ಮಧ್ಯಾಹ್ನದ ಸಮಯ ಫ್ಲ್ಯಾಟ್‌ನ ಕರೆಗಂಟೆ ಬಾರಿಸಿತು. ಆ ಸಮಯದಲ್ಲಿ ರಶ್ಮಿ ಮನೆಯಲ್ಲಿ ಒಬ್ಬಳೇ ಇದ್ದಳು. ಪತಿ ಆಫೀಸಿಗೆ ಮತ್ತು ಮಗ ಸ್ಕೂಲಿಗೆ ಹೋಗಿದ್ದರು. ಅವಳು ಬಾಗಿಲು ತೆಗೆಯಲು ಹೊರಗೆ ಬಂದಾಗ ಎದುರಿಗೆ ಒಬ್ಬ ಯುವತಿ ಕೈಯಲ್ಲಿ ಬ್ಯಾಗ್‌ ಹಿಡಿದು ನಿಂತಿದ್ದಳು. ಹುಡುಗಿ ಆಗಿದ್ದರಿಂದ ಅವಳು ಹೆಚ್ಚೇನೂ ವಿಚಾರ ಮಾಡದೆ ಬಾಗಿಲು ತೆರೆದಳು.

ಆ ಯುವತಿ ಒಳಗೆ ಬರುತ್ತಿದ್ದಂತೆ ಹೇಳಿದಳು, “ಹಲೋ ಮ್ಯಾಮ್, ನಾನು ಕಾಸ್ಮೆಟಿಕ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಂಪನಿಯ ಉತ್ಪಾದನೆಗಳು ತುಂಬಾ ಒಳ್ಳೆಯ ಗುಣಮಟ್ಟ ಹೊಂದಿವೆ. ಎಲ್ಲಕ್ಕೂ ಡಿಫರೆಂಟ್‌.”

“ನನಗೆ ಬೇಕಿಲ್ಲ,” ಎಂದು ರಶ್ಮಿ ಸ್ವಲ್ಪ ಶುಷ್ಕ ಧ್ವನಿಯಲ್ಲಿಯೇ ಹೇಳಿದಳು.

ಆದರೆ ಆ ಯುವತಿ ಉತ್ಸಾಹದಿಂದಲೇ, “ಮೇಡಂ ಸ್ವಲ್ಪ ಕೇಳಿ. ನಮ್ಮ ಕಂಪನಿಯ ಆಫರ್‌ ಹೇಗಿದೆಯೆಂದರೆ, ನೀವು ಖುಷಿ ಆಗದೆ ಇರಲಾರಿರಿ. ನಾನು ನಮ್ಮ ಪ್ರಾಡಕ್ಟ್ ನಿಂದ ನಿಮಗೆ ಉಚಿತವಾಗಿ ಮಸಾಜ್‌ ಮಾಡ್ತೀನಿ. ಜೊತೆಗೆ ಮೇಕಪ್‌ ಕೂಡ ಮಾಡ್ತೀನಿ. ಆಮೇಲೆ ನೀವು ಪ್ರಾಡಕ್ಟ್ ಖರೀದಿಸಿದರೆ ಒಂದರ ಜೊತೆಗೆ ಒಂದು ಫ್ರೀ ದೊರೆಯುತ್ತದೆ.”

ಯುವತಿ ಸ್ವಲ್ಪ ಹೊತ್ತು ಮೌನವಾಗಿದ್ದು ನಂತರ ಹೇಳಿದಳು, “ಮೇಡಂ, ನೀವು ನಮ್ಮ ಕಂಪನಿಯ ಕಸ್ಟಮರ್‌ ಆಗುವುದರಿಂದ ವರ್ಷಕ್ಕೆ 1-2 ಫೇಶಿಯಲ್ ಉಚಿತವಾಗಿ ದೊರೆಯುತ್ತವೆ. ಅದು ಕೂಡ ನಿಮ್ಮ ಮನೆಗೆ ಬಂದು ಈ ಸೇವೆ ಕೊಡುತ್ತೇವೆ.”

