ಕಥೆ – ನೀರಜಾ ಪ್ರಭು
“ರತ್ನಾ, ಒಂದು ನಾಲ್ಕು ದಿನ ಜಯಮ್ಮನ ಮನೇಲಿ ಕೆಲಸ ಮಾಡ್ತೀಯ?” ರಸ್ತೆಯಲ್ಲಿ ಸಿಕ್ಕಿದ ಪಾರ್ವತಿ ನನ್ನನ್ನು ಕೇಳಿದಳು. “ಅವರ ಮನೆ ಜನ ಹೇಗಮ್ಮ?” ನಾನು ಪ್ರಶ್ನಿಸಿದೆ.
“ಒಳ್ಳೆ ಜನ … ಇಬ್ಬರೇ ಇರೋದು. ಕೆಲಸ ಕಡಿಮೆ. ಆದರೆ ಎಲ್ಲವೂ ಟೈಮಿಗೆ ಸರಿಯಾಗಿ ಆಗಬೇಕು.” ಅವಳೆಂದಳು.
“ಮತ್ತೆ ನೀನು ಯಾಕೆ ಬಿಡ್ತಿದೀಯ?” ನಾನು ಕೇಳಿದೆ.
“ನಾನೆಲ್ಲಿ ಬಿಡ್ತಿದೀನಿ, ನಾನು ಹಳ್ಳಿಗೆ ಹೋಗ್ತಿದೀನಿ,” ಪಾರ್ವತಿ ನುಡಿದಳು.
“ಹಳ್ಳಿಯಿಂದ ಬೇಗ ವಾಪಸ್ ಬರ್ತೀಯೇನು?”
“ನೋಡು, ನಿನಗೆ ಅಗತ್ಯ ಇದ್ದರೆ ಅವರ ಮನೆಗೆ ಹೋಗಿ ಮಾತಾಡು,” ಇಷ್ಟು ಹೇಳಿ ಪಾರು ಹೊರಟುಹೋದಳು.
ಮರುದಿನ ನಾನು ಜಯಮ್ಮನವರ ಮನೆಗೆ ಹೋಗಿ ಬಾಗಿಲು ತಟ್ಟಿದೆ.
ಸುಮಾರು 50 ವರ್ಷದ ವ್ಯಕ್ತಿ ಬಾಗಿಲು ತೆರೆದು, “ಏನು ಬೇಕು?” ಎಂದರು.
ನಾನು ವಿಷಯ ತಿಳಿಸಿದೆ. “2 ನಿಮಿಷ ಇರು,” ಎಂದು ಹೇಳಿ ಬಾಗಿಲು ಮುಚ್ಚಿದರು. ಆಮೇಲೆ ಒಬ್ಬ ಹೆಂಗಸು ಆಚೆ ಬಂದರು.
“ಪಾರ್ವತಿ ಕಳಿಸಿದಳಾ? ಬಾ, ಒಳಗೆ ಬಾ,” ಎಂದರು.
ಒಳಹೋದೆ. ಕೆಲಸ ಶುರು ಮಾಡಿದ ಮೇಲೆ ಈ ಮನೆ ಬೇರೆ ಮನೆಗಳಿಗಿಂತ ಭಿನ್ನ ಎಂದು ಗೊತ್ತಾಯಿತು. ಮನೆಯ ವ್ಯವಸ್ಥೆ ಚೆನ್ನಾಗಿತ್ತು. ಪ್ರತಿಯೊಂದು ವಸ್ತು ತನ್ನ ಜಾಗದಲ್ಲಿ ಅಚ್ಚುಕಟ್ಟಾಗಿ ಕುಳಿತಿತ್ತು. ಮನೆ ಯಜಮಾನ ಪೇಪರ್ ಓದುತ್ತಾ ತೂಕಡಿಸುತ್ತಿದ್ದರೆ, ಯಜಮಾನಿ ಶೂನ್ಯವನ್ನು ನೋಡುತ್ತಾ ಇರುತ್ತಿದ್ದರು. ನಾನು ಅವರಿಬ್ಬರಿಗೆ ಎರಡು ಹೊತ್ತಿನ ಅಡುಗೆ ಮಾಡುತ್ತಿದ್ದೆ. ನನ್ನೆದುರು ಅವರು ಪರಸ್ಪರ ಮಾತನಾಡಿದ್ದೇ ಇಲ್ಲ. ಅವರಿಬ್ಬರ ನಡುವೆ ಪಾರದರ್ಶಕ ಗೋಡೆ ನಿಂತಿರುವ ಹಾಗೆ ಅನಿಸುತ್ತಿತ್ತು. ತಿಂಗಳ ಕೊನೆಯಲ್ಲಿ ನನ್ನ ಕೈಯಲ್ಲಿ ಸಂಬಳದ ಹಣ ಇಟ್ಟರು. ಪಾರ್ವತಿ ಇನ್ನೂ ಬಂದಿಲ್ಲವಾದ್ದರಿಂದ ಇನ್ನೂ ಸ್ವಲ್ಪ ದಿನ ಕೆಲಸ ಮಾಡು ಎಂದರು. ಒಳ್ಳೆ ಸಂಬಳ ಕೊಡುತ್ತಿದ್ದರಿಂದ ನಾನೂ ಕೆಲಸ ಮುಂದುವರಿಸಲು ಒಪ್ಪಿದೆ.
