ಒಮ್ಮೊಮ್ಮೆ ಡಿಜಿಟಲ್ ಸಂಬಂಧಗಳ ಜಾಲದಲ್ಲಿ ಜನರು ಅದ್ಹೇಗೆ ಸಿಲುಕಿಬಿಡುತ್ತಾರೆಂದರೆ, ಅವರಿಗೆ ಸಂಬಂಧಗಳ ಬಗೆಗೇ ವಿಶ್ವಾಸ ಹೊರಟು ಹೋಗುತ್ತದೆ. 3 ವರ್ಷಗಳ ಹಿಂದೆ ಒಂದು ಮ್ಯಾಚ್‌ಮೇಕಿಂಗ್ ಸೈಟ್ ಮೇರೆಗೆ ಬೆಂಗಳೂರಿನ ಶಶಿಕಲಾ ರವಿಕಾಂತ್ ಎಂಬ ವ್ಯಕ್ತಿಯನ್ನು ಆನ್‌ಲೈನ್‌ನಲ್ಲಿ ಪರಿಚಯಿಸಿಕೊಂಡರು. ಇಬ್ಬರ ವಿಚಾರಗಳು ಪರಸ್ಪರರಿಗೆ ಇಷ್ಟವಾದಾಗ ಮಾತು ಮುಂದುವರಿಯಿತು. 2-3 ಸಲದ ಭೇಟಿಯ ಬಳಿಕ ರವಿಕಾಂತ್ ಬಿಝಿ ಶೆಡ್ಯೂಲ್, ನೆಪ ಹೇಳತೊಡಗಿದ. `ನಾನು ಮೀಟಿಂಗ್‌ನಲ್ಲಿ ಇದ್ದೇನೆ, ನಾನು ನಗರದಿಂದ ಬಹುದೂರ ಇದ್ದೇನೆ, ಶೀಘ್ರ ಭೇಟಿ ಮಾಡುವೆ…’ ಎಂದು ಸಬೂಬು ಹೇಳತೊಡಗಿದ. ಶಶಿಕಲಾ ಕೂಡ ಅವನ ಮಾತುಗಳ ಮೇಲೆ ವಿಶ್ವಾಸವಿರಿಸಿದಳು. ಆದರೆ ಶಶಿಕಲಾ ಅದೊಂದು ದಿನ ಬೇರೊಂದು ಸೈಟ್‌ನಲ್ಲಿ ಅವನನ್ನು ನೋಡಿದಳು. ಬಹಳಷ್ಟು ಪರಿಶೀಲನೆ ನಡೆಸಿದಾಗ ರವಿಕಾಂತ್ ಬೇರೆಲ್ಲೂ ವ್ಯಸ್ತನಾಗಿರುವುದಿಲ್ಲ. ಅವನು ಈಗಾಗಲೇ 7 ವವರ್ಷಗಳ ವೈವಾಹಿಕ ಜೀವನ ನಡೆಸಿದ್ದ. ಅವನ ಹೆಂಡತಿಯ ಹೇಳಿಕೆಯ ಪ್ರಕಾರ, ಅವನು ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಸುಳ್ಳು ಪ್ರೊಫೈಲ್ ಹಾಕಿ ಹಲವು ಹುಡುಗಿಯರ ಜೊತೆ ಸಂಬಂಧ ಬೆಳೆಸುತ್ತಿದ್ದ. ಅವನ ಉದ್ದೇಶ ಲೈಂಗಿಕ ಫ್ಯಾಂಟೆಸಿ ಈಡೇರಿಸಿಕೊಳ್ಳುವುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿಯಲ್ ಹಾಗೂ ಡೇಟಿಂಗ್ ಸೈಟ್‌ಗಳು ರವಿಕಾಂತ್‌ನಂತಹ ದುರುದ್ದೇಶ ಹೊಂದಿರುವ ವ್ಯಕ್ತಿಗಳಿಗೆ ಪರ್ಯಾಯ ಉಪಾಯಗಳಾಗಿಬಿಟ್ಟಿವೆ. ಅಂತಾರಾಷ್ಟ್ರೀಯ ಡೇಟಿಂಗ್ ಅಪ್ಲಿಕೇಶನ್ ಹಿಂಜ್ ಪ್ರಕಾರ, ಡೇಟಿಂಗ್‌ನ ವಿಶ್ವ ದಿನದಿಂದ ದಿನಕ್ಕೆ ಕ್ರೂರವಾಗುತ್ತ ಸಾಗಿದೆ. ಇಂತಹದರಲ್ಲಿ ಆನ್‌ಲೈನ್ ರಿಲೇಶನ್‌ನಲ್ಲಿ ಘೋಸ್ಟಿಂಗ್, ಮೂನಿಂಗ್ ಮತ್ತು ಬ್ರೆಡ್ ಕ್ರಂಬಿಂಗ್ ಮುಂತಾದ ಅಪಾಯಕಾರಿ ವಿಧಾನಗಳ ಬಳಿಕ `ಕಿಟನ್‌ಫಿಶಿಂಗ್’ ಎಂಬ ಹೊಸ ಪದವೊಂದು ಸೃಷ್ಟಿಯಾಗಿದೆ. ಅದರಿಂದ ನೀವು ಎಚ್ಚರದಿಂದಿರಬೇಕಾದ ಅಗತ್ಯವಿದೆ.
