ಹಿರಿ ತಾತಾ ತಮ್ಮ 101ನೇ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದರು. ಎಲ್ಲರೂ ಅವರನ್ನು ಅಭಿನಂದಿಸುತ್ತಾ, ಅವರ ಆರೋಗ್ಯದ ರಹಸ್ಯವೇನು, ಶತಾಯುಷಿ ಆಗುವುದು ಹೇಗೆ ಎಂದೆಲ್ಲ ವಿಚಾರಿಸಿದರು.

ತಾತಾ ತಮ್ಮ ಆರೋಗ್ಯದ ರಹಸ್ಯದ ಬಗ್ಗೆ ತಿಳಿಸುತ್ತಾ, “ನಮ್ಮ ಮದುವೆ ಆಗಿ 76 ವರ್ಷ ಆಯ್ತು. ಮದುವೆ ದಿನ ನಾವು ಪರಸ್ಪರ ಒಂದು ಒಪ್ಪಂದ ಮಾಡಿಕೊಂಡೆವು. ಅದರ ಪ್ರಕಾರ, ಯಾವಾಗ ನಾವು ವಿವಾದಕ್ಕಿಳಿದರೂ ಅದರಲ್ಲಿ ಸೋತವರು ತಕ್ಷಣ ಅಥವಾ ಮರುದಿನ ಬೆಳಗ್ಗೆ 5 ಕಿ.ಮೀ. ವಾಕ್‌ ಹೋಗಬೇಕು. ನಾನಂತೂ ಪ್ರತಿದಿನ ಬೆಳಗ್ಗೆ 5 ಕಿ.ಮೀ. ವಾಕ್‌ ಹೋಗುವುದೇ ಆಯ್ತು. ಹೀಗಾಗಿ ನನ್ನ ಆರೋಗ್ಯ ಚೆನ್ನಾಗಿದೆ,” ಎಂದರು.

ಅಷ್ಟರಲ್ಲಿ ಒಬ್ಬ ಮರಿ ಪತ್ರಕರ್ತ ನೆನಪಿಸಿದ, “ನಿಮ್ಮ ಶ್ರೀಮತಿ ಸಹ ಇಷ್ಟು ವಯಸ್ಸಾದರೂ ಗಟ್ಟಿಮುಟ್ಟಾಗಿ ಚೆನ್ನಾಗೇ ಇದ್ದಾರಲ್ಲ….?”

“ನನ್ನ ಹೆಂಡತಿಗೆ ಮಹಾ ಸಂದೇಹದ ಬುದ್ಧಿ. ನಾನು ನಿಜವಾಗಿಯೂ 5 ಕಿ.ಮೀ. ವಾಕಿಂಗ್‌ ಹೋಗುತ್ತೇನೋ ಇಲ್ಲವೋ ಎಂದು ಒಂದಷ್ಟು ದೂರದಿಂದ ನನಗೆ ಕಾಣದ ಹಾಗೆ ಫಾಲೋ ಮಾಡುತ್ತಿದ್ದಳು. ಅವಳ ಆರೋಗ್ಯ ಚೆನ್ನಾಗಿರಲೆಂದು ನಾನೂ ಅವಳಿಗೆ ಗೊತ್ತಾಗದಂತೆ ಆಗಾಗ ಹಿಂದಿರುಗಿ ನೋಡುತ್ತಿದ್ದೆ.”

ಸೋಮು ಮನೆಯಲ್ಲಿ ಟಿವಿ ನೋಡುತ್ತಿದ್ದ. ಅವನ ಹೆಂಡತಿ ಸಹ ತೋತಾಪುರಿ ಮಾವಿನಕಾಯಿ ಹೆಚ್ಚಿಕೊಂಡು ತಿನ್ನುತ್ತಾ ಟಿವಿ ನೋಡುತ್ತಿದ್ದಳು. ಸೋಮು ತನ್ನ ಫೋನ್‌ನ್ನು ಅಡುಗೆಮನೆಯಲ್ಲಿ ಚಾರ್ಜಿಂಗ್‌ಗೆ ಹಾಕಿ ಟಿವಿ ಕಾರ್ಯಕ್ರಮ ಮುಂದುವರಿಸಿದ.

