ಕುಕುಂಬರ್ ಯೋಗರ್ಟ್
ಸಾಮಗ್ರಿ: 1 ಕಪ್ ಮೊಸರು, 2-3 ಕಪ್ ಸೌತೆಹೋಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಫ್ಲಾಕ್ ಸೀಡ್ಸ್, ಒಂದಿಷ್ಟು ಪುದೀನಾ.
ವಿಧಾನ : ಮೇಲಿನ ಎಲ್ಲವನ್ನೂ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಂಡು, 1 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.
ಕ್ಯಾಬೇಜ್ ಫ್ರೀಟರ್ಸ್
ಸಾಮಗ್ರಿ : ಅರ್ಧ ಕಪ್ ಕಡಲೆಹಿಟ್ಟು, ಅದರಲ್ಲಿ ಅರ್ಧ ಅಕ್ಕಿಹಿಟ್ಟು, ತುಸು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಶುಂಠಿ, ಪುದೀನಾ, 2 ಕಪ್ ಹೆಚ್ಚಿದ ಎಲೆಕೋಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, 2 ಚಿಟಕಿ ಅರಿಶಿನ, ಕರಿಯಲು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ, ನೀರು ಚಿಮುಕಿಸಿ, ಪಕೋಡ ಹದಕ್ಕೆ ಕಲಸಿ. ಕಾದ ಎಣ್ಣೆಯಲ್ಲಿ ಇದರಿಂದ ಪಕೋಡ ತಯಾರಿಸಿ ಕಾಯಿಚಟ್ನಿ ಜೊತೆ ಸವಿಯಲು ಕೊಡಿ.
ಪಂಪಕಿನ್ ಲಕ್ಸಾ
ಸಾಮಗ್ರಿ : 2-2 ಚಮಚ ಆಲಿವ್ ಎಣ್ಣೆ, ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಅರ್ಧರ್ಧ ಕಪ್ ಹೆಚ್ಚಿದ ಈರುಳ್ಳಿ ತೆನೆ, ಬ್ರೋಕ್ಲಿ, ತೆಂಗಿನ ಹಾಲು, ಹುರಿದ ಕಡಲೆಕಾಯಿಬೀಜ, ದಾಳಿಂಬೆ, 2-3 ಕಪ್ (ಸಿಪ್ಪೆ ಹೆರೆದ) ಸಿಹಿಗುಂಬಳ ಹೋಳು, ವೆಜಿಟೆಬಲ್ ಸ್ಟಾಕ್, ಹೆಚ್ಚಿದ ಅಣಬೆ, ನೂಡಲ್ಸ್, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಹಾಟ್ ಸಾಸ್, ಮೆಣಸು.
ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಶುಂಠಿ, ಹಸಿಮೆಣಸು ಹಾಕಿ ಬಾಡಿಸಿ. ಆಮೇಲೆ ಈರುಳ್ಳಿ ತೆನೆ ಸೇರಿಸಿ ಕೆದಕಬೇಕು. ನಂತರ ಕುಂಬಳ ಹೋಳು ಹಾಕಿ, ನೀರು ಚಿಮುಕಿಸಿ 3 ನಿಮಿಷ ಬೇಯಿಸಿ. ಆಮೇಲೆ ವೆಜ್ ಸ್ಟಾಕ್ ಬೆರೆಸಿ, ಮುಚ್ಚಳವಿರಿಸಿ ಮತ್ತಷ್ಟು ಹೊತ್ತು ಬೇಯಿಸಿ. ನಂತರ ಇದನ್ನು ಕೆಳಗಿಳಿಸಿ, ಆರಿದ ಮೇಲೆ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಅದನ್ನು ಬಾಣಲೆಗೆ ಹಾಕಿ ಮಂದ ಉರಿಯಲ್ಲಿ ಕೆದಕುತ್ತಾ ಕುದಿಸಬೇಕು. ಆಮೇಲೆ ಇದಕ್ಕೆ ಬ್ರೋಕ್ಲಿ, ಅಣಬೆ ಹಾಕಿ ಮತ್ತೆ 10 ನಿಮಿಷ ಬೇಯಿಸಿ. ಮಂದ ಉರಿ ಮಾಡಿ ತೆಂಗಿನ ಹಾಲು ಬೆರೆಸಿ ಕುದಿಸಬೇಕು. ಆಮೇಲೆ ಉಪ್ಪು, ಮೆಣಸು, ಸಕ್ಕರೆ ಹಾಕಿ ಕೈಯಾಡಿಸಿ. 2 ನಿಮಿಷ ಬಿಟ್ಟು ಕೆಳಗಿಳಿಸಿ. ಒಂದು ಟ್ರೇನಲ್ಲಿ ಬೆಂದ ನೂಡಲ್ಸ್ ಹರಡಿ, ಜೊತೆಗೆ ಒಂದು ಬಟ್ಟಲಲ್ಲಿ ಗ್ರೇವಿ ಇಡಿ. ಆಮೇಲೆ ಚಿತ್ರದಲ್ಲಿರುವಂತೆ ಅದಕ್ಕೆ ಉಳಿದ ಸಾಮಗ್ರಿಗಳಿಂದ ಅಲಂಕರಿಸಿ ಬಿಸಿಯಾಗಿ ಸವಿಯಲು ಕೊಡಿ.
