ಬಾಲ್ಯದಿಂದಲೇ ಗಂಡು ಹುಡುಗರಿಗೆ ಆಟಿಕೆಯ ಕಾರು, ವಿಡಿಯೋ ಗೇಮ್ಸ್, ಗಿಫ್ಟ್ ಆಗಿ ದೊರೆತರೆ, ಹುಡುಗಿಯರಿಗೆ ಮಾತ್ರ ಗಿಫ್ಟ್ ಆಗಿ ಮೊದಲ ಆಯ್ಕೆ ಗೊಂಬೆಗಳೇ ಆಗಿರುತ್ತವೆ. ದೊಡ್ಡವರಾದ ಮೇಲೂ ಸಹ ಸಮಾಜದ ದೃಷ್ಟಿಯಲ್ಲಿ ಹೆಣ್ಣು ಅಡುಗೆ ಮಾಡುತ್ತಾ ಮನೆಗಷ್ಟೇ ಸೀಮಿತವಾಗಿದ್ದರೆ ಸರಿ ಎಂದೇ ಇಂದಿಗೂ ಬಿಂಬಿಸಲಾಗುತ್ತದೆ. ಮನೆ, ಕುಟುಂಬ, ಅಡುಗೆಮನೆಯ ಹೊಸಿಲು ದಾಟಿ ಹೊರಬರುವಷ್ಟರಲ್ಲಿ ಅದೃಶ್ಯ ಗೋಡೆಗಳು ಅವಳನ್ನು ಮುಂದುವರಿಯದಂತೆ ಸದಾ ತಡೆಯುತ್ತವೆ.
ಕಾಲ ಕಳೆದಂತೆ ಹೆಂಗಸರು ಈ ಅದೃಶ್ಯ ಗೋಡೆ ಅಥವಾ ಗ್ಲಾಸ್ ಸೀಲಿಂಗ್ ರೂಪದ ಅಡ್ಡಿ ಅಡಚಣೆಗಳನ್ನು ದಾಟಿ ಮುಂದುವರಿಯುವ ಉತ್ಸಾಹ, ಸಾಹಸ ತೋರುತ್ತಿದ್ದಾರೆ. ಮೇರಿ ಕೋಮ್ ಅಥವಾ ಫೈರ್ ಫೈಟರ್ ಹರ್ಷಿಣಿ ಹಾನ್ಹೇಕರ್ ಇರಲಿ, ಯಾವ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಮಹಿಳೆಯರು ಅನ್‌ಫಿಟ್ ಎನ್ನುತ್ತಿದ್ದರೋ ಅಂಥ ಕಡೆ ಗುರಿ ಸಾಧಿಸಿ ಸೈ ಎನಿಸಿದ್ದಾರೆ. ಅಂಥ ಕಡೆಯ ಗ್ಲಾಸ್ ಸೀಲಿಂಗ್ ಸವಾಲಿಗೇ ಪಣವೊಡ್ಡಿದ್ದಾರೆ. ಇತ್ತೀಚೆಗೆ ದೇಶದ ಮೂವರು ಮೊದಲ ಮಹಿಳಾ ಫೈಟರ್ಸ್ ಆದ ಅನಿ ಚತುರ್ವೇದಿ, ಭಾವನಾ ಕಂಠ್, ಮೋಹನಾಸಿಂಗ್ ಫೈಟರ್ ಪ್ಲೇನ್ ಉಡಾಯಿಸಿ ರೆಕಾರ್ಡ್ ಸ್ಥಾಪಿಸಿದ್ದಾರೆ.
ಒಂದು ಅದೃಶ್ಯ ಗೋಡೆ
ಮಹಿಳೆಯರು ಇಂದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಸೈ ಎನಿಸಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅಥವಾ ಫೇಸ್‌ಬುಕ್ ಚೀಫ್ ಆಪರೇಟಿಂಗ್ ಆಫೀಸರ್ ಶೆರಿಲ್ ಅಥವಾ ಅಮೆರಿಕಾದ ಡೆಮೋಕ್ರಾಟಿಕ್ ಪ್ರೆಸಿಡೆನ್ಶಿಯಲ್ ನಾಮಿನಿ ಹಿಲೆರಿ ಕ್ಲಿಂಟೆನ್ ಇರಲಿ, ಇವರುಗಳೆಲ್ಲ ವಿಶ್ವದ ಅತ್ಯುನ್ನತ ಪ್ರಭಾವಶಾಲಿ ಹುದ್ದೆಗಳಲ್ಲಿ ಗೆದ್ದು ತೋರಿಸಿದ್ದಾರೆ.
