ಮಕ್ಕಳಿಗೆ ಪರೀಕ್ಷೆ : ಅಮ್ಮಂದಿರಿಗೆ ಅಗ್ನಿ ಪರೀಕ್ಷೆ

ದೇಶಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಇಲ್ಲವೇ ಬಿಗಡಾಯಿಸುವ ಮೈಲಿಗಲ್ಲು ಎಂಬಂತೆ ಸಾಬೀತಾಗುತ್ತಿದೆ. ಅದರಲ್ಲಿ ಸಮರ್ಪಕವಾಗಿ ಉತ್ತೀರ್ಣರಾದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಇಲ್ಲವೇ ಜೀವನ ಅರೆಬರೆ, ಮುಖ ಮುಚ್ಚಿಕೊಂಡು ಇರಬೇಕಾಗುತ್ತದೆ. ಅಮ್ಮಂದಿರ ಪಾಲಿಗೆ ಈ ಪರೀಕ್ಷೆ ಒಂದು ಅಗ್ನಿ ಪರೀಕ್ಷೆಯೇ ಹೌದು.  ಸೀತೆ ಅಗ್ನಿಗೆ ತನ್ನನ್ನು ಸಮರ್ಪಿಸಿಕೊಂಡಂತೆ ಪ್ರತಿ ತಾಯಿ ಕೂಡ ಆ ಬೆಂಕಿಯಲ್ಲಿ ಬೇಯಬೇಕಾಗುತ್ತದೆ. ಮಗ/ಮಗಳು ಯಾರದ್ದೇ ಪರೀಕ್ಷೆ ಇರಲಿ, ಅವರಿಗೆ ಕಡಿಮೆ ಅಂಕ ಬಂದರೆ ಅಮ್ಮನ ಮುಖ ಸೊಟ್ಟಗಾಗುತ್ತದೆ.

ಇಡೀ ವರ್ಷ ಅಮ್ಮ ಈ ಪರೀಕ್ಷೆಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕಿರುತ್ತದೆ. ಭಾರಿ ಭಾರಿ ಪುಸ್ತಕಗಳನ್ನು ಖರೀದಿಸುವುದು, ಹೊರಗೆ ಸುತ್ತಾಡುವುದನ್ನು ತ್ಯಾಗ ಮಾಡುವುದು, ಮಕ್ಕಳಿಗಾಗಿ ಬೇಗ ಎದ್ದು ತಿಂಡಿ ಸಿದ್ಧಪಡಿಸಬೇಕು. ಸಂಬಂಧಿಕರ ಮನೆಗೆ ಹೋಗುವುದನ್ನು ನಿಲ್ಲಿಸಬೇಕಾಗುತ್ತದೆ. ಆ ಬಳಿಕ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇದ್ದರೆ ಇಂದಿನ ಕಾಲಘಟ್ಟದಲ್ಲಿ ಯಾವುದೇ ಬೆಲೆಯಿಲ್ಲ. ಆ ಕಾರಣಕ್ಕಾಗಿ ಅಮ್ಮ ಸಪ್ಪೆ ಮುಖ ಹೊತ್ತು ತಿರುಗಬೇಕಾಗುತ್ತದೆ.

ಇದು ನಮ್ಮ ಸರ್ಕಾರಗಳ ನೀತಿಯ ಕೊಡುಗೆಯಾಗಿದ್ದು, ಶಿಕ್ಷಣಕ್ಕೆ ಯಾವುದೇ ಮಹತ್ವ ಇಲ್ಲದಂತಾಗುತ್ತಿದೆ. ಅತಿ ಯೋಗ್ಯ ಹಾಗೂ ಸಾಧಾರಣ ಬುದ್ಧಿವಂತರು ಮೊದಲಿನಿಂದಲೇ ಇದ್ದರು. ಪ್ರತಿಯೊಬ್ಬರಿಗೂ ಅವರವರ ಅರ್ಹತೆಗೆ ಅನುಗುಣವಾಗಿ ಅವಕಾಶಗಳು ಲಭಿಸುತ್ತಿದ್ದವು. ಆದರೆ ದ್ವಿತೀಯ ಪಿಯುಸಿಯಲ್ಲಿ 98% ಹಾಗೂ 99.5% ಅಂಕಗಳು ಒಬ್ಬರದ್ದಲ್ಲ, ಹಲವರದ್ದು ಬರಲಾರಂಭಿಸಿದಾಗ, ಇಡೀ ದೇಶದಲ್ಲಿ ಶೇ.90ಕ್ಕಿಂತ ಕಡಿಮೆ ಅಂಕ ಗಳಿಸಿದವರು ನಿರುಪಯುಕ್ತರಾಗಿದ್ದಾರೆ.

ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೂ ತಮ್ಮ ಇಷ್ಟದ ಕೋರ್ಸ್‌ ಸಿಗಬಹುದೆಂಬ ನಂಬಿಕೆ ಇಲ್ಲ. ದ್ವಿತೀಯ ಪಿಯುಸಿಯ ಜೊತೆಗೆ ನೀಟ್‌, ಜೆಇಇಯಂತಹ ಪರೀಕ್ಷೆಗಳನ್ನು ಬರೆಯಬೇಕಾಗಿ ಬರುತ್ತದೆ. ಇದರಿಂದ ಯಾವುದಾದರೊಂದು ಕೆರಿಯರ್‌ ರೂಪಿಸಿಕೊಳ್ಳಬಹುದೆಂಬ ಆಕಾಂಕ್ಷೆ ಇರುತ್ತದೆ. ಇಲ್ಲದಿದ್ದರೆ ಅವರಿಗೆ ಅಮೆಝಾನ್‌, ಫ್ಲಿಪ್‌ಕಾರ್ಟ್‌ನವರ ಬ್ಯಾಗ್‌ನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಮನೆಮನೆಗೆ ತಿರುಗುವ ಉದ್ಯೋಗವಷ್ಟೇ ಬಾಕಿ ಉಳಿಯುತ್ತದೆ.

ದೇಶಕ್ಕೆ ಕುಶಲ ವೈದ್ಯರು, ಎಂಜಿನಿಯರ್‌, ವಿಜ್ಞಾನಿಗಳು, ಆಡಳಿತಗಾರರ ಅವಶ್ಯಕತೆ ಇರುವಂತೆ ಇತರೆ ಕೆಲಸ ನಿರ್ವಹಿಸುವವರ ಅಗತ್ಯ ಕೂಡ ಇರುತ್ತದೆ. ಆದರೆ ದ್ವಿತೀಯ ಪಿಯು ಪರೀಕ್ಷೆ ಎಂತಹ ತಡೆಗೋಡೆಯಾಗಿದೆ ಎಂದರೆ ಚೀನಾದ ಗೋಡೆಯ ಹಾಗೆ ಎತ್ತರ ಮತ್ತು ಉದ್ದ ಎಂಬಂತೆ ಭಾಸವಾಗುತ್ತದೆ. ಅಕಸ್ಮಾತ್‌ ಅದನ್ನು ದಾಟಲು ಆಗದಿದ್ದರೆ ವಾಪಸ್‌ ಹೋಗಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಲಕ್ಷಾಂತರ ರೂ. ಸಂಬಳದ ನೌಕರಿ ಬಿಇ, ಎಂಬಿಎ, ಎಂಬಿಬಿಎಸ್‌, ಐಐಟಿ ಮಾಡಿದ ಬಳಿಕ ದೊರೆತೇ ದೊರೆಯುತ್ತೆ ಎಂದೇನಿಲ್ಲ. ಆದರೆ ಯಾವುದಾದರೊಂದು ಸಿಗಬೇಕು. ಅದರಿಂದ ಅಮ್ಮನಿಗೆ ಖುಷಿ ಆಗಬೇಕು. ತಾನು ತನ್ನ ಕರ್ತವ್ಯ ಮುಗಿಸಿದ್ದೇನೆ ಎಂಬ ಭಾವನೆ ಆಕೆಗೆ ಬರಬೇಕು.

