ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಅಭ್ಯಾಸಗಳ ಬಗ್ಗೆ ತಿಳಿಸಿ ಹೇಳಬೇಕು. ಸ್ವಚ್ಛವಾಗಿರುವುದರಿಂದ ಅವರು ಆರೋಗ್ಯದಿಂದಿರುವುದಷ್ಟೇ ಅಲ್ಲ, ಆಕರ್ಷಕವಾಗಿ ಕಾಣುತ್ತಾರೆ. ಜೊತೆಗೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಬಾಲ್ಯದ ಅಭ್ಯಾಸಗಳು ಹಾಗೆಯೇ ಮುಂದುವರಿಯುತ್ತವೆ. ಹೀಗಾಗಿ ಅವರಿಗೆ ಬಾಲ್ಯದಿಂದಲೇ ನೈರ್ಮಲ್ಯದಿಂದಿರಲು ಕಲಿಸಿ.

ಬಾಯಿಯ ಸ್ವಚ್ಛತೆ

ಇದು ಪ್ರತಿಯೊಂದು ಮಗುವಿನ ದಿನಚರಿಯ ಒಂದು ಭಾಗವಾಗಬೇಕು. ಹೀಗೆ ಮಾಡುವುದರಿಂದ ಹಲ್ಲು ಹುಳುಕಾಗುವ, ಬಾಯಿ ದುರ್ವಾಸನೆ ಹಾಗೂ ಹೃದಯದ ಕಾಯಿಲೆಗಳಿಂದ ದೂರ ಇರಲು ಸಹಾಯವಾಗುತ್ತದೆ.

ಏನು ಮಾಡಬೇಕು?

ದಿನಕ್ಕೆ ಎರಡು ಸಲ ಹಲ್ಲುಜ್ಜಲು ತಿಳಿಸಿ. ಅದರಲ್ಲೂ ವಿಶೇಷವಾಗಿ ಆಹಾರ ಸೇವನೆಯ ಬಳಿಕ ಬಾಯಿ ಸ್ವಚ್ಛತೆ ಅತ್ಯಗತ್ಯ.

ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬ್ರಶ್‌ ಮಾಡಲು ಹಾಗೂ ಬಾಯಿ ಮುಕ್ಕಳಿಸುವ ಅಭ್ಯಾಸ ರೂಢಿಸಿ.

ಟಂಗ್‌ ಕ್ಲೀನರ್‌ನಿಂದ ನಾಲಿಗೆ ಸ್ವಚ್ಛಗೊಳಿಸುವುದನ್ನು ಕಲಿಸಿ.

ಮಗುವಿನ ಹಲ್ಲುಗಳ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿ.

ದೈಹಿಕ ನೈರ್ಮಲ್ಯ

ಮಗುವಿಗೆ ನಿತ್ಯ ಸ್ನಾನ ಮಾಡುವ ಅಭ್ಯಾಸ ರೂಢಿಸಿ. ದಿನ ಸ್ನಾನ ಮಾಡುವುದರಿಂದ ದೇಹವಂತೂ ಸ್ವಚ್ಛವಿರುತ್ತದೆ. ಜೊತೆಗೆ ಮೃತ ತ್ವಚೆಯೂ ಹೊರಟುಹೋಗುತ್ತದೆ.

ಕೈ ಕಾಲುಗಳು, ಉಗುರುಗಳು, ಕಂಕುಳ ಭಾಗ, ಹೊಕ್ಕಳು ಭಾಗ, ಮೊಣಕಾಲು ಮುಂತಾದವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

ಅಂಡರ್‌ವೇರ್‌ನ್ನು ದಿನ ಬದಲಿಸಿ ಹಾಗೂ ಸ್ನಾನದ ಬಳಿಕ ಸ್ವಚ್ಛ ಬಟ್ಟೆ ಧರಿಸುವಂತೆ ಮಾಡಿ.

ಮಕ್ಕಳಿಗೆ ವಾರದಲ್ಲಿ 2 ಸಲ ಕೂದಲನ್ನು ಶ್ಯಾಂಪೂವಿನಿಂದ ಸ್ವಚ್ಛಗೊಳಿಸುವ ಅಭ್ಯಾಸ ರೂಢಿಸಿ. ಇದರಿಂದ ಕೂದಲಿನ ಜಿಡ್ಡುತನ ಹಾಗೂ ಕೊಳೆ ನಿವಾರಣೆಯಾಗುತ್ತದೆ ಎಂಬುದು ಅವರಿಗೆ ಗೊತ್ತಾಗಲಿ.

