`ಕಿಟೀ’ ಈ ಹೆಸರು ಕೇಳುತ್ತಿದ್ದಂತೆ ಮನಸ್ಸಿನಲ್ಲಿ 10-15 ಮಹಿಳೆಯರ ಒಂದು ಗುಂಪು ಕಣ್ಮುಂದೆ ಬರುತ್ತದೆ. ಆ ಗುಂಪು ನಿಗದಿಪಡಿಸಿದ ದಿನದಂದು ಒಂದು ಕಡೆ ಸೇರಿ ಪಾರ್ಟಿ ಮಾಡುತ್ತಾರೆ, ಮನರಂಜನೆಯ ಚಟುವಟಿಕೆಯಲ್ಲಿ ತೊಡಗುತ್ತಾರೆ. ಕಿಟೀ ಕಲ್ಚರ್ನ ಕಲ್ಪನೆ ಉನ್ನತ ವರ್ಗದ ಮಹಿಳೆಯರಿಗೆ ಟೈಮ್ ಪಾಸ್ ಮಾಡುವ ಒಂದು ವಿಧಾನವಾಗಿತ್ತು. ಇದರಲ್ಲಿ ಬಗೆಬಗೆಯ ಆಟಗಳನ್ನು ಆಡಲಾಗುತ್ತದೆ. ಕ್ರಮೇಣ ಇದು ಸಮಾಜದ ಇತರೆ ವರ್ಗಗಳಲ್ಲೂ ಪ್ರಚಲಿತವಾಗುತ್ತ ಹೋಯಿತು. ಮಧ್ಯಮ ವರ್ಗದ ಮಹಿಳೆಯರು ಇದನ್ನು ಮನರಂಜನೆಯ ಜೊತೆ ಜೊತೆಗೆ ಹಣ ಸಂಗ್ರಹಿಸುವ ಒಂದು ಸದವಕಾಶವಾಗಿ ಬಳಸಿಕೊಂಡರು.
ಇತ್ತೀಚಿನ ವರ್ಷಗಳಲ್ಲಿ ಈ ಟ್ರೆಂಡ್ನಲ್ಲಿ ಹೊಸ ಬದಲಾವಣೆ ಉಂಟಾಗಿದೆ. ಈಗ ಮಹಿಳೆಯರ ಜೊತೆ ಜೊತೆಗೆ ಅವರ ಪತಿಯಂದಿರು ಕೂಡ ಇದರಲ್ಲಿ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಇದಕ್ಕೆ `ಕಪಲ್ ಕಿಟೀ’ ಎಂದು ಹೆಸರು ಬಂದಿದೆ. ಸಾಮಾನ್ಯ ಕಿಟೀ ಪಾರ್ಟಿಗಳಂತೆ ಇದರಲ್ಲೂ ಕೂಡ ಜೋಡಿಗಳು ಒಂದೆಡೆ ಸೇರಿ ಮನರಂಜನೆಯ ಜೊತೆ ಜೊತೆಗೆ ಊಟತಿಂಡಿ ಸೇವನೆ ಮಾಡುತ್ತಾರೆ.
ಸಮಯದ ಬೇಡಿಕೆ
`ಕಪಲ್ ಕಿಟೀ’ ಇದು ಇಂದಿನ ಸಮಯದ ಬೇಡಿಕೆಯಾಗಿದೆ. ಏಕೆಂದರೆ ಮಕ್ಕಳು ಶಾಲೆಗೆ ಹೋದ ಬಳಿಕ ಗಂಡಹೆಂಡತಿ ಇಬ್ಬರೂ ಏಕಾಂಗಿಯಾಗುತ್ತಾರೆ. ಈ ಸ್ಥಿತಿಯಲ್ಲಿ ಅವರಿಗೆ, ಇಂತಹ ಗ್ರೂಪ್ವೊಂದರ ಸದಸ್ಯರಾಗುವುದು ಅನಿವಾರ್ಯವಾಗುತ್ತದೆ. ಅಲ್ಲಿ ಇರುವ ತಮ್ಮ ಸಮಾನ ವಯಸ್ಸಿನವರ ಜೊತೆ ನಗುನಗುತ್ತಾ ಕಾಲ ಕಳೆಯುವುದು ಸಾಧ್ಯವಾಗುತ್ತದೆ. ತಮ್ಮ ತಮ್ಮ ಸಮಸ್ಯೆಗಳನ್ನು ವಿನಿಮಯ ಮಾಡಿಕೊಂಡು ಅದಕ್ಕೆ ಅವರವರೇ ಪರಿಹಾರಗಳನ್ನು ಕೂಡ ಕಂಡುಕೊಳ್ಳುತ್ತಾರೆ. ಇದರ ಹೊರತಾಗಿ ಕಿಟೀ ಸರ್ವೀಸ್ ಕ್ಲಾಸ್ನವರಿಗೂ ಹಲವು ನಿಟ್ಟಿನಲ್ಲಿ ಲಾಭಕಾರಿಯಾಗಿ ಪರಿಣಮಿಸುತ್ತದೆ. ಏಕೆಂದರೆ ಅವರಿಗೆ ಪ್ರತಿ 2-3 ವರ್ಷಗಳಿಗೆ ವರ್ಗವಣೆ ಆಗುತ್ತಿರುತ್ತದೆ. ಅವರಿಗೆ ಹೊಸದೊಂದು ನಗರದಲ್ಲಿ ಜೀವನವನ್ನು ಝೀರೋದಿಂದ ಶುರು ಮಾಡಬೇಕಿರುತ್ತದೆ.
