ನಾನು ಮೈಸೂರಿನ ನಮ್ಮ ಚಿಕ್ಕಪ್ಪನ ಮಗನ ಮದುವೆಗೆ ಹೊರಡಬೇಕಿತ್ತು. ನವ ವಧೂವರರಿಗಾಗಿ ಯಾವ ಉಡುಗೊರೆ ಕೊಳ್ಳಬೇಕೆಂಬ ಗೊಂದಲದಲ್ಲಿ ನಾನು ಏನೂ ಕೊಂಡಿರಲಿಲ್ಲ. ಆಗ ನನಗೆ ನನ್ನ ಹೈಸ್ಕೂಲ್ ಗೆಳತಿ ಸುಮತಿ ನೆನಪಾದಳು. ಹೇಗೋ ಅವಳ ನಂಬರ್ ಪಡೆದು ಅವಳಿಗೆ ಫೋನ್ ಮಾಡಿದೆ.
ಅವರದ್ದೊಂದು ಕೃತಕ ಒಡವೆಗಳ ಅಂಗಡಿ ಇತ್ತು. ವಧುವಿಗೆ ಫಳಫಳ ಹೊಳೆವ ನೆಕ್ಲೇಸ್, ವರನಿಗೆ ಉಂಗುರ ಖರೀದಿಸಲು ನಿರ್ಧರಿಸಿದೆ. ಎರಡೂ ಸೇರಿ 10 ಸಾವಿರ, ಎಂದಾಗ ಅವಳ ಖಾತೆಗೆ ಹಣ ವರ್ಗಾಯಿಸಿ, ಮದುವೆಗೆ ಉಡುಗೊರೆ ಪ್ಯಾಕ್ ಮಾಡಿ ತರಲು ಹೇಳಿದೆ. ಸುಯೋಗವೆಂಬಂತೆ ಅವಳು ಹುಡುಗಿ ಕಡೆಯ ದೂರದ ನೆಂಟರು. ಹೀಗಾಗಿ ಅದೇ ಮದುವೆಗೆ ಬರುವವಳಿದ್ದಳು. ಜೊತೆಗೆ ನನ್ನ ಉಡುಗೊರೆಯನ್ನೂ ಪ್ಯಾಕ್ ಮಾಡಿ ತಂದಿದ್ದಳು.
ಅಂತೂ ರೈಲ್ವೆ ಸ್ಟೇಷನ್ನಿನಲ್ಲಿ ಇಬ್ಬರೂ ಭೇಟಿಯಾಗಿ ಮೈಸೂರು ತಲುಪಿದಾಗ ಸಮಯ ಹೋದದ್ದೇ ತಿಳಿಯಲಿಲ್ಲ. ನಾವು ನೇರ ಚಿಕ್ಕಪ್ಪನ ಮನೆಯಲ್ಲಿ ಇಳಿದುಕೊಂಡು, ಸಂಜೆ ಛತ್ರ ತಲುಪುವಷ್ಟರಲ್ಲಿ ವರಪೂಜೆ ಸಮಾರಂಭ ಆರಂಭವಾಗಿತ್ತು. ಎಲ್ಲ ಚೆನ್ನಾಗಿ ನಡೆಯುತ್ತಿದ್ದರೂ ವಾತಾವರಣ ಬಹಳ ಬಿಗಿಯಾಗಿತ್ತು. ಅಲ್ಲಿ ಕೃತಕ ಗಾಂಭೀರ್ಯದ ವಾತಾವರಣ ಹರಡಿತ್ತು. ಏನೆಂದು ವಿಚಾರಿಸಿದಾಗ, ಚಿಕ್ಕಪ್ಪ-ಚಿಕ್ಕಮ್ಮನ ನಡುವೆ ಪರಸ್ಪರರ ಬಂಧುಗಳನ್ನು ಕರೆಯುವ ವಿಷಯದಲ್ಲಿ ತುಸು ಜಗಳ ನಡೆದಿದೆ ಎಂದು ಗೊತ್ತಾಯಿತು. ಅಂತೂ ಮದುವೆ ಕಲಾಪ ಮುಂದಿಟ್ಟಿತು.
