ವಕೀಲನಾಗಿದ್ದ ಅಳಿಯ ಹೆಂಡತಿಯನ್ನು ತವರಿಗೆ ಬಿಡಲು ಬಂದಾಗೆಲ್ಲ ಸದಾ ನೀಲಿ ಜೀನ್ಸ್, ಬಿಳಿಯ ಶರ್ಟ್‌ ಧರಿಸುತ್ತಿದ್ದ.

ಇದರಿಂದ ರೋಸಿಹೋದ ಅವನ ಅತ್ತೆ ಕೇಳಿಯೇಬಿಟ್ಟರು, “ಅಳೀಮಯ್ಯ ಯಾಕೆ  ಸದಾ ಇದೊಂದೇ ಬಟ್ಟೆ ಹಾಕ್ಕೊಂಡು ಬರ್ತೀರಿ?”

“ನಿಮ್ಮ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಪ್ರತಿ ಸಲ ನನ್ನ ಜೊತೆ ನನ್ನ ಹೆಂಡತಿಯನ್ನೇ ಕಳುಹಿಸುತ್ತೀರಲ್ಲ….?” ಎಂದ ಅಳೀಮಯ್ಯ.

ಅಂದಿನಿಂದ ಅವನಿಗೆ ಮಾವನ ಮನೆಯಲ್ಲಿ ಎಂಟ್ರಿ ಬಹಿಷ್ಕರಿಸಲಾಗಿದೆ!

ಪತಿ : ಡಾಕ್ಟರ್‌, ನನಗೆ ಜೀವನವೇ ಸಾಕಾಗಿಹೋಗಿದೆ. ನಾನು ಬಹಳ ಡಿಪ್ರೆಶನ್‌ಗೆ ಜಾರಿ ಹೋಗಿದ್ದೇನೆ…

ಡಾಕ್ಟರ್‌ : ಗಾಬರಿಗೊಳ್ಳಬೇಡಿ. ಏನಾಯಿತೆಂದು ವಿವರವಾಗಿ ಹೇಳಿ.

ಪತಿ : ಡಾಕ್ಟರ್‌, ನನ್ನ ಪತ್ನಿ ಪ್ರತಿ ದಿನ ಒಂದು ಡಿಸ್ಕೋಬಾರ್‌ಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಯಾರು ಪ್ರಪೋಸ್‌ ಮಾಡುತ್ತಾರೋ ಅವನ ಜೊತೆ ಸಂಜೆ ಕಳೆಯುತ್ತಾಳೆ.

ಡಾಕ್ಟರ್‌ : ಹ್ಞೂಂ… ಆರಾಮವಾಗಿ ಉಸಿರೆಳೆದುಕೊಳ್ಳಿ. ಈಗ ನಿಧಾನವಾಗಿ ಬಿಡಿ. ಮತ್ತೆ ನಿಧಾನವಾಗಿ ಉಸಿರು ಎಳೆದುಕೊಳ್ಳಿ. ಈಗ ಹೇಳಿ, ಯಾವ ಡಿಸ್ಕೋಬಾರ್‌ಗೆ ನಿಮ್ಮ ಪತ್ನಿ ದಿನಾ ಹೋಗುತ್ತಾರೆ?

ಕಿಟ್ಟಿ : ಗಂಡನ ಕಿವಿಗೆ ಯಾವಾಗ ಕಾದ ಸೀಸ ಹೊಯ್ದಂತೆ ಆಗುತ್ತದೆ?

ಗುಂಡ : ಅವನ ಮಾವನ ಮನೆಯರು ಇವರ ಮದುವೆ ಆಗಿ 10 ವರ್ಷ ಕಳೆದರೂ, `ನಮ್ಮ ಹುಡುಗಿ ಏನೂ ಅರಿಯದ ಮುಗ್ಧೆ’ ಎಂದು ಇನ್ನೂ ಪಲುಕರಿಸುತ್ತಿದ್ದರೆ…

ಗುಂಡ ಮೊದಲ ಸಲ ಬೆಂಗಳೂರಿನಿಂದ ದೆಹಲಿಗೆ ಅಂತ ವಿಮಾನದಲ್ಲಿ ಪ್ರಯಾಣ ಹೊರಟಿದ್ದ.

ಗಗನಸಖಿ : ಸಾರ್‌, ನಿಮಗೆ ಆರಾಮವಾಗಿರಲಿ ಅಂತ ವಿಮಾನದಲ್ಲೂ ಮನೆಯಂಥದ್ದೇ ವಾತಾವರಣ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ. ನಿಮಗೆ ಇಷ್ಟ ಆಯ್ತಲ್ವಾ?