ಹೊಸ ನಗರದಲ್ಲಿ ಆಸರೆ
ನಿಶ್ಚಲಾಳ ಪತಿಯ ವರ್ಗವಣೆ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಆಗಿತ್ತು. ಅವರು ಒಂದು ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಬಾಡಿಗೆಗೆ ಪಡೆದರು. ಒಂದು ದಿನ ನೆರೆಮನೆಯಾಕೆ ಕಪಲ್ ಕಿಟೀ ಬಗ್ಗೆ ಹೇಳಿದಳು. ನಿಶ್ಚಲಾ ಪತಿ ಉದಯ್ ಜೊತೆ ಚರ್ಚೆ ಮಾಡಿ, ಪತಿಯ ಜೊತೆ ಸದಸ್ಯತ್ವ ಪಡೆದಳು.
ನಿಶ್ಚಲಾ ಹೇಳುತ್ತಾಳೆ, “ನಾವು ಈ ನಗರದ ಬಗ್ಗೆ ಅಷ್ಟಾಗಿ ಅರಿತಿರಲಿಲ್ಲ. ಆದರೆ `ಕಪಲ್ ಕಿಟೀ’ಯ ಕಾರಣದಿಂದ ನನಗೆ ತುಂಬಾ ಒಳ್ಳೆಯ ಸ್ನೇಹಿತರು ದೊರೆತರು. ಮಕ್ಕಳನ್ನು ಯಾವ ಶಾಲೆಗೆ ಸೇರಿಸಿದರೆ ಸೂಕ್ತ ಎಂಬುದನ್ನು ಕೂಡ ಅವರು ಸೂಚಿಸಿದರು. ಎಲ್ಲರೂ ಏಕಕಾಲಕ್ಕೆ ಭೇಟಿಯಾಗಿದ್ದರಿಂದ ನಮಗೆ ಆ ಬಳಿಕ ಏಕಾಂಗಿತನದ ಭಾವನೆ ಉಂಟಾಗಲೇ ಇಲ್ಲ.”
ತೋರಿಕೆಗೆ ಮಾತ್ರ
ಸ್ನೇಹಾ ಆರಂಭದಲ್ಲಿ ಕಿಟೀ ಪಾರ್ಟಿಯನ್ನು ಮಹಿಳೆಯರ ಮುಖಾಂತರ ಬಟ್ಟೆ, ಆಭರಣ ಪ್ರದರ್ಶನದ ಒಂದು ಶೋ ಎಂದು ಭಾವಿಸಿದ್ದಳು. ಅದೊಂದು ದಿನ ಅವಳ ಸ್ನೇಹಿತೆ ಸ್ನೇಹಾಳನ್ನು ಒಂದು `ಕಪಲ್ ಕಿಟೀ’ಗೆ ಕರೆದೊಯ್ದು ಸದಸ್ಯತ್ವ ನೀಡಿದಳು.
ಸ್ನೇಹಾ ಈ ಕುರಿತಂತೆ ಹೇಳುತ್ತಾಳೆ, “ಅಲ್ಲಿ ಸೇರ್ಪಡೆಗೊಂಡ ಬಳಿಕ ನನಗೆ ಈ ಪ್ರಕಾರದ ಗ್ರೂಪ್ಗಳು ಇಂದಿನ ಯುಗದ ಅವಶ್ಯಕತೆ ಎನ್ನುವುದು ಮನದಟ್ಟಾಯಿತು. ತಿಂಗಳಿಗೊಂದು ದಿನ ಸೇರಿ ಎಷ್ಟೊಂದು ಖುಷಿಪಡುತ್ತೇವೆಂದರೆ, ಮುಂದಿನ ತಿಂಗಳ ಕಿಟೀ ಪಾರ್ಟಿಗೆ ನಿರೀಕ್ಷೆ ಮಾಡುವಂತಾಗುತ್ತದೆ.”
ವಿಜಯ್ ನಿವೃತ್ತರಾಗಿ 1-2 ವರ್ಷಗಳಾಗಿತ್ತು. ಅವರ ಮಕ್ಕಳು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಗಂಡಹೆಂಡತಿ ಇಬ್ಬರೂ ಈ ರೀತಿ ಒಂದು ಗ್ರೂಪ್ಗೆ ಸೇರಿಕೊಂಡರು.
