ಪ್ರೀತಿ ಶೆಣೈ ಭಾರತದ ಸುಪ್ರಸಿದ್ಧ ಲೇಖಕಿಯರಲ್ಲಿ ಒಬ್ಬರೆನಿಸಿದ್ದಾರೆ. ಸಾಹಿತ್ಯದಲ್ಲಿ ಪ್ರಧಾನ ಪಾತ್ರ ವಹಿಸಿರುವ ಈಕೆ, `ಇಂಡಿಯನ್‌ ಆಫ್‌ ದಿ ಇಯರ್‌’ ಬ್ರಾಂಡ್ಸ್ ಅಕ್ಯಾಡೆಮಿ ಅವಾರ್ಡ್‌, 2017ರಲ್ಲಿ ಗೌರವಿಸಲ್ಪಟ್ಟರು. ಹಲವಾರು ಸಲ ಪ್ರಮುಖ ಕಾರ್ಪೊರೇಟ್‌ ಸಂಘಟನೆಗಳಲ್ಲಿ ಪಾಲ್ಗೊಂಡು ಪ್ರೇರಕ ಭಾಷಣ ನೀಡಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕಥೆಯ ಮುಖ್ಯಾಂಶ :

ನಿಮ್ಮ ಯಶಸ್ಸಿನ ಗುಟ್ಟೇನು?

ಕಠಿಣ ಪರಿಶ್ರಮ ಹಾಗೂ ದೃಢ ನಿಶ್ಚಯ. ನನ್ನ ಬರವಣಿಗೆಯ ವಿಷಯ ಬಂದಾಗೆಲ್ಲ ಅಥವಾ ನನಗೆ ಅತಿ ಮಹತ್ವಪೂರ್ಣ ಎನಿಸುವ ವಿಷಯ ಎದುರಾದಾಗ, ನಾನು ಬಹಳ ಶಿಸ್ತುಬದ್ಧವಾಗಿ ಆ ಕೆಲಸ ಪೂರೈಸುತ್ತೇನೆ. ಯಶಸ್ಸಿಗೆ ಯಾವುದೇ ಸೂತ್ರಗಳಿಲ್ಲ, ಶಾರ್ಟ್‌ಕಟ್‌ ಇಲ್ಲವೇ ಇಲ್ಲ! ಯಶಸ್ಸಿನ ದಾರಿಯ ತುಂಬಾ ಕಲ್ಲುಮುಳ್ಳುಗಳೇ ಇರುತ್ತವೆ. ಯಶಸ್ವಿ ಎನಿಸಲು ಏನೆಲ್ಲ ಕಷ್ಟಕಾರ್ಪಣ್ಯ ಎದುರಿಸಬೇಕೋ ಅದರಿಂದ ಎದೆಗುಂದಬಾರದು.

ನಿಮ್ಮಲ್ಲಿರುವ ಯಾವ ಆಂತರಿಕ ಶಕ್ತಿ ನಿಮ್ಮಿಂದ ಈ ಪ್ರೇರಕ ಕೆಲಸಗಳನ್ನು ಮಾಡಿಸುತ್ತಿದೆ?

ನನಗೆ ಅನಿಸುವುದು ಎಂದರೆ, ನನ್ನ ಮನದಲ್ಲಿ ಮಡುಗಟ್ಟಿದ ಭಾವನೆಗಳನ್ನು ಬರವಣಿಗೆಯ ರೂಪದಲ್ಲಿ ವ್ಯಕ್ತಪಡಿಸದಿದ್ದರೆ, ನನ್ನ ತಲೆ ವಿಸ್ಛೋಟಗೊಂಡೀತು. ನಾನು ಸದಾ ಯೋಚಿಸುತ್ತಾ ಇರುತ್ತೇನೆ, ಸಾವಿರಾರು ಯೋಚನೆಗಳು ಹರಿದಾಡುತ್ತಿರುತ್ತವೆ. ನಾನು ನನ್ನ ಅಕ್ಕಪಕ್ಕದ ಆಗುಹೋಗುಗಳನ್ನು ಗಮನಿಸಿಕೊಳ್ಳುತ್ತಾ ಅವಕ್ಕೆ ಉತ್ಕೃಷ್ಟ ಅಕ್ಷರ ರೂಪ ಕೊಡಲು ಯತ್ನಿಸುವೆ. 5 ವರ್ಷದವಳಾಗಿ ಇದ್ದಾಗಿನಿಂದಲೇ ಬರೆಯುತ್ತಿರುವೆ. ಬರವಣಿಗೆಯಿಂದ ನನಗೆ ಅಪಾರ ಖುಷಿ, ಆರಾಮ ಎನಿಸುತ್ತದೆ. ನನ್ನ ಮನದಿಂಗಿತ ತಿಳಿಸಲು ಲೇಖನಗಳು ಒಂದು ಸಹಜ ವಿಧಾನ. ಇದನ್ನೇ ಕೆಲವರು ಆಂತರಿಕ ಶಕ್ತಿ ಎನ್ನುತ್ತಾರೆ.

