ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಷ್ಟೇ ಅಲ್ಲ, ಇನ್ನೂ ಬಹಳಷ್ಟು ಕ್ಷೇತ್ರಗಳಲ್ಲಿ ಹುಡುಗಿಯರು ತಮ್ಮ ಬಾಡಿಯ ಮುಖಾಂತರ ಗಳಿಕೆ ಮಾಡುತ್ತಿದ್ದಾರೆ. ಸೇಲ್ಸ್ ಗರ್ಲ್ಸ್, ಆರ್ಕೆಸ್ಟ್ರಾ, ವೇಟರ್, ಲೇಡಿಸ್ ಬೌನ್ಸರ್, ರಿಸೆಪ್ಶನಿಸ್ಟ್, ಮಸಾಜ್ ಗರ್ಲ್ಸ್, ಟೆಲಿಕಾಲಿಂಗ್, ಡ್ಯಾನ್ಸ್, ಆರ್ಟಿಸ್ಟ್, ಲೇಡಿ ಬಾಡಿ ಬಿಲ್ಡರ್ ಹೀಗೆ ಹತ್ತು ಹಲವು ಕ್ಷೇತ್ರಗಳು ಪರಿಪೂರ್ಣ ಉದ್ಯೋಗ ದೊರಕಿಸಿಕೊಡುತ್ತಿವೆ. ಇನ್ನು ಕೆಲವು ಹವ್ಯಾಸ ಕ್ಷೇತ್ರಗಳಾಗಿವೆ. ಹವ್ಯಾಸಿ ಉದ್ಯೋಗಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಅವನ್ನು ಕೆಲವರು ಟೀಕೆ ಕೂಡ ಮಾಡುತ್ತಾರೆ. ಯಾವ ಕೆಲಸ ಕಾನೂನು ಬಾಹಿರ ಅಲ್ಲವೋ, ಅದನ್ನು ಕಾನೂನು ಕೂಡ ತಪ್ಪು ಎಂದು ಹೇಳುವುದಿಲ್ಲ. ಈ ಕೆರಿಯರ್ಗಳಲ್ಲಿ ಹುಡುಗಿಯರು ತಮ್ಮ ದೇಹವನ್ನು ಗಳಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಹುಡುಗಿ ತನ್ನ ಕ್ಷೇತ್ರದಲ್ಲಿ ನಿಪುಣಳಾಗಿರುತ್ತಾಳೆ. ಅದಕ್ಕಾಗಿ ಅವಳ ದೇಹವೇ ಅವಳ ಟ್ಯಾಲೆಂಟ್ ಆಗಿರುತ್ತದೆ.
ಕೆರಿಯರ್ ರೂಪಿಸುತ್ತಿರುವ ದೇಹ
ಹುಡುಗಿಯರ ಕೆರಿಯರ್ಗೆ ಅವರ ದೇಹವೇ ದಾರಿ ಮಾಡಿಕೊಡುತ್ತಿದೆ. ಇಂದಿನ ನಗರಗಳಲ್ಲಿ ಪ್ರಚಾರಕ್ಕೆ ಹುಡುಗಿಯರನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಕೆರಿಯರ್ನ ಅವಕಾಶಗಳು ತೆರೆದುಕೊಳ್ಳುತ್ತಿವೆ. ಸ್ಟೇಜ್ ಶೋನಲ್ಲಿ ಮಹಿಳೆಯೊಬ್ಬಳಿಗೆ ಹಾಡು ಬರದೇ ಇರಬಹುದು. ಆದರೆ ಆಕೆ ಕೇವಲ ಡ್ಯಾನ್ಸ್ ಮೂಲಕ ಗಳಿಕೆ ಮಾಡುತ್ತಿದ್ದಾಳೆ.
ಮದುವೆಯ ಆರ್ಕೆಸ್ಟ್ರಾಗಳಿಂದ ಹಿಡಿದು ಆಹಾರ ಬಡಿಸುವ ವೇಟರ್ತನಕ ಎಲ್ಲ ಕೆಲಸಗಳಲ್ಲೂ ಹುಡುಗಿಯರಿಗೆ ಆದ್ಯತೆ ನೀಡಲಾಗುತ್ತಿದೆ. ಮದುವೆಯಲ್ಲಿ ವಧುವಿನ ಗೆಳತಿಯರು ಕೂಡ ಅತ್ಯವಶ್ಯ. ಗೆಳತಿಯ ಗೆಟಪ್ನಲ್ಲಿ ಹುಡುಗಿಯರು ವೆಡ್ಡಿಂಗ್ ಇವೆಂಟ್ಸ್ ನಲ್ಲಿ ಮಿಂಚುತ್ತಿದ್ದಾರೆ.