90% ಗಿಂತ ಹೆಚ್ಚು ಅಂಕ ತಂದವನ ತಾಯಿಯೂ ಅಳುತ್ತಾಳೆ ಹಾಗೂ 90%ಕ್ಕಿಂತ ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಯ ತಾಯಿಯೂ ಗೋಳು ತೋಡಿಕೊಳ್ಳುತ್ತಾಳೆ ಎಂದರೆ ಇದೊಂದು ಅನ್ಯಾಯವೇ ಹೌದು. ಸಮಾಜ, ಸರ್ಕಾರ ವ್ಯವಸ್ಥೆ ಹಾಗೂ ಮಾರುಕಟ್ಟೆ ಈ ಎಲ್ಲ ಸೇರಿ ಇದನ್ನು ಮಾಡುತ್ತಿವೆ. ನಿರುದ್ಯೋಗ ಚುನಾವಣೆಯ ವಿಷಯವಾದದ್ದು ಕೇವಲ ವಿರೋಧ ಪಕ್ಷಗಳಿಗೆ ಮಾತ್ರ. ನರೇಂದ್ರ ಮೋದಿ ಅವರು ತಾವು ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್‌ ನಡೆಸಿದ್ದು, ಹಸುಗಳನ್ನು ಕಟುಕರಿಂದ ರಕ್ಷಿಸಿದ್ದು, ಭಾರತ ಮಾತಾ ಕೀ ಜೈ ಎಂದು ಹೇಳಿದರೆ ಅಮ್ಮನ ಕಷ್ಟ ನಿವಾರಣೆಯಾದಂತೆ ಎಂಬ ರೀತಿಯಲ್ಲಿ ಹೇಳಿದರು.

ದೇಶ ಹಾಗೂ ಸಮಾಜ ಮರೆಯುತ್ತಿರುವ ಸಂಗತಿಯೆಂದರೆ, ಪಿಯುಸಿ ದ್ವಿತೀಯ ಪರೀಕ್ಷೆಯ ವೈಫಲ್ಯವನ್ನು ಕೇವಲ ಮಕ್ಕಳ ವೈಫಲ್ಯತೆ ಎಂದು ಭಾವಿಸದೆ, ಅದನ್ನು ತಾಯಿಯ ತಲೆಗೂ ಕಟ್ಟತ್ತದೆ. ಈ ಅಡ್ಡಗೋಡೆಯನ್ನು ಸೂಕ್ತ ರೀತಿಯಲ್ಲಿ ದಾಟದೇ ಹೋದರೆ ಮನೆಯಲ್ಲಿ ಶಾಂತಿ ಇರುವುದಿಲ್ಲ. ಮಗ-ಮಗಳ ಮದುವೆ ಆಗುವುದಿಲ್ಲ, ಗಳಿಕೆ ಇರುವುದಿಲ್ಲ. ಗೌರವ ಇರುವುದಿಲ್ಲ ಎನ್ನುವುದು ಪ್ರತಿಯೊಬ್ಬ ತಾಯಿಗೂ ಗೊತ್ತು.

ವಾಸ್ತವದಲ್ಲಿ 2ನೇ ಪಿಯುಸಿ ಬಳಿಕ ನೂರಾರು ಅವಕಾಶಗಳು ತೆಗೆದುಕೊಳ್ಳಬೇಕು. ಯಾರಿಗೆ ಶೇ.90 ರಿಂದ 99% ಅಂಕಗಳು ಬಂದಿವೆಯೋ ಅವರಿಗೆ ಪಕ್ಕಾ ದಾರಿ ಸಿಗುವಂತೆ, ಬೇರೆಯವರಿಗೆ ಕಿರಿದಾದ ಅಷ್ಟೇನೂ ಪಕ್ಕಾ ಅಲ್ಲದ ರಸ್ತೆಯ ಮುಖಾಂತರವಾದರೂ ಸರಿ, ಒಂದು ಗುರಿಯತ್ತ ಕೊಂಡೊಯ್ಯುವ ದಾರಿ ಇರಬೇಕು. ಇಂದು ಶಿಕ್ಷಣವನ್ನು ಸುಧಾರಣೆ ಮಾಡುವ ಹೆಸರಿನಲ್ಲಿ ಚಿಕ್ಕ ಚಿಕ್ಕ ದಾರಿಗಳನ್ನು ಮುಚ್ಚಲಾಗುತ್ತಿದೆ. ಅದಕ್ಕೆ ಕೆಟ್ಟ ಹೆಸರು ತಯಾರಾಗುತ್ತಿದೆ.

