ಸಾಮಾನ್ಯವಾಗಿ ಸಿನಿಮಾ ಹಾಡುಗಳಲ್ಲಿ ನಾಯಕ ನಾಯಕಿಯನ್ನು ಹೊಗಳುತ್ತಾ ಅವಳ ಸೌಂದರ್ಯದ ಗುಣಗಾನ ಮಾಡುತ್ತಾನೆ, ಅವಳು ಬೆಳ್ಳಗಿರುವುದರಿಂದಲೇ ಗೌರವರ್ಣ ಹೊಂದಿರುವುದರಿಂದಲೇ ಅಪ್ಸರೆಯಂಥ ಸೌಂದರ್ಯ ದೇವತೆಯಾಗಿದ್ದಾಳೆ ಇತ್ಯಾದಿ ವರ್ಣನೆ ಇದ್ದೇ ಇರುತ್ತದೆ. ಒಟ್ಟಾರೆ ಇದರ ತಾತ್ಪರ್ಯ ಹುಡುಗಿ ತೆಳ್ಳಗೆ ಬೆಳ್ಳಗೆ ಚೆನ್ನಾಗಿದ್ದರೆ ಮಾತ್ರ ಸೌಂದರ್ಯ, ಇಲ್ಲದಿದ್ದರೆ ಇಲ್ಲ ಎಂಬಂತೆಯೇ ಬಿಂಬಿಸಲಾಗುತ್ತದೆ. ಅದೇ ತರಹ ವೈವಾಹಿಕ ಅಂಕಣದಲ್ಲಿ `ವಧು ಬೇಕಾಗಿದೆ' ಎಂಬಲ್ಲಿ `ಗೌರವರ್ಣ ಹೊಂದಿರುವ, ಸ್ಲಿಮ್ ಆದ, ಸುಂದರ ವಧು ಬೇಕು' ಎಂಬುದೇ ಮುಖ್ಯವಾಗಿದ್ದು ಮಿಕ್ಕ ವಿವರಗಳು ನಂತರ.
ವರ ಕಪ್ಪಾಗಿದ್ದರೂ ಸರಿ, ವಧು ಮಾತ್ರ ಬೆಳ್ಳಗೇ ಇರಬೇಕೆಂಬ ಆದ್ಯತೆ ನೀಡಲಾಗುತ್ತದೆ. ಸಿನಿಮಾ ನಟಿ, ಮಾಡೆಲ್, ಟಿವಿ ಸೀರಿಯಲ್ ಆರ್ಟಿಸ್ಟ್, ಸೆಲೆಬ್ರಿಟೀಸ್ ಮುಂತಾದ ಕೆಲವರನ್ನು ಬಿಟ್ಟರೆ ಉಳಿದ ಸಾಮಾನ್ಯರೆಲ್ಲರೂ ಗೌರವರ್ಣ ಹೊಂದಿರಲೇಬೇಕು ಇಲ್ಲದಿದ್ದರೆ ಕುರೂಪಿಗಳು ಎಂದೇ ಪರಿಗಣಿಸುತ್ತಾರೆ. ಇದರಿಂದಾಗಿ ಸಹಜವಾಗಿಯೇ ತುಸು ಮಾಸಲು ಬಣ್ಣದ, ಕಪ್ಪಾದ ಹುಡುಗಿಯರು ಹೀನಭಾವನೆಯಿಂದ (ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್) ತಾವು ಅಂದವಿಲ್ಲ ಎಂದು ಕುಗ್ಗಿಹೋಗುತ್ತಾರೆ. ಅದರಲ್ಲೂ ವಧು ಪರೀಕ್ಷೆ ಎುರಿಸಬೇಕಾದ ಈ ಹುಡುಗಿಯರು ಹಲವು ಕಠಿಣಕರ ಹಂತಗಳನ್ನು ದಾಟಬೇಕಾಗುತ್ತದೆ.
ಈ ಶ್ಯಾಮಲ ಸೌಂದರ್ಯದ ಕಾರಣ ಹುಡುಗಿಯರು ಮಾತ್ರ ಅಲ್ಲದೆ, ಹುಡುಗರೂ ಸಹ ಹಲವು ಸಲ ತೊಂದರೆಗಳನ್ನು ಎದುರಿಸುತ್ತಾರೆ. ಅವರಲ್ಲೂ ಈ ಹೀನಭಾವನೆ ಕಾಡುತ್ತಿರುತ್ತದೆ.
