ಕಥೆ – ಅರುಣಾ ಪ್ರಸಾದ್‌ 

ಮನೆಯಲ್ಲಿನ ಜಗಳದ ವಾತಾವರಣ, ಬಾಳಿನಲ್ಲಿ  ಹೇಳದೆ ಬಂದ ಹೊಡೆತಗಳು, ಇವುಗಳ ನಡುವೆ ಅಮಿತಾಳಿಗೆ ಜೀವನದ ಸಂತೋಷ ಉತ್ಸಾಹಗಳಲ್ಲಿ ಪಾಲ್ಗೊಳ್ಳುವ ಅವಕಾಶವೇ ಇರಲಿಲ್ಲ. 

ಅಮಿತಾ ತನ್ನ 18ನೇ ವರ್ಷದ ಜನ್ಮದಿನವನ್ನು ಎದುರು ನೋಡುತ್ತಿದ್ದಳು. ಅವಳು ವಯಸ್ಕಳಾಗಲು ಇನ್ನೂ 2 ತಿಂಗಳು ಉಳಿದಿದ್ದವು. ಆದರೆ ಅವಳ ಜೀವನದಲ್ಲಿ ಬಿದ್ದ ಪೆಟ್ಟುಗಳು ಅವಳನ್ನು ಕಾಲಕ್ಕೆ ಮೊದಲೇ ವಯಸ್ಕಳನ್ನಾಗಿಸಿಬಿಟ್ಟಿದ್ದವು. ಅವಳ ತಾಯಿಯ ಸಾವಿನ ನಂತರ ಅಜ್ಜಿಯೇ ಅವಳನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡಿದ್ದರು. ಮೊಮ್ಮಗಳ ಮುಖದಲ್ಲೇ ಮಗಳನ್ನು ಕಾಣುತ್ತಾ, ಚಿಕ್ಕ ಹುಡುಗಿಗೆ ತಾಯಿಯ ಕೊರತೆ ಕಾಣದಂತೆ ಮಾಡಲು ಪ್ರಯತ್ನಿಸಿದ್ದರು. ತಾಯಿಯ ಸ್ಥಾನವನ್ನು ಬೇರಾರೂ ತುಂಬಲಾರರೆಂಬುದು ಅಜ್ಜಿಗೂ ಗೊತ್ತು, ಮೊಮ್ಮಗಳಿಗೂ ಗೊತ್ತು. ಆದರೂ ಅದನ್ನು ಹೊರಗೆ ತೋರಗೊಡದೆ, ಇರುವ ಸಂಬಂಧವನ್ನು ಭದ್ರಗೊಳಿಸಲು ಇಬ್ಬರೂ ಶ್ರಮಿಸುತ್ತಿದ್ದರು. ಕಾಲಚಕ್ರ ಅಮಿತಾಳನ್ನು ಒಂದು ಪಾರ್ಸೆಲ್‌ನಂತೆ ಮಾಡಿಬಿಟ್ಟಿತ್ತು. ತಾಯಿಯ ಕಾಲಾನಂತರ ಅಜ್ಜಿಯ ಬಳಿಗೆ ತಲುಪಿಸಿತ್ತು. ಇತ್ತೀಚೆಗೆ ಅಜ್ಜಿಯ ಮರಣದ ನಂತರ ಉಳಿದಿದ್ದ ಒಬ್ಬ ಚಿಕ್ಕಮ್ಮನ ಕಡೆಗೆ ಕಳುಹಿಸಿತ್ತು. ಚಿಕ್ಕಮ್ಮನ ಇಬ್ಬರು ಮಕ್ಕಳೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರದ ನಗರದ ಹಾಸ್ಟೆಲ್‌ನಲ್ಲಿ ಇರುತ್ತಿದ್ದರು. ಹೀಗಾಗಿ ಅಮಿತಾ ಬಂದುದರಿಂದ ಚಿಕ್ಕಮ್ಮನಿಗೆ ಸಹಜವಾಗಿ ಸಂತೋಷವೇ ಆಗಿತ್ತು.

ಅಮಿತಾಳ ಅನೇಕ ಗೆಳತಿಯರು ತಮ್ಮ 18ನೇ ಜನ್ಮದಿನವನ್ನು ಸಡಗರದಿಂದ ಆಚರಿಸಿದ್ದರು. ಉಳಿದವರು ಬರುವ ತಿಂಗಳುಗಳಲ್ಲಿ ಆಚರಿಸಲಿದ್ದರು. ಅದಕ್ಕಾಗಿ ಪ್ಲಾನ್‌ ಮಾಡುತ್ತಿದ್ದರು. ಆಗೆಲ್ಲ ಅಮಿತಾ ಮೌನವಾಗಿ ಕುಳಿತು ಅವರ ಮಾತುಗಳನ್ನು ಕೇಳುತ್ತಿದ್ದಳು. ಅವಳು ಕಲ್ಪನಾಲೋಕದಲ್ಲಿ ತನ್ನ ಬರ್ತ್‌ಡೇ ಸೆಲೆಬ್ರೇಶನ್‌ ಪಾರ್ಟಿಯ ಆನಂದದಲ್ಲಿ ವಿಹರಿಸುತ್ತಿದ್ದಳು, ಅಷ್ಟಲ್ಲದೆ, ಅವಳು ಆ ಕುರಿತು ಮತ್ತೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

2 ತಿಂಗಳು ಕಳೆದವು. ಅವಳ ಜನ್ಮದಿನ ಬಂದಿತು. ಅಜ್ಜಿಯ ಸಾವಿನ ನಂತರ ಜನ್ಮದಿನವನ್ನಾಚರಿಸಿ ಸಂಭ್ರಮಿಸುವ ಮನಸ್ಸು ಉಳಿದಿರಲಿಲ್ಲ. ಹೀಗಾಗಿ ಅಮಿತಾ ಬೆಳಗ್ಗೆ ಎದ್ದು ಎಂದಿನಂತೆ ಕಾಲೇಜಿಗೆ ನಡೆದಳು. ಸಾಯಂಕಾಲ ಮನೆಗೆ ಹಿಂತಿರುಗಿದಾಗ ಡೈನಿಂಗ್‌ ಟೇಬಲ್ ಮೇಲೆ ಅಮಿತಾಳ ಹೆಸರಿದ್ದ ಒಂದು ದೊಡ್ಡ ಲಕೋಟೆ ಇರುವುದು ಕಾಣಿಸಿತು. ಆದರೆ ಅದರ ಮೇಲೆ ಕಳುಹಿಸಿದ್ದವರ ಹೆಸರು ಇರಲಿಲ್ಲ ಮತ್ತು ಅಂಚೆಯ ಮುದ್ರೆಯೂ ಇರಲಿಲ್ಲ.

ಅಮಿತಾ ಆ ಲಕೋಟೆಯನ್ನು ಎತ್ತಿಕೊಂಡು ಉದ್ವೇಗದಿಂದ ಚಿಕ್ಕಮ್ಮನ ಬಳಿಗೆ ಓಡಿದಳು, “ಚಿಕ್ಕಮ್ಮ, ಇದು ಎಲ್ಲಿಂದ ಬಂತು?”

“ಅದರ ಮೇಲೆ ನಿನ್ನ ಹೆಸರೇ ಇದೆಯಲ್ಲ. ತೆರೆದು ನೋಡು.”

ಅಮಿತಾ ಆ ದೊಡ್ಡ ಲಕೋಟೆಯನ್ನು ತೆರೆದು ನೋಡಿದಾಗ ಅದರೊಳಗೆ ಬಿಳಿ ಬಣ್ಣದ ಚಿಕ್ಕ ಚಿಕ್ಕ ಕೆಲವು ಲಕೋಟೆಗಳಿರುವುದು ಕಂಡು ಬಂದಿತು. ಅವುಗಳ ಮೇಲೆ ಯಾವುದೇ ಹೆಸರಿರಲಿಲ್ಲ. ದೊಡ್ಡ ದೊಡ್ಡ ಅಂಕಿಗಳಲ್ಲಿ ಬೇರೆ ಬೇರೆ ತಾರೀಖುಗಳನ್ನು ನಮೂದಿಸಲಾಗಿತ್ತು. ಗಮನಿಸಿ ನೋಡಿದಾಗ ಅವುಗಳೆಲ್ಲ ಬೇರೆ ಬೇರೆ ವರ್ಷಗಳಲ್ಲಿ ಬೀಳುವ ಅಮಿತಾಳ ಜನ್ಮದಿನದ ತಾರೀಖುಗಳಾಗಿದ್ದವು. ಅಮಿತಾ ಗೊಂದಲದಿಂದ ಚಿಕ್ಕಮ್ಮನ ಕಡೆ ನೋಡಿದಾಗ, ತಮಗೇನೂ ತಿಳಿದಿಲ್ಲವೇನೋ ಎಂಬಂತೆ ಅವರ ತುಟಿಯ ಮೇಲೆ ರಹಸ್ಯಪೂರ್ಣವಾದ ಮುಗುಳ್ನಗೆ ಹರಡಿತ್ತು.

