ಹೆಂಡತಿ ಉದ್ಯೋಗಸ್ಥೆ ಹಾಗೂ ಗಂಡ ನಿರುದ್ಯೋಗಿ ಇಂತಹ ಉದಾಹರಣೆಗಳು ಮೊದಲು ಅಪರೂಪಕ್ಕೆಂಬಂತೆ ಕಂಡುಬರುತ್ತಿದ್ದವು. ಆದರೆ ಕಳೆದ 10-12 ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಪರಸ್ಪರ ಹೊಂದಾಣಿಕೆ ಎನ್ನುವುದು ಕಷ್ಟವಾಗುತ್ತದೆ. ಹೀಗಾಗಿ ಗಳಿಸುವ ಸೊಸೆಯನ್ನು ಗೌರವಿಸುವ ಹಾಗೂ ಆಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸಬೇಕು. ಇದು ಇಂದಿನ ಅನಿವಾರ್ಯತೆ. ಗಂಡ ಕೂಡ ಹೆಂಡತಿಯೊಂದಿಗೆ ಹೊಂದಾಣಿಕೆಯಿಂದ ಹೋಗಬೇಕು. ಆಗಲೇ ಕುಟುಂಬದ ಗಾಡಿ ಸಹಜವಾಗಿ ಚಲಿಸುತ್ತದೆ.
ಧಾರವಾಡದ ಸ್ನೇಹಾಳ ಮದುವೆ ಅವಳ ಸಹಪಾಠಿ ಚಂದ್ರಕಾಂತ್ ಜೊತೆ ಆಯಿತು. ಮದುವೆಯ ಸಮಯದಿಂದಲೇ ಇಬ್ಬರೂ ಉದ್ಯೋಗಕ್ಕಾಗಿ ಹಲವು ಕಡೆ ಅರ್ಜಿ ಹಾಕುತ್ತಿದ್ದರು. ಪರೀಕ್ಷೆ ಬರೆಯುತ್ತಿದ್ದರು. ಇಂಟರ್ವ್ಯೂಗೆ ಹೋಗುತ್ತಿದ್ದರು. ಆದರೆ ಇಲ್ಲೆಲ್ಲ ಹೆಚ್ಚು ಮಿಂಚುತ್ತಿದ್ದದ್ದು ಸ್ನೇಹಾ. ಚಂದ್ರಕಾಂತ್ ಮಾತ್ರ ಯಾವುದರಲ್ಲೂ ಹೇಳಿಕೊಳ್ಳುವಂತಹ ಸಾಧನೆ ತೋರಿಸುತ್ತಿರಲಿಲ್ಲ. ಸ್ನೇಹಾ ಕೊನೆಗೊಮ್ಮೆ ಒಂದು ದೊಡ್ಡ ಹುದ್ದೆಗೆ ಆಯ್ಕೆಯಾದಳು. ಚಂದ್ರಕಾಂತ್ ಆ ಬಳಿಕ ಅನೇಕ ಪರೀಕ್ಷೆಗೆ ಕುಳಿತ. ಆದರೆ ಒಂದರಲ್ಲಿಯೂ ಪಾಸಾಗಲಿಲ್ಲ. ಹೀಗಾಗಿ ಅವನು ಅದರ ಉಸಾಬರಿ ಬಿಟ್ಟು ವ್ಯಾಪಾರ ಶುರು ಮಾಡಿದ.
ಮದುವೆಯಾದ ಕೆಲ ವರ್ಷಗಳ ತನಕ ಇಬ್ಬರಲ್ಲೂ ಹೊಂದಾಣಿಕೆ ಇತ್ತು. ಆದರೆ ಬಳಿಕ ಇಬ್ಬರಲ್ಲೂ ಕಲಹ ಶುರುವಾಯಿತು. ಸ್ನೇಹಾಳಿಗೆ ಸಮಾಜದಲ್ಲಿ ಸಿಗುತ್ತಿದ್ದ ಗೌರವ, ಪ್ರತಿಷ್ಠೆ ಚಂದ್ರಕಾಂತನಿಗೆ ಇರುಸು ಮುರುಸು ಉಂಟು ಮಾಡಿತು. ಅವನು ಕೀಳರಿಮೆಗೆ ತುತ್ತಾದ. ಕ್ರಮೇಣ ಜಗಳ ದಿನದಿನ ನಡೆಯತೊಡಗಿತು. 4 ವರ್ಷದ ಅವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತು.
