ಬಾಲ್ಯದಿಂದಲೇ ಗಂಡು ಹುಡುಗರಿಗೆ ಆಟಿಕೆಯ ಕಾರು, ವಿಡಿಯೋ ಗೇಮ್ಸ್, ಗಿಫ್ಟ್ ಆಗಿ ದೊರೆತರೆ, ಹುಡುಗಿಯರಿಗೆ ಮಾತ್ರ ಗಿಫ್ಟ್  ಆಗಿ ಮೊದಲ ಆಯ್ಕೆ ಗೊಂಬೆಗಳೇ ಆಗಿರುತ್ತವೆ. ದೊಡ್ಡವರಾದ ಮೇಲೂ ಸಹ ಸಮಾಜದ ದೃಷ್ಟಿಯಲ್ಲಿ ಹೆಣ್ಣು ಅಡುಗೆ ಮಾಡುತ್ತಾ ಮನೆಗಷ್ಟೇ ಸೀಮಿತವಾಗಿದ್ದರೆ ಸರಿ ಎಂದೇ ಇಂದಿಗೂ ಬಿಂಬಿಸಲಾಗುತ್ತದೆ. ಮನೆ, ಕುಟುಂಬ, ಅಡುಗೆಮನೆಯ ಹೊಸಿಲು ದಾಟಿ ಹೊರಬರುವಷ್ಟರಲ್ಲಿ ಅದೃಶ್ಯ ಗೋಡೆಗಳು ಅವಳನ್ನು ಮುಂದುವರಿಯದಂತೆ ಸದಾ ತಡೆಯುತ್ತವೆ.

ಕಾಲ ಕಳೆದಂತೆ ಹೆಂಗಸರು ಈ ಅದೃಶ್ಯ ಗೋಡೆ ಅಥವಾ ಗ್ಲಾಸ್‌ ಸೀಲಿಂಗ್‌ ರೂಪದ ಅಡ್ಡಿ ಅಡಚಣೆಗಳನ್ನು ದಾಟಿ ಮುಂದುವರಿಯುವ ಉತ್ಸಾಹ, ಸಾಹಸ ತೋರುತ್ತಿದ್ದಾರೆ. ಮೇರಿ ಕೋಮ್ ಅಥವಾ ಫೈರ್‌ ಫೈಟರ್‌ ಹರ್ಷಿಣಿ ಹಾನ್ಹೇಕರ್‌ ಇರಲಿ,  ಯಾವ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಮಹಿಳೆಯರು ಅನ್‌ಫಿಟ್‌ ಎನ್ನುತ್ತಿದ್ದರೋ ಅಂಥ ಕಡೆ ಗುರಿ ಸಾಧಿಸಿ ಸೈ ಎನಿಸಿದ್ದಾರೆ. ಅಂಥ ಕಡೆಯ ಗ್ಲಾಸ್‌ ಸೀಲಿಂಗ್‌ ಸವಾಲಿಗೇ ಪಣವೊಡ್ಡಿದ್ದಾರೆ. ಇತ್ತೀಚೆಗೆ ದೇಶದ ಮೂವರು ಮೊದಲ ಮಹಿಳಾ ಫೈಟರ್ಸ್‌ ಆದ ಅನಿ ಚತುರ್ವೇದಿ, ಭಾವನಾ ಕಂಠ್‌, ಮೋಹನಾಸಿಂಗ್‌ ಫೈಟರ್‌ ಪ್ಲೇನ್‌ ಉಡಾಯಿಸಿ ರೆಕಾರ್ಡ್‌ ಸ್ಥಾಪಿಸಿದ್ದಾರೆ.

ಒಂದು ಅದೃಶ್ಯ ಗೋಡೆ

ಮಹಿಳೆಯರು ಇಂದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಸೈ ಎನಿಸಿದ್ದಾರೆ. ಜರ್ಮನ್‌ ಚಾನ್ಸೆಲರ್‌ ಏಂಜೆಲಾ ಮಾರ್ಕೆಲ್‌ ಅಥವಾ ಫೇಸ್‌ಬುಕ್‌ ಚೀಫ್‌ ಆಪರೇಟಿಂಗ್‌ ಆಫೀಸರ್‌ ಶೆರಿಲ್‌ ಅಥವಾ ಅಮೆರಿಕಾದ ಡೆಮೋಕ್ರಾಟಿಕ್‌ ಪ್ರೆಸಿಡೆನ್ಶಿಯಲ್ ನಾಮಿನಿ ಹಿಲೆರಿ ಕ್ಲಿಂಟೆನ್‌ ಇರಲಿ, ಇವರುಗಳೆಲ್ಲ ವಿಶ್ವದ ಅತ್ಯುನ್ನತ ಪ್ರಭಾವಶಾಲಿ ಹುದ್ದೆಗಳಲ್ಲಿ ಗೆದ್ದು ತೋರಿಸಿದ್ದಾರೆ.

ಇಂದಿಗೂ ಸಹ ಹೆಂಗಸರು ತಮಗೆ ಸಿಗಬೇಕಾದ ಪ್ರತಿಷ್ಠೆ ಮಾನ ಸನ್ಮಾನಗಳಿಗಾಗಿ ಎಷ್ಟೋ ಪ್ರಯಾಸ ಪಡಬೇಕಾಗಿದೆ ಎಂಬುದು ಬೇರೆ ವಿಷಯ. ಆದರೆ ಇವರ ಸಮಾನ ಯೋಗ್ಯರಾದ ಸಹೋದ್ಯೋಗಿ ಗಂಡಸರಿಗೆ ಅದು ಸಹಜವಾಗಿಯೇ ಸಿಗುತ್ತದೆ. ಯಶಸ್ಸಿನ ಮಾರ್ಗದ ಈ ಅದೃಶ್ಯ ಗೋಡೆಯ ಮೇಲೆ ಬಿರುಕುಗಳೇನೋ ಮೂಡಿವೆ, ಆದರೆ ಈಗಲೂ ಇದನ್ನು ಪೂರ್ತಿಯಾಗಿ ಕೆಡವಲಾಗಿಲ್ಲ.