ಕಾಳಿದಾಸನು ತನ್ನ ಕಾವ್ಯಗಳಲ್ಲಿ ನಾಯಕಿಯರ ಶ್ಯಾಮಲ ಸೌಂದರ್ಯಕ್ಕೆ ಮಹತ್ವ ನೀಡಿದ್ದಾನೆ. ತಮಿಳರ ಕಂಬ ರಾಮಾಯಣದಲ್ಲಿ ಸೀತೆ ಗೌರವರ್ಣಕ್ಕೆ ಬದಲಾಗಿ ಶ್ಯಾಮಲ ಸುಂದರಿಯಾಗಿದ್ದಾಳೆ. ಕೃಷ್ಣನ ಬಣ್ಣ ಸಹ ಕಪ್ಪು. ಜಯದೇವ ಕವಿಯ `ಗೀತ ಗೋವಿಂದ' ಕಾವ್ಯದಲ್ಲಿ ರಾಧೆಯೂ ಕಪ್ಪಾಗಿದ್ದಾಳೆ. ಪುರಾಣ ಕಾಲದಿಂದಲೂ ಮಹಿಳೆಯರು ಸೌಂದರ್ಯ ಸಂವರ್ಧನೆಗಾಗಿ ಹಾಲು, ಕೆನೆ ಪದರ, ಚಂದನ, ಅರಿಶಿನ ಇತ್ಯಾದಿ ಬಳಸುತ್ತಿದ್ದರು. ಇವು ಗೌರವರ್ಣ ತಂದುಕೊಡುವ ಬದಲು ಅವರ ಚರ್ಮಕ್ಕೆ ಹೆಚ್ಚಿನ ಕಾಂತಿ ನೀಡುತ್ತಿದ್ದವು. ಇಂಥ ಗೌರವರ್ಣದ ಹುಚ್ಚು ನಮ್ಮ ಜನಕ್ಕೆ ಯಾವಾಗಿನಿಂದ ಬಂದಿತು?
ಭಾರತೀಯ ಇತಿಹಾಸ ಗಮನಿಸಿದರೆ ಆರ್ಯರು ಬಂದ ನಂತರ ಗೌರವರ್ಣವನ್ನು ಸೌಂದರ್ಯದೊಂದಿಗೆ ಬೆರೆಸಿ ನೋಡಲಾಗುತ್ತಿತ್ತು. ಆ ನಂತರ ಮಂಗೋಲ್, ಪರ್ಶಿಯನ್, ಬ್ರಿಟಿಷ್ ಮುಂತಾದ ಆಡಳಿತ ನಡೆಸಿದವರೆಲ್ಲ ಗೌರವರ್ಣದವರೇ ಆಗಿದ್ದರು. ಅಲ್ಲಿಂದ ಮುಂದೆ ಭಾರತೀಯರ ಮನದಲ್ಲಿ ಗೌರವರ್ಣವೇ ಹಿರಿದು ಎಂಬ ಭಾವ ಅಚ್ಚೊತ್ತಿಬಿಟ್ಟಿದೆ.
ಹೆಣ್ಣುಮಕ್ಕಳ ಜೀವನದಲ್ಲಿ ಮದುವೆ ದೊಡ್ಡ ಟರ್ನಿಂಗ್ ಪಾಯಿಂಟ್. ಹೀಗಾಗಿ ತಾನು ಸೌಂದರ್ಯವತಿಯಾಗಿ, ಸುಂದರವಾಗಿ ಕಂಗೊಳಿಸಬೇಕೆಂಬ ಧಾವಂತದಲ್ಲಿ ಅವರು ಬಗೆಬಗೆಯ ಪೌಡರ್, ಫೌಂಡೇಶನ್, ಫೇರ್‌ನೆಸ್ ಕ್ರೀಂ ಇತ್ಯಾದಿ ಬಳಸುತ್ತಾರೆ. ಸಿನಿಮಾ, ಟಿವಿ, ಜಾಹೀರಾತುಗಳಲ್ಲಿ ಗೌರವರ್ಣದ ಹುಡುಗಿಯರಿಗೆ ಮಾತ್ರ ಆದ್ಯತೆ. ಸಮಾಜದಲ್ಲಿ ಗೌರವರ್ಣಕ್ಕಿರುವ ಮಹತ್ವ ಹಾಗೂ ಸಾಮಾನ್ಯರಲ್ಲಿ ಈ ಕುರಿತು ಉಳಿದುಕೊಂಡಿರುವ ದೌರ್ಬಲ್ಯ ಗಮನಿಸಿಕೊಂಡೇ ಫೇರ್‌ನೆಸ್ ಕ್ರೀಂ ಕಂಪನಿಯವರು ತರತರಹದ ಕ್ರೀಂ ಒದಗಿಸುತ್ತಾ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ತಳವೂರಿದ್ದಾರೆ. ಈಗಂತೂ ಹುಡುಗಿಯರಿಗೆ ಮಾತ್ರವಲ್ಲದೆ, ಹುಡುಗರಿಗೂ ಸಹ ಪ್ರತ್ಯೇಕ ಫೇರ್‌ನೆಸ್ ಕ್ರೀಂ ಬಂದಿದೆ. ಇಂಥ ಕ್ರೀಂ ಮತ್ತು ಕಾಸ್ಮೆಟಿಕ್ಸ್ ಕಂಪನಿಯ ಮಾರುಕಟ್ಟೆ ಸರಿಸುಮಾರು 3 ಸಾವಿರ ಕೋಟಿ ರೂ.ಗಳ ವಾರ್ಷಿಕ ವಹಿವಾಟಿದ್ದು, ಒಂದು ಅಂದಾಜಿನ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಇದು 5 ಸಾವಿರ ಕೋಟಿ ದಾಟಲಿದೆ!