ಆ ಯುವತಿ ಕೊಟ್ಟ ಪ್ರಸ್ತಾಪ ರಶ್ಮಿಗೆ ಹಿಡಿಸಿತು. ಹೀಗಾಗಿ ಅವಳಿಗೆ ಒಳಗೆ ಬರಲು ಅನುಮತಿ ಕೊಟ್ಟಳು. ಯುವತಿ ಬ್ಯಾಗ್‌ನಿಂದ ಅನೇಕ ಪ್ರಾಡಕ್ಟ್ ಗಳನ್ನು ತೆಗೆದು ತೋರಿಸಿದಳು. ಅವನ್ನು ನೋಡಿ ಖುಷಿಗೊಂಡ ರಶ್ಮಿ ಆ ಯುವತಿಯನ್ನು ಬೆಡ್‌ರೂಮಿಗೆ ಕರೆದೊಯ್ದಳು. ಯುವತಿ ರಶ್ಮಿಯನ್ನು ಡ್ರೆಸ್ಸಿಂಗ್‌ ಟೇಬಲ್ ಮುಂದೆ ಕೂರಿಸಿದಳು. ತನ್ನೊಂದಿಗೆ ಏನು ಘಟಿಸಲಿದೆ ಎನ್ನುವುದರ ಕಲ್ಪನೆ ರಶ್ಮಿಗೆ ಇರಲಿಲ್ಲ. ಈ ಮಧ್ಯೆ ಯುವತಿ ತನ್ನ ಮೊಬೈಲ್ ಕೈಯಲ್ಲಿ ಹಿಡಿದು ಯಾರಿಗೊ ಡೈಲ್‌ ಮಾಡಿದಳು. ಕೆಲವೇ ನಿಮಿಷಗಳಲ್ಲಿ ಯುವಕನೊಬ್ಬ ಅಲ್ಲಿಗೆ ಬಂದ. ಆ ಯುವತಿ ಹೋಗಿ ಸದ್ದಿಲ್ಲದೆ ಬಾಗಿಲು ತೆರೆದಳು. ಮುಖಕ್ಕೆ ಮಾಡಿದ ಲೇಪನದ ವಾಸನೆಯಿಂದ ರಶ್ಮಿ ಆಗಲೇ ಪ್ರಜ್ಞಾಹೀನಳಾಗಿದ್ದಳು.

ಸುಮಾರು ಅರ್ಧ ಗಂಟೆಗಳ ಬಳಿಕ ರಶ್ಮಿಗೆ ಎಚ್ಚರವೇನೊ ಆಯಿತು. ಆದರೆ ಬೆಡ್‌ರೂಮಿನ ಸ್ಥಿತಿ ನೋಡಿ ಅವಳಿಗೆ ಗಾಬರಿಯಾಯಿತು. ಕಪಾಟಿನಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣಗಳು ಕಾಣೆಯಾಗಿದ್ದವು. ತಾನು ಕಳ್ಳತನಕ್ಕೆ ಬಲಿಯಾಗಿದ್ದೇನೆ ಎನ್ನುವುದು ಅವಳ ಗಮನಕ್ಕೆ ಬಂತು. ಅವಳು ತಕ್ಷಣವೇ ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಟ್ಟಳು. ಪೊಲೀಸರು ದೂರು ದಾಖಲಿಸಿಕೊಂಡು, ಯುವತಿಯ ಮುಖಚಹರೆ ಹಾಗೂ ಸಿಸಿಟಿವಿಯ ದಾಖಲೆಗಳಿಂದ ಪೊಲೀಸರು ಕೆಲವೇ ದಿನಗಳಲ್ಲಿ ಆ ಯುವತಿಯನ್ನು ಬಂಧಿಸಿದರು.