ಪುರುಷ ಮಾನಸಿಕತೆ

ವಿಶ್ವದ ಅತಿ ಶಕ್ತಿಶಾಲಿ ರಾಷ್ಟ್ರ ಅಮೆರಿಕಾಗೆ 2016, ಅದರಲ್ಲೂ ಮಹಿಳೆಯರಿಗೆ ಐತಿಹಾಸಿಕ ಎನಿಸಿದೆ. ಮೊಟ್ಟ ಮೊದಲ ಬಾರಿಗೆ ಹಿಲೆರಿ ಕ್ಲಿಂಟನ್‌ ಅಮೆರಿಕಾದ ರಾಷ್ಟ್ರಪತಿ ಪದವಿಗಾಗಿ ಮೊದಲ ಮಹಿಳಾ ಅಭ್ಯರ್ಥಿಯಾಗಿ ಆರಿಸಲ್ಪಟ್ಟರು. ಅವರ ನಾಮಿನೇಶನ್‌ ಸಂದರ್ಭದಲ್ಲಿ ಸಮಾಜದಲ್ಲಿ ಬೇಕೆಂದೇ ಮಹಿಳಾ ನಾಯಕಿಯರ ಕುರಿತಾಗಿ ಅವಿಶ್ವಾಸ, ಅಡೆತಡೆಗಳು, ನಿಷೇಧ ಮುಂತಾದ ವಿಷಯಗಳು ಮುಂದುವರಿದಿವೆ ಎಂದು ತಿಳಿಯಿತು. ಈ ಬೆಂಕಿಯನ್ನು ಭಯಂಕರ ಜ್ವಾಲೆಯಾಗಿಸುವ ಕೆಲಸವನ್ನು ಇಂಟರ್‌ನೆಟ್‌  ಸೋಶಿಯಲ್ ಮೀಡಿಯಾ ಮಾಡಿದೆ. ಹಿಲರಿ ಹೆಣ್ಣಾಗಿದ್ದುದೇ ಈ ಆಕ್ರೋಶಕ್ಕೆಲ್ಲ ಮೂಲವಾಗಿತ್ತು. ಪ್ರೆಸಿಡೆನ್ಶಿಯಲ್ ಡಿಬೆಟ್‌ ಸಂದರ್ಭದಲ್ಲಿ ಹಿಲೆರಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಅವರ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ 51 ಸಲ ಇವರ ಮಾತಿಗೆ ಅಡ್ಡಿಪಡಿಸಿದರು. ಇದು ಪುರುಷ ಮಾನಸಿಕತೆಯ ಪ್ರತೀಕವಲ್ಲದೆ ಮತ್ತೇನು? ಅಸಲಿಗೆ, ಇದು ಗಂಡಸರ ಒಂದು ಸ್ವಾಭಾವಿಕ ಪ್ರವೃತ್ತಿಯೇ ಆಗಿದೆ. ಆ ಮೂಲಕ ಅವರು ಹೆಂಗಸರ ಮೇಲೆ ತಮ್ಮ ಸರ್ವೋಚ್ಚ ವ್ಯವಹಾರವನ್ನು ತೋರಿಸಿಕೊಳ್ಳಲು ಈ ರೀತಿ ಆಡುತ್ತಾರೆ.

ಇಲ್ಲಿನ ವಿಡಂಬನೆ ಎಂದರೆ, ಭೇದಭಾವ ಕೇವಲ ಪ್ರಬುದ್ಧರು ಅಥವಾ ಉನ್ನತ ಪದವಿಯಲ್ಲಿರುವವರಿಗೆ ಮಾತ್ರವಲ್ಲ, ಸಾಧಾರಣ ಆಫೀಸ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಜೊತೆಯೂ ಇದೇ ಆಗುತ್ತದೆ. ಗೃಹಿಣಿಯರಿಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಉದ್ಯೋಗಸ್ಥ ವನಿತೆಯರೊಂದಿಗೂ ಈ ಭೇದಭಾವ ತಪ್ಪಿದ್ದಲ್ಲ.

ಅಸುರಕ್ಷತೆಯ ಭಾವನೆ

ಈ ಸಂದರ್ಭದ ಕುರಿತಾಗಿ ಲೇಖಕಿ ಸ್ವಾತಿ ಲಾಹೋರಿ ತಮ್ಮ ಅನುಭವ ಹಂಚಿಕೊಳ್ಳುತ್ತಾ, “ಮದುವೆಗೆ ಮೊದಲೇ ನಾನು ಇಂಗ್ಲಿಷ್‌ ಎಂ.ಎ ಮಾಡಿಕೊಂಡಿದ್ದೆ. ಮದುವೆ ನಂತರ ಎರಡೂ ಕಡೆ ನಿಭಾಯಿಸುತ್ತಾ ಫುಲ್ ಕೂಡ ಮಾಡಿಕೊಂಡೆ. ನನ್ನ ಮೊದಲ ಜಾಬ್‌ ಒಂದು ಸಾಫ್ಟ್ ವೇರ್‌ ಕಂಪನಿಯಲ್ಲಿ ಆಯಿತು. ಅಲ್ಲಿನ ನನ್ನ ಇಮಿಡಿಯೇಟ್‌ ಬಾಸ್‌ಗೆ ಸದಾ ನನ್ನ ಮೇಲೆ ಇರಿಸುಮುರಿಸು. ಏಕೆಂದರೆ ನನ್ನ ಅಕ್ಯಾಡೆಮಿಕಲ್ ನಾಲೆಜ್‌ ಆತನಿಗಿಂತ ಹೆಚ್ಚಿತ್ತು. ನಾನು ಮಾರ್ಕೆಟಿಂಗ್‌ನಲ್ಲಿ ಟ್ರೇನಿ ಹಾಗೂ ಆತ ಜನರಲ್ ಮ್ಯಾನೇಜರ್‌. ಒಂದು ಮೀಟಿಂಗ್‌ನಲ್ಲಿ  ಸಾಹೇಬರು ಏನೋ ಕುರಿತು ಹೇಳಿದಾಗ ಈ ಸಾಹೇಬನಿಗೆ ಅದೇನೆಂದು ತಿಳಿಯಲಿಲ್ಲ. ಆಗ ಸೂಪರ್‌ ಬಾಸ್‌ ಎದುರು ನಾನು ಇದರ ಅರ್ಥ `ನಾನ್‌ ಪರ್ಫಾರ್ಮಿಂಗ್‌ ಅಸೆಟ್ಸ್’ ಎಂದು ವಿವರಿಸಿದಾಗ ಆತನ ಅಹಂಗೆ ಪೆಟ್ಟಾಯಿತು. ಬೇರೆ ನೆಪ ಹೂಡಿ ನನ್ನನ್ನು ಬೈದರು.

