42 ವರ್ಷದವರಾದ ಶೋನಾ ಚೌಹಾನ್ ಪಾರ್ಲೆ ಆ್ಯಗ್ರೋ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಇಓ). 1999ರಲ್ಲಿ ಆಕೆ ತಮ್ಮ 22ರ ಹರೆಯದಲ್ಲೇ ಈ ಕಂಪನಿಯಲ್ಲಿ ಬೋರ್ಡ್ ಡೈರೆಕ್ಟರ್ ಆಗಿ ಸೇರಿದರು. 2006ರಲ್ಲಿ ಈಕೆ ಸಿಇಓ, ಆದ ನಂತರ, ಆಕೆಯ ಗ್ರೂಪ್ ವಿವಿಧ ಕ್ಷೇತ್ರಗಳಲ್ಲಿ ತನ್ನ ಇರುವಿಕೆ ಸೂಚಿಸುತ್ತಾ, 50ಕ್ಕೂ ಅಧಿಕ ದೇಶಗಳಿಗೆ ಆ್ಯಗ್ರೋ ಪ್ರಾಡಕ್ಟ್ ರಫ್ತು ಮಾಡುತ್ತಿದೆ.
`ಬಿಸ್‌ನೆಸ್ ಸ್ಕೂಲ್ ಲುಸಾನೆ’ ಸಂಸ್ಥೆಯಿಂದ ಬ್ಯಾಚುಲರ್ ಡಿಗ್ರಿ ಪಡೆದ ಶೋನಾ, ತಂದೆ ಪ್ರಕಾಶ್ ಚೌಹಾನ್ ಜೊತೆ ತಮ್ಮ ಕೌಟುಂಬಿಕ ಉದ್ಯಮಕ್ಕೆ ಸೇರಿಕೊಂಡರು.
`ಇಂದಿರಾ ಸೂಪರ್ ಅಚೀವರ್ ಅವಾರ್ಡ್, ಸೆಪ್ಟೆಂಬರ್ 2004, ‘ `ಬಿಸ್‌ನೆಸ್ ಮಾರ್ಕೆಟಿಂಗ್ ಅವಾರ್ಡ್,’ `ಬೆಸ್ಟ್ ಯಂಗ್ ಕಾರ್ಪೊರೇಟ್ ಲೀಡರ್ 2006,’ `ಯಂಗ್ ಮೆನ್ ಅಚೀವರ್ಸ್ ಅವಾರ್ಡ್ 2008,’ ವುಮೆನ್ ಅಚೀವರ್ಸ್ 2009,’ ಸಹಿತ ಅನೇಕ ಪ್ರಶಸ್ತಿ ಪದಕಗಳು ಶೋನಾರನ್ನು ಅರಸಿಬಂದಿವೆ.
ಅವರ ಜೀವನದ ಮೂಲಮಂತ್ರ ಬೇರೆಯbರ ರೆಕಾರ್ಡ್ ಮುರಿಯುವುದಲ್ಲ, ತಮ್ಮದೇ ರೆಕಾರ್ಡ್ ಮುರಿದು ಪ್ರಗತಿ ಸಾಧಿಸುವುದಾಗಿದೆ. ಶೋನಾ ಜೊತೆ ನಡೆಸಿದ ಸಂಭಾಷಣೆಯ ಮುಖ್ಯಾಂಶ :
ಈ ಮಟ್ಟ ತಲುಪಲು ನೀವು ಏನೆಲ್ಲ ಸಂಘರ್ಷ ಎದುರಿಸಬೇಕಾಯ್ತು?