ಯಾರಿಗೆ 90-99 ಅಂಕ ಬರುವ ನಿರೀಕ್ಷೆ ಇರುವುದಿಲ್ಲವೋ ಅವರು ಮೊದಲೇ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಅಮ್ಮ ಮಾಡಲು ಆಗುವುದಿಲ್ಲ. ಸಮಾಜ ಹಾಗೂ ಸರ್ಕಾರವೇ ಇದನ್ನು ಮಾಡಬೇಕು.

ಕೇವಲ ಒಂದೇ ಪರೀಕ್ಷೆಯ ಆಧಾರದ ಮೇಲೆ ಅರ್ಹತೆ ನಿರ್ಧರಿಸಬಾರದು. 17 ವರ್ಷದವರಿಗೆ ಮುಂದಿನ 70 ವರ್ಷಗಳ ದಾರಿ ಕಂಡುಕೊಳ್ಳಲು ಹೇಳುವುದು ಕಷ್ಟ. ನೂರಾರು ದಾರಿಗಳು ಇದ್ದಾಗ, ತಮ್ಮ ತಮ್ಮ ಅರ್ಹತೆಯ, ತಮ್ಮ ತಮ್ಮ ಅಭಿಲಾಷೆಯ ರಸ್ತೆ ಕಂಡುಕೊಳ್ಳಲು ಸಾಧ್ಯವಾಗಬೇಕು. ಅಮ್ಮನ ಜೊತೆ ತಲೆ ಎತ್ತಿ ನಿಲ್ಲುವಂತಾಗಬೇಕು.

ಇನ್ನೊಂದು ಹೆಜ್ಜೆ ಬಾಕಿ…..

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಹೇಳಿದೆ. ಒಡಿಶಾದ ನವೀನ್‌ ಪಟ್ನಾಯಕ್‌ ಹಾಗೂ ಬಂಗಾಳದ ಮಮತಾ ಬ್ಯಾನರ್ಜಿ ಶೇ.33ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರನ್ನೇ ಆಯ್ಕೆ ಮಾಡಿರುವುದು ಈಗ ಮಹಿಳೆಯರು ರಾಜಕೀಯದಲ್ಲಿ ಬರುವುದು ಖಾತ್ರಿಯಾಗಿದೆ. ಮಹಿಳೆಯರು ಅಪ್ಪ, ಗಂಡ ಹಾಗೂ ಮಗನ ಸಹಾಯದಿಂದ ರಾಜಕೀಯಕ್ಕೆ ಬಂದರೂ ಸರಿಯೇ, ಅದೊಂದು ಒಳ್ಳೆಯ ಬೆಳವಣಿಗೆಯೇ ಹೌದು.