ಕಳೆದ 10 ವರ್ಷಗಳ ಬದಲಾವಣೆಯನ್ನು ಗಮನಿಸಿದರೆ ತಿಳಿದುಬರುವ ಸಂಗತಿಯೆಂದರೆ, ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರೇ ಒಳ್ಳೆಯ ಶೈಕ್ಷಣಿಕ ಸಾಧನೆ ತೋರಿಸಿ, ಉದ್ಯೋಗದ ಮಾರುಕಟ್ಟೆಯಲ್ಲೂ ಅವರೇ ಮುಂಚೂಣಿಯಲ್ಲಿದ್ದಾರೆ.
ಮೊದಲು ಮದುವೆಯ ಬಳಿಕ ಹುಡುಗಿಗೆ ಉದ್ಯೋಗ ಬಿಟ್ಟು ಬಿಡಲು ಹೇಳಲಾಗುತ್ತಿತ್ತು. ಸರ್ಕಾರಿ ನೌಕರಿಯಲ್ಲಿ ಒಳ್ಳೆಯ ಸೌಲಭ್ಯಗಳು ದೊರಕುತ್ತಿರುವುದರಿಂದಾಗಿ ಈಗ ಯಾವುದೇ ಯುವತಿಯರು ಸರ್ಕಾರಿ ನೌಕರಿ ಬಿಟ್ಟುಕೊಡಲು ಸಿದ್ಧರಿಲ್ಲ. ಹೀಗಾಗಿ ಅಂತಹ ಪ್ರಕರಣಗಳಲ್ಲಿ ಅಷ್ಟಿಷ್ಟು ಒತ್ತಡದ ಸ್ಥಿತಿ ಉಂಟಾಗುತ್ತದೆ. ಹೆಂಡತಿ ಒಳ್ಳೆಯ ನೌಕರಿಯಲ್ಲಿದ್ದು, ಗಂಡ ಸಾಧಾರಣ ಉದ್ಯೋಗದಲ್ಲಿದ್ದರೆ ಅವನ ಅಭಿಮಾನಕ್ಕೆ ಪೆಟ್ಟು ಬೀಳುತ್ತದೆ.
ಸಾಮಾಜಿಕ ಬದಲಾವಣೆಗಳು
ಮೊದಲು ಬಹಳಷ್ಟು ಕಡಿಮೆ ಪ್ರಕರಣಗಳಲ್ಲಿ ಮದುವೆಯಾದ ಬಳಿಕ ಹುಡುಗಿಯರು ನೌಕರಿಯಲ್ಲಿ ಮುಂದುವರಿಯುತ್ತಿದ್ದರೆ, ಈಗ ಬಹಳ ಕಡಿಮೆ ಪ್ರಕರಣಗಳಲ್ಲಿ ಹುಡುಗಿಯರು ನೌಕರಿ ತೊರೆಯುತ್ತಾರೆ. ಇದರ ಎಲ್ಲಕ್ಕೂ ಮುಖ್ಯ ಕಾರಣವೆಂದರೆ, ಜನರ ಸಾಮಾಜಿಕ ಯೋಚನೆಯಲ್ಲಾದ ಬದಲಾವಣೆಯಾಗಿದೆ. ಈಗ ಮದುವೆಯಾದ ಬಳಿಕ ಮಹಿಳೆ ಕೆಲಸ ಮಾಡಬಾರದು ಎಂದು ಯಾರೂ ಯಾವುದೇ ಒತ್ತಡ ಹೇರುವ ಸಂದರ್ಭ ಉದ್ಭವಿಸುವುದಿಲ್ಲ.
ನಗರಗಳಲ್ಲಿ ವಾಸ, ಮಕ್ಕಳಿಗೆ ಓದಿಸುವುದು ಹಾಗೂ ಸಾಮಾಜಿಕ ರೀತಿನೀತಿಯ ಕಾರಣದಿಂದಾಗಿ ಆರ್ಥಿಕ ಹೊಂದಾಣಿಕೆ ಎನ್ನುವುದು ಕಷ್ಟಕರವಾಗುತ್ತ ಸಾಗಿದೆ. ಹೀಗಾಗಿ ಗಂಡನಷ್ಟೆ ಅಲ್ಲ, ಗಂಡನ ಕುಟುಂಬದವರು ಕೂಡ ಹೆಂಡತಿ ಕೂಡ ಯಾವುದಾದರೊಂದು ಉದ್ಯೋಗ ಮಾಡಬೇಕೆಂದು ಬಯಸುತ್ತಾರೆ. ಕೇವಲ ನೌಕರಿಯಲ್ಲಷ್ಟೇ ಅಲ್ಲ, ಬಿಸ್ನೆಸ್ನಲ್ಲೂ ಕೂಡ ಹೀಗಾಗುತ್ತದೆ.