ಹೀಗೇ 2 ತಿಂಗಳು ಕಳೆಯಿತು. ಮಳೆಗಾಲ ಬಂತು. ಒಂದು ದಿನ ಕೆಲಸಕ್ಕೆ ಹೋಗುವಾಗ ನನ್ನ ಹಿಂದೆ ಒಂದು ನಾಯಿಮರಿ ಬರತೊಡಗಿತು. ಅದನ್ನು ನಾನು ಎತ್ತಿಕೊಂಡೆ. ಮನೆ ಯಜಮಾನಿ ಬಾಗಿಲು ತೆರೆದ ಕೂಡಲೆ ನಾಯಿಮರಿ ಸೀದಾ ಮನೆಯೊಳಗೆ ಹೋಯಿತು. ಯಜಮಾನಿ ಜೋರಾಗಿ ಕೂಗಿದರು.
“ಇದನ್ನೇಕೆ ಕರಕೊಂಡು ಬಂದಿದೀಯ?”
“ನಾಯಿಮರಿ ಅಮ್ಮಾ, ಹೋಗುವಾಗ ಕರಕೊಂಡು ಹೋಗ್ತೀನಿ,” ಎಂದು ಹೇಳಿದೆ.
“ಈ ತರಹ ಏನೇನೋ ನಮ್ಮ ಮನೆಗೆ ತರಬೇಡ. ಯಜಮಾನರು ಬೈತಾರೆ,” ಅವರು ಕೂಗಿದರು.
ನಾನು ನಾಯಿಮರಿಗೆ ಬೈದು ಬೆದರಿಸಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ನಿಧಾನವಾಗಿ ನಾಯಿಮರಿ ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿತು.
“ ಏನು ಹೆಸರು ಇಟ್ಟಿದ್ದೀಯ ಇದಕ್ಕೆ?” ಯಜಮಾನಿ ಒಂದುದಿನ ಕೇಳಿದರು.
“ಇನ್ನು ಯಾವ ಹೆಸರೂ ಇಟ್ಟಿಲ್ಲ.” ಎಂದೆ.
“ಇದಕ್ಕೆ ಸೋನಿ ಅಂತ ಹೆಸರಿಡು,” ಯಜಮಾನಿ ಹೇಳಿದರು.
ಸ್ವಲ್ಪ ದಿನಗಳಲ್ಲೇ ಸೋನಿ ಆ ಮನೆಯ ಮೇಲೆ ತನ್ನ ಏಕಾಧಿಕಾರ ಸ್ಥಾಪಿಸಿತು.
ಒಂದು ದಿನ ಯಜಮಾನಿ ಸೋನಿಯನ್ನು ಹೊರಗೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿಗೆ ವಾಚ್‌ಮನ್ ಬಂದು ಯಜಮಾನರನ್ನು ಕರೆದು, “ಅಮ್ಮಾ ಕರೀತಿದಾರೆ ಸಾರ್,” ಎಂದ. ಯಜಮಾನರು ನನ್ನನ್ನು ಕೆಳಗೆ ಹೋಗಲು ಹೇಳಿದರು. ಗೇಟಿನಿಂದ ಹೊರಗೆ ರಸ್ತೆಯ ಆ ಪಕ್ಕದಲ್ಲಿ ಫುಟ್‌ಪಾತ್ ಮೇಲೆ ಕುಳಿತು ಯಜಮಾನಿ ಅಳುತ್ತಿದ್ದರು.