ಇವೆಂಟ್ ಮ್ಯಾನೇಜರ್ ಶಿಲ್ಪಾ ಹೇಳುತ್ತಾರೆ, “ಈಗ ಪ್ರತಿ ಇವೆಂಟ್ನಲ್ಲಿ ಎಂಟ್ರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ವಿಶೇಷ ವ್ಯಕ್ತಿ ಪ್ರಥಮ ಬಾರಿಗೆ ಅಲ್ಲಿಗೆ ಆಗಮಿಸುತ್ತಿರುತ್ತಾರೆ. ಆ ಒಂದು ಕ್ಷಣವನ್ನು ವಿಶೇಷವಾಗಿಸುವ ಅಭಿಲಾಷೆ ಎಲ್ಲರಿಗೂ ಇರುತ್ತದೆ. ಒಂದು ಮಗುವಿನ ಮೊದಲ ಹುಟ್ಟುಹಬ್ಬದ ಸಮಾರಂಭ. ಮಗು ಹಾಗೂ ತಾಯಿ ಏಕಕಾಲಕ್ಕೆ ಅಲ್ಲಿಗೆ ಆಗಮಿಸಬೇಕಿತ್ತು. ಅಮ್ಮ ಗೌನ್ ಧರಿಸಿದ್ದರು. ಅವರಿಗೆ ಮಗುವನ್ನು ತೆಗೆದುಕೊಳ್ಳುವುದು ಸಾಧ್ಯವಿರಲಿಲ್ಲ. ಮಗುವನ್ನು ಬೇಬಿ ವಾಕರ್ನಲ್ಲಿ ತೆಗೆದುಕೊಂಡು ಬಂದರೆ ಅಂತಹ ವಿಶೇಷ ಫೀಲ್ ಬರುತ್ತಿರಲಿಲ್ಲ. ಹೀಗಾಗಿ ಸುಂದರ ಹುಡುಗಿಯೊಬ್ಬಳು ಮಗುವನ್ನು ಎತ್ತಿಕೊಂಡು ತಾಯಿಯ ಜೊತೆ ಹೆಜ್ಜೆ ಹಾಕಿದಳು. ಈ ರೀತಿಯ ಹಲವು ಆಫರ್ಗಳು ಹುಡುಗಿಯರಿಗೆ ವಿಶೇಷ ಆಫರ್ಗಳಾಗುತ್ತಿವೆ.”
ಸಂಗೀತ ಮತ್ತು ನೃತ್ಯ
ಮ್ಯೂಸಿಕ್ ಮತ್ತು ಡ್ಯಾನ್ಸ್ ಹುಡುಗಿಯರಿಗೆ ಕೆರಿಯರ್ನ ಬಹುದೊಡ್ಡ ರಹದಾರಿಗಳಾಗಿವೆ. ಇವುಗಳಲ್ಲಿ ಹುಡುಗಿಯರು ತಮ್ಮ ದೇಹವನ್ನು ಯಥೇಚ್ಛವಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಗಾಯಕ ಎಷ್ಟೇ ಮಧುರವಾಗಿ ಹಾಡಿರಲಿ ಸ್ಟೇಜ್ನಲ್ಲಿ ಅಥವಾ ವಿಡಿಯೋದಲ್ಲಿ ಆತನೊಂದಿಗೆ ಕುಣಿಯಲು ಹುಡುಗಿಯರು ಬೇಕೇ ಬೇಕು. ಇತ್ತೀಚೆಗೆ ಪಂಜಾಬಿ, ಹರಿಯಾಣ, ರಾಜಸ್ಥಾನಿ, ಭೋಜಪುರಿ ಹಾಡುಗಳಲ್ಲಿ ಹಾಡುಗಾರರಿಗಿಂತ ಹೆಚ್ಚಾಗಿ ಗಿರಗಿರ ಎಂದು ವೇಗವಾಗಿ ಡ್ಯಾನ್ಸ್ ಮಾಡುವ ಹುಡುಗಿಯರಿಗೆ ಹೆಚ್ಚು ಬೇಡಿಕೆ. ಹರಿಯಾಣಾದ ಸಪ್ನಾ ಚೌಧರಿ ತಮ್ಮ ಒಂದು ಡ್ಯಾನ್ಸ್ ಶೋಗೆ 8 ಲಕ್ಷ ರೂ. ಪಡೆಯುತ್ತಿದ್ದಾರೆ. ಅದೇ ರೀತಿ ಭೋಜಪುರಿ ಗಾಯಕಿ ಹಾಗೂ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ನಿಶಾ ಹೆಚ್ಚು ಬೇಡಿಕೆಯಲ್ಲಿದ್ದಾರೆ.