ರಾಹುಲ್ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಅವರ ಸಂಬಳ ಚೆನ್ನಾಗಿಯೇ ಇದೆ. ಅವರು ತಮ್ಮ ಹೆಂಡತಿಗೆ ಮೆಚ್ಚಿನ ಬ್ಯೂಟಿ ಬಿಸ್ನೆಸ್ ಮಾಡಲು ಅನುಮತಿ ನೀಡಿದರು. ರಾಹುಲ್ರ ಪತ್ನಿ ಸಂಧ್ಯಾ ಬ್ಯೂಟಿ ಪಾರ್ಲರ್ ಒಂದರ ಫ್ರಾಂಚೈಸಿ ತೆಗೆದುಕೊಂಡರು. ಇದರಿಂದ ಹಣವಷ್ಟೇ ಸಿಗಲಿಲ್ಲ. ಅವರ ಸಾಮಾಜಿಕ ವ್ಯಾಪ್ತಿಯೂ ಹೆಚ್ಚಿತು. ಈಗ ರಾಹುಲ್ಗಿಂತ ಹೆಚ್ಚಾಗಿ ಅವರ ಪತ್ನಿಯೇ ಹೆಚ್ಚು ಪರಿಚಿತರಾಗಿಬಿಟ್ಟಿದ್ದಾರೆ. ಬಿಸ್ನೆಸ್ನಲ್ಲಿ ಯಶಸ್ವಿಯಾದ ಬಳಿಕ ಸಂಧ್ಯಾಳ ಪರ್ಸನಾಲಿಟಿಯಲ್ಲಿ ಭಾರಿ ಬದಲಾವಣೆ ಉಂಟಾಯಿತು. ಸಂಬಂಧಿಕರಲ್ಲಿ ಅವಳ ಕೆಲಸದ ಬಗ್ಗೆ ತಮಾಷೆ ಮಾಡುತ್ತಿದ್ದವರು ಈಗ ಅವಳನ್ನು ಪ್ರಶಂಸಿಸುತ್ತಾರೆ. ತನ್ನ ಪತಿಗೆ ಬರುವಷ್ಟು ಸಂಬಳವನ್ನು ಆಕೆ ತನ್ನ ಸಹಾಯಕರಿಗೆ ಕೊಡುತ್ತಾಳೆ. ಈ ಕುರಿತಂತೆ ಸಂಧ್ಯಾ ಹೀಗೆ ಹೇಳುತ್ತಾರೆ, “10 ವರ್ಷಗಳ ಹಿಂದೆ ನಾನು ಕೆಲಸ ಶುರು ಮಾಡಿದಾಗ ಜನರು ನಾನು ಟೈಮ್ ಪಾಸ್ಗೆ ಕೆಲಸ ಮಾಡುತ್ತಿದ್ದೇನೆಂದು ಹೇಳುತ್ತಿದ್ದರು. ಈಗ ಅವರೇ ಹೆಮ್ಮೆಯಿಂದ ನನ್ನ ಬಗ್ಗೆ ಹೇಳುತ್ತಾರೆ.”
ಮಹಿಳೆಯರು ಮೊದಲು ಕೂಡ ಕೆಲಸ ಮಾಡುತ್ತಿದ್ದರು. ಆದರೆ ಆಗ ಅವಕಾಶಗಳಿರಲಿಲ್ಲ. ಅವರಿಗೆ ತಮ್ಮ ಬಗ್ಗೆ ಕೂಡ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ. ಸಮಾಜದಿಂದ ಕೂಡ ಅಷ್ಟೇನೂ ಸಹಯೋಗ ದೊರಕುತ್ತಿರಲಿಲ್ಲ. ಒಟ್ಟು ಕುಟುಂಬಗಳೇ ಹೆಚ್ಚಿಗೆ ಇರುತ್ತಿದ್ದವು. ಹೀಗಾಗಿ ಮಹಿಳೆಯ ಗಳಿಕೆಯ ಮೇಲೆ ಅವಳಿಗೆ ಹಕ್ಕು ಇರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಉಳಿತಾಯ ಮಾಡಿದ ಹಣ ಮಹಿಳೆಯಲ್ಲಿ ಆತ್ಮವಿಶ್ವಾಸವನ್ನುಂಟು ಮಾಡುತ್ತದೆ. ಈ ಆತ್ಮವಿಶ್ವಾಸದ ಬಲದಿಂದಲೇ ಮಹಿಳೆಯರಲ್ಲಿ ಸಬಲೀಕರಣ ಉಂಟಾಗಿದೆ. ಈಗ ಆಕೆ ತನ್ನ ನಿರ್ಧಾರವನ್ನು ತಾನೇ ತೆಗೆದುಕೊಳ್ಳುತ್ತಾಳೆ. ಹೀಗಾಗಿ ಆಕೆಗೆ ತನ್ನದೇ ಆದ ಒಂದು ವಿಶಿಷ್ಟ ವ್ಯಕ್ತಿತ್ವ ದೊರಕಿದೆ.
