ನ್ಯೂಯಾರ್ಕ್‌ನ ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌ ಅಥವಾ ಪ್ಯಾರಿಸ್‌ನ ಐಫಿಲ್‌ ಟವರ್‌ ಅಥವಾ ಲಂಡನ್‌ ಅರಮನೆ ಇರಬಹುದು. ಈ ಎಲ್ಲ ನಮ್ಮನ್ನು ಎತ್ತರಕ್ಕೆ ಏರಿಸಿ ನಗರದ ಸುಂದರ ದೃಶ್ಯಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ಅಂತಹುದೇ ಒಂದು, ಜೊತೆಗೆ ಮತ್ತಷ್ಟು ಪುರಾತನ ಎನ್ನಬಹುದು. ಅಂತಹ ಎತ್ತರದ ಗೋಪುರ ಕಾಯ್ಟ್ ಟವರ್‌.ಅಲ್ಲಿಗೆ ಹೋಗುವ ದಾರಿಯೇ ವಿಶಿಷ್ಟ. ಅಷ್ಟು ಎತ್ತರಕ್ಕೆ ಸಾಗುವಾಗ ರಸ್ತೆಗಳ ಮೇಲಾದರೂ ಒಂದು ರೀತಿಯಲ್ಲಿ ರೋಲರ್‌ ಕೋಸ್ಟರ್‌ನಲ್ಲಿ ಸಾಗುವಂತೆ ಭಾಸವಾಗುತ್ತದೆ. ಸ್ವಲ್ಪ ಎದೆ ಝಲ್ ಎನಿಸುತ್ತದೆ. ಹಾದು ಹೋಗುವಾಗ ವಿಶ್ವವಿಖ್ಯಾತ ಲೋಂಬಾರ್ಡ್‌ ಸ್ಟ್ರೀಟ್‌ ಅಥವಾ ಕ್ರುಕೆಡ್‌ ಸ್ಟ್ರೀಟ್‌ ಕಂಡುಬರುತ್ತದೆ. ಅಕ್ಕಪಕ್ಕದಲ್ಲಿ ಹೂವಿನ ರಾಶಿಯ ತೋಟವನ್ನೇ ತುಂಬಿಸಿಕೊಂಡ ರಸ್ತೆಗಳು ಹಾವಿನಂತೆ ಡೊಂಕು ಡೊಂಕಾಗಿ ಸಾಗುತ್ತದೆ.

ಈ ರಸ್ತೆಯಲ್ಲಿ ಸಾಗುವುದೇ ಒಂದು ರೋಚಕ ಅನುಭವ. ಅಕ್ಕಪಕ್ಕದಲ್ಲಿ ಮನೆಗಳು… ಅಲ್ಲಿ ಸದಾ ಪ್ರವಾಸಿಗರ ವಾಹನಗಳು ಚಲಿಸುತ್ತಲೇ  ಇರುತ್ತವೆ. ಪಾಪ, ಆ ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುವ ಮನೆಗಳವರಿಗೆ ಎಷ್ಟು ತೊಂದರೆ ಆಗುತ್ತದೋ ಎನಿಸುತ್ತದೆ. ಆದರೆ ಮನೆಯ ವಿಳಾಸ ತಿಳಿಸುವಾಗ ಕ್ರುಕೆಡ್‌ ರಸ್ತೆಯ ಪಕ್ಕದಲ್ಲೇ ನಮ್ಮ ಮನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಅಲ್ಲವೇ?

Coit-Tower-3

ಈ ಅನುಭವವನ್ನು ಮೆಲುಕುಹಾಕುತ್ತಾ ಮುಂದೆ ಸಾಗಿದರೆ ಕಾಯ್ಟ್ ಟವರ್‌ ಸ್ವಾಗತ ಗೀತೆ ಹಾಡುತ್ತದೆ. 400 ಮೆಟ್ಟಿಲುಗಳನ್ನು ಹತ್ತಿ ಹೋಗಬಹುದು. ಇಲ್ಲವಾದಲ್ಲಿ ಎಲಿವೇಟರ್‌ನ ಮೂಲಕ ಸಾಗಬಹುದು. ಅದಕ್ಕಾಗಿ ಟಿಕೆಟ್‌ಗಳು ಅಲ್ಲೇ ಸಿಗುತ್ತದೆ. ದೊಡ್ಡವರಿಗೆ 8 ಡಾಲರ್‌. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಸ್ವಲ್ಪ ರಿಯಾಯಿತಿ ಸಿಗುತ್ತದೆ. ಎಲಿವೇಟರ್‌ಗೆ ಸಾಕಷ್ಟು ಕ್ಯೂ ಇರುತ್ತದೆ. ಒಂದು ಬಾರಿಗೆ ಆರು ಜನರನ್ನು ಕರೆದೊಯ್ಯುತ್ತದೆ. ಒಂದು ಗುಂಪು ಕೆಳಗಿಳಿದ ಮೇಲೆ ಮತ್ತೊಂದು ಗುಂಪನ್ನು ಕರೆದೊಯ್ಯುತ್ತದೆ. ಅಲ್ಲಿ ನೋಡುವವರಿಗೆ ನಿರಾಳ, ಗುಂಪು ಗದ್ದಲವಿರುವುದಿಲ್ಲ.