“ಪ್ಲೀಸ್‌ ಚಿಕ್ಕಮ್ಮ, ಇದು ಹೇಗೆ ಬಂದಿತು ಹೇಳಿ. ಇದು ಪೋಸ್ಟ್ ನಲ್ಲಿ ಬಂದಿರೋದು ಅಲ್ಲ….. ಯಾರೋ ಕೊಟ್ಟು ಹೋಗಿರಬೇಕು…. ನೀವು  ದಿನವೆಲ್ಲ ಮನೆಯಲ್ಲೇ ಇರುತ್ತೀರಿ. ಅಂದ ಮೇವೆ ಇದು ಯಾರದ್ದು ಅಂತ ನಿಮಗೆ ತಿಳಿಯಲೇಬೇಕು.”

“ಯಾರೋ ಬಂದು ಬಾಗಿಲ ಹತ್ತಿರ ಇಟ್ಟು ಹೋಗಿದ್ದರೆ ನನಗೆ ಹೇಗೆ ಗೊತ್ತಾಗುತ್ತದೆ…. ಮಧ್ಯಾಹ್ನ ಊಟವಾದ ಮೇಲೆ ನಾನು ಸ್ವಲ್ಪ ಹೊತ್ತು ಮಲಗುತ್ತೇನೆ ಅಂತ ಗೊತ್ತಿಲ್ಲವೇ….. ಆಗ ಯಾರೋ ಬಂದು ಇದನ್ನು ಇಟ್ಟು ಹೋಗಿರಬಹುದು. ನಿನ್ನ ಸ್ನೇಹಿತರು ಯಾರಾದರೂ ಕಳುಹಿಸಿರಬಹುದು ಅಂತ ಅಂದುಕೊಂಡೆ. ಸರಿ, ಈಗ ಅದರ ಮೇಲಿರುವ ಬರವಣಿಗೆಯನ್ನು ಗುರುತಿಸೋದಕ್ಕೆ ನೋಡು. ಆಗ ಯಾರು ಕಳುಹಿಸಿದ್ದಾರೆ ಅಂತ ತಿಳಿಯಬಹುದು,” ಚಿಕ್ಕಮ್ಮ ನಸುನಗುತ್ತಾ ಸವಾಲು ಹಾಕಿದರು.

ಅಮಿತಾ ಗಮನವಿಟ್ಟು ಬರವಣಿಗೆಯನ್ನು ಪರೀಕ್ಷಿಸಿದಳು. ಅದು ಪರಿಚಿತವಾದ ಬರವಣಿಗೆ ಎಂದೇ ಅನಿಸುತ್ತಿತ್ತು. ಬಹಳ ಹೊತ್ತು ಅದನ್ನೇ ನೋಡಿದ ಬಳಿಕ ಅಜ್ಜಿಯ ಕೈಬರಹವೆಂದು ಅನಿಸತೊಡಗಿತು. ಆದರೆ ಅದು ಹೇಗೆ ಸಾಧ್ಯ? ಅವರು ಈ ಪ್ರಪಂಚದಿಂದ ದೂರವಾಗಿ ತಿಂಗಳುಗಳು ಕಳೆದಿವೆ. ಈಗ ಇದ್ದಕ್ಕಿದ್ದ ಹಾಗೆ ಈ ಲಕೋಟೆ….!

“ಚಿಕ್ಕಮ್ಮ, ಇದು ಅಜ್ಜಿಯ ಕೈ ಬರಹದ ಹಾಗೆ ಕಾಣಿಸುತ್ತಿದೆ…. ಆದರೆ…”

“ಆದರೆ ಏನು? ಹಾಗೆ ಅನ್ನಿಸಿದರೆ ಅದು ಅವರದೇ ಆಗಿರಬಹುದು.”

“ಇದು ಹೇಗೆ ಸಾಧ್ಯ…..?” ಅಮಿತಾ ಕಂಪಿಸುವ ಸ್ವರದಲ್ಲಿ ಕೇಳಿದಳು.

“2 ತಿಂಗಳ ಹಿಂದೆ ಸಾಧ್ಯವಿರಲಿಲ್ಲ. ಆದರೆ ಈಗ ಇದು ಸಾಧ್ಯ. ಅಮಿತಾ, ಅಜ್ಜಿಗೆ ಎದೆನೋವು ಹೆಚ್ಚಾದಾಗ ಸಾಯುವ ಸಮಯ ಹತ್ತಿರವಾಗುತ್ತಿದೆ ಅಂತ ತಿಳಿದುಕೊಂಡು ನಿನಗೆ ಲೆಗೆಸಿ ಲೆಟರ್ಸ್‌ ಬರೆಯಲು ಪ್ರಾರಂಭಿಸಿದರು. ಆಮೇಲೆ ಇದನ್ನು ನಿನ್ನ 18ನೇ ಜನ್ಮದಿನದಂದು ನಿನಗೆ ಉಡುಗೊರೆಯಾಗಿ ಕೊಡಬೇಕು ಅಂತ ನನಗೆ ಹೇಳಿಯೂ ಇದ್ದರು. ಈಗ ಈ ಪತ್ರದ ಮೂಲಕ ಅವರು ನಿನಗೆ ಏನು ಬಳುವಳಿ ಇತ್ತಿದ್ದಾರೋ ನನಗೆ ಗೊತ್ತಿಲ್ಲ. ನೀನೇ ನೋಡು.”

ಅಮಿತಾ ಅಂದಿನ ತಾರೀಖು ಇದ್ದ ಲಕೋಟೆಯನ್ನು ತೆಗೆದುಕೊಂಡು ಮೊದಲು ಎರಡೂ ಕಣ್ಣುಗಳಿಗೆ ಒತ್ತಿಕೊಂಡಳು. ಆಮೇಲೆ  ಎಚ್ಚರಿಕೆಯಿಂದ ಬಿಡಿಸಿ ನೋಡಿದಳು. ಅದರಲ್ಲಿ ಒಂದು ಗುಲಾಬಿ ಬಣ್ಣದ ಕಾಗದವನ್ನು ಮಡಿಸಿ ಇಡಲಾಗಿತ್ತು. ಅವಳ ಬೆರಳುಗಳು ಕೆಲವು ನಿಮಿಷಗಳ ಕಾಲ ಆ ಕಾಗದನ್ನು ನೇವರಿಸಿದವು. ಅಜ್ಜಿಯ ಸ್ಪರ್ಶದ ಅನುಭವ ಮನಸ್ಸಿಗೆ ಹಿತವನ್ನು ತಂದಿತು. ಭಾವನೆಯ ಆವೇಗ ಕೊಂಚ ಕಡಿಮೆಯಾದಾಗ ಕಾಗದವನ್ನು ಓದತೊಡಗಿದಳು…..

“ಡಿಯರ್‌ ಅಮಿತಾ,

“ಜೀವನದಲ್ಲಿ ನೈತಿಕ, ಸದ್ಗುಣಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯ. ಈ ನೈತಿಕ ಸದ್ಗುಣಗಳಲ್ಲಿ ಬಹಳ ಮುಖ್ಯವಾದುದು ಕ್ಷಮೆ. ಕ್ಷಮಿಸುವುದು ಮತ್ತು ಕ್ಷಮೆ ಕೇಳುವುದು ಎರಡೂ ಮನಸ್ಸಿನ ಗಾಯಗಳಿಗೆ ಮುಲಾಮು ಹಚ್ಚುವಂತಹ ಕೆಲಸ ಮಾಡುತ್ತವೆ. ಗಾಯದ ಮೇಲೆ ಕ್ಷಮೆಯ ಲೇಪನವಾದಾಗ ವ್ಯಕ್ತಿ ಎಲ್ಲವನ್ನೂ ಮರೆತು ಜೀವನದ ನದಿಯಲ್ಲಿ ಒಂದಾಗಿ ಹರಿಯುತ್ತಾನೆ.  ಕ್ಷಮಿಸದೆ ಹತಾಶೆಯ ಹೊರೆಯಿಂದ ಬಸವಳಿದ ವ್ಯಕ್ತಿ ಜೀವನವಿಡೀ ಹಳೆಯ ಗಾಯದ ನೋವಿನಲ್ಲೇ ನಲುಗುತ್ತಾನೆ. ಮಾನಾಪಮಾನದ ಬೆಂಕಿಯಲ್ಲಿ ಬೇಯುತ್ತಾ ಬೇರೆಯವರ ತಪ್ಪಿನ ಶಿಕ್ಷೆಯನ್ನು ತಾನೇ ಅನುಭವಿಸುತ್ತಾನೆ.

