ಅಮೆರಿಕಾದ ಯೆಲ್ಲೋ ಸ್ಟೋನ್‌ ರಾಷ್ಟ್ರೀಯ ಉದ್ಯಾನವನ ಪ್ರಾಕೃತಿಕ ವಿಸ್ಮಯಗಳ ಆಗರ ಎನ್ನಬಹುದು. ನೀವು ಉತ್ತರದ ಕಡೆಯಿಂದ ಅಂದರೆ ಮಾಂಟೋನಾ ರಾಜ್ಯದ ಕಡೆಯಿಂದ ಬಂದಾಗ ರೂಸ್‌ವೆಲ್ಟ್ ಆರ್ಚ್‌ ನಿಮಗೆ ಸ್ವಾಗತ ಗೀತೆ ಹಾಡುತ್ತದೆ. ಭವ್ಯವಾದ ಎತ್ತರದ ಈ ಕಮಾನನ್ನು ನೋಡಲು ನಿಮ್ಮ ತಲೆಯನ್ನು ಎತ್ತಲೇಬೇಕು. ಈ ಕಮಾನು ಐವತ್ತು ಅಡಿ ಎತ್ತರವಿದೆ. ಎತ್ತರವಾದ ಎರಡು ಭರ್ಜರಿ ಕಂಬಗಳು ತಳ ಭಾಗದಲ್ಲಿ ಹನ್ನೆರಡು ಅಡಿ ಅಗಲವಿದ್ದು, ಕಮಾನಿನ ಒಳ ಭಾಗದಲ್ಲಿ 35 ಅಡಿ ಎತ್ತರ ಮತ್ತು 25 ಅಡಿ ಅಗಲವಾಗಿದೆ.

`ಜನರ ಸಂತೋಷ ಮತ್ತು ಲಾಭಕ್ಕಾಗಿ' ಎನ್ನುವ ಶಾಸನವನ್ನು ತನ್ನ ನೆತ್ತಿಯ ಮೇಲೆ ಹೊತ್ತುಕೊಂಡ ಕಮಾನು ತನ್ನ ಭವ್ಯತೆಯಿಂದ ಎಲ್ಲರ ಗಮನ ಸೆಳೆಯುತ್ತದೆ. ಕಂದು ಬಣ್ಣದ ಚೌಕಾಕಾರದ ಕಲ್ಲುಗಳಿಂದ ನಿರ್ಮಿತವಾದ ಈ ಕಮಾನಿಗೆ ಸುಂದರ ವಿನ್ಯಾಸ ನೀಡಿರುವ ಪ್ರಸಿದ್ಧ ಯೆಲ್ಲೋ ಸ್ಟೋನ್‌ನ ವಾಸ್ತುಶಿಲ್ಪಿ ರಾಬರ್ಟ್‌ ರೀಮರ್‌ನ ಕಾಂತಿಕೆಯನ್ನು ನಿಜಕ್ಕೂ ಮೆಚ್ಚಬೇಕಾದ್ದೇ. ಈ ಭವ್ಯ ಕಮಾನು ನಿರ್ಮಾಣಗೊಂಡದ್ದು 1903 ಆಗಸ್ಟ್ 15 ರಂದು.

ಯೆಲ್ಲೋ ಸ್ಟೋನ್‌ ರಾಷ್ಟ್ರೀಯ ಉದ್ಯಾನವನ ಮಾಂಟೋನಾ, ವ್ಯೋಮಿಂಗ್‌ ಮತ್ತು ಇಡಾಹೋ, ಈ ಮೂರೂ ರಾಜ್ಯಗಳಲ್ಲಿ ತನ್ನನ್ನು ತಾನು ಆವರಿಸಿಕೊಂಡಿದೆ. ಈ ಕಮಾನು ನಿರ್ಮಾಣವಾಗುವ ಮೊದಲು ಅಂದರೆ 1903ಕ್ಕಿಂತ ಮುನ್ನ ಪ್ರವಾಸಿಗರು ಮಾಂಟೋನಾವರೆಗೂ ರೈಲಿನಲ್ಲಿ ಬಂದು ನಂತರ ಕುದುರೆ ಗಾಡಿಗಳಲ್ಲಿ ಪ್ರಯಾಣಿಸಿ ಉದ್ಯಾನವನದ ವ್ಯಾಪಕವಾದ ಭೂ ದೃಶ್ಯವನ್ನು ನೋಡಲು ಬರುತ್ತಿದ್ದರು. ಅದೇ ವರ್ಷ ಉತ್ತರದ ರೈಲ್ವೆ ವಿಸ್ತರಣೆಗೊಂಡು ಜನರಿಗೆ ಅನುಕೂಲವಾಯಿತು. ಬಂದವರಿಗೆ ಉದ್ಯಾನಕ್ಕೆ ಮೆರುಗನ್ನು ನೀಡುವ ಕಮಾನಿನ ದರ್ಶನ ಆಯಿತು. ಒಟ್ಟಿನಲ್ಲಿ ಯೆಲ್ಲೋ ಸ್ಟೋನ್‌ಗೆ ಬರುವ ಎಲ್ಲಾ ಪ್ರವಾಸಿಗರೂ ಕಮಾನಿನ ಮುಂದೆ ನಿಂತು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳದೆ ಮುಂದೆ ಸಾಗುವುದಿಲ್ಲ. ಅಷ್ಟು ದೂರ ಪ್ರಯಾಣಿಸಿ ಬಂದ ಉತ್ಸುಕ ಯಾತ್ರಿಕರಿಗೆ ತಲೆ ಎತ್ತಿ ನಿಂತಿರುವ ಈ ಎತ್ತರದ ಕಮಾನು, ಮುಂದೆ ಅವರು ನೋಡಲಿರುವ ಭವ್ಯ ಭೂರಮೆಯ ಸುಂದರ ನೋಟಕ್ಕೆ ನಾಂದಿ ಹಾಡುವುದರಲ್ಲಿ ಎರಡು ಮಾತಿಲ್ಲ.

- ಮಂಜುಳಾ ರಾಜ್‌

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