ಎದುರಿಗೆ ಸೋನಿಯ ಮೃತದೇಹ ಬಿದ್ದಿತ್ತು. ಬಸ್ಸಿನ ಕೆಳಗೆ ಸಿಕ್ಕಿ ಅದರ ಶರೀರ ಛಿದ್ರವಾಗಿತ್ತು. ಹೇಗೋ ಮಾಡಿ ಯಜಮಾನಿಯನ್ನು ಮನೆಗೆ ಕರೆತಂದು, ಯಜಮಾನರಿಗೆ ವಿಷಯ ತಿಳಿಸಿದೆ. ಯಜಮಾನರ ಮುಖ ಕೋಪದಿಂದ ಕೆಂಪಾಯಿತು. ಅವರು ಜೋರಾಗಿ ಕಿರುಚತೊಡಗಿದರು, “ಈ ಹೆಂಗಸು ಯಾವಾಗಲೂ ಅಶುಭವಷ್ಟೇ ಮಾಡ್ತಾಳೆ. ಯಾರನ್ನು ಮುಟ್ಟುತ್ತಾಳೋ ಅವರ ಸರ್ವನಾಶವಾಗಿ ಹೋಗುತ್ತದೆ. ಇವಳೇ ನನ್ನ ಮಗುವನ್ನು ಹುಚ್ಚನನ್ನಾಗಿ ಮಾಡಿದಳು.”
ಆಗ ಯಜಮಾನಿ ತಕ್ಷಣ ಹೇಳಿದಳು, “ಇಲ್ಲ, ನೀವು ಹೇಳ್ತಿರೋದು ಸರಿಯಲ್ಲ.” ಅವರು ತಮ್ಮ ತಲೆಯನ್ನು ಜೋರಾಗಿ ಗೋಡೆಗೆ ಹೊಡೆದುಕೊಳ್ಳತೊಡಗಿದರು.
ನಾನು ಹೇಗೋ ಅವರನ್ನು ಸಮಾಧಾನ ಮಾಡಿ ಯಜಮಾನರಿಗೆ ಡಾಕ್ಟರನ್ನು ಕರೆಸಲು ಹೇಳಿದೆ. ಆದರೆ ಆತ ನನ್ನ ಮಾತಿನ ಕಡೆ ಗಮನವನ್ನೇ ಕೊಡಲಿಲ್ಲ. ಸುಮ್ಮನೆ ಕೋಣೆಯೊಳಗೆ ಹೊರಟುಹೋದರು.
ಅವರಿಗೆ ಅಡುಗೆ ಮಾಡಿ ಊಟದ ಮೇಜಿನ ಮೇಲಿಟ್ಟು, ನಾನು ಬಂದುಬಿಟ್ಟೆ.
ಮರುದಿನ ಬಂದಾಗ ನೋಡಿದರೆ ಎಲ್ಲ ಹಾಗೇ ಇತ್ತು. ನಾನು ಮತ್ತೆ ಯಜಮಾನರಿಗೆ ಡಾಕ್ಚರನ್ನು ಕರೆಯಲು ಹೇಳಿದೆ. ವಿಧಿಯಿಲ್ಲದೆ ಅವರು ಹೋಗಿ ಡಾಕ್ಟರನ್ನು ಕರೆದುಕೊಂಡು ಬಂದರು.
ಡಾಕ್ಟರು ಪರೀಕ್ಷಿಸಿ ಮಾತ್ರೆಗಳನ್ನು ಬರೆದುಕೊಟ್ಟರು. ಊಟದ ನಂತರ ತೆಗೆದುಕೊಳ್ಳಲು ಹೇಳಿದರು. ನಾನು ಯಜಮಾನರಿಂದ ಹಣ ತೆಗೆದುಕೊಂಡು ತರಕಾರಿ ತಂದು, ಅಡುಗೆ ಮಾಡಿದೆ. ಇಬ್ಬರೂ ಹೊಟ್ಟೆ ತುಂಬ ಊಟ ಮಾಡಿದರು. ಯಜಮಾನಿ ಔಷಧಿ ತೆಗೆದುಕೊಂಡು ಮಲಗಲು ಹೋದರು.
ಯಜಮಾನರು ನನ್ನನ್ನು ತಡೆದು ಹೇಳಿದರು, “ರತ್ನಾ, ಈ ದುಡ್ಡು ತಗೋ, ನೀನು ನಮಗೆ ಬಹಳ ಉಪಕಾರ ಮಾಡಿದೀಯ. ಅದಕ್ಕಾಗಿ ನಾನು ನಿನಗೆ ಕೃತಜ್ಞನಾಗಿದೀನಿ.”