“ಅಮಿತಾ, ನೀನು ಬಹಳ ಸಲ ನಿನ್ನ ತಂದೆ ತಾಯಿಯರ ಮೇಲೆ ಸಿಟ್ಟಾಗಿರುವುದನ್ನು ಕಂಡಿದ್ದೇನೆ. ಇತರ ಮಕ್ಕಳಂತೆ ನಿನ್ನ ಪೋಷಣೆ ನಡೆಯಲಿಲ್ಲ ಎಂಬ ದುಃಖ ನಿನಗಿದೆ. ನಿನ್ನ ತಂದೆ ನಿನ್ನ ಪಾಲಿಗೆ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂಬಂತಿತ್ತು. ನಿನ್ನ ತಾಯಿ ಬಾಳಿನ ಬಿರುಗಾಳಿಯನ್ನು ಎದುರಿಸಲಾಗದೆ ಜೀವ ಕಳೆದುಕೊಂಡಳು ಮತ್ತು ಮುಂದೆ ನಿನ್ನ ಗತಿ ಏನಾಗುವುದೆಂದು ಯೋಚಿಸಲೂ ಇಲ್ಲ….. ಹೀಗಾಗಿ ನಿನ್ನ ಸಿಟ್ಟು ಸಹಜವೇ. ಅದರಲ್ಲೇನೂ ತಪ್ಪಿಲ್ಲ. ಆದರೆ ಮಗು, ನೀನು ಈ ಕೋಪಾಗ್ನಿಯಲ್ಲಿ ಕುದಿಯುತ್ತಾ ನಿನ್ನ ಇಂದಿನ ಮತ್ತು ಮುಂದಿನ ಬಾಳನ್ನೇ ಹಾಳು ಮಾಡಿಕೊಳ್ಳುವೆಯಾದರೆ ಆ ತಪ್ಪು ಕೇವಲ ನಿನ್ನದೇ ಆಗಿರುತ್ತದೆ. ಇನ್ನೊಬ್ಬರು ಮಾಡಿದ ತಪ್ಪಿಗೆ ಸ್ವತಃ ಶಿಕ್ಷೆ ಅನುಭವಿಸುವುದು ಎಂತಹ ಜಾಣತನ?

“ನನ್ನ ಮಾತನ್ನು, ಸಮಾಧಾನವಾಗಿ ಕುಳಿತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು. ಈಗಲೇ ಅಲ್ಲದಿದ್ದರೂ ಕಡೆಯ ಪಕ್ಷ ಮುಂದಿನ ಜನ್ಮದಿನದವರೆಗೆ ನಿಧಾನವಾಗಿ ಯೋಚಿಸಿ ಸೂಕ್ತವಾಗಿ ನಡೆದುಕೊಳ್ಳುವ ಯತ್ನ ನಿನ್ನದಾಗಲಿ…. ನಿನ್ನ ಈ ವಿಶೇಷ ದಿನಕ್ಕಾಗಿ ನಾನು ನಿನಗೆ ನೀಡುತ್ತಿರುವ ಉಡುಗೊರೆ ಇದು.

”ಅಪಾರ ಪ್ರೀತಿಯೊಂದಿಗೆ ಅಜ್ಜಿ.”

ಕಾಲ ವೇಗವಾಗಿ ಕಳೆಯಿತು. ಅಮಿತಾ ಎಂಜಿನಿಯರಿಂಗ್‌ನ ಕಡೆಯ ವರ್ಷದಲ್ಲಿದ್ದಳು. ಕಂಪನಿಯೊಂದರಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದಳು. ಪ್ರತೀಕ್‌ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಪ ಸಮಯದಲ್ಲಿಯೇ ಅವರಿಬ್ಬರಲ್ಲಿ ಗಾಢ ಸ್ನೇಹ ಬೆಳೆಯಿತು.

ತನ್ನ 18ನೇ ಜನ್ಮದಿನದಂದು ಅಜ್ಜಿಯಿಂದ ದೊರೆತಿದ್ದ ಅಪರೂಪದ ಪತ್ರವನ್ನು ಕಳೆದ ವರ್ಷಗಳಲ್ಲಿ ಅಮಿತಾ ಬಹಳಷ್ಟು ಬಾರಿ ಓದಿದ್ದಳು. ಅದು ಸಾಮಾನ್ಯ ಪತ್ರವಾಗಿರಲಿಲ್ಲ. ಅಜ್ಜಿಯ ಭಾವನೆಗಳನ್ನು ತಳೆದು ಪತ್ರರೂಪದಲ್ಲಿ ಮೂಡಿಬಂದಿತ್ತು. ಅಜ್ಜಿ ಬರೆದಿದ್ದ ಒಂದೊಂದು ಪದ ಮನದ ಗಾಯಗಳಿಗೆ ಚಂದನದ ಲೇಪನದಂತೆ ಕೆಲಸ ಮಾಡಿದ್ದವು. ಅದೊಂದು ಪುಟ್ಟ ಪತ್ರ ಒಬ್ಬ ಕೌನ್ಸೆಲರ್‌ನೊಂದಿಗೆ ನಡೆದ 10 ಕೌನ್ಸೆಲಿಂಗ್‌ ಸೆಶನ್ಸ್ ಗೆ ಸಮಾನವಾಗಿದ್ದಿತು.

ಬಾಲ್ಯದಲ್ಲಿ ನೋವು ಉಂಟು ಮಾಡಿದ್ದ ಅಹಿತಕರ ಘಟನೆಗಳು ಈಗ ಅಮಿತಾಳ ಮನಸ್ಸಿನಿಂದ ಮರೆಯಾಗತೊಡಗಿದವು. ಅಪ್ಪ, ಅಮ್ಮನ ಹೊಂದಾಣಿಕೆಯಿಲ್ಲದ ಕಲಹಪೂರ್ಣ ವೈವಾಹಿಕ ಜೀವನ. ಅಪ್ಪನ ಬಾಳಿನಲ್ಲಿ `ಅವಳ’ ಪ್ರವೇಶ, ದಿನನಿತ್ಯ ಅನುಭವಿಸಿದ ಅನಾದರ ದುಃಖದಿಂದ ಖಿನ್ನಳಾದ ಅಮ್ಮ ನೇಣಿಗೆ ಶರಣಾಗಿ ಪ್ರಾಣ ತೆತ್ತದ್ದು…. ಅವಳು ಅದನ್ನು ನೋಡಿ ನಡುಗಿ ದುಃಸ್ವಪ್ನದ ಚಕ್ರದಲ್ಲಿ ಸಿಕ್ಕಿಕೊಂಡದ್ದು…. ಅಜ್ಜಿಯ ಪ್ರೀತಿಪೂರ್ವಕ ಅಪ್ಪುಗೆಯು ಅವಳ ನಡುಕವನ್ನು ಕಡಿಮೆ ಮಾಡಲು ಅಸಮರ್ಥವಾಗಿತ್ತು.

ಅಜ್ಜಿ ಬದುಕಿರುವವರೆಗೆ, ಅಮಿತಾಳ ಮನಸ್ಸಿನ ಕಪ್ಪು ನೆರಳನ್ನು ನಿವಾರಿಸಲು ಬಹಳ ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇರುವಾಗ ಮಾಡಲಾಗದ ಕೆಲಸವನ್ನು ಅವರು ಮರೆಯಾದ ನಂತರ ಅವರ ಪತ್ರ ಸಾಧಿಸಿತು. ಪ್ರತೀಕ್‌ ಮತ್ತು ಅಮಿತಾರ ಸ್ನೇಹ ಒಂದು ಹೆಜ್ಜೆ ಮುಂದೆ ನಡೆದಿತ್ತು. ಅಮಿತಾಳಿಗೆ ಸದಾ ಪ್ರತೀಕನದೇ ಧ್ಯಾನ. ತಮಾಷೆಯೆಂದರೆ ಅವಳ ಮನಸ್ಸು ಪ್ರತೀಕನೆಡೆಗೆ ವಾಲುತ್ತಿದ್ದಂತೆ, ಇಂಟರ್ನ್‌ಶಿಪ್‌ ಮತ್ತು ತನ್ನ ಎಂಜಿನಿಯರಿಗ್‌ ಪ್ರೊಫೆಶನ್‌ನಿಂದ ದೂರ ಸರಿಯತೊಡಗಿತು.

ಅಮಿತಾಳಿಗೆ ಟ್ರೇನಿಂಗ್‌ ಹೊರೆಯೆನಿಸಿತು. ಅವಳು ಪ್ರತೀಕ್‌ನಿಗಾಗಿ ಆಫೀಸಿಗೆ ಬರುತ್ತಿದ್ದಳು. ಕೆಲಸದಲ್ಲಿ ಆಸಕ್ತಿಯೇ ಇಲ್ಲವಾಗಿ ಲಂಚ್‌ಬ್ರೇಕ್‌ಗಾಗಿ ಕಾಯುತ್ತಿದ್ದಳು. ಅದು ಮುಗಿದ ಮೇಲೆ ಸಂಜೆ 5 ಗಂಟೆಯಾಗುವುದನ್ನೇ ನಿರೀಕ್ಷಿಸುತ್ತಿದ್ದಳು. ಕೆಲವು ಸಹೋದ್ಯೋಗಿಗಳು ಬೆನ್ನ ಹಿಂದೆ ಅವಳನ್ನು `ಕ್ಲಾಕ್‌ ವಾಚರ್‌’ ಎಂದು ಕರೆಯುತ್ತಿದ್ದರು. ಡಿಗ್ರಿ ಕೋರ್ಸ್‌ ಆರಿಸಿಕೊಳ್ಳುವಾಗ ತಪ್ಪು ಮಾಡಿದೆ ಎಂದು ಅಮಿತಾಳಿಗೆ ಈಗ ಅರಿವಾಯಿತು. ಗೆಳತಿಯರೆಲ್ಲ ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರುತ್ತಿದ್ದರೆಂದು ತಾನೂ ಸೇರಿದ್ದಳು.