ಗುಂಡ : ಬೇಡಮ್ಮ ಬೇಡ! ಆ ಹಾಳು ಮನೆಯ ವಾತಾವರಣ ಮರೆಯಬೇಕು ಅಂತ ತಾನೇ ನಾನು ಇಷ್ಟೆಲ್ಲ ಖರ್ಚು ಮಾಡಿಕೊಂಡು ವಿಮಾನದಲ್ಲಿ ಪ್ರಯಾಣ ಮಾಡ್ತಾ ಇರೋದು? ನಿಮ್ಮ ವಿಮಾನ ಪದ್ಧತಿ ಏನಿದೆಯೋ ಅದನ್ನೇ ಮುಂದುವರಿಸಿ.

ಗುಂಡಿ ಅಪರೂಪಕ್ಕೆ ವೆಜಿಟೆಬಲ್ ಸಾಗು ಮಾಡಿದ್ದಳು. ತಕ್ಷಣ ಅದನ್ನು ನೀಟಾಗಿ ಡೈನಿಂಗ್‌ ಟೇಬಲ್ ಮೇಲೆ ಅರೇಂಜ್‌ ಮಾಡಿ, ಫೋಟೋ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಳು.

ಗುಂಡ ಬಂದ ಮೇಲೆ ಎಲ್ಲರಿಗೂ ಊಟ ಬಡಿಸಲಾಯಿತು. ಗುಂಡಿ ಫೇಸ್‌ಬುಕ್‌ ನೋಡಿದ್ದೂ ನೋಡಿದ್ದೇ! ಆಗ ಯಾರೋ ಕಿರುಚಿದಂತಾಯ್ತು.

ಗುಂಡ : ಏನೇ ಇದೂ! ಇದರಲ್ಲಿ ಉಪ್ಪೇ ಇಲ್ಲ.

ಗುಂಡಿ :  ಅಯ್ಯೋ…. ನಿಮ್ಮ ಬಾಯಿ ಚಪಲಕ್ಕೆ ಏನು ಹೇಳಲಿ? ಬೆಳಗ್ಗಿನಿಂದ ಈ ಸಾಗುವಿಗೆ ಫೇಸ್‌ಬುಕ್‌ನಲ್ಲಿ 253 ಲೈಕ್ಸ್ ಮತ್ತು 98 ಜನ `ಯಮ್ಮೀ!’ ಅಂತ ಕಮೆಂಟ್‌ ಮಾಡಿದ್ದಾರೆ. ಸುಮ್ನೆ ಹಾಕಿದ್ದನ್ನು ತಿಂದು ಎದ್ದು ಹೋಗ್ರಿ!

ಪತ್ನಿ : ಏನೂಂದ್ರೆ… ನೀವು ನನ್ನನ್ನು ಎಷ್ಟು ಇಷ್ಟಪಡ್ತೀರಿ?

ಪತಿ : ತಾಜ್‌ಮಹಲ್ ಕಟ್ಟಿಸಿದನಲ್ಲ ಶಹಜಹಾನ್‌… ಅದಕ್ಕಿಂತ ಹೆಚ್ಚು!

ಪತ್ನಿ : ಹೌದೇ….? ಹಾಗಿದ್ರೆ ನಾನು ಸತ್ತ ನಂತರ ನನಗೂ ತಾಜ್‌ಮಹಲ್ ತರಹದ್ದೇ ಕಟ್ಟಿಸ್ತೀರಿ ತಾನೇ?

ಪತಿ : ಡಾರ್ಲಿಂಗ್‌, ನೀನು ಒಂದು ಫ್ಲಾಟ್‌ ತೋರಿಸಿಬಿಡು…. ಅಂಥದನ್ನಾದರೂ ಕಟ್ಟಿಸಲು ಯತ್ನಿಸುವೆ.

ಅಂದು ಹುಣ್ಣಿಮೆಯ ರಾತ್ರಿ. ಎಲ್ಲೆಲ್ಲೂ ಬೆಳದಿಂಗಳು ಹರಡಿ ತಂಪಾದ ಗಾಳಿ ಬೀಸುತ್ತಿತ್ತು. ನವವಿವಾಹಿತ ದಂಪತಿ ಮಹಡಿ ಮೇಲೆ ಹಾಸಿಗೆ ಹಾಸಿಕೊಂಡು ಚಂದ್ರ ನಾಚುವಂತೆ ಮಾಡಿದರು.

ಪತ್ನಿ : ಡಾರ್ಲಿಂಗ್‌… ನಿನಗೆ ನಾನೆಂದರೆ ಬಲು ಇಷ್ಟ ಅಂತ ಗೊತ್ತು. ಅದು ಬಿಟ್ಟು ಬೇರೇನಿಷ್ಟ?