“ಇಲ್ಲ, ಇವೆಲ್ಲಾ ನಾನು ದುಡ್ಡಿಗೋಸ್ಕರ ಮಾಡಲಿಲ್ಲ. ನೀವು ದೊಡ್ಡವರು ನನ್ನ ಮಾತು ತಪ್ಪು ತಿಳೀಬೇಡಿ. ನಾನೊಂದು ವಿಷಯ ಕೇಳ್ಲಾ?”
“ಆಯ್ತು ಕೇಳಿ.”
“ನೀನೇ ನನ್ನ ಮಗನನ್ನು ಹುಚ್ಚು ಮಾಡಿದ್ದು ಅಂತ ನಿನ್ನೆ ನೀವು ಅಮ್ಮಾವರನ್ನ ಯಾಕೆ ಬೈತಿದ್ದಿರಿ?”
“ನಮ್ಮ ಮಗನಿಗೆ 2 ವರ್ಷವಾಗಿತ್ತು. ಒಂದು ದಿನ ಅವನಿಗೆ ಜ್ವರ ಬಂದಿತ್ತು. ಸ್ವಲ್ಪ ದಿನಕ್ಕೆ ಜ್ವರ ವಾಸಿಯಾಯಿತು. ಆದರೆ ಅವನು ಕಿವುಡನಾದ, ಜೊತೆಗೆ ಸ್ವಲ್ಪ ಬುದ್ಧಿ ಸರಿ ಇಲ್ಲದವನ ಹಾಗೆ ಆಡುತ್ತಿದ್ದ.”
“ಇದರಲ್ಲಿ ಅಮ್ಮಾವರದು ಏನು ತಪ್ಪಿದೆ?” ಆ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.
“ಈಗ ನಿಮ್ಮ ಮಗ ಎಲ್ಲಿದ್ದಾನೆ?”
“ ಅವನನ್ನು ನಾವು ಊರಿನಲ್ಲಿ ಬಿಟ್ಟಿದ್ದೇವೆ.”
“ನಿಮ್ಮ ಹತ್ತಿರ ಯಾಕೆ ಇಟ್ಟುಕೊಂಡಿಲ್ಲ?” ಎಂದು ಕೇಳಿದೆ.
“ಒಂದು ಕಾರಣ ಅಂದರೆ ನನ್ನ ಹೆಂಡತಿ ಗರ್ಭಿಣಿಯಾಗಿದ್ದಳು. ಆದರೆ ಗರ್ಭಪಾತವಾಯಿತು. ಇನ್ನೊಂದು ಕಾರಣ ನನಗೆ ಆ ಹುಚ್ಚನ್ನ ಮನೆಯಲ್ಲಿಟ್ಟುಕೊಳ್ಳಲು ಇಷ್ಟ ಇರಲಿಲ್ಲ.”
ಮಾರನೆ ದಿನ ಯಜಮಾನಿ ಸ್ವಲ್ಪ ಸುಧಾರಿಸಿಕೊಂಡಿದ್ದಳು. ಯಜಮಾನರು ಅಂದರು, “ನೀನು ಹೋದ ಬಳಿಕ ನಾನು ತುಂಬಾ ಯೋಚನೆ ಮಾಡಿದೆ. ನನ್ನ ಮಗ ಹುಚ್ಚನಾಗಿದ್ದರಲ್ಲಿ ನನ್ನ ಹೆಂಡತಿಯ ತಪ್ಪೇನೂ ಇರಲಿಲ್ಲ. ಅದೆಲ್ಲಾ ವಿಧಿಯಾಟ. ನನಗೆ ನನ್ನ ತಪ್ಪಿನ ಅರಿವಾಗಿದೆ. ನನ್ನ ಮಗನನ್ನು ನೋಡಿಕೊಂಡು ಬರಬೇಕು ಅಂತ ಅನ್ನಿಸಿದೆ. ನೀನು ಅವಳನ್ನು ತಯಾರಾಗಲು ಹೇಳು.” ಯಜಮಾನಿ ನಾನೂ ಬರುವುದಾದರೆ ಹೊರಡಲು ಸಿದ್ಧಳಾಗ್ತೇನೆ ಎಂದರು. ಕಡೆಗೆ ಮೂವರೂ ಊರಿಗೆ ಹೊರಡಲು ಸಿದ್ಧರಾದೆವು. ಹೋಟೆಲಲ್ಲಿ ಉಳಿದುಕೊಂಡು, ಸ್ನಾನ, ತಿಂಡಿ ಮುಗಿಸಿ ಆಸ್ಪತ್ರೆಗೆ ಹೋಗಲು ಟ್ಯಾಕ್ಸಿ ಹಿಡಿದೆವು.