ಒಂದು ದಿನ ಸಾಯಂಕಾಲ, ಅಮಿತಾ ತನ್ನ ಮನಸ್ಸಿನ ಗೊಂದಲವನ್ನು ಪ್ರತೀಕ್‌ನೊಡನೆ ಹಂಚಿಕೊಂಡಳು. ಪ್ರತೀಕ್‌ ನಿರ್ವಿಕಾರವಾಗಿ, “ನಿನಗೆ ಈ ಪ್ರೊಫೆಶನ್‌ನಲ್ಲಿ ಆಸಕ್ತಿ ಇಲ್ಲದಿದ್ದರೆ ನನಗೂ ನಿನ್ನ ಮೇಲೆ ಆಸಕ್ತಿ ಇರುವುದಿಲ್ಲ,” ಎಂದ.

“ಹಾಗೆ ಹೇಳಬೇಡಿ ಪ್ರತೀಕ್‌….. ಪ್ರೀತಿಯಲ್ಲಿ ಷರತ್ತು ಏಕೆ?”

“ಜೀವನವೆಲ್ಲ ಷರತ್ತು, ಸ್ಪರ್ಧೆಗಳಿಂದ ಕೂಡಿದೆ ಅಮಿತಾ. ದೇವರು ಸಹ ಬುದ್ಧಿಯ ಸ್ಥಾನವನ್ನು ಹೃದಯಕ್ಕಿಂತ ಮೇಲ್ಭಾಗದಲ್ಲಿ ಇರಿಸಿದ್ದಾನೆ. ನನಗಂತೂ ಎಂಜಿನಿಯರ್‌ ಬಾಳಸಂಗಾತಿಯೇ ಬೇಕು….”

ಇದನ್ನು ಕೇಳಿ ಅಮಿತಾ ಹತಾಶಳಾದಳು. ಈಗಾಗಲೇ ತನ್ನವರನ್ನೆಲ್ಲ ಕಳೆದುಕೊಂಡು ಒಂಟಿಯಾಗಿ ನಿಂತಿದ್ದಾಳೆ. ಮತ್ತೆ ಅಗಲಿಕೆಯನ್ನು ಸಹಿಸಬಲ್ಲಳೇ?

ಪ್ರತೀಕನ ಷರತ್ತನ್ನು ಒಪ್ಪಿಕೊಂಡರೆ, ಆಸಕ್ತಿಯೇ ಇಲ್ಲದ ಕೆರಿಯರ್‌ನಲ್ಲಿ ಮನಸ್ಸು ತೊಡಗಿಸಲಾದೀತೇ? ಒಂದು ಕಡೆ ಬಾವಿ, ಒಂದು ಕಡೆ ಕಂದಕ ಇರುವಂತೆ ಅವಳಿಗೆ ಭಾಸವಾಯಿತು. ಎತ್ತ ಧುಮುಕಬೇಕು ಎಂದು ಅವಳಿಗೆ ತಿಳಿಯಲಿಲ್ಲ. ಅಮಿತಾಳ  ಜನ್ಮದಿನ ಸಮೀಪಿಸುತ್ತಿತ್ತು. ಅವಳ 21ನೇ ಜನ್ಮದಿನಕ್ಕೆ ಅಜ್ಜಿಯ ಪತ್ರದ ಬಳುವಳಿ ಇದ್ದಿತು. ಅಮಿತಾ ಅದಕ್ಕಾಗಿ ಉತ್ಸುಕಳಾಗಿ ಕಾಯುತ್ತಿದ್ದಳು. ದಿನ ಕಳೆಯುವುದೇ ಕಷ್ಟವೆನಿಸಿತು…. ಅವಳ ಧೈರ್ಯ ಕುಸಿಯುತ್ತಿತ್ತು….. ಆ ದಿನ ಬೆಳಗಾಗುವವರೆಗೆ ಕಾಯಲು ಅವಳಿಂದಾಗಲಿಲ್ಲ. ಮಧ್ಯರಾತ್ರಿ ಗಡಿಯಾರ 12 ಗಂಟೆ ಹೊಡೆದ ಕೂಡಲೇ ಅವಳು ಅಜ್ಜಿಯ ಎರಡನೆಯ `ಲೆಗೆಸಿ ಲೆಟರ್‌’ನ ಲಕೋಟೆ ಬಿಡಿಸಿದಳು.

“ಡಿಯರ್‌ ಅಮಿತಾ,

“ನಿನ್ನ ಎಂಜಿನಿಯರಿಂಗ್‌ ಮುಗಿಯಲು ಬಂದಿರುತ್ತದೆ. ನೀನು ಡಿಗ್ರಿ ಪಡೆಯುವುದನ್ನು ನೋಡುವ ಆಸೆ ಇದ್ದಿತು. ಆದರೆ ಅದು ನನ್ನ ಅದೃಷ್ಟದಲ್ಲಿ ಇರಲಿಲ್ಲ…..

“ನಿನಗೆ ಅಮಿತಾ ಎನ್ನುವ ಹೆಸರನ್ನು ನಾನು ಏಕೆ ಆರಿಸಿದೆ ಎಂದು ಗೊತ್ತೆ? ಇದುವರೆಗೆ ಅದನ್ನು ನಿನಗೆ ಹೇಳುವ ಸಂದರ್ಭ ಬರಲಿಲ್ಲ. ಈಗ ನಿನ್ನ  21ನೇ  ಜನ್ಮದಿನದಂದು  ಅದನ್ನು ತಿಳಿಸುವ ಅವಕಾಶ ಸಿಕ್ಕಿದೆ. ಇದೇ ಇಂದು ನನ್ನ ಉಡುಗೊರೆ ಎಂದು ಭಾವಿಸು.

“ನೀನು ಹುಟ್ಟಿದಾಗ ನಿನಗೆಂದು ಅನೇಕ ಹೆಣ್ಣುಮಕ್ಕಳ ಹೆಸರುಗಳ ಬಗ್ಗೆ  ಯೋಚಿಸಿದೆ. ಕೋಮಲಾ, ಮಧುರಾ, ವಸುಂಧರಾ ಮೊದಲಾದ ಹೆಸರುಗಳು ಅರ್ಥದ ಪ್ರಕಾರ ಮಹಿಳೆಯರನ್ನು ದುರ್ಬಲ ಮತ್ತು ಅಂಜುಕುಳಿಯಾಗಿ ಮಾಡುತ್ತವೆ. ಆಮೆಯಂತೆ ಕವಚದೊಳಗೆ ಹುದುಗಿಕೊಳ್ಳುವಂತೆ ಮಾಡಿಬಿಡುತ್ತವೆ. ಒಬ್ಬ ಮಹಿಳೆ ಕೇವಲ ಶರೀರವಲ್ಲ, ಅದಕ್ಕಿಂತ ಹೆಚ್ಚಿನದಾಗಿರುತ್ತಾಳೆ.

“ನೀನು  ಬೆಳಗ್ಗೆ ಅರಳಿ ಸಂಜೆ ಮುದುಡುವ ಹೂವಿನಂತಾಗಬಾರದೆಂದು ನನ್ನ ಆಸೆ. ನಿನ್ನ ಆತ್ಮ ಗೌರವವನ್ನು ಕಾಪಾಡಿಕೊಳ್ಳುತ್ತಾ ಮನುಷ್ಯಳಾಗಿ ಮುನ್ನಡೆಯಬೇಕು. ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿಯೂ ಜಯಶಾಲಿಯಾಗು. ಕೊನೆಯಿಲ್ಲದ ಆತ್ಮವಿಶ್ವಾಸ ನಿನಗಿರಲಿ. ಇದಕ್ಕಾಗಿಯೇ ನಾನು ನಿನಗೆ ಅಮಿತಾ ಎನ್ನುವ ಹೆಸರನ್ನು ಆರಿಸಿದೆ. ಅಮಿತಾ ಎಂದರೆ ಮಿತಿ ಇಲ್ಲದ, ಎಣೆ ಇಲ್ಲದ ಉತ್ಸಾಹ, ಆತ್ಮವಿಶ್ವಾಸದಿಂದ ಕೂಡಿ ಕೆಲಸ ಮಾಡುವವಳು. ನಿನ್ನ ಮನಸ್ಸು ಒಪ್ಪದ ಕೆಲಸವನ್ನು ಮಾಡಲೇಬೇಡ.