ಆಧುನಿಕ ಯೋಚನೆ ಹಾಗೂ ಶಿಕ್ಷಣ ದೊರೆಯಲು ಆರಂಭವಾಗಿ 150 ವರ್ಷಗಳಾದರೂ ಮಹಿಳೆಯರ ಸ್ಥಿತಿ ಮಾತ್ರ ಹೇಗಿದೆಯೋ ಹಾಗೆಯೇ ಇದೆ. ಬಹು ದೊಡ್ಡ ಮನೆಗಳಲ್ಲೂ ಅವರು ಮನೆ ನಿರ್ವಾಹಕಿಯರೇ ಹೊರತು ಬೇರೇನೂ ಕೆಲಸ ಮಾಡಲು ಆಗುತ್ತಿಲ್ಲ. ತಮ್ಮ ಮನಸ್ಸಿನ ಖುಷಿಗಾಗಿ ಅವರು ಕಿಟಿ ಪಾರ್ಟಿಗಳು ಹಾಗೂ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುತ್ತಾರೆ. ಅದರ ಹೊರತು ಅವರ ವ್ಯಾಪ್ತಿ ಸೀಮಿತ. ತನ್ನದೇ ಬಲದಿಂದ ಏನನ್ನಾದರೂ ಮಾಡಬಹುದೆಂದು ಅನಿಸಿದರೂ ಸಂಗಾತಿ, ಮಕ್ಕಳ ಪಾಲು ತಪ್ಪಿ ಹೋಗುತ್ತದೆಂದು ಆಕೆಗೆ ಭಾಸವಾಗುತ್ತದೆ. ಗುರಿ ದೊಡ್ಡದೇ ಆಗಿದ್ದರೂ ಆಕೆ ಅಪವಾದವಾಗಿರಲು ಇಷ್ಟಪಡುತ್ತಾಳೆ.

ರಾಜಕೀಯದಲ್ಲಿ ಬದಲಾವಣೆ ತರಲು ಸಾಕಷ್ಟು ಶಕ್ತಿ ಬೇಕು. ಅದರ ಮುಖಾಂತರ ಮಹಿಳೆ ಯಾರಿಗೂ ಕಡಿಮೆ ಅಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಮಹಿಳೆಯರು ಏನಾದರೂ ತೀರ್ಮಾನ ಕೈಗೊಂಡರೆ ಆಕೆ ಪುರುಷರು ಯೋಚಿಸುವಂತೆ ಸೀಮಿತಳಾಗಿ ಉಳಿಯುತ್ತಾಳೆ ಎಂದೇನೂ ಇಲ್ಲ. ಅವಳು ತನ್ನದೇ ಯೋಚನೆ, ಮಹಿಳೆಯರ ಚಿಕ್ಕಪುಟ್ಟ ಸಮಸ್ಯೆಗಳು, ಅವರ ಗರಿಗೆದರಿದ ಆಕಾಂಕ್ಷೆ, ಅವರೊಂದಿಗೆ ಆದ ಭೇದಭಾವದ ಹಿನ್ನೆಲೆಯಲ್ಲಿ ಆಕೆ ತೀರ್ಮಾನಿಸುತ್ತಾಳೆ. ಆಕೆ ಮಹಿಳಾಪರ ಆಗಿರದಿದ್ದರೂ ಕೂಡ, ಆಕೆ ಪುರುಷರಿಗೆ ಭಯಭೀತಳಾಗುವಳಂತೂ ಅಲ್ಲ. ವಿಧಾನಸಭೆಗಳಲ್ಲಿ ಅವರ ಸಂಖ್ಯೆ ಜಾಸ್ತಿ ಇದ್ದರೆ ಹಳ್ಳಿಗಳಲ್ಲಿ, ಬಡಾವಣೆಗಳಲ್ಲಿ ಟ್ಯಾಂಕರ್‌ ನೀರಿಗೆ ಆಗುವ ಜಗಳದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿ, ಆ ಸಮಸ್ಯೆ ನಿವಾರಣೆಗೆ ಕಾರಣವಾಗಬಹುದು.

ಇಂದಿರಾಗಾಂಧಿ, ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿ, ಸೋನಿಯಾ ಗಾಂಧಿ ತಮ್ಮ ಬಲದ ಮೇಲೆ ಆಡಳಿತ ನಡೆಸಿದರು. ಈಗ ಅವಕಾಶ ಸಿಕ್ಕರೆ ಮಹಿಳೆಯರು ತಮ್ಮ ಸ್ವಬಲದಿಂದಲೇ ಪ್ರಬಲರಾಗಬೇಕು. ತಮಗೂ ಮೀಸಲಾತಿ ಕೊಡಬೇಕೆಂದು ಪುರುಷರು ಅಂಗಲಾಚಬೇಕು.

