ನೀಳ್ಗಥೆ - ರಾಧಿಕಾ ಮನೋಹರ್
ಭಾಗ ಮೂರು
ಇಲ್ಲಿಯರೆಗೆ.........
ಅಶ್ವಿನ್ ವೃತ್ತಿಯಿಂದ ಒಬ್ಬ ವೈದ್ಯರು. ಒಂದು ಒಳ್ಳೆಯ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿದ್ದ ನಂದಿತಾಳ ಜೊತೆ ಅವರ ಮದುವೆಯಾಯಿತು. ನಂದಿತಾ ಸದಾ ನಿರುತ್ಸಾಹದಲ್ಲಿರುತ್ತಿದ್ದಳು. ಹಾಸಿಗೆಯಲ್ಲಿಯೂ ಅವಳು ಒಬ್ಬ ಪತ್ನಿಯಂತೆ ವ್ಯವಹರಿಸುತ್ತಿರಲಿಲ್ಲ. ಒಂದು ದಿನ ಅಶ್ವಿನ್ ಒತ್ತಾಯಿಸಿ ಕಾರಣ ಕೇಳಲು ತಾನು ಬೇರೊಬ್ಬನ ಪ್ರೀತಿಯಲ್ಲಿ ಹುಚ್ಚಾಗಿರುವುದನ್ನು ತಿಳಿಸಿದಳು. ಆಶ್ಚರ್ಯವೆಂದರೆ ಆ ಇನ್ನೊಬ್ಬ ವ್ಯಕ್ತಿ ವಿವಾಹಿತ!
ನಂದಿತಾಳಿಂದ ವಿಚ್ಛೇದನ ಪಡೆದ ನಂತರ ಅಶ್ವಿನ್ ದಿವ್ಯಾಳನ್ನು ಮರುಮದುವೆಯಾದರು. ದಿವ್ಯಾ ಮತ್ತು ತಮ್ಮ 8 ವರ್ಷದ ಮಗನೊಂದಿಗೆ ಯಾವುದೇ ಕಹಿಯಿಲ್ಲದ ದಾಂಪತ್ಯ ಜೀವನ ನಡೆಸುತ್ತಾ ಸುಖವಾಗಿದ್ದರು.
10 ವರ್ಷಗಳ ನಂತರ ಇದ್ದಕ್ಕಿದ್ದಂತೆ ನಂದಿತಾ ಒಂದು ದಿನ ಅಶ್ವಿನ್ ಅವರನ್ನು ಭೇಟಿ ಮಾಡಲು ಕ್ಲಿನಿಕ್‌ಗೆ ಬಂದಳು. ತಾನು ಅತ್ಯಂತ ಹೀನ ಮತ್ತು ಅಸಹಾಯಕ ಸ್ಥಿತಿಯಲ್ಲಿರುವುದನ್ನು ತಿಳಿಸಿ ಮತ್ತೆ ಮತ್ತೆ ಅವರ ಕ್ಷಮೆ ಕೇಳಿದಳು.
ಸರಳ ಸ್ವಭಾವದ ಅಶ್ವಿನ್ ಅವಳ ಮಾತುಗಳನ್ನು ನಂಬಿ ಸಹಾಯ ಮಾಡಲು ಮುಂದಾದರು. ಅವಳಿಗೆ ಒಂದು ಬಾಡಿಗೆ ಮನೆಯನ್ನು ಗೊತ್ತು ಮಾಡಿ ಅವಳ ವ್ಯವಸ್ಥೆಗೆ ಅಗತ್ಯವಾದ ಆರ್ಥಿಕ ನೆರವನ್ನೂ ನೀಡಿದರು.
ಅಶ್ವಿನ್ ಮನೆಗೆ ಬರಬೇಕೆಂದು ಒಂದು ದಿನ ನಂದಿತಾ ಮತ್ತೆ ಮತ್ತೆ ಕೇಳಿಕೊಂಡಳು. ಕ್ಲಿನಿಕ್ ಮುಗಿಸಿ ಅವಳ ಮನೆ ತಲುಪಿದಾಗ ನಂದಿತಾ ಚೆನ್ನಾಗಿ ಅಲಂಕರಿಸಿಕೊಂಡು ತಮಗಾಗಿ ಕಾಯುತ್ತಿದ್ದುದು ಕಂಡಿತು.
ಮುಂದೆ ಓದಿ......
