ಮಗು ಶಾಲೆಗೆ ಹೋಗತೊಡಗಿದಾಗಿನಿಂದಲೇ ಮಕ್ಕಳಿಂದ ಸಣ್ಣಪುಟ್ಟ ಸಹಾಯ ಪಡೆಯಬಹುದು. ಓದುಬರಹ, ಆಟೋಟ, ಪಠ್ಯೇತರ ಚಟುವಟಿಕೆಯ ತರಬೇತಿಯೊಂದಿಗೆ ಮಕ್ಕಳಿಗೆ ಅಡುಗೆಮನೆಯಲ್ಲಿ ಸಣ್ಣಪುಟ್ಟ ಸಹಾಯ ಮಾಡುವುದಕ್ಕೂ ಕಲಿಸಬೇಕು. ಈ ಮೂಲಕ ಅವರು ಸಣ್ಣಪುಟ್ಟ ಅಡುಗೆ ಕಲಿಯುವುದು ಮಾತ್ರವಲ್ಲ, ಇದರಿಂದ ಇನ್ನೂ ಹೆಚ್ಚಿನ ಲಾಭಗಳಿವೆ :
ಸಹಾಯಕ ಗುಣ ಕಲಿಸಿರಿ : ನೀವು ಅಡುಗೆ ಮಾಡುವಾಗ ಮಕ್ಕಳು ರಜೆ ನೆಪದಲ್ಲಿ ಮನೆಯಲ್ಲೇ ಇದ್ದರೆ, ಅವರಿಗೆ ಸಣ್ಣಪುಟ್ಟ ಸಹಾಯಗಳಿಂದ ಕೆಲಸ ಕಲಿಸಿರಿ. ಫ್ರಿಜ್‌ನಿಂದ ಸಾಮಗ್ರಿ ತೆಗೆದು ಹೊರಗಿಡುವುದು, ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು, ತರಕಾರಿ ಬಿಡಿಸಿಕೊಡುವುದು ಇತ್ಯಾದಿ. ಮಕ್ಕಳಿಗೆ ಇಂಥ ಸಣ್ಣಪುಟ್ಟ ಕೆಲಸ ಕಲಿಯಲು, ನೆರವು ನೀಡಲು ಬಹಳ ಆಸಕ್ತಿ ಇರುತ್ತದೆ. ಹೀಗೆ ಮಾಡುತ್ತಾ ಅವರು ನೀವು ಅಡುಗೆ ಮಾಡುವುದನ್ನು ಹತ್ತಿರದಿಂದ ಗಮನಿಸಿದರೆ, ಇದರ ನೆರವಿನಿಂದ ಹಲವು ಬಗೆಯ ಪ್ರಶ್ನೆ ಕೇಳಿ ತಿಳಿದುಕೊಳ್ಳುತ್ತಾರೆ.
ನಿಧಾನವಾಗಿ ಒಂದೊಂದೇ ಕಲಿಸಿ : ಸಾಮಾನ್ಯವಾಗಿ ಪೇರೆಂಟ್ಸ್ ಯೋಚಿಸುವುದೆಂದರೆ, ಮಕ್ಕಳು ತರಕಾರಿ ಬೇಡ ಅಂತಾರೆ, ಹಣ್ಣು ತಿನ್ನುವುದೇ ಇಲ್ಲ. ಹೀಗಾಗಲು ಕಾರಣ ಎಂದರೆ ಆಹಾರ ಸಾಮಗ್ರಿಗಳ ಬಗ್ಗೆ ಅವಕ್ಕೆ ಏನೂ ಗೊತ್ತಿರುವುದಿಲ್ಲ ಅಥವಾ ಮೊದಲ ಬಾರಿ ನೋಡುತ್ತಿರುತ್ತವೆ. ಹೀಗಾಗಿ ನೀವು ಅಡುಗೆ ಮಾಡುವಾಗೆಲ್ಲ ಮಕ್ಕಳನ್ನು ಕರೆದು ಊಟ ತಿಂಡಿಯ ಬಗ್ಗೆ ವಿಚಾರಿಸುತ್ತಿದ್ದರೆ ಇದೇನು, ಅದೇನು ಎಂದು ಕೇಳುತ್ತಾ, ನಿಧಾನವಾಗಿ ಅವನ್ನು ತಿನ್ನಬೇಕು ಎಂಬ ಆಸೆಯೂ ಮೂಡುತ್ತದೆ.
