`ಪುರುಷತ್ವ’ ಈ ಶಬ್ದ ಭಾರತೀಯ ಗಂಡಸರಿಗೆ ಹೆಚ್ಚು ಪ್ರತಿಷ್ಠೆಯ ವಿಷಯವಾಗಿದೆ. ಅವರು ಏನೆಲ್ಲವನ್ನು ಕಳೆದುಕೊಳ್ಳಲು ಇಷ್ಟಪಡುತ್ತಾರೆ. ಆದರೆ ತಮ್ಮ ಪುರುಷತ್ವ ಕಳೆದುಕೊಳ್ಳಲು ಮಾತ್ರ ಎಂದೂ ಇಷ್ಟಪಡುವುದಿಲ್ಲ. ತಮ್ಮ ಪತ್ನಿಗೆ ಸಹಕಾರ ನೀಡುವುದರ ಮೂಲಕ ಅವರ ಈ ಪುರುಷತ್ವಕ್ಕೆ ಧಕ್ಕೆ ತಗಲುತ್ತದೆ. ಅದೇ ರೀತಿ ಪತ್ನಿ ಮುಂದೆ ದರ್ಪ ತೋರಿಸುವುದರ ಮೂಲಕ ಅವರ ಪುರುಷತ್ವಕ್ಕೆ ಮೆರುಗು ಬರುತ್ತದೆ.
ಅವರು ಪ್ರೀತಿಯಲ್ಲಿ ಪ್ರಾಣ ಕೂಡ ಕೊಡಲು ಸಿದ್ಧರು. ಆದರೆ ಪತ್ನಿಯ ಆರೋಗ್ಯ ಸಮಸ್ಯೆ ಗಮನದಲ್ಲಿಟ್ಟುಕೊಂಡು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಬಗ್ಗೆ ಅವರು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ. ಇಂದು ವೈದ್ಯ ವಿಜ್ಞಾನ ಅದೆಷ್ಟು ಪ್ರಗತಿ ಸಾಧಿಸಿದೆಯೆಂದರೆ, ನೋವು ರಹಿತ ಈ ಶಸ್ತ್ರಚಿಕಿತ್ಸೆಯನ್ನು ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಬಹುದು.
ಇದರ ಹೊರತಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕೆಲವು ಪುರುಷರು ಒಪ್ಪಿಗೆ ಸೂಚಿಸುತ್ತಾರೆ. ಅದೂ ಕೂಡ ಕದ್ದು ಮುಚ್ಚಿ ಸಂಬಂಧಿಕರಿಗೆ, ಸ್ನೇಹಿತರಿಗೆ ಇದರ ಬಗ್ಗೆ ಕಿಂಚಿತ್ತೂ ಸುಳಿ ಕೊಡುವುದಿಲ್ಲ. ಆದರೆ ಮಹಿಳೆಯರ ಸಂತಾನಹರಣ ಶಸ್ತ್ರಚಿಕಿತ್ಸೆ ಮುಕ್ತವಾಗಿ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಮಾಡಲಾಗುತ್ತದೆ. ಸರ್ಕಾರ ಕೂಡ ಮಹಿಳೆಯರ ಸಂತಾನಹರಣದ ಬಗ್ಗೆಯೇ ಹೆಚ್ಚು ಪ್ರಚಾರ ಮಾಡುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಬಹುಮಾನ ಕೂಡ ನೀಡಲಾಗುತ್ತದೆ.
ಗ್ರಾಮೀಣ ಸಂಸ್ಥೆ `ಆಶಾ’ ಕೂಡ ಮಹಿಳೆಯರಿಗೇ ಸಂತಾನಹರಣದ ಲಾಭ ಹಾಗೂ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡುತ್ತಿರುತ್ತದೆ. ತಮ್ಮ ಗುರಿ ಈಡೇರಿಸಿಕೊಳ್ಳಲು ಅವರು ಗ್ರಾಮೀಣ ಮಹಿಳೆಯರನ್ನು ವಾಹನಗಳಲ್ಲಿ ತುಂಬಿಕೊಂಡು ಶಿಬಿರಗಳಿಗೆ ಕರೆದುಕೊಂಡು ಬರುತ್ತಾರೆ. ಆದರೆ ಕೆಲವೊಮ್ಮೆ ಅವರಿಗೆ ಸೂಕ್ತ ಆರೈಕೆ ಸಿಗದೆ ತೊಂದರೆಗೆ ಸಿಲುಕುವುದೂ ಉಂಟು.
