ಬಿಹಾರ್‌ ರಾಜ್ಯದ ಉಪಮುಖ್ಯಮಂತ್ರಿ ಸುಶೀಲ್ ಮೋದಿಯವರು ಇತ್ತೀಚಿನ ವರ್ಷಗಳಲ್ಲಿ ಒಂದು ವಿಶೇಷ ಸುದ್ದಿಯಿಂದಾಗಿ ಜನರ ಗಮನವನ್ನು ಸೆಳೆದಿದ್ದರು. ತಮ್ಮ ಮಗ ಉತ್ಕರ್ಷ ತಥಾಗತನ ವಿವಾಹ ಸಮಾರಂಭವನ್ನು ಸರಳವಾಗಿ ನೆರವೇರಿಸಿ ಜನರು ಹುಬ್ಬೇರಿಸುವಂತೆ ಮಾಡಿದ್ದರು. ತಮ್ಮ ಕೆಲವೇ ಬಂಧು ಮಿತ್ರರು ಮತ್ತು ರಾಜಕೀಯ ಮುಖಂಡರನ್ನು ಇನ್ವಿಟೇಷನ್‌ ಕಾರ್ಡ್‌ ಮೂಲಕ ಆಮಂತ್ರಿಸಿದ್ದರು. ಆಮಂತ್ರಿತರಿಗೆ ಯಾವುದೇ ಗಿಫ್ಟ್ ಅಥವಾ ಕವರ್‌ಗಳನ್ನು ಹಿಡಿದು ಬರದಂತೆ ಮನವಿ ಮಾಡಿದ್ದರು. ಇತರೆ ರಾಜಕೀಯ ಮುಖಂಡರ ಕುಟುಂಬಗಳು ನೆರವೇರಿಸುವಂತಹ ಮೋಜುಮಸ್ತಿಯ ಅದ್ಧೂರಿ ಕಾರ್ಯವಾಗಿರದೆ ಅದೊಂದು ಸರಳ ಸಮಾರಂಭವಾಗಿದ್ದಿತು. ಅಲ್ಲಿ ಭೂರಿ ಭೋಜನದ ಬದಲು ಕೇವಲ ಉಪಾಹಾರದ ಏರ್ಪಾಡು ಮಾಡಲಾಗಿತ್ತು.

ಉತ್ತರ ಭಾರತದ ಒಬ್ಬ ರಾಜಕೀಯ ಮುಖಂಡರು ವಿಜೃಂಭಣೆಯ ವಿವಾಹ ಪದ್ಧತಿಯನ್ನು ಒಪ್ಪದೆ, `ಆದರ್ಶ ವಿವಾಹ ನಡೆಸಬೇಕು’ ಎನ್ನುತ್ತಾರೆ.

ಒಬ್ಬ ವರನಿಗೆ ಕನ್ಯೆಯನ್ನು ಸೂಚಿಸುವಾಗ ಕೆಲವು ಷರತ್ತುಗಳನ್ನು ಮುಂದಿಡುತ್ತಾರೆ. ವರದಕ್ಷಿಣೆ ಪಡೆಯಬಾರದು ಎಂಬುದು ಮೊದಲನೆಯದಾದರೆ, ಅಂಗದಾನ ಮಾಡುವ ಸಂಕಲ್ಪ ತೊಡಬೇಕು ಎಂಬುದು ಎರಡನೇ ಷರತ್ತು.  ಮುಂದಾಳುಗಳು ಇಂತಹ ಆದರ್ಶಗಳನ್ನು ಪಾಲಿಸಿದರೆ, ಸಾಮಾನ್ಯ ಜನರು ಅವುಗಳನ್ನು ಅನುಸರಿಸಲು ಮುಂದಾಗುವುದರಲ್ಲಿ ಸಂದೇಹವೇ ಇರುವುದಿಲ್ಲ. ಇದರಲ್ಲಿ ಎದುರಾಗುವ ಒಂದು ತೊಂದರೆಯೆಂದರೆ ಇಂತಹ ಬದಲಾವಣೆಯ ಪ್ರಯೋಗ ನಡೆಸಲು ಮದುವೆಯ ಪೂರ್ವದಲ್ಲಿ ಹುಡುಗ-ಹುಡುಗಿ ಮತ್ತು ಅವರ ಕುಟುಂಬದವರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕಾಗುತ್ತದೆ.