ಏನಿದು ಕಿಟನ್‌ಫಿಶಿಂಗ್?
ಕಿಟನ್ ಫಿಶಿಂಗ್ ಇದು ಆನ್‌ಲೈನ್ ಡೇಟಿಂಗ್‌ನಲ್ಲಿ ಹೊಸದಾಗಿ ಪ್ರತ್ಯಕ್ಷವಾದ ಒಂದು ಹೊಸ ರೂಪವಾಗಿದೆ. ಒಬ್ಬ ವ್ಯಕ್ತಿ ತನ್ನ ವಾಸ್ತವ ರೂಪವನ್ನು ಮರೆಮಾಚಿ ಭ್ರಾಮಕ ಲೋಕವೊಂದನ್ನು ಸೃಷ್ಟಿ ಮಾಡುತ್ತಾರೆ. ಇಲ್ಲಿ ಕಿಟನ್ ಫಿಶರ್ಸ್ ತನ್ನ ಹಳೆಯ ಹಾಗೂ ಭ್ರಾಮಕ ಫೋಟೋವೊಂದನ್ನು ಹಾಕಿ ಅದರ ಮುಖಾಂತರ ತನ್ನ ಅವಾಸ್ತವ ರೂಪವನ್ನು ಪ್ರಸ್ತುತಪಡಿಸಿ ಎದುರಿಗಿನ ವ್ಯಕ್ತಿಯನ್ನು ಆಕರ್ಷಿಸಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಾರೆ. ಉದಾಹರಣೆಗೆ ತನ್ನ ವಯಸ್ಸು, ಎತ್ತರ, ಆಸಕ್ತಿ ಮುಂತಾದವುಗಳ ಬಗ್ಗೆ ತಪ್ಪು ಮಾಹಿತಿ ಕೊಟ್ಟು ತನ್ನತ್ತ ಆಕರ್ಷಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ವಾಸ್ತವ ಜೀವನದಲ್ಲೂ ಕಿಟನ್‌ಫಿಶಿಂಗ್
ಕಿಟನ್‌ಫಿಶಿಂಗ್ ಯಾವುದೇ ಹೊಸ ಟ್ರೆಂಡ್ ಏನಲ್ಲ. ಆನ್‌ಲೈನ್ ಸಂಬಂಧ ಇಟ್ಟುಕೊಳ್ಳುವವರಿಗೆ ಮಾತ್ರ ಈ ತೆರನಾದ ಮೋಸ ಆಗುತ್ತದೆಂದಲ್ಲ. ನಮ್ಮ ಆಸುಪಾಸಿನಲ್ಲಿ ಎಂತಹ ಕೆಲವು ಜನರಿದ್ದಾರೆಂದರೆ, ಅವರು ತಮ್ಮ ಬಗ್ಗೆ ಅದೆಷ್ಟೋ ಭ್ರಾಮಕ ಕಲ್ಪನೆ ಉಂಟು ಮಾಡಿ ಹುಡುಗಿಯರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಭಾ ಹೀಗೆ ಹೇಳುತ್ತಾರೆ, ನಾನೊಬ್ಬ ಹುಡುಗನ ಜೊತೆ ಡೇಟಿಂಗ್‌ನಲ್ಲಿದ್ದೆ. ಆತ ತನಗೆ ಸ್ವಂತ ಮನೆಯಿದೆ. ತಾನು ಕಟ್ಟಡ ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದ. ಕೆಲವು ತಿಂಗಳುಗಳ ಬಳಿಕ, ಆ ಹುಡುಗ ಯಾವ ಮನೆಯಲ್ಲಿ ವಾಸಿಸುತ್ತಿದ್ದನೊ, ಆ ಮನೆ ಅವನ ಕಸಿನ್‌ನದಾಗಿತ್ತು. ಆತ ದುಬೈನಲ್ಲಿ ವಾಸಿಸಿದ್ದ. ಆ ಬಳಿಕ ಪ್ರತಿಭಾ ಅವನ ಜೊತೆಗಿನ ಸಂಬಂಧವನ್ನು ಕಡಿದು ಹಾಕಿದಳು.
