ಕಥೆ – ಕವಿತಾ ಶರ್ಮ
“ನಿನ್ನ ಹಾಗೂ ಮನೋಜನ ನಡುವೆ ಈಗ ಉಂಟಾಗಿರುವ ಮನಸ್ತಾಪಕ್ಕೆ ಕಾರಣ ಏನು?” ಶಿಲ್ಪಾಳ ಸೊರಗಿದ ಮುಖ ನೋಡುತ್ತಾ, ಸೀಮಾ ಕೇಳಿದಳು.
“ಗಂಡನಾದವನು ಪರಸ್ತ್ರೀಯರ ಬೆನ್ನು ಹತ್ತಿದಾಗ, ಮನೆಯಲ್ಲಿ ಉಂಟಾಗುವ ಸಮಸ್ಯೆ, ಕಲಹಗಳ ಹಳೇ ಚರಿತ್ರೆ ಈಗ ನನ್ನ ಬಾಳಿನಲ್ಲಿ ನಡೆಯುತ್ತಿದೆ,” ಶಿಲ್ಪಾ ದುಗುಡ ತುಂಬಿದ ದನಿಯಲ್ಲಿ ಹೇಳಿದಳು.
“ಅಂದ್ರೆ, ಮನೋಜ್ ಮತ್ಯಾರೋ ಜೊತೆ…”
“ಹೌದು, ಅವರು ವಿಶ್ವಾಸಕ್ಕೆ ಅರ್ಹರಲ್ಲ. ಯಾರೋ ಸುಂದರಿಯರ ಜೊತೆ ಆಟವಾಡುತ್ತಾ, ನನ್ನ ಬಾಳಿಗೆ ಬೆಂಕಿ ಹಚ್ಚುತ್ತಿದ್ದಾರೆ.” ಶಿಲ್ಪಾಳ ಕಣ್ಣುಗಳಲ್ಲಿ ನೀರು ತುಂಬಿತು.
“ನೀನು, ಅವರಿಗೆ ಏಕೆ ತಿಳಿ ಹೇಳಬಾರದು?” ಎಂದು ಪ್ರಶ್ನಿಸಿದಳು ಸೀಮಾ.
“ಎಲ್ಲಾ ವಿಧದಲ್ಲೂ ಪ್ರಯತ್ನಿಸಿದೆ, ತಪ್ಪು ಎಂದು ತಿಳಿಯದೆ, ಮನರಂಜನೆಯ ಆಟವೆಂದು ಭಾವಿಸಿದ್ದಾರೆ. ನಮ್ಮನ್ನು ನೋಡಿ ನಗುತ್ತಿರುವ ಜನರನ್ನು ಅವರು ಲೆಕ್ಕಕ್ಕೇ ಇಟ್ಟಿಲ್ಲ,” ದುಗುಡ ತುಂಬಿದ ಸ್ವರದಲ್ಲಿ ಶಿಲ್ಪಾ ನುಡಿದಳು.
ಜಾಹಿರಾತು ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿರುವ ಮನೋಜ್‌ಗೆ ತನ್ನ ಆಕರ್ಷಕ ವ್ಯಕಿತ್ವದ ಬಗ್ಗೆ ಅಪಾರ ಹೆಮ್ಮೆ. ಪರಿಚಯದವರಲ್ಲಿ, ಅದರಲ್ಲೂ ವಿಶೇಷವಾಗಿ ಯುವತಿಯರ ನಡುವೆ ಜನಪ್ರಿಯನಾಗಲು ಪ್ರಯತ್ನಿಸುತ್ತಿದ್ದ. ತನ್ನ ಅಹಂ ಅನ್ನು ತೃಪ್ತಿಪಡಿಸಲು ಅವನಿಗೆ ಇದು ಒಂದು ಸಾಧನವಾಗಿತ್ತು. ಇದೆಲ್ಲ ಶಿಲ್ಪಾಳಿಗೆ ಮದುವೆಯಾದ ಕೆಲವು ದಿನಗಳ ನಂತರ ಗೊತ್ತಾಯಿತು. ವಿವಾಹಕ್ಕೆ ಮುಂಚೆ ಒಂದಕ್ಕಿಂತ ಹೆಚ್ಚು ಹುಡುಗಿಯರ ಸ್ನೇಹವನ್ನು ಯುವಕರು ಮಾಡುವುದು ಅಷ್ಟೊಂದು ಗಂಭೀರವಲ್ಲವೇನೋ. ಆದರೆ ಮದುವೆಯ ನಂತರ ಬದಲಾಗದಿದ್ದರೆ, ಮನೆಯ ನೆಮ್ಮದಿ ಖಂಡಿತ ಕದಡಿ ಹೋಗುತ್ತದೆ. ಮೊದಲೆಲ್ಲಾ ಮನೋಜ್ ಸ್ತ್ರೀಯರ ಸ್ನೇಹ ಬೆಳೆಸುವುದನ್ನು ಕಂಡು ಶಿಲ್ಪಾ ಅಸೂಯೆ ಪಡದಿದ್ದರೂ. ಇತ್ತೀಚೆಗೆ ಮನೋಜ್‌ನ ದೃಷ್ಟಿ ಸುಂದರ ಸ್ತ್ರೀಯರ ಮೇಲೆ ಇರುವುದನ್ನು ಕಂಡು, ಅವನ ನಿಷ್ಠೆಯ ಬಗ್ಗೆ ಅವಳಲ್ಲಿ ಅನುಮಾನ ಮೂಡಲಾರಂಭಿಸಿತು.