ಒಬ್ಬ ಹೆಣ್ಣಾಗಿ ಮುಂದಿನ ಪ್ರಗತಿಗೆ ಏನಾದರೂ ಅಸುರಕ್ಷತೆ ಅನುಭವಿಸಿದ್ದೀರಾ?

ನನ್ನದು ಬರವಣಿಗೆ ಕೆಲಸವಾದ್ದರಿಂದ ಆ ದೃಷ್ಟಿಯಲ್ಲಿ ಯಾವುದೇ ಅಸುರಕ್ಷತೆ ಕಾಡಿದ್ದಿಲ್ಲ. ಕೆಲಸದ ಸಲುವಾಗಿ ಪ್ರಯಾಣ ಅಥವಾ ಪುಸ್ತಕಗಳ ಸಲುವಾಗಿ ಹೊರಟಾಗಲೂ ಎಚ್ಚರಿಕೆ ವಹಿಸುತ್ತೇನೆ. ಈ ಬರವಣಿಗೆಯೇ ಅಂಥಾದ್ದು, ಇಲ್ಲಿ ಗಂಡುಹೆಣ್ಣು ಎಂಬುದು ಮುಖ್ಯವಲ್ಲ. ನೀವು ಏನು ಬರೆಯುತ್ತಿದ್ದೀರಿ, ಅದೆಷ್ಟು ತೂಕವುಳ್ಳದ್ದು ಎಂಬುದೇ ಮುಖ್ಯ. ಅದನ್ನು ಓದುಗರು ಹೇಗೆ ಸ್ವೀಕರಿಸುತ್ತಿದ್ದಾರೆ, ನಿಮ್ಮ ಕೃತಿ ಮಾರಾಟವಾಗುತ್ತಿದೆಯೇ ಎಂಬುದು ಎಲ್ಲಕ್ಕಿಂತ ಮುಖ್ಯ. ಓದುಗರು ನಿಮ್ಮ ಬರವಣಿಗೆಗೆ ಭಾವುಕರಾಗಿ ಅಂಟಿಕೊಂಡಾಗ, ನೀವು ಗಂಡಾಹೆಣ್ಣಾ ಎಂಬುದು ಮುಖ್ಯವಾಗುವುದಿಲ್ಲ.

ಮಹಿಳೆಯರ ಅತಿ ದೊಡ್ಡ ಶಕ್ತಿ ಯಾವುದು?

ಪ್ರತಿ ಹೆಣ್ಣು ತನ್ನ ಮೇಲೆ ಅಚಲ ವಿಶ್ವಾಸ ಹೊಂದಿರಬೇಕಾದುದು ಅತ್ಯಗತ್ಯ. ನಿಮ್ಮ ಪರವಾಗಿ ಕೂಗಿ ಹೇಳುವ ಸಾಮರ್ಥ್ಯ ಇರಬೇಕು. ನನ್ನ ಪುಸ್ತಕ `ದಿ ರೂಮ್‌ ಬ್ರೇಕರ್ಸ್‌’ನಲ್ಲಿ ನಾಯಕಿ ವೇದಾಳಲ್ಲಿ ಆರಂಭದಲ್ಲಿ ಇದೇ ಕೊರತೆ ಇತ್ತು. ಅವಳು ಸಾಂಪ್ರದಾಯಿಕ ಹುಡುಗಿ, ಬೇಗ ಮದುವೆ ಆಗಿರುತ್ತದೆ. ನಂತರ ಕ್ರಮೇಣ ಅವಳು ತನ್ನ ಶಕ್ತಿ ಗುರುತಿಸಿಕೊಂಡು ತನಗಾಗಿ ಹೋರಾಡಲು ಕಲಿಯುತ್ತಾಳೆ.

ನಿಮ್ಮ ಮಾರ್ಗದರ್ಶಕರು ಯಾರಂತೀರಿ?

