ನಾನು 19 ವರ್ಷದ ಕಾಲೇಜು ಕನ್ಯೆ. ನನ್ನ ಮುಖ್ಯ ಸಮಸ್ಯೆ ಎಂದರೆ, ನನ್ನ ಮುಖದಲ್ಲಿ ಅಲ್ಲಲ್ಲಿ ಬೇಡದ ಕೂದಲು ಕಾಣುತ್ತಿದೆ. ಇದರ ಕಾರಣ ನನ್ನ ಮುಖ ಬಹಳ ಕೆಟ್ಟದಾಗಿ ಕಾಣುತ್ತಿದೆ. ದಯವಿಟ್ಟು ನನ್ನ ಈ ಅನಗತ್ಯ ಕೂದಲು ಸಮಸ್ಯೆ ನಿವಾರಿಸಿ.
ಮುಖದಲ್ಲಿ ಅನಗತ್ಯ ಕೂದಲು ಕಾಣಿಸಿಕೊಳ್ಳಲು ಕಾರಣ ಹಾರ್ಮೋನ್ ಇಂಬ್ಯಾಲೆನ್ಸ್ ಇರಬಹುದು. ನೀವು ಇದನ್ನು ಅಗತ್ಯವಾಗಿ ಬ್ಲೀಚಿಂಗ್, ವ್ಯಾಕ್ಸಿಂಗ್, ಲೇಸರ್ ಟ್ರೀಟ್‌ಮೆಂಟ್ ಯಾ ಹೇರ್ ರಿಮೂವಲ್ ಕ್ರೀಂ ಬಳಸಿ ದೂರ ಮಾಡಬಹುದು. ಆದರೆ ಈ ಎಲ್ಲಾ ವಿಧಾನಗಳಿಂದ ಕೆಲವು ಸೈಡ್ ಎಫೆಕ್ಟ್ಸ್ ತಪ್ಪಿದ್ದಲ್ಲ. ಆದ್ದರಿಂದ ನೀವು ಮದಲು ಮನೆಮದ್ದಾಗಿ ಅರಿಶಿನದ ಪೇಸ್ಟ್ ಮಾಡಿ ಮುಖಕ್ಕೆ ಮಾಸ್ಕ್ ಹಚ್ಚಿಕೊಳ್ಳಿ. 1 ಗಂಟೆ ಬಿಟ್ಟು ಚೆನ್ನಾಗಿ ಒಣಗಿದೆ ಎಂದು ಖಾತ್ರಿಪಡಿಸಿಕೊಂಡು ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ಸತತ 4-5 ವಾರ ಮಾಡಿ ಕ್ರಮೇಣ ಕೂದಲಿನ ಬಣ್ಣ ಕಳೆದು ತಂತಾನೇ ಅದು ಉದುರುತ್ತದೆ. ಇದೇ ತರಹ 2 ಚಮಚ ಗೋಧಿಹಿಟ್ಟಿಗೆ, 1 ಚಮಚ ಅರಿಶಿನ, 2-3 ಚಮಚ ಹಾಲು ಬೆರೆಸಿ ಸಹ ಫೇಸ್ ಮಾಸ್ಕ್ ಮಾಡಿಕೊಳ್ಳಬಹುದು. ಇಲ್ಲವೇ ನೀವು ತುಸು ಬಿಸಿ ನೀರು ಬಳಸುವುದು ಲೇಸು. ಇದರಿಂದ ಇಂಥ ಅನಗತ್ಯ ಕೂದಲು ಕ್ರಮೇಣ ಕಡಿಮೆಯಾಗುತ್ತಾ, ಮರೆಯಾಗುತ್ತದೆ.
ನಾನು 21 ವರ್ಷದ ಯುವತಿ. ನನ್ನ ಸಮಸ್ಯೆ ಎಂದರೆ ಈ ವಯಸ್ಸಿಗೇ ನನ್ನ ಕಂಗಳ ಕೆಳಗೆ ಡಾರ್ಕ್ ಸರ್ಕಲ್ಸ್ ಮೂಡುತ್ತಿವೆ. ಜೊತೆಗೆ ನನಗೆ ಕೂದಲು ಸಹ ಹೆಚ್ಚು ಉದುರುತ್ತಿದೆ. ಈ ಎರಡೂ ಸಮಸ್ಯೆಗಳಿಂದ ಪಾರಾಗುವ ದಾರಿ ತೋರಿಸಿ.