“ಮನೋಜನ ವ್ಯವಹಾರಗಳನ್ನು ನಾನು ವಿರೋಧಿಸತೊಡಗಿದಾಗ, ತಮ್ಮ ಸ್ವಂತ ವಿಷಯದಲ್ಲಿ ತಲೆ ಹಾಕಬೇಡವೆಂದರು. ಸ್ವಭಾವತಃ ಶಾಂತ ಹಾಗೂ ಕಡಿಮೆ ಮಾತಿನವಳಾದ ನನ್ನನ್ನು, ತಾನು ಪರಸ್ತ್ರೀಯರೊಡನೆ ವ್ಯವಹರಿಸುವುದನ್ನು ನೋಡಿ ನಾನು ಹೊಟ್ಟೆಕಿಚ್ಚುಪಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ದಿನನಿತ್ಯದ ಈ ರಗಳೆಗಳಿಂದ ಬೇಸರವಾಗಿ ಎರಡು ತಿಂಗಳ ಹಿಂದೆ ನಾನೇ ಬದಲಾಗಿಬಿಟ್ಟೆ,” ಎಂದು ಶಿಲ್ಪಾ ಸೀಮಾಳಿಗೆ ಹೇಳಿದಳು.
“ಯಾವಾಗಲೂ ಆಧುನಿಕ ಚಂಚಲ ತರುಣಿಯರ ಗುಣಗಾನ ಮಾಡುವ ಇವರಂತೆ ನಾನೂ ಸಹ ನಡೆದುಕೊಂಡೆ ಆದರೆ, ತಮ್ಮ ಹೆಂಡತಿ ಪರಪುರುಷರೊಂದಿಗೆ ಸುತ್ತುವುದನ್ನು ನೋಡಿ ಅವರಿಗೆ ಹೇಗಾಗಬಹುದು ಎಂದು ತಿಳಿಯಲು ನಾನು ಬಯಸಿದ್ದೆ.” ಎಂದಳು.
ತಾನು ಆಧುನಿಕಳಾಗಿ ಕಾಣಿಸಿಕೊಳ್ಳಲು ಶಿಲ್ಪಾಳಿಗೆ ಹೆಚ್ಚೇನೂ ಶ್ರಮವಾಗಲಿಲ್ಲ. ಬ್ಯೂಟಿಪಾರ್ಲರಿಗೊಂದು ಭೇಟಿ ಇತ್ತು, ತನ್ನ ವೇಷಭೂಷಣಗಳನ್ನು ಬದಲಾಯಿಸಿಕೊಂಡಳು. ಮನೋಜನ ಸ್ನೇಹಿತರಾದ ವಿಕಾಸ್, ರಾಜೇಶ್, ಅಜಯ್, ವಾಸು ಮುಂತಾದವರೊಂದಿಗೆ ಬಾಯಿ ತುಂಬಾ ಮಾತನಾಡುತ್ತಾ ನಗುತ್ತಾ, ಶಿಲ್ಪಾ ಮುಕ್ತವಾಗಿ ಅವರೊಡನೆ ಬೆರೆಯಲಾರಂಭಿಸಿದಳು. ಶಿಲ್ಪಾಳೊಂದಿಗೆ ಸ್ನೇಹ ಬೆಳೆಸಲು ಅವರೆಲ್ಲರೂ ಹಾತೊರೆಯುತ್ತಿದ್ದರು. ತನ್ನತ್ತ ಎಲ್ಲರೂ ಆಕರ್ಷಿತರಾಗುತ್ತಿರುವುದು ಶಿಲ್ಪಾಳಿಗೇ ಅರಿವಾಗತೊಡಗಿತು.
“ನಿನ್ನ ಈ ಬದಲಾದ ಸ್ವರೂಪವನ್ನು ನೋಡಿ, ಮನೋಜ್ ಏನೂ ಪ್ರತಿಕ್ರಿಯಿಸಲಿಲ್ಲವೇ?” ಸೀಮಾ ಕುತೂಹಲದಿಂದ ಕೇಳಿದಳು.
“ಪ್ರಾರಂಭದಲ್ಲಿ ಅವರಿಂದ ಪ್ರೋತ್ಸಾಹ ಸಿಕ್ಕಿತು. ಚಂಚಲ ಸ್ತ್ರೀಯ ಸ್ನೇಹವನ್ನು ಪಡೆಯಲು ಅನೇಕ ಪುರುಷರು ಬಯಸುತ್ತಾರೆ. ಆದರೆ ತಮ್ಮ ಹೆಂಡತಿಯೇ ಈ ರೀತಿ ಇರಲು ಯಾವ ಗಂಡಸೂ ಒಪ್ಪುವುದಿಲ್ಲ. ಮನೋಜ್ ಇದಕ್ಕೆ ಅಪವಾದವಲ್ಲ.
“ತಾವು ಸರಿಯಾಗಿದ್ದರಲ್ಲವೇ ಅವರು ನನ್ನನ್ನು ತಡೆಯಲಿಕ್ಕೆ? ಎಲ್ಲಾ ಹೆಂಗಸರು ಶೀಲವಂತೆಯರಾದರೆ, ಚಂಚಲ ಸ್ವಭಾದವರು ಎಲ್ಲಿರುತ್ತಾರೆ? ಮನೋಜ್‌ಗೆ ಇತ್ತೀಚೆಗೆ ರೇಖಾ ಎನ್ನುವವಳು ಗಂಟು ಬಿದ್ದಿದ್ದಾಳೆ. ಮನೆಯಲ್ಲಿ ನನ್ನೊಂದಿಗಂತೂ ಯಾವಾಗಲೂ ಜಗಳವಾಡುತ್ತಾರೆ…” ಶಿಲ್ಪಾಳಿಗೆ ಗಂಟಲು ಬಿಗಿದಂತಾಗಿ ಮಾತು ನಿಲ್ಲಿಸಿದಳು.