ವಾಟರ್‌ಮೆಲನ್ ಗ್ಯಾಜ್‌ಪಾಚೋ
ಸಾಮಗ್ರಿ : 2-3 ಕಪ್ ಕಲ್ಲಂಗಡಿ ಹಣ್ಣಿನ ಹೋಳು (ಬೀಜ ತೆಗೆದುಬಿಡಿ), 2 ಕಪ್ ಟೊಮೇಟೊ ಜೂಸ್, 1 ಕಪ್ ಹೆಚ್ಚಿದ ಕ್ಯಾಪ್ಸಿಕಂ, ತುಸು ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಮೆಣಸು, ನೀರಲ್ಲಿ ನೆನೆಸಿದ ತುಂಡರಿಸಿದ ಬ್ರೆಡ್, ತುಸು ಎಕ್ಸ್ ಟ್ರಾ ವರ್ಜಿನ್ ಆಲಿವ್ ಆಯಿಲ್.
ವಿಧಾನ : ಎಣ್ಣೆ ಹೊರತುಪಡಿಸಿ ಉಳಿದೆಲ್ಲ ಸಾಮಗ್ರಿ ಒಟ್ಟಿಗೆ ಬ್ಲೆಂಡ್ ಮಾಡಿ. ಆಮೇಲೆ ಇದನ್ನು ಚಿತ್ರದಲ್ಲಿರುವಂತೆ ಗಾಜಿನ ಬೌಲ್‌ಗೆ ಹಾಕಿ, ಆಯಿಲ್‌ನಿಂದ ಗಾರ್ನಿಶ್ ಮಾಡಿ, ಅಲಂಕರಿಸಿ.
ಪಾಮ್ ಫ್ರೇಟ್ ಮ್ಯಾಂಗೋ ಕರೀ
ಸಾಮಗ್ರಿ : 500 ಗ್ರಾಂ ಪಾಮ್ ಫ್ರೇಟ್ ಫಿಶ್, 1 ದೊಡ್ಡ ಹುಳಿ ಮಾವಿನಕಾಯಿಯ ಹೋಳುಗಳು, ಅರ್ಧ ಸೌಟು ಎಣ್ಣೆ, ತುಸು ಸಾಸುವೆ, ಕರಿಬೇವು, ಹೆಚ್ಚಿದ ಹಸಿ ಮೆಣಸು, ಶುಂಠಿ, 2 ಈರುಳ್ಳಿ, 1 ಕಪ್ ತೆಂಗಿನ ಹಾಲು, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ.
ವಿಧಾನ : ಫಿಶ್ ಶುಚಿಗೊಳಿಸಿ, ಮಧ್ಯೆ ಮಧ್ಯೆ ಚಾಕುವಿನಿಂದ ಸೀಳಿ, ಅರಿಶಿನ ಉಪ್ಪು ಸವರಿ 30 ನಿಮಿಷ ಮ್ಯಾರಿನೇಟ್ ಆಗಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ಆಮೇಲೆ ಹೆಚ್ಚಿದ ಈರುಳ್ಳಿ, ಶುಂಠಿ, ಹಸಿ ಮೆಣಸು ಹಾಕಿ ಬಾಡಿಸಿ. ನಂತರ ತೆಂಗಿನಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸಿ. ಆಮೇಲೆ ಇದಕ್ಕೆ ಫಿಶ್, ಮಾವಿನ ಹೋಳು ಹಾಕಿ ಕೆದಕುತ್ತಾ ಬೇಯಿಸಿ. ನಂತರ ತುಸು ಖಾರ ಹಾಕಿ ಕುದಿಸಿ, ಬಿಸಿ ಅನ್ನದ ಜೊತೆ ಸವಿಯಲು ಕೊಡಿ.