ಎಷ್ಟೋ ಸಲ ಮದುವೆಗೆ ಮುಂಚೆ ಯಾವ ಫೋಟೋ ಅಥವಾ ಮಾಹಿತಿ ಹಾಕಲಾಗಿರುತ್ತದೋ, ಅದು ಸತ್ಯಕ್ಕೆ ವಿರುದ್ಧ ಆಗಿರುತ್ತದೆ. ಇಂದಿನ ಡಿಜಿಟಲ್ ಯುಗ ಅಂತಹ ಸಂಗತಿಗಳಿಗೆ ಮತ್ತಷ್ಟು ಕುಮ್ಮಕ್ಕು ಕೊಡುತ್ತಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಭಾವನೆಗಳನ್ನು ಪರಿಪೂರ್ಣವಾಗಿ ನಿರ್ಲಕ್ಷಿಸಿ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾನೆ.
ಮಾನಸಿಕವಾಗಿ ಹಾನಿಕರ
ಆರಂಭದಲ್ಲಿ ಇದು ಹಾನಿಕಾರಕ ಎನಿಸುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಉದ್ದೇಶಪೂರ್ವಕವಾಗಿ ಒಂದು ಯೋಜನೆಯ ಪ್ರಕಾರ ಹೀಗೆ ಮಾಡುತ್ತಿದ್ದರೆ ಎದುರಿಗಿನ ವ್ಯಕ್ತಿಗೆ ಖಂಡಿತ ಅದು ಮಾನಸಿಕವಾಗಿ ಹಿಂಸೆ ನೀಡುತ್ತದೆ. ಮನೋಚಿಕಿತ್ಸಕ ಡಾ. ಸತ್ಯಕಾಂತ್ ಹೀಗೆ ಹೇಳುತ್ತಾರೆ, “ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ತನ್ನ ಬಗೆಗೆ ಅಸುರಕ್ಷತೆಯ ಭಾವನೆ ಇರುತ್ತದೆ. ಇದು ಒಂದು ಬಗೆಯ ಮಾನವೀಯ ಪ್ರವೃತ್ತಿ. ಒಬ್ಬ ವ್ಯಕ್ತಿ ಅಸುರಕ್ಷತೆಯಿಂದ ಹೊರಬರದೇ ಇದ್ದಾಗ ತನ್ನ ನಕಲಿ, ಮುಖವಾಡದ ಆಸರೆ ಪಡೆದುಕೊಳ್ಳುತ್ತಾನೆ ಅದನ್ನು ಆ್ಯಂಟಿ ಸೋಶಿಯಲ್ ಮಲ್ಟಿಪರ್ಸನಾಲಿಟಿ ಡಿಸಾರ್ಡರ್ ಎನ್ನುತ್ತಾರೆ. ಅವರು ಬಹಳ ಶಾರ್ಪ್‌ಮೈಂಡ್ ಆಗಿರುತ್ತಾರೆ. ಒಂದು ವಿಶೇಷ ಸಂಗತಿಯೇನೆಂದರೆ, ಅವರಿಗೆ ಇನ್ನೊಬ್ಬ ವ್ಯಕ್ತಿಯ ಭಾವನೆಗಳಿಗೆ ಚ್ಯುತಿ ಬರುತ್ತದೆ ಎಂಬ ಸಣ್ಣ ಕಲ್ಪನೆ ಕೂಡ ಇರುವುದಿಲ್ಲ.”