ಅಷ್ಟರಲ್ಲಿ ವಾಟ್ಸ್ಆ್ಯಪ್‌ ಮೆಸೇಜ್‌ ಬಂತು. ಯಾರು ಕಳಿಸಿದರೋ ಏನೋ ಅಂತ ಸೋಮು ಓಡೋಡಿ ಅಡುಗೆಮನೆಗೆ ಹೋದ. ನೋಡಿದ್ರೆ ಒಂದು ಮೆಸೇಜ್‌ ಬಂದಿದೆ. `ಹೇಗೂ ಅಡುಗೆಮನೆಗೆ ಬಂದಿದ್ದೀರಿ. ಹಾಗೇ ವಾಪಸ್ಸು ಬರುವಾಗ ಒಂದು ಮುಚ್ಚಳದಲ್ಲಿ ಒಂದಿಷ್ಟು ಉಪ್ಪು-ಖಾರ ಹಾಕಿಕೊಂಡು ಬನ್ನಿ,’ ಎಂದು ಹೆಂಡತಿ ಮೆಸೇಜ್‌ ಕಳಿಸುವುದೇ?

ಯಾರೋ ಬಾಗಿಲು ಬಡಿದ ಸದ್ದಾಯಿತು. ಎದುರಿಗೆ ಪಕ್ಕದ ಮನೆ ಡೈವೋರ್ಸಿ ಯುವತಿ ಚೆನ್ನಾಗಿ ಮೇಕಪ್‌ ಮಾಡಿಕೊಂಡು ಸಿನಿಮಾ ನೋಡಲೆಂಬಂತೆ ಅಲಂಕರಿಸಿಕೊಂಡಿದ್ದಳು.

ಆಕೆ ಹೇಳಿದಳು, “ಈಗೀಗಂತೂ ಒಂಟಿಯಾಗಿ ಇರುವುದು ಅಂದ್ರೆ ಮಹಾ ಬೋರು! ನಾನೂ ಹೊರಗೆ ಒಂದಿಷ್ಟು ಅಡ್ಡಾಡಿಕೊಂಡು ಬರೋಣ ಅಂತಿದ್ದೀನಿ. ಡ್ಯಾನ್ಸ್, ಪಾರ್ಟಿ ಅಂತ ಹೊರಗಿನ ಲೈಫ್‌ ಎಂಜಾಯ್‌ ಮಾಡಬೇಕೂಂತ ಇದ್ದೀನಿ. ನೀವು ಈ ಸಂಜೆ ಫ್ರೀ ಆಗಿದ್ದೀರಾ….?” ಎಂದು ವೈಯಾರವಾಗಿ ಗುಂಡನನ್ನು ಕೇಳಿದಳು.

ಗುಂಡನ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಯಿತು. ಹೀಗೆ ಬಿಝಿ ಆಗುವುದಕ್ಕಿಂತ ಸೌಭಾಗ್ಯ ಬೇರಾವುದಿದೆ ಎಂದು ಜೊಲ್ಲು ಸುರಿಸುತ್ತಾ, “ಹ್ಞೂಂ… ಹ್ಞೂಂ…..” ಎಂದು ಗುಂಡ ಗೋಣಾಡಿಸಿದ.

“ಗುಡ್‌…..” ಆಕೆ ಪಲುಕುತ್ತಾ ಹೇಳಿದಳು, “ಇವತ್ತು ಸಂಜೆ ಸ್ವಲ್ಪ ನನ್ನ ಮಕ್ಕಳನ್ನು ನೋಡಿಕೊಳ್ಳಿ. ಹಸಿವು ಎಂದು ಅತ್ತರೆ ಅವರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ. ಅದಕ್ಕೆಲ್ಲ ನನ್ನ ಬಳಿ ದುಡ್ಡು ಕೇಳುವಷ್ಟು ನೀವು ಚೀಪ್‌ ಅಲ್ಲ ಅಂತ ನನಗೆ ಗೊತ್ತು. ನಾನು ಹಾಗೇ ಸ್ವಲ್ಪ ಹೊರಗೆ ಹೋಗಿ ಬರ್ತೀನಿ….. ಓ.ಕೆ., ಬಾಯ್‌!” ಎಂದಾಗ ಗುಂಡ ಪೂರ್ತಿ ಕಕ್ಕಾಬಿಕ್ಕಿ!