ನಿದ್ದೆ ಪೂರ್ತಿ ಆಗದೆ ಹೋದರೆ ಹಾಗೂ ಅತ್ಯಧಿಕ ಮಾನಸಿಕ ಒತ್ತಡ (ಸ್ಟ್ರೆಸ್)ದ ಕಾರಣ ಹೀಗೆ ಡಾರ್ಕ್ ಸರ್ಕಲ್ಸ್ ಆಗುತ್ತವೆ. ಜೊತೆಗೆ ಕಂಪ್ಯೂಟರ್ ಎದುರು, ಸದಾ ಮೊಬೈಲ್ ಫೋನ್ ಬಳಸುತ್ತಾ ಇರುವುದರಿಂದ ಹೀಗಾಗುತ್ತದೆ. ಇದನ್ನು ದೂರಗೊಳಿಸಲು, ಮಲಗುವ ಮುನ್ನ ಕಂಗಳ ಕೆಳಗೆ ಬಾದಾಮಿ ಎಣ್ಣೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಜೊತೆಗೆ ನೀವು ಕಾಸ್ಮೆಟಿಕ್ಸ್ ಅಂಗಡಿಯಲ್ಲಿ ದೊರಕುವ ಅಂಡರ್ ಐ ಕ್ರೀಂ ಮತ್ತು ಅಂಡರ್ ಐ ಪ್ಯಾಕ್ ಸಹ ಬಳಸಬೇಕು.
ಕೂದಲು ಉದುರುವಿಕೆಯ ಸಮಸ್ಯೆಗೆ ನೀವು ಸದಾ ಪೌಷ್ಟಿಕ ಹಾಗೂ ಬ್ಯಾಲೆನ್ಸ್ಡ್ ಆಹಾರವನ್ನೇ ಸೇವಿಸಬೇಕು. ಜೊತೆಗೆ ಕೊಬ್ಬರಿ ಎಣ್ಣೆಗೆ ಹಿಪ್ಪೆ (ಆಲಿವ್ ಆಯಿಲ್) ಎಣ್ಣೆ ಬೆರೆಸಿ, ಅದನ್ನು ನೆತ್ತಿಗೆ ಚೆನ್ನಾಗಿ ತಿಕ್ಕಬೇಕು. ಇದರಿಂದ ತಲೆಯ ಭಾಗದಲ್ಲಿ ರಕ್ತ ಸಂಚಲನೆ ತೀವ್ರವಾಗುತ್ತದೆ.
ನಾನು 16ರ ಹರೆಯದ ಹುಡುಗಿ. ನನ್ನ ಸಮಸ್ಯೆ ಎಂದರೆ ನನ್ನ ಮುಖದಲ್ಲಿ ಇತ್ತೀಚೆಗೆ ಮೊಡವೆಗಳು ಹೆಚ್ಚಾಗಿವೆ. ಮುಖದ ಬಣ್ಣ ತುಸು ಕಪ್ಪಾಗಿದೆ. ದಯವಿಟ್ಟು ನನ್ನ ಮುಖ ತಿಳಿಯಾಗಿ ತಿರುಗುಂತೆ, ಅದರಲ್ಲಿ ಕಾಂತಿ ಉಕ್ಕುವಂತೆ ಮಾಡಲು ಏನಾದರೂ ಸಲಹೆ ನೀಡಿ.
ಮುಖದಲ್ಲಿ ಮೊಡವೆ ಮೂಡಲು ಕಾರಣ, ಪರಿಸರ ಮಾಲಿನ್ಯ ಮಾತ್ರ ಆಗಿರದೆ ಆಹಾರದಲ್ಲಿ ಅಪಥ್ಯ ಮತ್ತು ಹಾರ್ಮೋನ್‌ಬದಲಾವಣೆ ಆಗಿದೆ. ಮುಖದಲ್ಲಿನ ಮೊಡವೆ ತೊಲಗಿಸಬೇಕೇ? ಇದಕ್ಕಾಗಿ ಒಂದಿಷ್ಟು ಮೆಂತೆಸೊಪ್ಪನ್ನು ಹಸಿಯಾಗಿ ಅರೆದು, ಮುಖಕ್ಕೆ ಪೇಸ್ಟ್ ಹಚ್ಚಿರಿ. ಮೆಂತೆಸೊಪ್ಪು ಸಿಗದಿದ್ದರೆ, ಮೆಂತೆ ಹಿಟ್ಟು ಬಳಸಿ ಪೇಸ್ಟ್ ಮಾಡಿ. ಇದೂ ರೆಡಿಮೇಡ್ ಸಿಗದಿದ್ದರೆ ಮನೆಯಲ್ಲೇ ಮೆಂತ್ಯ ನೆನೆಹಾಕಿ ತುಸು ನೀರಲ್ಲಿ ಬೆರೆಸಿ ತಿರುವಿಕೊಂಡು ಆ ಪೇಸ್ಟನ್ನು ಮುಖಕ್ಕೆ ಹಚ್ಚಿರಿ. ಹೀಗೆ ಹಚ್ಚಿದ 15-20 ನಿಮಿಷ ಬಿಟ್ಟು ಅದು ಒಣಗಿದಂತೆ, ತಣ್ಣೀರಿನಿಂದ ಮುಖ ತೊಳೆಯಿರಿ. ಜೊತೆಗೆ ಮೊಡವೆಗಳು ಇರುವ ಕಡೆ ನಿಂಬೆರಸ ಸವರಬೇಕು.