ದುಂದುಗಾರಿಕೆ

ನಾವು ವಿವಾಹಗಳಲ್ಲಿ ಅಲಂಕಾರ, ಶಾಸ್ತ್ರವಿಧಿ, ವಾದ್ಯ, ಅತಿಥಿಸತ್ಕಾರ, ಮೊದಲಾದವುಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತೇವೆ. ಶಾಸ್ತ್ರವಿಧಿಗಳಿಗಾಗಿ ಪಂಡಿತರು ಪ್ಯಾಕೇಜ್‌ಗಳನ್ನು ರೂಪಿಸಿ ಹಣ ಸುಲಿಗೆ ಮಾಡುತ್ತಾರೆ. ಮದುವೆ ಮನೆಯ ಹೂವಿನ ಅಲಂಕಾರಕ್ಕೆ ಲಕ್ಷ ಲಕ್ಷ ಹಣ ವ್ಯಯವಾಗುತ್ತದೆ. ಹಲವರು ಅತಿಥಿಗಳಿಗೆ ತಂಗುವ ವ್ಯವಸ್ಥೆ ಮತ್ತು ಉಡುಗೊರೆಗಳಿಗಾಗಿ ಲೆಕ್ಕವಿಲ್ಲದಂತೆ ಖರ್ಚು ಮಾಡುತ್ತಾರೆ. ಇಂತಹ ಪದ್ಧತಿಯಿಂದಾಗಿ ಮಧ್ಯಮ ವರ್ಗದ ಜನರು ಮಗಳ ಮದುವೆ ಮಾಡುವಾಗ ಸಾಲದಲ್ಲಿ ಮುಳುಗಿ ಹೋಗುತ್ತಾರೆ. ಸಿರಿವಂತರು, ಬಿಸ್‌ನೆಸ್‌ಮೆನ್‌ ಮತ್ತು ರಾಜಕೀಯ ವ್ಯಕ್ತಿಗಳು ಮಾತ್ರ ಯಾವ ಪರಿವೆಯೂ ಇಲ್ಲದೆ ವಿಜೃಂಭಣೆಯ ವಿವಾಹ ಕಾರ್ಯದಲ್ಲಿ ಪೈಪೋಟಿಯಿಂದ ಸಿದ್ಧತೆ ನಡೆಸುತ್ತಾರೆ.

ಬಿಜೆಪಿ ಮುಖಂಡರಾಗಿದ್ದ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದರು. ನವೆಂಬರ್‌ 2016ರಲ್ಲಿ ಜರುಗಿದ ಈ ವಿವಾಹಕ್ಕೆ 40-50 ಸಾವಿರ ಜನರನ್ನು ಆಮಂತ್ರಿಸಲಾಗಿತ್ತು. ಸಾಧಾರಣ ಆಮಂತ್ರಣ ಪತ್ರಿಕೆಯಲ್ಲದೆ, ವಿಶೇಷವಾಗಿ ತಯಾರಿಸಿದ್ದ ಇನ್ವಿಟೇಶನ್‌, ವೀಡಿಯೋ ರೂಪಕದಲ್ಲಿತ್ತು. ಅತಿಥಿಗಳಿಗಾಗಿ ಪಂಚತಾರಾ ಹೋಟೆಲ್‌ಗಳಲ್ಲಿ 1500 ರೂಮ್ ಗಳನ್ನು ಬುಕ್‌ ಮಾಡಲಾಗಿತ್ತು. ಹೆಲಿಕಾಪ್ಟರ್‌ಗಳನ್ನು ಇಳಿಸುವುದಕ್ಕಾಗಿ 15 ಹೆಲಿಪ್ಯಾಡ್‌ಗಳನ್ನು ಸಿದ್ಧಪಡಿಸಲಾಗಿತ್ತು. ವಿವಾಹ ಸ್ಥಳದಲ್ಲಿನ ರಕ್ಷಣೆಗಾಗಿ 3 ಸಾವಿರ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿತ್ತು. ಬಾಲಿವುಡ್‌ನಿಂದ ಕರೆಸಲಾಗಿದ್ದ ಆರ್ಟ್‌ ಡೈರೆಕ್ಟರ್‌ಗಳು ವಿಜಯನಗರ ಮಾದರಿಯ ಮಂದಿರ, ಕಟ್ಟಡಗಳ ಭವ್ಯವಾದ ಸೆಟ್‌ಗಳನ್ನು ತಯಾರಿಸಿದ್ದರು. ಮದುಮಗಳು ಉಟ್ಟಿದ್ದ ಸೀರೆಯ ಬೆಲೆಯೇ 17 ಕೋಟಿ ರೂಪಾಯಿಗಳು!