25-26 ವರ್ಷದ ರೇಖಾ ಸುಂದರ ಯುವತಿ. 2 ವರ್ಷಗಳ ಹಿಂದೆ ಅವಳ ವಿವಾಹ ಮನೋಜನ ಬಾಸ್ ರಾಜನ್‌ರೊಂದಿಗೆ ನಡೆಯಿತು. ಅವರಿಗೆ 50 ವರ್ಷ ವಯಸ್ಸಾಗಿತ್ತು. ತಮ್ಮ ಕೆಲಸದಲ್ಲಿ ಯಾವಾಗಲೂ ಬಿಜಿಯಾಗಿರುತ್ತಿದ್ದ ರಾಜನ್‌ರಿಗೆ ತಮ್ಮ ಹೆಂಡತಿಯ ವ್ಯವಹಾರಗಳು ತಿಳಿದಿರಲಿಲ್ಲ. ಸುಂದರ ಯುವ ಹಕ್ಕಿ ತನ್ನ ವಯಸ್ಸಾದ ಗಂಡನನ್ನು ಕುಣಿಸಲು ಏನೂ ಕಷ್ಟಪಡಬೇಕಾಗಿರಲಿಲ್ಲ. ಇದನ್ನೆಲ್ಲಾ ಕೇಳಿ ಸೀಮಾ, “ಬೇರೊಬ್ಬರ ಗಂಡನನ್ನು ಆಕರ್ಷಿಸಿ, ಅವರ ಮನೆಯನ್ನು ನಾಶಮಾಡುವ ಹೆಣ್ಣುಗಳಿಗೆ, ಅದರಿಂದ ಏನು ಲಾಭವಾಗುತ್ತದೋ ತಿಳಿಯದು.” ಎಂದಳು ಬೇಸರದಿಂದ.
“ಕುಟುಂಬದಲ್ಲಿ ಅಶಾಂತಿಯಿಂದ ನರಳುವ ಹೆಂಗಸರು, ಸುಖವನ್ನು, ಆನಂದವನ್ನು ಹುಡುಕುತ್ತಿರುತ್ತಾರೆ. ಸೀಮಾ, ನಾವೆಲ್ಲರೂ ನಮ್ಮ ವೈವಾಹಿಕ ಜೀವನದಲ್ಲಿ ಒಂದಲ್ಲ ಒಂದು ಕೊರತೆಯನ್ನು ಅನುಭವಿಸುತ್ತಿದ್ದೇವೆ. ಆರ್ಥಿಕ ಸಮಸ್ಯೆ, ಇಲ್ಲವೇ ಮಾನಸಿಕ ಖಿನ್ನತೆ. ಗಂಡ ತನ್ನ ಬಗ್ಗೆ ಉದಾಸೀನನಾದರೆ ಅಥವಾ ಅನುಚಿತವಾಗಿ ನಡೆದುಕೊಂಡರೆ, ಹೆಂಡತಿ ತನ್ನೊಂದಿಗೆ ಅತ್ಮೀಯವಾಗಿ ವರ್ತಿಸುವ ಪರಪುರಷರಲ್ಲಿ ಪ್ರೀತಿಯನ್ನು ಅರಸುತ್ತಾಳೆ. ಅದು ಅನೈತಿಕ ಸಂಬಂಧದಲ್ಲಿ ಕೊನೆಗೊಳ್ಳಬಹುದು,” ಶಿಲ್ಪಾ ತನ್ನ ವಿಚಾರಧಾರೆಯನ್ನು ಸೀಮಾಳಲ್ಲಿ ತೋಡಿಕೊಂಡಳು.
“ಅದೇನೇ ಇರಲಿ, ಈಗ ನಿನ್ನ ಸಮಸ್ಯೆಗೆ ಪರಿಹಾರವೇನು?”
“ಬಹುಶಃ ವಿಚ್ಛೇದನವೇ ಇದಕ್ಕೆ ಪರಿಹಾರವೇನೋ,” ಸತ್ವಹೀನ ಸ್ವರದಲ್ಲಿ ಶಿಲ್ಪಾ ನುಡಿದಳು. ಸೀಮಾ ಸ್ವಲ್ಪ ಹೊತ್ತಿನ ನಂತರ ಅವಳಿಂದ ಬೀಳ್ಕೊಂಡು ಹೊರಟಳು. ಅವಳು ಹೋದ ಮೇಲೂ ಶಿಲ್ಪಾ, ತನ್ನ ಹಾಗೂ ಮನೋಜನ ಸಂಬಂಧ ಬಿಗಡಾಯಿಸುತ್ತಿರುವ ಬಗ್ಗೆಯೇ ಯೋಚಿಸುತ್ತಾ ಕುಳಿತಿದ್ದಳು.
`ಇಷ್ಟೆಲ್ಲಾ ವೈಮನಸ್ಸುಗಳಿದ್ದರೂ ಮನೋಜನ ಬಗ್ಗೆ ನನಗೆ ಇನ್ನೂ ಪ್ರೀತಿಯಿದೆ. ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡರೆ ನಾವಿಬ್ಬರೂ ಎಷ್ಟು ಸುಖವಾಗಿರಬಹುದು,’ ಎಂದು ಅವಳ ಮನ ನೋವಿನಿಂದ ಚೀರಿತು.
`ಮನೋಜ್‌ಗೆ ಕೊನೆಯದಾಗಿ ಒಂದೇ ಒಂದು ಸಲ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುತ್ತೇನೆ. ಹಿಂದಿನದೆಲ್ಲಾ ಮರೆತು ಕ್ಷಮಿಸುತ್ತೇನೆ. ಆದರೆ ಅವರು ನಂತರ ಬದಲಾಗದಿದ್ದರೆ, ನಾವಿಬ್ಬರೂ ಬೇರೆಯಾಗುವುದೇ ಒಳ್ಳೆಯದು. ಇದರಿಂದ ನನ್ನ ಮಾನಸಿಕ ತೊಳಲಾಟಕ್ಕೆ ಮುಕ್ತಿ ಸಿಗಬಹುದು. ತನ್ನ ಸ್ವಾಭಿಮಾನಕ್ಕೆ ಕುಂದುಂಟಾಗಲಾರದು,’ ಎಂದು ಶಿಲ್ಪಾ ನಿರ್ಧರಿಸಿದಳು.