“ಇಂಥ ಘಟನೆಗಳು ಎಷ್ಟೋ  ಸಲ ಆಯಿತು. ತಮ್ಮ ಜೂನಿಯರ್‌ಗಿರುವ ಜ್ಞಾನ ಕಂಡು ಆತ ಖುಷಿಪಡುತ್ತಾರೆ ಎಂದುಕೊಂಡೆ. ಆದರೆ ಆತನಲ್ಲಿ ಅಸುರಕ್ಷತೆಯ ಭಾವನೆ ಹೆಚ್ಚತೊಡಗಿತು. ಹೀಗಾಗಿ ಆತನಿಗೆ ನನ್ನ ಸಹಾಯ ಬೇಕಿಲ್ಲ ಎನ್ನುವುದನ್ನು ಮ್ಯಾನೇಜ್‌ಮೆಂಟ್‌ಗೆ ಒಪ್ಪಿಸಿ, ನಾನು ಆ ಹುದ್ದೆ ಕಳೆದುಕೊಳ್ಳುವಂತೆ ಮಾಡಿದ. ಪರಿಣಾಮವಾಗಿ ನನಗೆ ಕಂಪನಿ ಸೆಕ್ರೆಟರಿ ತರಹ ಅಗ್ರಿಮೆಂಟ್ಸ್ ಮಾಡು, ಡೇಟಾ ಎಂಟ್ರಿ ತರಹದ ಕ್ಲೆರಿಕಲ್ ಕೆಲಸ ಕೊಡತೊಡಗಿದರು. ನನಗೆ ಪ್ರಗತಿ ತಂದುಕೊಡಲಾರದ ಆ ಗ್ಲಾಸ್‌ ಸೀಲಿಂಗ್‌ ಯಾವುದು ಎಂದು ಕೊನೆಗೂ ಅರ್ಥವಾಗಲಿಲ್ಲ.

“ಅದಾದ ಮೇಲೆ ನಾನು ಒಂದು ಪ್ರಸಿದ್ಧ ಆ್ಯಡ್‌ ಏಜೆನ್ಸಿಗೆ ಸೇರಿದೆ. ಇಂಥ ಕಡೆ ಕೇವಲ ಉತ್ತಮ ಕೆಲಸ, ಮೆರಿಟ್‌ಗೆ ಮಾತ್ರ ಮನ್ನಣೆ ಎಂದು ಅರಿತಿದ್ದೆ. ಇದರಲ್ಲಿ ನನ್ನ ವಯಸ್ಸು, ಹೆಣ್ಣೋ ಗಂಡೋ ಎಂಬುದು ಮುಖ್ಯವಲ್ಲ ಎಂದುಕೊಳ್ಳುತ್ತಿದ್ದೆ. ಆದರೆ ನನ್ನ ಈ ಎಣಿಕೆ ತಪ್ಪು ಎಂದು ಗೊತ್ತಾಯಿತು. ವಯಸ್ಸಿನಲ್ಲಿ ನನಗಿಂತಲೂ 10-12 ವರ್ಷ ಕಿರಿಯರಾದ ಬಾಸ್‌ಗೆ ರಿಪೋರ್ಟ್‌ ಮಾಡಿಕೊಳ್ಳುವುದು, ಚೆನ್ನಾಗಿಯೇ ಕೆಲಸ ಮಾಡಿದ್ದರೂ ಅವರಿಂದ  ಬೈಸಿಕೊಳ್ಳುವುದು, ನನ್ನ ಐಡಿಯಾಗಳನ್ನು ಅವರು ತಮ್ಮದೇ ಎಂಬಂತೆ ಪ್ರೆಸೆಂಟ್‌ ಮಾಡುವುದು… ಇತ್ಯಾದಿ ಎಲ್ಲವನ್ನೂ ನನ್ನ ಕೆರಿಯರ್‌ ಸರಿಹೋಗಲಿ ಎಂಬ ಒಂದೇ ಕಾರಣಕ್ಕಾಗಿ ಸಹಿಸುತ್ತಾ ಬಂದೆ.

“ಆದರೆ ಎಷ್ಟೆಂದು ಸಹಿಸಲು ಸಾಧ್ಯ? ಕೊನೆಗೂ ನಾನು ಆ ಕೆಲಸ ಬಿಡುವಂತಾಯಿತು. ಇಲ್ಲಿ ಇಷ್ಟೊಂದು ವೈಫಲ್ಯಗಳನ್ನು ಪಡೆದ ನಂತರ  ನನಗೊಂದು ಸುಂದರ ಅವಕಾಶ ಸಿಕ್ಕಿತು, ಅದು ನನ್ನ ಹಿರಿಯ ಮಗ ಪರೀಕ್ಷೆ ತಯಾರಿ ಶುರು ಮಾಡಿದಾಗ. ಇಲ್ಲಿ ಯಾವ ಗ್ಲಾಸ್‌ ಸೀಲಿಂಗೂ ನನ್ನ ಕೆಲಸಕ್ಕೆ ಅಡ್ಡಿ ಬರುವ ಪ್ರಮೇಯವಿರಲಿಲ್ಲ. ಮಗನ ಡೇಲಿ ರೊಟೀನ್‌ ನಿರ್ಧರಿಸುವುದು, ಕೋಚಿಂಗ್‌ ಕ್ಲಾಸ್‌ಗೆ ಹೋಗಿ ಅವನ ಪ್ರಾಧ್ಯಾಪಕರ ಜೊತೆ ಚರ್ಚಿಸಿ ಅವನ ಪ್ರಗತಿಯ ಬಗ್ಗೆ ತಿಳಿಯುವುದು, ಪಬ್ಲಿಕ್‌ ಪರೀಕ್ಷೆಗಳಲ್ಲಿ ಅವನಿಗೆ ಇಂಗ್ಲಿಷ್‌ ವಿಷಯಕ್ಕೆ ಪಾಠ ಹೇಳುವುದು ಇತ್ಯಾದಿಗಳಿಂದ ನನಗೆ ಹೆಚ್ಚಿನ ಆನಂದ ಸಿಗುತ್ತಿತ್ತು. ಜ್ಞಾನ, ಯೋಗ್ಯತೆ ಇದ್ದರೆ ಅದು ಎಂದಾದರೂ ಪ್ರಯೋಜನಕ್ಕೆ ಬರುತ್ತದೆ ಎಂಬುದು ಇಲ್ಲಿ ನಿಜವಾಯಿತು. ಇಷ್ಟೆಲ್ಲ ನಾನು ಕಷ್ಟಪಟ್ಟಿದ್ದು ವ್ಯರ್ಥವಾಗಲಿಲ್ಲ. ರಾಷ್ಟ್ರೀಯ ಮಟ್ಟದ ಲಾ ಪರೀಕ್ಷೆಯಲ್ಲಿ ನನ್ನ ಮಗ 544ನೇ ಅಂಕ ಗಳಿಸಿದ್ದ! ನನ್ನ ಈ ಯಶಸ್ಸಿನ ಕುರಿತಾಗಿ ನಾನು ನನ್ನ ಪುಸ್ತಕ `ಫ್ರೀ ಬರ್ಡ್‌ ಫ್ಲೈಟ್‌’ನಲ್ಲಿ ಸೂಚಿಸಿದ್ದೇನೆ. ಯಾವುದೇ ಅಡೆತಡೆಗಳು ನಿಮ್ಮ ಗುರಿಯನ್ನು ಅಲುಗಿಸಲಾರವು,” ಎನ್ನುತ್ತಾರೆ.

ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ 13 ಸಾವಿರ ಪ್ರೊಫೆಶನ್ಸ್‌ ಕುರಿತಾಗಿ ನಡೆಸಿದ ಒಂದು ಸಮೀಕ್ಷೆಯಿಂದಾಗಿ, 2017ರಲ್ಲಿ ಸಮಾನ ಹುದ್ದೆಗಾಗಿ ಮಹಿಳೆಯರ ವೇತನ ಗಂಡಸರಿಗೆ ಹೋಲಿಸಿದಾಗ 75% ಮಾತ್ರವೇ ಇದ್ದದ್ದು ತಿಳಿದುಬಂತು. ಕಳೆದ 5 ವರ್ಷಗಳಿಂದ ನಡೆಸಲಾಗುತ್ತಿರುವ ಈ ಅಧ್ಯಯನದಿಂದ, ವೇತನಗಳಲ್ಲಿ ಈ ವ್ಯತ್ಯಾಸ ಸತತ ಕಾಯಂ ಆಗಿ ಉಳಿದಿದೆ.

ಆಂತರಿಕ ಬಾಧೆಗಳು

ಅಧ್ಯಯನದಿಂದ ತಿಳಿದು ಬಂದ ಮತ್ತೊಂದು ವಿಷಯ ಎಂದರೆ ಸಾಮಾನ್ಯವಾಗಿ 10ರಲ್ಲಿ ಕೇವಲ ಒಬ್ಬ ಮಹಿಳೆ ಮಾತ್ರವೇ ಎಲ್ಲಕ್ಕೂ ಉನ್ನತ ಹುದ್ದೆ ಅಲಂಕರಿಸುತ್ತಾರೆ. ಆದರೆ ಸಣ್ಣಪುಟ್ಟ ಲೆವೆಲ್‌ನಲ್ಲಿ ಈ ಅಂತರ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಪ್ರಗತಿ ಪಥದಲ್ಲಿರುವ ಹೆಂಗಸರಿಗೆ ಕೆಲವು ಆಂತರಿಕ ಬಾಧೆಗಳು ತಪ್ಪಿದ್ದಲ್ಲ. ಇದರ ಕಾರಣ ಹೆಂಗಸರು ಅನೇಕ ಖ್ಯಾತ ಸಂಸ್ಥೆಗಳಲ್ಲಿ ಅತ್ಯುನ್ನತ ಹುದ್ದೆ ಏರಲು ಸಾಧ್ಯ ಆಗುವುದಿಲ್ಲ.

ಫೆಡರಲ್ ಗ್ಲಾಸ್‌ ಸೀಲಿಂಗ್‌ ಆಯೋಗ ಹೇಳುವುದೇನೆಂದರೆ, ಎಲ್ಲಕ್ಕೂ ಪ್ರಮುಖ ಬಾಧೆ ಎಂದರೆ ಸಾಮಾಜಿಕ ಜವಾಬ್ದಾರಿಗಳದ್ದು. ಇದು ಬಿಸ್‌ನೆಸ್‌ನ ಸೀದಾ ನಿಯಂತ್ರಣದಿಂದ ಹೊರಗುಳಿಯುತ್ತದೆ.

2ನೇ ಪ್ರಮುಖ ಸಮಸ್ಯೆ ಎಂದರೆ ಆಂತರಿಕ ಸಂರಚನಾತ್ಮಕ ಬಾಧೆ. ಇದು ಬಿಸ್‌ನೆಸ್‌ನ ಸೀದಾ ನಿಯಂತ್ರಣದಲ್ಲಿರುತ್ತದೆ. ಇದಲ್ಲದೆ ಹಲವಾರು ಸರ್ಕಾರಿ ಬಾಧೆಗಳಿರುತ್ತವೆ. ಹೆಂಗಸರಿಗಾಗಿ ಸಂರಕ್ಷಕ ಸಂಬಂಧವಾಗಿ ಕೆಲವು ಬಾಧೆಗಳಿರುತ್ತವೆ. ಇದರಲ್ಲಿ ಮಹಿಳಾ ಸಿಬ್ಬಂದಿಗೆ ಸಹಾಯ ಮಾಡುವ ಸಹಾಯಕರು ಅಥವಾ ಸಂರಕ್ಷಕರು ಕಡಿಮೆ ಲಭ್ಯವಿರುವುದೇ ದೊಡ್ಡ ಸಮಸ್ಯೆ ಆಗಿದೆ.

ಏನಿದು ಗ್ಲಾಸ್‌ ಸೀಲಿಂಗ್‌?

ಹ್ಯಾವ್ ಲೆಟ್‌ ಪ್ಯಾಕರ್ಡ್‌ (ಎಚ್.ಪಿ)ನ ಕ್ಯಾಥರೀನ್‌ ಲಾರೆನ್ಸ್ ಮೊದಲ ಸಲ 1979ರಲ್ಲಿ ಒಂದು ಚರ್ಚೆ ಮೂಲಕ `ದಿ ಗ್ಲಾಸ್‌ ಸೀಲಿಂಗ್‌’ನ ಪ್ರಸ್ತಾಪ ಮಾಡಿದರು. ಸಾಮಾನ್ಯವಾಗಿ ಇದು ಕೆರಿಯರ್‌ ಕ್ಷೇತ್ರದಲ್ಲಿ ಉನ್ನತ ಕನಸುಗಳನ್ನು ನನಸಾಗಿಸಿಕೊಳ್ಳಲು ಯತ್ನಿಸುವ ಹೆಂಗಸರ ಮಾರ್ಗ ಮಧ್ಯೆ ಬರುವ ಅದೃಶ್ಯ ತೆರೆಯ ಅಡ್ಡಿ ಆತಂಕಗಳಾಗಿವೆ.