“ಮಗು, ಜೀವನವೇ ಒಂದು ಸಂಘರ್ಷ. ನಿನ್ನ ತಾಯಿಯಂತೆ ನೀನು ಧೈರ್ಯ ಕಳೆದುಕೊಳ್ಳುವುದಿಲ್ಲವೆಂಬ ವಿಶ್ವಾಸ ನನಗಿದೆ. ಸೋಲುಗೆಲುವಿನ ನಡುವೆ ಒಂದು ಸಣ್ಣ ಅಂತರವಿದೆ. ನೀನು ಅಮಿತ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಯನ್ನೂ ಎದುರಿಸಿ ಗೆದ್ದು ಮುಂದೆ ನಡೆಯುತ್ತಿರು.

“ಅಪಾರ ಪ್ರೀತಿಯೊಂದಿಗೆ ಅಜ್ಜಿ.”

ಅಮಿತಾ ಪತ್ರ ಓದಿ ಮತ್ತೆ ಲಕೋಟೆಯೊಳಗೆ ಇರಿಸಿದಳು. ಹಿಂದಿನಂತೆ ರಾತ್ರಿಯ ಗಾಢ ಮೌನ ಅವಳಿಗೆ ಅಸಹನೀಯವಾಗಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಅವಳ ಮನಸ್ಸು ಬುದ್ಧಿಗಳನ್ನು ಬಿಗಿಯುತ್ತಿದ್ದ ಸರಪಳಿಯು ಈಗ ಸಡಿಲವಾದಂತೆ ಭಾಸವಾಯಿತು. ಕಳೆದ ರಾತ್ರಿ ಲೆಗೆಸಿ ಲೆಟರ್‌ ಓದಿದ ನಂತರ ತನ್ನಲ್ಲಿ ಏನೋ ಒಂದು ಬಗೆಯ ಪರಿವರ್ತನೆಯಾದಂತೆ ಅಮಿತಾಳಿಗೆ ಅನುಭವವಾಯಿತು. ಅವಳಲ್ಲಿ ಯಾವುದೇ ಬೇಸರ, ದುಃಖ  ಇರಲಿಲ್ಲ….. ತನಗೆ ಬೇಕಾದಂತೆ ಜೀವನ ನಡೆಸುವ ನಿರ್ಧಾರ ಮಾಡಿದಳು. ಆಫೀಸಿಗೆ ಹೊರಡುವ ಮೊದಲು ಹೆಚ್ಚು ಹೊತ್ತು ಶವರ್‌ ಕೆಳಗೆ ನಿಂತಳು. ಅದುವರೆಗಿನ ತಪ್ಪು ತೀರ್ಮಾನ, ಚಿಂತೆಗಳನ್ನು  ನೀರಿನಿಂದ ತೊಳೆದು ನಿರಾಳವಾಗಲು ಬಯಸುವಂತಿತ್ತು. ಆಫೀಸ್‌ ಕ್ಯಾಂಟೀನ್‌ನಲ್ಲಿ ಪ್ರತೀಕ್‌ನೊಡನೆ ಲಂಚ್‌ ತೆಗೆದುಕೊಳ್ಳುತ್ತಾ ಅಮಿತಾ ತನ್ನ ನಿರ್ಧಾರ ತಿಳಿಸಿದಳು, “ಪ್ರತೀಕ್‌, ನಮ್ಮಿಬ್ಬರ ಜೀವನದ ಹಾದಿಗಳು ವಿಪರೀತ ಭಿನ್ನವಾಗಿವೆ. ಆದ್ದರಿಂದ ನಾನು ನಿಮ್ಮಿಂದ ದೂರ ಸರಿಯುವ ತೀರ್ಮಾನ ಮಾಡಿದ್ದೇನೆ.”

“ಇದೇನು ಹುಚ್ಚುತನ? ನಿನ್ನ ದಾರಿ ಯಾವುದು…. ಹೇಳು ನೋಡೋಣ?” ಪ್ರತೀಕ್‌ ಅಚ್ಚರಿಯಿಂದ ಕೇಳಿದ.

ಅಮಿತಾ ಸಂಕೋಚವಿಲ್ಲದೆ ತನ್ನ ಮನಸ್ಸನ್ನು ತೆರೆದಿಟ್ಟಳು, “ಭಾಷೆ, ಬರವಣಿಗೆ, ಸಾಹಿತ್ಯ, ಸಂಸ್ಕೃತಿ ಇವು ನನ್ನ ಮೆಚ್ಚಿನ ವಿಷಯಗಳು ನಾಲ್ಕು ವರ್ಷಗಳ ಹಿಂದೆ ನಾನು ತಪ್ಪು ದಾರಿಯನ್ನು ಹಿಡಿದೆ. ಅದಕ್ಕಾಗಿ ನಾನು ಜೀವನವಿಡೀ ಆ ತಪ್ಪಿನೊಂದಿಗೇ ಬದುಕಬೇಕೆಂದು ಬಯಸುವುದಿಲ್ಲ ಅಥವಾ ಅದರಿಂದಾಗಿ ಮತ್ತೊಂದು ತಪ್ಪನ್ನು ಮಾಡಲು ಇಷ್ಟಪಡುವುದಿಲ್ಲ…… ನಾನು ನಿಮ್ಮನ್ನು ಮದುವೆಯಾದರೆ ಅದು ನನ್ನ ಇನ್ನೊಂದು ತಪ್ಪಾಗುತ್ತದೆ. ಏಕೆಂದರೆ ನಿಜವಾದ ಪ್ರೀತಿ ಇರುವವರು ಸಂಗಾತಿಯನ್ನು ಇರುವಂತೆಯೇ ಸ್ವೀಕರಿಸುತ್ತಾರೆ. ತಮ್ಮ ರೀತಿ ನೀತಿಯನ್ನು ಅವರ ಮೇಲೆ ಹೇರುವುದಿಲ್ಲ.”

“ನಿನಗೆಲ್ಲೋ ತಲೆ ಕೆಟ್ಟಿದೆ….. ಹೇಗೆ ಬೇಕೋ ಹಾಗೆ ಮಾಡಿಕೊ,” ಪ್ರತೀಕ್‌ ಕೋಪದಿಂದ ಊಟವನ್ನು ಅರ್ಧಕ್ಕೇ ಬಿಟ್ಟು ಹೊರಟುಹೋದ.

ಅಮಿತಾ ಶಾಂತಳಾಗಿ ಕುಳಿತು ತನ್ನ ಊಟ ಮುಂದುವರಿಸಿದಳು.

ಅಜ್ಜಿಯ ಕಾಗದಗಳು ಈಗ ಅಮಿತಾಳಿಗೆ ಕಷ್ಟಗಳನ್ನು ಎದುರಿಸುವ ಧೈರ್ಯ ತಂದುಕೊಟ್ಟಿದ್ದವು. ಮನಸ್ಸಿಗೆ ಮುದ ನೀಡದ ಕೆರಿಯರ್‌, ಹಿತವಾಗದ ಮದುವೆ ಇವುಗಳಲ್ಲಿ ಸಿಕ್ಕಿಕೊಂಡು ಬಾಳು ಗೋಳಾಗುವುದರಲ್ಲಿತ್ತು…. ಅಷ್ಟರಲ್ಲಿ ಅವಳು ಎಚ್ಚೆತ್ತುಕೊಂಡಿದ್ದಳು.

ಒಂದು ಸಾಯಂಕಾಲ ಚಿಕ್ಕಮ್ಮ ಹೇಳಿದರು, “ಅಮಿತಾ, ಅಜ್ಜಿ ನಿನಗೆ ಎಂದು ಫಿಕ್ಸೆಡ್‌ ಡಿಪಾಸಿಟ್‌ನಲ್ಲಿ ಸ್ವಲ್ಪ ಹಣ ಇರಿಸಿದ್ದಾರೆ. ನಾನು ಅದನ್ನು 2 ಸಲ ರಿನ್ಯೂ ಮಾಡಿಸಿದ್ದೇನೆ. ಇನ್ನು ಮುಂದೆ ನೀನೇ ಜವಾಬ್ದಾರಿ ತೆಗೆದುಕೊಂಡು ಅದನ್ನು ನಿನಗೆ ಬೇಕಾದ ಹಾಗೆ ಇನ್ವೆಸ್ಟ್ ಮಾಡು.”