ವಿಡಂಬನೆ ಎಂದರೆ ಬೆಂಗಳೂರಿನಲ್ಲಿ ರೆಡ್ಡಿ 5 ದಿನಗಳ ಅದ್ಧೂರಿ ಸಮಾರಂಭವನ್ನು ನಡೆಸುತ್ತಿರುವ ಸಮಯದಲ್ಲಿ ದೇಶದೆಲ್ಲೆಡೆ ಜನರು ಡೀಮಾನಿಟೈಸೇಷನ್‌ನ ಕಾರಣದಿಂದಾಗಿ ಬ್ಯಾಂಕ್‌ ಮತ್ತು ಎಟಿಎಂಗಳ ಮುಂದೆ ಉದ್ದವಾದ ಸಾಲುಗಳಲ್ಲಿ ನಿಂತು ಹೆಣಗಾಡುತ್ತಿದ್ದರು.

ಇದು ಮುಖಂಡನೊಬ್ಬನು ಮಾಡುವ ವೈಭವದ ವಿವಾಹದ ವಿಷಯವಲ್ಲ. ಎಲ್ಲ ರಾಜಕೀಯ ಮುಂದಾಳುಗಳು, ಬಿಸ್‌ನೆಸ್‌ಮೆನ್‌ ಮತ್ತು ಸೆಲೆಬ್ರಿಟಿಗಳ ಕುಟುಂಬದ ವಿವಾಹಗಳೂ ಹೀಗೇ ಮಿತಿ ಮೀರಿದ ಖರ್ಚಿನಲ್ಲಿ ನೆರವೇರಿಸಲ್ಪಡುತ್ತವೆ.

ಆದರೆ ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿನ ವ್ಯಾಪಾರಿಯೊಬ್ಬರು ಒಂದು ಆದರ್ಶ ವಿವಾಹವನ್ನು ನಡೆಸಿದರು. ಮದುವೆಗಾಗಿ ದುಂದುವೆಚ್ಚ ಮಾಡುವ ಬದಲು ಅವರು ಬಡಜನರಿಗಾಗಿ ಮನೆ ಮಾಡಿಕೊಟ್ಟರು.

ವಾಸೂರು ಗ್ರಾಮದ ಅಜಯ್‌ ಭುನೊತ್‌ರ ಮಗಳು ಶ್ರೇಯಾಳಿಗೆ ಬಿಸಿನೆಸ್‌ಮನ್‌ ಮನೋಜ್‌ ಜೈನ್‌ರ ಮಗನೊಂದಿಗೆ 16ನೇ ಡಿಸೆಂಬರ್‌ 2016ರಂದು ವಿವಾಹವನ್ನು ನಿಶ್ಚಯಪಡಿಸಲಾಯಿತು. ಎರಡೂ ಕುಟುಂಬಗಳು ಆರ್ಥಿಕವಾಗಿ ಸಮೃದ್ಧವಾಗಿದ್ದವು. ಈ ಮದುವೆಯನ್ನು ಸ್ಮರಣೀಯವಾಗಿಸಲು ಅವರು ಆಡಂಬರದ ಬದಲು ಬಡವರಿಗೆ ನೆರವಾಗುವ ದಾರಿಯನ್ನು ಆರಿಸಿಕೊಂಡರು.