ಫ್ರೈಡ್ ಬೇಬಿ ಪೊಟೇಟೋಸ್
ಸಾಮಗ್ರಿ : 15-16 ಬೇಬಿ ಪೊಟೇಟೋಸ್ (4 ಭಾಗವಾಗಿ ಉದ್ದಕ್ಕೆ ಕತ್ತರಿಸಿ), 2 ಈರುಳ್ಳಿ, 4-5 ತುಂಡರಿಸಿದ ಒಣ ಮೆಣಸಿನಕಾಯಿ, 6-8 ಜಜ್ಜಿದ ಬೆಳ್ಳುಳ್ಳಿ, ತುಸು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ.
ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ತುಂಡರಿಸಿದ ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಜೊತೆ ಒಗ್ಗರಣೆ ಕೊಡಿ. ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಆಲೂ ಹಾಕಿ ಬಾಡಿಸಿ. 10 ನಿಮಿಷ ಹೀಗೆ ಬೆಂದ ನಂತರ ಉಪ್ಪು ಖಾರ ಹಾಕಿ ಕೆದಕಿ ಕೆಳಗಿಳಿಸಿ. ತುಸು ನಿಂಬೆ ಹಣ್ಣು ಹಿಂಡಿ, ಅನ್ನ ರೊಟ್ಟಿ ಜೊತೆ ಸವಿಯಲು ಕೊಡಿ.
ಅವಕಾಡೋ ಕಾರ್ನ್ ಟೊಮೇಟೊ ಸಲಾಡ್
ಸಾಮಗ್ರಿ : ಸಣ್ಣ ಕ್ಯೂಬ್ಸ್ ಆಗಿ ಹೆಚ್ಚಿದ 1 ಅವಕಾಡೋ, 2-3 ಟೊಮೇಟೊ, 1 ಈರುಳ್ಳಿ, ಬ್ಲ್ಯಾಂಚ್‌ಗೊಳಿಸಿದ ಅರ್ಧ ಕಪ್ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ವಿನಿಗರ್, ಜೇನುತುಪ್ಪ, ಆಲಿವ್ ಆಯಿಲ್, ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಉಪ್ಪು, ಖಾರ, ವಿನಿಗರ್ ಇತ್ಯಾದಿ ಬೆರೆಸಿಡಿ. ಉಳಿದೆಲ್ಲ ಹೆಚ್ಚಿದ ಪದಾರ್ಥ ಸೇರಿಸಿಕೊಂಡು ಅದಕ್ಕೆ ಇದನ್ನು ಬೆರೆಸಿ ಸಲಾಡ್ ಸವಿಯಲು ಕೊಡಿ.
ಸೇವರಿಟ್ ಮಸಾಲಾ ಪಾಸ್ತಾ
ಸಾಮಗ್ರಿ : 200 ಗ್ರಾಂ ಸೇವರಿಟ್ ಪಾಸ್ತಾ, 1 ಕಪ್ ವೆಜ್ ಸ್ಟಾಕ್, 1 ದೊಡ್ಡ ಟೊಮೇಟೊ, ಬೇಯಿಸಿ ಮಸೆದ 1 ಆಲೂ, 1-2 ಈರುಳ್ಳಿ, 1-2 ಲವಂಗ, 7-8 ಎಸಳು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಜೀರಿಗೆ ಪುಡಿ, 1 ಸೌಟು ಬೆಣ್ಣೆ, ಅಗತ್ಯವಿದ್ದಷ್ಟು ಪನೀರ್, ಚೀಸ್.