ಪತಿ : ನಿನ್ನ ತಂಗಿ ಶಾಲಿನಿ, ನಿನ್ನ ಚಿಕ್ಕಮ್ಮನ ಮಗಳು ರೀನಾ, ನಿನ್ನ ಸೋದರತ್ತೆ ಮಗಳು ಸ್ಮಿತಾ, ನಿನ್ನ ತವರಿನ ಪಕ್ಕದ್ಮನೆ ಹುಡುಗಿ ಪದ್ದು…

ಮಾರನೇ ದಿನವಿಡೀ ಪತಿರಾಯ ಕುಂಟುತ್ತಾ ಅಫೀಸಿನಲ್ಲಿ ಕೆಲಸ ಮಾಡಿದನಂತೆ.

ಅವಿವಾಹಿತ : ಈ ಹೆಂಡತಿಯರ ಸ್ವಭಾವ ಭಲೇ ವಿಚಿತ್ರ ಅಂತಾರಲ್ಲ… ಎಲ್ಲಿ, ಒಂದು ಉದಾ ಕೊಡು.

ವಿವಾಹಿತ : ಇಡೀ ದಿನ ಪಕ್ಕದ ಮನೆಯವಳ ಬಳಿ ಗಂಡನ ಬಗ್ಗೆ ದೂರು ಹೇಳುವುದು. ಗಂಡ ಆಫೀಸಿನಿಂದ ಮನೆಗೆ ಬಂದ ಬಳಿಕ, ಆ ಪಕ್ಕದ ಮನೆಯವಳು ಸರೀನೇ ಇಲ್ಲ ಕಣ್ರೀ ಅನ್ನೋದು!

ಒಂದು ಹೋಂ ಅಪ್ಲೈಯೆನ್ಸಸ್‌ ಅಂಗಡಿ ಹೊರಗೆ ನಿಂತ ಪತಿರಾಯ, ಹೊಸ ಮಿಕ್ಸಿ ಮತ್ತು ಅದರ ಜೊತೆ ನಿಂತಿದ್ದ ಚೆಲುವೆ ಮಾಡೆಲ್‌ಳ ಫೋಟೋ ನೋಡುತ್ತಾ ಬಹಳ ಹೊತ್ತು ಹಾಗೇ ನಿಂತುಬಿಟ್ಟಿದ್ದ. ಅದನ್ನು ಗಮನಿಸಿದ ಪತ್ನಿ ಮೆಲ್ಲಗೆ, “ಹೋಗೋಣ, ಎಕ್ಸ್ ಚೇಂಜ್‌ ಆಫರ್‌ ಇರುವುದು ಬರಿಯ ಮಿಕ್ಸಿಗೆ ಮಾತ್ರ ಅಂತೆ!” ಎನ್ನುವುದೇ?

ಗುಂಡ : ಹೆಂಡತಿಯ ಪಾದ ಒತ್ತುವುದು ಸೌಭಾಗ್ಯವೇ ಅಥವಾ ದೌರ್ಭಾಗ್ಯವೇ?

ಕಿಟ್ಟಿ : ಅವಳು ಒತ್ತುವವನ ಹೆಂಡತಿಯಾದರೆ ದೌರ್ಭಾಗ್ಯ, ಪರರ ಹೆಂಡತಿಯಾದರೆ ಸೌಭಾಗ್ಯ!

ಪತ್ನಿ : ಡಾರ್ಲಿಂಗ್‌…. ನೀವು ನನ್ನನ್ನು ಬಹಳ ಪ್ರೀತಿಸುತ್ತೀರಿ, ಅಲ್ವಾ?

ಪತಿ : ಹೌದು ಹೌದು, ನೀನು ಊಹಿಸಿಕೊಳ್ಳಲಾರದಷ್ಟು.

ಪತ್ನಿ : ನಿಜಕ್ಕೂ ನೀವು ಬಹಳ ಒಳ್ಳೆಯವರು. ಇರಲಿ ಹೇಳೀಪ್ಪ ಪ್ಲೀಸ್‌ ಎಷ್ಟು ಅಂತ…

ಪತಿ : ಡಾರ್ಲಿಂಗ್‌…. ನೀನು ಬಹಳ ಹಾಟ್‌, ಬಲು ಸೆಕ್ಸಿ, ನಿನ್ನಂಥ ಬ್ಯೂಟಿ ಯಾರೂ ಇಲ್ಲ!