ಸಾಮಾನ್ಯವಾಗಿ ಹೆಣ್ಣು ಮನೆಯಲ್ಲಿದ್ದು, ದೈನಂದಿನ ಮನೆಗೆಲಸ, ಮಗುವಿನ ಆರೈಕೆ ನೋಡಿಕೊಂಡು ಉಳಿಯಬೇಕೆಂಬುದು ಸಮಾಜದ ಅಪೇಕ್ಷೆ. ಹೀಗಿರುವಾಗ ಯಾರಾದರೂ ಹೆಂಗಸರು ಹೊರಗೆ ಕೆಲಸ ಮಾಡಲು ಹೊರಟರೆ, ಆಗಲೂ ಸಹ ಆಕೆ ಮನೆಯ ಇವೆಲ್ಲ ಕೆಲಸ ಮುಗಿಸಿಯೇ ಹೋಗಬೇಕೆಂದು ಅಪೇಕ್ಷಿಸುತ್ತಾರೆ. ಇದರ ಪರಿಣಾಮವಾಗಿ ಆಫೀಸಿನಲ್ಲಿ ಆಕೆಯ ಕೆಲಸ ಕೆಡುವ ಸಾಧ್ಯತೆಗಳೇ ಹೆಚ್ಚು. ಸದ್ಯಕ್ಕಂತೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಫ್ಲೆಕ್ಸಿಬಲ್ ವರ್ಕ್‌ ಟೈಂನ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಪಾಲನೆ ಪೋಷಣೆಯ ಅಗ್ಗದ ಅವಕಾಶಗಳು, ಮೆಟರ್ನಿಟಿ ಲೀವ್ ‌ನಲ್ಲಿ ಸಂಪೂರ್ಣ ಸ್ಯಾಲರಿ ಹಾಗೂ ತಂದೆ ಆದುದಕ್ಕೆ ತಂದೆಗೂ ರಜೆ, ಮಗು ಆದ ನಂತರ ಕೆಲಸಕ್ಕೆ ಮರಳಲು ಪ್ರೋತ್ಸಾಹಧನ ಇತ್ಯಾದಿ ನೀತಿಗಳು ಜಾರಿಗೆ ಬಂದಿವೆ. ಆದರೆ ಈ ನೀತಿಗಳು ನಿಜಕ್ಕೂ ಎಷ್ಟು ಪ್ರಯೋಗಶೀಲ ಎಂಬುದು ಯಕ್ಷ ಪ್ರಶ್ನೆಯೇ ಸರಿ.

ಗೃಹಿಣಿಯರೂ ಬಲಿಪಶುಗಳೇ!

ಕೇವಲ ಆಫೀಸುಗಳಲ್ಲಿ ಮಾತ್ರವಲ್ಲ, ಸಾಮಾನ್ಯ ಮನೆವಾರ್ತೆ ಹಾಗೂ ಮಕ್ಕಳ ಕೆರಿಯರ್‌ ಪ್ರಶ್ನೆ ಬಂದಾಗ ಅಥವಾ ಮನೆಯ ವಿಶೇಷ ನಿರ್ಧಾರಗಳ ಕುರಿತಾಗಿ ವಯಸ್ಸಿಗೆ ತಕ್ಕಂತೆ ಹೆಂಗಸರು ಗ್ಲಾಸ್‌ ಸೀಲಿಂಗ್‌ ಎದುರಿಸಬೇಕಾಗುತ್ತದೆ. 20-25 ವಯಸ್ಸಿನಲ್ಲಿ, ನೀನಿನ್ನೂ ಚಿಕ್ಕವಳು ನಿನಗೆ ಏನೂ ಗೊತ್ತಾಗೋಲ್ಲ, ಎಂದು ಮನೆಯವರು ಬಾಯಿ ಬಡಿಯುತ್ತಾರೆ. ಅಣ್ಣತಮ್ಮಂದಿರ ಸಮಕ್ಕೆ ಎಗರಾಡಬೇಡ ಎಂದು ಖಂಡಿಸುತ್ತಾರೆ. ನಿನ್ನ ಮದುವೆ ಜವಾಬ್ದಾರಿ ನಮ್ಮದು, ಎಂಥ ಹುಡುಗ ಆರಿಸಬೇಕು ಎನ್ನುವುದು ನಿನಗೇನು ಗೊತ್ತು ಎಂದು ಬಾಯಿ ಮುಚ್ಚಿಸುತ್ತಾರೆ. ಹೀಗೆ ತನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ತೀರ್ಮಾನಗಳನ್ನೂ ತಂದೆ, ಅಣ್ಣ ತಮ್ಮ, ಮನೆಯ ಹಿರಿಯ ಗಂಡಸರೇ ಹೊರುವಂತೆ ಆಕೆ ಮೇಲೆ ಹೇರಲಾಗುತ್ತದೆ. ಸಂಜೆ ಹೊರಗೆ ಸುತ್ತಾಡಬೇಡ, ಗಾಡಿ ಓಡಿಸುವ ಅಗತ್ಯವಿಲ್ಲ, ಕತ್ತಲೆಗೆ ಮುಂಚೆ ಮನೆ ಸೇರುವ, ಪ್ರವಾಸ, ಕೆಲಸ, ಕಾಲೇಜಿಗೆ ಬೇರೆ ಊರು ಬೇಡ…. ಇತ್ಯಾದಿ.

ಇದೇ ತರಹ 25-35ರ ಹರೆಯದ  ಹೆಂಗಸರು ಬೇರೆ ಬೇರೆ ತರಹದ ಅದೃಶ್ಯ ಪ್ರತಿಬಂಧಕಗಳಿಗೆ ಗುರಿಯಾಗುತ್ತಾರೆ. ಈ ಹೊತ್ತಿಗೆ ಅವರಿಗೆ ಮದುವೆಯಾಗಿ 1-2 ಮಕ್ಕಳಾಗಿರುತ್ತವೆ. ಅಂಥದ್ದರಲ್ಲಿ ಹುಡುಗಿ ಎಷ್ಟೇ ಕಲಿತವಳಾಗಿರಲಿ, ಕೆಲಸಕ್ಕೇ ಹೋಗಿರಲಿ, ವಿಷಯ ಮನೆಮಕ್ಕಳ ನಿರ್ಧಾರಗಳ ಕುರಿತಾಗಿ ಬಂದರೆ, ಹೊಂದಾಣಿಕೆ ಹೆಸರಲ್ಲಿ ತ್ಯಾಗ ಮಾಡುವವಳು ಹೆಣ್ಣೇ ಆಗಿರುತ್ತಾಳೆ.