ಆಸ್ಪತ್ರೆಯ ಅಧಿಕಾರಿಯನ್ನು ಕಂಡು ವಿಷಯ ಹೇಳಿದೆ. ಅವರು ಆಸ್ಪತ್ರೆಯ ಆಳನ್ನು ಕರೆದು ಅವನ ಜೊತೆ ಹೋಗಲು ತಿಳಿಸಿದರು. ಕಟ್ಟಡದ ಹಿಂದೆ ಇದ್ದ ಬಯಲಿನಲ್ಲಿ ಮಕ್ಕಳು ಆಡುತ್ತಿದ್ದರು.
ಅವಳು ನಮ್ಮನ್ನು ಒಬ್ಬ ಹುಡುಗನ ಹತ್ತಿರ ಕರೆದುಕೊಂಡು ಹೋದ. ಅವನು ತನ್ನದೇ ಲೋಕದಲ್ಲಿ ಮುಳುಗಿದ್ದ.
“ಯಜಮಾನ್ರೆ, ಥೇಟ್ ನಿಮ್ಮ ಹಾಗೆ ಇದಾನೆ!” ನಾನಂದೆ.
“ಹ್ಞೂಂ, ನಾವು ಅವನಿಗೆ ರಾಹುಲ್ ಅಂತ ಹೆಸರಿಟ್ಟಿದ್ದೆವು. ಅವನನ್ನು ಪೊಲೀಸ್ ಇನ್ ಸ್ಪೆಕ್ಟರ್ ಮಾಡಬೇಕೂಂತಿದ್ದೆ.”
ನಂತರ ಅವರು ಅವಳನ್ನು “ಇವನ ಕೈಯಲ್ಲಿ ಗಡಿಯಾರ ಹೇಗೆ ಬಂತು?” ಎಂದು ಕೇಳಿದರು.
“ಇಲ್ಲಿಗೆ ಡಾಕ್ಟರ್ ರಾವ್ ದಂಪತಿ ಯಾವಾಗಲೂ ಬರುತ್ತಾ ಇರ್ತಾರೆ. ಒಂದು ದಿನ ಮಿಸೆಸ್ ರಾವ್ ಕೈಯಲ್ಲಿ ಗಡಿಯಾರ ಕೆಳಗೆ ಬಿತ್ತು. ಆಗ ಇವನು ಅಲ್ಲೇ ದೂರದಲ್ಲಿ ಇದ್ದನು ಗಡಿಯಾರ ಎತ್ತಿಕೊಂಡು ಬಂದು ಅವರಿಗೆ ಕೊಟ್ಟ. ಅವರಿಗೆ ಖುಷಿಯಾಗಿ ಗಡಿಯಾರಾನಾ ಇವನಿಗೇ ಕೊಟ್ಟುಬಿಟ್ಟರು. ಇವನಿಗೆ ಹನಿ ಅಂತ ಹೆಸರು ಇಟ್ಟಿದ್ದೇನೆ.”
ಅಷ್ಟರಲ್ಲಿ ಅಲ್ಲಿಗೆ ಡಾ.ರಾವ್ ಬಂದರು. ಮಿಸೆಸ್ ರಾವ್ ಹನಿಯನ್ನು ಪ್ರೀತಿಯಿಂದ ಅಪ್ಪಿಕೊಂಡರು. ಡಾಕ್ಟರ್ ರಾವ್ ಆಸ್ಪತ್ರೆಯ ಹಿಂದಿದ್ದ ಬಂಗಲೆಗೆ ಹೋದರು. ನಾವು ಅವರ ಹಿಂದೆಯೇ ಹೋದೆವು. ಬಂಗಲೆಯ ಒಂದು ಕೋಣೆಯಲ್ಲಿ 12-13 ವರ್ಷದ ಮಾನಸಿಕ ಅಸ್ವಸ್ಥನಾಗಿದ್ದ ಹುಡುಗ ಮಂಚದ ಮೇಲೆ ಮಲಗಿದ್ದು ಕಾಣಿಸಿತು. ರಾವ್ ದಂಪತಿಗಳು ಅವನ ಬಟ್ಟೆ ಬದಲಾಯಿಸಿ ಕೋಣೆಯನ್ನು ಸ್ವಚ್ಛಗೊಳಿಸಿ, ಅವನಿಗೆ ಔಷಧಿ ಕೊಟ್ಟು ಹೊರಬಂದರು.