ಸರಿಯಾದ ವ್ಯಕ್ತಿಗಳನ್ನು ಸಮರ್ಪಕ ಹುದ್ದೆಗೆ ನೇಮಿಸಿಕೊಳ್ಳುವುದು, ಉತ್ತಮ ಪ್ರತಿಭೆಗಳನ್ನು ಕಂಪನಿಯ ಸ್ನೇಹ ಸಂಬಂಧದಲ್ಲಿ ಇರಿಸಿಕೊಳ್ಳುವುದು, ಹೊಸ ಹೊಸ ಬದಲಾವಣೆಗಳ ಅನುಸಾರ ಕಂಪನಿ ಮುನ್ನಡೆಸುವುದು…. ಇವೆಲ್ಲ ನಿಜಕ್ಕೂ ಸವಾಲೇ ಸರಿ! ಆದರೆ ನಾನು ಇವನ್ನು ಕೇವಲ ಸಂಘರ್ಷಗಳು ಎಂದು ಮಾತ್ರ ನೋಡುವುದಿಲ್ಲ, ಬದಲಾವಣೆಯನ್ನು ಎದುರಿಸುವುದು ಕೇವಲ ಲೀಡರ್ಸ್ ಕೆಲಸವಷ್ಟೇ ಅಲ್ಲ, ಅಗತ್ಯ ಬಂದಾಗ ಇಡೀ ಕಂಪನಿಯ ಸಿಬ್ಬಂದಿ ಇದನ್ನು ಎದುರಿಸಬೇಕಾಗುತ್ತದೆ. ಸಮಸ್ಯೆಗಳು ಇನ್ನಷ್ಟು ಮತ್ತಷ್ಟು ಜಟಿಲಗೊಳ್ಳುವ ಮೊದಲು ಅವುಗಳ ಪರಿಹಾರ ಕಂಡುಕೊಳ್ಳಬೇಕು.
ಯಾರನ್ನು ನಿಮ್ಮ ಮಾರ್ಗದರ್ಶಕರೆಂದು ಭಾವಿಸುತ್ತೀರಿ?
ನನ್ನ ತಂದೆಯೇ ನನ್ನ ಫ್ರೆಂಡ್, ಫಿಲಾಸಫರ್, ಗೈಡ್ ಎಂದರೆ ಉತ್ಪ್ರೇಕ್ಷೆಯಲ್ಲ. ನನಗೆ ಬಹಳ ಚಿಕ್ಕ ವಯಸ್ಸಿನಿಂದಲೇ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು, ಹೀಗಾಗಿ ಅವರಿಂದ ಬಹಳಷ್ಟು ಕಲಿತಿದ್ದೇನೆ.
ಇವನ್ನೆಲ್ಲ ಮಾಡಲು ನಿಮಗೆ ಎಲ್ಲಿಂದ ಪ್ರೇರಣೆ ದೊರಕಿತು?
ನನ್ನ ಆತ್ಮವಿಶ್ವಾಸವೇ ನನಗೆ ಪ್ರೇರಣೆ, ಅದು ಆಂತರಿಕವಾಗಿ ಉಕ್ಕಿಬಂದಿದೆ. ನಾನು ನನ್ನ ಕೆಲಸದ ಬಗ್ಗೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ಸದಾ ಸನ್ನದ್ಧಳಾಗಿರುತ್ತೇನೆ. ಪ್ರತಿ ಸವಾಲಿನಿಂದಲೂ ಮುಂದಿನ ಸವಾಲನ್ನು ಎದುರಿಸುವುದು ಹೇಗೆ ಎಂದು ಸ್ಪಷ್ಟ ತಿಳಿಯುತ್ತದೆ.
ಬಿಡುವಿನ ವೇಳೆಯಲ್ಲಿ ಹೇಗೆ ರಿಲ್ಯಾಕ್ಸ್ ಆಗ್ತೀರಿ?
ನಾನು ನನ್ನ ಮಗ ಜಹಾನ್ ಜೊತೆ ಕಾಲ ಕಳೆಯಲು ಬಯಸುತ್ತೇನೆ.
ನಿಮಗೆ ಸಿಕ್ಕಿದ ಸಪೋರ್ಟ್ ಸಿಸ್ಟಮ್…..
ನನಗೆ ನನ್ನ ತಾಯಿಯೇ ಸರ್ವಸ್ವ! ಅವರಿಂದ ಎಲ್ಲಾ ಬಗೆಯ ಸಹಕಾರ ಸಿಗುತ್ತಿರುತ್ತದೆ. ನಾನು ನನ್ನ ಎಲ್ಲಾ ವೈಯಕ್ತಿಕ ವಿಷಯಗಳನ್ನೂ ಹಂಚಿಕೊಂಡು ಭರವಸೆಯಿಂದ ಮುನ್ನಡೆಯಬಹುದು ಎಂದರೆ ಅದು ನನ್ನ ತಾಯಿಯಿಂದ ಮಾತ್ರ…. ಅವರ ವೈಯಕ್ತಿಕ ಮಾರ್ಗದರ್ಶನದಿಂದ ನಾನು ಹಂತ ಹಂತವಾಗಿ ಮೇಲೇರಿ ಬಂದಿದ್ದೇನೆ.