ನನ್ನ ತಂದೆಯೇ ನನ್ನ ಮಾರ್ಗದರ್ಶಿ! ಅವರು ನನಗೆ ಅತಿ ದೊಡ್ಡ ಪ್ರೇರಣಾಶಕ್ತಿಯ ಮೂಲವಾಗಿದ್ದರು ಹಾಗೂ ನನಗೆ ಎಲ್ಲಾ ವಿಧದ ಧೈರ್ಯ ತುಂಬುತ್ತಿದ್ದರು. ಅವರಿಂದ ನಾನು ನಿರ್ಭೀತಿಯ ಗುಣ ಕಲಿತೆ.

ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ನಡೆಯುತ್ತಿರುವ ಅಪರಾಧಗಳ ಕುರಿತು ಹೇಳಿ?

ಇದನ್ನೆಲ್ಲ ಕೇಳಿ ನನಗೆ ಬಹಳ ಕೆಟ್ಟದೆನಿಸುತ್ತದೆ. ಮೀಡಿಯಾ ಉತ್ತಮ ಚಿತ್ರಣಗಳತ್ತಲೂ ಫೋಕಸ್‌ ಮಾಡಬೇಕೆಂದು ಬಯಸುತ್ತೇನೆ. ಈ ಪ್ರಪಂಚದಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳೂ ಇವೆ. ಅವುಗಳ ಬಗ್ಗೆ ಎತ್ತಿ ಬರೆದು ಜನರಲ್ಲಿ ಸಕಾರಾತ್ಮಕ ಧೋರಣೆ ಬೆಳೆಸುವುದು ಒಳ್ಳೆಯದಲ್ಲವೇ?

ನಿಮ್ಮ ಕುಟುಂಬ, ಅವರಿಂದ ಸಿಗುವ ಸಪೋರ್ಟ್‌ ಬಗ್ಗೆ ಹೇಳ್ತೀರಾ?

ಯಾರಾದರೂ ಈ ತರಹ ನನ್ನನ್ನು ಪ್ರಶ್ನಿಸಿದಾಗೆಲ್ಲ ನಾನು ಅವರಿಗೆ ಕೇಳುವ ಒಂದೇ  ಪ್ರಶ್ನೆ  `ಇದೇ ರೀತಿ ಗಂಡಸರಿಗೂ ಕೇಳ್ತೀರಾ?’ ಅಂತ. ಕುಟುಂಬದವರ ಸಹಾಯ ಸಿಕ್ಕಾಗ ಮಾತ್ರ ಮಹಿಳೆ ಯಶಸ್ವಿ ಆಗಬಲ್ಲಳು ಅಂತ ಜನರೇಕೆ ಭಾವಿಸಬೇಕು? ಅದೇ ಗಂಡಸರಾದರೆ ಅಡೆತಡೆ ಇಲ್ಲದೆ ಅವರ ಕೆಲಸ ಮುಂದುವರಿಸಬಹುದೇ? ನನ್ನ ವಿಷಯದಲ್ಲಿ…. ನನ್ನ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ, ಅವರೀಗ ದೊಡ್ಡರಾಗಿದ್ದಾರೆ. ಅವರಿಗೆ ನನ್ನ ಬಗ್ಗೆ ಬಹಳ ಹೆಮ್ಮೆ ಇದೆ.

ಗ್ಲಾಸ್‌ ಸೀಲಿಂಗ್‌ ಬಗ್ಗೆ ಏನು ಹೇಳ್ತೀರಿ?

ಈ ಗ್ಲಾಸ್‌ ಸೀಲಿಂಗ್‌ ಬಗ್ಗೆ ನನಗೆ ಹೆಚ್ಚಿಗೇನೂ ಗೊತ್ತಿಲ್ಲ. ನಾನು ಅದರ ಕಪಿಮುಷ್ಟಿಗೆ ಸಿಲುಕಿದವಳಲ್ಲ. ಸಾಮಾನ್ಯವಾಗಿ ಈ ಬಗ್ಗೆ ಹೇಳಬೇಕೆಂದರೆ, ಗ್ಲಾಸ್‌ ಸೀಲಿಂಗ್‌ ಎಂಬುದು ಒಂದು ಗಾಜಿನ ಅಡ್ಡಪದರ ಮಾತ್ರ….. ಇದನ್ನು ಮುರಿದು ಮುನ್ನುಗ್ಗಿ, ಯಾವ ಗೋಡೆಗಳೂ ನಮ್ಮನ್ನು ತಡೆಯದಂತೆ ಎಚ್ಚರ ವಹಿಸಬೇಕು.

– ಪ್ರತಿನಿಧಿ

Tags:
COMMENT