ಮದುವೆ ಎಂಬ ಸೀಸನ್ ಪ್ರಾರಂಭವಾಗಿದೆ. ಪ್ರಿಯತಮನ ಭೇಟಿಯ ಕನಸನ್ನು ಕಾಣುತ್ತಾ ನಿಂತಿರುವ ಮದುಮಗಳು, ತನ್ನ ವಿವಾಹದ ಶುಭ ದಿನದಂದು ಅತ್ಯಂತ ಸುಂದರವಾಗಿ ಕಾಣಬೇಕೆಂಬ ಬಯಕೆ ಹೊಂದಿರುತ್ತಾಳೆ. ಅವಳು ವಿವಾಹ ಮಂಟಪವನ್ನು ಪ್ರವೇಶಿಸುತ್ತಿರುವಂತೆ ಎಲ್ಲ ಅತಿಥಿಗಳ ಗಮನ ಅವಳತ್ತ ಕೇಂದ್ರೀಕೃತವಾಗುತ್ತದೆ. ಮದುಮಗನೂ ಓರೆಗಣ್ಣಿನಿಂದ ತನ್ನ ಮನದನ್ನೆಯ ಮೊಗವನ್ನು ವೀಕ್ಷಿಸುತ್ತಾನೆ. ಹೀಗೆ ಆಕರ್ಷಣೆಯ ಕೇಂದ್ರಬಿಂದುವಾಗುವ ಮದುಮಗಳು ತನ್ನ ವಿವಾಹಕ್ಕೆ 1 ತಿಂಗಳ ಮೊದಲಿನಿಂದಲೇ ಬ್ಯೂಟಿ ಟ್ರೀಟ್‌ಮೆಂಟ್ ಪ್ರಾರಂಭಿಸುವುದು ಒಳ್ಳೆಯದು.
ಕೋಮಲ ತ್ವಚೆ : ಚರ್ಮ ಸ್ವಾಭಾವಿಕ ಸೌಂದರ್ಯ ಪಡೆಯಲು ಅದಕ್ಕೆ ನಿಯಮಿತವಾಗಿ ಪೋಷಣೆ ಮತ್ತು ಮೇಲ್ವಿಚಾರಣೆ ಅಗತ್ಯ. ದಿನನಿತ್ಯದ ಕ್ಲೀನಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್‌ನಿಂದ ಚರ್ಮ ನಿಧಾನವಾಗಿ ಅರಳುತ್ತದೆ. ಕ್ಲೀನಿಂಗ್‌ಗಾಗಿ ಮಲಗುವ ಮೊದಲು ಯಾವುದಾದರೂ ಒಳ್ಳೆಯ ಕ್ಲೀನಿಂಗ್ ಲೋಶನ್‌ನಿಂದ ಮುಖ, ಕತ್ತು ಮತ್ತು ಕೈ ಕಾಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಟೋನರ್ ಮತ್ತು ಮಾಯಿಶ್ಚರೈಸರ್‌ನಿಂದ ಚರ್ಮವನ್ನು ಚೆನ್ನಾಗಿ ಮಸಾಜ್ ಮಾಡಿ.
ಚರ್ಮದ ಕೋಮಲತೆಗಾಗಿ ಹಾಲು ಮತ್ತು ಮೊಸರಿನ ಪ್ರೋಟೀನ್‌ನ್ನು ಬಳಸಿ. ಇದಲ್ಲದೆ ಮಸಾಜ್‌ಗೆ ಎಸೆನ್ಶಿಯಲ್ ಆಯಿಲ್ ಸಹ ಸೂಕ್ತ. ಲೂಫಾ ಮತ್ತು ಸ್ಕ್ರಬ್‌ನಿಂದ ಇಡೀ ಶರೀರವನ್ನು ಸ್ಕ್ರಬ್ ಮಾಡಿ. ಇದರಿಂದ ಮೃತ ಚರ್ಮ ನಿವಾರಣೆಯಾಗಿ ಚರ್ಮಕ್ಕೆ ಬಹಳಷ್ಟು ಆಕ್ಸಿಜನ್ ದೊರೆಯಲು ಸಾಧ್ಯವಾಗುತ್ತದೆ.