ವಿವಾಹದ ಖರ್ಚಿನಲ್ಲಿ ಉಳಿತಾಯ ಮಾಡಿ ಅವರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ 2 ಎಕರೆ ಭೂಮಿಯಲ್ಲಿ 90 ಮನೆಗಳನ್ನು ನಿರ್ಮಿಸಿದರು. ಮದುವೆಯ ದಿನ ಆ ಮನೆಗಳನ್ನು ನಿರ್ಗತಿಕರಾಗಿದ್ದ ಜನರಿಗೆ ಉಡುಗೊರೆಯಾಗಿ ಕೊಟ್ಟು ತಮ್ಮ ಸಂತೋಷದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಿದರು.

ಉತ್ತಮ ಆರ್ಥಿಕ ಸ್ಥಿತಿಯಲ್ಲಿರುವವರು ಈ ರೀತಿಯಲ್ಲಿ ಬೇರೆಯವರ ಜೀವನದಲ್ಲಿ ಸಂತೋಷ ತುಂಬಬಲ್ಲರು. ಆದರೆ ಹೆಚ್ಚು ಹಣವಿಲ್ಲದ ಸಾಮಾನ್ಯ ಜನರೂ ಸಹ ತೋರಿಕೆಗಾಗಿ ದುಂದುಗಾರಿಕೆಯ ಮೊರೆ ಹೋಗುತ್ತಾರೆ.

ಈ ರೀತಿ ಹಣವನ್ನು ಅಪವ್ಯಯ ಮಾಡುವ ಬದಲು, ಹುಡುಗ-ಹುಡುಗಿಯ ಹೆಸರಿನಲ್ಲಿ ಎಫ್‌ಡಿ ಮಾಡಿ ಅವರಿಗೊಂದು ಸುರಕ್ಷಿತ ಭವಿಷ್ಯವನ್ನು ರೂಪಿಸಬಹುದು. ಕಾಲಚಕ್ರ ತಿರುಗುವುದೆಂಬ ನಿಮ್ಮ ತಿಳಿವಳಿಕೆಯು ಅವರಿಗೊಂದು ಭದ್ರ ಜೀವನದ ಬುನಾದಿಯಾಗಬಲ್ಲದು.

ಜಾತಕವಲ್ಲ, ಹೆಲ್ತ್ ರಿಪೋರ್ಟ್‌ ಅಗತ್ಯ

ಮದುವೆ ಮಾಡುವಾಗ ಸಾಮಾನ್ಯವಾಗಿ ಹುಡುಗ-ಹುಡುಗಿಯ ಜಾತಕಗಳ ಹೊಂದಾಣಿಕೆಯನ್ನು ಪರೀಕ್ಷಿಸಲಾಗುತ್ತದೆ. 36ರಲ್ಲಿ ಕಡಿಮೆಯಾದರೆ 30-32 ಕೂಟಗಳು ಹೊಂದುವುದೇ. ಹುಡುಗಿಗೆ ರಾಹು ಅಥವಾ ಶನಿ ದೋಷವಿದೆಯೇ ಶುಭ ನಕ್ಷತ್ರದಲ್ಲಿ ಜನಿಸಿರುವಳೇ ಮುಂತಾದ ಲೆಕ್ಕಾಚಾರಗಳಿಗಾಗಿ ಜ್ಯೋತಿಷಿಗಳ ಮೊರೆ ಹೋಗಿ ಕಾಣಿಕೆ ನೀಡುತ್ತಾರೆ.

ಆದರೆ ಇಂದಿನ ದಿನಗಳಲ್ಲಿ ಜಾತಕ ಹೊಂದಿಸಿ ಮಾಡಿದ ಮದುವೆಗಳೂ ಜಗಳ, ಸಂತಾನಹೀನತೆ, ರೋಗ, ವಿಚ್ಛೇದನ ಮುಂತಾದ ಸಮಸ್ಯೆಗಳಿಂದ ಕೂಡಿದ್ದು, ನೆಮ್ಮದಿಯ ಬದುಕು ಇಲ್ಲವಾಗಿದೆ ಎಂಬುದರ ಬಗ್ಗೆ ನೀವು ಯೋಚಿಸಿರುವಿರಾ?