ಪತ್ನಿ : ಹೌದಾ… ಮತ್ತೆ… ಮತ್ತೆ…

ಪತಿ : ನನಗೆ ಎಷ್ಟೋ ಸಲ ಅನ್ಸುತ್ತೆ, ನಿನ್ನಂಥ ಸ್ವೀಟಿ ಇನ್ನೊಬ್ಬಳು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ. ಅಷ್ಟು ಇಷ್ಟ ನೀನು….

ಮಾರನೇ ಬೆಳಗ್ಗೆ ತವರಿಗೆ ಹೋಗಿ ಕುಳಿತ ಪತ್ನಿ ವರ್ಷಗಳಾದರೂ ಮನೆಗೆ ಮರಳಿಲ್ಲವಂತೆ.

ನವ ವಿವಾಹಿತರು ಸುದೀರ್ಘ ಸಂಭಾಷಣೆಗೆ ತೊಡಗಿದ್ದರು.

ಪತ್ನಿ : ನೋಡಿ, ಇದೆಲ್ಲ ಸರಿ. ಈಗ ನೀವು 2 ಮಾತು ಹೇಳಬೇಕು. ಒಂದನ್ನು ಕೇಳಿ ನನಗೆ ಬಹಳ ಖುಷಿ, ಮತ್ತೊಂದು ಕೇಳಿ ಕೋಪ ಬರವಂತಿರಬೇಕು.

ಪತಿ : ನೀನು ನನ್ನ ಜೀವನದಲ್ಲಿ ಪ್ರವೇಶಿಸಿದ್ದರಿಂದ ನನ್ನ ಬದುಕು ಬಂಗಾರವಾಯಿತು.

ಪತ್ನಿ : ಮತ್ತೆ ಇನ್ನೊಂದು…

ಪತಿ : ಅಯ್ಯೋ! ಇದೂ ಒಂದು ಜೀವನವೇ? ನರಕವೇ ಮೇಲು!

ಸರೋಜಮ್ಮ ಅಂಗಡಿಯಲ್ಲಿ ಶಾಪಿಂಗ್‌ ಮುಗಿಸಿ ಬಿಲ್‌ ಕಂಡು ದಂಗಾದರು.

ಸರೋಜಮ್ಮ : ಏನಪ್ಪ ನೀನು…. ಸ್ವಲ್ಪ ನೋಡಿಕೊಂಡು ಬಿಲ್‌ ಹಾಕಬಾರದೇ? ಎಷ್ಟು ಹಳೆಯ ಗ್ರಾಹಕಿ ನಾನು ಗೊತ್ತಾ…. ಹಲವು ವರ್ಷಗಳಿಂದ ಇದೇ ಅಂಗಡಿಯಲ್ಲಿ ಕೊಳ್ಳುತ್ತಿದ್ದೇನೆ.

ಅಂಗಡಿಯವ : ಸಾರಿ ಮೇಡಂ…. ಫಾರ್‌ ಯುವರ್‌ ಇನ್‌ಫಾರ್ಮೇಶನ್‌, ಈ ಅಂಗಡಿ ಓಪನ್‌ ಆಗಿದ್ದೇ ಕಳೆದ ಭಾನುವಾರದಿಂದ…..!

ಕಿಟ್ಟಿ ಮೊದಲ ಸಲ ಗರ್ಲ್ ಫ್ರೆಂಡ್‌ನ್ನು ಡೇಟ್‌ಗೆಂದು ಕರೆದೊಯ್ದ. ಇಬ್ಬರಿಗೂ ಮೊದಲ ಡೇಟ್‌ನ ರೋಮಾಂಚನ. ಪಿಜ್ಜಾ ಮೆಲ್ಲುತ್ತಾ ಕುಳಿತರು.

ಕಮ್ಲಿ : ಏನಾದರೂ ಹೇಳು ಕಿಟ್ಟಿ….. ನೇರ ಹೇಳಲು ನಾಚಿಕೆ ಎನಿಸಿದರೆ ನನ್ನ ಕಿವಿಯಲ್ಲಿ ಹೇಳು, ಆ ಡೈಲಾಗ್‌ ಕೇಳಿ ನನ್ನ ಹೃದಯ ಜೋರಾಗಿ `ಲಬ್‌ಡಬ್‌’ ಎಂದು  ಹೊಡೆದುಕೊಳ್ಳಬೇಕು.

ಕಿಟ್ಟಿ (ಬಾಗಿ ಅವಳ ಕಿವಿಯಲ್ಲಿ ಹೇಳಿದ) : ನಾನು ನನ್ನ ಪರ್ಸ್‌ನ್ನು ಮನೆಯಲ್ಲೇ ಮರೆತು ಬಂದಿದ್ದೇನೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