ಗೋಪುರದ ಸುತ್ತಲೂ ಇರುವ ಕಿಟಕಿಗಳ ಮೂಲಕ ಪೂರ್ಣವಾಗಿ ನಗರದ ವಿಹಂಗಮ ನೋಟ ಕಾಣ ಸಿಗುತ್ತದೆ. ಕೆಳಗೆ ಸುಡು ಬಿಸಿಲಿದ್ದರೂ ಮೇಲೆ ಸಾಗಿದಾಗ ತಣ್ಣನೆಯ ಗಾಳಿ ಮುದವನ್ನೀಯುತ್ತದೆ. ಒಂದು ಕಿಟಕಿಯಿಂದ ಟ್ರೆಶರ್‌ ಐ ಲ್ಯಾಂಡ್‌ ದ್ವೀಪದ ಸುತ್ತಲಿನ ಸಮುದ್ರ, ಅದರ ಸುತ್ತ ಕಂಗೊಳಿಸುವ ದ್ವೀಪದ ಚಂದದ ನೋಟ ಕಾಣುತ್ತದೆ.

Coit-Tower-4

ಅಲ್ಲಿಂದ ಪಕ್ಕದ ಕಿಟಕಿಗೆ ಬಂದರೆ ಅಲಕಾರ್ಟ್ಜಾ ಜೈಲಿನ ಕಟ್ಟಡ ಕೈ ಬೀಸಿ ಕರೆಯುತ್ತದೆ. ಜೈಲು ಅಲ್ವಾ…? ಎಂದು ಬೆದರಿ ಮುಂದೆ ಸಾಗಿದರೆ ನಗರದ ಎತ್ತರದ ಕಟ್ಟಡಗಳು, ನಾನೆಷ್ಟು ಎತ್ತರವಿದ್ದೇನೆ ನನ್ನನ್ನು ನೋಡಲು ನೀನು ಅಷ್ಟು ಎತ್ತರಕ್ಕೆ ಏರಬೇಕು ನೋಡು ಎಂದು ಅಣಕಿಸುವಂತೆ ಭಾಸವಾಗುತ್ತದೆ. ಹೀಗೆ ಒಂದಾದ ಮೇಲೆ ಮತ್ತೊಂದು ಕಿಟಕಿಯತ್ತ ಸಾಗುತ್ತಲೇ ಇರುತ್ತೇವೆ. ಒಂದು ಭಾಗಕ್ಕೆ ಇರುವ ಮೂರು ಕಿಟಕಿಗಳಲ್ಲಿ ಒಂದರ ಗಾಜನ್ನು ತೆರೆದಿರುತ್ತಾರೆ.

ಮಿಕ್ಕದರ ಗಾಜನ್ನು ಅಲ್ಲೊಬ್ಬ ನಿರಂತರವಾಗಿ ಒರೆಸುತ್ತಲೇ ಇರುತ್ತಾನೆ. ನಮ್ಮವರು ಅವನನ್ನೂ ಮಾತನಾಡಿಸಿದರು. ಆಗ ಅವನು ಭಾರತದ ಗೋವಾದವನು ಎಂದು ಗೊತ್ತಾಯಿತು. ಭಾರತೀಯರು ಇಲ್ಲದ ಸ್ಥಳವಿಲ್ಲ ಅಲ್ಲವೇ? ಅಲ್ಲಿ ಗಮನಿಸಿದರೆ ಎಲ್ಲರೂ ಅಲ್ಲಿನ ನೋಟವನ್ನು ನೋಡಿ ಆನಂದಿಸುವುದಕ್ಕಿಂತ ಚಿತ್ರಗಳನ್ನು ಕ್ಲಿಕ್ಕಿಸುವುದರಲ್ಲೇ ನಿರತರಾಗಿರುತ್ತಾರೆ. ನಿಜಕ್ಕೂ ನೋಡುವ ಸುಂದರ ನೋಟಕ್ಕೆ ಇದೊಂದು ಬ್ರೇಕ್‌ ಎನಿಸಿತು.

Coit-Tower-5

ಆದರೆ ಮನೆಗೆ ಬಂದು ತೆಗೆದ ಫೋಟೋಗಳನ್ನು ನೋಡಿದಾಗ, ನೋಡಿದ ನೋಟಕ್ಕೆ ಮತ್ತಷ್ಟು ಮೆರುಗನ್ನು ನೀಡಿತು. ಅಲ್ಲಿ ಪ್ರತ್ಯಕ್ಷವಾಗಿ ಗಮನಿಸಿದ ವಿಷಯಗಳು ಇಲ್ಲಿ ಮತ್ತಷ್ಟು ನಿಚ್ಚಳವಾಗಿ ಕಂಡುಬಂದವು. ಅಂತೂ ಕಾಯ್ಟ್ ಟವರ್‌ನಿಂದ ಕೆಳಗಿಳಿದು ಬಂದದ್ದಾಯಿತು.