ಏಕಾಂಗಿ ಮಹಿಳೆಯರೇ ಗುರಿ

ಚಿಕ್ಕಪುಟ್ಟ ನಗರಗಳಲ್ಲಿ ಹಲವು ಗ್ಯಾಂಗ್‌ಗಳು ಸಕ್ರಿಯವಾಗಿರುತ್ತವೆ. ಅವು ಏನೋ ನೆಪ ಮಾಡಿಕೊಂಡು ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಮನೆಯಲ್ಲಿ ಮಹಿಳೆಯರು ಏಕಾಂಗಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುತ್ತವೆ. ಮಹಿಳೆಯರನ್ನು ಹೇಗೆ ನಿಯಂತ್ರಣದಲ್ಲಿಡಬಹುದು ಎನ್ನುವುದು ಗೊತ್ತು. ಹೀಗಾಗಿ ಅವು ಮಹಿಳೆಯರನ್ನೇ ಟಾರ್ಗೆಟ್‌ ಮಾಡಿಕೊಳ್ಳುತ್ತವೆ.

ಬೆಂಗಳೂರಿನ ಅರುಣಾ ಜೈನ್‌ರ ಪತಿ ನಿವೃತ್ತ ಎಕ್ಸಿಕ್ಯೂಟಿವ್‌ ಎಂಜಿನಿಯರ್‌. ಗಂಡಹೆಂಡತಿ ಹೊರತುಪಡಿಸಿ ಆ ಮನೆಯಲ್ಲಿ ಬೇರಾರೂ ಇರಲಿಲ್ಲ. ಹೀಗಾಗಿ ಮನೆಯ ಒಂದು ಭಾಗವನ್ನು ಬಾಡಿಗೆಗೆ ಕೊಡಲು ನಿರ್ಧರಿಸಿದರು. ಈ ಕುರಿತಂತೆ ಅವರು ಮನೆ ದಲ್ಲಾಳಿ ಜೊತೆ ಮಾತನಾಡಿದರು. ದಲ್ಲಾಳಿಯ ಮುಖಾಂತರ ಇಬ್ಬರು ವ್ಯಕ್ತಿಗಳು ಒಂದು ಮಧ್ಯಾಹ್ನ ಆ ಮನೆಗೆ ಬಂದರು. ಅವರು ತಮಗೆ ಮನೆ ಇಷ್ಟವಿರುವುದಾಗಿ ಹಾಗೂ ಕೆಲವೇ ದಿನಗಳಲ್ಲಿ ಬಂದು ಡೆಪಾಸಿಟ್‌ ಕೊಡುವುದಾಗಿ ಹೇಳಿ ಹೋದರು.

ಅದೊಂದು ದಿನ ಮನೆಯ ಕರೆಗಂಟೆ ಬಾರಿಸಿತು. ಅವರು ಬಾಗಿಲ ಹೋಲ್‌ನಿಂದ ನೋಡಿದರು. ಹೊರಗೆ 3 ಜನ ನಿಂತಿದ್ದರು. ಅದರಲ್ಲೊಬ್ಬ ಮನೆ ನೋಡಲು ಬಂದ ವ್ಯಕ್ತಿಯಾಗಿದ್ದ. ಬಹುಶಃ ಅಡ್ವಾನ್ಸ್ ಕೊಡಲು ಬಂದಿದ್ದಾರೆಂದು ಭಾವಿಸಿ ಬಾಗಿಲು ತೆರೆದರು. ಒಳಬಂದವರು ಇವರನ್ನು ಹೆದರಿಸಿ ಬೆದರಿಸಿ ನಗದು, ಆಭರಣ ಅಷ್ಟೇ ಏಕೆ, ಕಾರನ್ನು ಕೂಡ ಕದ್ದುಕೊಂಡು ಹೊರಟುಹೋದರು. ಆ ಬಳಿಕ ತಿಳಿದುಬಂದ ಸಂಗತಿಯೇನೆಂದರೆ ಮನೆ ತೋರಿಸಲು ಬಂದ ಬ್ರೋಕರ್‌ಗೆ ಅವರಾರೂ ಪರಿಚಯವೇ ಇರಲಿಲ್ಲ.