ಕೈಗಳ ನೈರ್ಮಲ್ಯ

ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ರೂಢಿಸಿ. ಕೈಗಳನ್ನು ತೊಳೆಯುವುದರಿಂದ ನಾವು ರೋಗಾಣುಗಳಿಂದ ದೂರ ಇರಬಹುದು, ಅನಾರೋಗ್ಯ ಪೀಡಿತರಾಗುವುದನ್ನು ತಪ್ಪಿಸಬಹುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ.

ಊಟ ಮಾಡಿದ ಬಳಿಕ, ಕೆಮ್ಮಿದ ಬಳಿಕ, ಸೀನಿದ ಬಳಿಕ, ಆಟ ಆಡಿದ ಬಳಿಕ, ಮೂತ್ರ ವಿಸರ್ಜನೆ ಬಳಿಕ ತಕ್ಷಣವೇ ಕೈಯನ್ನು  ಚೆನ್ನಾಗಿ ಸ್ವಚ್ಛಗೊಳಿಸಲು ತಿಳಿಸಿ.

ಕೈ ತೊಳೆಯಲು ಸೋಪ್‌, ಹ್ಯಾಂಡ್‌ವಾಶ್‌ ಹಾಗೂ ನೀರನ್ನು ಸರಿಯಾಗಿ ಬಳಸಲು ಕಲಿಸಿ

ಕಾಲುಗಳ ನೈರ್ಮಲ್ಯ

ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಅತ್ಯಗತ್ಯ ಎಂಬುದು ಮಕ್ಕಳಿಗೆ ಗೊತ್ತಿರಬೇಕು. ಕೊಳಕಾದ ಕಾಲುಗಳಿಂದ ಕೇವಲ ದುರ್ಗಂಧ ಅಷ್ಟೇ ಪಸರಿಸದು, ಕೆಲವು ಸಾಂಕ್ರಾಮಿಕ ರೋಗಗಳು ಕೂಡ ಬರುತ್ತವೆ.

ಮಕ್ಕಳಿಗೆ ದಿನಕ್ಕೆರಡು ಸಲ ಕಾಲುಗಳನ್ನು ಸ್ವಚ್ಛಗೊಳಿಸಲು ರೂಢಿ ಮಾಡಿಸಿ. ಬೆರಳುಗಳ ಸಂಧಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒರೆಸಬೇಕು. ಅಲ್ಲಿ ಒದ್ದೆ ಹಾಗೆಯೇ ಇದ್ದರೆ ಫಂಗಸ್‌ ಉಂಟಾಗುವ ಸಾಧ್ಯತೆ ಇರುತ್ತದೆ.

ಟಾಯ್ಲೆಟ್‌ ಹೈಜೀನ್‌

ಮಕ್ಕಳಿಗೆ ಶೌಚದ ಬಳಿಕ ಸರಿಯಾಗಿ ಸ್ವಚ್ಛಗೊಳಿಸಲು  ಹೇಳಬೇಕು.

ಟಾಯ್ಲೆಟ್‌ಗೆ ಹೋಗಿ ಬಂದ ಬಳಿಕ ಫ್ಲಶ್‌ ಮಾಡುವ ಬಗೆಗೂ ಮಕ್ಕಳಿಗೆ ತಿಳಿಸಿ ಹೇಳಿ.

ಟಾಯ್ಲೆಟ್‌ನಿಂದ ಹೊರ ಬಂದ ಬಳಿಕ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲು ತಿಳಿಸಿ.

ಉಗುರುಗಳ ಸ್ವಚ್ಛತೆ

ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮಕ್ಕಳಿಗೆ ಕಲಿಸಿ. ಕೊಳಕಾಗಿರುವ ಉಗುರುಗಳಿಂದ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಅದರಿಂದ ನಾವು ರೋಗಪೀಡಿತರಾಗುತ್ತೇವೆ.

