ಮಕ್ಕಳು ಅಮೆರಿಕಾದಲ್ಲಿ ಇರುವರೆಂದರೆ ತಂದೆ ತಾಯಿ ಅಲ್ಲಿಗೆ ಹೋಗುವುದು ಸಹಜವೇ. ಅಂತೆಯೇ ನಾವು ಸಹ ಅಮೆರಿಕಾಗೆ ಹೊರಟೆವು. ನಮ್ಮ ವೀಸಾ ಈ ವರ್ಷದಲ್ಲೇ ಎಕ್ಸ್ ಪೈರ್ ಆಗಲಿದ್ದುದರಿಂದ ನಾವು ನಾಲ್ಕು ತಿಂಗಳ ದೀರ್ಘ ಕಾಲ ಅಲ್ಲಿರುವುದು ಎಂದುಕೊಂಡೆವು. ನಿಜವಾಗಿ ಹೇಳಬೇಕೆಂದರೆ ಅಲ್ಲಿ ಸ್ವಲ್ಪ ದಿನ ಅವರೊಡನೆ ಇದ್ದಾಗಲೇ ಒಂದು ರೀತಿಯಲ್ಲಿ ನಿಜಕ್ಕೂ ನಮ್ಮ ಆಸೆ ಪೂರೈಸುತ್ತದೆ. ಇಲ್ಲವಾದಲ್ಲಿ ಅವರು ಭಾರತಕ್ಕೆ ಬಂದರೆ ಒಂದು ತಿಂಗಳಿಗೆ ಬರುತ್ತಾರೆ. ಅಷ್ಟರಲ್ಲಿ ಅವರು ನೆಂಟರು, ಫ್ರೆಂಡ್ಸ್ ಹೀಗೆ ಕಾಲ ಕಳೆದುಬಿಡುತ್ತಾರೆ. ನಮ್ಮ ಜೊತೆ ಇದ್ದಂತೆಯೇ ಆಗುವುದಿಲ್ಲ.
ಆದ್ದರಿಂದ ಒಂದಷ್ಟು ದಿನ ಮಗ ಸೊಸೆಯ ಜೊತೆ ಇರುವ ನಿರ್ಧಾರ ಮಾಡಿದೆವು. ಮುಂದೆ ನಮಗೆ ವಯಸ್ಸಾದಂತೆ ಅಷ್ಟು ದೂರದ ಪ್ರಯಾಣ ಆಗುತ್ತದೆಯೇ ಎನ್ನುವ ಅನುಮಾನ ಬೇರೆ. ಒಟ್ಟಾರೆ ನಾಲ್ಕು ತಿಂಗಳು ಇರುವುದು ಎಂದುಕೊಂಡು ಹೊರಟಿದ್ದಾಯಿತು.
ಅಷ್ಟೊಂದು ದಿನ ಇರುವ ನಿರ್ಧಾರನ್ನೇನೋ ಮಾಡಿದ್ದಾಯಿತು. ಆದರೆ ಅಲ್ಲಿಗೆ ಹೋದ ನಂತರ ನಿಜಕ್ಕೂ ಅಷ್ಟು ದಿನ ಕಳೆಯುವ ಬಗೆ ಹೇಗೆ ಎನ್ನಿಸಿತು. ಬೆಳಗ್ಗೆ ಎಂಟೂವರೆಗೆ ಮಗ ಸೊಸೆ ಕೆಲಸಕ್ಕೆ ಹೋದರೆ ನಾವು ನಮ್ಮ ಸ್ನಾನ ತಿಂಡಿ ಮುಗಿಸಿಕೊಂಡು ಪಾರ್ಕಿಗೆ ವಾಕಿಂಗ್ ಹೋಗುತ್ತಿದ್ದೆವು. ನಾವಿರುವ ಮನೆಗೆ ಪಾರ್ಕ್ ಬಹಳ ಹತ್ತಿರವಿತ್ತು.
