ನೀಳ್ಗಥೆ – ರಾಧಿಕಾ ಮನೋಹರ್‌ 

ಭಾಗ  ಎರಡು  

ಇಲ್ಲಿಯರೆಗೆ…..

ಅಶ್ವಿನ್‌ ವೃತ್ತಿಯಿಂದ ವೈದ್ಯರು. ನಂದಿತಾ ಎಂಬ ಹುಡುಗಿಯೊಡನೆ ಅವರ ಮದುವೆಯಾಯಿತು. ಅವಳು ಒಂದು ಒಳ್ಳೆಯ ಕಂಪನಿಯಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿದ್ದಳು. ಮದುವೆಯ ನಂತರ ತಮ್ಮ ಪತ್ನಿಯ ನಿರುತ್ಸಾಹ ಕಂಡು ಅಶ್ವಿನ್‌ಚಿಂತಿತರಾದರು. ಜೊತೆಯಲ್ಲಿ ಮಲಗಿದಾಗಲೂ ಅವಳು ಒಂದು ಹೆಣ್ಣಿನಂತೆ  ವರ್ತಿಸುತ್ತಿರಲಿಲ್ಲ.  ಒಂದು ದಿನ ಅಶ್ವಿನ್‌ ಅವಳನ್ನು ಒತ್ತಾಯಿಸಿ ಕೇಳಿದಾಗ, ಅವಳು ಹೇಳಿದ್ದೇನೆಂದರೆ…. ಅವಳಿಗೆ ಒಬ್ಬ ವ್ಯಕ್ತಿಯೊಡನೆ ಪ್ರೀತಿಯಿದ್ದು, ಅವನಿಗಾಗಿ ಹುಚ್ಚಿಯಂತಾಗಿದ್ದಳು. ಆಶ್ಚರ್ಯವೆಂದರೆ ಅವಳು ಪ್ರೀತಿಸುತ್ತಿದ್ದ ವ್ಯಕ್ತಿ ವಿವಾಹಿತ. ಇದನ್ನು ಕೇಳಿ ಅಶ್ವಿನ್‌ಗೆ ನಿಂತ ನೆಲ ಕುಸಿದಂತಾಯಿತು. ಹಲವು ವರ್ಷಗಳ ನಂತರ ಅವರ ಕ್ಲಿನಿಕ್‌ಗೆ ಒಬ್ಬ ಮಹಿಳೆ ಬಂದಳು…….

ಮುಂದೆ ಓದಿ……..

ವಿವಾಹ ವಿಚ್ಛೇದನವಾದ 8 ವರ್ಷಗಳ ನಂತರ ನಂದಿತಾ ಒಂದು ದಿನ ಇದ್ದಕ್ಕಿದ್ದಂತೆ ಡಾ. ಅಶ್ವಿನ್‌ರನ್ನು ಭೇಟಿ ಮಾಡಲು ಕ್ಲಿನಿಕ್‌ಗೆ ಬಂದಳು. ಅವಳ ಬೇಡಿಕೆಯನ್ನು ತಿಳಿದು ಅಶ್ವಿನ್‌ ಆಶ್ಚರ್ಯಗೊಂಡರು. ನಂದಿತಾ ಬಯಸುತ್ತಿದ್ದುದಾದರೂ ಏನು…..?

ಅಶ್ವಿನ್‌ ಸಾಕಷ್ಟು ಆಲೋಚಿಸಿದರು. ಇಂತಹ ಪರಿಸ್ಥಿತಿಯಲ್ಲಿ ಅವರಿಗಿದ್ದುದು ಎರಡೇ ದಾರಿಗಳು. ನಂದಿತಾಳನ್ನು ಬಿಡುಗಡೆ ಮಾಡಿ ಅವಳು ತನಗೆ ಬೇಕಾದಂತೆ ಜೀವನ ನಡೆಸಲು ಬಿಟ್ಟು ಬಿಡುವುದು ಅಥವಾ ಅವಳನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡು ಮನೋವೈದ್ಯರಿಂದ ಚಿಕಿತ್ಸೆ ಕೊಡಿಸುವುದು.

ಅವರು ಯಾವುದೇ ದಾರಿಯನ್ನು ಆರಿಸಿಕೊಂಡರೂ, ನಂದಿತಾ ಮಾಡಿರುವ ಮೋಸ ಮುಳ್ಳಿನಂತೆ ಜೀವನ ಪರ್ಯಂತ ಅವರನ್ನು ಚುಚ್ಚುತ್ತಿರುತ್ತದೆ. ಅವಳು ತನ್ನ ತಪ್ಪನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಟ್ಟು ನೋಡಬಹುದು. ಅವರಲ್ಲಿ ಅಷ್ಟು ಕರುಣೆ ಇದ್ದೇ ಇತ್ತು. ಆದರೆ ಇಷ್ಟೆಲ್ಲ ಮಾಡಿದ ಮೇಲೂ ಅವಳು ಸರಿಹೋಗದಿದ್ದರೆ…..  ಅವರು ಆ ನೋವನ್ನು ಸಹಿಸಿಕೊಳ್ಳಬಹುದೇ? ಅವರ ಪತ್ನಿ ಹಗಲು ಪರಪುರುಷನೊಡನೆ ಮಜಾ ಮಾಡಿ ರಾತ್ರಿ ಅವರೊಡನೆ ಮಂಜುಗಡ್ಡೆಯಂತೆ ಮಲಗಿದ್ದರೆ ಅದನ್ನು ಸಹಿಸುವುದು ಚಿಕ್ಕ ವಿಷಯವಲ್ಲ.

ಇಂತಹ ಜವಾಬ್ದಾರಿರಹಿತ ಮತ್ತು ವಿಶ್ವಾಸದ್ರೋಹಿ ಪತ್ನಿಯೊಡನೆ ಹೆಚ್ಚು ದಿನ ಕಳೆಯಲು ಅವರಿಗೆ ಸಾಧ್ಯವಾಗುವುದೇ? ಅವಳಿಗೆ ಮಕ್ಕಳಾದರೆ ಅದು ಯಾರ ವೀರ್ಯದಿಂದ ಜನಿಸಿದೆ ಎಂಬ ಸಂದೇಹ ಬಂದೇ ಬರುವುದು. ಅದನ್ನು ಪರೀಕ್ಷಿಸಲು ಡಿಎನ್‌ಎ ಟೆಸ್ಟ್ ಮಾಡಿಸುತ್ತಾ ತೊಳಲಾಡಬೇಕೇ? ಅವರು ಜೀವನ ಪರ್ಯಂತ ಅನುಮಾನ ಮತ್ತು ಚಿಂತೆಯ ಸುಳಿಯಲ್ಲಿ ಸಿಲುಕಿರಬೇಕಾಗುತ್ತದೆ.

ಪತ್ನಿಯಾದವಳು ಪರಪುರುಷನೊಡನೆ ಸಂಬಂಧವಿರಿಸಿಕೊಂಡರೆ ಅದೆಂತಹ ಹಿಂಸೆ ಎಂಬುದು ಡಾಕ್ಟರ್‌ಗೆ ಅರ್ಥವಾಗಿದೆ. ಆ ಶಿಕ್ಷೆಯಿಂದ ಮನುಷ್ಯನಿಗೆ ಸಾಯಲೂ ಆಗದು, ಬದುಕಲೂ ಆಗದು.

