ಕಳೆದ ವರ್ಷ ಮಾರ್ಚ್‌ನಲ್ಲಿ `ಮೆಟರ್ನಿಟಿ ಬೆನಿಫಿಟ್ಸ್’ ಅಂದರೆ `ಹೆರಿಗೆ ರಜೆ ಮಸೂದೆ’ ಅಂಗೀಕಾರಗೊಂಡಾಗ ಮಹಿಳೆಯರು ಆ ನಿರ್ಧಾರವನ್ನು ಸ್ವಾಗತಿಸಿದ್ದರು. ಆದರೆ ಕೆಲವು ತಿಂಗಳುಗಳ ಹಿಂದೆ `ಎಂಪ್ಲಾಯ್‌ಮೆಂಟ್ ಸರ್ವೀಸಸ್ ಕಂಪನಿ ಟೀಮ್ ಲೀಸ್’ ನಡೆಸಿದ ಒಂದು ಸಮೀಕ್ಷೆಯಿಂದ ತಿಳಿದು ಬಂದ ಸಂಗತಿಯೆಂದರೆ, ಸರ್ಕಾರದ ಈ ನಿರ್ಧಾರದಿಂದ ಮಹಿಳೆಯರ ತೊಂದರೆ ಕಡಿಮೆ ಮಾಡುವ ಬದಲಿಗೆ ಅವರ ತೊಂದರೆಯನ್ನು ಹೆಚ್ಚಿಸಬಹುದು ಎನ್ನಲಾಗಿದೆ. ಅಂದಹಾಗೆ, ಈ ಕಾನೂನು ರೂಪುಗೊಂಡ ಬಳಿಕ ಚಿಕ್ಕ ಹಾಗೂ ಮಧ್ಯಮ ಕಂಪನಿಗಳು ಹುಡುಗಿಯರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುತ್ತಿವೆ. 6 ತಿಂಗಳ ಕಾಲ ಒಬ್ಬ ಉದ್ಯೋಗಿಗೆ ಕೆಲಸವಿಲ್ಲದೆ ವೇತನ ನೀಡುವುದು ಒಂದು ದೊಡ್ಡ ಸವಾಲೇ ಹೌದು. ಅಷ್ಟು ದೀರ್ಘಾವಧಿಯತನಕ ಕೆಲಸದ ಮೇಲೂ ಪರಿಣಾಮ ಉಂಟಾಗುತ್ತದೆ. ಕಂಪನಿ ಆ ಉದ್ಯೋಗಿಯ ಬದಲಿಗೆ ಬೇರೊಬ್ಬ ಉದ್ಯೋಗಿಯನ್ನು ನೇಮಕ ಮಾಡಿಕೊಳ್ಳಬೇಕಾಗಬಹುದು. ಇಂತಹದರಲ್ಲಿ ಆ ಕೆಲಸಕ್ಕಾಗಿ ದ್ವಿಗುಣ ಸಂಬಳದ ಹೊರೆಯನ್ನು ಹೊತ್ತುಕೊಳ್ಳಬೇಕಾಗಿ ಬರುತ್ತದೆ. ಒಂದು ವೇಳೆ ಮಹಿಳೆಯ ಆ ಮಹತ್ವದ ಕೆಲಸವನ್ನು ಹೊಸ ಉದ್ಯೋಗಿಗೆ ವಹಿಸದಿದ್ದರೂ, ಈಗಿರುವ ಯಾರಿಗಾದರೂ ಅದನ್ನು ವಹಿಸಿಕೊಡಬೇಕಾಗಿ ಬರುತ್ತದೆ.
ಟೀಮ್ ಲೀಸ್ ಮುಖಾಂತರ 350 ಸ್ಟಾರ್ಟ್ ಅಪ್ಸ್ ಹಾಗೂ ಉದ್ಯೋಗಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಕಂಡುಕೊಂಡಂತೆ, ಶೇ.26ರಷ್ಟು ಕಂಪನಿಗಳು 6 ತಿಂಗಳು ಮೆಟರ್ನಿಟಿ ಲೀವ್‌ನ ಖರ್ಚನ್ನು ಗಮನದಲ್ಲಿಟ್ಟುಕೊಂಡು ಪುರುಷ ಉದ್ಯೋಗಿಗಳಿಗೆ ಆದ್ಯತೆ ಕೊಡಲು ನಿರ್ಧರಿಸಿದೆ.