``ಬನ್ನಿ ಬನ್ನಿ.... ನೀವು ಬಂದೇ ಬರುವಿರೆಂದು ನನಗೆ ವಿಶ್ವಾಸವಿತ್ತು,'' ನಂದಿತಾ ಕೊರಳು ಕೊಂಕಿಸಿ ನುಡಿದಳು. ಅವಳ ಶರೀರದ ವೈಯಾರಕ್ಕೆ ತಕ್ಕಂತೆ ಧ್ವನಿಯಲ್ಲೂ ಜೇನು ಒಸರುತ್ತಿತ್ತು. ಅವಳು ಬೇಕೆಂದೇ ಹಾಗೆ ಮಾಡುತ್ತಿದ್ದಳೋ ಅಥವಾ ಅಶ್ವಿನ್‌ರನ್ನು ನೋಡಿದ ಸಂತೋಷದಿಂದ ಭಾವವಿಹ್ವಲಗೊಂಡಿದ್ದಳೋ ತಿಳಿಯುತ್ತಿರಲಿಲ್ಲ. ಅವಳ ನಡವಳಿಕೆಯನ್ನು ನೋಡಿದರೆ, ಅವರಿಬ್ಬರ ಸಂಬಂಧದಲ್ಲಿ ಬಿರುಕು ಹುಟ್ಟಿ ಇಬ್ಬರೂ ಪರಸ್ಪರ ದೂರವಾಗಿದ್ದರು ಎಂದು ಯಾರಿಗೂ ಅನ್ನಿಸುವಂತಿರಲಿಲ್ಲ. ನಂದಿತಾ ಅವರ ಪತ್ನಿಯೇ ಎನ್ನುವಂತಿತ್ತು ಅವಳ ವ್ಯವಹಾರ.
ನಂದಿತಾಳ ಸ್ವಚ್ಛಂದ ಭಾವದಿಂದ ಅಶ್ವಿನ್ ಮನಸ್ಸು ಕೊಂಚ ಡೋಲಾಯಮಾನವಾಯಿತು. ಸ್ತ್ರೀಯ ಸೌಂದರ್ಯ ಮತ್ತು ಚಾಂಚಲ್ಯ ಪುರುಷನ ಮನಸ್ಸನ್ನು ಅಲುಗಿಸದಿರದೇ? ಅದರಲ್ಲೂ ನಂದಿತಾ ಅವರ ಮಾಜಿ ಪತ್ನಿ. ಅವಳ ಪ್ರತ್ಯೇಕ ಅಂಗವನ್ನು ಕಂಡಿದ್ದವರು. ಹಾಗಿರುವಾಗ ಇಷ್ಟು ಕಾಲದ ನಂತರ ಅವಳು ಸಂಕೋಚವಿಲ್ಲದೆ ಸೌಂದರ್ಯ ಪ್ರದರ್ಶನ ಮಾಡಿದರೆ ಮನಸ್ಸು ಹರಿದಾಡದಿರುವುದೇ?
ಅಶ್ವಿನ್ ಹೊರಗೆ ಏನೂ ಪ್ರಕಟಿಸದೆ, ಅವಳತ್ತ ನೋಡದೆ ಒಳಗೆ ಹೋಗಿ ಕುಳಿತರು. ನಂದಿತಾ ತನ್ನ ಮನೆಯನ್ನು ಬಹು ಸುಂದರವಾಗಿ ಸಜ್ಜುಗೊಳಿಸಿದ್ದಳು. ಮನೆ ಚಿಕ್ಕದಾಗಿತ್ತು. ಆದರೆ ಗೃಹಿಣಿಯು ಜಾಣೆಯಾದರೆ ಚಿಕ್ಕ ಜಾಗವನ್ನೂ ಚೊಕ್ಕವಾಗಿಡಬಲ್ಲಳು. ನಂದಿತಾಳ ಈ ಗುಣ ಅಶ್ವಿನ್‌ಗೆ ತಿಳಿದಿರಲಿಲ್ಲ. ಏಕೆಂದರೆ ಅವರಿಬ್ಬರು ಮದುವೆಯಾಗಿ ಮನೆ ಮಾಡಿಕೊಂಡಿದ್ದಾಗ ನಂದಿತಾಳ ಮನಸ್ಸು ಮನೆಯಲ್ಲಿರಲೇ ಇಲ್ಲ, ತನು ಮಾತ್ರ ಅಲ್ಲಿತ್ತು ಅಷ್ಟೆ. ಹಾಗಿರುವಾಗ ಮನೆಯ ಕಡೆ ಗಮನವೆಲ್ಲಿರುತ್ತದೆ?
ಸಿಹಿ ತಿಂದು ಅಶ್ವಿನ್ ಹೊರಡಲು ಎದ್ದಾಗ ನಂದಿತಾ, ``ನಿಮಗೆ ಹೇಗೆ ಧನ್ಯವಾದ ಹೇಳಲಿ?'' ಎಂದು ಮೃದುವಾಗಿ ಅವರ ಕೈ ಹಿಡಿದು ಅದುಮಿದಳು.