ನಮ್ಮ ಮಗ ಇರುವ ಕ್ಯಾಲಿಫೋರ್ನಿಯಾದಲ್ಲಿ ನಮ್ಮ ಭಾರತೀಯರೇ ಜಾಸ್ತಿ. ನಮ್ಮವರಂತೂ ಎದುರಿಗೆ ಸಿಕ್ಕಿದ ಎಲ್ಲರನ್ನೂ ಮಾತನಾಡಿಸುತ್ತಿದ್ದರು. ನಾವು ಅಲ್ಲಿಗೆ ಹೋದಾಗ ಪ್ರತಿ ದಿನ ಯಾರಾದರೂ ನಮ್ಮವರು ಸಿಕ್ಕುತ್ತಲೇ ಇದ್ದರು. ಅಲ್ಲಿ ತೆಲುಗಿನವರೇ ಜಾಸ್ತಿ. ಒಂದು ದಿನ ಒಬ್ಬ ಕನ್ನಡಿಗರು ಸಿಕ್ಕಿದರು. ಅವರು ಸಿಕ್ಕಿದ ಸಂತೋಷದಲ್ಲಿ ಅವರೊಡನೆ ಮಾತನಾಡುತ್ತಾ ಕುಳಿತೆವು. ಆಗ ಅವರು, ಇಲ್ಲಿ ಪ್ರತಿ ದಿನ ಸಂಜೆ 5-6 ಗಂಟೆಯರೆಗೆ ಲಾಫಿಂಗ್ ಕ್ಲಬ್ ನಡೆಸುತ್ತಾರೆ. ನಿಮಗೆ ಆಸಕ್ತಿ ಇದ್ದರೆ ಸೇರಬಹುದು ಎಂದರು. ನಮಗೆ ಹೇಗಾದರೂ ಕಾಲ ಕಳೆಯಬೇಕು ಎಂದುಕೊಂಡು ಅಂದು ಸಂಜೆಯೇ ಅಲ್ಲಿಗೆ ಹೊರಟೆವು.
ಅಲ್ಲಿ ಶ್ರೀನಿವಾಸ ಕೃಷ್ಣಮೂರ್ತಿ ಎನ್ನುವವರು ಲಾಫ್ಟರ್ ಕ್ಲಬ್ ನಡೆಸುತ್ತಿದ್ದರು. ಒಂದು ಗಂಟೆ ಬಹಳ ಸರಳ ರೀತಿಯ ವ್ಯಾಯಾಮಗಳನ್ನು ಮಾಡಿಸುತ್ತಿದ್ದರು. ಜೊತೆಗೆ ಆಹಾ ಓಹೋ ಮತ್ತು ಚಪ್ಪಾಳೆ ಹೊಡೆಯುವುದು, ಅದರಿಂದಾಗುವ ಪ್ರಯೋಜನಗಳು ಎಲ್ಲವನ್ನೂ ತಿಳಿಸಿ ಅಲ್ಲಿಗೆ ಬರುವಂತೆ ಉತ್ಸಾಹ ನೀಡುತ್ತಿದ್ದರು. ಅಲ್ಲಿಗೆ ಬರುವ ಹಿರಿಯ ನಾಗರಿಕರಿಗೂ ಸಮಯ ಕಳೆಯಲು ಅವಕಾಶ ಮತ್ತು ದೇಹಕ್ಕೆ ಒಂದಷ್ಟು ವ್ಯಾಯಾಮ ಆದಂತಾಯಿತು.
ನನ್ನ ಮಗ ಇರುವ ಫ್ರೀ ಮೌಂಟ್‌ನಲ್ಲಿ ಭಾರತೀಯರು ಸಾಕಷ್ಟಿದ್ದರೂ ಲಾಫ್ಟರ್ ಕ್ಲಬ್‌ಗೆ ಬರುತ್ತಿದ್ದವರು ಮಾತ್ರ ಇಪ್ಪತ್ತರಿಂದ ಇಪ್ಪತ್ತೈದು ಜನರಷ್ಟೇ. ಆಸಕ್ತಿ ಇರಬೇಕು, ಸಮಯವಿರಬೇಕು ಅಲ್ಲವೇ? ಅಲ್ಲಿಗೆ ಬಂದ ಗಂಡಸರಿಗೆ ಸ್ವಲ್ಪ ಪುರಸತ್ತು ಇರುತ್ತಿತ್ತು. ಆದರೆ ಹೆಂಗಸರಿಗೆ ಮಾತ್ರ ಮೊಮ್ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇದ್ದು ಅವರು ಬರಲು ಕಷ್ಟವಾಗುತ್ತಿತ್ತು. ಆದರೂ ಆಸಕ್ತಿ ಇರುವವರು ಬರುತ್ತಿದ್ದರು. ನಮ್ಮ ಮಗ ಇರುವ ಅಪಾರ್ಟ್‌ಮೆಂಟ್‌ನಿಂದಲೇ 1-2 ಜೋಡಿಗಳು ಹೋಗುತ್ತಿದ್ದರು. ನಾವು ಸಹ ಅವರ ಜೊತೆ ಹೋಗಲು ಆರಂಭಿಸಿದೆವು.