35 ವರ್ಷದ ಅಂಕಿತಾ ಹೇಳುತ್ತಾಳೆ, “ನನಗೆ ಕೇಕ್ಪೇಸ್ಟ್ರಿ ಮಾಡುವ ಹವ್ಯಾಸ ಮೊದಲಿನಿಂದಲೇ ಇತ್ತು. ನನ್ನ ಕೈರುಚಿ ಸವಿದ ಯಾರೇ ಆಗಲಿ ಅದರ ಬಗ್ಗೆ ಹೊಗಳದೇ ಇರುತ್ತಿರಲಿಲ್ಲ. ಮದುವೆಗೂ ಮುಂಚೆ ನಾನು ಕೆಲಸ ಮಾಡುತ್ತಿದ್ದೆ. ಮದುವೆಯ ಬಳಿಕ ಆ ಕೆಲಸ ಬಿಡಬೇಕಾಯಿತು. ಆದರೆ ಅನೇಕ ವರ್ಷಗಳ ಬಳಿಕ ನಾನೊಂದು ಕೆಲಸ ಮಾಡಲು ಯೋಜನೆ ಮಾಡಿದೆ. ಗಂಡ ಯಾವುದಾದರೂ ಜಾಬ್ ಮಾಡು ಎಂದರು. ಆದರೆ ನಾನು ನೌಕರಿ ಮಾಡುವುದಿಲ್ಲ. ಕೇಕ್ ಪೇಸ್ಟ್ರಿ ತಯಾರಿಸುವ ಕೆಲಸ ಮಾಡುವೆ ಎಂದು ಹೇಳಿದೆ.“
ನಾನು ಕಷ್ಟಪಟ್ಟು ಕೆಲಸ ಮಾಡಿದೆ. 35 ವರ್ಷಗಳಲ್ಲಿ ನಾನು ಮಾಡಿದ ಕೇಕ್ಗಳು ಬಹಳ ಪ್ರಸಿದ್ಧಿ ಪಡೆದವು. ಈಗ ನನ್ನ ಬಳಿ ಅನೇಕ ಜನ ಕೆಲಸ ಮಾಡುತ್ತಾರೆ. ನಾನೀಗ ಬಿಸ್ನೆಸ್ ವುಮನ್. ಅಂದು ನಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಗಂಡ ಬಹಳ ಪ್ರಶಂಸೆ ವ್ಯಕ್ತಪಡಿಸುತ್ತಾರೆ.
”ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹುಡುಗಿಯರನ್ನು ಓದಿಸಲು ಕುಟುಂಬದವರು ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ. ಪಿಯುಸಿ ನಂತರದ ಓದಿಗಾಗಿ ಅವರ ಆಸಕ್ತಿಗನುಗುಣವಾಗಿ ಸಾಕಷ್ಟು ಬಗೆಯ ಕೋರ್ಸ್ಗಳು ಶುರುವಾಗಿವೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹುಡುಗಿಯರು ಈಗ ಬೇರೆ ನಗರಗಳಿಗೂ ಹೋಗಲು ಹಿಂದೇಟು ಹಾಕುತ್ತಿಲ್ಲ. ಕೆಲವು ಜನ ಪಾಲಕರು ಹೇಗಿದ್ದಾರೆಂದರೆ, ತಮ್ಮ ಮಕ್ಕಳ ಓದಿಗಾಗಿ ನಗರಕ್ಕೆ ಹೋಗಿ ನೆಲೆಸಲು ತಮ್ಮ ಆಸ್ತಿಪಾಸ್ತಿಯನ್ನು ಮಾರಲು ಕೂಡ ನಿರ್ಧಾರ ಕೈಗೊಳ್ಳುತ್ತಾರೆ.