ಅವಳು ನಿರೀಕ್ಷಿಸುತ್ತಿದ್ದ ಅವಕಾಶ ಶೀಘ್ರವೇ ದೊರೆಯಿತು. ಮನೋಜನ ಜಾಹಿರಾತು ಸಂಸ್ಥೆಗೆ, ದೊಡ್ಡ ಬಟ್ಟೆ ಮಿಲ್ಲೊಂದರ ಜಾಹಿರಾತಿಗಾಗಿ ಒಪ್ಪಂದವಾಯಿತು. ಇದಕ್ಕಾಗಿ ಮನೋಜ್ ಆ ಕಂಪನಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಮುಂಬಯಿಗೆ ತೆರಳಬೇಕಾಯಿತು. ಅವನು ಹೊರಡುವ ಹಿಂದಿನ ರಾತ್ರಿ ಶಿಲ್ಪಾಳಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ತನ್ನ ಮನದ ಉಮ್ಮಳವನ್ನು ಅವನಿಗೆ ಹೇಗೆ ತಿಳಿಸುವುದೆಂದು ಯೋಚಿಸುತ್ತಲೇ ಇದ್ದಳು. ಮಾರನೆಯ ದಿನ ಬೆಳಗಿನ ರೈಲಿಗೆ ಹೋಗಲು ಮನೋಜ್ ನಿರ್ಧರಿಸಿದ್ದ. ಶಿಲ್ಪಾ ಕಾಫಿಯ ಲೋಟವನ್ನು ಹಿಡಿದು ಬಂದು ಹೇಳಿದಳು “ನೀವು ಈ ದಿನ ಬೆಳಗಿನ ರೈಲಿಗೆ ಹೊರಡುವುದು ಉತ್ತಮ.”
“ಏಕೆ? ನಾನು ಬೇಗ ಹೋಗಲೇಬೇಕು.”
“ನಮ್ಮ ವಿವಾಹ ಜೀವನಕ್ಕೆ ಸಂಬಂಧಪಟ್ಟ ಮುಖ್ಯವಾದ ನಿರ್ಣಯವನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದೇನೆ.”
“ನೀನೇನು ಹೇಳುತ್ತಿದ್ದೀಯಾ, ನನಗೊಂದೂ ಅರ್ಥವಾಗುತ್ತಿಲ್ಲ.”
“ಬಿಗಡಾಯಿಸುತ್ತಿರುವ ನಮ್ಮ ಸಂಬಂಧದ ಬಗ್ಗೆ ನೀವು ಏನನ್ನೂ ಯೋಚಿಸದಿದ್ದರೂ, ನಾನು ಗಂಭೀರವಾಗಿ ಚಿಂತಿಸಿದ್ದೇನೆ. ದಿನ ದಿನಕ್ಕೂ ಉಂಟಾಗುತ್ತಿರುವ ಮನದ ಕ್ಷೋಭೆಯನ್ನು ನಾನು ಸಹಿಸಲಾರೆ” ಶಿಲ್ಪಾ ಹೇಳಿದಳು.
“ಇವೆಲ್ಲವನ್ನು ನಾನು ಮರಳಿ ಬಂದ ಮೇಲೆ ಹೇಳಬಹುದು, ನನಗೆ ತಡವಾಗುತ್ತಿದೆ…..” ಎನ್ನುತ್ತಾ ಮನೋಜ್ ಹಾಸಿಗೆಯಿಂದ ಎದ್ದ.
ಶಿಲ್ಪಾ ಈಗ ಜೋರಾಗಿ, “ಮನೋಜ್, ನೀವೇನಾದರೂ ಈಗ ನನ್ನ ಮಾತನ್ನು ತಳ್ಳಿ ಹಾಕಿ ಹೋದರೆ, ಪುನಃ ನೀವು ಇಲ್ಲಿಗೆ ಬಂದಾಗ ಈ ಮನೆಯಲ್ಲಿ ನನ್ನನ್ನು ಕಾಣುವುದಿಲ್ಲ,” ಎಂದು ದೃಢವಾಗಿ ಹೇಳಿದಳು. ಇದನ್ನು ಕೇಳುತ್ತಾ ಮನೋಜ್‌ಗೆ ಶಾಕ್ ಹೊಡೆದಂತಾಗಿ, ಕಾಲುಗಳು ಅಲ್ಲಿಯೇ ನಿಂತವು. ಕೆಲವು ಕ್ಷಣ ಶಿಲ್ಪಾಳನ್ನು ದುರುಗುಟ್ಟಿ ನೋಡುತ್ತಾ ಕೋಪದಿಂದ, “ನೀನು ನನ್ನನ್ನು ಹೋಗಲು ತಡೆಯುತ್ತಿರುವುದೇಕೆ?” ಎಂದು ಕೇಳಿದ.
“ನೀವು ಕೋಣೆಯಲ್ಲಿ ಕುಳಿತುಕೊಂಡು ಏನು ನಡೆಯುವುದೆಂದು ಸುಮ್ಮನೆ ನೋಡಬೇಕು” ಶಿಲ್ಪಾ ಹೇಳಿದಳು. ಆದರೆ ಏನು ನಡೆಯುತ್ತದೆಂದು ಮನೋಜ್ ಎಷ್ಟು ಬಲವಂತ ಮಾಡಿದರೂ ಶಿಲ್ಪಾ ಹೇಳಲಿಲ್ಲ. ಅದೇನೆಂದು ನೋಡೇಬಿಡೋಣ ಎಂದು ಮನೋಜ್ ನಿಂತ. ಅವನ ಮನದಲ್ಲಿ ಯೋಚನಾ ತರಂಗಗಳೆದ್ದವು.