ವಾಸ್ತವವಾಗಿ ಇದಕ್ಕೆ ಕಾರಣವೆಂದರೆ ನಾವು ಧರ್ಮ, ಸಂಪ್ರದಾಯಗಳ ಹೆಸರಿನಲ್ಲಿ ಅರ್ಚಕರು, ಜ್ಯೋತಿಷಿಗಳ ಮೋಡಿಗೆ ಸಿಲುಕುತ್ತೇವೆ. ಸ್ವಸ್ಥ ಮತ್ತು ಸುಖೀ ಬಾಳಿಗೆ ಅಗತ್ಯವಾದ ಅಂಶಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಿಂದುಳಿಯುತ್ತೇವೆ. ವಿವಾಹ ಬಂಧನದಲ್ಲಿ ತೊಡಗಿಕೊಳ್ಳುವ ಮೊದಲು ಹುಡುಗ ಹುಡುಗಿಯರು ಕೆಲವು ಮೆಡಿಕಲ್ ಟೆಸ್ಟ್ಗೆ ಒಳಗಾದರೆ ಅವರಿಗೂ ಮತ್ತು ಮುಂದೆ ಅವರ ಸಂತಾನಕ್ಕೂ ಕೆಲವು ಆರೋಗ್ಯದ ಸಮಸ್ಯೆಗಳಿಂದ ಪಾರಾಗಲು ಸಹಾಯವಾಗುತ್ತದೆ.

ಈ ವಿಷಯವಾಗಿ ಮಾತನಾಡಿಸಿದಾಗ ತಜ್ಞರು ಕೆಲವು ಅಗತ್ಯವಾದ ಮೆಡಿಕಲ್ ಟೆಸ್ಟ್ ಗಳ ಬಗ್ಗೆ ಹೀಗೆ ತಿಳಿಸುತ್ತಾರೆ :

ಆರ್‌ಎಚ್‌ ಇನ್‌ಕಂಪಾಟಿಬಿಲಿಟಿ : ಹೆಚ್ಚಿನ ಜನರು ಆರ್‌ಎಚ್‌ ಪಾಸಿಟಿವ್‌ ಆಗಿರುತ್ತಾರೆ. ಬಹಳ ಕಡಿಮೆ ಜನರು (ಸುಮಾರು 15%) ಆರ್‌ಎಚ್‌ ನೆಗೆಟಿವ್ ಆಗಿರುತ್ತಾರೆ. ಆರ್‌ಎಚ್‌ ಫ್ಯಾಕ್ಟರ್‌ ಕೆಂಪು ರಕ್ತಕಣಗಳಿಗೆ ಸಂಬಂಧಿಸಿದ ಒಂದು ಪ್ರೋಟೀನ್‌ ಆಗಿರುತ್ತದೆ. ನಮ್ಮ ಸಾಮಾನ್ಯ ಆರೋಗ್ಯದ ಮೇಲೆ ಅದು ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ ಭಿನ್ನ ಆರ್‌ಎಚ್‌ ಫ್ಯಾಕ್ಟರ್‌ ಉಳ್ಳವರು ಮದುವೆಯಾದರೆ, ಮುಂದೆ ತಾಯಿ ಮತ್ತು ಮಗುವಿನ ಆರ್‌ಎಚ್‌ ಫ್ಯಾಕ್ಟರ್‌ ಭಿನ್ನವಾಗಿ ಇಬ್ಬರಿಗೂ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮದುವೆಗೆ ಮೊದಲು ಆರ್‌ಎಚ್‌ ಫ್ಯಾಕ್ಟರ್‌ನ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಲಾಗುತ್ತದೆ.