ಗುಂಡಿ : ರೀ…. ಆ ಪೇಪರ್‌ ಈ ಕಡೆ ಕೊಡಿ. ಬೆಳಗ್ಗೆಯಿಂದ ಓದಕ್ಕೇ ಆಗ್ಲಿಲ್ಲ.

ಗುಂಡ : ಛೇ…. ಛೇ! ನೀನೆಂಥ ಗೂಶ್ಲು….. ಹಳೆ ಕಾಲದವರ ತರಹ ಇನ್ನೂ ಪೇಪರ್‌ ಓದುತ್ತಿದ್ದೀಯಾ…. ಇಷ್ಟೆಲ್ಲ ಟೆಕ್ನಿಕ್‌ ಬದಲಾಗಿದೆ…. ನೀನು ನೋಡಿದ್ರೆ, ತಗೋ ಈ ನನ್ನ ಐಪ್ಯಾಡ್‌….. ಎಲ್ಲಾ ನೋಡಿಕೋ.

ಗುಂಡಿ ಆ ಐಪ್ಯಾಡ್‌ ತೆಗೆದುಕೊಂಡು ನೋಡಿದಾಗ ಅದರಲ್ಲಿ 4-6 ಜಿರಲೆ ಮೊಟ್ಟೆಗಳಿದ್ದವು. ಗುಂಡಿ ಅದನ್ನು ಒದರಿ ಕೆಲಸ ಮುಂದುವರಿಸಿದಳು.

ಗುಂಡಿ ಮನೆಯಲ್ಲಿ  ಟಿವಿ ನೋಡುತ್ತಾ ಕುಳಿತಿದ್ದಳು.

ಗುಂಡ : ಏನು ನೋಡ್ತಿದ್ದೀಯಾ ಆಗಿನಿಂದ…?

ಗುಂಡಿ : ಕುಕರಿ ಶೋ ಬರ್ತಿದೆ.

ಗುಂಡ : ದಿನವಿಡೀ ಟಿವಿ ಮುಂದೆ ಕುಳಿತು ಕುಕರಿ ಶೋ ನೋಡಿದರೆ ಏನು ಬಂತು ಭಾಗ್ಯ? ಅದರ ತರಹಾನೇ ಅಡುಗೆ ಮಾಡಕ್ಕೂ ಬರಬೇಕು.

ಗುಂಡಿ : ಬೇಡ… ನನ್ನ ಬಾಯಿ ಕೆರಳಿಸಬೇಡಿ! ನೀವು ಟಿವಿ ಮುಂದೆ ಕುಳಿತು `ಕೌನ್‌ ಬನೇಗಾ ಕರೋಡ್‌ಪತಿ?’ ಅಂತ ಆ ಕಾಲದಿಂದ ನೋಡ್ತಾನೇ ಇದ್ದೀರಿ…. ಯಾವ ಭಾಗ್ಯಕ್ಕೆ?

ಗುಂಡಿ : ಅಯ್ಯೋ…. ಇವತ್ತು ಅತಿಥಿಗಳು ಬರ್ತಿದ್ದಾರೆ. ಮನೆಯಲ್ಲಿ ತಿಳಿಸಾರು ಬಿಟ್ಟರೆ ಬೇರೇನೂ ಮಾಡಿಲ್ಲ.