ಒಂಬತ್ತು ಗಂಟೆಯ ಸುಮಾರಿಗೆ ಮನೋಜನ ಅಧಿಕಾರಿ ರಾಜನ್ ಕಾರು ಮನೆಯ ಮುಂದೆ ಬಂದು ನಿಂತಿತು. ಅದನ್ನು ನೋಡಿ ಮನೋಜ್ `ಅರೇ, ಇವರು ಇಲ್ಲಿಗ್ಯಾಕೆ ಬಂದರು ಈಗ?’ ಎಂದು ಅಚ್ಚರಿಗೊಂಡ.
“ಹೌದು, ಅವರನ್ನು ನಾನೇ ಬರಹೇಳಿದೆ. ಈಗ ನೀವು ಒಳಗಿನ ಕೋಣೆಯಲ್ಲಿ ಕುಳಿತುಕೊಂಡು, ಹೊರಗೆ ಏನು ನಡೆಯುವುದೆಂದು ನೋಡುತ್ತಿರಿ,” ಎಂದವಳೇ ಶಿಲ್ಪಾ ಮುಂಬಾಗಿಲನ್ನು ತೆರೆಯಲು ಹೋದಳು. ಮನೋಜ್ ಒಳಕೋಣೆಯಲ್ಲಿ ಕುಳಿತು, ಬಾಗಿಲಿನ ಕಿಂಡಿಯಿಂದ ನೋಡತೊಡಗಿದ. ಹಜಾರದಲ್ಲಿ ನಡೆಯುವುದೆಲ್ಲಾ ಅವನಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅವನ ಮನದಲ್ಲಿ ಕುತೂಹಲ ತುಂಬಿತ್ತು. ಔಪಚಾರಿಕ ಮಾತಕತೆ ಆದ ಮೇಲೆ ಶಿಲ್ಪಾ ರಾಜನ್‌ರನ್ನು ಕುರಿತು, “ಸಾರ್, ಕೆಲವು ದಿನಗಳಿಂದ ನಾನು ಬಹಳ ಚಿಂತಿತಳಾಗಿದ್ದೇನೆ. ಬೇರೆ ದಾರಿ ಕಾಣದೆ ಈಗ ನಿಮ್ಮ ಸಹಾಯವನ್ನು ಕೋರುತ್ತಿದ್ದೇನೆ,” ಅವಳ ಸ್ವರ ಗಂಭಿರವಾಗಿತ್ತು. ಮುಖದ ಮೇಲೆ ಚಿಂತೆಯ ಗೆರೆಗಳು ಮೂಡಿದ್ದವು.
“ನನ್ನ ಕೈಯಲ್ಲಾದ ಸಹಾಯವನ್ನು ನಾನು ಮಾಡಬಲ್ಲೆ, ಆದರೆ ನಿಮ್ಮ ಸಮಸ್ಯೆ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ,” ರಾಜನ್ ಹೇಳಿದರು.
“ಮನೋಜ್ ಹಾಗೂ ನಿಮ್ಮ ಪತ್ನಿ ರೇಖಾಳ ನಡುವೆ ಅನೈತಿಕ ಸಂಬಂಧವಿದೆ. ಇದನ್ನು ನಾನು ಮನೋಜ್ ಎದುರಿಗೆ ಹೇಳಲಾರದೆ, ಈಗ ನಿಮ್ಮಲ್ಲಿ ಹೇಳುತ್ತಿದ್ದೇನೆ,” ಹೇಳುತ್ತಾ ಶಿಲ್ಪಾಳ ಕಣ್ಣಾಲಿಗಳು ತುಂಬಿಕೊಂಡವು.
“ನಂಬಲಾಗುತ್ತಿಲ್ಲ, ಯಾರೋ ನಿಮಗೆ ಚಾಡಿ ಹೇಳಿರಬಹುದು ಶಿಲ್ಪಾ,” ರಾಜನ್ ಉದ್ವೇಗದಿಂದ ನುಡಿದರು.
“ನೀವು ಹೀಗೇ ಹೇಳುತ್ತೀರೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೆ ಒಬ್ಬ ಹೆಣ್ಣು ತನ್ನ ಗಂಡನ ಮೇಲೆ ಸುಮ್ಮಸುಮ್ಮನೆ ಏಕೆ ಆರೋಪ ಹೊರಿಸುತ್ತಾಳೆ ಹೇಳಿ?” ಹೇಳುತ್ತಾ, ಶಿಲ್ಪಾ ಗಂಟಲು ಒತ್ತಿದಂತಾಗಿ ಮಾತು ನಿಲ್ಲಿಸಿದಳು. ಅವಳ ಕಣ್ಣುಗಳಿಂದ ನೀರು ಸುರಿಯತೊಡಗಿತು. ಇದನ್ನು ನೋಡಿ ರಾಜನ್ ವ್ಯಾಕುಲಗೊಂಡರು.
“ದಯವಿಟ್ಟು ಅಳಬೇಡಿ, ಮನೋಜ್ ಒಬ್ಬ ಬುದ್ಧಿವಂತ ಯುವಕ. ನಮ್ಮ ಸಂಸ್ಥೆಯಲ್ಲಿ ಅವನ ಭವಿಷ್ಯ ಉಜ್ವಲವಾಗಿದೆ. ಅವನು ಇಂತಹ ಹೀನ ಕೃತ್ಯವನ್ನು ಎಂದಿಗೂ ಮಾಡುವುದಿಲ್ಲವೆಂದು ನನಗೆ ಸಂಪೂರ್ಣ ನಂಬಿಕೆಯಿದೆ. ಬಹುಶಃ ನೀವು ಅವರಿಬ್ಬರೂ ಹೆಚ್ಚು ಆತ್ಮೀಯತೆಯಿಂದಿರುವುದನ್ನು ನೋಡಿ ಅಪಾರ್ಥ ಮಾಡಿಕೊಂಡಿರಬಹುದು.”