ಇಷ್ಟೆಲ್ಲ ಹಿಂಸೆ ಇದ್ದರೂ ಮೃದು ಸ್ವಭಾವದವರಾದ ಅಶ್ವಿನ್‌, “ನಂದಿತಾ, ನಿರ್ಧಾರವನ್ನು ನಿನಗೇ ಬಿಡುತ್ತೇನೆ. ನೀನು ಸರಿಯಾಗಿರುತ್ತೇನೆ ಎಂದರೆ ನನ್ನ ಜೊತೆಯಲ್ಲಿ ಇರಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ನಿನಗೆ ಬಿಡುಗಡೆ ಕೊಡುತ್ತೇನೆ. ನಿನಗೆ ಯಾವುದು ಇಷ್ಟವೋ ಹಾಗೆ ಮಾಡು.” ಎಂದರು.

“ನಾನು ಪ್ರಯತ್ನಪಡುತ್ತೇನೆ. ನಿಜ ಹೇಳಬೇಕು ಅಂದರೆ ನಮ್ಮ ಮದುವೆ ನಿಶ್ಚಯ ಆದಾಗಲೇ ನಾನು ಅವನಿಂದ ದೂರ ಆಗುವುದಕ್ಕೆ ಪ್ರಯತ್ನಿಸಿದೆ. ಮದುವೆಯಾದ ಮೇಲೂ ಸಾಕಷ್ಟು ಪ್ರಯತ್ನ ಪಡುತ್ತಿದ್ದೇನೆ. ಇದರಿಂದಲೇ ನನಗೆ ನಿಮ್ಮ ಜೊತೆ ಸರಿಯಾಗಿ ವ್ಯವಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವನ ಸಹವಾಸ ಬಿಡುವುದಕ್ಕೆ ಆಗುವುದೇ ಅಂತ ನೋಡುತ್ತೇನೆ,” ಎಂದಳು ನಂದಿತಾ.

ಪತಿಪತ್ನಿಯರ ಸಂಬಂಧ ಮುರಿದು ಬೀಳುವುದು ಸದ್ಯದಲ್ಲಿ ತಪ್ಪಿತು. ಆ ವ್ಯಕ್ತಿಯನ್ನು ದೂರವಿರಿಸಲೆಂದು ನಂದಿತಾ ತನ್ನ ಆಫೀಸಿಗೆ ದೀರ್ಘ ರಜೆ ಹಾಕಿದಳು. ಮನೆಗೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಳು. ಟಿವಿ ನೋಡುತ್ತಾ ಮನಸ್ಸು ಅಲೆದಾಡದಂತೆ ಹಿಡಿದಿಟ್ಟಳು. ಪುಸ್ತಕ ಓದುತ್ತಾ ಕಾಲ ಕಳೆದಳು. ಇಷ್ಟೆಲ್ಲಾ ಮಾಡಿದರೂ ಮೊಬೈಲ್‌ ಮಾಯೆಯು ತನ್ನ ಬಲೆ ಬೀಸಿತು. ಆ ವ್ಯಕ್ತಿಯಿಂದ ಫೋನ್‌ ಕರೆ ಬಂದಾಗ ನಂದಿತಾ ಮಾತನಾಡಲಿಲ್ಲ. ಮೆಸೇಜ್‌ ಬಂದಾಗ ಅದಕ್ಕೆ ಗಮನ ಕೊಡಲಿಲ್ಲ. ಆದರೆ ಎಲ್ಲಿಯವರೆಗೆ? ಒಂದೇ ಸಮನೆ ಫೋನ್‌ ಕಾಲ್ ‌ಮತ್ತು ಮೆಸೇಜ್‌ಗಳು ಬರುತ್ತಲೇ ಇದ್ದರೆ ಸುಮ್ಮನಿರಲಾಗದು. ಕಡೆಗೊಮ್ಮೆ ನಂದಿತಾ ಕರೆಯನ್ನು ಸ್ವೀಕರಿಸಿದಾಗ ಅತ್ತಲಿಂದ ಧ್ವನಿ ಕೇಳಿಸಿತು, “ಏನು ವಿಷಯ? ಏನಾಗಿದೆ ನಿನಗೆ? ನೀನೂ ಫೋನ್‌ಮಾಡುವುದಿಲ್ಲ. ನಾನು ಮಾಡಿದರೂ ತೆಗೆಯುವುದಿಲ್ಲ. ಏನಾಯಿತು ಅಂತ ಬಾಯಿಬಿಟ್ಟು ಹೇಳು,” ಅಧಿಕಾರ ವಾಣಿ ತುಂಬಿದ ಸ್ವರದಲ್ಲಿ ಪ್ರಶ್ನಿಸಿದ.

“ನೀನು ಅರ್ಥ ಮಾಡಿಕೊ. ನಾನೀಗ ವಿವಾಹಿತೆ. ಈ ಸಂಬಂಧವನ್ನು ಮುಂದುವರಿಸುವುದಕ್ಕೆ ಆಗುವುದಿಲ್ಲ.”

ಅವನು ಒಂದೆರಡು ಕ್ಷಣ ಮೌನವಾಗಿದ್ದು ನಂತರ, “ಸರಿ. ಇದೊಂದು ಸಲ ಭೇಟಿ ಮಾಡೋಣ.”

“ನಿಜಾನಾ? ಆಮೇಲೆ ನನ್ನನ್ನು ಬಿಟ್ಟು ಬಿಡುತ್ತೀಯಾ?” ನಂದಿತಾ ಉತ್ಸಾಹದಿಂದ ಕೇಳಿದಳು.

“ನಿನ್ನಿಷ್ಟ. ನೀನು ಹೀಗೇ ಖುಷಿಯಾಗಿರಬೇಕು,” ಅವನು ಪ್ರಸನ್ನನಾಗಿ ಹೇಳಿದ.

ಅಶ್ವಿನ್‌ ಆಸ್ಪತ್ರೆಗೆ ಹೋಗಿದ್ದರು. ನಂದಿತಾ ಸಿದ್ಧಳಾಗಿ ಹೊರಟಳು. ಆದರೆ ಆ ವ್ಯಕ್ತಿಯನ್ನು ಭೇಟಿ ಮಾಡಿ ಬಂದ ನಂತರ ಅವಳ ಮನಸ್ಸಿನ ಸ್ಥಿಮಿತ, ಶಾಂತತೆ ಹಾರಿಹೋಗಿತ್ತು. ಅವಳು ಒಳಗೊಳಗೇ ಅಳುತ್ತಿದ್ದಳು. ಅದು ಯಾರಿಗೂ ತಿಳಿಯುವಂತಿರಲಿಲ್ಲ.

ನಂದಿತಾ ಒಂದು ಬಗೆಯ ಶಾಕ್‌ನಲ್ಲಿರುವುದು ರಾತ್ರಿ ಅಶ್ವಿನ್‌ಗೆ ತಿಳಿಯಿತು. ಯಾವುದೋ ಘಟನೆ ನಡೆದಿದೆ ಎಂದು ಅವರಿಗೆ ಅರ್ಥವಾಯಿತು.

“ನೀನು ಅವನನ್ನು ಭೇಟಿ ಮಾಡಲು ಹೋಗಿದ್ದೆಯಾ?” ಎಂದು ಕೇಳಿದರು.