ಇಂದಿನ ತಂತ್ರಜ್ಞಾನ ಲಿಂಗ ಆಧಾರಿತವಾಗಿಲ್ಲ. ಯುದ್ಧ ಕೂಡ ಅಷ್ಟೇ, ಮಹಿಳೆಯ ಮನಸ್ಸಿನಲ್ಲಿ ಹಿಂಜರಿಕೆ ಅವಳನ್ನು ಬಂಧಿಸಿರುವ ಸರಪಳಿ, ಅದು ಬಿಟ್ಟರೆ ಧರ್ಮವೇ ಪ್ರಬಲ ಅಡ್ಡಿ. ಹೀಗಾಗಿ ಧೈರ್ಯವೊಂದಿದ್ದರೆ ಏನೇ ಬಂದರೂ ಎದುರಿಸಲು ಸಾಧ್ಯ.

ಲಿವ್ ಇನ್‌ನಲ್ಲಿ ಕಾನೂನಿನ ಹಸ್ತಕ್ಷೇಪವೇಕೆ?

ಕಾನೂನು ಕುರುಡು ಎಂದು ಸರಿಯಾಗಿಯೇ ಹೇಳಲಾಗಿದೆ. ವಾಸ್ತವದಲ್ಲಿ ಕಾನೂನಿನ ಬಗ್ಗೆ ವ್ಯಾಖ್ಯೆ ಮಾಡುತ್ತ ಪ್ರತಿಯೊಬ್ಬ ನ್ಯಾಯಾಧೀಶರೂ ತಮ್ಮದೇ ಭಾವನೆಗಳನ್ನು ನಂಬಿಕೆಗಳನ್ನು ಎತ್ತಿ ಹಿಡಿಯುತ್ತಾರೆ. ತೀರ್ಪು ಬರೆಯುವಾಗ ಅವರ ವೈಯಕ್ತಿಕ ಅಭಿಪ್ರಾಯಗಳು, ಅಪೇಕ್ಷೆಗಳು ಅದರಲ್ಲಿ ಎದ್ದು ಕಾಣುತ್ತವೆ. ರಾಜಾಸ್ಥಾನ ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಸಂಜೀವ್ ಪ್ರಕಾಶ್‌ ಶರ್ಮ ತಮ್ಮ ಒಂದು ತೀರ್ಪಿನಲ್ಲಿ ಲಿವ್‌ ಇನ್‌ನಲ್ಲಿ ಇರುವುದು ಒಂದು ರೀತಿಯ ವಿವಾಹ ಹಾಗೂ ಆ ಇಬ್ಬರಲ್ಲಿ ಯಾರೊಬ್ಬರೂ ಬೇರೆಯವರೊಂದಿಗೆ ವಿವಾಹ ಮಾಡಿಕೊಳ್ಳುವ ಹಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಯುವತಿಯೊಬ್ಬಳು ತನ್ನ ಸಂಗಾತಿಯ ಮದುವೆ ನಿಲ್ಲಿಸಲು ಅರ್ಜಿ ಸಲ್ಲಿಸಿದ್ದಳು. ಆಗ ನ್ಯಾಯಾಧೀಶರಿಂದ ಈ ತೀರ್ಪು ಹೊರಬಂತು. ನ್ಯಾಯಾಲಯಗಳು ಈ ಕುರಿತಂತೆ ಹಸ್ತಕ್ಷೇಪ ಮಾಡುತ್ತಿವೆ. ಕಾನೂನು ರೀತ್ಯ ಮದುವೆಯಾಗುವವರಿಗೆ ಜೊತೆ ಜೊತೆಗೆ ಇರುವುದು ಮದುವೆಯಲ್ಲ. ಜೊತೆ ಜೊತೆಗೆ ಮಲಗುವುದು ಕೂಡ ಕಾನೂನು ಬಾಹಿರ ಅಲ್ಲ. ಮದುವೆಯಿಂದ ಕೆಲವು ಹಕ್ಕುಗಳು ದೊರೆಯುತ್ತವೆ. ಆದರೆ ಮದುವೆಯಾಗದೆ ಜೊತೆ ಜೊತೆಗೆ ವಾಸ ಮಾಡುವುದರಿಂದ ಯಾವುದೇ ಹಕ್ಕುಗಳು ಸಿಗುವುದಿಲ್ಲ.