ಥ್ಯಾಲಿಸೀಮಿಯಾ :  ವಿವಾಹ ಪೂರ್ವದಲ್ಲಿ ಥ್ಯಾಲಿಸೀಮಿಯಾ ಟ್ರೆಟ್‌ನ ಪರೀಕ್ಷೆ ಮಾಡಿಸ ಬೇಕು. ಭಾರತದಲ್ಲಿ ಸುಮಾರು 6 ಕೋಟಿ ಜನರಿಗೆ ಥ್ಯಾಲಿಸೀಮಿಯಾ ಟ್ರೆಟ್‌ ಇದೆ. ಇದರ ಪ್ರತ್ಯಕ್ಷ ಪ್ರಭಾವ ಆರೋಗ್ಯದ ಮೇಲೆ ಉಂಟಾಗದಿರುವುದರಿಂದ ಹೆಚ್ಚು ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಆದರೆ ಥ್ಯಾಲಿಸೀಮಿಯಾ ಟ್ರೆಟ್‌ ಇರುವ ಇಬ್ಬರು ವ್ಯಕ್ತಿಗಳು ಮದುವೆಯಾದರೆ ಅವರ ಮಕ್ಕಳಿಗೆ ಅಪಾಯಕಾರಿ ಥ್ಯಾಲಿಸೀಮಿಯಾ ಮೇಜರ್‌ ಡಿಸೀಸ್‌ ಉಂಟಾಗುವ ಸಂಭವ ಶೇ.25ರಷ್ಟು ಇರುತ್ತದೆ.

ಎಚ್‌ಐವಿ ಅಂಡ್‌ ಅದರ್‌ ಸೆಕ್ಶುಯಲ್ ಟ್ರಾನ್ಸ್ ಮಿಟೆಂಟ್‌ ಡಿಸೀಸೆಸ್‌ ಟೆಸ್ಟ್ : ಎಚ್‌ಐವಿ, ಹೆಪಟೈಟಿಸ್‌ ಬಿ ಮತ್ತು ಸಿ ಮುಂತಾದ ರೋಗಗಳು ಜೀವನ ಪೂರ್ತಿ ಉಳಿಯುತ್ತವೆ. ಇವು ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನು ತಂದೊಡ್ಡುತ್ತವೆ. ನಿಮ್ಮ ಭಾವೀ ಜೀವನ ಸಂಗಾತಿಯ ಮೆಡಿಕಲ್ ಸ್ಟೇಟಸ್‌ ಬಗ್ಗೆ ನಿಮಗೆ ತಿಳಿದಿದ್ದರೆ ಅವರನ್ನು ಮದುವೆ ಮಾಡಿಕೊಳ್ಳುವುದರ ವಿಷಯವಾಗಿ ತೀರ್ಮಾನ ತೆಗೆದುಕೊಳ್ಳಲು ನಿಮಗೆ ಅನುಕೂಲವಾಗುತ್ತದೆ.

ಓವೇರಿಯನ್‌ ಸಿಸ್ಟ್ : ಹುಡುಗಿಗೆ ಕೆಳ ಹೊಟ್ಟೆಯ ಭಾಗದಲ್ಲಿ ನೋವು ಇದ್ದರೆ ಅಥವಾ ಅನಿಯಮಿತವಾದ ಪೀರಿಯಡ್ಸ್ ಇದ್ದರೆ ಅವಳಿಗೆ ಓವೇರಿಯನ್‌ ಸಿಸ್ಟ್ ಪರೀಕ್ಷೆ ಮಾಡಿಸಿ. ಪೆಲ್ವಿಕ್‌ ಟೆಸ್ಟ್ ನಿಂದ ಸಿಸ್ಟ್ ಪತ್ತೆಯಾದರೆ ಪೂರ್ತಿ ವಿವರಕ್ಕಾಗಿ ಅಬ್ಡಾಮಿನಲ್ ಅಲ್ಟ್ರಾಸೌಂಡ್‌ ಮಾಡಲಾಗುತ್ತದೆ. ಸಿಸ್ಟ್ ನಿಂದಾಗಿ ಗರ್ಭಧಾರಣೆಗೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

ಕ್ರಾನಿಕ್‌ ಡಿಸ್‌ ಆರ್ಡರ್‌ ಟೆಸ್ಟ್ : ಈ ಟೆಸ್ಟ್ ಮೂಲಕ ಭಾವೀ ದಂಪತಿಯು ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ವೈವಾಹಿಕ ಜೀವನದ ಒತ್ತಡದಿಂದ ಪಾರಾಗಲು ಸಾಧ್ಯವಾಗುತ್ತದೆ.