ಸರ್ವೆಯಲ್ಲಿ ಪಾಲ್ಗೊಂಡ ಶೇ.40ರಷ್ಟು ಕಂಪನಿಗಳು ತಾವು ಮಹಿಳೆಯರನ್ನೇನೊ ನೇಮಿಸಿಕೊಳ್ಳುತ್ತೇವೆ. ಆದರೆ ಅವರಲ್ಲಿ ಅಷ್ಟು ಸಾಮರ್ಥ್ಯ ಇದೆಯಾ ಎಂದು ಕಂಡುಕೊಂಡು ನೇಮಿಸಿಕೊಳ್ಳುತ್ತೇವೆ ಎಂದು ಹೇಳಿದರು. ಆದರೆ ಶೇ.22ರಷ್ಟು ಕಂಪನಿಗಳು ಸರ್ಕಾರದ ಹೆರಿಗೆ ರಜೆಗಳ ವಿಸ್ತರಣೆ ತಮ್ಮ ನೇಮಕಾತಿಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದವು.
ಸಮೀಕ್ಷೆಯಲ್ಲಿ ಪಾಲ್ಗೊಂಡ ಕಂಪನಿಗಳು ಹಾಗೂ ಸಂಘಟನೆಗಳಲ್ಲಿ ಶೇ.39ರಷ್ಟು ಸರ್ಕಾರದ ಈ ನಿರ್ಧಾರದಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಹೇಳಿದವು. ಆದರೆ ಶೇ.35ರಷ್ಟು ಕಂಪನಿಗಳ ಪ್ರಕಾರ, 6 ತಿಂಗಳ ಹೆರಿಗೆ ರಜೆಯಿಂದ ಖರ್ಚು ಹಾಗೂ ಲಾಭ ಎರಡರ ಮೇಲೂ ಪರಿಣಾಮ ಉಂಟಾಗುತ್ತದೆ. ಶೇ.10ರಷ್ಟು ಜನರ ಪ್ರಕಾರ, ಈ ನಿರ್ಧಾರದಿಂದ ಯಾವುದೇ ಪ್ರಭಾವ ಆಗದು.
ಈಗಾಗಲೇ ಉದ್ಯೋಗದಲ್ಲಿರುವ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆಯ ಲಾಭವಂತೂ ಆಗಿಯೇ ಆಗುತ್ತದೆ. ಆದರೆ ಹೊಸದಾಗಿ ಉದ್ಯೋಗ ಅರಸುವ ಹುಡುಗಿಯರಿಗೆ ಮಾತ್ರ ಇದು ಸಂಕಟಕರವಾಗಿ ಪರಿಣಮಿಸುವ ಸಾಧ್ಯತೆ ಇದೆ. ತಮ್ಮ ಸಾಮರ್ಥ್ಯ ತೋರಿಸಬಯಸುವ ಹುಡುಗಿಯರಿಗೆ ಸುಲಭವಾಗಿ ಉದ್ಯೋಗ ಸಿಗಬಹುದೆ? ಅವರ ಕನಸಿನ ರೆಕ್ಕೆಗಳಿಗೆ ಬಲ ಸಿಗಬಹುದೇ?
ಅಂದಹಾಗೆ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳುವ ಕುರಿತಂತೆ, ಇರುವ ಯಾವಾಗ ಬೇಕಾದರೂ ಗರ್ಭ ಧರಿಸಿ ರಜೆ ಪಡೆದು ಹೋಗಬಹುದು ಮುಂದೆ ಹೇಗೆ? ಎಂಬ ಚಿಂತೆ ಕಂಪನಿಗಳನ್ನು ಕಾಡದೇ ಇರುವುದಿಲ್ಲ.