ಗಂಡನೇ ಹೊಂದಾಣಿಕೆ ಮಾಡಿಕೊಳ್ಳಬೇಕು
ಅದೊಂದು ಕಾಲವಿತ್ತು, ಆಗ ಮದುವೆಯ ಬಳಿಕ ಹುಡುಗಿಯರೇ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಹೆಂಡತಿ ಅಡುಗೆಮನೆ ಹಾಗೂ ಗಂಡ ನೌಕರಿ ಮಾಡುತ್ತಿದ್ದ. ಈ ತೆರನಾದ ಹೊಂದಾಣಿಕೆಯನ್ನು ಈಗ ಪುರುಷರು ಮಾಡಿಕೊಳ್ಳಬೇಕಾಗಿ ಬರುತ್ತಿದೆ. ಹೆಂಡತಿಯರು ಆಫೀಸ್ನಲ್ಲಿ ಕೆಲಸ ಮಾಡಿ ಮನೆಗೆ ಬಂದ ಬಳಿಕ ಮೊದಲಿನ ಹಾಗೆ ಕೆಲಸ ಮಾಡಲು ಅಪೇಕ್ಷೆ ವ್ಯಕ್ತಪಡಿಸಿದರೆ, ಅಲ್ಲಿ ವಿವಾದಗಳು ಏಳುತ್ತವೆ. ಈ ವಿವಾದಗಳಿಂದ ದೂರ ಇರಲು ಹೆಂಡತಿಗಿಂತ ಹೆಚ್ಚಾಗಿ ಗಂಡನೇ ಹೊಂದಿಕೊಂಡು ಹೋಗುವ ನಿರ್ಧಾರ ಮಾಡಬೇಕಾಗುತ್ತದೆ. ಈಗ ಕೆಲವೊಂದು ಕಡೆ ಎಷ್ಟು ಬದಲಾವಣೆ ಆಗಿದೆಯೆಂದರೆ ನೌಕರಿ ಮಾಡಲು ಹೆಂಡತಿಯನ್ನು ಅವಳ ಗಂಡನೇ ಬಿಟ್ಟುಬರಲು, ಕರೆದುಕೊಂಡು ಬರಲು ಕೂಡ ಹೋಗುತ್ತಾನೆ. ನಗರ ಪ್ರದೇಶದ ಹುಡುಗಿಯರು ಸರ್ಕಾರಿ ನೌಕರಿ ಪಡೆದುಕೊಂಡು ಹಳ್ಳಿಗಳ ಶಾಲೆಗಳಿಗೆ ಹೋಗಿ ಕಲಿಸುತ್ತಿದ್ದಾರೆ.
ಹೆಂಡತಿ ಇಬ್ಬಗೆಯ ಜವಾಬ್ದಾರಿ ನಿಭಾಯಿಸಬೇಕಾಗಿ ಬರುತ್ತಿದೆ. ಒಂದು ವೇಳೆ ಅದರಲ್ಲಿ ಗಂಡನ ಸಹಕಾರ ದೊರೆಯದೇ ಇದ್ದರೆ, ವಿವಾದ ಉದ್ಭವಿಸುತ್ತದೆ. ಮೊದಲು ವರದಕ್ಷಿಣೆ ಬಗ್ಗೆ ಅಷ್ಟೇ ಅಲ್ಲ, ಅವಳ ಸೌಂದರ್ಯದ ಬಗೆಗೂ ಗಮನಿಸಲಾಗುತ್ತಿತ್ತು. ಆದರೆ ಈಗ ಹಾಗಲ್ಲ. ಹುಡುಗಿ ಸರ್ಕಾರಿ ನೌಕರಿ ಮಾಡುತ್ತಿದ್ದಾಳೆಂದರೆ ಮದುವೆ ಮಾಡಿಕೊಂಡು ಬಿಡೋಣ ಎನ್ನುತ್ತಿದ್ದಾರೆ. ಈಗ ಹುಡುಗಿ ಕೂಡ ಯಾವುದೇ ಹುಡುಗನನ್ನು ಸುಲಭವಾಗಿ ಒಪ್ಪುವುದಿಲ್ಲ. ಅವನು ತನಗೆ ಎಲ್ಲಾ ವಿಧದಲ್ಲೂ ತಕ್ಕವನಾಗಿದ್ದಾನೆಯೇ ಎನ್ನುವುದನ್ನು ನೋಡುತ್ತಾಳೆ.