ಮಕ್ಕಳಿಗೆ ಉಗುರು ಕಚ್ಚುವ ಅಭ್ಯಾಸ ಇದ್ದರೆ ಅದನ್ನು ಬಿಡಿಸಲು ಪ್ರಯತ್ನಿಸಿ. ಉಗುರುಗಳಲ್ಲಿರುವ ಕೊಳೆ ಹಾಗೂ ರೋಗಾಣುಗಳು ಹೊಟ್ಟೆಗೆ ಪ್ರವೇಶಿಸಿ ನಮ್ಮನ್ನು ರೋಗಪೀಡಿತರಾಗಿಸುತ್ತವೆ ಎಂಬುದನ್ನು ತಿಳಿಹೇಳಿ.

ನಿದ್ರೆಯ ಅಭ್ಯಾಸ

ಮಕ್ಕಳಿಗೆ 8-10 ಗಂಟೆ ಗಾಢ ನಿದ್ರೆ ಮಾಡಿಸುವ ಅಭ್ಯಾಸ ರೂಢಿಸಿ. ಚೆನ್ನಾಗಿ ನಿದ್ರೆ ಮಾಡಿದರೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸರಿಯಾಗಿ ಆಗುತ್ತದೆ ಎಂಬುದು ಅವರಿಗೆ ಗೊತ್ತಾಗಬೇಕು.

ರಾತ್ರಿ ನೈಟ್ ಸೂಟ್‌ ಧರಿಸಿ ಮಲಗುವ ಅಭ್ಯಾಸ ರೂಢಿಸಿ. ಆರಾಮದಾಯಕ ಬಟ್ಟೆಯಲ್ಲಿ ಗಾಢ ನಿದ್ರೆ ಮಾಡಲು ಸಹಾಯಕವಾಗುತ್ತದೆ.

ಮಕ್ಕಳಿಗೆ ತಮ್ಮ ಹಾಸಿಗೆ ಹೊದಿಕೆಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಹೇಳಿ. ಹೊದಿಕೆಯನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸಿ ಕೊಡಿ.

ರಾತ್ರಿ ಬ್ರಶ್‌ ಮಾಡಿದ ಬಳಿಕವೇ ಮಲಗಬೇಕು ಎಂಬ ನಿಯಮ ರೂಢಿಸಿ.

ಮಲಗಲು ಹೋಗುವ ಮುನ್ನ ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ರೂಢಿಸಿ. ಅಪರಾತ್ರಿ ಎದ್ದರೆ ಅವರ ನಿದ್ರೆಗೆ ಭಂಗ ಉಂಟಾಗುವ ಸಾಧ್ಯತೆ ಇರುತ್ತದೆ.

ಆಹಾರ ನೈರ್ಮಲ್ಯ

ಕೈ ಹಾಗೂ ಬಾಯಿಯನ್ನು ಸ್ವಚ್ಛಗೊಳಿಸಲು ಸ್ವಚ್ಛ ಬಟ್ಟೆಯನ್ನು ಬಳಸಿ.

ಮಕ್ಕಳು ಹಣ್ಣುಗಳನ್ನು ತಿನ್ನಲು ಆತುರ ತೋರಿಸುತ್ತಾರೆ. ಅವನ್ನು ಚೆನ್ನಾಗಿ ಸ್ವಚ್ಛಗೊಳಿಸಿದ ಬಳಿಕವೇ ತಿನ್ನಿಸಿ.

ಮಕ್ಕಳು ತಮ್ಮ ಚಪ್ಪಲಿಶೂಗಳನ್ನು ಎಲ್ಲೆಲ್ಲೋ ಇಟ್ಟುಬಿಡುತ್ತಾರೆ. ಅವನ್ನು ನಿಶ್ಚಿತ ಜಾಗದಲ್ಲಿ ಇಡಲು ಅವರಿಗೆ ರೂಢಿ ಮಾಡಿಸಿ.

ಕಾಗದದ ಚೂರು, ವ್ಯರ್ಥ ವಸ್ತುಗಳನ್ನು ಕಸದ ಬುಟ್ಟಿಯಲ್ಲಿ ಹಾಕಲು ತಿಳಿಸಿ.

ತಮ್ಮ ಬಟ್ಟೆಗಳನ್ನು ಮಡಚಿ ಕಪಾಟಿನಲ್ಲಿ ಇಡುವ ಅಭ್ಯಾಸ ಮಾಡಿಸಿ.

– ಎಸ್‌. ಸುಪ್ರಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