“ನೀವು ಹೇಗೆ ಹೇಳಿದರೆ ಹಾಗೆ ಮಾಡುತ್ತೇನೆ ಚಿಕ್ಕಮ್ಮ.”ಅಮಿತಾ ಸಾಹಿತ್ಯ ಕ್ಷೇತ್ರದಲ್ಲಿ ಬೇಗನೆ ಮೇಲೇರಿದಳು. ಅವಳ ಕಥಾ ಸಂಗ್ರಹ ಮತ್ತು ಕಾದಂಬರಿಗಳು ಪ್ರಕಟವಾದವು. ಒಂದು ಕಾದಂಬರಿಯಂತೂ ವರ್ಷದ ಅತಿ ಹೆಚ್ಚು ಪ್ರತಿಗಳು ಮಾರಾಟವಾದ ಕೀರ್ತಿ ಪಡೆಯಿತು. ಮತ್ತೊಂದು ಕಾದಂಬರಿಗೆ `ಬುಕರ್‌ ಪ್ರೈಜ್‌’ ದೊರೆಯಿತು.

ಬರವಣಿಗೆಯ ಕೆಲಸದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದ ಅಮಿತಾಳಿಗೆ ತನ್ನ ಇರುವೇ ಮರೆತಂತಾಗಿತ್ತು. ಇತ್ತೀಚೆಗಷ್ಟೇ ಬರೆದು ಮುಗಿಸಿದ್ದ ಐತಿಹಾಸಿಕ ಗ್ರಂಥವೊಂದನ್ನು ಪ್ರಕಟಣೆಗೆ ಕಳುಹಿಸಿದ ನಂತರ ಅವಳು ಕೊಂಚ ನಿರಾಳಾಗಿ ಕುಳಿತಳು. ಸ್ವಲ್ಪ ವಿರಾಮ ದೊರೆತಂತಾಗಿ ತನ್ನ 31ನೇ ಜನ್ಮದಿನವನ್ನು ಪ್ರಶಾಂತ ಸ್ಥಳವೊಂದರಲ್ಲಿ ಕಳೆಯುವ ಆಲೋಚನೆ ಮಾಡಿದಳು. ಪ್ಯಾಕೇಜ್‌ ಟೂರಿಸ್ಟ್ ಮೂಲಕ ಕುಲು ಮನಾಲಿಗೆ ಹೋಗಲು ನಿರ್ಧರಿಸಿದಳು. ಈ ಕೆಲವು ದಿನಗಳು ತಾನೇ ತಾನಾಗಿ… ಗದ್ದಲ ಗಲಾಟೆಯಿಂದ ದೂರವಾಗಿ… ಜೊತೆಯಲ್ಲಿ ಅಜ್ಜಿ ತನ್ನ 31ನೇ ಜನ್ಮದಿನಕ್ಕಾಗಿ ಬರೆದಿಟ್ಟಿದ್ದ ಉಡುಗೊರೆಯ ಪತ್ರ ಮಾತ್ರ : “ಡಿಯರ್‌ ಅಮಿತಾ,

“ಜೀವನದ ಅನುಭದಿಂದ ನಾನು ಅರಿತುಕೊಂಡಿದ್ದೆಂದರೆ 2 ರೀತಿಯ ವ್ಯಕ್ತಿಗಳೊಂದಿಗೆ ಸಂಬಂಧವಿರಿಸಿಕೊಳ್ಳಬಾರದು, ಮೂರ್ಖ ಮತ್ತು ದುಷ್ಟ. ಇಂತಹ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದೂ ಬೇಡ. ಅವರೊಂದಿಗೆ ವಾದ ಮಾಡುವುದೂ ಬೇಡ. ಏಕೆಂದರೆ ಅವರೊಂದಿಗೆ ಗೆಲ್ಲಲು ಸಾಧ್ಯವಿಲ್ಲ.

“ಯಾವ ವ್ಯಕ್ತಿಯು ಮೊದಲನೆಯ ಮತ್ತು ಕೊನೆಯ ಪ್ರಾಥಮಿಕತೆ ತಾನೇ ಆಗಿರುವುದೋ ಅಂಥವನೊಂದಿಗೆ ಸಂಬಂಧವಿರಿಸಿಕೊಳ್ಳಬೇಡ. ಏಕೆಂದರೆ ಅವನಿಗೆ ಜೀವನದಲ್ಲಿ `ನಾನು’ ಎನ್ನುವುದನ್ನು ಬಿಟ್ಟು ಬೇರೊಂದಿರುವುದಿಲ್ಲ. ಅಹಂನಿಂದ ಕೂಡಿರುವ ವ್ಯಕ್ತಿಯು ತನ್ನ ಮಾತು ಮತ್ತು ಆಲೋಚನೆಗಳಿಂದ ತನ್ನ ಸುತ್ತಮುತ್ತಲಿರುವ ಜನರನ್ನು ಆಳಲು ಬಯಸುತ್ತಾನೆ. ಅಂಥವನೊಂದಿಗೆ ಸಂಬಂಧ ಬೆಳೆಸಿದರೆ ತನ್ನತನವನ್ನು ಕಳೆದುಕೊಂಡಂತಾಗುತ್ತದೆ.

“ಮದುವೆ ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟು ಭೂಮಿಯಲ್ಲಿ ನಡೆಯುತ್ತದೆ ಎಂಬ ಮಾತಿದೆ. ಇಂತಹ ನಿರಾಧಾರ ಥಿಯರಿಯು, ಹೊಂದಾಣಿಕೆಯಾಗದ ಮದುವೆಯಲ್ಲಿ ಸಿಕ್ಕಿಕೊಂಡ ವ್ಯಕ್ತಿಗೆ ಬುದ್ಧಿ ಹೇಳಲು ಉಪಯೋಗವಾಗುತ್ತದೆ. ನಿನ್ನಂತಹ ಬುದ್ಧಿಜೀವಿಯು ಇದನ್ನು ಒಪ್ಪುವುದಿಲ್ಲವೆಂದು ನನಗೆ ಗೊತ್ತು.

“ಮಗು, ನಿನ್ನ ತಾಯಿಗೆ ಅವಳು ಕಟ್ಟಿಸಿಕೊಂಡಿದ್ದ ಮಂಗಳಸೂತ್ರವೇ ಕುತ್ತಿಗೆಯ ಉರುಳಾಯಿತು. ಅಂತಹ ಬೇಡಿಯನ್ನು ಕಿತ್ತೊಗೆಯುವ ಧೈರ್ಯ ನಿನಗಿರಲಿ.

“ಮದುವೆಯೆಂದರೆ, ಅದೊಂದು ಭಾವನಾತ್ಮಕ ಸಂಬಂಧ. ಅಂತಹ ಭಾವನಾತ್ಮಕ ಬಂಧನವೇ ಇಲ್ಲವೆಂದರೆ ಅದರಲ್ಲಿ ಸ್ವಾರಸ್ಯವೇನಿರುತ್ತದೆ? ಅದು ಸಮಾಜದ ಮುಂದೆ ತೋರಿಕೆಗಾಗಿ ಇರುವ ಸಂಬಂಧವಾಗಿ ಉಳಿದಿರುತ್ತದೆ.

“ನೀನು ಇಂತಹ ಸಂಬಂಧದಲ್ಲಿ ಎಂದಾದರೂ ಸಿಲುಕಿಕೊಂಡೆಯಾದರೆ, ಆ ಅನಿಷ್ಟ ಸಂಬಂಧವನ್ನು ಕತ್ತರಿಸಿ ಹಾಕುವ ಸಾಹಸ ಮಾಡು. ಇಲ್ಲವಾದರೆ ಅದು ನಿನ್ನ ತನುಮನಗಳ ಚೈತನ್ಯವನ್ನು ಹೀರಿ, ಜೀವನವಿಡೀ ನಿನ್ನ ಮಾನಸಿಕ ಕುಸಿತಕ್ಕೆ ಎಡೆ ಮಾಡುತ್ತದೆ.

“ಅತ್ಯಂತ ಪ್ರೀತಿಯೊಂದಿಗೆ. ನಿನ್ನ ಅಜ್ಜಿ.”

ಗಿರಿಧಾಮದ ಸುಂದರ ತಾಣದಲ್ಲಿ ಮೆಲ್ಲನೆ ಹರಿಯುತ್ತಿದ್ದ ಝರಿಯೊಂದರ ದಂಡೆಯ ಮೇಲೆ ಆರಾಮವಾಗಿ ಕುಳಿತಿದ್ದ ಅಮಿತಾಳ  ಕಣ್ಣಿನಿಂದ ನೀರು ಹರಿಯತೊಡಗಿತು. ಇಷ್ಟು ವರ್ಷಗಳ ನಂತರ ಅವಳಿಗೇ ಅರಿವಿಲ್ಲದೆ ಪ್ರತೀಕನ ನೆನಪು ಅವಳ ಮನದಲ್ಲಿ ತುಂಬಿಬಂದಿತು. ಪ್ರಾಯಶಃ ಆ ರಮ್ಯ ವಾತಾವರಣದ ಪ್ರಭಾವದಿಂದ ಮನಸ್ಸು ಒಂದು ಆತ್ಮೀಯ ಸಾಮೀಪ್ಯವನ್ನು ಬಯಸಿರಬಹುದು. ಹಣ ಕೀರ್ತಿಗಳನ್ನು ಗಳಿಸಿಯೂ ಅವಳು ಒಂಟಿಯೇ?

