ಆಲಿವ್ ಪಿಕಲ್
ಸಾಮಗ್ರಿ : ಗ್ರೀನ್/ಬ್ಲ್ಯಾಕ್ ಆಲಿವ್ (ತಲಾ 100 ಗ್ರಾಂ), 50 ಗ್ರಾಂ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಸಕ್ಕರೆ, ವಿನಿಗರ್, ಇಂಗು, ಹುರಿದು ಪುಡಿ ಮಾಡಿದ ಸಾಸುವೆ, ಜೀರಿಗೆ, ಮೆಂತ್ಯ, ಅರ್ಧ ಸೌಟು ಆಲಿವ್ ಎಣ್ಣೆ, 2 ಚಿಟಕಿ ಅರಿಶಿನ.
ವಿಧಾನ : ಎಣ್ಣೆ ಬಿಸಿ ಮಾಡಿ. ಸಾಸುವೆ, ಜೀರಿಗೆ, ಇಂಗು, ಮೆಂತ್ಯ ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಬಾಡಿಸಿ. ಇದಕ್ಕೆ ಆಲಿವ್, ಉಳಿದ ಮಸಾಲೆ ಪೂರ್ತಿ ಬೆರೆಸಿ ಮಂದ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಕೆದಕಬೇಕು. ನಂತರ ಬಾಟಲಿಗೆ ತುಂಬಿಸಿ 1 ದಿನವಿಡೀ ಹಾಗೇ ಬಿಡಿ. ಮಾರನೇ ದಿನ ಸವಿಯಲು ಕೊಡಿ.
ಹೆಲ್ದಿ ಜಿಂಜರ್ ಪಿಕಲ್
ಸಾಮಗ್ರಿ : 200 ಗ್ರಾಂ ತಾಜಾ ಹಸಿಶುಂಠಿ, ಅರ್ಧರ್ಧ ಚಮಚ ಓಮ, ಮೆಂತ್ಯ, ಜೀರಿಗೆ, ಸಾಸುವೆ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಪುಡಿ ಮಾಡಿದ ಬೆಲ್ಲ, ಅರ್ಧ ಸೌಟು ಎಣ್ಣೆ, 2 ಚಿಟಕಿ ಅರಿಶಿನ.
ವಿಧಾನ : ಶುಂಠಿ ತೊಳೆದು, ಒರೆಸಿ, ಒಣಗಿಸಿ. ಸಿಪ್ಪೆ ಹೆರೆಯದೆ ಅದನ್ನು ಚಿತ್ರದಲ್ಲಿರುವಂತೆ ಉದ್ದುದ್ದಕ್ಕೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇದನ್ನು ಹಾಕಿ. ಜೊತೆಗೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಹದನಾಗಿ ಬಾಡಿಸಿ. ಮಂದ ಉರಿ ಇರಲಿ. ನಂತರ ಕೆಳಗಿಳಿಸಿ ನಿಂಬೆಹಣ್ಣು ಹಿಂಡಿಕೊಳ್ಳಿ. 1-2 ತಾಸು ನೆನೆಯಲು ಬಿಟ್ಟು ನಂತರ ಸವಿಯಲು ಕೊಡಿ.
ಪಿಕಲ್ ಬ್ರೆಡ್ ರೋಲ್
ಸಾಮಗ್ರಿ : 4-5 ಬ್ರೆಡ್ ಸ್ಲೈಸ್, ತುಸು ಬ್ರೆಡ್ ಕ್ರಂಬ್ಸ್, ಎಳ್ಳು, ಕರಿಯಲು ಎಣ್ಣೆ, 2 ಬೆಂದ ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಮಾವಿನ ಉಪ್ಪಿನಕಾಯಿ ಮಸಾಲೆ, ಗರಂಮಸಾಲ, ಚಾಟ್ ಮಸಾಲ, ಹೆಚ್ಚಿದ ಹಸಿ ಶುಂಠಿ, ಕೊ.ಸೊಪ್ಪು, ಹಸಿಮೆಣಸು.