35-45ರ ಹರೆಯದ ಹೆಂಗಸರ ಕಥೆ ಇನ್ನೊಂದು ತರಹ. ಇವರಿಗೂ ಗ್ಲಾಸ್‌ ಸೀಲಿಂಗ್‌ ತಪ್ಪಿದ್ದಲ್ಲ. ಮನೆಯ ದೊಡ್ಡ ದೊಡ್ಡ ತೀರ್ಮಾನಗಳು, ಮಕ್ಕಳ ಉನ್ನತ ಶಿಕ್ಷಣ ಅಥವಾ ಮದುವೆ ನಿರ್ಧಾರಗಳು, ಮೊಬೈಲ್ ರಿಮೋಟ್‌ ಮೇಲೆ ಯಾರ ಅಧಿಕಾರ ಇತ್ಯಾದಿ ಎಲ್ಲಾ ವಿಷಯಗಳಿಗೂ ಹೆತ್ತ ಮಕ್ಕಳಿಂದಲೇ ಕೇಳಬೇಕಾದ ಮಾತು ಎಂದರೆ, `ಅಮ್ಮ…. ನಿಂಗೆ ಇದೆಲ್ಲ ಗೊತ್ತಾಗೋಲ್ಲ!’

35-45ರ ಮಹಿಳೆಯರು ಬಹಳ ಔಟ್‌ಡೇಟೆಡ್‌ ಅಂತೇನಲ್ಲ. ಅವರೂ ಸಹ 1975-80 ಆಜೂಬಾಜಲ್ಲಿ ಹುಟ್ಟಿರುತ್ತಾರೆ. ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹೊರತುಪಡಿಸಿದರೆ ಉಳಿದೆಲ್ಲ. ವಸ್ತುಗಳೂ ಅವರ ಕಾಲದಲ್ಲೂ ಇದ್ದವು. ಈಗಲೂ ಕಾಲ ಮಿಂಚಿಲ್ಲ, ಈ ಆಧುನಿಕ ಪರಿಕರಗಳನ್ನು ಬಳಸುವ ಪರಿಯನ್ನು ಈಗಲೂ ಅವರು ಕಲಿಯಬಹುದಾಗಿದೆ.

ಗ್ಲೋಬಲ್ ಲಿಂಕರ್‌ನ ಸಹಸಂಸ್ಥಾಪಕಿ ಸುಮಾ ಗಂಭೀರ್‌ ಹೇಳುತ್ತಾರೆ, “ಕಳೆದ ಕೆಲವು ವರ್ಷಗಳಲ್ಲಿ ನಾವು ಅನೇಕ ಯಶಸ್ವಿ ಮಹಿಳೆಯರನ್ನು ಗುರುತಿಸಿದ್ದೇವೆ. ಇವರುಗಳು ಗ್ಲಾಸ್‌ ಸೀಲಿಂಗ್‌ ಮುರಿದು ಉನ್ನತ ಹುದ್ದೆಗಳನ್ನು ಅಲಂಕರಿಸಿ ವಿಶ್ವಖ್ಯಾತಿ ಪಡೆದಿದ್ದಾರೆ. ತಂತಮ್ಮ ಕ್ಷೇತ್ರಗಳಲ್ಲಿ ಲೀಡರ್‌ ಆಗಿರುವುದು ಮಾತ್ರವಲ್ಲದೆ, ಜೀವನದ ವಿವಿಧ ಕ್ಷೇತ್ರಗಳ ಪ್ರಬಂಧನವನ್ನೂ ಚೆನ್ನಾಗಿಯೇ ಮಾಡುತ್ತಾರೆ. ನನ್ನ ಅಭಿಪ್ರಾಯದಲ್ಲಿ ಇದಕ್ಕೆ ಮುಖ್ಯ ಕಾರಣ, ಮಹಿಳೆಯರು ಮಲ್ಟಿ ಟಾಸ್ಕರ್ಸ್‌ ಆಗಿರುವುದು. ಅವರು ಒಂದೇ ಸಲ ಹಲವು ಕೆಲಸಗಳನ್ನು ಸುಲಭವಾಗಿ ನಿಭಾಯಿಸಬಲ್ಲರು.

“ನನ್ನ ಕಂಪನಿ ಗ್ಲೋಬಲ್ ಲಿಂಕರ್‌ನ 5 ಜನ ಎಗ್ಸಿಕ್ಯುಟಿವ್‌ ಕಮಿಟಿಯಲ್ಲಿ ನಾನು ಒಬ್ಬಳೇ ಮಹಿಳೆ ಆಗಿದ್ದೆ. ನನ್ನ ಕುರಿತಾಗಿ ಈ ಟೀಮಿನಲ್ಲಿ ಬಹಳ ಹೆಚ್ಚಿನ ಎಕ್ಸ್ ಪೆಕ್ಟೇಶನ್ಸ್ ಇದೆ ಎಂದು ಗೊತ್ತಿತ್ತು. ಮಹಿಳಾ ಸಶಕ್ತೀಕರಣ ನನ್ನ ಕೆಲಸದ ಒಂದು ಭಾಗವೇ ಆಗಿದೆ. ಇದೇ ಉದ್ದೇಶಕ್ಕಾಗಿ ನಾವು ಫಿಕ್ಕಿ ಲೇಡೀಸ್‌ ಆರ್ಗನೈಸೇಷನ್‌ ಜೊತೆ ಇತ್ತೀಚೆಗಷ್ಟೆ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು ಇದರಲ್ಲಿ ನಾಲ್ವರು ಪ್ರಮುಖ ಮಹಿಳಾ ಉದ್ಯಮಿಗಳು ತಮ್ಮ ವ್ಯಾವಹಾರಿಕ ಅನುಭವ ಹಂಚಿಕೊಂಡರು. ಆ ರೀತಿ ಅವರು ಉದಯೋನ್ಮುಖ ಮಹಿಳಾ ಉದ್ಯಮಿಗಳಿಗೆ ಪ್ರೇರಣೆ ನೀಡಿದರು.”