ನಂದಿತಾಳಿಗೆ ತಡೆಯಾಗಲಿಲ್ಲ. ಬಿಕ್ಕಿ ಬಿಕ್ಕಿ ಅಳತೊಡಗಿದಳು, “ನೀವು ನನಗೆ ಏನು ಶಿಕ್ಷೆ ಬೇಕಾದರೂ ಕೊಡಿ. ನಾನು ತಪ್ಪು ಮಾಡುತ್ತಿದ್ದೇನೆ ಅನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಏನು ಮಾಡಲಿ? ಅವನನ್ನು ಬಿಡುವುದಕ್ಕೆ ನನ್ನಿಂದ ಆಗುವುದಿಲ್ಲ. ಅವನಿಗೂ ನನ್ನನ್ನು ಬಿಟ್ಟು ಇರುವುದಕ್ಕೆ ಆಗುವುದಿಲ್ಲ.”

“ಹಾಗಾದರೆ ನೀನು ನನ್ನನ್ನು ಬಿಟ್ಟು ಹೋಗಬೇಕು!” ಅಶ್ವಿನ್‌ ಕಡೆಯದಾಗಿ ತೀರ್ಮಾನ ಹೇಳಿದರು.

ನಂದಿತಾ ಕಂಬನಿ ತುಂಬಿದ ಕಣ್ಣುಗಳಿಂದ ಅವರನ್ನೇ ನೋಡಿದಳು. ಇವಳೆಂತಹ ಹೆಣ್ಣು? ಇವಳ ಮನಸ್ಸಿನಲ್ಲಿ ಏನಿದೆ ಎಂದು ಅಶ್ವಿನ್‌ಗೆ ಅರ್ಥವಾಗಲಿಲ್ಲ, `ತಿಳಿದೂ ತಿಳಿದೂ ಬೆಂಕಿಯೊಳಗೆ ಬೀಳುತ್ತಿರುವಳಲ್ಲ….. ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುವಳಲ್ಲ….’

“ಸರಿ….” ನಂದಿತಾ ಮೆಲ್ಲನೆ ಹೇಳಿದಳು. ಅವಳ ಸ್ವರದಲ್ಲಿ ಅಪರಾಧಭಾವವಿರಲಿಲ್ಲ. ಅಶ್ವಿನ್‌ರಿಂದ ಬೇರೆಯಾಗುವ ಬಯಕೆ ಅವಳ ಮನಸ್ಸಿನಲ್ಲಿ ಇದ್ದಿರಬಹುದು. ಆದರೆ ಅವರು ಇಷ್ಟು ಸುಲಭವಾಗಿ ಅದಕ್ಕೆ ಒಪ್ಪುವರೆಂದು ಅವಳು ಭಾವಿಸಿರಲಿಲ್ಲ.

ಮುಂದೆ ಏನು ಮಾಡಬೇಕೆಂದು ಇಬ್ಬರೂ ಮಾತನಾಡಿಕೊಂಡರು. ನಂತರ ಪರಸ್ಪರ ಸಮ್ಮತಿಯೊಂದಿಗೆ ವಿವಾಹ ವಿಚ್ಛೇದನಕ್ಕೆ ಸಹಿ ಹಾಕಿದರು. ನಂದಿತಾಳನ್ನು ವಿವಾಹವಾದ ನಂತರ ಅಶ್ವಿನ್‌ಗೆ ದಿನ ವಿಷದ ಹನಿಯೊಂದು ಗಂಟಲಿನಲ್ಲಿ ಇಳಿದಂತಾಗುತ್ತಿತ್ತು. ಕಡೆ ವಿಷಯ ಕಹಿ ಗುಟುಕನ್ನು ನುಂಗಿಕೊಂಡರು. ಅದರ ಪ್ರಭಾವ ಅವರ ಮೈ ಮನಸ್ಸುಗಳ ತುಂಬ ಇನ್ನೂ ಹರಡಿತ್ತು. ಅದರಿಂದ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೆಂಗಳೂರಿನ ಆಸ್ಪತ್ರೆಯ ಕೆಲಸಕ್ಕೆ ರಾಜೀನಾಮೆ ನೀಡಿ ಅವರು ಮೈಸೂರಿಗೆ  ಹೊರಟುಹೋದರು. ಕೆಲವು ದಿನಗಳು ಯಾವ ಕೆಲಸ ಮಾಡದೆ ಮನೆಯಲ್ಲೇ ಉಳಿದರು. ಮಗನ ಮನಸ್ಸು ಸಮಾಧಾನಕರ ಸ್ಥಿತಿಗೆ ಬರಲಿ ಎಂದು ಅವರ ತಾಯಿ ತಂದೆಯರು ಮೊದಲು ಕೆಲವು ತಿಂಗಳವರೆಗೆ ಕೆಲಸದ ಬಗ್ಗೆ ಮಾತನಾಡಲಿಲ್ಲ.

ನಿಷ್ಕ್ರಿಯತೆ ಮನುಷ್ಯನನ್ನು ಕಾಯಿಲೆಗೆ ಗುರಿ ಮಾಡುತ್ತದೆ. ಸ್ವತಃ ವೈದ್ಯರಾದ ಅಶ್ವಿನ್‌ಗೆ ಇದು ಚೆನ್ನಾಗಿ ತಿಳಿದ ವಿಚಾರವೇ. ಕಡೆಗೆ ತಾಯಿ ತಂದೆಯರ ಸಲಹೆಯ ಮೇರೆಗೆ ಅವರೊಂದು ಕ್ಲಿನಿಕ್‌ ಪ್ರಾರಂಭಿಸಿದರು. ಕೆಲಸ ಪ್ರಾರಂಭಿಸಿದ ನಂತರ ತಾಯಿ ತಂದೆಯರು ಮರುಮದುವೆಗೆ ಒತ್ತಾಯ ಮಾಡತೊಡಗಿದರು. ಮತ್ತೊಮ್ಮೆ ವಿಷ ಕುಡಿಯಲು ಅಶ್ವಿನ್‌ ಸಿದ್ಧರಿರಲಿಲ್ಲ. ಆದರೆ ಸಮಾಜದ ರೀತಿನೀತಿಗಳ ಬಗ್ಗೆ ತಾಯಿ ತಂದೆ ಪಾಠ ಹೇಳಿದರು.

“ಮನುಷ್ಯ ಸಮಾಜ ಜೀವಿ, ಒಂಟಿಯಾಗಿ ಬದುಕಲಾರ. ಅವನಿಗೆ ಜೀವನದಲ್ಲಿ ಸುಖ ಸಂತೋಷಕ್ಕಾಗಿ ಸಂಪಾದನೆಯ ಜೊತೆಗೆ ಸಂಸಾರ ಇರಬೇಕು. ಪತ್ನಿಯ ಜೊತೆಗೆ ನಗುವ ಕುಣಿಯುವ ಮಕ್ಕಳೂ ಇರಬೇಕು. ಪ್ರಪಂಚದ ಎಲ್ಲ ಜೀವಿಗಳ ಜೀವನಕ್ರಮವೇ ಇದು.”

ಅಶ್ವಿನ್‌ ಮೊದಲಿನಿಂದಲೂ ಸರಳ, ಮೃದು ಸ್ವಭಾವದ ಯುವಕ. ತಾಯಿ ತಂದೆಯರ ಮಾತಿಗೆ ಇಲ್ಲವೆನ್ನಲಿಲ್ಲ. ಮದುವೆಗೆ ಒಪ್ಪಿದರು. ಆದರೆ ಈ ಸಲ ಹುಡುಗಿ ವಿದ್ಯಾವಂತೆಯಾಗಿರಲಿ, ಉದ್ಯೋಗಸ್ಥೆಯಾಗಿರುವುದು ಬೇಡ ಎಂದರು.

