತರಕಾರಿ ಹುಳಿಗೆ ಚುರ್ ಎನಿಸೋ ಸಾಸುವೆ ಒಗ್ಗರಣೆ. ಇನ್ನು ಮಜ್ಜಿಗೆಗೆ ಬಂದರೆ ಹದವಾಗಿ ಕಡೆದು ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಅಲಂಕರಿಸಿ, ಸಾಸುವೆ, ಕರಿಬೇವು, ಚಿಟಕಿ ಇಂಗಿನೊಟ್ಟಿಗೆ ಕುಡಿದರೆ ಊಟ ಪರಿಪೂರ್ಣ. ರುಚಿಕಟ್ಟಾದ ಊಟಕ್ಕೆ ಅದ್ಭುತ ಫಿನಿಶಿಂಗ್‌ ಕೊಡೋ ಒಗ್ಗರಣೆಯ ಮಹತ್ವದ ರುಚಿ ಬಲ್ಲವನೇ ಬಲ್ಲ. ತಿಂದವನೇ ಭಂಟ!

ಸಿಮ್ ಮೋಡ್‌ ನಲ್ಲಿ ಒಲೆಯ ಉರಿಯನ್ನು ಇಟ್ಟುಕ್ಕೊಂಡು ಒಗ್ಗರಣೆ ಹಾಕೋದೂ ಒಂದು ಕಲೆಯೇ. ಅಡುಗೆ ಎಲ್ಲಾ ಚಂದ ಮಾಡಿ ಒಗ್ಗರಣೆಯನ್ನು ಹಾಳು ಮಾಡಿಬಿಟ್ಟರೆ, ಅಡುಗೆಯ ಗಮ್ಮತ್ತೇ ಹಾಳಾಗಿ ಹೋಗುತ್ತೆ. ದಪ್ಪ ತಳದ ಪುಟ್ಟ ಕಬ್ಬಿಣದ ಬಾಣಲೆ ಉತ್ತಮ. ಇಲ್ಲಾ ತಾಮ್ರ ತಳದ ಸ್ಟೀಲ್ ‌ಬಾಣಲೆಯಾದರೂ ಓ.ಕೆ. ಸ್ವಲ್ಪ ದಶಕಗಳ ಹಿಂದೆಕ್ಕೆ ಸರಿದರೆ ಸಾರಿನ ಸೌಟಲ್ಲೇ ಒಗ್ಗರಣೆ ಹಾಕುವವರನ್ನೂ ಕಂಡಿದ್ದೇವೆ. ಪರಿಕರಣೆಗಳು ಹಲವಾದರೂ ಘಮಲು ಮಾತ್ರ ಒಂದೇ! ಇಂಥ ಒಗ್ಗರಣೆಗೆ ಒಗ್ಗಿಹೋಗಿರುವ ಬಾಯಿಗೆ, ನಾಗರಪಂಚಮಿ ಬಂತೆಂದರೆ ಬೇಸರ! ಒಗ್ಗರಣೆಯಿಲ್ಲದ ಕೋಸಂಬರಿ, ಸಾರು, ಪಲ್ಯ ತಿನ್ನೋವಾಗ ಬಾಯಿಗೇನೋ ಕಳೆದುಕೊಂಡ ಭಾವ.

ಎಷ್ಟೋ ಕಡೆ ನಾವುಗಳು ಹೇಳಿರ್ತೀವಿ, ಬೇರೆಯವರು ಹೇಳೋದೂ ಕೇಳಿರ್ತೀವಿ. ಅಡುಗೆ ಸೂಪರ್‌ ಎಂದಾಗ ಒಗ್ಗರಣೆ ನಾನೇ ಹಾಕಿದ್ದಪ್ಪಾ ಎಂಬ ಹಾಸ್ಯದ ಹೊನಲೂ ಹೊರ ಬಂದಿರುತ್ತದೆ. ತರಹೇವಾರಿ ಒಗ್ಗರಣೆಯ ರೀತಿ ಜೀವನ ಹಾಸ್ಯ, ಕಷ್ಟ, ಸುಖ, ನೋವು, ನಲಿವುಗಳ ಸಮ್ಮಿಶ್ರಣ. ಸಂಘಜೀವಿ ಮಾನವ ಅನುಬಂಧಗಳಿಗೆ ಮಣಿಯುತ್ತಾನೆ. ಸಂಬಂಧಗಳ ಗಟ್ಟಿತನಕ್ಕೆ ಬೆಸೆಯುವಿಕೆಗೆ ಮಾನಸಿಕ ಒಗ್ಗರಣೆ ಹಾಕುತ್ತಾನೆ. ಹೋಲಿಕೆಗಳಿಗೆ ಮನಸು ವಾಲುತಿದೆ. ಇಂಥದೇ ಪರಿಕರಣೆಯಲ್ಲಿ ಒಗ್ಗರಣೆ ಹಾಕಿದರೆ ಹೇಗೆ ಅದರ ಗಮ್ಮತ್ತು ಹೆಚ್ಚುತ್ತದೋ ಹಾಗೆ ಸಂಸ್ಕಾರ ಎಂಬ ಪರಿಕರಣೆಯಲ್ಲಿ ಬೆಳೆದ ಮಕ್ಕಳ ಗಮ್ಮತ್ತು ಅಷ್ಟೇ ಉತ್ತಮವಾಗಿರುತ್ತದೆ. ಇಂತಹ ಮಕ್ಕಳು ಕುಟುಂಬದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಯಶಸ್ವಿಗಳಾಗಿರುತ್ತಾರೆ.