ವಿಧಾನ : ಮೊದಲು ಸೇವರಿಟ್ ಪಾಸ್ತಾವನ್ನು ಬಿಸಿ ನೀರಲ್ಲಿ ಬೇಯಿಸಿ, ನೀರು ಬಸಿದು, ಕೊಳಾಯಿಯ ಹರಿವ ನೀರಿನಲ್ಲಿ ತೊಳೆದುಕೊಂಡು ಒಂದು ಬದಿಗಿಡಿ. ಸಣ್ಣದಾಗಿ ತರಕಾರಿ ಹೆಚ್ಚಿಡಿ. ಮೊದಲು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಹೆಚ್ಚಿದ ಟೊಮೇಟೊ ಬಾಡಿಸಿ. ಇದಕ್ಕೆ ಲವಂಗ, ಉಪ್ಪು, ಖಾರ, ಮಸಾಲೆ ಎಲ್ಲಾ ಹಾಕಿ ಕೆದಕಬೇಕು. ಆಮೇಲೆ ಮಸೆದ ಆಲೂ, ಬೆಂದ ಪಾಸ್ತಾ, ವೆಜ್ ಸ್ಟಾಕ್ ಹಾಕಿ ಬೆರೆಯುವಂತೆ ಮಾಡಿ. ಕೆಳಗಿಳಿಸುವ ಮುನ್ನ ರೀಫೈಂಡ್ ಎಣ್ಣೆಯಲ್ಲಿ ಹುರಿದ ಪನೀರ್ ಬೆರೆಸಿ ಕೆದಕಿ, ಮೇಲೆ ಚೀಸ್ ಉದುರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಸೇವರಿಟ್ ಪಾಸ್ತಾ ಪಸ್ಲಿ ಕ್ರೇಪ್ಸ್
ಸಾಮಗ್ರಿ : ಬೆಂದ 1 ಕಪ್ ಸೇವರಿಟ್ ಸ್ಪೈರಲ್ ಪಾಸ್ತಾ, 1 ಕಪ್ ಹೆಚ್ಚಿದ ಸ್ಟ್ರಾಬೆರಿ, ಅರ್ಧ ಕಪ್ ವೈಟ್ ಕಾಂಪೌಂಡ್ ಚಾಕಲೇಟ್, 1 ಕಪ್ ಹಾಲು, ಅರ್ಧರ್ಧ ಕಪ್ ಮೈದಾ, ಸಕ್ಕರೆ, 1 ಚಿಟಕಿ ಉಪ್ಪು, 1 ಮೊಟ್ಟೆಯ ಬಿಳಿ ಭಾಗ (ಬೀಟ್ ಮಾಡಿಡಿ), ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್).
ವಿಧಾನ : ಒಂದು ಪಾತ್ರೆಗೆ ಬೀಟ್ ಮಾಡಿದ ಎಗ್, ಹಾಲು, ಮೈದಾ, ಸಕ್ಕರೆ, ಉಪ್ಪು ಸೇರಿಸಿ ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಒಂದು ಪ್ಯಾನಿಗೆ ಬೆಣ್ಣೆ ಸವರಿ ಅದಕ್ಕೆ ಈ ಹಿಟ್ಟನ್ನು ಸುರಿದು, ದೋಸೆಯಂತೆ ಹರಡಿಕೊಳ್ಳಿ. ಇದು ಬೆಂದ ನಂತರ ಹೊರತೆಗೆದಿಡಿ. ಈ ರೀತಿ 4 ದೋಸೆ ಮಾಡಿಡಿ. ಅದೇ ಸಮಯದಲ್ಲಿ ಪಾಸ್ತಾ ಬೇಯಿಸಿ ಹಾಗೂ ಹಾಲಲ್ಲಿ ಚಾಕಲೇಟ್ ಕರಗಿಸಿ ವೈಟ್ ಸಾಸ್ ಮಾಡಿಡಿ. 1 ದೋಸೆಯನ್ನು ತಟ್ಟೆಯಲ್ಲಿ ಹಾಕಿ ಅದರ ಮೇಲೆ ಪಾಸ್ತಾ ಹರಡಿರಿ. ಇದರ ಮೇಲೆ ಕ್ರಮವಾಗಿ ತುಸು ಸ್ಟ್ರಾಬೆರಿ, ಚಾಕಲೇಟ್ ಸಾಸ್, ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್ ಹರಡಿ, ಸುರುಳಿ ಸುತ್ತಿ ಸವಿಯಲು ಕೊಡಿ.
ಸೂಚನೆ : ಹಾಲನ್ನು `ಡಬ್ಬಲ್ ಬಾಯ್ಲರ್’ (ಒಂದು ಬಾಣಲೆಯಲ್ಲಿ ಕುದಿವ ನೀರು, ಅದರಲ್ಲಿ ತೇಲಿಸಿದ ಹಾಲಿನ ಬಟ್ಟಲು) ವಿಧಾನದಲ್ಲಿ ಚಾಕಲೇಟ್ ಹಾಕಿ ಸಾಸ್ ಸಿದ್ಧಪಡಿಸಿ.