ನನ್ನ ಗೆಳತಿ ಸುಮತಿ ಉಡುಗೊರೆ ಸೆಟ್ ನನಗೆ ಕೊಟ್ಟಳು. ಅವಳ ಇನ್ನಿತರ ಸಂಗ್ರಹದಲ್ಲಿ 4 ಎಳೆಯ ಮಾಂಗಲ್ಯದ ಕರಿಮಣಿ ಸರ ನನಗೆ ಇಷ್ಟವಾಯಿತು. ಕೂಡಲೇ ಅದನ್ನೂ ಕೊಂಡುಕೊಂಡೆ, ಮಾರನೇ ದಿನ ಮುಹೂರ್ತಕ್ಕೆ ಧರಿಸಲು ನಿರ್ಧರಿಸಿದೆ. ನನ್ನ ಚಿಕ್ಕಪ್ಪನ ಮಗಳು ರಾಧಾ, ವರನ ತಂಗಿಗೆ ತುಸು ಅಸೂಯೆಯ ಸ್ವಭಾವ. ನಮ್ಮ ಕಸಿನ್ಸ್ ಯಾರೇನು ಕೊಂಡರೂ ಕೂಡಲೇ ತಾನೂ ಅದನ್ನೇ ಕೊಳ್ಳಬೇಕೆಂದು ಹಠ ಹಿಡಿಯುತ್ತಿದ್ದಳು. ನಾನೇನೋ ನಕಲಿ ಒಡವೆ ಕೊಂಡೆನೆಂದೂ, ಅಂಥದ್ದನ್ನೇ ತಾನೂ ಕೊಳ್ಳಬೇಕೆಂದೂ ನನ್ನ ಗೆಳತಿಗೆ ದುಂಬಾಲು ಬಿದ್ದಳು. ಸುಮತಿ ಅವಳಿಗೆ ಸಮಾಧಾನ ಹೇಳಿ, ಬೇರೇನಾದರೂ ಕೊಳ್ಳಲು ಒತ್ತಾಯಿಸಿದಳು. ಇಲ್ಲ, ತನಗೆ ಅದೇ ತರಹದ್ದು ಬೇಕೆಂದು ರಾಧಾ ಎಲ್ಲರ ಮುಂದೆ ಹಠ ಹಿಡಿದು ತುಸು ಅಬ್ಬರ ಮಾಡಿದಳು. ಆಗ ಸುಮತಿ ತನ್ನ ಬ್ರೀಫ್‌ಕೇಸ್‌ನಿಂದ ನಾನು ಕೊಂಡಿದ್ದ ರೆಡಿಮೇಡ್ ಕೃತಕ ಮಾಂಗಲ್ಯ ಸರ ತೋರಿಸುತ್ತಾ, ನೀನೂ ಇದೇ ಕೊಂಡು ಹಾಕಿಕೊಳ್ತೀಯಾ? ಎಂದಾಗ ಅಲ್ಲಿದ್ದ ಎಲ್ಲರೂ ಅದನ್ನು ಕಂಡು ಜೋರಾಗಿ ನಕ್ಕರು. ರಾಧಾ ನಾಚಿಕೆಯಿಂದ ತಲೆ ತಗ್ಗಿಸಿ ಒಳಗೆ ಓಡಿಹೋದಳು.
ಅಷ್ಟು ಹೊತ್ತೂ ಕೃತಕ ಗಾಂಭೀರ್ಯದ ತೆರೆ ಹೊಂದಿದ್ದ ನೆಂಟರಿಷ್ಟರು ಆಗ ಮನಬಿಚ್ಚಿ ಜೋರಾಗಿ ನಗುತ್ತಾ, ಮದುವೆ ಮನೆಗೆ ಸಹಜ ಕಳೆ ತಂದರು. ವರನ ಜೊತೆ ಚಿಕ್ಕಮ್ಮ, ಚಿಕ್ಕಪ್ಪ ಸಹ ನನಗೆ ಥ್ಯಾಂಕ್ಸ್ ಹೇಳಿದಾಗ ನಾನು ಸಂಕೋಚಗೊಂಡೆ.
– ಶ್ಯಾಮಲಾ ದಾಮ್ಲೆ, ಸಾಗರ.