ಮಹಿಳೆಯರು ಜಗತ್ತಿನಾದ್ಯಂತ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಆದರೆ ಈಗ ಹೆರಿಗೆ ರಜೆ 6 ತಿಂಗಳು ಆಗಿರುವುದು ಅವರ ಆರ್ಥಿಕ ಅಸುರಕ್ಷತೆ ಹಾಗೂ ನಿರೋದ್ಯೋಗಕ್ಕೂ ಕಾರಣವಾಗಬಹುದು.
ಹೆರಿಗೆ ರಜೆ ಏಕೆ ಬೇಕು?
ಮನೋತಜ್ಞೆ ಹಾಗೂ ಸಮಾಜ ಸುಧಾರಕಿ ಅಮೂಲ್ಯಾ ಮಹೇಶ್ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮಹಿಳೆಯೊಬ್ಬಳಿಗೆ ಹೆರಿಗೆಯಾದ ನಂತರದ 6 ತಿಂಗಳು ಅವಧಿ ಬಹಳ ಮಹತ್ವದ್ದಾಗಿರುತ್ತದೆ. ಅಷ್ಟೇ ಅಲ್ಲ, ಆ ಅವಧಿ ಅಷ್ಟೇ ಕ್ಲಿಷ್ಟಕರ ಕೂಡ. ಮಗು ಪರಿಪೂರ್ಣವಾಗಿ ತಾಯಿಯನ್ನಷ್ಟೇ ಅವಲಂಬಿಸಿರುತ್ತದೆ. ಇನ್ನೊಂದೆಡೆ ತಾಯಿ ಸಾಕಷ್ಟು ನಿಶ್ಶಕ್ತಳಾಗಿರುತ್ತಾಳೆ. ಆಕೆಗೆ ಹಲವು ಬಗೆಯ ತೊಂದರೆಗಳು ಇರಬಹುದು. ಅದರಲ್ಲೂ ವಿಶೇಷವಾಗಿ ಸಿಸೇರಿಯನ್ ಹೆರಿಗೆಯಾದ ಮಹಿಳೆಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ.
“ಉದ್ಯೋಗಸ್ಥ ಮಹಿಳೆ ಅತ್ಯಂತ ಕಡಿಮೆ ಸಮಯದಲ್ಲಿ ತನ್ನನ್ನು ತಾನು ಉದ್ಯೋಗಕ್ಕೆ ಮರಳಲು ಸನ್ನದ್ಧಗೊಳಿಸಿಕೊಳ್ಳಬೇಕಾಗುತ್ತದೆ. ತನ್ನ ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆ ಜೊತೆಗೆ ತಾನು ಆಫೀಸಿಗೆ ಹೊರಟುಹೋದರೆ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆಯೂ ಕಾಡುತ್ತಿರುತ್ತದೆ. 3 ತಿಂಗಳ ಬದಲಿಗೆ 6 ತಿಂಗಳ ರಜೆ ಸಿಕ್ಕರೆ ಮಹಿಳೆಗೆ ತನ್ನನ್ನು ತಾನು ವ್ಯವಸ್ಥಿತವಾಗಿಟ್ಟುಕೊಳ್ಳಲು ಹಾಗೂ ಮಗುವಿನ ಜೊತೆ ಸಮಯ ಕಳೆಯಲು ಹೆಚ್ಚಿನ ಅವಕಾಶ ಸಿಗುತ್ತದೆ.
”ಕಂಪನಿಯೊಂದರ ನಿರ್ದೇಶಕಿಯಾಗಿರುವ ವಿನುತಾ ಹೇಳುವುದೇನೆಂದರೆ, “ಪ್ರತಿಯೊಂದು ಕಂಪನಿಯೂ ತನ್ನ ಉದ್ಯೋಗಿಗಳಿಗೆ ಬೆಂಬಲ ಕೊಡಬೇಕು. ಮಹಿಳೆಯೊಬ್ಬಳು ತುಂಬಾ ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅವಳಿಗೂ ಕೂಡ ತನ್ನ ಮಾತೃತ್ವದ ಹಕ್ಕನ್ನು ಎಂಜಾಯ್ ಮಾಡಲು ಅವಕಾಶ ಸಿಗಬೇಕು. ಕೇವಲ ಕೆಲಸದ ಕಾರಣದಿಂದ, ಮಗು ಪಡೆಯುವ ಅವಳ ಅಭಿಲಾಷೆಯನ್ನು ವಂಚಿತಳಾಗಿಸುವುದು ಸರಿಯೇ?”