ಪರಿಚಯಸ್ಥರ ಮಧ್ಯಸ್ಥಿಕೆಯಿಂದ ಒಂದು ಸಂಬಂಧದ ಪ್ರಸ್ತಾಪ ಬಂದಿತು. ದಿವ್ಯಾ ಎಲ್ಎಲ್‌ಬಿ ಮಾಡಿದಳು. ಅವಳ ಒಂದು ಕೋರಿಕೆ ಎಂದರೆ, ಅಗತ್ಯ ಬಿದ್ದಾಗ ಅವಳು ವಕೀಲಿ ಪ್ರಾಕ್ಟೀಸ್‌ ಮಾಡಲು ಅಡ್ಡಿ ಮಾಡಬಾರದು ಎಂಬುದು. ಇದೇನೂ ದೊಡ್ಡ ವಿಷಯವಾಗಿರಲಿಲ್ಲ. ಸಂಸಾರದಲ್ಲಿ ಪತಿಪತ್ನಿಯರು ಜೊತೆ ಜೊತೆಯಾಗಿ ಆರ್ಥಿಕ ಜವಾಬ್ದಾರಿಯನ್ನು ಹೊರುವುದು ಸ್ವಾಭಾವಿಕ.

ಈಗ ಅಶ್ವಿನ್‌ ತಮ್ಮ ಪತ್ನಿ ದಿವ್ಯಾ ಮತ್ತು 5 ವರ್ಷದ ಮಗನ ಜೊತೆ ಸಂತೋಷವಾಗಿದ್ದಾರೆ. ದಿವ್ಯಾ ಪತಿ ಮತ್ತು ಮಗನ ಜವಾಬ್ದಾರಿಯನ್ನು ಬಹು ಚೆನ್ನಾಗಿ ನೋಡುತ್ತಾಳೆ. ಅಶ್ವಿನ್‌ ಹೊಸ ಮನೆಯೊಂದನ್ನು ಕಟ್ಟಿಸಿಕೊಂಡು ಸಂಸಾರ ಸಾಗಿಸುತ್ತಿದ್ದಾರೆ.

ಕಳೆದ 8 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿರುವ ಅಶ್ವಿನ್‌ ಮತ್ತು ದಿವ್ಯಾ ಎಂದೂ ಪರಸ್ಪರ ಜಗಳ, ಮನಸ್ತಾಪಗಳನ್ನು ಎದುರಿಸಬೇಕಾಗಿ ಬಂದಿಲ್ಲ. ಈ ಮರುಮದುವೆಗೆ 2 ವರ್ಷಗಳಿಗೆ ಮೊದಲು ಅಶ್ವಿನ್‌ ಕುಡಿದಿದ್ದ ವಿಷದ ಪ್ರಭಾವ ಕ್ರಮೇಣ ಕಡಿಮೆಯಾಗಿ, ಅವರು ಪತ್ನಿಪುತ್ರರೊಡನೆ ಪ್ರಸನ್ನತೆಯಿಂದ ಇರುವ ಕಾಲದಲ್ಲಿ ಇದ್ದಕ್ಕಿದ್ದಂತೆ ಆ ವಿಷದ ಸೀಸೆ ಪುನಃ ಅವರ ಎದುರು ಬಂದು ನಿಂತಿದೆ.

ನಂದಿತಾ ಇಂದು ಅವರನ್ನು ಭೇಟಿ ಮಾಡಲು ಬಂದಿದ್ದುದು ಏತಕ್ಕಾಗಿ….? ಅವರಿಂದ ಏನನ್ನು ಬಯಸುತ್ತಾಳೆ? ಅವರಿಬ್ಬರ ನಡುವೆ ಯಾವುದೇ ಸಂಬಂಧ ಉಳಿದಿಲ್ಲದಿರುವಾಗ ಅವರ ಬಳಿ ಬರುವ ಧೈರ್ಯವಾದರೂ ಅವಳಿಗೆ ಹೇಗೆ ಬಂತು? ಏನೋ ವಿಷಯ ಇರಲೇಬೇಕು. ನಂದಿತಾಳ ಮನಸ್ಸನ್ನು ತಿಳಿಯುವವರೆಗೆ ಅಶ್ವಿನ್‌ಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗಲಾರದು.

ಅವರು ನಂದಿತಾಳ ಭೇಟಿಯನ್ನು ತಿರಸ್ಕರಿಸಬಹುದಿತ್ತು. ಆದರೆ ತಮ್ಮನ್ನು ಕೊಲೆ ಮಾಡಲೆಂದು ಬಂದವನ ಮನಸ್ಸನ್ನೂ ನೋಯಿಸಲಾರದಂತಹ ಕರುಣಾಳು ಅವರು. ಆದ್ದರಿಂದ ಒಳ್ಳೆಯ ಮನಸ್ಸಿನಿಂದಲೇ ನಂದಿತಾಳನ್ನು ಭೇಟಿ ಮಾಡಲು ಸಿದ್ಧರಾಗಿದ್ದರು. ಅವಳ ಮಾತನ್ನು ಕೇಳಿ ಅವಳಿಗೇನು ಬೇಕಾಗಿದೆ ಎಂದು ತಿಳಿಯಲು ಬಯಸುತ್ತಿದ್ದರು.

ಸಾಯಂಕಾಲ 6 ಗಂಟೆಗೆ ಅಶ್ವಿನ್‌ ಕ್ಲಿನಿಕ್‌ ತಲುಪಿದಾಗ ನಂದಿತಾ ಅದಾಗಲೇ ಅಲ್ಲಿಗೆ ಬಂದಿದ್ದಳು. ಅವರನ್ನು ಕಂಡು ಅವಳ ಮುಖ ಪ್ರಫುಲ್ಲಿತವಾಯಿತು. ಅಶ್ವಿನ್‌ ಮೆಲುನಗೆ ನಕ್ಕು ಅವಳನ್ನು ಒಳಗೆ ಬರಲು ಸಂಜ್ಞೆ ಮಾಡಿ ತಮ್ಮ ಕ್ಯಾಬಿನ್‌ ಪ್ರವೇಶಿಸಿದರು.

ಒಳಗೆ ಪ್ರವೇಶಿಸಿದ ನಂದಿತಾ ನಿಸ್ಸಂಕೋಚವಾಗಿ ಅವರ ಎದುರಿನ ಕುರ್ಚಿಯಲ್ಲಿ ಕುಳಿತಳು. ಅವಳ ಮುಖದ ಮೇಲೆ ನೋವು ಅಥವಾ ಬೇಸರದ ಗೆರೆ ಇರಲಿಲ್ಲ. ಅಲಂಕರಿಸಿಕೊಂಡು ಬಂದಿದ್ದ ಅವಳು ಸುಂದರವಾಗಿ ಕಾಣುತ್ತಿದ್ದಳು. ಅವಳ ಕಣ್ಣುಗಳಲ್ಲಿ ಬೇಡಿಕೆ ಇರುವಂತಿತ್ತು. ಅದಾವ ಬೇಡಿಕೆ ಎಂದು ಅಶ್ವಿನ್‌ಗೆ ಅರ್ಥವಾಗಲಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಸೂ ಅವರಿಗಿರಲಿಲ್ಲ.