ಹೋಮ್ ಬ್ಲೀಚಿಂಗ್ : ಮದುವೆಗಾಗಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಬಿಸಿಲಿನಿಂದ ಚರ್ಮದ ಬಣ್ಣ ಕಪ್ಪಾಗಬಹುದು. ಇದನ್ನು ಸರಿಪಡಿಸಲು ಮನೆಯಲ್ಲಿ ತಯಾರಿಸಿದ ಬ್ಲೀಚ್ ಬಲು ಉತ್ತಮ. ಇದಕ್ಕಾಗಿ ಫುಲ್‌ಕ್ರೀಮ್ ಮಿಲ್ಕ್ ಪೌಡರ್‌ಗೆ ಹೈಡ್ರೋಜನ್ ಆಕ್ಸೈಡ್‌ನ ಕೆಲವು ಹನಿಗಳನ್ನು ಸೇರಿಸಿ ಪೇಸ್ಟ್ ತಯಾರಿಸಿ. ನಂತರ ಇದಕ್ಕೆ ಕೊಂಚ ಗ್ಲಿಸರಿನ್ ಹನಿಗಳನ್ನು ಮಿಶ್ರ ಮಾಡಿ ಚರ್ಮಕ್ಕೆ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ. ಕೆಲವೊಮ್ಮೆ ಬ್ಲೀಚಿಂಗ್‌ನಿಂದ ಚರ್ಮ ಶುಷ್ಕವಾಗುವುದುಂಟು. ಹಾಗಾದಾಗ ಒಳ್ಳೆಯ ಮಾಯಿಶ್ಚರೈಸರ್ ಲೋಶನ್ ಹಚ್ಚಿ. ಚರ್ಮದಲ್ಲಿ ಪಿಗ್ಮೆಂಟೇಶನ್ ಇದ್ದರೆ, ವಿಟಮಿನ್ ಇ ಕ್ಯಾಪ್ಸೂಲ್‌ನ್ನು ಮುರಿದು ಅದರ ಪುಡಿಗೆ ಕ್ಯಾಸ್ಟರ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ.
ಹೇರ್ ಕೇರ್ : ಕೂದಲಿನ ಮೇಲ್ವಿಚಾರಣೆಗೆ ಉತ್ತಮ ವಿಧಾನವೆಂದರೆ, ನಿಯಮಿತವಾಗಿ ಕ್ಲೀನಿಂಗ್ ಮತ್ತು ಕಂಡೀಶನಿಂಗ್ ಮಾಡುವುದು, ಕೂದಲನ್ನು ತಪ್ಪದೆ ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ. ಕ್ಯಾಸ್ಟರ್ ಆಯಿಲ್, ಸನ್‌ಫ್ಲವರ್ ಆಯಿಲ್ ಅಥವಾ ಕೋಕೋನಟ್ ಆಯಿಲ್‌ಗೆ ಕೆಲವು ಹನಿಗಳಷ್ಟು ಆ್ಯರೊಮಾ ಪಿಂಗ್ ಪಾಂಗ್ ಆಯಿಲ್ ಬೆರೆಸಿ ಮಸಾಜ್ ಮಾಡಿ. ಇದರಿಂದ ಕೂದಲಿಗೆ ಪೋಷಣೆ ದೊರೆಯುವುದಲ್ಲದೆ, ಕೂದಲು ರೇಷ್ಮೆಯಂತೆ ಸುಂದರ ಆಗುತ್ತದೆ. ಕೂದಲ ಕಂಡೀಶನಿಂಗ್‌ಗಾಗಿ ಮೆಂತ್ಯ ಮತ್ತು ಮೊಸರಿನ ಪ್ಯಾಕ್ ಮಾಡಿ ಹಚ್ಚಿ. ಕೂದಲನ್ನು ಕಲರ್ ಮಾಡಿಸಬೇಕೆಂದಿದ್ದರೆ, ಆ ಬಣ್ಣ ಹೊಂದುವುದೇ ಎಂದು ತಿಳಿಯಲು ಮೊದಲೇ ಟೆಸ್ಟ್ ಮಾಡಿಸಿ.