ಬೆಳಗ್ಗೆ ಮಕ್ಕಳು ಆಫೀಸ್‌ಗೆ ಹೋದೊಡನೆ ನಮ್ಮ ದೈನಂದಿನ ಕಾರ್ಯಗಳನ್ನು ಮುಗಿಸಿಕೊಂಡು ಒಂದು ವಾಕ್ ಹೋಗುತ್ತಿದ್ದೆವು. ನಂತರ ಮಧ್ಯಾಹ್ನ ಊಟ ಮಾಡಿ ಸ್ವಲ್ಪ ನಿದ್ದೆ ಮಾಡಿ ಏಳುವಷ್ಟರಲ್ಲಿ ನಾಲ್ಕು ಆಗುತ್ತಿತ್ತು. ನಂತರ ಕಾಫಿ ಕುಡಿದು ಸಿದ್ಧವಾಗಿ ಹೊರಡುವಷ್ಟರಲ್ಲಿ ಐದು ಗಂಟೆಯಾಗಿಯೇ ಬಿಡುತ್ತಿತ್ತು. ಪ್ರತಿ ದಿನ ನಾವು ಹತ್ತು ನಿಮಿಷ ಲೇಟೇ. ಆದರೂ ಪಾಪ ಅವರು ನಮ್ಮನ್ನು ನಗು ಮುಖದಿಂದ ಸ್ವಾಗತಿಸುತ್ತಿದ್ದರು. ಅಲ್ಲಿ ನಾವು ಮತ್ತೊಂದು ವಾಕ್ ಹೋಗುತ್ತಿದ್ದೆವು. ಅಷ್ಟು ಹೊತ್ತಿಗೆಲ್ಲಾ ಆರೂವರೆಯಾಗಿಯೇ ಬಿಡುತ್ತಿತ್ತು. ಮನೆಯಲ್ಲಿ ಮಕ್ಕಳು ಬಂದಿರುತ್ತಿದ್ದರು. ಹೀಗಾಗಿ ನಮ್ಮ ಸವಾರಿ ಮನೆಗೆ ಹೋಗುತ್ತಿತ್ತು. ಇದಲ್ಲದೆ ಪ್ರತಿ ದಿನ ಕಾರ್ಡ್ಸ್ ಆಡೋಣವೆಂದು ಗೆಳೆಯರ ಬಳಗದ ಬುಲಾವ್ ಇರುತ್ತಿತ್ತು. ಲಾಫ್ಟರ್ ಕ್ಲಬ್‌ನಿಂದ ಒಳ್ಳೆಯ ವ್ಯಾಯಾಮ ಆಗುತ್ತಿತ್ತು. ಅಲ್ಲಿಯ ವಿಚಾರಗಳು ತಿಳಿಯುತ್ತಿತ್ತು. ನಾವಿರುವಂತೆಯೇ ನಮ್ಮ ಸ್ವಾತಂತ್ರ್ಯ ದಿನಾಚರಣೆ ಬಂದಿತು. ನಾವು ಸಹ ಧ್ವಜಾರೋಹಣ ಮಾಡಲು ಸಿದ್ಧರಾದೆವು.
ನಾವುಗಳೆಲ್ಲಾ ಸೇರಿ ದೇಶ ಭಕ್ತಿಗೀತೆಗಳನ್ನೂ ಕಲಿತೆವು. ಒಂದು ಸೋಲೋ ಸಾಂಗ್ ಮತ್ತು ಸಮೂಹ ಗೀತೆಗಳಿಗೂ ಸಿದ್ಧರಾದೆವು. ನಾನು ವಿದ್ಯಾರ್ಥಿ ಜೀವನದಲ್ಲಿ ಹಾಡುತ್ತಿದ್ದ `ಜಹಾಂ ಡಾಲ್ ಡಾ್ಲ ಪರ್ ಸೋನೆ ಕೀ ಚಿಡಿಯಾ ಕರತೀ ಹೈ ಬಸೇರಾ, ವಹ್ ಭಾರತ್ ದೇಶ್ ಹೈ ಮೇರಾ!’ ಹಾಡನ್ನು ಹಾಡಿದೆ. ನಾವೆಲ್ಲರೂ ಒಟ್ಟಿಗೆ ಸೇರಿ `ವಂದೆ ಮಾತರಂ ಮತ್ತು ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್ ಹಮಾರಾ’ ಹಾಡುಗಳನ್ನು ಹಾಡುವುದೆಂದು ನಿರ್ಧಾರವಾಯಿತು.