ಇಂದಿಗೂ ಸಹ ಹೆಂಗಸರು ತಮಗೆ ಸಿಗಬೇಕಾದ ಪ್ರತಿಷ್ಠೆ ಮಾನ ಸನ್ಮಾನಗಳಿಗಾಗಿ ಎಷ್ಟೋ ಪ್ರಯಾಸ ಪಡಬೇಕಾಗಿದೆ ಎಂಬುದು ಬೇರೆ ವಿಷಯ. ಆದರೆ ಇವರ ಸಮಾನ ಯೋಗ್ಯರಾದ ಸಹೋದ್ಯೋಗಿ ಗಂಡಸರಿಗೆ ಅದು ಸಹಜವಾಗಿಯೇ ಸಿಗುತ್ತದೆ. ಯಶಸ್ಸಿನ ಮಾರ್ಗದ ಈ ಅದೃಶ್ಯ ಗೋಡೆಯ ಮೇಲೆ ಬಿರುಕುಗಳೇನೋ ಮೂಡಿವೆ, ಆದರೆ ಈಗಲೂ ಇದನ್ನು ಪೂರ್ತಿಯಾಗಿ ಕೆಡವಲಾಗಿಲ್ಲ.
ಪುರುಷ ಮಾನಸಿಕತೆ
ವಿಶ್ವದ ಅತಿ ಶಕ್ತಿಶಾಲಿ ರಾಷ್ಟ್ರ ಅಮೆರಿಕಾಗೆ 2016, ಅದರಲ್ಲೂ ಮಹಿಳೆಯರಿಗೆ ಐತಿಹಾಸಿಕ ಎನಿಸಿದೆ. ಮೊಟ್ಟ ಮೊದಲ ಬಾರಿಗೆ ಹಿಲೆರಿ ಕ್ಲಿಂಟನ್ ಅಮೆರಿಕಾದ ರಾಷ್ಟ್ರಪತಿ ಪದವಿಗಾಗಿ ಮೊದಲ ಮಹಿಳಾ ಅಭ್ಯರ್ಥಿಯಾಗಿ ಆರಿಸಲ್ಪಟ್ಟರು. ಅವರ ನಾಮಿನೇಶನ್ ಸಂದರ್ಭದಲ್ಲಿ ಸಮಾಜದಲ್ಲಿ ಬೇಕೆಂದೇ ಮಹಿಳಾ ನಾಯಕಿಯರ ಕುರಿತಾಗಿ ಅವಿಶ್ವಾಸ, ಅಡೆತಡೆಗಳು, ನಿಷೇಧ ಮುಂತಾದ ವಿಷಯಗಳು ಮುಂದುವರಿದಿವೆ ಎಂದು ತಿಳಿಯಿತು. ಈ ಬೆಂಕಿಯನ್ನು ಭಯಂಕರ ಜ್ವಾಲೆಯಾಗಿಸುವ ಕೆಲಸವನ್ನು ಇಂಟರ್‌ನೆಟ್ ಸೋಶಿಯಲ್ ಮೀಡಿಯಾ ಮಾಡಿದೆ. ಹಿಲರಿ ಹೆಣ್ಣಾಗಿದ್ದುದೇ ಈ ಆಕ್ರೋಶಕ್ಕೆಲ್ಲ ಮೂಲವಾಗಿತ್ತು. ಪ್ರೆಸಿಡೆನ್ಶಿಯಲ್ ಡಿಬೆಟ್ ಸಂದರ್ಭದಲ್ಲಿ ಹಿಲೆರಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಅವರ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ 51 ಸಲ ಇವರ ಮಾತಿಗೆ ಅಡ್ಡಿಪಡಿಸಿದರು. ಇದು ಪುರುಷ ಮಾನಸಿಕತೆಯ ಪ್ರತೀಕವಲ್ಲದೆ ಮತ್ತೇನು? ಅಸಲಿಗೆ, ಇದು ಗಂಡಸರ ಒಂದು ಸ್ವಾಭಾವಿಕ ಪ್ರವೃತ್ತಿಯೇ ಆಗಿದೆ. ಆ ಮೂಲಕ ಅವರು ಹೆಂಗಸರ ಮೇಲೆ ತಮ್ಮ ಸರ್ವೋಚ್ಚ ವ್ಯವಹಾರವನ್ನು ತೋರಿಸಿಕೊಳ್ಳಲು ಈ ರೀತಿ ಆಡುತ್ತಾರೆ.