“ಇಲ್ಲ, ರೇಖಾ ಅಗತ್ಯಕ್ಕಿಂತ ಹೆಚ್ಚು ಸಲುಗೆಯಿಂದ ಮನೋಜ್‌ನಲ್ಲಿ ವ್ಯವಹರಿಸಿ ಈಗ ನಮ್ಮ ಬಾಳನ್ನು ದುರಂತದೆಡೆಗೆ ತಳ್ಳುತ್ತಿದ್ದಾಳೆ.”
“ರೇಖಾ ಇನ್ನೂ ಚಿಕ್ಕ ಹುಡುಗಿಯಂತೆ ಆಡುತ್ತಾಳೆ. ಆದರೆ ಮನೋಜ್ ಅಂಥ ತಪ್ಪನ್ನು ಮಾಡುವುದಿಲ್ಲ. ನೀವೇನೂ ಯೋಚಿಸಬೇಡಿ. ನಾನು ರೇಖಾಳಿಗೆ ಬುದ್ಧಿ ಹೇಳುತ್ತೇನೆ, ಮನೋಜ್‌ನಿಂದ ಅವಳು ದೂರವಿರುವ ಹಾಗೆ ಮಾಡುತ್ತೇನೆ,” ಎಂದರು ರಾಜನ್.
“ನೀವು ಹೇಳಿದರೆ ಕೇಳುತ್ತಾಳೆಯೇ?”
“ಯಾಕಿಲ್ಲ? ಎಷ್ಟಾದರೂ ನಾನು ಅವಳ ಗಂಡನಲ್ಲವೇ?” ಎಂದು ಹೇಳಿದರು ರಾಜನ್.
ಶಿಲ್ಪಾಳ ಕಣ್ಣುಗಳಲ್ಲಿದ್ದ ಅನುಮಾನದ ಛಾಯೆಯನ್ನು ಕಂಡು ಮತ್ತೆ ನುಡಿದರು, “ನಿಮ್ಮ ಮನದ ಶಂಕೆಯನ್ನು ದೂರ ಮಾಡಲು ಒಂದು ಮಾತನ್ನು ಹೇಳುತ್ತೇನೆ ಕೇಳಿ. ತರುಣಿಯಾದ ರೇಖಾ, ಯುವಕರನ್ನು ಬಿಟ್ಟು ನನ್ನನ್ನು ಮದುವೆಯಾದಳು. ನಮ್ಮಿಬ್ಬರ ನಡುವಿನ ವಯಸ್ಸಿನ ಅಂತರ ಯಾರಿಗೂ ತಿಳಿಯದ್ದೇನಲ್ಲ. ಸಮಾಜದಲ್ಲಿ ಗೌರವ, ಅಪಾರ ಸಂಪತ್ತು, ಸುಖ ಜೀವನ ಇವುಗಳಿಗಾಗಿ ಅವಳು ನನ್ನನ್ನು ವಿವಾಹವಾದಳು. ಇದು ನಮ್ಮಿಬ್ಬರಿಗೂ ಗೊತ್ತಿದೆ. ನನ್ನಲ್ಲಿರುವುದನ್ನೆಲ್ಲಾ ಮನೋಜ್ ಅವಳಿಗೆ ಕೊಡಬಲ್ಲನೇ? ನಾನು ಅವಳಿಗೇ ಮನೋಜನನ್ನು ಬಿಡಬೇಕೆಂದು ಹೇಳಿದರೆ ಕೇಳದೆ ಇರುವುದಿಲ್ಲ.”
ಅವರ ಶಾಂತ ಹಾಗೂ ಗಂಭೀರವಾದ ನುಡಿಗಳನ್ನು ಕೇಳಿ ಶಿಲ್ಪಾಳಲ್ಲಿ ಕೊಂಚ ವಿಶ್ವಾಸ ಮೂಡಿತು.
ರಾಜನ್ ಹೊರಟುಹೋದ ಮೇಲೆ ಮನೋಜ್ ಎದ್ದು ಕೋಪದಿಂದ, “ನಿನ್ನ ಸುಳ್ಳು ಮಾತುಗಳಿಂದ ನನ್ನನ್ನು ರಾಜನ್ ದೃಷ್ಟಿಯಲ್ಲಿ ಕೀಳಾಗಿ ಮಾಡಲು ಎಷ್ಟು ಧೈರ್ಯ? ನಿನ್ನ ಈ ನಾಟಕ ನೋಡಲು ನನ್ನನ್ನು ತಡೆದು ನಿಲ್ಲಿಸಿದೆಯೋ?” ಎಂದು ಅಬ್ಬರಿಸಿದ.
“ನಾನು ನಿಮಗೆ ಏನು ಹೇಳಬೇಕೆಂದಿದ್ದೆನೋ ಅದನ್ನು ಈ ರೀತಿಯಲ್ಲಿ ಹೇಳಿದೆ. ನಾನೇ ನೇರವಾಗಿ ನಿಮ್ಮಲ್ಲಿ ಹೇಳಿದರೆ, ನನಗೆ ಮಾತನಾಡಲು ನೀವು ಅವಕಾಶ ಕೊಡುತ್ತಿರಲಿಲ್ಲ. ನಾನು ತಿಳಿಸದಿದ್ದರೆ ನಿಮಗೆ ಇರುವ ವಿಷಯ ಅರ್ಥವಾಗುವುದೂ ಇಲ್ಲ.”