ಅಶ್ವಿನ್‌ ಅವಳಿಂದ ದೃಷ್ಟಿ ಬದಲಿಸಿ, “ಹೇಗಿದ್ದೀಯಾ….?” ಎಂದು ಕೇಳಿದರು.

ನಂದಿತಾ ಪ್ರೀತಿ ತುಂಬಿದ ಧ್ವನಿಯಲ್ಲಿ, “ಈಗಲೂ ನಿಮಗೆ ನನ್ನ ಬಗ್ಗೆ ಯೋಚನೆ ಇದೆಯಾ?” ಕೇಳಿದಳು.

ಅವಳ ಆ ಪ್ರಶ್ನೆ ಕೇಳಿಸದವರಂತೆ, “ನಿನಗೆ ನನ್ನ ವಿಳಾಸ ಹೇಗೆ ಸಿಕ್ಕಿತು?” ಎಂದು ಪ್ರಶ್ನಿಸಿದರು.

“ಈಗಿನ ಕಾಲದಲ್ಲಿ ಇದೇನು ಕಷ್ಟವಲ್ಲ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಇರುತ್ತಾರೆ. ಫೇಸ್‌ಬುಕ್‌ನಿಂದ ನಿಮ್ಮ ವಿಳಾಸ ಸಿಕ್ಕಿತು. ಮತ್ತೆ……”

ಅವಳ ಮಾತನ್ನು ತುಂಡರಿಸಿ ಅಶ್ವಿನ್‌, “ಸರಿ…. ಈಗ ಯಾಕೆ ಬಂದಿದ್ದೀಯಾ ಹೇಳು,” ಎಂದರು.

ನಂದಿತಾ ತಲೆ ತಗ್ಗಿಸಿ, “ನೀವು ತಪ್ಪು ತಿಳಿಯಬೇಡಿ. ನನಗೆ ಬೇರೆ ದಾರಿಯೇ ಇರಲಿಲ್ಲ. ನನಗೀಗ ವಾಸ್ತವ ಅರ್ಥವಾಗುತ್ತಿದೆ. ಒಬ್ಬ ಮನುಷ್ಯ ಜೀವನದಲ್ಲಿ ಅನೈತಿಕ ಕಾರ್ಯ ಮಾಡಿದರೆ, ಸಮಾಜದ ನಿಯಮಗಳ ವಿರುದ್ಧ ನಡೆದರೆ, ದಾಂಪತ್ಯ ಜೀವನದಲ್ಲಿ ನಿಷ್ಠೆ ಇರಿಸದಿದ್ದರೆ, ಒಂದಲ್ಲ ಒಂದು ದಿನ ವಿಪರೀತ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನುವುದು ಗೊತ್ತಾಗಿದೆ.

“ನನ್ನ ಯೌವನದ ಅಮಲಿನಲ್ಲಿ ನಾನು ಚಿನ್ನ ಅಂತ ತಿಳಿದುಕೊಂಡಿದ್ದು ಮಣ್ಣಾಗಿದೆ. ನಾನು ಯಾರಿಗೋಸ್ಕರ ನಿಮ್ಮನ್ನು ಮತ್ತು ನನ್ನ ಎಲ್ಲ ಸಂಬಂಧಗಳನ್ನು ತೊರೆದು ಹೋದೆನೋ ಅವನು ಒಂದು ದಿನ ನನ್ನನ್ನೇ ದೂರ ತಳ್ಳಿ ಹೊರಟುಹೋದ.

“ಈ ಪ್ರಪಂಚದಲ್ಲಿ ಆಧಾರ ರಹಿತವಾದ ಸಂಬಂಧ ಬೇಗನೆ ಮುರಿದುಹೋಗುತ್ತದೆ. ನನ್ನ ಸೌಂದರ್ಯ ಮತ್ತು ಯೌವನದ ರಸವನ್ನೆಲ್ಲ ಹೀರಿದ ಮೇಲೆ ಅವನಿಗೆ ನಾನು ಬೇಡವಾದೆ. ಕಡೆಗೊಂದು ದಿನ ನಿನ್ನ ಜೊತೆ ಸಂಬಂಧ ಬೇಡ ಅಂತ ಸ್ಪಷ್ಟವಾಗಿ ಹೇಳಿಬಿಟ್ಟ. ಈಗ ನನಗೆ ಉದ್ಯೋಗ ಇಲ್ಲ. ಹಣ ಇಲ್ಲ. ಅವನ ಹಿಂದೆ ಬಿದ್ದು ನಾನು ಎಲ್ಲವನ್ನೂ ಕಳೆದುಕೊಂಡೆ. ಈಗ ನಾನೇನು ಮಾಡಲಿ?”

ನಂದಿತಾ ತಮ್ಮಿಂದ ದೂರವಾದ ಮೇಲೆ ಅವಳ ಜೀವನದ ಬಗ್ಗೆ ತಿಳಿಯಲು ಅಶ್ವಿನ್‌ಗೆ ಆಸಕ್ತಿ ಇರಲಿಲ್ಲ. ಆದ್ದರಿಂದಲೇ ಅವರು ಆ ವಿಷಯವಾಗಿ ಪ್ರಶ್ನೆ ಕೇಳಲೂ ಇಲ್ಲ. ಅವಳಿಗೆ ಏನಾದರೆ ಅವರಿಗೇನು? ಅವರಿಬ್ಬರ ನಡುವೆ ಯಾವ ಸಂಬಂಧ ಉಳಿದಿಲ್ಲವಲ್ಲ……  ಏನಾದರೂ ಇದೆಯೆಂದರೆ ಅದು ಕೇವಲ ಮಾನವೀಯ ಸಂಬಂಧ ಮಾತ್ರ.

ನಂದಿತಾ ತನ್ನ ಗತಜೀವನದ ಬಗ್ಗೆ ತಾನಾಗಿ  ಹೇಳುತ್ತಿದ್ದಳು. ಅಶ್ವಿನ್‌ ಒಂದು ಮಾತನ್ನೂ ಆಡದೆ ಸುಮ್ಮನೆ ಕೇಳಿಸಿಕೊಂಡರು. ಕೆಟ್ಟ ಮೇಲೆ ಬುದ್ಧಿ ಬಂದಿದೆ ಅಷ್ಟೆ. ಅದಕ್ಕೆ ಅವರೇನು ಮಾಡಿಯಾರು? ಸಂಬಂಧದ ಸರಪಳಿ ಒಮ್ಮೆ ಕಡಿದುಹೋಯಿತೆಂದರೆ ಮತ್ತೆ ಕೂಡಿಸಲು ಬರುವುದಿಲ್ಲ. ಒಂದು ವೇಳೆ ಕೂಡಿಸಿದರೂ ನಡುವೆ  ಏನೋ ಒಂದು ಅಡಚಣೆ ಇರುತ್ತದೆ. ನಂದಿತಾ ಈಗ ಹಳೆಯ ಸಂಬಂಧವನ್ನು ಬೆಸೆಯಲು ಬಂದಿರುವಳೋ ಅಥವ ಮೋಸಹೋಗಿ ಸಹಾನುಭೂತಿ ಗಳಿಸಲು ಬಂದಿರುವಳೋ? ಅವರ ಸಹಾನುಭೂತಿಯಿಂದ ಅವಳಿಗೇನು ಸಿಗುವುದು?