ಗ್ಲಾಸ್‌ ಸೀಲಿಂಗ್‌ ಎಫೆಕ್ಟ್ಸ್

ಈ ಸಂದರ್ಭದಲ್ಲಿ ವಿಭಾ ಕಾಗಝಿ, ಫೌಂಡರ್‌ ಆಫ್‌ ರೀಚ್‌ ಐವಿ, ಹೇಳುತ್ತಾರೆ…. “ಮಹಿಳಾ ಉದ್ಯಮಿಗಳು ಗ್ಲಾಸ್‌ ಸೀಲಿಂಗ್‌ ಎಫೆಕ್ಟ್ಸ್ ನ್ನು ಎದುರಿಸಲೇಬೇಕು ಎಂಬುದು ನಿಜ. ಅವರು ಪ್ರಗತಿ ಪಥದಲ್ಲಿ ಮೇಲೇರುವುದನ್ನು ಒಂದು ಅದೃಶ್ಯ ತೆರೆ ತಡೆಯುತ್ತದೆ. ಎಷ್ಟೋ ಸಲ ಫೈನಾನ್ಶಿಯಲ್ ಇನ್‌ವೆಸ್ಟರ್ಸ್‌, ಬ್ಯಾಂಕರ್ಸ್‌ ಇಂಥ ಮಹಿಳಾ ಉದ್ಯಮಿಗಳ ಬಿಸ್‌ನೆಸ್‌ಗೆ ಬಂಡವಾಳ ಹೂಡಲು ಹಿಂಜರಿಯುತ್ತಾರೆ. ಅವರಿಗೆ ಮಹಿಳಾ ಉದ್ಯಮಿಗಳ ಬಗ್ಗೆ ಹೆಚ್ಚಿನ ಭರವಸೆ ಇರುವುದಿಲ್ಲ. ಎಷ್ಟೋ ಸಲ ಜನ ತಮ್ಮ ಸುಪೀರಿಯಾರಿಟಿ ತೋರಿಸಲು ಮಹಿಳಾ ಉದ್ಯಮಿಗಳನ್ನು ಕೀಳಾಗಿ ಬಿಂಬಿಸುತ್ತಾರೆ.

“ಒಬ್ಬ ಮಹಿಳೆ ಪ್ರತಿ ಸಲ ರಿಜೆಕ್ಷನ್‌ ಸಹಿಸಿ ಸಹಿಸಿ, ಆಕೆ ರೋಸಿಹೋಗಿ ಈ ಉದ್ಯಮದ ಸಹವಾಸವೇ ಬೇಡ ಎಂದು ಹಿಂದೆ ಸರಿಯುತ್ತಾಳೆ. ಆದರೆ ಹೆಂಗಸರು ಹೀಗೆ ಹಿಂಜರಿಯಬಾರದು. ಪ್ರತಿ ಬಂಧನವನ್ನೂ ಮುರಿದು ಮುನ್ನುಗ್ಗಬೇಕು. ತಮ್ಮ ನೆಗೆಟಿವ್‌ ಝೋನ್‌ನಿಂದ ಹೊರಬರಬೇಕು. ಯಾರು ಗಿವ್‌ ಅಪ್‌ ಮಾಡುದಿಲ್ಲವೋ ಅವರಿಗೆ ಮಾತ್ರ ಯಶಸ್ಸು ಲಭಿಸುತ್ತದೆ.

“ಇನ್ನು ಏಕಾಂಗಿ ಮಹಿಳೆ ಬಗ್ಗೆ ಹೇಳುವುದಾದರೆ, ಅಂಥವರಿಗೆ ಹೆಚ್ಚಿನ ಅಡ್ವಾಂಟೇಜಸ್‌ ಇವೆ. ಆದರೆ ಅವರು ಮೇಲ್‌ ಡಾಮಿನೇಟೆಡ್‌ ಸೊಸೈಟಿಯ ಸ್ಪೆಷಲ್ ರಿಜೆಕ್ಷನ್ಸ್ ನ್ನೂ ಎದುರಿಸಬೇಕಾಗುತ್ತದೆ. ಸಿಂಗಲ್ ವುಮನ್‌ ತನ್ನ ಗೋಲ್‌ ಓರಿಯೆಂಟೆಡ್‌ ಔಟ್‌ವರ್ಕ್‌ ಕಾರಣದಿಂದಲೂ ಹೆಚ್ಚು ಯಶಸ್ವಿ ಎನಿಸುತ್ತಾಳೆ. ಆದರೆ ವಿವಾಹಿತ ಮಹಿಳೆ ಕೂಡ ತನ್ನ ಕುಟುಂಬದ ಸಹಕಾರದಿಂದಾಗಿ, ಮನೆ, ಕೆರಿಯರ್‌ ಎರಡನ್ನೂ ಸಂಭಾಳಿಸುತ್ತಾ ಯಶಸ್ವೀ ಎನಿಸುತ್ತಾಳೆ. ಉದಾ: ಇಂದಿರಾ ನೂಯಿ, ವಾಣಿ ಕೋಲಾ, ಕಿರಣ್‌ ಮಜುಂದಾರ್‌, ಸುಧಾ ಮೂರ್ತಿ…. ಮುಂತಾದವರು.

ಜಾಬ್ಸ್ ಫಾರ್‌ ಹರ್‌ನ ಸಂಸ್ಥಾಪಕಿ ಸ್ನೇಹಾ ಬಗಾರಿಯಾ ಈ ಸಮಸ್ಯೆಗೆ ಪರಿಹಾರವಾಗಿ ಕೆಳಗಿನ ಸೂಚನೆಗಳನ್ನು ನೀಡುತ್ತಾರೆ :

ಮಕ್ಕಳಿಗೆ ಉತ್ತಮ ಶಿಕ್ಷಣ : ನಾವು ನಮ್ಮ ಮುಂದಿನ ಪೀಳಿಗೆಯನ್ನು ವಿಶೇಷ ಶಿಕ್ಷಣದ ಮೂಲಕ ಬೆಳೆಸಬೇಕಿದೆ. ಹೆಣ್ಣುಮಕ್ಕಳಿಗೆ ಬಾಲ್ಯದಿಂದಲೇ ಭರವಸೆ ತುಂಬಿ ಅವರು ಮುಂಬರುವ ಅಡೆತಡೆಗಳನ್ನು ದಾಟಿ ತಮ್ಮ ಕುಟುಂಬ, ಕೆರಿಯರ್‌, ಆಟಪಾಠ, ರಾಜಕೀಯ ಇತ್ಯಾದಿ ಎಲ್ಲದರಲ್ಲೂ ಯಶಸ್ವಿಯಾಗಿ ನೆಲೆ ನಿಲ್ಲುವಂತೆ ಮಾಡಬೇಕಿದೆ.

ಇದೇ ತರಹ ಹುಡುಗರಿಗೂ ಮೊದಲಿನಿಂದಲೇ ತಿಳಿಸಬೇಕಾದುದೆಂದರೆ ಹೆಣ್ಣು ಕೇವಲ ಕಾಮದ ಆಟಿಕೆಯಲ್ಲ, ಮನೆಗೆಲಸ ನೋಡಿಕೊಳ್ಳುವ ಗುಲಾಮಳೂ ಅಲ್ಲ, ಅವಳೂ ನಿನ್ನಂತೆಯೇ ಎಂಬುದು.