“ನೀನೇನು ಹೇಳಬೇಕೆಂದಿದ್ದೀಯಾ?”
“ನಿಮ್ಮ ಹಾಗೂ ರೇಖಾಳ ನಡುವೆ ಸಂಬಂಧವಿದೆಯೋ ಇಲ್ಲವೋ, ಆದರೆ ರಾಜನ್‌ಗೆ ನಿಮ್ಮ ಮೇಲೆ ಎಂಥ ವಿಶ್ವಾಸವಿದೆ ನೋಡಿ. ನಿಮಗೆ ರೇಖಾಳೊಂದಿಗೆ ಸಂಬಂಧವಿರುವುದನ್ನು ಅವರು ಒಪ್ಪಲೇ ಇಲ್ಲ. ಪುರುಷನೊಬ್ಬ, ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡರೆ, ಅದು ಅವನನ್ನು ಆತ್ಮೀಯತೆಯಿಂದ ನೋಡಿದ ಅವಳ ಮನೆಯವರಿಗೂ ವಿಶ್ವಾಸ ದ್ರೋಹ ಮಾಡಿದಂತೆಯೇ ಅಲ್ಲವೇ? ಅವನ ಹೆಂಡತಿಗಂತೂ ದ್ರೋಹ ಮಾಡಿರುತ್ತಾರೆ. ಅದರೊಂದಿಗೆ ಪರಸ್ತ್ರೀಯನ್ನೂ ಹೀಗೆ ನೈತಿಕವಾಗಿ ಅಧಃಪತನಕ್ಕಿಳಿಸುವ ಗಂಡಸು ಸ್ವತಃ ತನ್ನ ದೃಷ್ಟಿಯಲ್ಲೇ ಅಧಃಪತನಕ್ಕಿಳಿದಿರುತ್ತಾನೆ.”
ಮನೋಜ್ ಶಿಲ್ಪಾಳ ಭುಜದ ಮೇಲೆ ಕೈಯಿಡುತ್ತಾ ಹೇಳಿದ, “ಹೆಂಗಸರೊಡನೆ ತಮಾಷೆಯಾಗಿ ಮಾತನಾಡುವುದಕ್ಕೂ, ನೀನು ಹೇಳಿದ ವಿಶ್ವಾಸಘಾತಕತನಕ್ಕೂ ವ್ಯತ್ಯಾಸವಿದೆ.”
“ಹೌದಾ? ಇದೇ ಮಾತು ಬೇರೊಬ್ಬರ ವಿಷಯದಲ್ಲಿ ಹೇಗೆ ಬದಲಾಗುತ್ತದೆಂದು ಬರುವ ಇನ್ನೊಬ್ಬ ಅತಿಥಿಯನ್ನು ನೋಡಿ ನೀವೇ ತಿಳಿಯಿರಿ,” ಎಂದಳು ಶಿಲ್ಪಾ.
ಇನ್ಯಾರು ಬರುತ್ತಾರೆಂದು ಕೇಳಲು ಮನೋಜ್ ಬಾಯಿ ತೆರೆಯುವಷ್ಟರಲ್ಲಿ, ಶಿಲ್ಪಾ ಒಳಗಡೆ ಹೊರಟು ಹೋದಳು. ಸುಮಾರು 11 ಗಂಟೆಯ ಹೊತ್ತಿಗೆ ಮನೋಜ್‌ನ ಸ್ನೇಹಿತ ವಿಕಾಸನ ಮೋಟಾರ್ ಸೈಕಲ್ ಮನೆಯ ಮುಂದೆ ಬಂದು ನಿಂತಿತು. ಕಿಟಕಿಯಿಂದ ಇದನ್ನು ನೋಡಿ ಮನೋಜ್ ಹಲ್ಲು ಕಡಿದ, `ಇವನು ಆಫೀಸಿಗೆ ಹೋಗುವ ಬದಲು ಇಲ್ಲಿಗ್ಯಾಕೆ ಬಂದಿದ್ದಾನೆ? ನಾನಿಲ್ಲದಿರುವ ಸಮಯದಲ್ಲಿ ಶಿಲ್ಪಾಳನ್ನು ಭೇಟಿ ಮಾಡಲು ಆಗಾಗ ಬರುತ್ತಾನೆಯೇ?’ ಎಂದುಕೊಂಡು ಏನು ನಡೆಯುತ್ತೆಂದು ತಿಳಿಯಲು ರೂಮಿನೊಳಗೆ ಹೋಗಿ ಕುಳಿತ.
ಅಷ್ಟರಲ್ಲಿ ಶಿಲ್ಪಾ ಆಕರ್ಷಕವಾಗಿ ಅಲಂಕರಿಸಿಕೊಂಡು ಬಂದು ಬಾಗಿಲು ತೆರೆದು ಹೇಳಿದಳು. “ಬನ್ನಿ ವಿಕಾಸ್, ಒಳಗ್ಬನ್ನಿ.”
“ಮನೋಜ್ ಊರಿಗೆ ಹೋದನೇ? ಏಕಾಂತದಲ್ಲಿ ನನ್ನ ಬಳಿ ಬಹಳ ಮಾತನಾಡಬೇಕು ಎಂದಿದ್ದರಲ್ಲ. ಈಗ ಹೇಳಿ ಏನು ವಿಷಯ?” ಎನ್ನುತ್ತಾ ಸೋಫಾದ ಮೇಲೆ ಕುಳಿತ ವಿಕಾಸ್. ಶಿಲ್ಪಾ ಅವನ ಬಳಿಯೇ ಕೊಂಚ ದೂರದಲ್ಲಿ ಕುಳಿತಳು. ಅವಳ ಕಣ್ಣುಗಳಲ್ಲಿದ್ದ ತುಂಟತನ ಹಾಗೂ ತುಟಿಯಲ್ಲಿ ಮೋಹಕ ಮುಗುಳುನಗೆಯನ್ನು ನೋಡಿ ವಿಕಾಸ್‌ನ ರಕ್ತದ ವೇಗ ಹೆಚ್ಚಿತು.