ಕೂದಲಿನ ಸ್ಟ್ರೇಟ್‌ನಿಂಗ್‌ನ್ನು ಎಲ್ಲಕ್ಕಿಂತ ಕಡೆಯಲ್ಲಿ ಮಾಡಿಸಿ. ಕೂದಲಿನಲ್ಲಿ ಹೊಟ್ಟಿದ್ದರೆ ಮೊದಲೇ ಟ್ರೀಟ್‌ಮೆಂಟ್ ತೆಗೆದುಕೊಳ್ಳಿ. ಮೊಸರು ಕೂದಲಿಗೆ ಪ್ರೋಟೀನ್ ಒದಗಿಸುವುದಲ್ಲದೆ, ಹೊಟ್ಟನ್ನೂ ದೂರ ಮಾಡುತ್ತದೆ. ನಿತ್ಯ ಮಲಗುವ ಮೊದಲು ಕೂದಲನ್ನೂ ಚೆನ್ನಾಗಿ ಬಾಚಿಕೊಳ್ಳಿ. ಇದರಿಂದ ಕೂದಲಿನ ಒಳ ಚರ್ಮದಲ್ಲಿ ಬ್ಲಡ್ ಸರ್ಕ್ಯುಲೇಶನ್ ಚೆನ್ನಾಗಿ ಆಗುತ್ತದೆ.
ಕಾಂತಿಯುತ ಚರ್ಮ : ನಿಮ್ಮ ಕತ್ತು ಮತ್ತು ಕೈಕಾಲುಗಳ ಚರ್ಮಕ್ಕೆ ವಿಶೇಷ ಗಮನ ನೀಡಿ. ನೈಸರ್ಗಿಕ ಸೌಂದರ್ಯಕ್ಕಾಗಿ ಯಾವುದಾದರೂ ತಿರುಳುಳ್ಳ ಹಣ್ಣನ್ನು ಮ್ಯಾಶ್ ಮಾಡಿ. ಅದಕ್ಕೆ ಮಿಲ್ಕ್ ಪೌಡರ್ ಸೇರಿಸಿ ಚರ್ಮಕ್ಕೆ ಹಚ್ಚಿ. 20 ನಿಮಿಷಗಳ ನಂತರ ತೊಳೆಯಿರಿ. ಆಲಿವ್ ಆಯಿಲ್‌ನ ಕೆಲವು ಹನಿಗಳಿಂದ ಇಡೀ ಶರೀರವನ್ನು ಮಸಾಜ್ ಮಾಡಿ. ಕೈ ಕಾಲುಗಳಿಗೆ ದಿನ ಕ್ರೀಮ್ ಹಚ್ಚಿ. ಬಾದಾಮಿ ಎಣ್ಣೆಯೂ ಮಸಾಜ್‌ಗೆ ಒಳ್ಳೆಯದು. ನಿಯಮಿತ ಮಸಾಜ್‌ನಿಂದ ಚರ್ಮ ಕಾಂತಿಯುತವಾಗುತ್ತದೆ.
ಚರ್ಮದ ಹೊಳಪಿಗಾಗಿ ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸಿ. ಜೊತೆಗೆ ಸಲಾಡ್ ಸಹ ತೆಗೆದುಕೊಳ್ಳಿ. ಹಣ್ಣಿನ ರಸ ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ಒದಗಿಸುತ್ತದೆ.
ಶಾಪಿಂಗ್ ಮಾಡಿ ಮನೆಗೆ ಬಂದ ನಂತರ ಚರ್ಮಕ್ಕೆ ರಿಲ್ಯಾಕ್ಸೇಶನ್ ಅಗತ್ಯವಾಗುತ್ತದೆ. ಹಸಿ ಹಾಲು ಮತ್ತು ರೋಸ್ ವಾಟರ್‌ನಿಂದ ಚರ್ಮವನ್ನು ಟೋನಿಂಗ್ ಮಾಡಿ.
ಒಳ್ಳೆಯ ನಿದ್ದೆ : ಶಾಪಿಂಗ್‌ನ ಸುತ್ತಾಟ, ವಿವಾಹ ಕಾರ್ಯಕ್ರಮಗಳ ಗಡಿಬಿಡಿ, ಮುಂಬರಲಿರುವ ಸಂತಸದ ಕ್ಷಣಗಳ ಬಗ್ಗೆ ಆಲೋಚನೆ, ಇವುಗಳಿಂದ ಮದುಮಗಳಿಗೆ ಸಾಕಷ್ಟು ನಿದ್ದೆ ದೊರೆಯದಿದ್ದರೆ, ಅದರಿಂದ ಕಣ್ಣುಗಳ ಕೆಳಗೆ ಕಪ್ಪು ವರ್ತಲ ಮೂಡುತ್ತದೆ. ಆದ್ದರಿಂದ ಏನೇ ಆಗಲಿ, ಯೋಚನೆಗಳನ್ನು ಬಿಟ್ಟು ಕಣ್ತುಂಬ ನಿದ್ದೆ ಮಾಡಿ. ಆಗ ನೀವು ಮದುವೆಯ ದಿನದಂದು ಹೊಸ ಹೂವಿನಂತೆ ಶೋಭಿಸಬಲ್ಲಿರಿ. ಮನಸ್ಸಿನ ಒತ್ತಡವನ್ನು ದೂರ ಮಾಡಲು ನಿಯಮಿತವಾದ ಮೆಡಿಟೇಶನ್ ಬಲು ಸಹಾಯಕಾರಿ. ಅದರಿಂದ ಮನಸ್ಸು ಶಾಂತ ಮತ್ತು ಸಮಾಧಾನಕರ ಸ್ಥಿತಿಯಲ್ಲಿದ್ದು, ಒಳ್ಳೆಯ ನಿದ್ದೆ ಬರುತ್ತದೆ ಮತ್ತು ಮುಖದಲ್ಲಿ ಹೊಳಪು ಕಾಣಿಸುತ್ತದೆ.