ನಮ್ಮ ಜೊತೆಯಲ್ಲಿದ್ದ ಉಷಾ ಮತ್ತು ಮಹೇಶರಿಗೂ ಎಲ್ಲಿಲ್ಲದ ಉತ್ಸಾಹ. ಯೂ ಟ್ಯೂಬ್‌ನಲ್ಲಿ ಹಾಡಿನ ಸಾಹಿತ್ಯ ಹುಡುಕಿ ರಾಗವನ್ನೂ ಸಹ ಅನುಕರಿಸುವುದು. ಒಟ್ಟಾರೆ ಮತ್ತೊಮ್ಮೆ ನಮ್ಮ ಯೌವನ ಮರಳಿದಂತಾಯಿತು. ಅದೇ ಒಂದು ಉತ್ಸಾಹ. ಪ್ರತಿ ದಿನ ಹಾಡುಗಳನ್ನು ಪ್ರಾಕ್ಟೀಸ್ ಮಾಡಿದ್ದೆ ಮಾಡಿದ್ದು.
ನಮ್ಮ ಗೆಳೆಯರೊಬ್ಬರು ಮೈಕನ್ನೂ ಸಹ ತಂದಿದ್ದರು. ನಮ್ಮ ಲಾಫ್ಟರ್ ಕ್ಲಬ್‌ನ ಟೀಚರ್ ನಮಗೆಲ್ಲಾ ಸ್ನ್ಯಾಕ್ಸ್ ತರಿಸಿದ್ದರು. ಅದಕ್ಕೆ ನಮ್ಮಿಂದ ತಲಾ ಮೂರು ಡಾಲರ್ ತೆಗೆದುಕೊಂಡಿದ್ದರು. ನನ್ನ ಮಗ ಅವರು ಅಷ್ಟು ಚೆನ್ನಾಗಿ ಎಲ್ಲವನ್ನೂ ಮಾಡುತ್ತಿದ್ದಾರಲ್ಲಾ ಅದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದ. ಖಂಡಿತಾ ಅವರ ಶ್ರದ್ಧೆ ನೋಡಿದಾಗ ನಿಜಕ್ಕೂ ಸಂತಸವೆನಿಸುತ್ತಿತ್ತು.
ಅಂತೂ ನಮ್ಮ ಸ್ವಾತಂತ್ರ್ಯ ದಿನಾಚರಣೆ ಬಹಳ ಅದ್ಧೂರಿಯಾಗಿ ನಡೆಯಿತು. ಎಲ್ಲಕ್ಕಿಂತ ಹೆಚ್ಚಾಗಿ ನಾವು ವಿದೇಶದಲ್ಲಿದ್ದೂ ಸಹ ನಮ್ಮ ಆಚರಣೆಗೆ ಯಾವುದೇ ಕುಂದು ಬರಲಿಲ್ಲ.
ದಸರಾ ಹಬ್ಬದಲ್ಲಿ ಎಲ್ಲರೂ ಗೊಂಬೆಗಳನ್ನು ಜೋಡಿಸುತ್ತಾರೆ ಮತ್ತು ಎಲ್ಲರನ್ನೂ ಅರಿಶಿನ ಕುಂಕುಮಕ್ಕೆ ಕರೆಯುತ್ತಾರೆ. ಒಟ್ಟಾರೆ ಎಲ್ಲ ಸಂಪ್ರದಾಯಗಳನ್ನೂ ಅನುಸರಿಸುತ್ತಾರೆ. ಅಲ್ಲಿ ನಮ್ಮ ಲಾಫ್ಟರ್ ಕ್ಲಬ್‌ನ ಟೀಚರ್ ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋಗಿ ತಾಂಬೂಲವನ್ನು ಕೊಟ್ಟು ಕಳುಹಿಸಿದರು. ಒಟ್ಟಿನಲ್ಲಿ ಲಾಫ್ಟರ್ ಕ್ಲಬ್‌ನಿಂದ ನಮ್ಮ ನಾಲ್ಕು ತಿಂಗಳನ್ನು ಕಳೆಯಲು ಬಹಳ ಸಹಾಯಕವಾಯಿತು. ಈಗಲೂ ಅಲ್ಲಿಂದ ಮಿಂಚಂಚೆ ಬರುತ್ತಲೇ ಇರುತ್ತದೆ.
– ಮಂಜುಳಾ ರಾಜ್