ಅವರು ಈ ಕುರಿತಂತೆ ಹೇಳುತ್ತಾರೆ, “ನಾವು ಇಬ್ಬರೂ ಜೊತೆ ಜೊತೆಗೆ ಹೋಗುತ್ತೇವೆ. ಅಲ್ಲಿನ ಸದಸ್ಯರೇ ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ. ಮಕ್ಕಳು ದೂರ ಇದ್ದಾರೆ. ಅವರಿಂದ ಸಹಾಯ ಅಪೇಕ್ಷಿಸುವುದು ಕಷ್ಟ. ಈಗ ನಮ್ಮ ಒಡನಾಟ ಗ್ರೂಪ್ ಸದಸ್ಯರ ಜೊತೆ ಹೆಚ್ಚಿಗೆ ಇದೆ.”
ಕಪಲ್ ಕಿಟೀ ಹೆಸರಿನಲ್ಲಿ ಕೆಲವು ಅನೈತಿಕ, ಪರಸ್ಪರ ವ್ಯಭಿಚಾರ ಹಾಗೂ ವಿವಾಹಬಾಹಿರ ಸಂಬಂಧಗಳ ಮಾತುಗಳು ಕೂಡ ಕೇಳಿ ಬರುತ್ತಿವೆ. ಪ್ರತಿಯೊಂದು ಕಡೆ ಒಳಿತಿನ ಜೊತೆ ಕೆಡಕು ಕೂಡ ಇದೆ. ಹೀಗಾಗಿ ಅಂತಹ ಗ್ರೂಪ್ ಸೇರುವ ಮುಂಚೆ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
– ನಿಮಗೆ ತಕ್ಕ ಗ್ರೂಪ್ನಲ್ಲಷ್ಟೇ ಸೇರ್ಪಡೆ ಆಗಿ. ಅಂಜಲಿ ತನ್ನ ಗೆಳತಿಯ ಹೇಳಿಕೆಯ ಮೇರೆಗೆ ಒಂದು ಗ್ರೂಪ್ ಜಾಯಿನ್ ಆಗಿದ್ದಳು. ಅಲ್ಲಿ ಆಕೆ ಪತಿಯ ಜೊತೆ 2-3 ಸಲ ಹೋಗಿದ್ದಳಷ್ಟೇ. ಅವಳಿಗೆ ಅಲ್ಲಿನ ವಾತಾವರಣ ಸರಿಹೊಂದಲಿಲ್ಲ. ಅಲ್ಲಿನ ಹೆಚ್ಚಿನ ಸದಸ್ಯರು ದೊಡ್ಡ ದೊಡ್ಡ ಬಿಸ್ನೆಸ್ ಮೆನ್ಗಳು. ಅವರು ಮಾಂಸ-ಮದ್ಯದ ದಾಸರು. ಆಕೆ ಮತ್ತು ಪತಿ ಅಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಬೇಕಾಯಿತು.
– ಇಂತಹ ಕಿಟೀಗಳಲ್ಲಿ ಮಹಿಳೆಯರು ಪುರುಷರು ಎಲ್ಲರೂ ಇರುತ್ತಾರೆ. ಹೀಗಾಗಿ ಮಾತುಕಥೆ ವರ್ತನೆ ಸಮತೋಲನದಲ್ಲಿರುವಂತೆ ನೋಡಿಕೊಳ್ಳಿ. ನಿಮ್ಮ ಖಾಸಗಿ ಜೀವನದಲ್ಲಿ ಪ್ರವೇಶಿಸಲು ಯಾರಿಗೂ ಅವಕಾಶ ಕೊಡಬೇಡಿ.
– ನೀವು ಆ ಗ್ರೂಪ್ಗೆ ಹೊಂದುತ್ತಿಲ್ಲ ಎಂದು ತಿಳಿಯುತ್ತಿದ್ದಂತೆ ಅಲ್ಲಿಂದ ಹೊರಬರಲು ತಡಮಾಡಬೇಡಿ. ನೀವು ಅಲ್ಲಿ ಸೇರಿರುವುದು ಮನರಂಜನೆಗಾಗಿ ಹೊರತಾಗಿ ಅಲ್ಲಿಂದ `ಟೆನ್ಶನ್’ ಹೊತ್ತುಕೊಂಡು ಹೋಗೋಕೆ ಅಲ್ಲ.
– ಕೆಲವೊಮ್ಮೆ ಚಿಕ್ಕಪುಟ್ಟ ಸಂಗತಿಗಳಿಗೆ ಹೆಚ್ಚು ಒತ್ತಡ ಕೊಡಬೇಡಿ. ಯಾರಾದರೂ ಸದಸ್ಯರು ನಿಮ್ಮ ಮನಸ್ಸಿಗೆ ನೋವಾಗುವಂತೆ ಮಾತನಾಡಿದರೆ ಅದನ್ನು ನಕ್ಕು ತಳ್ಳಿಹಾಕಿಬಿಡಿ. ಅದನ್ನು ಪ್ರತಿಷ್ಠೆ ಎಂಬಂತೆ ಪರಿಗಣಿಸಬೇಡಿ.
– ವಿನುತಾ