ಪಾರ್ಲರ್ ಬುಕಿಂಗ್ : ನೀವು ಯಾವಾಗಲೂ ಹೋಗುವ ಪಾರ್ಲರನ್ನೇ ವಿವಾಹ ಸಂದರ್ಭದಲ್ಲಿಯೂ ಬುಕ್ ಮಾಡಿಕೊಳ್ಳಿ. ಏಕೆಂದರೆ ಅಲ್ಲಿಯ ಬ್ಯೂಟಿಶಿಯನ್‌ಗೆ ನಿಮ್ಮ ಚರ್ಮದ ಗುಣ ತಿಳಿದಿರುತ್ತದೆ. ಮೆನಿಕ್ಯೂರ್, ಪೆಡಿಕ್ಯೂರ್, ಮಸಾಜ್, ಫೇಶಿಯಲ್ ಇತ್ಯಾದಿಗಳ ಜೊತೆಗೆ ವಿವಾಹದ ದಿನದ ಮೇಕಪ್‌ನ್ನೂ ಅಲ್ಲಿಂದಲೇ ಮಾಡಿಸಿ. ನೀವು ಅಲ್ಲಿಯ ರೆಗ್ಯುಲರ್ ಕಸ್ಟಮರ್ ಆಗಿರುವುದರಿಂದ, ಅವರು ವಿಶೇಷ ಕಾಳಜಿವಹಿಸಿ ನಿಮ್ಮನ್ನು ಸಿದ್ಧಗೊಳಿಸುತ್ತಾರೆ.
ಸೀರೆ-ಲಹಂಗಾಗಳ ಆಯ್ಕೆ : ಭಾರತೀಯ ಮದುಮಗಳ ಸಾಂಪ್ರದಾಯಿಕ ಉಡುಪು ಎಂದರೆ ಸೀರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಹೂರ್ತದ ಶಾಸ್ತ್ರವಿಧಿಗೆ ಮೈಸೂರು ಸಿಲ್ಕ್, ಕಾಂಜೀವರಂ ಸೀರೆಯೇ ಆಗಬೇಕು. ಜರಿ ಅಂಚು, ಬುಟ್ಟಾಗಳಿಂದ ಕೂಡಿದ ಬಣ್ಣಬಣ್ಣದ ಸೀರೆಯ ಸೊಬಗು ಮದುಮಗಳ ಸೌಂದರ್ಯಕ್ಕೆ ಬೆಡಗು ನೀಡುತ್ತದೆ. ಸೀರೆಗೆ ಒಪ್ಪುವ ಡಿಸೈನರ್ ಬ್ಲೌಸ್‌ನಿಂದ ಮದುಮಗಳು ಎಲ್ಲರ ಕಣ್ಸೆಳೆಯುತ್ತಾಳೆ.
ಈಚಿನ ದಿನಗಳಲ್ಲಿ ರಿಸೆಪ್ಶನ್‌ಗೆ ಮದುಮಗಳು ಸೀರೆಯನ್ನೇ ಉಡಬೇಕೆಂದಿಲ್ಲ. ಲಹಂಗಾ ಚೋಲಿ ಯುವತಿಯರ ಮೆಚ್ಚಿನ ಆಯ್ಕೆಯಾಗಿದೆ. ನಿಮ್ಮ ಶರೀರದ ರಚನೆ, ಚರ್ಮದ ಬಣ್ಣಗಳನ್ನು ಗಮನದಲ್ಲಿರಿಸಿಕೊಂಡು ಲಹಂಗಾ ಆಯ್ಕೆ ಮಾಡಿ.