ಹೆಲ್ದಿ ಈಟಿಂಗ್ ಕಲಿಸಿರಿ : ಅಡುಗೆ ಮಾಡುವಾಗ ಮಗುವನ್ನು ಕರೆದು, ಅಡುಗೆಗೆ ಬಳಸುವ ಸಾಮಗ್ರಿಗಳ ಆರೋಗ್ಯಕರ ಲಾಭದ ಬಗ್ಗೆ ತಿಳಿಸಿಕೊಡಿ. ಆಗ ಮಗು ಆಸಕ್ತಿ ತಳೆದು ತಾನೇ ಹಣ್ಣು, ತರಕಾರಿ, ಉಳಿದ ಆಹಾರ ಸಾಮಗ್ರಿಗಳ ಬಗ್ಗೆ ನಿಮ್ಮನ್ನು ಕೇಳುತ್ತಾ ತನಗೆ ಬೇಕು ಎನ್ನುತ್ತಾನೆ.
ಬಾಂಧವ್ಯ ಬೆಳೆಸಿರಿ : ಮಕ್ಕಳೊಂದಿಗೆ ವಾತ್ಸಲ್ಯಕರ ಬಾಂಧವ್ಯ ಬೆಳೆಸಿಕೊಳ್ಳಲು ಹಾಗೂ ಅವರ ಬಯಕೆಗಳ ಬಗ್ಗೆ ತಿಳಿಯಲು ಕಿಚನ್‌ಗಿಂತ ಬೇರೆ ಉತ್ತಮ ಜಾಗ ಯಾವುದು? ಮಕ್ಕಳು ತುಸು ಚಂಚಲ ಆಗಿರುತ್ತಾರೆ. ಅವರನ್ನು ನಿಮ್ಮೆದುರು ಕುಳ್ಳಿರಿಸಿಕೊಂಡು ನಿಮ್ಮ ಮಾತುಗಳನ್ನು ತಿಳಿಸಿಹೇಳಿ, ಅದರ ಸಂದೇಹಗಳನ್ನು ನಿವಾರಿಸಿ. ಇದು ಅಷ್ಟು ಸುಲಭದ ಕೆಲಸವಲ್ಲ, ಆದರೆ ನಿಮ್ಮ ಪ್ರಯತ್ನ ಕೈಬಿಡಬೇಡಿ. ಹೀಗಾಗಿ ಕಿಚನ್‌ನಲ್ಲಿ ನಡೆಯುವ ವಿಭಿನ್ನ ಚಟುವಟಿಕೆಗಳು ಮಗುವಿಗೆ ಆಕರ್ಷಕ ಎನಿಸುತ್ತದೆ. ಹೀಗಾಗಿ ಮಗು ಅಲ್ಲಿ ಕ್ರಮೇಣ ಹೆಚ್ಚು ಸಮಯ ಕಳೆಯ ಬಯಸುತ್ತಾನೆ. ಈ ರೀತಿ ಮಕ್ಕಳ ಜೊತೆ ಹರಟುತ್ತಾ ಅವರೊಂದಿಗಿನ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ.
ಮಕ್ಕಳನ್ನು ಸೆಲ್ಫ್ ಡಿಪೆಂಡ್ ಆಗುವಂತೆ ಮಾಡಿ : ನಿಮ್ಮ ಮಕ್ಕಳು ಮುಂದೆ ಕೆರಿಯರ್ ರೂಪಿಸಿಕೊಳ್ಳುವುದಕ್ಕಾಗಿ ಬೇರೆ ಊರಿನ ಹಾಸ್ಟೆಲ್, ಪಿಜಿ ಸೇರಿ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅವರು ಟೀನೇಜ್‌ನಲ್ಲಿ ಇವೆಲ್ಲವನ್ನೂ ತಾವೇ ನಿಭಾಯಿಸಬೇಕಾಗುತ್ತದೆ. ಹೀಗಾದಾಗ ನೀವು ಅಡುಗೆ ಮಾಡುವ ತರಬೇತಿ ನೀಡಿರುವುದರಿಂದ ಅವರಿಗೆ ಪಿಜಿ ಲೈಫ್ ಕಷ್ಟ ಆಗುವುದಿಲ್ಲ. ಅವರು ತಮ್ಮಿಷ್ಟದ, ಆರೋಗ್ಯಕರ ಆಹಾರಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸದೆ, ಸ್ವಾವಲಂಬಿಗಳಾಗಿ ತಮ್ಮ ಕಾರ್ಯ ತಾವೇ ಮಾಡಿಕೊಳ್ಳಬಹುದು. ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಅವರಿಗಿಷ್ಟವಾಗುವಂಥ ಸುಲಭದ ಡಿಶೆಸ್ ತಯಾರಿಸಲು ಕಲಿಸಿ. ಆಗ ಅವರು `ಹೆಲ್ದಿ ಈಟಿಂಗ್ ಹ್ಯಾಪಿ ಲಿವಿಂಗ್’ ಗುಣ ಬೆಳೆಸಿಕೊಳ್ಳುತ್ತಾರೆ.
– ಪ್ರಮೀಳಾ