ನಂದಿತಾ ತನ್ನ ಮಾತು ಮುಂದುವರಿಸಿದಳು, “ನನ್ನ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಹೇಳಿ ನಿಮಗೆ ಬೇಸರ ಮಾಡುವುದಿಲ್ಲ. ನಾನೀಗ ಈ ಪ್ರಪಂಚದಲ್ಲಿ ಒಂಟಿಯಾಗಿ ಬಿಟ್ಟಿದ್ದೇನೆ. ನನ್ನ ತಾಯಿ ತಂದೆಯರೂ ನನ್ನನ್ನು ದೂರ ಮಾಡಿದ್ದಾರೆ. ನನ್ನ ಬೇರೆ ಸಂಬಂಧಿಕರು ನನ್ನನ್ನು ಕಡೆಗಣ್ಣಿನಿಂದಲೂ ನೋಡುವುದಿಲ್ಲ. ನನ್ನ ಸ್ನೇಹಿತರು ದೂರವಾಗಿಬಿಟ್ಟರು. ಅವನು ನನ್ನ ಕೆಲಸವನ್ನೂ ಬಿಡಿಸಿಬಿಟ್ಟಿದ್ದ.

“ಬೆಂಗಳೂರಿನಲ್ಲಿ ನನಗೆ ಯಾವ ಆಶ್ರಯ ಇಲ್ಲದೆ ಕತ್ತಲು ಕವಿದಂತಾಯಿತು. ಆಗ ನನಗೆ ನಿಮ್ಮ ನೆನಪಾಯಿತು. ನಾನು ನಿಮಗೆ ಕ್ಷಮಿಸಲಾರದಷ್ಟು ದುಃಖ ಕೊಟ್ಟಿದ್ದೇನೆ ಅಂತ ಒಪ್ಪಿಕೊಳ್ಳುತ್ತೇನೆ. ಆದರೆ ನಿಮ್ಮ ಹೃದಯ ವೈಶ್ಯಾಲ್ಯದ ಬಗ್ಗೆ ನನಗೆ ಗೊತ್ತು. ನೀವು ನನ್ನನ್ನು ಕ್ಷಮಿಸಿಲ್ಲದೆ ಇರಬಹುದು, ಆದರೆ ನಿಮ್ಮ ಮನಸ್ಸಿನಲ್ಲಿ ನನ್ನ ಬಗ್ಗೆ ಕಠೋರತೆ ಇರುವುದಿಲ್ಲ ಅನ್ನುವ ಧೈರ್ಯದ ಮೇಲೆ ನಿಮ್ಮ ಹತ್ತಿರ ಬಂದಿದ್ದೇನೆ,” ಎಂದು ಸುದೀರ್ಘವಾಗಿ ಹೇಳಿದಳು.

ಅಶ್ವಿನ್‌ರ ಮನಸ್ಸಿನಲ್ಲಿ ಬಗೆಬಗೆಯ ಆಲೋಚನೆಗಳು ಮೂಡಿದವು, `ನಂದಿತಾಳಿಗೆ ತಾನು ಮಾಡಿದ ತಪ್ಪಿನ ಬಗ್ಗೆ ನಿಜಕ್ಕೂ ಪಶ್ಚಾತ್ತಾಪಾಗಿದೆಯೇನು? ಅದರ ಪ್ರಾಯಶ್ಚಿತ್ತಕ್ಕಾಗಿ ಅವಳು ಇಲ್ಲಿಗೆ ಬಂದಿರುವಳೇ? ಬದುಕು ಸಾಗಿಸಲು ದಾರಿ ಹುಡುಕುವುದಾದರೆ ಅವಳು ಎಲ್ಲಿಗೆ ಬೇಕಾದರೂ ಹೋಗಬಹುದಿತ್ತು. ನನ್ನಲ್ಲಿಗೇ ಏಕೆ ಬಂದಿದ್ದಾಳೆ…?’

ಆದರೆ ಅವಳೊಡನೆ, “ಬೆಂಗಳೂರಿನಲ್ಲಿ ಅದೆಷ್ಟು ಜನರು ಮನೆಯ ಮಠ ಇಲ್ಲದವರು ಜೀವನ ಸಾಗಿಸುತ್ತಾರೆ. ನೀನಂತೂ ಅಲ್ಲೇ ಹುಟ್ಟಿ ಬೆಳೆದವಳು. ಮೇಲಾಗಿ ವಿದ್ಯಾವಂತೆ, ಸಂಬಂಧಿಕರು ಯಾರೂ ಆಶ್ರಯ ಕೊಡದಿದ್ದರೂ ನಿನ್ನ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಇರುವವಳು…..” ಎಂದರು.

ಅಶ್ವಿನ್‌ರಿಗೆ ನನ್ನ ಮಾತಿನಲ್ಲಿ ನಂಬಿಕೆ ಬರುತ್ತಿಲ್ಲ ಎಂದರಿತ ನಂದಿತಾ, “ನಿಮಗೆ ನನ್ನಲ್ಲಿ ನಂಬಿಕೆ ಇಲ್ಲ. ಆದರೆ ನಾನು ನಿಮ್ಮನ್ನೇ ನಂಬಿಕೊಂಡು ಬಂದಿದ್ದೇನೆ,” ಎಂದಳು.

“ಕಾರಣ….?”

“ನನಗೆ ಯಾರೂ ಸಹಾಯ ಮಾಡಲಿಲ್ಲ. ಅದಕ್ಕೇ ಈ ಊರಿಗೆ ಬಂದೆ. ನೀವು ಸಹಾಯ ಮಾಡುವಿರಿ ಅನ್ನುವ ನಂಬಿಕೆ ನನಗಿದೆ. ನಾನು ನಿಮಗೆ ಹೆಚ್ಚು ತೊಂದರೆ ಕೊಡುವುದಿಲ್ಲ. ಬದಲು ನನಗೆ ಇರುವುದಕ್ಕೆ ಒಂದು ಸ್ಥಳ ಬೇಕು. ಆಮೇಲೆ ನನಗೆ ಉದ್ಯೋಗ ಬೇಕು. ನೀವು ಇಷ್ಟು ಸಹಾಯ ಮಾಡಿದರೆ ಆಮೇಲೆ ಹೇಗೋ ನನ್ನ ಜೀವನ ನಡೆಸಿಕೊಳ್ಳುತ್ತೇನೆ.”

“ಒಬ್ಬಳೇ ಇರುತ್ತೀಯಾ?” ಅಶ್ವಿನ್‌ ಅನುಮಾನದಿಂದ ಕೇಳಿದರು.

“ಪ್ರಯತ್ನಪಡುತ್ತೇನೆ. ಮದುವೆಯಾಗಿ ಬಾಳ್ವೆ ನಡೆಸುವುದು ನನ್ನ ಹಣೆಯಲ್ಲಿ ಬರೆದಿಲ್ಲ. ಪುರುಷರ ಮೇಲಿನ ನನ್ನ ವಿಶ್ವಾಸ ಹೊರಟುಹೋಗಿದೆ.”

