ಇದು ನನ್ನ ಹಿರಿಯ ಸೋದರಮಾವನ ಮಗಳ ಮದುವೆಯಲ್ಲಿ ನಡೆದ ಘಟನೆ. ಮುಹೂರ್ತಕ್ಕೆ ಹೊಂದುವಂಥ ಅನುಕೂಲಕರ ಛತ್ರ ಸಿಗದ ಕಾರಣ ಬೆಂಗಳೂರು ನಗರದ ಭಾರೀ ದುಬಾರಿ ಹೋಟೆಲ್ ಒಂರಲ್ಲಿ ಮದುವೆ ಏರ್ಪಡಿಸಿದ್ದರು.
ಧಾರೆಯ ಹಿಂದಿನ ದಿನ ಸಂಜೆಯ ವರಪೂಜೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ದಿಬ್ಬಣ ಮಂಗಳೂರಿನಿಂದ ಬರಬೇಕಿತ್ತು. ಮಧ್ಯದಲ್ಲಿ ಏನೋ ಟ್ರಾಫಿಕ್ ಸಮಸ್ಯೆಯಿಂದಾಗಿ ಅವರು ಬರುವುದೇ 9 ಗಂಟೆಗೆ ಎಂದಾಗಿ ಹೋಯಿತು.
ಅಷ್ಟರಲ್ಲಿ ಹುಡುಗಿ ಕಡೆ ಬಂದಿದ್ದ ನೆಂಟರಲ್ಲಿ ಕೆಲವರು ರಾತ್ರಿ ತಡವಾಗಿ ಮನೆಗೆ ಹಿಂದಿರುಗಲಾಗದು ಎಂದು ಊಟ ಮಾಡಿ ಹೊರಡತೊಡಗಿದರು. ನೆಂಟರ ಪೈಕಿ ಕಾರ್ಡ್ಸ್ ಆಡುವ ಪುಂಡರ ಗ್ಯಾಂಗ್ ಇದ್ದೇ ಇತ್ತು. ಹೇಗೂ ವರ ಬರುವುದು ತಡ ಎಂದು, ಡ್ರಿಂಕ್ಸ್ ಸ್ವೀಕರಿಸುತ್ತಾ ಆಟ ರಂಗೇರಿತು. ಈ ಮಧ್ಯೆ ಹುಡುಗಿಯ ದೊಡ್ಡಪ್ಪನ ಮಗನಿಗೂ, ಹುಡುಗಿಯ ಅಣ್ಣನಿಗೂ ಕುಡಿದ ಮತ್ತಿನಲ್ಲಿ ಕಾರ್ಡ್ಸ್ ಆಟಕ್ಕೆ ಮೋಸ ಆಯಿತೆಂದು ಜಗಳ ಹತ್ತಿಕೊಂಡಿತು. ಕೈಕೈ ಮಿಲಾಯಿಸಿ ರಂಪಾಟ ಹೆಚ್ಚಾಗಿ, ಆತ ಹುಡುಗಿ ಅಣ್ಣನಿಗೆ ಶೂಟ್ ಮಾಡಿದ್ದೂ ಆಯ್ತು! ಪುಣ್ಯಕ್ಕೆ ಅದು ಅಪಾಯಕ್ಕೆ ತಿರುಗದೆ ಹೇಗೋ ತಪ್ಪಿತು. ಆಗ ಹಿರಿಯರು ಮಧ್ಯೆ ಪ್ರವೇಶಿಸಿ ಅವರಿಗೆ ಬುದ್ಧಿ ಹೇಳಿ ಪರಿಸ್ಥಿತಿ ತಹಬಂದಿಗೆ ತಂದರು.
ಅಷ್ಟರಲ್ಲಿ ಗುಂಡಿನ ಚಕಮಕಿ ಹೋಟೆಲ್ ಸಿಬ್ಬಂದಿಗೆ ಗೊತ್ತಾಗಿ, ಇಂಥ ರಾದ್ಧಾಂತದಿಂದ ಗುಂಡು, ಕೊಲೆ ನಡೆದರೆ ಹೋಟೆಲ್‌ಗೆ ಅಪಖ್ಯಾತಿ ಎಂದು ಮದುವೆ ಅಲ್ಲಿ ನಡೆಸಲೇಬಾರದು ಹೊರಡಿ ಎಂದು ಬಾಡಿಗೆ ಹಣ ವಾಪಸ್ ಮಾಡಲು ಮುಂದಾದರು.
ದಿಬ್ಬಣ ಬರುವ ಹೊತ್ತಾಗುತ್ತಿದೆ, ಬೀಗರ ಮುಂದೆ ಅವಮಾನ, ಆ ಕ್ಷಣದಲ್ಲಿ ಇಡೀ ಮದುವೆಯನ್ನು ಇನ್ನೊಂದು ಕಡೆ ಶಿಫ್ಟ್ ಮಾಡಲಾಗದು ಎಂದು ಪರಿಪರಿಯಾಗಿ ಕೇಳಿಕೊಂಡರೂ ಒಪ್ಪಲಿಲ್ಲ.