ನಿಮ್ಮ ದೃಷ್ಟಿಯಲ್ಲಿ ಕಾನ್ಛಿಡೆನ್ಸ್ ಅಂದ್ರೆ?
ನೀವು ಅಂದುಕೊಂಡಂತೆ ನೀವಾಗಬೇಕು, ನಿಮ್ಮ ಮನಸ್ಸು ಬಯಸಿದಂತೆ ನೀವಿರಬೇಕು!
ನೀವು ಪಕ್ಕಾ ವರ್ಕೋಹಾಲಿಕ್ ಎಂದು ಬಲ್ಲವರು ಹೇಳುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ಅದು ನನ್ನನ್ನು ಯಾವುದೇ ಟೆನ್ಶನ್ ಕಾಡದಂತೆ ಸದಾ ಬಿಝಿಯಾಗಿ ಇರಿಸುತ್ತದೆ. ನಾನು ಸದಾಸರ್ವದಾ ಆಫೀಸ್ ಕೆಲಸ ಮಾಡುವುದರಲ್ಲೇ ಆನಂದ ಕಾಣುತ್ತೇನೆ. ಆದರೂ ಯಾವಾಗ ನನಗೆ ಬಹಳ ಸುಸ್ತಾಗಿದೆ, ಇನ್ನು ಹೋಗಿ ವಿಶ್ರಾಂತಿ ಪಡೆಯಲೇಬೇಕು ಎಂಬುದು ಚೆನ್ನಾಗಿ ಗೊತ್ತಾಗುತ್ತದೆ. ಆಗ ನಾನು ಎಲ್ಲನ್ನೂ ಹಿಂದೆ ಬಿಟ್ಟು ನನ್ನ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ.
ಉದ್ಯೋಗಸ್ಥ ವನಿತೆಯರಿಗೆ ನಿಮ್ಮ ಸಲಹೆ ಏನು?
ಬಂದ ಸವಾಲುಗಳನ್ನು ಎದುರಿಸಿ, ಹಿಮ್ಮೆಟ್ಟಬೇಡಿ! ನಾವು ನಮ್ಮ ಕನಸುಗಳನ್ನು ಬೆನ್ನಟ್ಟಿದಾಗ ಮಾತ್ರ, ಮುಂಬರುವ ಬಾಧೆಗಳಿಂದ ನಾವು ಏನಾದರೂ ಕಲಿಯಲು ಸಾಧ್ಯ. ದಾರಿ ಮಧ್ಯೆ ಅಡ್ಡಿ ಆತಂಕ ಬಂದಾಗ ಅದನ್ನು ಪಾರಾಗಿ ಯಶಸ್ವಿಯಾಗಲು, ಅತಿ ಹೆಚ್ಚಿನ ಶ್ರದ್ಧೆ ನಿಷ್ಠೆಗಳಿಂದ ನಿಮ್ಮ ಕೆಲಸ ಮುಂದುವರಿಸಿ. ಜೀವನ ಪಥದಲ್ಲಿ ಮುನ್ನೇರಲು ನಿಮ್ಮ ವಿವೇಕ ಮತ್ತು ಭಾವನೆಗಳ ಜೊತೆ ಬ್ಯಾಲೆನ್ಸ್ ಮೇಂಟೇನ್ ಮಾಡಿ.
ನಿಮ್ಮ ಮುಂದಿನ ಯೋಜನೆಗಳೇನು?
ನಮ್ಮ ಕೌಟುಂಬಿಕ ಬಿಸ್‌ನೆಸ್‌ಗೆ ನನ್ನ ಮಗನನ್ನು 100% ರೆಡಿ ಮಾಡಬೇಕು, ನನ್ನ ತಂದೆ ನನ್ನನ್ನು ಮಾಡಿದಂತೆ…. ಅದುವೇ ನನ್ನ ಮುಖ್ಯ ಯೋಜನೆ!
– ಪಿ. ಗಿರಿಜಾ