ಗುಂಡ : ಏನೂ ಪರವಾಗಿಲ್ಲ… ನಾನು ಮ್ಯಾನೇಜ್‌ ಮಾಡ್ತೀನಿ ಬಿಡು. ಬಂದವರ ಎದುರಿಗೆ ಬಿಸಿ ಅನ್ನ ಬಡಿಸಿ ಒಳಗೆ ಹೋಗಿರು. ತಕ್ಷಣ ಅಡುಗೆ ಮನೆಯಲ್ಲಿ ಒಂದು ಪಾತ್ರೆ ಬೀಳಿಸು. ಏನಾಯ್ತು ಅಂತ ನಾನು ಕೇಳ್ತೀನಿ, `ವೆಜಿಟೆಬಲ್ ಕುರ್ಮಾ’ ಪೂರ್ತಿ ಕೆಳಗೆ ಬಿದ್ದೋಯ್ತು ಅನ್ನು.

ಗುಂಡಿ : ಹ್ಞೂಂ…. ಆಮೇಲೆ?

ಗುಂಡ : ಆಗ ನಾನು, ಹೋಗಲಿ ಬಿಡು. ಬೇರೆ ಡಿಶ್‌ ಇದೆಯಲ್ಲ ಅದನ್ನೇ ತಾ ಅಂತೀನಿ.

ಗುಂಡಿ : ಹ್ಞೂಂ….. ಆಮೇಲೆ?

ಗುಂಡ : ಇನ್ನೊಂದು 2 ನಿಮಿಷ ಬಿಟ್ಟು ಬೇರೆ ಪಾತ್ರೆ ಬೀಳಿಸು. ಏನಾಯ್ತು ಅಂತ ನಾನು ತಕ್ಷಣ ಕೇಳಿದಾಗ, `ಪನೀರ್‌ ಬಟರ್‌ ಮಸಾಲ’ ಪೂರ್ತಿ ಚೆಲ್ಲಿಹೋಯ್ತು ಅಂತ ನೀನು ಸೊರಭರ ಕಣ್ಣು ಮೂಗು ಒರೆಸಿಕೊ. ಆಗ ನಾನು ಉಳಿದ ಡಿಶ್‌ ತಗೊಂಬಾ ಅಂತೀನಿ. ನೀನು ತಿಳಿ ಸಾರು ತಂದ್ರೆ ಆಯ್ತು…..ಅತಿಥಿಗಳು ಬಂದ ನಂತರ ಮಾತುಕಥೆ ಮುಗಿದ ಮೇಲೆ ಅವರಿಗೆ ಬಿಸಿ ಅನ್ನ ಬಡಿಸಲಾಯಿತು. ಒಳಗೆ ಹೋದ ಗುಂಡಿ ಪಾತ್ರೆ ಏನೋ ಬೀಳಿಸಿದಳು.

ಗುಂಡ : ಅಯ್ಯೋ…. ಏನಾಯ್ತೆ ಮಾರಾಯ್ತಿ?

ಗುಂಡಿ : ಹಾಳಾದ್ದು 3ನೇ ಪಾತ್ರೆ ಮೊದಲೇ ಬಿದ್ದು ಹೋಯ್ತು!

ಗುಂಡಿ ಅಪರೂಪಕ್ಕೆ ವೆಜಿಟೆಬಲ್ ಸಾಗು ಮಾಡಿದ್ದಳು. ತಕ್ಷಣ ಅದನ್ನು ನೀಟಾಗಿ ಡೈನಿಂಗ್‌ ಟೇಬಲ್ ಮೇಲೆ ಅರೇಂಜ್‌ ಮಾಡಿ, ಫೋಟೋ ತೆಗೆದು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದಳು.

ಗುಂಡ ಬಂದ ಮೇಲೆ ಎಲ್ಲರಿಗೂ ಊಟ ಬಡಿಸಲಾಯಿತು. ಗುಂಡಿ ಫೇಸ್‌ಬುಕ್‌ ನೋಡಿದ್ದೂ ನೋಡಿದ್ದೇ! ಆಗ ಯಾರೋ ಕಿರುಚಿದಂತಾಯ್ತು.

ಗುಂಡ : ಏನೇ ಇದೂ! ಇದರಲ್ಲಿ ಉಪ್ಪೇ ಇಲ್ಲ.