ಜನರು ಇದರಲ್ಲಿ ಏಕೆ ಸಿಲುಕುತ್ತಾರೆ?
ಡಾ. ಸತ್ಯಕಾಂತ್ ಪ್ರಕಾರ ಆನ್‌ಲೈನ್ ಡೇಟಿಂಗ್ಸ್ ನ ಜಾಲದಲ್ಲಿ ಸಿಲುಕುರುವ ಹೆಚ್ಚಿನವರು ಮೊದಲ ಬಾರಿಗೆ ಆನ್‌ಲೈನ್ ಲೋಕಕ್ಕೆ ಪ್ರವೇಶಿಸಿದವರು ಹಾಗೂ ಭಾವನಾತ್ಮಕವಾಗಿರುವವರು. ಇಂಥವರು ಎದುರಿಗಿನ ವ್ಯಕ್ತಿಯ ಮಾತುಗಳಿಗೆ ಬಹುಬೇಗ ಮರುಳಾಗುತ್ತಾರೆ. ಬಾಹ್ಯ ಲೋಕದ ಬಗ್ಗೆ ಹೆಚ್ಚು ಅರಿವಿರದೆ, ಏಕಾಂಗಿತನದಿಂದ ಹೊರಗೆ ಬರಲು ಪ್ರಯತ್ನಿಸುವವರೇ ಹೀಗೆ ಮಾಡುತ್ತಾರೆ. ಇಂತಹದರಲ್ಲಿ ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ಸ್ ಮತ್ತು ಸೈಟ್‌ಗಳು ಅವರ ಪಾಲಿಗೆ ಸ್ನೇಹ ಮಾಡುವ, ಸಂಗಾತಿ ಹುಡುಕುವ ಪರ್ಯಾಯ ಉಪಾಯ ಎಂಬಂತೆ ಗೋಚರಿಸುತ್ತವೆ.
ಇವರನ್ನು ಹೇಗೆ ಗುರುತಿಸುವುದು?
ನಮ್ಮ ಆಸುಪಾಸಿನಲ್ಲಿ ಇಂತಹ ಮಾನಸಿಕತೆಯ ಅದೆಷ್ಟೋ ಜನರು ಸಿಗುತ್ತಾರೆ. ಇಂಥವರು ತಮ್ಮ ಸಕಾರಾತ್ಮಕ ಗುಣಗಳನ್ನು ಬಣ್ಣ ಹಚ್ಚಿ ಹೇಳಿ ನಿಮ್ಮನ್ನು ಪ್ರಭಾವಿತಗೊಳಿಸಲು ಪ್ರಯತ್ನಿಸುತ್ತಾರೆ. ಅವರನ್ನು ನೀವು ನಿರ್ಲಕ್ಷಿಸುತ್ತೀರಿ ಅಥವಾ ಅವರ ಬಗ್ಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಒಂದಿಷ್ಟು ಎಚ್ಚರಿಕೆ ವಹಿಸಿದರೆ ಅಂಥವರನ್ನು ಸುಲಭವಾಗಿ ಕಂಡುಹಿಡಿಯಬಹುದು.