ಹಲವು ದಿನಗಳ ಬಳಿಕ ಆ ತಂಡ ಸಿಕ್ಕಿಬಿದ್ದಿತು. ತಾವು ಅಂತಹ ಏಕಾಂಗಿ ಮಹಿಳೆಯರಿರುವ ಕುಟುಂಬವನ್ನೇ ಹುಡುಕುತ್ತಿದ್ದುದಾಗಿ ಅವರು ಹೇಳಿದರು.

ಕಳ್ಳತನದ ಜೊತೆ ಹತ್ಯೆ

ಮತ್ತೊಂದು ನಗರದಲ್ಲಿ ಮಧ್ಯಾಹ್ನದ ಹೊತ್ತು ಇಬ್ಬರು ವ್ಯಕ್ತಿಗಳು ಚಂದಾ ವಸೂಲಿಯ ನೆಪದಲ್ಲಿ ಒಳಬಂದು ಏಕಾಂಗಿ ಮಹಿಳೆಗೆ ಚಾಕು ತೋರಿಸಿ ಅವರನ್ನು ಲೂಟಿ ಮಾಡತೊಡಗಿದರು. ಅಷ್ಟರಲ್ಲಿ ಅವರ ಪತಿ ಮನೆಯೊಳಗೆ ಪ್ರವೇಶಿಸಿದರು. ಕೇಡಿಗಳು ಅವರ ತಲೆಗೆ ಬ್ಯಾಟಿನಿಂದ ಹೊಡೆದರು. ಬಳಿಕ ಹೆಂಡತಿಗೂ ಏಟು ಕೊಟ್ಟರು. ಪಕ್ಕದ ಮನೆಯಲ್ಲಿ ಶಬ್ದ ಕೇಳಿ ನೆರೆಮನೆಯ ಮಹಿಳೆಯೊಬ್ಬರು ಓಡಿಬಂದರು. ಕೇಡಿಗಳು ಅವಳಿಗೂ ಹೊಡೆದು ಅವಳ ಕೈಯಲ್ಲಿದ್ದ ಉಂಗುರವನ್ನು ಕಿತ್ತುಕೊಂಡು ಹೋದರು.

ಇನ್ನೊಂದು ಘಟನೆ ಮಾತ್ರ ತುಂಬಾ ಕರುಣಾಜನಕ. ಕಳ್ಳತನಕ್ಕೆಂದು ಬಂದ ತಂಡ ಮಹಿಳೆಯನ್ನು ಹೊಡೆದು ಸಾಯಿಸಿಬಿಟ್ಟಿತು. ಮಗ ಮುಂಜಾನೆಯೇ ಹೊರಟು ಹೋಗಿರುತ್ತಿದ್ದ. ರಾತ್ರಿ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮನೆಯ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಣ, ಆಭರಣಗಳು ಕಾಣೆಯಾಗಿದ್ದವು.

ಪೊಲೀಸರು ತನಿಖೆ ನಡೆಸಿ ದೀಪಕ್‌ ಎಂಬ ಯುವಕನನ್ನು ಬಂಧಿಸಿದರು. ಆತ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ಅವನು ಆ ಮನೆಯನ್ನೇ ಟಾರ್ಗೆಟ್‌ ಮಾಡಲು ಕಾರಣ ಆ ಮನೆಯಲ್ಲಿ ಮಹಿಳೆ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಘಟನೆ ನಡೆದ ದಿನದಂದು ದೀಪಕ್‌ ಆ ಮನೆಗೆ ವೈರಿಂಗ್‌ ಚೆಕ್‌ ಮಾಡಲೆಂದು ಹೋಗಿದ್ದ. ಅವನು ನಿಯಮಿತವಾಗಿ ಆ ಕೆಲಸ ಮಾಡಲು ಬರುತ್ತಿದ್ದುದರಿಂದ ಯಾರೂ ಅವನ ಮೇಲೆ ಸಂದೇಹ ಪಡುತ್ತಿರಲಿಲ್ಲ.