ಗುಂಡಿ :  ಅಯ್ಯೋ…. ನಿಮ್ಮ ಬಾಯಿ ಚಪಲಕ್ಕೆ ಏನು ಹೇಳಲಿ? ಬೆಳಗಿನಿಂದ ಈ ಸಾಗುವಿಗೆ ಫೇಸ್‌ಬುಕ್‌ನಲ್ಲಿ 253 ಲೈಕ್ಸ್ ಮತ್ತು 98 ಜನ `ಯಮ್ಮೀ!’ ಅಂತ ಕಮೆಂಟ್‌ ಮಾಡಿದ್ದಾರೆ. ಸುಮ್ನೆ ಹಾಕಿದ್ದನ್ನು ತಿಂದು ಎದ್ದು ಹೋಗ್ರಿ!

ಪತ್ನಿ : ಏನೂಂದ್ರೆ…. ಹ್ಯಾಪಿ ಬರ್ತ್‌ಡೇ ಟು ಯೂ! ಐ ಲವ್ ಯೂ ಸೋ ಮಚ್‌…. ಅದಕ್ಕಾಗಿಯೇ ಈ ಸಂದರ್ಭಕ್ಕಾಗಿ ಒಳ್ಳೆ ಡ್ರೆಸ್‌ ಕೊಂಡು ತಂದಿದ್ದೇನೆ. ನೋಡಿದರೆ ನೀವಂತೂ ಫುಲ್ ಖುಷ್‌ ಆಗಿಬಿಡ್ತೀರಿ!

ಪತಿ : ಹೌದಾ? ಲವ್ ಯೂ ಟೂ ಡಾರ್ಲಿಂಗ್‌! ಎಲ್ಲಿ ಬೇಗ ಅದನ್ನು ತೋರಿಸು…..

ಪತ್ನಿ : ಅಯ್ಯೋ…. ಹಾಗೇ ತೋರಿಸೋದೇನು? ಹಾಕ್ಕೊಂಡು ಬಂದೇ ತೋರಿಸ್ತೀನಿ ಇರಿ.

ಅಂಗಡಿಯವನು : ಮೇಡಂ, ನಮ್ಮ ಅಂಗಡಿಯ ಎಲ್ಲಾ ಬಗೆಯ ಶೂ, ಚಪ್ಪಲಿ, ಸ್ಯಾಂಡಲ್ಸ್ ನಿಮಗೆ ತೋರಿಸಿದ್ದಾಯಿತು. ಈಗ ಯಾವ ಜೋಡಿಯೂ ನನ್ನ ಬಳಿ ಉಳಿದಿಲ್ಲ.

ಮೇಡಂ : ಓ… ಹಾಗಾದ್ರೆ… ಆ ಟೇಬಲ್ ಸೈಡ್‌ನಲ್ಲಿದೆಯಲ್ಲಾ, ಆ ಬಾಕ್ಸ್ ತೋರಿಸಿಬಿಡಿ. ಇನ್ನೇನೂ ಕೇಳೋಲ್ಲಪ್ಪ.

ಅಂಗಡಿಯವನು : ಅಯ್ಯೋ ತಾಯಿ, ಅದರಲ್ಲಿ ನನ್ನ ಲಂಚ್‌ ಬಾಕ್ಸಿದೆ.

ಹೆಂಡತಿ ಬೆಳಗ್ಗೆ ಏಳಲಾರದೆ ಒದ್ದಾಡುತ್ತಿದ್ದಳು.

ಗುಂಡ : ಏನಾಯ್ತು ಡಾರ್ಲಿಂಗ್‌?

ಗುಂಡಿ : ಯಾಕೋ ಅರೆ ತಲೆನೋವು ಕಾಡ್ತಾ ಇದೆ.

ಗುಂಡ : ಹ್ಞೂಂ ಏನು ಮಾಡೋಕ್ಕಾಗುತ್ತೆ… ಎಷ್ಟಿದ್ಯೋ ಅಷ್ಟೇ ನೋಯುತ್ತಪ್ಪ.

ಗುಂಡ ಆಫೀಸಿಗೆ ಹೋಗುವಷ್ಟರಲ್ಲಿ ಆ ದಿನವಿಡೀ ಅವನಿಗೆ ಮೈ ಕೈ ನೋವು ಕಾಡತೊಡಗಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