`ಇವಳು ತಾನೇ ಒಬ್ಬ ಪುರುಷನ, ಅದರಲ್ಲೂ ಪತಿಯ, ವಿಶ್ವಾಸವನ್ನು ಮುರಿದಿದ್ದಾಳೆ. ಹಾಗಿರುವಾಗ ಪುರುಷರ ಮೇಲೆ ಅವಿಶ್ವಾಸದ ದೋಷ ಹೊರಿಸುವುದು ಎಷ್ಟು ಸರಿ? ಹೀಗೆ ಮಾತನಾಡಲು ಎಷ್ಟು ಧೈರ್ಯ?’

ಅವಳ ಮಾತಿಗೆ ಏನೂ ಉತ್ತರಿಸಿದೆ ಅಶ್ವಿನ್‌, “ಈಗ ಎಲ್ಲಿ ಉಳಿದುಕೊಂಡಿದ್ದೀಯಾ?” ಕೇಳಿದರು.

“ಎಲ್ಲೂ ಇಲ್ಲ. ಬೆಳಗ್ಗೆ ತಾನೇ ಬೆಂಗಳೂರಿನಿಂದ ಬಂದೆ.”

“ರಾತ್ರಿ ಎಲ್ಲಿ ಉಳಿಯುತ್ತೀಯ?”

“ಗೊತ್ತಿಲ್ಲ. ನೀವೇ ಏನಾದರೂ ವ್ಯವಸ್ಥೆ ಮಾಡಬೇಕು,” ನಂದಿತಾಳ ಸ್ವರದಲ್ಲಿ ಬೇಡಿಕೆಗೆ ಬದಲಾಗಿ ಅಧಿಕಾರಭಾವವಿತ್ತು. ನಾನು ಈಗಲೂ ಅವರ ಪತ್ನಿ ಎಂಬ ಭಾವನೆಯೇ ಅಥವಾ ಮಾಜಿ ಪತ್ನಿ ಎಂಬ ಅಧಿಕಾರ ಭಾವನೆಯೋ ಅಥವಾ ಅಶ್ವಿನ್‌ರ ಸರಳ ಸ್ವಭಾವದ ಲಾಭ ಪಡೆಯುವ ಉದ್ದೇಶವೋ ಹೇಳಲು ಬರುವುದಿಲ್ಲ.

ನಂದಿತಾಳ ಮುಖಭಾವ ಅಥವಾ ಅಧಿಕಾರ ಸ್ವರದಿಂದ ಅಶ್ವಿನ್‌ ಪ್ರಭಾವಿತರಾಗಲಿಲ್ಲ. ಅವಳೀಗ ಕಷ್ಟದಲ್ಲಿದ್ದಾಳೆ. ತಾವು ಅವಳಿಗೆ ಸಹಾಯ ಮಾಡಬೇಕು ಎಂಬುದಷ್ಟೇ ಅವರ ಮನಸ್ಸಿನಲ್ಲಿತ್ತು.

ಅವಳು ನಿಜಕ್ಕೂ ಕಷ್ಟದಲ್ಲಿರುವಳೋ ಅಥವಾ ತಮ್ಮ ಮುಂದೆ ತೊಂದರೆಯಲ್ಲಿರುವಂತೆ ನಾಟಕವಾಡುತ್ತಿರುವಳೋ ಎಂಬುದರ ಸತ್ಯವನ್ನು ತಿಳಿದುಕೊಳ್ಳುವ ಯಾವ ಪ್ರಯತ್ನವನ್ನೂ ಅಶ್ವಿನ್‌ ಮಾಡಲಿಲ್ಲ. ಅವರ ದಯಾ ಸ್ವಭಾವ ಎಲ್ಲ ಬಗೆಯ ತರ್ಕ ವಿತರ್ಕಗಳಿಂದ ಅವರನ್ನು ದೂರವಿರಿಸಿತು.

ಅಶ್ವಿನ್‌ ತಮ್ಮ ಒಬ್ಬ ಮಿತ್ರರ ಗೆಸ್ಟ್ ಹೌಸ್‌ನಲ್ಲಿ ನಂದಿತಾಳ ವಾಸ್ತವ್ಯದ ವ್ಯವಸ್ಥೆ ಮಾಡಿದರು. ಆ ವಾರವಿಡೀ ಅವಳಿಗಾಗಿ ಒಂದು ಮನೆ ಮತ್ತು ಉದ್ಯೋಗ ಗೊತ್ತು ಮಾಡುವಲ್ಲಿ ತೊಡಗಿಕೊಂಡರು. ಇದರಿಂದಾಗಿ ಅವರ ಕ್ಲಿನಿಕ್‌ ಮತ್ತು ಮನೆಯ ಕಡೆ ಗಮನ ಕಡಿಮೆಯಾಯಿತು.

ಅವರ ಮಗ, “ಅಪ್ಪಾ, ನಾನು ಸ್ಕೂಲ್‌ನಿಂದ ಬಂದಾಗಲೂ ನೀವು ಮನೆಯಲ್ಲಿ ಇರುವುದಿಲ್ಲ. ರಾತ್ರಿ ನಾನು ಮಲಗುವವರೆಗೂ ಬಂದಿರುವುದಿಲ್ಲ,” ಎಂದು ದೂರಿದ.

ದಿವ್ಯಾ ತಿಳಿವಳಿಕೆಯುಳ್ಳವಳು. ವೈದ್ಯ ವೃತ್ತಿಗೆ ಸಮಯದ ಪರಿವೆ ಇರುವುದಿಲ್ಲ ಎಂದು ಅರಿತಿದ್ದಳು. ಆದರೂ ಅವರ ಬಾಡಿದ ಮುಖವನ್ನು ಕಂಡು ಅವಳೂ ದೂರಿದಳು, “ನಿಮಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ಸಮಯ ಇಲ್ಲದಷ್ಟು ಕೆಲಸ ಯಾಕೆ ಮಾಡುತ್ತೀರಿ?”

“ದಿವ್ಯಾ, ಒಂದೆರಡು ದಿನ ಅಷ್ಟೇ. ಆಮೇಲೆ ಸರಿಹೋಗುತ್ತದೆ.”

“ಯಾಕೆ? ಏನಾದರೂ ತೊಂದರೆ ಇದೆಯಾ?”

“ಏನಿಲ್ಲ ಬಿಡು. ಅಂಥದ್ದೇನಾದರೂ ಇದ್ದರೆ ನಿನಗೆ ಹೇಳುತ್ತಿದ್ದೆ.”

ದಿವ್ಯಾಳಿಗೆ ಪತಿಯ ಬಿಡುವಿಲ್ಲದ ಕೆಲಸದ ಬಗ್ಗೆ ಕಾಳಜಿ ಇತ್ತಲ್ಲದೆ, ಅವರ ಬಗ್ಗೆ ಅನುಮಾನವಿರಲಿಲ್ಲ. ಅವಳು ಅನುಮಾನ ಪಡಲು ಕಾರಣ ಇರಲಿಲ್ಲ.

ರಾಮಕೃಷ್ಣನಗರದಲ್ಲಿ ಒಂದು ಪುಟ್ಟ ಮನೆ ಸಿಕ್ಕಿತು. ಅದು ನಂದಿತಾಳಿಗೆ ಸಾಕಾಗುವಷ್ಟಿತ್ತು. ಅದರ ಬಾಡಿಗೆ ಮತ್ತು ಅಡ್ವಾನ್ಸ್ ಬಗ್ಗೆ ಅಶ್ವಿನ್‌ ತಿಳಿಸಿದಾಗ ಅವಳು ಮುಖ ತಗ್ಗಿಸಿ ಕುಳಿತಳು. ಅವಳೇನೂ ಮಾತನಾಡದಿದ್ದಾಗ ಅಶ್ವಿನ್‌ ಕೇಳಲೇಬೇಕಾಯಿತು, “ನಿನ್ನ  ಹತ್ತಿರ ಹಣ ಇದೆ ತಾನೇ?”