ತಮ್ಮ ಗುಣ ನಡತೆಗಳಿಂದ ಸಂಸಾರದ ಹಿಡಿತವನ್ನು ಇತರರ ಬಗೆಗಿನ ಕಾಳಜಿಯನ್ನು ಹಲವಾರು ರೀತಿಗಳಲ್ಲಿ ಹೊಂದಿರುತ್ತಾರೆ. ಸಾಸುವೆ, ಜೀರಿಗೆ ಹಾಕಿದರೂ ಒಗ್ಗರಣೆಯೇ. ಒಂದೊಂದು ಅಡುಗೆಗೂ ಒಂದೊಂದು ರೀತಿಯ ಒಗ್ಗರಣೆಯಿದ್ದ ಹಾಗೆ ವ್ಯಕ್ತಿ ವ್ಯಕ್ತಿಗಳಿಗೂ ಇದು ಭಿನ್ನವಾಗಿರುತ್ತದೆ. ಒಬ್ಬರದು ಸಾಸುವೆ, ಜೀರಿಗೆ ಹಾಕಿದ ಒಗ್ಗರಣೆಯಂತೆ ಸೌಮ್ಯ ಸ್ವಭಾವವಾದರೆ, ಮತ್ತೊಬ್ಬರದು ಮೆಣಸಿನಕಾಯಿ ಮಸಾಲಭರಿತ ಒಗ್ಗರಣೆಯಂತಹ ತಾಮಸಗುಣ, ಇನ್ನೊಬ್ಬರದು ಸಾತ್ವಿಕ ಗುಣ, ಮತ್ತೊಬ್ಬರದು ರಾಜಸ ಗುಣ. ಒಂದೊಂದಕ್ಕೂ ಒಂದೊಂದು ರೀತಿಯ ಫಿನಿಶಿಂಗ್‌ ಬೇಕು! ತಾನು ಬೆಳೆದು ಬಂದು ರೀತಿ, ನೋಡಿದ ಪರಿಸರ ಅದರೊಟ್ಟಿಗೆ ತನ್ನದೇ ಸ್ವಭಾವಗಳು ಮೈಗೂಡಿಸಿಕೊಂಡಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಎಲ್ಲ ತಾಯಿ ತಂದೆಯರಿಗೂ ಮುಂದೆ ಈ ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದೇ ಒಳ್ಳೇ ತುಪ್ಪದಲ್ಲಿ ಹುರಿದ ಬಾದಾಮಿ, ದ್ರಾಕ್ಷಿ, ಗೋಡಂಬಿಗಳ ಒಗ್ಗರಣೆಯಾಗಲೆಂದೇ ಉತ್ತಮ ನಡವಳಿಕೆಯನ್ನು ಆ ಮಗುವಿನಲ್ಲಿ ತುಂಬಿ ಬೆಳೆಸುತ್ತಾರೆ. ಅದರಂತೆ ಮಗು ಕೂಡ ಬೆಳೆಯುತ್ತದೆ. ಸರಿಹೋದರೆ ಎಲ್ಲ ಸರಿ. ಅದೇ ಹಣೆಬರಹ ಸರಿಯಿಲ್ಲದೆ ಹೋದರೆ ಇದರ ತದ್ವಿರುದ್ಧ ನಡೆಯೋ ಮಕ್ಕಳು  ಸೃಷ್ಟಿಯಾಗಿ ಬಿಡುತ್ತಾರೆ. ಸಮಯದ್ದೋ, ಸಹವಾಸದ್ದೋ ವ್ಯತ್ಯಯಗಳಿಂದ ಖಾರ ಅತಿಯಾದ ಮಸಾಲೆ ಒಗ್ಗರಣೆಯಂತೆ ಜೀವನ ಮಾಡಿಕೊಂಡು ಬಿಡುತ್ತಾರೆ. ಹೊಟ್ಟೆ ಹಾಳು ಮಾಡಿಕೊಂಡು ಆರೋಗ್ಯ ಹದಗೆಡಿಸಿಕೊಳ್ಳೋ ಎಷ್ಟೋ ಉದಾಹರಣೆಗಳನ್ನೂ ನೋಡುತ್ತಿರುತ್ತೇವೆ. ಇಂತಹ ಸ್ಪೈಸಿ ಬದುಕು ತಮ್ಮನ್ನು ಹಾಳು ಮಾಡಿಕೊಳ್ಳೋದಲ್ಲದೇ ಸಮಾಜದ ಸ್ವಾಸ್ಥ್ಯವನ್ನೂ ಹದಗೆಡಿಸುತ್ತದೆ. ಹಾಗೆಯೇ ಒಗ್ಗರಣೆ ಹಾಕೋ ಜನರಿಗೂ ಏನೂ ಕಮ್ಮಿಯಿಲ್ಲ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