ಆಗ ವಧುವಿನ ತಾಯಿ, ``ನಿಮ್ಮ ಸ್ವಂತ ಮಗಳಿಗೇ ಇದೇ ಹೋಟೆಲ್‌ನಲ್ಲಿ ಹೀಗಾಗಿದ್ದರೆ ಮದುವೆ ಕ್ಯಾನ್ಸಲ್ ಮಾಡಿಸುತ್ತಿದ್ದೀರಾ? ಒಂದು ಹುಡುಗಿಯ ಕನ್ಯಾದಾನ ಸುಸೂತ್ರವಾಗಿ ನಡೆಯಲು ಸಹಕರಿಸಿ....'' ಎಂದು ರೋಧಿಸುತ್ತಾ ಅವರ ಕಾಲಿಗೆ ಬಿದ್ದಾಗ, ಮ್ಯಾನೇಜರ್ ಮಹಾಶಯರು ಒಪ್ಪಿದರು. ಅಂತೂ ಎಲ್ಲರೂ ನಗುವಿನ ಮುಖವಾಡ ಧರಿಸಿ, ದಿಬ್ಬಣ ಎದುರುಗೊಂಡು, ಬೀಗರಿಗೆ ವಿಷಯ ತಿಳಿಯದಂತೆ ನಿಭಾಯಿಸಿದರು. ಆ ಘಟನೆಯಿಂದ ಎಲ್ಲರಿಗೂ ಜಂಘಾಬಲವೇ ಉಡುಗಿಹೋಗಿತ್ತು. ಮದುವೆಯಂಥ ಶುಭ ಕಾರ್ಯಗಳಲ್ಲಿ ಡ್ರಿಂಕ್ಸ್, ಕಾರ್ಡ್ಸ್ ಗೆ ಅವಕಾಶ ಮಾಡಿಕೊಡುವ ಅಗತ್ಯ ಇದೆಯೇ? ಅಂಥವರನ್ನು ಮದುವೆಗೆ ಕರೆಯುವ ಅಗತ್ಯವಿದೆಯೇ?
- ಆರ್. ದೀಪಿಕಾ, ಬೆಂಗಳೂರು.
ಇದು ನನ್ನ ಅಕ್ಕನ ಮದುವೆಯಲ್ಲಿ ನಡೆದ ಪ್ರಸಂಗ. ನಾವಿಬ್ಬರೂ ಅವಳಿ ಮಕ್ಕಳು. ಅಕ್ಕನಿಗಿಂತ ನಾನು 2 ನಿಮಿಷ ಚಿಕ್ಕವಳು. ಮದುವೆಗೆ 2 ತಿಂಗಳಿದೆ ಎನ್ನುವಾಗ ಅಮ್ಮನಿಗೆ ಹೃದಯಾಘಾತವಾಗಿ ಉಳಿಯುವುದೇ ಹೆಚ್ಚಾಯಿತು. ಮದುವೆ ಮುಂದೂಡೋಣ ಎಂದರೆ, ಅಮ್ಮ ಒಪ್ಪಲಿಲ್ಲ. ಆದರೆ ಆಕೆಗೆ ಯಾವ ಕೆಲಸವನ್ನೂ ನಿಭಾಯಿಸಲು ಆಗುತ್ತಿರಲಿಲ್ಲ.
ಆಗ ನಾನೇ ಮುಂದೆ ನಿಂತು ಅಮ್ಮ ಮಾಡಬೇಕಾದ ಎಲ್ಲಾ ಕೆಲಸಗಳ ಜವಾಬ್ದಾರಿ ಹೊತ್ತುಕೊಂಡೆ. ಅಪ್ಪನ ಜೊತೆ ಹೋಗಿ ನೆಂಟರಿಷ್ಟರನ್ನೆಲ್ಲ ಕರೆದುಬಂದದ್ದೂ ಆಯ್ತು. ಹೀಗೆ ಪ್ರತಿ ಕೆಲಸದ ಸಂದರ್ಭದಲ್ಲೂ, ``ಇರೀ ನಾನೇ ಮಾಡ್ತೀನಿ.... ಅಷ್ಟೇ ತಾನೇ....'' ಎನ್ನುತ್ತಾ ನಾನು ಮುಗುಳ್ನಗುತ್ತಿದ್ದೆ. ಯಾವ ತೊಂದರೆ ಇಲ್ಲದೆ ಆ ಕೆಲಸ ಯಶಸ್ವಿಯಾಗಿ ಪೂರೈಸುತ್ತಿದ್ದೆ.