ನೆಟ್‌ವರ್ಕ್‌ ಸಶಕ್ತವಾಗಿರಲಿ : ವೈಯಕ್ತಿಕ ಹಾಗೂ ವ್ಯಾವಹಾರಿಕ ಜೀವನವನ್ನು ಹೆಣ್ಣು ಜೋಪಾನವಾಗಿ ಜೋಡಿಸಿ, ಸರಿತೂಗಿಸಬೇಕಿದೆ. ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ಬೇರೆ ಹೆಂಗಸರೊಡನೆ ಕೈ ಜೋಡಿಸಿ ನಿಮ್ಮ ನೆಟ್‌ವರ್ಕ್‌ ಹೆಚ್ಚಿಸಿಕೊಳ್ಳಿ. ಯಾವಾಗ ಸಹಾಯದ ಅಗತ್ಯ ಬೀಳುತ್ತದೋ ಆಗ ಇಂಥವರಿಂದ ನೇರ ಸಹಾಯ ಪಡೆಯಬಹುದು.

ಗಂಡಸರನ್ನು ಪ್ರತಿಸ್ಪರ್ಧಿಗಳಲ್ಲ ಸಹೋದ್ಯೋಗಿ ಎಂದು ಭಾವಿಸಿ : ಒಂದು ವಿಚಾರ ಸದಾ ಗಮನದಲ್ಲಿಡಿ. ಗಂಡು-ಹೆಣ್ಣು ಮಧ್ಯೆ ಯಾವುದೇ ತರಹದ ಪೈಪೋಟಿ ಇಲ್ಲ. ನಿಮ್ಮ ತಂದೆ ನಿಮಗೆ ರೋಲ್‌ ಮಾಡೆಲ್‌ ಆಗಬಹುದು. ಅಣ್ಣ ಮಾರ್ಗದರ್ಶಕ, ಪತಿ ಆಧಾರಸ್ತಂಭ ಆಗುತ್ತಾರೆ. ಇಂಥವರನ್ನು ಪ್ರತಿಸ್ಪರ್ಧಿ ಎಂದು ಭಾವಿಸದಿರಿ.

ಎಲ್ಲಕ್ಕೂ ಹೆಚ್ಚಿನ ಅಗತ್ಯವಿರುವುದು ಎಂದರೆ ಹೆಂಗಸರಾದ ನಾವು ನಮ್ಮ ಮಾನಸಿಕ ಯೋಚನಾಧಾಟಿಗಳನ್ನು ಬದಲಿಸಿಕೊಳ್ಳಬೇಕು. ಯಾವ ರೀತಿ ನಮ್ಮ ನಮ್ಮ ಸಬ್‌ಕಾನ್ಶಿಯಸ್‌ ಉನ್ನತ ಪೊಸಿಷನ್‌ನಲ್ಲಿರುವ ಯಶಸ್ವೀ ಮಹಿಳೆಯರ ಕುರಿತಾಗಿ ಎರಡು ರೀತಿಯ  ದೃಷ್ಟಿಕೋನ ಇರಿಸಿಕೊಳ್ಳುತ್ತದೋ, ಅದೇ ರೀತಿ ಮುಂದುವರಿಯದೆ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಆದಷ್ಟೂ ನಾವು ಈ ಪಕ್ಷಪಾತ ದೃಷ್ಟಿಕೋನ ಬಿಟ್ಟು, ಹೆಂಗಸರ ಯೋಗ್ಯತೆ ಗುರುತಿಸಿ, ಗಂಡಸರಿಗೆ ಕೊಟ್ಟಷ್ಟೇ ಸಮಾನ ಸ್ಥಾನಮಾನಗಳನ್ನು ನೀಡಬೇಕಿದೆ.

– ಜಿ. ಪಂಕಜಾ

ಧರ್ಮವೇ ಎಲ್ಲಕ್ಕೂ ಮೂಲ

ಸರಿಯಾದ ದೃಷ್ಟಿಯಲ್ಲಿ ನೋಡಿದರೆ ಗ್ಲಾಸ್‌ ಸೀಲಿಂಗ್‌ನ ಜಡ ಇರುವುದು ನಮ್ಮ ಧರ್ಮದಲ್ಲೇ! ನಮ್ಮ ಧರ್ಮಾಂಧ ಸಾಂಪ್ರದಾಯಿಕ ಮನೋಭಾವಗಳಲ್ಲಿ. ಅನಾದಿ ಕಾಲದಿಂದಲೂ ಧರ್ಮ ಗಂಡು-ಹೆಣ್ಣಿನ ಮಧ್ಯೆ ಅದೃಶ್ಯದ ಅಡ್ಡಗೋಡೆ ಎಬ್ಬಿಸಿಬಿಟ್ಟಿದೆ. ಮುಟ್ಟಿನ ದಿನಗಳಲ್ಲಿ ದೂರವಿರಿಸುವಿಕೆ, ಹೆಣ್ಣು ಎಂದಿದ್ದರೂ ಗಂಡಿಗೆ ಸಹಚರಿಯಾಗಿ ತಗ್ಗಿಬಗ್ಗಿ ನಡೆಯಬೇಕು ಎನ್ನುತ್ತಾ… ಇತ್ಯಾದಿ. ಭಾರತದಲ್ಲಂತೂ ಎಷ್ಟೋ ದೇವಾಲಯಗಳಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಅಲ್ಲಿನ ಕರ್ಮಕಾಂಡಗಳನ್ನು ಗಂಡಸರಷ್ಟೇ ನಿರ್ವಹಿಸಬೇಕಂತೆ. ಜಗತ್ತಿನ ಎಷ್ಟೋ ಧಾರ್ಮಿಕ ಗ್ರಂಥಗಳಲ್ಲಿ ಸ್ತ್ರೀಯರ ಜೀವನದ ಧ್ಯೇಯೋದ್ದೇಶಗಳನ್ನು ಮೊಟಕುಗೊಳಿಸಿ, ಹೆಣ್ಣನ್ನು ಗಂಡಿನ ಅಧೀಗೊಳಿಸಲಾಗಿದೆ. ಇಂಥ ಗೊಡ್ಡು ಪುರಾಣಗಳು ಹೆಣ್ಣಿಗೆ ಒಂದು ಭದ್ರ ಬೇಲಿ ಹಾಕಿ, ಅದೃಶ್ಯ ಗೋಡೆ ಎಬ್ಬಿಸಿ ಅವಳ ಪ್ರಗತಿಗೆ ಮಾರಕಾಗಿವೆ. ಇದೇ ಮುಂದೆ ಹೆಮ್ಮರವಾಗಿ ಬೆಳೆದು `ಗ್ಲಾಸ್‌ ಸೀಲಿಂಗ್‌’ನ ರೂಪ ಪಡೆದಿದೆ. ಆಧುನಿಕ ದೃಷ್ಟಿಕೋನದಿಂದ ಇವನ್ನು ಬದಲಿಸಬೇಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