ವಿಧಾನ : ಬೆಂದ ಆಲೂ ಮಸೆದಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಶುಂಠಿ, ಮೆಣಸು, ಆಲೂ ಹಾಕಿ ಬಾಡಿಸಿ. ನಂತರ ಉಪ್ಪು, ಡ್ರೈ ಮಸಾಲೆ, ಉಪ್ಪಿನಕಾಯಿ ಮಸಾಲೆ ಹಾಕಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಒಲೆಯಿಂದ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಬ್ರೆಡ್ ಸ್ಲೈಸ್‌ಗಳನ್ನು ಮಸೆದು, ಲಟ್ಟಣಿಗೆಯಿಂದ ಲಘುವಾಗಿ ಒತ್ತುತ್ತಾ, ಇದಕ್ಕೆ ಆಲೂ ಮಿಶ್ರಣ ತುಂಬಿಸಿ, ಚಿತ್ರದಲ್ಲಿರುವಂತೆ ಸುರುಳಿ ಮಾಡಿಕೊಳ್ಳಿ. ಅಂಚು ಬಿಡದಂತೆ ಒದ್ದೆ ಕೈಯಿಂದ ಅಂಟಿಸಿಬಿಡಿ. ನಂತರ ಬ್ರೆಡ್ ಕ್ರಂಬ್ಸ್, ಎಳ್ಳಿನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಬಿಸಿ ಬಿಸಿಯಾಗಿ ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಪಿಕಲ್ ರೊಟ್ಟಿ ರೋಲ್
ಸಾಮಗ್ರಿ : 100 ಗ್ರಾಂ ತುರಿದ ಪನೀರ್, 1 ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, 2 ಈರುಳ್ಳಿ, ತುಸು ಉಪ್ಪಿನಕಾಯಿ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ಮಸಾಲ, ಜೀರಿಗೆ ಪುಡಿ, ನಿಂಬೆರಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದಿಷ್ಟು ಚಪಾತಿ, ರೆಡಿಮೇಡ್ ರೋಲ್ ರಾಪ್ಸ್.
ವಿಧಾನ : ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಪನೀರ್, ಉಪ್ಪಿನಕಾಯಿ ಮಸಾಲೆ, ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಬೇಕು. ನಂತರ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಕೆಳಗಿಳಿಸಿದ ಮೇಲೆ ನಿಂಬೆ ರಸ ಹಿಂಡಿಕೊಂಡು ಮಿಕ್ಸ್ ಮಾಡಿ. ಇದು ತಣ್ಣಗಾದ ಮೇಲೆ ತುಪ್ಪ ಸವರಿದ ಚಪಾತಿಗಳ ಮೇಲೆ 2-3 ಚಮಚ ಹರಡಿ, ರೋಲ್ ಮಾಡಿ, ಒಂದು ಬದಿಗೆ ರೋಲ್ ರಾಪ್ ಅಳವಡಿಸಿ, ಮಕ್ಕಳ ಟಿಫನ್ ಬಾಕ್ಸಿಗೆ ಪ್ಯಾಕ್ ಮಾಡಿ. ಜೊತೆಗೆ ಪುದೀನಾ ಚಟ್ನಿ ಇರಲಿ.
ಹಸಿ ಮೆಣಸಿನ ಉಪ್ಪಿನಕಾಯಿ
ಸಾಮಗ್ರಿ : 100 ಗ್ರಾಂ ಉದ್ದನೆ ಹಸಿ ಮೆಣಸಿನಕಾಯಿ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪುಡಿ, ಜೀರಿಗೆ ಪುಡಿ, ಮೆಂತ್ಯಪುಡಿ, ಸೋಂಪಿನ ಪುಡಿ, ಓಮ, ನಿಂಬೆರಸ, 2 ಚಿಟಕಿ ಅರಿಶಿನ.