ಭೋಜಪುರಿ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಡ್ಯಾನ್ಸರ್ಗಳಿಗೆ ಹೆಚ್ಚು ಬೇಡಿಕೆಯಿದೆ. ಇದರಲ್ಲಿ ಕೆಲಸ ಮಾಡಲು ಹೆಚ್ಚಿನ ತರಬೇತಿಯ ಅಗತ್ಯವೇನೂ ಇಲ್ಲ. ಅವರಿಗೆ ವೇದಿಕೆಯಲ್ಲಿ ಚಕ್ರದಂತೆ ಸುತ್ತುವುದು ಗೊತ್ತಿರಬೇಕು. ಆಕೆ ಯಾವ ವೇಷ ಧರಿಸಿದ್ದಾಳೆ ಎನ್ನುವುದು ಈಗ ಗೌಣ.
ಯಾರು ಹೆಚ್ಚು ಫಿಟ್ ಅವರೇ ಹಿಟ್!
ಮಾಡೆಲಿಂಗ್ ಮುಖಾಂತರ ಕೆರಿಯರ್ ರೂಪಿಸಿಕೊಂಡ ಪೂಜಾ ಹೇಳುತ್ತಾರೆ, “ನಾನು ಆ್ಯಕ್ಟಿಂಗ್ಗೆಂದು ಬಂದಿದ್ದೆ. ಅಲ್ಲಿ ಅವಕಾಶ ಸಿಗದೇ ಇದ್ದಾಗ ಮಾಡೆಲಿಂಗ್ ಮಾಡಲು ಶುರು ಮಾಡಿದೆ. ನನ್ನ ಬಾಡಿ ಫಿಟ್ ಆಗಿದ್ದರಿಂದ ನನಗೆ ಆಫರ್ಗಳು ಬರತೊಡಗಿದವು.”
ಹಣ ಗಳಿಸಲು ಈಗ ದೇಹವೇ ದೊಡ್ಡ ಬಂಡವಾಳ ಆಗಿಬಿಟ್ಟಿದೆ. ದೇಹ ಎಂಬ ಶಬ್ದ ಎತ್ತಿದಾಗ ಅದರ ಬಗ್ಗೆ ಮನಸ್ಸಿನಲ್ಲಿ ತಪ್ಪು ಕಲ್ಪನೆ ಉಂಟಾಗುತ್ತದೆ. ದೇಹದ ಉಪಯೋಗ ಅಂದರೆ ಅದನ್ನು ಮಾರಾಟ ಮಾಡುವುದಲ್ಲ. ಯುವತಿಯ ದೇಹ ಸದೃಢವಾಗಿದ್ದರೆ ಆಕೆ ಯಾವುದೇ ಕ್ಷೇತ್ರದಲ್ಲಿ ಕೆರಿಯರ್ ರೂಪಿಸಿಕೊಳ್ಳಬಹುದು. ಮಹಿಳಾ ಸೆಲೆಬ್ರಿಟಿಗಳಿಗೆ ಈಗ ಹುಡುಗಿಯರನ್ನೇ ಬಾಡಿಗಾರ್ಡ್ಗಳಾಗಿ ನೇಮಿಸಲಾಗುತ್ತಿದೆ. ಇದು ಕೂಡ ಒಂದು ರೀತಿಯ ಉದ್ಯೋಗಾವಕಾಶವೇ ಆಗಿದೆ.
ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿರುವ ಅರ್ಚನಾ ಹೇಳುತ್ತಾರೆ, “ಈಗ ಮಹಿಳೆಯರು ತಮ್ಮ ದೇಹದ ಬಗ್ಗೆ ಸಾಕಷ್ಟು ಜಾಗರೂಕರಾಗಿದ್ದಾರೆ. ಏಕೆಂದರೆ ಅದು ಅವರ ಬಹುದೊಡ್ಡ ಬಂಡವಾಳ. ಇಂತಹ ಸ್ಥಿತಿಯಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಹುಡುಗಿಯರು ಈಗ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲೂ ಹೆಜ್ಜೆ ಇಟ್ಟಿದ್ದಾರೆ. ಅಲ್ಲಿ ಅವರಿಗೆ ತಮ್ಮ ದೇಹವನ್ನು ಬಿಂಬಿಸಬೇಕಿರುತ್ತದೆ.”