ಎಷ್ಟೋ ಸಲ ಹುಡುಗಿ ಮದುವೆ ನಿಶ್ಚಯವಾದ ಬಳಿಕ ಹುಡುಗನ ವರ್ತನೆ ಇಷ್ಟವಾಗದಿದ್ದರೆ ಮದುವೆ ಮುರಿದುಕೊಂಡ ಎಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇದನ್ನು ಹುಡುಗಿಯರದ್ದೇ ಮೇಲುಗೈ ಎಂದು ಭಾವಿಸಲಾಗುತ್ತದೆ.
ಒಂದು ನಗರದಲ್ಲಿ ಗಂಡನೊಬ್ಬ ತನ್ನ ಹೆಂಡತಿಯ ಹತ್ಯೆ ಮಾಡಿದ. ಹೆಂಡತಿ ಕಾನೂನು ಇಲಾಖೆಯಲ್ಲಿ ಅಧಿಕಾರಿಯಾಗಿದ್ದರೆ, ಗಂಡ ಸಾಧಾರಣ ವಕೀಲ. ಹೆಂಡತಿ ತನ್ನೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಗಂಡನಿಗೆ ಅನಿಸುತ್ತಿತ್ತು. ಅವಳು ತನ್ನನ್ನು ತಾನು ದೊಡ್ಡ ಅಧಿಕಾರಿ ಎಂದು ಭಾವಿಸುತ್ತಾಳೆ. ನನ್ನನ್ನು ಕ್ಷುಲ್ಲಕವಾಗಿ ಕಾಣುತ್ತಾಳೆ ಎಂದು ಗಂಡ ಭಾವಿಸುತ್ತಿದ್ದ. ಹೀಗೆಯೇ ಅವರಿಬ್ಬರ ನಡುವೆ ವೈಮನಸ್ಸು ಹೆಚ್ಚುತ್ತಾ ಹೋಯಿತು. ಇಬ್ಬರೂ ಬೇರೆ ಬೇರೆ ಇರತೊಡಗಿದರು. ಕುಟುಂಬದವರ ಒತ್ತಡದ ಮೇರೆಗೆ ಪುನಃ ಜೊತೆ ಜೊತೆಗೆ ವಾಸಿಸತೊಡಗಿದರು. ಈ ಮಧ್ಯೆ ಅವರ ನಡುವೆ ವೈಮನಸ್ಸು ಮಿತಿಮೀರಿ ಹೆಂಡತಿಯ ಕೊಲೆಯಲ್ಲಿ ಅಂತ್ಯಗೊಂಡಿತು.
ಹೆಚ್ಚುತ್ತಿರುವ ಅವಕಾಶಗಳು
ಮೊದಲು ನರ್ಸ್ ಹಾಗೂ ಬ್ಯಾಂಕಿಂಗ್ನಲ್ಲಷ್ಟೇ ಹುಡುಗಿಯರು ಹೆಚ್ಚಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ನಗರ ಪ್ರದೇಶಗಳಲ್ಲಿ ಹುಡುಗಿಯರು ಎಂಎನ್ಸಿ ಕಂಪನಿಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಹುಡುಗಿಯರಿಗೆ ಆಶಾ ಕಾರ್ಯಕರ್ತೆಯರ ಹುದ್ದೆಗಳು ಲಭಿಸುತ್ತಿವೆ. ಜೊತೆಗೆ ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಅವರೇ ಹೆಚ್ಚಾಗಿ ನೇಮಕಗೊಳ್ಳುತ್ತಿದ್ದಾರೆ.
ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಅದೆಷ್ಟೊ ಯುವತಿಯರು ಪ್ರತಿದಿನ 40 ರಿಂದ 60 ಕಿ.ಮೀ ತನಕ ದೂರ ಹೋಗಿ ಕೆಲಸ ಮಾಡಿ ಬರುತ್ತಿದ್ದಾರೆ. ಇದು ಅವರ ಕಾರ್ಯನಿಷ್ಠೆಯನ್ನು ತೋರಿಸುತ್ತದೆ. ಇಂತಹ ಸ್ಥಿತಿಯಲ್ಲಿ ಗಂಡನ ಸಹಕಾರ ಹೊಂದಾಣಿಕೆ ಅತ್ಯಗತ್ಯ. ಗಂಡಹೆಂಡತಿ ವೈವಾಹಿಕ ಜೀವನದ 2 ಚಕ್ರಗಳು. ಇಬ್ಬರೂ ಜೊತೆ ಜೊತೆಗೆ ಸಾಗಿದರೆ ಎಲ್ಲ ಸುಗಮ. ಇಲ್ಲದಿದ್ದರೆ ಮನಸ್ತಾಪ, ಒತ್ತಡ ಹೆಚ್ಚುತ್ತದೆ. ಅದಕ್ಕೆ ಇಬ್ಬರೂ ಅವಕಾಶ ಕೊಡಬಾರದು.