ಆಫೀಸಿನಲ್ಲಿ ಮಹಿಳೆಯರ ಉಪಸ್ಥಿತಿ
ಯಾವುದೇ ಒಂದು ಆಫೀಸಿನಲ್ಲಿ ಹುಡುಗಿಯರು ಹಾಗೂ ಮಹಿಳೆಯರ ಉಪಸ್ಥಿತಿ ಲಿಂಗ ಸಮಾನತೆಯ ದೃಷ್ಟಿಯಿಂದಷ್ಟೇ ಅಲ್ಲ, ಬೇರೆ ಕೆಲವು ಸಂಗತಿಗಳು ಅವರ ಮಹತ್ವವನ್ನು ಬಿಂಬಿಸುತ್ತವೆ :
ಮಹಿಳೆಯರು/ಹುಡುಗಿಯರ ಉಪಸ್ಥಿತಿಯಿಂದಾಗಿ ಆಫೀಸಿನ ವಾತಾವರಣದಲ್ಲಿ ಉಲ್ಲಾಸ ಮನೆ ಮಾಡುತ್ತದೆ. ಮಹಿಳೆಯರು ಹೆಚ್ಚು ಮಾತುಗಾರರು ಹಾಗೂ ಸಾಮಾಜಿಕ ಹಿನ್ನೆಲೆಯುಳ್ಳವರಾಗಿರುತ್ತಾರೆ. ಅವರ ಉಪಸ್ಥಿತಿ ಇರದೇ ಇದ್ದರೆ ಆಫೀಸಿನ ವಾತಾವರಣ ನೀರಸವಾಗುತ್ತದೆ. ಅವರಿಂದಾಗಿ ಆಫೀಸಿನಲ್ಲಿ ಒಂದು ರೀತಿಯ ಆರೋಗ್ಯಕರ ಸ್ಪರ್ಧೆಯ ವಾತಾವರಣ ಉಂಟಾಗುತ್ತದೆ.
ಕಂಪನಿಯ ಉನ್ನತಿಗಾಗಿ ಮಹಿಳೆಯರು ಬೇಕೇಬೇಕು. ಕೆಲವು ಕೆಲಸಗಳು ಹೇಗಿರುತ್ತವೆಂದರೆ, ಅವನ್ನು ಮಹಿಳೆಯರೇ ಹೆಚ್ಚು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಉದಾಹರಣೆಗೆ ಯಾರಾದರೂ ಗ್ರಾಹಕರಿಗೆ ಕರೆ ಮಾಡಿ, ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟಂತೆ ಅವರ ಒಪ್ಪಿಗೆ ಪಡೆಯಲು ಅನುಕೂಲವಾಗುತ್ತದೆ.
ಮಹಿಳೆಯರ ಕಾರಣದಿಂದ ಪ್ರೊಡಕ್ಷನ್ ಉತ್ತಮಗೊಳ್ಳುತ್ತದೆ. ಅವರು ಕೆಲಸದ ಬಗೆಗೆ ಹೆಚ್ಚು ಗಂಭೀರರವಾಗಿರುತ್ತಾರೆ. ಅವರು ಮೇಲ್ವಿಚಾರಣೆ ಅಥವಾ ಸೂಪರ್‌ವಿಷನ್‌ನ ಕೆಲಸವನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ.
ಏನು ಉಪಾಯ?
ಪೇಡ್ ಲೀವ್ ಹೊರೆಯೆಂದು ಭಾವಿಸುವ ಬದಲು ಕಂಪನಿಗಳು ಬೇರೆ ಉಪಾಯಗಳ ಬಗ್ಗೆ ಯೋಚಿಸಬೇಕು.