ಅಮಿತಾ ಹೇಗೆ ಒಂಟಿಯಾಗುತ್ತಾಳೆ? ಅವಳೊಡನೆ ಸಹಸ್ರಾರು ಓದುಗರು ಪ್ರಶಂಸಕರು ಇರುವರಲ್ಲವೇ? ಹಾಗಿರುವಾಗ ಪ್ರತೀಕನ ನೆನಪೇಕೆ? ಪ್ರತೀಕನೂ ಅವಳ ಬಗ್ಗೆ ಯೋಚಿಸುತ್ತಿರಬಹುದೇ….? ಹಾಗಿದ್ದರೆ ಅವನು 10 ವರ್ಷಗಳ ಹಿಂದೆ ಅವಳನ್ನು ತಿರಸ್ಕರಿಸಿ ಹೋಗುತ್ತಿರಲಿಲ್ಲ. ಅವಳ ತಪ್ಪಾದರೂ ಏನಿತ್ತು? ಎಂಜಿನಿಯರಿಂಗ್‌ ಬಿಟ್ಟು ಅವಳು ಸಾಹಿತ್ಯ ಕ್ಷೇತ್ರವನ್ನು ಆರಿಸಿಕೊಂಡುದೇ?

ಇಂದು ಎಷ್ಟು ಜನರು ಪ್ರತೀಕನ ಬಗ್ಗೆ ತಿಳಿದಿದ್ದಾರೆ? ಅಮಿತಾಳಾದರೋ ಬರವಣಿಗೆಯ ಕೃಷಿಯಲ್ಲಿ ಪ್ರಬುದ್ಧಳಾಗಿ ಪ್ರಖ್ಯಾತಿ ಪಡೆದಿದ್ದಾಳೆ. ಅವನ ಲೆಕ್ಕದಲ್ಲಿ ಎಂಜಿನಿಯರಿಂಗ್‌ ಮಾತ್ರ ಒಂದು ಶ್ರೇಷ್ಠ ಪ್ರೊಫೆಶನ್‌…… ಅವನೊಬ್ಬ ಗೊಡ್ಡು ಪೂಜಾರಿ….. ಮಧ್ಯಮವರ್ಗದ ಮಾನಸಿಕ ಮನಸ್ಸಿನವನು….. ಅವನಿಗೆ ಎಂಜಿನಿಯರಿಂಗ್‌ ಅಲ್ಲದೆ, ಬೇರೆಯ ಪ್ರೊಫೆಶನ್‌ ತಿಳಿದೇ ಇಲ್ಲ. ಕಥೆ, ಕವನ, ಸಂಗೀತ, ಕಲೆಗಳು ಅವನ ಆಲೋಚನಾ ಪರಿಧಿಯೊಳಗೆ ಪ್ರವೇಶಿಸುವುದೇ ಇಲ್ಲ.

ಇಂತಹ ತೋರಿಕೆಯ ಹೀರೋ ಅಮಿತಾಳಿಗೆ ಬೇಕಾಗಿಯೇ ಇಲ್ಲ. ಒಂಟಿ ಬಾಳು ಎನಿಸಿದರೆ ಅದನ್ನು ನೀಗಿಸಲು ಬೇರೆ ದಾರಿಗಳಿವೆ. ಊರಿಗೆ ಹಿಂದಿರುಗಿದ ಕೂಡಲೇ ಒಂದು ಅನಾಥ ಮಗುವನ್ನು ಸಾಕಿಕೊಳ್ಳುವುದಾಗಿ ತೀರ್ಮಾನಿಸಿದಳು…. ಅದನ್ನು ದತ್ತು ಪಡೆದುಕೊಂಡು ತನ್ನ ವಾರಸುದಾರಳನ್ನಾಗಿ ಮಾಡುವುದು…. ತನ್ನ ಬರಿದಾದ ಬಾಳಿನ ಜ್ಯೋತಿಯಾಗಿಸುವುದು.

ಅದರಂತೆ ಜ್ಯೋತಿ ಬಾಳ ಬೆಳಕಾಗಿ ಅಮಿತಾಳ ಮನೆಯನ್ನು ತುಂಬಿದಳು. ಅನಾಥಾಶ್ರಮದಲ್ಲಿ ಯಾಚಕ ದೃಷ್ಟಿ ಬೀರುತ್ತಿದ್ದ 4-5  ವರ್ಷದ ಪೋಲಿಯೊಗ್ರಸ್ತ ಮಗು ಅಮಿತಾಳ ಮನಸ್ಸನ್ನು ಕಲಕಿತ್ತು. ಹೆಚ್ಚು ವಿಳಂಬ ಮಾಡದೆ ಅಗತ್ಯವಾದ ಔಪಚಾರಿಕತೆಯನ್ನೆಲ್ಲ ಮುಗಿಸಿ ಕಾನೂನುಬದ್ಧಾಗಿ ಮಗುವನ್ನು ಮನೆಗೆ ಕರೆತಂದಿದ್ದಳು.

ಅಮಿತಾ ಇಂತಹದೊಂದು ಮಗುವನ್ನು ದತ್ತು ಮಾಡಿಕೊಂಡು ಜನರ ಟೀಕೆಯನ್ನು ಎದುರಿಸಬೇಕಾಯಿತು. ಅವಳ ತಲೆ ಕೆಟ್ಟಿದೆಯೆಂದು ಕೆಲವರೆಂದರು. ಮರ್ಯಾದೆಯಾಗಿ ಮದುವೆ ಮಾಡಿಕೊಂಡಿದ್ದರೆ ತನ್ನದೇ ಮಗುವಿರುತ್ತಿತ್ತು ಎಂದು ಮತ್ತೆ ಕೆಲವರು ಟೀಕಿಸಿದರು. ಕೀರ್ತಿಗಾಗಿ ಹೀಗೆ ಮಾಡುತ್ತಿದ್ದಾಳೆ ಎಂದು ಸ್ವಲ್ಪ ಜನರು ಎಕ್ಸ್ ಪರ್ಟ್‌ ಕಾಮೆಂಟ್ಸ್ ಮಾಡಿದರು.

ವರ್ಷ ವರ್ಷಗಳ ಕಾಲದ ದೀರ್ಘ ಚಿಕಿತ್ಸೆ ಮತ್ತು ಫಿಸಿಯೊಥೆರಪಿ ಸೆಶನ್ಸ್ ಗಳ ನಂತರ ಜ್ಯೋತಿ ಸಾಕಷ್ಟು ಮಟ್ಟಿಗೆ ಆರೋಗ್ಯವಂತಳಾದಳು. ಅತ್ಯಂತ ಆತ್ಮವಿಶ್ವಾಸವುಳ್ಳ ಹುಡುಗಿ ಅವಳು. ಸುಂದರವಾದ ಚಿತ್ರಗಳನ್ನು ಬಿಡಿಸಿ, ಅವುಗಳಿಗೆ ಕಾಮನಬಿಲ್ಲಿನ ಬಣ್ಣಗಳನ್ನು ತುಂಬಿ ಜೀವ ತಳೆಯುಂತೆ ಮಾಡುತ್ತಿದ್ದಳು. ಅವಳ ಶಾರೀರಿಕ ಅಂಗಹೀನತೆಯು ಮಾನಸಿಕ ಉತ್ಸಾಹಕ್ಕೆ ತಡೆಯಾಗಿರಲಿಲ್ಲ.

ಜ್ಯೋತಿಯ ತಡೆಯಿಲ್ಲದ ಕಲಾಭ್ಯಾಸದಿಂದ ಅಮಿತಾಳ ಸಾಹಿತ್ಯ ಕೃಷಿಗೆ ಮತ್ತಷ್ಟು ಹುಮ್ಮಸ್ಸು ದೊರೆಯುತ್ತಿತ್ತು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮುಂದುವರಿಯುತ್ತಾ, ಖ್ಯಾತಿ ಗಳಿಸುತ್ತಾ, ತಮ್ಮ ತಮ್ಮ ಹೆಸರು, ಜೀವನಗಳನ್ನು ಸಾರ್ಥಕಪಡಿಸಿಕೊಂಡರು.

ಅಂದು ಅಮಿತಾ ತನ್ನ ಅಜ್ಜಿಯ ಕಡೆಯ `ಬಳುವಳಿ ಪತ್ರ’ವನ್ನು ತೆರೆದು ತನ್ನ 50ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಳು.

“ಡಿಯರ್‌ ಅಮಿತಾ,

“ನೀನು ಇದುವರೆಗೆ 50 ವಸಂತ ಕಾಲಗಳನ್ನು ಕಂಡಿದ್ದೀಯ. ನಿನ್ನ ತಾಯಿಗೆ ಇಷ್ಟು ಕಾಲ ಬದುಕುವ ಅವಕಾಶ ದೊರೆಯಲಿಲ್ಲ. ಆದ್ದರಿಂದ ನಿನಗೆ ಅಭಿನಂದನೆಗಳು…. ಮಗು, ನಿನಗೆ ಕಾಲನ ಕೃಪೆಯಿರಲಿ.