– ಶೈಲಜಾ ಕುಮಾರ್
ಅಹಂನಿಂದ ಸಾಕಷ್ಟು ತೊಂದರೆ……
ಫ್ಯಾಮಿಲಿ ಕೋರ್ಟ್ಗೆ ಬರುವ ಬಹಳಷ್ಟು ಪ್ರಕರಣಗಳಲ್ಲಿ ಗಂಡಹೆಂಡತಿಯ ಅಹಂನ ಘರ್ಷಣೆ ಎದ್ದು ಕಾಣುತ್ತದೆ. ಕೆಲವರಿಗೆ ಅವಳ ನೌಕರಿಯ ಬಗ್ಗೆ ತಕರಾರು ಇದ್ದರೆ, ಮತ್ತೆ ಕೆಲವರಿಗೆ ಆಕೆ ಹೊರಗೆ ಹೋಗುವ ಬಗ್ಗೆ ದೂರು ಇದೆ. ಕೌನ್ಸೆಲಿಂಗ್ ಮಾಡಿದರೆ ಅವರ ಸಮಸ್ಯೆ ಸರಿಹೋಗುತ್ತದೆ. ಕಳೆದ ಒಂದು ದಶಕದ ಬದಲಾವಣೆ ಗಮನಿಸಿದರೆ ಇಲ್ಲೆಲ್ಲ ಹುಡುಗಿಯರದೇ ಮೇಲುಗೈ. ಈಗ ಎಲ್ಲ ಕ್ಷೇತ್ರಗಳಲ್ಲಿ ಅವರು ಪುರುಷರಿಗಿಂತ ಮುಂದಿದ್ದಾರೆ.
ಬದಲಾವಣೆಯನ್ನು ಸ್ವೀಕರಿಸುವ ಸಮಾಜ
ಉದ್ಯೋಗಸ್ಥ ಪತ್ನಿಗೆ ಈಗ ಸ್ವೀಕೃತಿಯ ಮುದ್ರೆ ದೊರಕಿದೆ. ಅದು ಅವಳಿಗೆ ಕಠಿಣ ಟಾಸ್ಕ್. ಆದರೂ ಅವಳು ಅದನ್ನು ಎದುರಿಸಿ ಮುನ್ನಡೆಯುತ್ತಾಳೆ. ತನ್ನ ಸ್ಮಾರ್ಟ್ನೆಸ್ನಿಂದ ಅವಳು ಕೆಲಸವನ್ನು ಸರಳಗೊಳಿಸುತ್ತಾಳೆ. ಪರಸ್ಪರ ವೈಮನಸ್ಸಿನಿಂದಾಗಿ ಅವಳಿಗೆ ಕಿರಿಕಿರಿ ಎನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಅವಳಿಗೆ ಸಹಕಾರ ನೀಡಬೇಕು. ನೇಹಾ ಆನಂದ್, ಪೇರೆಂಟ್ ಕೋಚ್. ಸಿಂಗಲ್ ಪೇರೆಂಟ್ ಸಮಸ್ಯೆಯೇ ಅಲ್ಲ
ಗಂಡ ತನ್ನ ಹೆಂಡತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹಾಗೊಮ್ಮೆ ಪತಿ ಆಕೆಯ ಜೊತೆ ಹೊಂದಾಣಿಕೆಯಿಂದ ಇರದಿದ್ದರೆ ಆಕೆ ಏಕಾಂಗಿ ಆಗಿಬಿಡಬಹುದು. ತನ್ನ ಮಕ್ಕಳನ್ನು ತಾನೇ ಸಾಕುವ ನಿರ್ಧಾರಕ್ಕೂ ಬರಬಹುದು. ಶ್ವೇತಾಸಿಂಗ್, ಮಹಿಳಾ ಆಯೋಗದ ಮಾಜಿ ಸದಸ್ಯೆ.
ಮೊದಲು ಹುಡುಗಿಯರಿಗೆ ಮದುವೆಯಾಗುತ್ತಿದ್ದಂತೆ ಅವರಿಗೆ ನೌಕರಿ ಬಿಡಬೇಕಾಗಿ ಬರುತ್ತಿತ್ತು. ಅವಳ ಜೀವನ ಎಲ್ಲ ಅಡುಗೆಮನೆಗೆ ಸೀಮಿತವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಹುಡುಗಿಯರು ನೌಕರಿ ಬಿಡುತ್ತಿಲ್ಲ. ಹುಡುಗರೇ ಹೊಂದಾಣಿಕೆಗೆ ಮುಂದಾಗುತ್ತಿದ್ದಾರೆ.