ಮನೆಯಿಂದ ಕೆಲಸ : ಉದ್ಯೋಗದಾತ ಕಂಪನಿಗೆ ಕೆಲಸದ ಬಗೆಗಷ್ಟೇ ಆಸಕ್ತಿಯಿರುತ್ತದೆ. ಒಂದು ವೇಳೆ ಮಹಿಳೆ 2-3 ತಿಂಗಳ ಬಳಿಕ ಕೆಲಸ ಮಾಡಲು ಅಪೇಕ್ಷಿಸಿದರೆ ಮಹಿಳೆ ಹಾಗೂ ಕಂಪನಿ ಇಬ್ಬರಿಗೂ ಲಾಭ. ಕಂಪನಿಗೆ ತನಗೆ ಆಗಬೇಕಿದ್ದ ಕೆಲಸ ಆಗುತ್ತದೆ. ಇನ್ನೊಂದೆಡೆ ಮಹಿಳೆಗೆ ಸ್ಪರ್ಧಾತ್ಮಕ ಓಟದಲ್ಲಿ ತಾನು ಹಿಂದುಳಿಯಬಹುದೆಂಬ ಆತಂಕ ಇರದು.
ಒಂದು ವೇಳೆ ಮಹಿಳೆಗೆ ಕೊಟ್ಟ ಜವಾಬ್ದಾರಿಯನ್ನು ಆಫೀಸಿಗೆ ಬಂದು ಪೂರೈಸಲು ಸಾಧ್ಯವಾಗದಿದ್ದಲ್ಲಿ, ಆ ಅವಧಿಯಲ್ಲಿ ಮನೆಯಿಂದಲೇ ಮಾಡುವಂತಹ ಕೆಲಸ ಕೊಡಬೇಕು.
ಕ್ರೀಚ್ ತೆರೆಯುವುದು : ಮತ್ತೊಂದು ಉಪಾಯವೆಂದರೆ ಕ್ರೀಚ್ ತೆರೆಯುವುದು, ಆಫೀಸ್ ಬಿಲ್ದಿಂಗ್ ಅಥವಾ ಅಲ್ಲಿಯೇ ಹತ್ತಿರದಲ್ಲಿ ಕ್ರೀಚ್ ಸೌಲಭ್ಯವಿದ್ದರೆ ಮಹಿಳೆಯರ ಸಮಸ್ಯೆಯೂ ಬಗೆಹರಿಯುತ್ತದೆ. ಕಂಪನಿಯ ಎಲ್ಲ ಮಹಿಳೆಯರು ತಮ್ಮ ಪುಟ್ಟ ಮಕ್ಕಳನ್ನು ಅಲ್ಲಿಯೇ ಬಿಡಬಹುದು. ಹೀಗೆ ಮಾಡುವುದರಿಂದ ಮಹಿಳೆ ಯಾವಾಗ ಬೇಕಾದರೂ ಹೋಗಿ ತನ್ನ ಮಗುವನ್ನು ನೋಡಿಕೊಂಡು ಬರಬಹುದು. ಈ ರೀತಿಯಾಗಿ ಆಕೆ ಶಾಂತ ಮನಸ್ಸಿನಿಂದ ಆಫೀಸ್‌ನಲ್ಲಿ ಕೆಲಸ ಮಾಡಬಹುದು.
ಮತ್ತೊಂದು ಪರ್ಯಾಯವೆಂದರೆ, ಈ ನಿಟ್ಟಿನಲ್ಲಿ ಸರ್ಕಾರ ಖಾಸಗಿ ಕಂಪನಿಗಳಿಗೆ ಬೆಂಬಲ ನೀಡಬೇಕು. ಮಹಿಳೆಯರಿಗೆ 3 ತಿಂಗಳು ಹೆಚ್ಚುವರಿಯಾಗಿ ದೊರೆಯುವ ಹೆರಿಗೆ ರಜೆಯ ಖರ್ಚನ್ನು ಸರ್ಕಾರವೇ ಭರಿಸಬೇಕು. ಇದರಿಂದ ಹೆರಿಗೆಯ ರಜೆಯ ನಿಜವಾದ ಲಾಭ ಮಹಿಳೆಯರಿಗೆ ದೊರೆಯುತ್ತದೆ.
– ಗಿರಿಜಾ ಶಂಕರ್