ವಿಧಾನ : ಹಸಿಮೆಣಸನ್ನು ಉದ್ದುದ್ದಕ್ಕೆ ಸೀಳಿಕೊಳ್ಳಿ. ಎಣ್ಣೆ ಬಿಸಿ ಮಾಡಿ ಇವನ್ನು ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಬೇಗ ಬೇಗ ಕೈಯಾಡಿಸಿ. ಮಂದ ಉರಿಯಲ್ಲಿ ಮತ್ತೆರಡು ನಿಮಿಷ ಕೈಯಾಡಿಸಿ ಕೆಳಗಿಳಿಸಿ. ಆರಿದ ನಂತರ ಜಾರ್‌ಗೆ ತುಂಬಿಸಿ, ಸವಿಯಲು ಕೊಡಿ.
ಕೆಂಪು ಮೆಣಸಿನ ಹುಳಿ ಸಿಹಿ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಹಸಿ ಕೆಂಪು ಮೆಣಸಿನಕಾಯಿ, ಅರ್ಧ ಸೌಟು ಎಳ್ಳೆಣ್ಣೆ, ಅರ್ಧರ್ಧ ಚಮಚ ಸಾಸುವೆ, ಮೆಂತ್ಯ, ಸೋಂಪು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ನಿಂಬೆರಸ, ಅಮ್ಚೂರ್‌ಪುಡಿ, ಇಂಗು, 2 ಚಿಟಕಿ ಅರಿಶಿನ.
ವಿಧಾನ : ಹಸಿ ಕೆಂಪು ಮೆಣಸನ್ನು ತುಂಡರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸುವೆ, ಮೆಂತ್ಯ, ಸೋಂಪು, ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ನಂತರ ಮೆಣಸಿನಕಾಯಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಇತರ ಮಸಾಲೆ ಹಾಕಿ ಕೆದಕಿ ಕೆಳಗಿಳಿಸಿ. ನಿಂಬೆ ರಸ ಹಿಂಡಿಕೊಂಡು, 2 ತಾಸು ನೆನೆಯಲು ಬಿಟ್ಟು ನಂತರ ಸವಿಯಲು ಕೊಡಿ.
ಹಸಿ ಬಟಾಣಿಯ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಹಸಿ ಬಟಾಣಿಕಾಳು, ಅರ್ಧ ಸೌಟು ಎಣ್ಣೆ, ಅರ್ಧರ್ಧ ಚಮಚ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ನಿಂಬೆರಸ, ಗರಂಮಸಾಲ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ವಿನಿಗರ್, ಇಂಗು.
ವಿಧಾನ : ಮೊದಲು ಎಣ್ಣೆ ಬಿಸಿ ಮಾಡಿ ಅಗತ್ಯ ಸಾಮಗ್ರಿ ಹಾಕಿ ಒಗ್ಗರಣೆ ಕೊಡಿ. ನಂತರ ಇದಕ್ಕೆ ಬಟಾಣಿ ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಬೆರೆಸಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಕೊನೆಯಲ್ಲಿ ನಿಂಬೆರಸ ಹಿಂಡಿಕೊಂಡು 2 ತಾಸು ಆರಲು ಬಿಡಿ. ಬಿಸಿ ಅನ್ನದ ಜೊತೆ ಸವಿಯಲು ಕೊಡಿ.
ನೆಲ್ಲಿ-ಶುಂಠಿಯ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಬೆಟ್ಟದ ನೆಲ್ಲಿಕಾಯಿ, 50 ಗ್ರಾಂ ಶುಂಠಿ, ಅರ್ಧರ್ಧ ಚಮಚ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಗರಂಮಸಾಲ, ಚಾಟ್‌ಮಸಾಲ, ಅರಿಶಿನ, ಅರ್ಧ ಸೌಟು ರೀಫೈಂಡ್ ಎಣ್ಣೆ.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮೊದಲು ಒಗ್ಗರಣೆ ಕೊಡಿ. ನಂತರ ಇದಕ್ಕೆ ತೊಳೆದು ಒರೆಸಿ ಹೆಚ್ಚಿಕೊಂಡ ನೆಲ್ಲಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿ. ಇದನ್ನು ಜಾರ್‌ಗೆ ತುಂಬಿಸಿ 2 ದಿನ ಬಿಟ್ಟು ನಂತರ ಬಳಸಿದರೆ ಉತ್ತಮ.