ತಂತ್ರಜ್ಞಾನದ ಅನುಕೂಲ
ಹೆಂಡತಿಗೆ ಈಗ ಕುಟುಂಬ ಹಾಗೂ ನೌಕರಿ ಈ ಎರಡರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳಷ್ಟು ಮಟ್ಟಿಗೆ ಸುಲಭವಾಗಿದೆ. ಇದರ ಮುಖ್ಯ ಕಾರಣ ಇಂದಿನ ತಂತ್ರಜ್ಞಾನವಾಗಿದೆ. ಮೊಬೈಲ್ ಆ್ಯಪ್ಗಳಿಂದಾಗಿ ಹಲವು ಬಗೆಯ ಪಾವತಿ ಕುಳಿತಲ್ಲೇ ಸಾಧ್ಯವಾಗಿದೆ. ಗಂಡ ಹೆಂಡತಿ ಸಮಭಾವದಿಂದ ಹೋದರೆ ಯಾವುದೇ ವಿವಾದ ಉದ್ಭವಿಸದು. ಸೌಮ್ಯಾ, ಇಮೇಜ್ ಕನ್ಸಲ್ಟೆಂಟ್
ಸರಿಯಾದ ಹೊಂದಾಣಿಕೆಗೆ ಕಿವಿಮಾತು
– ನಿಮ್ಮ ಹೆಂಡತಿಯ ಬಗ್ಗೆ ಹೊಗಳಿಕೆ ಮಾತುಗಳು ಕೇಳಿ ಬರುತ್ತಿದ್ದರೆ, ಆ ಬಗ್ಗೆ ಅಸೂಯೆ ಪಟ್ಟುಕೊಳ್ಳದೆ ಹೆಮ್ಮೆ ಪಟ್ಟುಕೊಳ್ಳಿ.
– ಹೆಂಡತಿಯ ಬಗ್ಗೆ ಯಾವುದೇ ಕ್ರೋಧದ ಭಾವನೆ ಇಟ್ಟುಕೊಳ್ಳಬೇಡಿ. ಅವಳು ನಿಮ್ಮ ಸಂಗಾತಿ ಹೊರತು ಪ್ರತಿಸ್ಪರ್ಧಿ ಅಲ್ಲ.
– ಹೆಂಡತಿಯ ಹೆಚ್ಚುತ್ತಿರುವ ಸಾಮಾಜಿಕ ವ್ಯಾಪ್ತಿಯನ್ನು ಸ್ವೀಕರಿಸಿ. ಅವಳು ತಡವಾಗಿ ಬರುತ್ತಾಳೆ ಎನ್ನುವುದನ್ನೇ ದೊಡ್ಡ ವಿಷಯ ಮಾಡಬೇಡಿ.
– ಹೆಂಡತಿಯ ಚಾರಿತ್ರ್ಯದ ಬಗ್ಗೆ ವೃಥಾ ಕಲ್ಪನೆ ಮಾಡಿಕೊಳ್ಳಬೇಡಿ. ಅವಳು ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡುವುದು ಕೆಲಸದ ವಿಷಯದಲ್ಲಿ. ಅವಳ ಬಗ್ಗೆ ಆರೋಪ ಮಾಡುವುದು ಸರಿಯಾದುದಲ್ಲ.
– ಹೆಂಡತಿಯ ಗಳಿಕೆಯ ಬಗ್ಗೆ ಹಕ್ಕು ಸಾಧಿಸಬೇಡಿ. ಹೆಚ್ಚಿನ ವಿವಾದಗಳು ಇಲ್ಲಿಂದಲೇ ಶುರುವಾಗುತ್ತವೆ.
– ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಮಾಡಿದ ಪೋಸ್ಟ್ ಗಳಿಗೆ ಕಮೆಂಟ್ ಕೊಟ್ಟವರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬೇಡಿ.
– ಹೆಂಡತಿ ಯಾರದ್ದಾದರೂ ಪಾರ್ಟಿಗೆ ಹೋದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.
– ಮಕ್ಕಳು ಹಾಗೂ ಮನೆಯ ಜವಾಬ್ದಾರಿ ಕುರಿತಂತೆ ಹೆಂಡತಿಗೆ ನಿಮ್ಮ ಸಹಕಾರ ಕೊಡಿ.