ಮನೆಯಿಂದಲೇ ಮಾಡಿಕೊಂಡು ಬಂದಿದ್ದ ಚಿತ್ರಾನ್ನವನ್ನು ತಿಂದು ಹೊಟ್ಟೆ ತುಂಬಿಸಿಕೊಂಡೆವು. ಎಂತಹ ಸುಂದರ ತಾಣವನ್ನು ನೋಡಿದವರಾಗಲೀ, ಎಂತಹ ಐಷಾರಾಮಿ ಸ್ಥಳದ ವೀಕ್ಷಣೆಯಾದರೂ ಸಮಯಕ್ಕೆ ಸರಿಯಾಗಿ ಹೊಟ್ಟೆ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ಅದರ ಕರೆಯನ್ನು ಕೇಳದಿದ್ದರೆ ಮುಂದಿನ ವಿಷಯಕ್ಕೆ ಯಾವುದೇ ಗಮನವಿರುವುದಿಲ್ಲ. ಆದ್ದರಿಂದ ಎಲ್ಲಿಗೆ ಹೋದರೂ ಅಷ್ಟೆ. ಈ ವಿದೇಶಗಳಲ್ಲಿ ನಮ್ಮಂಥ ಸಸ್ಯಾಹಾರಿಗಳಿಗೆ ರುಚಿಸುವ ಆಹಾರ ಸ್ವಲ್ಪ ಕಷ್ಟವೇ. ಆದ್ದರಿಂದ ಕೆಲವು ಬಾರಿ ಮನೆಯಿಂದ ತೆಗೆದುಕೊಂಡು ಹೋದಾಗ ಅಮೃತವನ್ನು ಸವಿದಂತೆ ಖುಷಿಯಾಗುತ್ತದೆ.

ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ ಎಲ್ಲಿಂದ ಎಲ್ಲಿಗೆ ಹೋಗುವಾಗಲೂ ಸುತ್ತಲಿನ ಬೆಟ್ಟ ಗುಡ್ಡಗಳನ್ನು ಹಾದುಹೋಗಲೇಬೇಕು. ಒಂದೆಡೆ ಹಸಿರು ಮರಗಳು ಕಂಡರೆ ಮತ್ತೊಂದು ಪಕ್ಕದಲ್ಲಿ ಸಮುದ್ರ. ಇದರ ಜೊತೆಗೆ ಗುಡ್ಡ ಬೆಟ್ಟಗಳು ಕಾಣಸಿಗುತ್ತವೆ. ದೂರದಿಂದ ಕಂಡಾಗ ಅ ಬಂಗಾರದ ಬಣ್ಣದ ನುಣುಪಾದ ಮಕಮಲ್ ಬಟ್ಟೆ ಹೊದ್ದುಕೊಂಡಿದೆಯೇನೋ ಎನಿಸುತ್ತದೆ. ಆದರೆ ಸ್ವಲ್ಪ ಹತ್ತಿರಕ್ಕೆ ಹೋದಾಗ ಅದು ಒಣಗಿರುವ ಹುಲ್ಲು ಹಾಸೆಂದು ತಿಳಿಯುತ್ತದೆ. ಮಳೆಗಾಲದಲ್ಲಿ ಹಸಿರನ್ನು ತನ್ನೊಡಲಲ್ಲಿ ತುಂಬಿಸಿಕೊಡಂತಿರುವ ಬೆಟ್ಟ ಗುಡ್ಡಗಳು, ಬೇಸಿಗೆ ಬಂದಂತೆ ಆ ಹುಲ್ಲು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಧ್ಯೆ ಮಧ್ಯೆ ಹಸಿರು ಮರಗಳು, ತೆಳು ಹಳದಿ, ತೆಳು ಕಂದು ಬಣ್ಣದ ಮಕಮಲ್ ಬಟ್ಟೆಯ ಜೊತೆಗೆ ಅಲ್ಲಲ್ಲಿ ಹಸಿರಿನ ಚಿತ್ತಾರದ ವಸ್ತ್ರವನ್ನು ಭೂಮಾತೆ ಧರಿಸಿದ್ದಾಳೋ ಎಂದು ಭಾಸವಾಗುತ್ತದೆ. ಪ್ರತಿ ಬಾರಿ ಸಾಗುವಾಗಲೂ ಈ ನೋಟ ಕಾಣಸಿಗುತ್ತದೆ, ಪ್ರತಿ ಬಾರಿಯೂ ಹೊಸತನವನ್ನು ಹೊಮ್ಮಿಸುವಂತೆ ನವನವೀನತೆಯನ್ನು ನೀಡುತ್ತದೆ. ಇವುಗಳ ಮಧ್ಯೆ ನೀಲ ಸಮುದ್ರ, ಪ್ರಕೃತಿ ದೇವಿ ಇಲ್ಲಿ ಬಹಳ ಧಾರಾಳತನವನ್ನು ತೋರಿದ್ದಾಳೋ ಎನ್ನುವ ಭಾವ ಮೂಡುತ್ತದೆ.

ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