ನಮ್ಮ ಯಜಮಾನರು ಹುಡುಗನ ಬಗ್ಗೆ ಕೇಳಿದರು. ಡಾ.ರಾವ್ ಅದಕ್ಕೆ, “ಇವನು ನನ್ನ ಮೊದಲನೆ ಹೆಂಡತಿಯ ಮಗ. ಇವನು ಮಾನಸಿಕ ಅಸ್ವಸ್ಥನಾಗಿದ್ದ ಅನ್ನುವ ಕಾರಣಕ್ಕೆ ನನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟೆ. ಅವಳಾಗ ಗರ್ಭಿಣಿಯಾಗಿದ್ದಳು. ಹೆರಿಗೆಯ ವೇಳೆಯಲ್ಲಿ ಸತ್ತುಹೋದಳು. ನನ್ನ ಎರಡನೇ ಹೆಂಡತಿ ಆ ಮಗುವನ್ನು ಜೊತೆಗೆ ಇಟ್ಟುಕೊಂಡು ಸಾಕಲು ತೀರ್ಮಾನಿಸಿದಳು. ನಾವು ಆಗಿನಿಂದ ಇವನನ್ನು ನೋಡಿಕೊಳ್ಳುತ್ತಿದ್ದೇವೆ.” ಎಂದರು. ನಾವು ಅಲ್ಲಿಂದ ಹೊರಟು ಅಧಿಕಾರಿ ಹತ್ತಿರ ಬಂದೆವು. ಅಧಿಕಾರಿ ಹೇಳಿದರು, “ಈ ಫಾರ್ಮನ್ನು ಭರ್ತಿ ಮಾಡಿ ರುಜು ಹಾಕಿ. ಈ ಫಾರ್ಮ್ ನಿಮ್ಮನ್ನು ಮತ್ತು ನಮ್ಮನ್ನು ಹನಿಯ ಜವಾಬ್ದಾರಿಯಿಂದ ಮುಕ್ತಿ ನೀಡುತ್ತದೆ.“
“ಎಂತಹ ಜವಾಬ್ದಾರಿ? ಎಂತಹ ಮುಕ್ತಿ?” ಎಂದು ಯಜಮಾನರು ಕೇಳಿದರು. “ಡಾ. ರಾವ್ ನಿಮ್ಮ ಮಗನನ್ನು ದತ್ತು ತೆಗೆದುಕೊಂಡು ಅವನನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತಾರೆ.” ಅಧಿಕಾರಿ ನುಡಿದರು.
ಆಗ ಯಜಮಾನಿ ತಟ್ಟನೆ ಮೇಲೆದ್ದರು, “ತಡೀರಿ, ನಾವಿಲ್ಲಿಗೆ ನಮ್ಮ ಮಗನನ್ನು ವಾಪಸ್ ಕರೆದುಕೊಂಡು ಹೋಗಲು ಬಂದಿದ್ದೇವೆ. ಇವತ್ತು ಮಿಸೆಸ್ ರಾವ್ ತಮ್ಮ ಸವತಿಯ ಮಗನ ಸೇವೆ ಮಾಡುತ್ತಿದ್ದುದನ್ನು ಕಂಡು ನನಗೆ ನನ್ನ ಬಗ್ಗೆ ಬಹಳ ನಾಚಿಕೆಯಾಯಿತು. ನಾನು ನನ್ನ ಸ್ವಂತ ಮಗನನ್ನು ದೂರ ಮಾಡಿದ್ದೆ. ಇನ್ನು ಮುಂದೆ ಹೀಗಾಗಲ್ಲ.”
ಅಧಿಕಾರಿ ಎಷ್ಟೋ ಹೇಳಿದರು. ಯಜಮಾನಿ ಏನು ಕೇಳಲೂ ತಯಾರಿರಲಿಲ್ಲ. 2 ದಿನಗಳ ನಂತರ ನಾವು ಹನಿಯನ್ನು ಕರೆದುಕೊಂಡು ಆಸ್ಪತ್ರೆಯಿಂದ ಹೊರಟೆವು. ಎಲ್ಲರೂ ಹನಿದುಂಬಿದ ಕಣ್ಣುಗಳಿಂದ ಬೀಳ್ಕೊಟ್ಟರು.