ಸೈಕಲಾಜಿಕಲ್ ಟೆಸ್ಟ್ : ಇಂದಿನ ಪರಿಸ್ಥಿತಿಯಲ್ಲಿ ಸೈಕಲಾಜಿಕಲ್ ಟೆಸ್ಟ್ ಕೂಡ ಅಗತ್ಯವಾಗಿರುತ್ತದೆ. ಇದರಿಂದ ಸಿಜೊಫ್ರೇನಿಯಾ, ಡಿಪ್ರೆಶನ್‌, ಪರ್ಸನಾಲಿಟಿ ಡಿಸ್‌ಆರ್ಡರ್‌, ಬೈ ಪೋಲಾಕ್‌ ಡಿಸ್‌ಆರ್ಡರ್‌ ಮುಂತಾದವನ್ನು ಪರೀಕ್ಷಿಸಲಾಗುತ್ತದೆ.

ಮದುವೆಯಲ್ಲಿ ಗುಟ್ಟು ಬೇಡ

ವಿವಾಹವೆಂಬುದು ಒಂದು ಪ್ರೀತಿಯ ಬಂಧನವಾಗಿದ್ದು, ಅಲ್ಲಿ ಯಾವುದೇ ರಹಸ್ಯಕ್ಕೆ ಎಡೆ ಇರುವುದಿಲ್ಲ. ಇದು ಇಬ್ಬರು ವ್ಯಕ್ತಿಗಳ ವಿಶ್ವಾಸದ ದ್ಯೋತಕ. ವಿವಾಹಾ ನಂತರ ಯಾವುದಾದರೂ ರಹಸ್ಯ ಹೊರಬಿದ್ದಾಗ ಮಧುರ ಸಂಬಂಧದಲ್ಲಿ ಕಹಿ ಹುಟ್ಟಿಕೊಳ್ಳುತ್ತದೆ. ಯಾವುದೋ ಗಂಭೀರ ಕಾಯಿಲೆ, ಶಾರೀರಿಕ ಅಸಮರ್ಥತೆ, ಉದ್ಯೋಗದ ಬಗ್ಗೆ ತಪ್ಪು ಮಾಹಿತಿ, ಅನೈತಿಕ ಸಂಬಂಧ ಇಂತಹ ವಿಷಯಗಳ ಬಗ್ಗೆ ನಂತರ ಸುಳಿವು ದೊರೆತರೆ ವಾದ ವಿವಾದಕ್ಕೆ ಕಾರಣವಾಗುತ್ತದೆ ಮತ್ತು ಅದರಿಂದ ಸಂಬಂಧ ಕೊನೆಗೊಳ್ಳಲೂಬಹುದು.

ಆದ್ದರಿಂದ ಹುಡುಗ ಹುಡುಗಿಯರು ಮದುವೆಗೆ ಮೊದಲೇ, ತಮ್ಮ ಭಾವೀ ಜೀವನ ಸಂಗಾತಿಯಿಂದ ಯಾವುದೇ ರಹಸ್ಯವನ್ನು ಮುಚ್ಚಿಡುವುದಿಲ್ಲವೆಂದು ಸಂಕಲ್ಪ ಮಾಡಬೇಕು.

ಮಗನಿಗೆ ಮದುವೆಯ ಪ್ರಯತ್ನದಲ್ಲಿ ತೊಡಗುವಾಗ ಸಾಮಾನ್ಯವಾಗಿ ತಂದೆ ತಾಯಂದಿರು ಉತ್ತಮ ಆರ್ಥಿಕ ಸ್ಥಿತಿಯಲ್ಲಿರುವ ಮತ್ತು ತಮ್ಮ ಅಂತಸ್ತಿಗೆ ಸರಿದೂಗುವ ಕುಟುಂಬದವರೊಡನೆ ಸಂಬಂಧ ಬೆಳೆಸಲು ಬಯಸುತ್ತಾರೆ. ಅಲ್ಲದೆ, ತಮ್ಮ ಮಗ ಹೇಗೇ ಇದ್ದರೂ ಹುಡುಗಿಯಲ್ಲಿ ಯಾವುದೇ ರೀತಿಯ ದೋಷವಿರಬಾರದೆಂಬುದು ಅವರ ಅಪೇಕ್ಷೆಯಾಗಿರುತ್ತದೆ. ಆದರೆ ಹುಡುಗಿ ಬಡಕುಟುಂಬದವಳಾಗಿರಲಿ, ಕೆಳಜಾತಿಯವಳಾಗಿರಲಿ, ಅವಳ ಜೀವನದಲ್ಲಿ ದುರ್ಘಟನೆ ನಡೆದಿರಲಿ, ಏನೇ ಇದ್ದರೂ ಅವಳಲ್ಲಿ ಯೋಗ್ಯ ಜೀವನ ಸಂಗಾತಿಯಾಗುವ ಸಾಮರ್ಥ್ಯವಿದ್ದರೆ ಅವಳನ್ನೇಕೆ ಸಹಜವಾಗಿ ಸ್ವೀಕರಿಸಬಾರದು? ಹುಡುಗಿಯ ಅಂದಚಂದ, ಜಾತಿ-ಅಂತಸ್ತುಗಳನ್ನು ಮಾತ್ರವೇ ಪರಿಗಣಿಸದೆ ಅವಳ ಆಂತರಿಕ ಸೌಂದರ್ಯವನ್ನೂ ಗುರುತಿಸುವ ಮನಸ್ಸು ಮಾಡಬೇಕು.

ಭಾವನೆಗಳ ಹೊಂದಾಣಿಕೆ

ದಂಪತಿಗಳು ಸಂತೋಷದಿಂದ ಕಾಲ ಕಳೆಯುತ್ತಾರೆ. ಕೆಲ ಸಮಯದ ನಂತರ, ಹಲವಾರು ವಿಷಯಗಳ ಬಗ್ಗೆ ಪರಸ್ಪರರ ದೃಷ್ಟಿಕೋನ ಭಿನ್ನವಾಗಿದೆ ಎಂಬುದು ಅರಿವಾದಾಗ ಸಂಬಂಧ ಶಿಥಿಲಗೊಳ್ಳತೊಡಗುತ್ತದೆ. ಆದ್ದರಿಂದ ಹುಡುಗ-ಹುಡುಗಿ ಮದುವೆಗೆ ಮೊದಲೇ ಪರಸ್ಪರರನ್ನು ಅರಿಯುವ ಪ್ರಯತ್ನ ಮಾಡಬೇಕು ಮತ್ತು ತಮ್ಮ ಆಸೆ ಆಕಾಂಕ್ಷೆಗಳ ಬಗ್ಗೆ ಚರ್ಚಿಸಿರಬೇಕು.`ಇಬ್ಬರೂ ತಮ್ಮ ಮುಂದಿನ ಜೀವನದಲ್ಲಿ ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಸಂಗಾತಿಯ ಕನಸುಗಳನ್ನು ಸಾಕಾರ ಮಾಡಲು ಯತ್ನಿಸುತ್ತೇವೆ. ಅದಕ್ಕಾಗಿ ಸ್ವತಃ ತ್ಯಾಗ ಮಾಡಲು ಸಿದ್ಧರಿರುತ್ತೇವೆ. ತಮ್ಮ ಕುಟುಂಬ ಮತ್ತು ಸಂಬಂಧಗಳನ್ನು ನಿಭಾಯಿಸಲು ಇಬ್ಬರೂ ಸಮಾನವಾಗಿ ಜವಾಬ್ದಾರಿ ಹೊರುತ್ತೇವೆ,’ ಎಂದು ಹುಡುಗ ಹುಡುಗಿಯು ಈ 4 ಸಂಕಲ್ಪಗಳನ್ನು ಮಾಡಬೇಕು.

– ಗಿರಿಜಾ ಶಂಕರ್‌  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