ಅದೇ ರೀತಿ ಮತ್ತೊಂದು ನಗರದಲ್ಲಿ ನಡೆದ ಘಟನೆಯ ವಿವರ ಹೀಗಿದೆ. ಮನೆಯೊಂದರಲ್ಲಿ ಮಹಿಳೆಯೊಬ್ಬಳು ಏಕಾಂಗಿಯಾಗಿರುವುದನ್ನು ನೋಡಿದ ಬೈಕ್‌ ಸವಾರರಿಬ್ಬರು ಮೀಟರ್‌ ಚೆಕ್‌ ಮಾಡುವ ನೆಪದಲ್ಲಿ ಆ ಮನೆಗೆ ಬಂದರು. ಚಾಕು ತೋರಿಸಿ ಹಣ, ಆಭರಣ ಲೂಟಿ ಮಾಡಿಕೊಂಡು ಹೊರಟುಹೋದರು. ಹೀಗಾಗಿ ಯಾರ ಮೇಲೆ ನಂಬಿಕೆ ಇಡಬೇಕು ಎನ್ನುವುದೇ ತಿಳಿಯದಾಗುತ್ತದೆ.

ಬಟ್ಟೆ ಅಂಗಡಿಯೊಂದರ ಮಾಲೀಕನ 55 ವರ್ಷದ ಹೆಂಡತಿ ಪೂಜಾ ಹಾಡುಹಗಲೇ ಕೊಲೆಗೀಡಾದಳು. ಅದರ ಜೊತೆಗೆ ಮನೆಯ ಅಗತ್ಯ ಸಾಮಗ್ರಿಗಳೂ ಕಳುವಾಗಿದ್ದವು. ಕೆಲವು ದಿನಗಳ ಬಳಿಕ ಆ ಕೊಲೆಯ ರಹಸ್ಯವನ್ನು ಪೊಲೀಸರು ಬಿಚ್ಚಿಟ್ಟರು. ಆ ವಿಷಯ ಕೇಳಿ ಎಲ್ಲರೂ ಚಕಿತರಾದರು. ಅವರ ಅಂಗಡಿಯಲ್ಲಿ 30 ವರ್ಷದಿಂದ ಕೆಲಸ ಮಾಡುತ್ತಿದ್ದ ನೌಕರನ ಮಗ ಮೋಹಿತ್‌ ಈ ಕೆಲಸ ಮಾಡಿಸಿದ್ದ. ಆ ಮನೆಯಲ್ಲಿ ಮಧ್ನಾಹ್ನ ಹೊತ್ತು ಆ ಮಹಿಳೆ ಏಕಾಂಗಿಯಾಗಿರುತ್ತಾಳೆಂದು ಮೋಹಿತ್‌ಗೆ ಗೊತ್ತಿತ್ತು.

ಪೊಲೀಸ್‌ ಅಧಿಕಾರಿಯೊಬ್ಬರ ಪ್ರಕಾರ, ಎಚ್ಚರಿಕೆಯಿಂದಿರುವುದರ ಮೂಲಕ ಇಂತಹ ಘಟನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಯಾವುದೇ ಅಪರಿಚಿತ ವ್ಯಕ್ತಿಗೆ ಮನೆ ಬಾಗಿಲು ತೆರೆಯಬೇಡಿ. ಮನೆಯ ಗೇಟ್‌ಗೆ ಸಿಸಿಟಿವಿ ಕ್ಯಾಮೆರಾ ಅಳಡಿಸುವುದು ಅಪರಾಧಿಗಳಿಗೆ ಹೆದರಿಕೆ ಹುಟ್ಟಿಸುತ್ತದೆ. ಬದಲಾಗುತ್ತಿರುವ ದಿನಗಳಲ್ಲಿ ಲೂಟಿಗಾಗಿ ಹೊಸ ಹೊಸ ವಿಧಾನಗಳನ್ನು ಅನುಸರಿಸಲಾಗುತ್ತದೆ. ಹೀಗಾಗಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು.

– ಅರುಣಾ ಮೋಹನ್‌  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