ನಮ್ಮ ದೇಶದ ಒಂದು ವಿಡಂಬನೆ ಎಂದರೆ, ಕುಟುಂಬ ಯೋಜನೆಯ ಸಂಪೂರ್ಣ ಹೊಣೆಯನ್ನು ಮಹಿಳೆಯರ ಮೇಲೆಯೇ ಹೊರಿಸಲಾಗುತ್ತದೆ. ಮಹಿಳೆಯರು ಪುರುಷರಿಗೆ ಕಾಂಡೋಮ್ ಬಳಸಲು ಕೂಡ ಹೇಳುವುದಿಲ್ಲ. ಅವರು ಕೂಡ ಯಾವುದೇ ಸಂಕೋಚವಿಲ್ಲದೆ ಅದನ್ನು ಬಳಸಲು ಮನಸ್ಸು ಮಾಡುವುದಿಲ್ಲ. ಮಹಿಳೆಯರಿಗೆ ಬಾಲ್ಯದಿಂದಲೇ ತ್ಯಾಗ ಹಾಗೂ ಕರ್ತವ್ಯ ಪಾಲನೆಯ ಪಾಠವನ್ನು ಪರಿಪಾಲಿಸಲು ಕಲಿಸಲಾಗಿರುತ್ತದೆ.
ಪುರುಷ ಸಂತಾನ ನಿಯಂತ್ರಣ ಸುಲಭ
ಡೆನ್ಮಾರ್ಕ್‌ನಲ್ಲಿ ನಡೆದ ಒಂದು ಸಮೀಕ್ಷೆಯಿಂದ ಕಂಡುಬಂದ ಸಂಗತಿಯೆಂದರೆ, ಗರ್ಭ ನಿರೋಧಕ ಬಳಸುವ ಹೆಚ್ಚಿನ ಪ್ರಮಾಣದ ಮಹಿಳೆಯರು ಖಿನ್ನತೆಗೆ ತುತ್ತಾಗುತ್ತಾರೆ. ಆಧುನಿಕ ವೈದ್ಯ ವಿಜ್ಞಾನ ಹೇಳುವುದೇನೆಂದರೆ, ಮಹಿಳೆಯರ ಸಂತಾನಹರಣಕ್ಕೆ ಹೋಲಿಸಿದರೆ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಅಷ್ಟೇನೂ ಕಷ್ಟಕರವಲ್ಲ. ಅದು ಪುರುಷರಿಗೆ ಸುರಕ್ಷಿತ ಹಾಗೂ ಕಡಿಮೆ ಖರ್ಚಿನ ವಿಧಾನವಾಗಿದೆ.
ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ವೀರ್ಯ ಸಾಗಣೆ ಮಾಡುವ ಒಂದು ನಾಳವನ್ನಷ್ಟೇ ಕತ್ತರಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ತಜ್ಞರು ಅಂಡಕೋಶದ ಮೇಲ್ಭಾಗದಲ್ಲಿರುವ ಚರ್ಮದಲ್ಲಿ ಒಂದು ಸೂಜಿ ಚುಚ್ಚಿ ಆ ಭಾಗವನ್ನು ನಿಶ್ಚೇಷ್ಟಿತಗೊಳಿಸುತ್ತಾರೆ. ಆ ಬಳಿಕ ಒಂದು ವಿಶೇಷ ಬಗೆಯ ಚಿಮ್ಮಟಿಗೆಯಿಂದ ಆ ನಾಳವನ್ನು ಹೊರ ತೆಗೆದು ಕತ್ತರಿಸಿ ಅದನ್ನು ಗಂಟು ಹಾಕಲಾಗುತ್ತದೆ. ಈ ಪ್ರಕ್ರಿಯೆಗೆ ಕೇವಲ 15-20 ನಿಮಿಷ ಮಾತ್ರ ತಗುಲುತ್ತದೆ. ಅದಕ್ಕಾಗಿ ವ್ಯಕ್ತಿಯ ಪೂರ್ಣ ದೇಹಕ್ಕೆ ಅನಸ್ಥೇಶಿಯಾ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ ಹಾಗೂ ಆಸ್ಪತ್ರೆಯಲ್ಲಿ ಇರಬೇಕಾದ ಅವಶ್ಯಕತೆಯೂ ಇರದು.
ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿ ತಾನೇ ಸ್ವತಃ ನಡೆದುಕೊಂಡು ಮನೆಗೆ ಹೋಗಬಹುದು. ಇದು ಅಷ್ಟು ಸರಳ ಹಾಗೂ ನೋವುರಹಿತ ಶಸ್ತ್ರಚಿಕಿತ್ಸೆ.