“…….. ಇಲ್ಲ,” ಅವಳು ತಲೆ ತಗ್ಗಿಸಿಯೇ ಹೇಳಿದಳು.

ಅಶ್ವಿನ್‌ಗೆ ಆಶ್ಚರ್ಯವಾಯಿತು. ನಂದಿತಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಳ್ಳೆಯ ಸಂಬಳ ಪಡೆಯುತ್ತಿದ್ದಳು. ಆ ಹಣವೆಲ್ಲ ಏನಾಯಿತು?

ಅಶ್ವಿನ್‌ರ ಮನಸ್ಸನ್ನು ಅರ್ಥ ಮಾಡಿಕೊಂಡವಳಂತೆ,  “ನಿಮಗೆ ಹೇಗೆ ಹೇಳಲಿ? ಅವನು ನನ್ನ ಶರೀರವನ್ನು ಬಳಸಿಕೊಂಡಿದ್ದಲ್ಲದೆ, ನನ್ನ ಸಂಪಾದನೆಯನ್ನೂ ಬಳಸಿಕೊಂಡು ಮಜಾ ಮಾಡಿದ. ಕಡೆಗೆ ನನಗೆ ಏನೂ ಇಲ್ಲದ ಹಾಗೆ ಮಾಡಿಬಿಟ್ಟ.” ಎಂದು ಹೇಳಿದಳು.

ಅಶ್ವಿನ್‌ ಏನೊಂದೂ ಮಾತನಾಡದೆ ತಾವೇ ಹಣ ಕಟ್ಟಿದರು. ಅಷ್ಟೇ ಅಲ್ಲದೆ ಫರ್ನೀಚರ್‌ನಿಂದ ಹಿಡಿದು ಪಾತ್ರೆ, ರೇಶನ್‌ಗಳವರೆಗೆ ಮನೆಯ ಎಲ್ಲ ಸಾಮಾನುಗಳನ್ನು ಹೊಂದಿಸಿಕೊಟ್ಟರು. ಇದರಿಂದಾಗಿ ಅವರಿಗೆ ಲಕ್ಷ ರೂಪಾಯಿಗಳೇ ಖರ್ಚಾದವು. ಅದೇನೂ ಅವರಿಗೆ ಬೇಸರವಾಗಲಿಲ್ಲ. ಅವರಿಗಿದ್ದ ಒಂದು ಅಳುಕೆಂದರೆ, ತಮ್ಮ ಪತ್ನಿಯಿಂದ ಮುಚ್ಚಿಟ್ಟು ಇದನ್ನೆಲ್ಲ ಮಾಡುತ್ತಿದ್ದುದು.

ನಂತರ ಅಶ್ವಿನ್‌ ತಮ್ಮ ಪರಿಚಿತರ ಮೂಲಕ ನಂದಿತಾಳಿಗೆ ಹೋಟೆಲ್ ‌ಒಂದರಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಉದ್ಯೋಗವನ್ನು ದೊರಕಿಸಿಕೊಟ್ಟರು. ಅವಳಿಗೆ ಹೋಟೆಲ್ ‌ಮ್ಯಾನೇಜ್‌ಮೆಂಟ್‌ನ ಅನುಭವವಿಲ್ಲದಿದ್ದರೂ ಮ್ಯಾನೇಜ್‌ಮೆಂಟ್‌ ಡಿಗ್ರಿ ಇತ್ತು. ಒಂದು ಕಂಪನಿಯಲ್ಲಿ ಕೆಲಸ ಮಾಡಿದ್ದ ಅನುಭವವಿತ್ತು. ಈ ಆಧಾರದಿಂದ ಅವಳಿಗೆ ಕೆಲಸ ದೊರೆಯಿತು.

ಕೆಲಸ ಸಿಕ್ಕಿದ ದಿನ ಅವಳು ಅಶ್ವಿನ್‌ರಿಗೆ, “ನನ್ನ ಜೀವನಕ್ಕೊಂದು ದಾರಿ ಮಾಡಿಕೊಟ್ಟಿದ್ದಕ್ಕಾಗಿ ಸ್ವೀಟ್ಸ್ ಕೊಡುತ್ತೇನೆ. ಸಾಯಂಕಾಲ ಮನೆಗೆ ಬರುತ್ತೀರಾ?”

“ಮನೆಗೆ ಏಕೆ? ಸ್ವೀಟ್‌ನ್ನು ಎಲ್ಲಿ ಬೇಕಾದರೂ ತಿನ್ನಬಹುದು,” ಅಶ್ವಿನ್‌ ತಮಾಷೆಯಾಗಿ ಹೇಳಿದರು.

“ಹಾಗಾದರೆ ಯಾವುದಾದರೂ ರೆಸ್ಟೊರೆಂಟ್‌ಗೆ ಹೋಗೋಣವೇ?” ನಂದಿತಾ ಉತ್ಸಾಹದಿಂದ ಕೇಳಿದಳು.

ಅಶ್ವಿನ್‌ ಕೊಂಚ ಯೋಚಿಸಿ, “ಆಗುವುದಿಲ್ಲ. ಕ್ಲಿನಿಕ್‌ನಲ್ಲೇ ತಡ ಆಗಿಬಿಡುತ್ತದೆ. ಸಮಯ ಆಗುವುದಿಲ್ಲ.”

“ಹಾಗಾದರೆ ನೀವು ಕ್ಲಿನಿಕ್‌ನಿಂದ ನೇರವಾಗಿ ಮನೆಗೆ ಬಂದುಬಿಡಿ,” ಅವಳು ಒತ್ತಾಯಿಸಿ ಹೇಳಿದಳು.

“ನೋಡುತ್ತೇನೆ, ಹೆಚ್ಚು ಪೇಶೆಂಟ್ಸ್ ಇಲ್ಲದಿದ್ದರೆ ಬರುತ್ತೇನೆ,”  ಎಂದರು.

“ನಾನು ಕಾಯುತ್ತಿರುತ್ತೇನೆ,” ಅಶ್ವಿನ್‌ ಖಂಡಿತ ಬರುವರೆಂಬ ವಿಶ್ವಾಸ ಅವಳ ಧ್ವನಿಯಲ್ಲಿತ್ತು.

ಅಂದು ನಂದಿತಾ ಬಹಳ ಸಂತೋಷದಲ್ಲಿದ್ದಳು. ಅಶ್ವಿನ್‌ರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿದಳು. ತಾನೂ ನವವಧುವಿನಂತೆ ಶೃಂಗಾರ ಮಾಡಿಕೊಂಡಳು. ಸಿಲ್ಕ್ ಸೀರೆಯಲ್ಲಿ ಅವಳ ಸೌಂದರ್ಯ ಎದ್ದು ಕಾಣುತ್ತಿತ್ತು.

ಅಶ್ವಿನ್‌ರನ್ನು ನಿರೀಕ್ಷಿಸುತ್ತಾ ಅವಳು ಬಾಗಿಲಲ್ಲೇ ನಿಂತಳು.

(ಸಶೇಷ) 

और कहानियां पढ़ने के लिए क्लिक करें...