ವಯಸ್ಸಿನ ಪರಿಣಾಮ ಮೊದಲಿನಂತಿಲ್ಲ
ಫಿಟ್ನೆಸ್ನ ಪರಿಣಾಮ ಈಗ ಮಹಿಳೆಯರ ವಯಸ್ಸಿನ ಪರಿಣಾಮವನ್ನು ಹಿಂದೂಡುತ್ತಿದೆ. ಇದರ ಒಂದು ಮುಖ್ಯ ಕಾರಣವೆಂದರೆ, ಎಲ್ಲಿಯವರೆಗೆ ದೇಹ ಫಿಟ್ ಆಗಿರುತ್ತೊ, ಅಲ್ಲಿಯವರೆಗೆ ಬೇಡಿಕೆ ಇದ್ದೇ ಇರುತ್ತೆ. ಹಾಗಾಗಿ ಎಲ್ಲರೂ ವಯಸ್ಸಿನ ಪರಿಣಾಮವನ್ನು ಹಿಂದೂಡಲು ಪ್ರಯತ್ನ ನಡೆಸುತ್ತಿರುತ್ತಾರೆ. ಅದೇ ಕಾರಣದಿಂದ ಈಗ ಎಷ್ಟೋ ಜನ ಮಹಿಳೆಯರು 40ರ ಬಳಿಕ ಸುಂದರವಾಗಿ ಕಾಣುತ್ತಿರುತ್ತಾರೆ. ಅವರು 40+ನಲ್ಲೂ ಮೈಮಾಟವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತಾರೆ.
ಸಿನಿಮಾ ತಾರೆಯರು ಬಹುಬೇಗ ನಿವೃತ್ತಿ ಘೋಷಿಸಬೇಕಾಗಿ ಬರುತ್ತದೆ. ಅವರು ಕೂಡ ಈಗ ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಂಡು 50ರ ಇಳಿವಯಸ್ಸಿನಲ್ಲೂ ಸೂಕ್ತ ಪಾತ್ರಕ್ಕೆ ಆಯ್ಕೆಯಾಗುತ್ತಾರೆ. ಮಾಧುರಿ ದೀಕ್ಷಿತ್, ಜೂಹಿ ಚಾವ್ಲಾ, ಕಾಜೋಲ್ನಂತಹವರನ್ನು ನೋಡಿ ಕಲಿಯಬೇಕು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಸ್ಪರ್ಧೆಗಳು ತರುಣಿಯರಿಗಿಂತ ಶ್ರೀಮತಿಯರನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುತ್ತಿವೆ.
ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದ ಬಳಿಕ ವಿಡಿಯೋಗಳಿಂದ ಹಿಡಿದು ಚಿಕ್ಕಪುಟ್ಟ ಜಾಹೀರಾತುಗಳಲ್ಲಿ ಫಿಟ್ ಹಾಗೂ ಸುಂದರ ಮಹಿಳೆಯರಿಗೆ ಹೆಚ್ಚೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ. ಒಬ್ಬರನ್ನು ನೋಡಿ ಮತ್ತೊಬ್ಬರು ಕೂಡ ಬದಲಾಗುತ್ತಿದ್ದಾರೆ. ಇತ್ತೀಚೆಗೆ ಸಮಾಜದ ದೃಷ್ಟಿಕೋನ ಕೂಡ ಬದಲಾಗುತ್ತಿದೆ. ಮಹಿಳೆಯರ ಮೇಲಿನ ನಿರ್ಬಂಧಗಳು ಕಡಿಮೆಯಾಗುತ್ತಿವೆ. ಅವರಿಗೆ ಕುಟುಂಬದವರ ಸಹಾಯ ಸಹಕಾರ ದೊರಕುತ್ತಿದೆ. ಫಿಟ್ ದೇಹವನ್ನು ಉಪಯೋಗಿಸಿಕೊಂಡು ಹಣ ಗಳಿಸುವ ಅವಕಾಶಗಳು ಹೆಚ್ಚುತ್ತಲೇ ಇವೆ. ಈಗಲೂ ಬಹುದೊಡ್ಡ ಮಹಿಳಾ ವರ್ಗ ನಿರ್ಬಂಧಗಳಲ್ಲಿ ನಲುಗುತ್ತಿದೆ. ಎಲ್ಲಿ ನಿರ್ಬಂಧಗಳು ಕಳಚಿವೆಯೋ, ಅಲ್ಲಿ ಮಹಿಳೆ ತನಗೆ ಸಿಗಬೇಕಾದ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾಳೆ. ತನ್ನನ್ನು ತಾನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಸ್ಪರ್ಧೆಯಲ್ಲಿ ಆಕೆ ಮುಂದೆ ಓಡುತ್ತಲೇ ಇದ್ದಾಳೆ. ಇಲ್ಲಿ ಅವಶ್ಯಕತೆಯಿರುವುದು ಆ ಕೆಲಸವನ್ನು ಆತ್ಮವಿಶ್ವಾಸದಿಂದ ಪೂರೈಸುವ ಛಲ, ಅವರಿವರ ಟೀಕೆಗಳನ್ನು ಬದಿಗೊತ್ತಿದರೆ ಅವಳು ತನ್ನ ಕೆರಿಯರ್ನ್ನು ಮತ್ತಷ್ಟು ಚೆನ್ನಾಗಿ ರೂಪಿಸಿಕೊಳ್ಳಬಹುದು.
– ಜಿ. ನಮ್ರತಾ