ಸೆಕ್ಸ್ ಸಾಮರ್ಥ್ಯದ ಮೇಲೆ ಪ್ರಭಾವ
ಮಹಿಳೆಗೆ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಲೋಕಲ್ ಅನಸ್ಥೇಶಿಯಾ ಕೊಡಬೇಕಾಗುತ್ತದೆ. ಒಂದು ಕಡೆ ರಂಧ್ರ ಮಾಡಿ ಹೊಲಿಗೆ ಹಾಕಬೇಕಾಗುತ್ತದೆ. ಮಹಿಳೆ ಪರಿಪೂರ್ಣ ಗುಣಮುಖಳಾಗಲು 1 ವಾರವಾದರೂ ಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಕೆಗೆ ಸೋಂಕು ಹಾಗೂ ಗಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಮಹಿಳೆಯರಿಗೆ ಬೇರೆ ಕೆಲವು ಅಡ್ಡಪರಿಣಾಮಗಳು ಸಹ ಆಗಬಹುದು. ಆದರೆ ಪುರುಷರಿಗೆ ಮಾತ್ರ ಯಾವುದೇ ಸಮಸ್ಯೆ ಉಂಟಾಗದು. ಲೈಂಗಿಕ ಚಟುವಟಿಕೆಗೂ ಯಾವುದೇ ಸಮಸ್ಯೆ ಆಗದು. ಹಿಂದಿನಂತೆಯೇ ಸ್ಖಲನವಿದ್ದು, ಅಂಡಾಣು ಜೊತೆ ಅದು ಫಲಿತಗೊಳ್ಳುವುದಿಲ್ಲ, ಅಷ್ಟೆ.
ಜಾಗೃತಿ ಅವಶ್ಯ
ಕೆಲವು ತಿಂಗಳುಗಳ ಹಿಂದೆ ಬಂದು ಹೋದ `ಪೋಸ್ಟರ್ ಬಾಯ್ಸ್’ ಚಿತ್ರದಲ್ಲಿ ನಿರ್ದೇಶಕ ಶ್ರೇಯಸ್ ತಲಪಡೆ ಇದೇ ಸಮಸ್ಯೆಯನ್ನು ಬಿಂಬಿಸಿದ್ದಾರೆ. ಸಿನಿಮಾದ ಹೀರೋಗಳು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಸುದ್ದಿ ಸಾಮಾಜಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಅಲ್ಲೋಲಕಲ್ಲೋಲ ಸ್ಥಿತಿಯನ್ನು ಉಂಟು ಮಾಡುತ್ತದೆ. ಅಪರಾಧಿಗಳ ಹಾಗೆ ಅವರು ತಮ್ಮ ನಿರಪರಾಧಿತ್ವವನ್ನು ಸಾಬೀತು ಮಾಡಲು, ನ್ಯಾಯಾಲಯದ ಸಹಾಯ ಪಡೆಯಬೇಕಾಗಿ ಬರುತ್ತದೆ. ಕೊನೆಗೆ ಮುಖ್ಯಮಂತ್ರಿಯ ಬಾಯಿಂದ ಪುರುಷ ಸಂತಾನ ನಿಯಂತ್ರಣದ ಬಗ್ಗೆ ಸಂದೇಶ ನೀಡಲಾಗುತ್ತದೆ.
ಈ ಸಿನಿಮಾ ಒಂದು ರೀತಿಯಲ್ಲಿ ಪುರುಷ ಸಂತಾನ ನಿಯಂತ್ರಣಕ್ಕೆ ಬೆಂಬಲ ಕೊಡುತ್ತದೆ ಹಾಗೂ ಈ ಪ್ರಕ್ರಿಯೆಯಿಂದ ಪುರುಷರಿಗೆ ಯಾವುದೇ ಬಗೆಯ ದೌರ್ಬಲ್ಯ ಉಂಟಾಗುವುದಿಲ್ಲ. ಅದು ನಾಚಿಗೆಗೇಡಿತನದ ಕೃತ್ಯ ಅಲ್ಲ, ಸಂತಾನ ನಿಯಂತ್ರಣ ಪ್ರಕ್ರಿಯೆಯಲ್ಲಿ ಇದು ಕೂಡ ಒಂದು ಉಪಾಯ ಎನ್ನುವುದನ್ನು ಸಾಬೀತು ಮಾಡಿ ತೋರಿಸಿತು.
– ಆರತಿ ಪ್ರಿಯದರ್ಶಿನಿ