– ನೀವು ಯಾರನ್ನಾದರೂ ಆನ್‌ಲೈನ್‌ನಲ್ಲಿ ಭೇಟಿ ಮಾಡಿದ್ದರೆ, ಅವರ ಫೋಟೋಗಳಲ್ಲಿ ಸ್ವಲ್ಪವಾದರೂ ವ್ಯತ್ಯಾಸ ಕಂಡುಬಂದರೆ, ಆ ಫೋಟೋಗಳು ಹಳೆಯದಾಗಿರಬಹುದು.
– ಮೀಟಿಂಗ್‌ನಲ್ಲಿದ್ದೇನೆ, ನಗರದಿಂದ ಹೊರಗೆ ಇದ್ದೇನೆ ಎಂದು ಹೇಳುವ ಆ ವ್ಯಕ್ತಿ ತನ್ನ ಆಫೀಸ್ ಬಗ್ಗೆ ಮಾಹಿತಿ ಕೊಡುವುದೇ ಇಲ್ಲ.
– ಮಾತುಕತೆ ನಡೆಸುವಾಗ ತನ್ನ ಕುಟುಂಬದವರ ಬಗ್ಗೆ, ಸ್ನೇಹಿತರ ಬಗ್ಗೆ ಹೇಳುವುದೇ ಇಲ್ಲ. ಆದರೆ ಭೇಟಿ ಮಾಡಿಸುವುದಿಲ್ಲ.
– ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಭೇಟಿ ಮಾಡಲು ಹೇಳದೆ ಏಕಾಂತದ ಸ್ಥಳದಲ್ಲಿ ಭೇಟಿಯಾಗಲು ಹೇಳುತ್ತಾನೆ.
– ಆನ್‌ಲೈನ್ ಚಾಟಿಂಗ್‌ನಲ್ಲಿ ವಿದೇಶ ಸುತ್ತುವ, ಜಿಮ್ ಗೆ ಹೋಗುವ, ಪುಸ್ತಕ ಓದುವ ಹವ್ಯಾಸದ ಬಗ್ಗೆ ಹೇಳುತ್ತಾನೆ. ಅದರೆ ಯಾವ ಲಕ್ಷಣಗಳು ಗೋಚರಿಸುವುದೇ ಇಲ್ಲ.
ಇಂತಹ ಜನರಿಂದ ದೂರವಿರಲು ನಾವು ಸ್ವತಃ ಜಾಗೃತರಾಗುವ ಅವಶ್ಯಕತೆ ಇದೆ. ಅದಕ್ಕಾಗಿ ನೀವು ಕೆಳಕಂಡ ಸಂಗತಿಗಳನ್ನು ಗಮನಿಸಬೇಕು. ನೀವು ಆನ್‌ಲೈನ್‌ನಲ್ಲಿ ಸಂಬಂಧ ಶೋಧಿಸುತ್ತಿದ್ದರೆ ಎದುರಿಗಿನ ವ್ಯಕ್ತಿಯ ಒಗ್ಗೆ ಒಮ್ಮೆಲೇ ನಂಬಿಕೆ ಇಡಲು ಹೋಗಬೇಡಿ. ಆ ವ್ಯಕ್ತಿಯ ಮಾತುಗಳನ್ನು ಆಲಿಸಿ ಒಮ್ಮೆಲೆ ಖುಷಿಪಡಬೇಡಿ. ಭೇಟಿ ಆಗಲು ಕೂಡ ಆತುರ ತೋರಿಸಬೇಡಿ. ಭೇಟಿಯಾಗುವ ಮುನ್ನ ಫೋನ್‌ನಲ್ಲಿ ಮಾತನಾಡಿ. ವಿಡಿಯೋ ಕಾಲಿಂಗ್ ಮಾಡಿ. ಖುದ್ದಾಗಿ ಭೇಟಿಯಾದಾಗಲೂ ಕೂಡ ಆ ವ್ಯಕ್ತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಪ್ರಯತ್ನ ಬಿಡಬೇಡಿ. ಆ ವ್ಯಕ್ತಿಯ ಮನೆಯವರ, ಸ್ನೇಹಿತರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಜೊತೆಗೆ ನಿಮ್ಮ ಮನೆಯವರು, ಸ್ನೇಹಿತರನ್ನು ಆ ವ್ಯಕ್ತಿಗೆ ಪರಿಚಯಿಸಿ. ನೀವು ಈ ಸಂಗತಿಗಳ ಬಗ್ಗೆ ಗಮನಕೊಟ್ಟರೆ, ಮುಂಚಿತವಾಗಿಯೇ ಎಚ್ಚರ ವಹಿಸಿದರೆ, ಸೂಕ್ತ ಸಂಗಾತಿಗಾಗಿ ಆನ್‌ಲೈನ್ ಡೇಟಿಂಗ್ ಅಥವಾ ಮ್ಯಾಟ್ರಿಮೋನಿಯಲ್ ಸೈಟ್‌ಗಳು ನಿಮಗೆ ಬಹಳಷ್ಟು ಉಪಯುಕ್ತವಾಗಿ ಪರಿಣಮಿಸಬಹುದು. ಇಂತಹ ಅದೆಷ್ಟೋ ಜನರು ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲೇ ಒಳ್ಳೆಯ ಸಂಗಾತಿಗಳನ್ನು ಹುಡುಕುತ್ತಾರೆ. ಉದ್ದೇಶ ಒಳ್ಳೆಯದಾಗಿದ್ದರೆ, ಸರಿ.
– ರೀಟಾ ಫರ್ನಾಂಡೀಸ್
– ಆನ್‌ಲೈನ್ ಆಗಿರಬಹುದು. ಆಫ್‌ಲೈನ್ ಆಗಿರಬಹುದು ಆ ಮಾಡರ್ನ್ ಡೇಟಿಂಗ್ ಪದಗಳು ನಮ್ಮಲ್ಲಿನ ಬಹಳಷ್ಟು ಮಹಿಳೆಯರಿಗೆ ತಿಳಿದಿರಬಹುದು. ಎಚ್ಚರಿಕೆಯಿಂದ ಇವನ್ನು ಗಮನಿಸಿ :
– `ಘೋಸ್ಟಿಂಗ್’ ಅಂದರೆ ಯಾವುದೇ ಫ್ರೆಂಡ್ ಅಥವಾ ಪ್ರೇಮಿ ನಿಮ್ಮ ಜೀವನದಿಂದ ಹೇಳದೆ ಕೇಳದೆ ಆಕಸ್ಮಿಕವಾಗಿ ದೂರ ಓಡಿ ಹೋಗಿರಬಹುದು ಮತ್ತು ಸಂಪರ್ಕದ ಎಲ್ಲ ದ್ವಾರಗಳನ್ನೂ ಮುಚ್ಚಿರಬಹುದು.
-`ಸ್ಲೋ ಫೇಡ್’ ಅಂದರೆ ಹೊಸದಾಗಿ ಶುರುವಾದ ಸಂಬಂಧವನ್ನು ಸ್ವೀಕರಿಸಲು ಒಪ್ಪದೇ ಇರುವುದು. ಕ್ರಮೇಣ ಮಾತುಕಥೆ ಮತ್ತು ಸಂಪರ್ಕ ಕಡಿಮೆಗೊಳಿಸಿ ಸಂಬಂಧವನ್ನು ಕೊನೆಗೊಳಿಸುವುದು.
– `ಬ್ರೆಡ್ ಕ್ರಂಬಿಂಗ್’ ಎಂತಹದೊಂದು ಡೇಟಿಂಗ್ ಪದವಾಗಿದೆ ಎಂದರೆ, ಒಬ್ಬ ವ್ಯಕ್ತಿ ಸಂಬಂಧ ಶುರು ಮಾಡುವ ಮೊದಲೇ, ಯಾವುದೇ ಉದ್ದೇಶವಿಲ್ಲದೆ ಪ್ರೀತಿಭರಿತ ಸಂದೇಶ ಕಳಿಸಿ ಭಾವನೆಗಳ ಜೊತೆ ಆಟವಾಡುತ್ತಾನೆ.