ಎತ್ತರವಾಗಿ ಮತ್ತು ತೆಳುವಾಗಿರುವ ಯುವತಿಯರಿಗೆ ಹೆಚ್ಚು ನೆರಿಗೆಯಿಂದ ಕೂಡಿದ ಲಹಂಗಾ ಸೂಕ್ತವಾಗಿರುತ್ತದೆ. ಮದುಮಗಳಿಗೆ ಕೆಂಪು ಬಣ್ಣದ ಲಹಂಗಾ ಐಡಿಯಲ್ ಕಲರ್, ಅದರಲ್ಲಿ ಅವಳು ವಿಶೇಷವಾಗಿ ವಿಜೃಂಭಿಸುತ್ತಾಳೆ.
ಗೌರವರ್ಣದವರಿಗೆ ಸಾಫ್ಟ್ ಪೇಸ್ಟ್, ಪಿಂಕ್, ಪೀಚ್ ಬಣ್ಣಗಳು ಚೆನ್ನಾಗಿ ಕಾಣುತ್ತವೆ. ಗೌರವರ್ಣದವರಿಗೆ ರೂಬಿ ರೆಡ್ ಅಥವಾ ಆರೆಂಜ್ ಕಲರ್ ಒಳ್ಳೆಯದು. ಶ್ಯಾಮಲ ವರ್ಣದವರಿಗೆ ಕೆಂಪು ಅಥವಾ ಮೆಜೆಂತಾ ಕಲರ್ ಲಹಂಗಾ ಹೊಂದುತ್ತದೆ.
ಜ್ಯೂವೆಲರಿ : ಬ್ರೈಡಲ್ ಸ್ಯಾರಿ ಮತ್ತು ಲಹಂಗಾಗಳ ನಂತರದ ವಿಷಯವೆಂದರೆ, ಸರಿಯಾದ ಆಭರಣಗಳ ಆಯ್ಕೆ. ಜ್ಯೂವೆಲರಿ ಮಳಿಗೆಗಳಲ್ಲಿ ವಿಭಿನ್ನ ಡಿಸೈನ್‌ಗಳ ಆಭರಣಗಳು ದೊರೆಯುತ್ತವೆ. ಇಂದಿನ ದಿನಗಳಲ್ಲಿ ಹೋಲ್ ಕೀ ಬ್ರೈಡಲ್ ಜ್ಯೂವೆಲರಿಯು ಟ್ರೆಂಡ್‌ನಲ್ಲಿದೆ.
ಹೋಲ್ ಕೀ ಸೆಟ್‌ನಲ್ಲಿ ಚಿನ್ನದೊಡನೆ ಅನ್‌ಕಟ್ ಡೈಮಂಡ್ ಅಥವಾ ಬೆಲೆಬಾಳುವ ಸ್ಟೋನ್ಸ್ ಇರಿಸಲಾಗಿರುತ್ತದೆ. ಸ್ಟೋನ್ ಡ್ರಾಪ್ ಮತ್ತು ಪರ್ಲ್ನ ಹೋಲ್ ಕೀ ಒಡವೆಗಳೂ ಬಲು ಸುಂದರವಾಗಿರುತ್ತವೆ. ನಿಮ್ಮದು ಉತ್ತಮ ಬಜೆಟ್ ಆಗಿದ್ದರೆ ಡೈಮಂಡ್ ಬ್ರೈಡಲ್ ಸೆಟ್ ಕೊಳ್ಳಬಹುದು ಅಥವಾ ನೆಕ್ಲೇಸ್, ಬಳೆ, ಇಯರ್‌ರಿಂಗ್ಸ್ ನ ಮ್ಯಾಚಿಂಗ್ ಗೋಲ್ಡ್ ಸೆಟ್ ಸಹ ಬಹಳ ಎದ್ದು ಕಾಣುತ್ತದೆ. ನೀವು ಯೂನಿಕ್ ಆಗಿ ಕಾಣಲು ಬಯಸುವಿರಾದರೆ ಆ್ಯಂಟಿಕ್ ಜ್ಯೂವೆಲರಿಯು ನಿಮಗೆ ಕ್ಲಾಸಿಕ್ ಲುಕ್ ನೀಡುತ್ತದೆ. – ಲೀಲಾ ಹೆಗಡೆ