“ನಿನ್ನ ಮನಸ್ಸಿನಲ್ಲೀಗ ದೇವರು, ಆಧ್ಯಾತ್ಮದ ಯೋಚನೆ ಸುಳಿಯುತ್ತಿರಬಹುದು. ಇಂತಹ ಆಲೋಚನೆಯು ಕೆಲವು ಸಲ ತಾನಾಗಿ ಬರುತ್ತದೆ. ಮತ್ತೆ ಕೆಲವು ಸಲ ಇತರರ ಮೂಲಕ ಬರುತ್ತದೆ. ಧರ್ಮವೆನ್ನುವುದು ವೈಯಕ್ತಿಕ ವಿಚಾರವಾದರೂ ಅದನ್ನು ಆಚರಿಸದ ಮಹಿಳೆಯನ್ನು ಸಂಸ್ಕಾರವಿಲ್ಲದವಳೆಂದು ಭಾವಿಸಲಾಗುತ್ತದೆ.

“ನೀನು ಇದಕ್ಕೆಲ್ಲ ಬೆಲೆ ಕೊಡಬೇಡ. ನಾನು ಜೀವನದಲ್ಲಿ ಅನೇಕ ಸಾಧು, ಮುಲ್ಲಾ, ಪಾದ್ರಿಗಳ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ. ಅವರಲ್ಲಿ ಅನೇಕರು ಧರ್ಮದ ಹೆಸರಿನಲ್ಲಿ ನೀಚ ಕೃತ್ಯಗಳನ್ನು ಮಾಡುತ್ತಾ, ಇತರರ ಬಲದ ಮೇಲೆ ಆರಾಮ ಜೀವನ ನಡೆಸುತ್ತಿರುತ್ತಾರೆ.

“ಹೆಚ್ಚು ದೂರೇಕೆ, ನಿನ್ನ ಅಜ್ಜ ಸಹ ಇಂತಹ ಆಷಾಢಭೂತಿ ಜೀವನ ನಡೆಸಿದವರೇ. ಅವರು ಜೀವನವನ್ನೆಲ್ಲ ಪೂಜೆ, ಮಂತ್ರ, ಹೋಮ ಎಂದು ಕಳೆದರು. ಆದರೆ ಅದರ ಒಂದು ಅಂಶವನ್ನೂ ಜೀವನದಲ್ಲಿ ಪಾಲಿಸಲಿಲ್ಲ. ಬೋಧಿಸಿದಂತೆ ನಡೆಯದಿದ್ದರೆ, ಇದೆಂತಹ ಧರ್ಮಾಚರಣೆ? ನೀನೇ ಹೇಳು.

“ಮಗು, ನಾನು ಹೇಳುವುದೆಂದರೆ ಕೇವಲ ಪೂಜಾಕಾರ್ಯದಿಂದ  ಮನಃಶುದ್ಧಿಯಾಗುವುದಿಲ್ಲ. ಮನಸ್ಸು ಶುದ್ಧಿಯಾಗುವುದು ಒಳ್ಳೆಯ ಕೆಲಸಗಳಿಂದ, ದುರ್ಬಲರಿಗೆ ನೆರವಾಗುವುದರಿಂದ, ಹೀಗೆ ಮಾಡುವುದು ನಿನ್ನದೇ ಜವಾಬ್ದಾರಿಯಾಗಿದೆ.

“ಡಿಯರ್‌ ಅಮಿತಾ, ಈ ಶರೀರ ನಶ್ವರ. ಪ್ರಾಣ ಇರುವವರೆಗಷ್ಟೇ ಅದಕ್ಕೊಂದು ಬೆಲೆ. ಪ್ರಾಣ ಹೋದ ನಂತರ ಸುಂದರವಾದ ಶರೀರ ಮೃತದೇಹ ಎನ್ನಿಸಿಕೊಳ್ಳುತ್ತದೆ. ಬಂಧುಗಳೂ ಸಹ ಅದನ್ನು ಮುಟ್ಟಲು ಹಿಂಜರಿಯುತ್ತಾರೆ. ಆದ್ದರಿಂದ ಇರುವಾಗಲೇ ನಾವು ಒಂದಷ್ಟು ಮಾನವೀಯ ಕಾರ್ಯಗಳನ್ನು ಮಾಡಿ ಮುಗಿಸಬೇಕು.

“ಮಗು, ನನ್ನ ಮಾತಿನ ಅರ್ಥವೆಂದರೆ, ನನ್ನಂತೆ ನೀನೂ ಸಹ ಮರಣದ ನಂತರ ಅಂಗದಾನ ಮಾಡುವ ಔಪಚಾರಿಕತೆಯನ್ನು ಪೂರ್ಣಗೊಳಿಸು. ನಿನ್ನ 50ನೇ ಜನ್ಮದಿನವನ್ನು ಆಚರಿಸಲು ಇದಕ್ಕಿಂತ ಉತ್ತಮ ವಿಧಾನವಿರಲಾರದು ಎಂದು ನನ್ನ ಭಾವನೆ.

“ಇಂದಿಗೆ ಇಷ್ಟು ಸಾಕು…. ಇನ್ನು ಹೆಚ್ಚು ಬರೆಯಲು ಆಗುತ್ತಿಲ್ಲ. ಆರೋಗ್ಯ ಕ್ಷೀಣಿಸುತ್ತಿದೆ. ಪ್ರಾಣ ಹೋಗಬಹುದು ಎನ್ನಿಸುತ್ತಿದೆ. ಬಹುಶಃ ಇದು ನಿನಗೆ ನನ್ನ ಕಡೆಯ ಪತ್ರವಾಗಲಿದೆ.

“ಮಗು ಸದಾ ಸುಖಿಯಾಗಿರು.

“ಅಜ್ಜಿ.”

ಅಮಿತಾ ಪತ್ರವನ್ನು ಎದೆಗೊತ್ತಿಕೊಂಡು, ನಂತರ ಅಜ್ಜಿಯ ಉಳಿದ ಪತ್ರಗಳನ್ನಿರಿಸಿದ್ದ ಹೊಂಬಣ್ಣದ ಕಾರ್ಡ್‌ಬೋರ್ಡ್‌ ಬಾಕ್ಸ್ ನಲ್ಲಿಟ್ಟಳು. ಈ ಎಲ್ಲ ಪತ್ರಗಳನ್ನು ಎತ್ತಿಟ್ಟು ಜ್ಯೋತಿಯ ಹದಿನೆಂಟನೆಯ ಜನ್ಮದಿನದಂದು ಉಡುಗೊರೆಯಾಗಿ ಕೊಡುವುದಾಗಿ ತೀರ್ಮಾನಿಸಿದಳು.

ಅಮಿತಾ ಸಾಹಿತ್ಯ ಪ್ರಪಂಚದಲ್ಲಿ ಉತ್ತುಂಗ ಶಿಖರಕ್ಕೇರಿದ್ದಳು. ಅವಳ ಕಾದಂಬರಿಗಳು ದೂರದರ್ಶನದಲ್ಲಿ ಧಾರಾವಾಹಿಗಳಾಗಿ ಪ್ರಸಾರವಾಗುತ್ತಿದ್ದವು. ರೇಡಿಯೊ, ಟೆಲಿವಿಷನ್‌ನಲ್ಲಿ ಅವಳ ಅನೇಕ ಇಂಟರ್‌ವ್ಯೂಗಳು ನಡೆದಿದ್ದವು. ಅವಳ ಡ್ರಾಯಿಂಗ್‌ ರೂಮ್ ಶೋಕೇಸ್‌ನಲ್ಲಿ ಅವಳಿಗೆ ದೊರೆತಿದ್ದ ಟ್ರೋಫಿ ಮತ್ತು ಅವಾರ್ಡ್‌ಗಳು ತುಂಬಿದ್ದವು.

ಇಷ್ಟೆಲ್ಲ ಮನ್ನಣೆಗೆ ಪಾತ್ರಳಾಗಿದ್ದ ಅಮಿತಾಳನ್ನು, ನಿಮ್ಮ ಅಚ್ಚುಮೆಚ್ಚಿನ ಲೇಖನ ಅಥವಾ ಪುಸ್ತಕ ಯಾವುದು? ಎಂದು ಪ್ರಶ್ನಿಸಿದರೆ ಅವಳದು ಯಾವಾಗಲೂ ಒಂದೇ ಉತ್ತರ, “ನನ್ನ ಅಜ್ಜಿಯ `ಉಡುಗೊರೆ’ಯ ಪತ್ರವೇ ನನ್ನ ಮೆಚ್ಚಿನ ಲೇಖನ. ನನ್ನ ಮಗಳಿಗೂ ನಾನು ಇಂತಹದೊಂದು ಬಳುವಳಿಯನ್ನು ಬಿಟ್ಟು ಹೋಗಬೇಕೆಂಬುದು ನನ್ನ ಮಹದಾಸೆ.”

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