ಲಿವ್‌ ಇನ್‌ ಸ್ವಾತಂತ್ರ್ಯವನ್ನು ನ್ಯಾಯಾಧೀಶ ಸಂಜೀವ್ ಪ್ರಕಾಶ್‌ ಒಂದೇ ಏಟಿಗೆ ಕಿತ್ತುಕೊಂಡರು. ಲಿವ್ ಇನ್‌ನ ಅರ್ಥವೇ ಹಾಗಿದೆ, ಇಬ್ಬರಲ್ಲಿ ಒಬ್ಬರು ಕಾರಣ ಕೊಡದೆಯೇ ಬಿಟ್ಟು ಹೊರಟು ಹೋಗಬಹುದಾಗಿದೆ. ಒಬ್ಬರಿಗೆ ಇದರಿಂದ ನೋವಾಗಬಹುದು ಎನ್ನುವುದು ನಿಜ. ಆದರೆ ಈ ಬ್ರೇಕ್‌ ಅಪ್‌ಗೆ ನ್ಯಾಯಾಲಯದಲ್ಲಾಗಲಿ ಪೊಲೀಸರಲ್ಲಾಗಲಿ ಪರಿಹಾರವಿಲ್ಲ. ಆ ನೋವನ್ನು ಅವರವರೇ ಅನುಭವಿಸಬೇಕು.

ಜೀವನದ ಬಹಳಷ್ಟು ಹಂತಗಳಲ್ಲಿ ಬ್ರೇಕ್‌ಅಪ್‌ನ ನೋವುಂಟಾಗುತ್ತದೆ. ಅದು ವರ್ಷಾನುವರ್ಷಗಳ ತನಕ ತಂದೆ ತಾಯಿಗೆ  ಆಗುತ್ತದೆ. ಮಕ್ಕಳು ತಮ್ಮ ಗೂಡಿನಿಂದ ಹೊರಟು ಹೋಗುವುದು ಸೃಷ್ಟಿ ನಿಯಮವೇ ಹೌದು. ಆ ನೋವು ತಂದೆತಾಯಿಯರಿಗಷ್ಟೇ ಅಲ್ಲ, ಸೋದರಸೋದರಿಗೂ ಆಗುತ್ತದೆ. ಈ ಬ್ರೇಕ್‌ ಅಪ್‌ ಲಿವ್‌ ಇನ್‌ ಬ್ರೇಕ್‌ ಅಪ್‌ಗಿಂತ ಹೆಚ್ಚು ನೋವು ಕೊಡುತ್ತದೆ. ಕಾನೂನು ಇದರಲ್ಲಿ ಅಡ್ಡಗಾಲು ಹಾಕಲು ಆಗುತ್ತದೆಯೇ?

ಬ್ರೇಕ್‌ ಅಪ್‌ ಒಂದು ಸಾಮಾಜಿಕ ಪ್ರಕ್ರಿಯೆ. ಮದುವೆ ಆಗದವರಲ್ಲೂ ಇದು ಆಗಬಹುದು. ಮದುವೆ ಆದವರಲ್ಲೂ ಆಗಬಹುದು. ಮಾನಸಿಕವಾಗಿ ಬ್ರೇಕ್‌ ಅಪ್‌ನ ಬಳಿಕ ಜೊತೆ ಜೊತೆಗೆ ಇರುವುದು ಜೈಲಿನಲ್ಲಿ ಇರುವುದಕ್ಕೆ ಸಮಾನ. ಲಿವ್ ಇನ್‌ ಸಂಗಾತಿ ಮದುವೆಯಾಗಲು ಬಯಸುತ್ತಿರುವುದು ಸುರಕ್ಷಿತ ವಾತಾವರಣದ ಅಪೇಕ್ಷೆಯಿಂದ. ಇನ್ನೊಬ್ಬರು ಅದರಲ್ಲಿ ಅಡ್ಡಗಾಲು ಹಾಕದಿರುವುದೇ ಒಳ್ಳೆಯದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