“ಶಿಲ್ಪಾ, ಕೆಲವು ದಿನಗಳಿಂದ ನೀವು ತುಂಬಾ ಬದಲಾಗಿದ್ದೀರಾ,” ನಗುವ ಪ್ರಯತ್ನ ಮಾಡುತ್ತಾ ಹೇಳಿದ ವಿಕಾಸ್.
“ಹೌದಾ? ಹೇಗೆ?’
‘“ನೀವು ಹಿಂದಿಗಿಂತಲೂ ಹೆಚ್ಚು ಸುಂದರ ಹಾಗೂ ಪ್ರಿಯವಾಗಿ ಕಾಣಿಸುತ್ತಿದ್ದೀರಿ.”
“ಸೌಂದರ್ಯವೇನೋ ನೋಡುಗರ ಕಣ್ಣಲ್ಲಿದೆಯಂತೆ, ಆದರೆ ಪ್ರಿಯವಾಗಿ ಎಂದಿರಲ್ಲ, ಹಾಗೆಂದರೇನು?”
“ಅಂದ್ರೆ, ನನಗೆ ನೀವು ಬಹಳ ಚೆನ್ನಾಗಿ ಕಾಣಿಸ್ತಿದ್ದೀರಾ ಹಾಗೂ ನಿಮ್ಮಲ್ಲಿ ನನಗೆ ಏನೋ ಒಂದು ಪ್ರೀತಿ ಮೂಡುತ್ತಿದೆ,” ವಿಕಾಸ್‌ನ ಸ್ವರದಲ್ಲಿ ಕಂಪನವಿತ್ತು.
“ಆದರೆ ನೀವು ಇದನ್ನೆಂದೂ ನನಗೆ ಹೇಳಿರಲೇ ಇಲ್ಲ,“ ಶಿಲ್ಪಾ ವಯ್ಯಾರವಾಗಿ ಹೇಳಿದಳು.
“ಈ ದಿನ ಹೇಳುವ ಅವಕಾಶ ಸಿಕ್ಕಿತು,” ಉತ್ತೇಜಿತನಾಗಿ ವಿಕಾಸ್ ನುಡಿದ. “ಶಿಲ್ಪಾ ನೀವು ನನ್ನ ಮೇಲೆ ಏನೋ ಮಂತ್ರ ಹಾಕಿದಂತೆ ಭಾಸವಾಗುತ್ತಿದೆ.”
“ನಾನೇನು ಮಂತ್ರವಾದಿಯೇ, ನಿಮಗೆ ಮಂತ್ರ ಹಾಕಲು?” ಶಿಲ್ಪಾ ಮೋಹಕವಾಗಿ ಮುಗುಳ್ನಗುತ್ತಾ ನುಡಿದಾಗ ವಿಕಾಸನ ಸಂಯಮ ಗಾಳಿಗೆ ಹಾರಿ ಹೋಯಿತು. ಅವನು ಶಿಲ್ಪಾಳ ಬಳಿ ಸರಿದು, ಅವಳ ಕೈ ಹಿಡಿದುಕೊಂಡು ಹೇಳಿದ, “ಹೌದು ಶಿಲ್ಪಾ, ನೀನು ನನಗೆ ಬಹಳ ಇಷ್ಟವಾಗಿದ್ದೀಯಾ. ನನ್ನನ್ನು ಹತೋಟಿಯಲ್ಲಿಡಲು ಎಷ್ಟು ಪ್ರಯತ್ನಿಸಿದರೂ ಅದರಲ್ಲಿ ನಾನು ವಿಫಲನಾಗಿದ್ದೇನೆ. ಈಗ ನಿನ್ನಿಂದ ದೂರ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಹಗಲು ರಾತ್ರಿ ನನಗೆ ನಿನ್ನದೇ ಧ್ಯಾನವಾಗಿದೆ.” ಅವನು ಹಿಡಿದಿದ್ದ ತನ್ನ ಕೈಯನ್ನು ನಿಧಾನವಾಗಿ ಬಿಡಿಸಿಕೊಂಡಳು. ಕೋಣೆಯಲ್ಲಿದ್ದ ಮನೋಜ್ ಇದನ್ನೆಲ್ಲಾ ನೋಡಿ ಹೊರಗೆ ಬಂದು ಗಲಾಟೆ ಮಾಡಿದರೆ ಎಂದು ಭಯಪಡುತ್ತಿದ್ದಳು. ಆದರೂ ಗಂಭೀರವಾಗಿ “ವಿಕಾಸ್, ನಾನೂ ನಿಮ್ಮನ್ನು ತುಂಬಾ ಇಷ್ಟ ಪಡುತ್ತೇನೆ. ಬಹುಶಃ ಇದನ್ನೇ ಪ್ರೀತಿ ಎಂದು ಹೇಳುತ್ತಾರೇನೋ…”
“ಆದರೆ ನಾನು ಮನೋಜ್‌ನೊಂದಿಗೆ ಇದ್ದೇನೆ. ನೀವು ದೀಪಾಳೊಂದಿಗೆ ಇದ್ದೀರಿ. ಇದನ್ನೂ ಸಹ ನಾವು ಯೋಚಿಸಬೇಕು ಅಲ್ಲವೇ?” ಎಂದಳು ಶಿಲ್ಪಾ.
“ಆದರೆ ನಾನು ದೀಪಾಳೊಂದಿಗೆ ಸುಖವಾಗಿಲ್ಲ, ಹೊರಗೆ ನಾವು ಸಂತೋಷದಿಂದಿರುವಂತೆ ಕಂಡರೂ, ಮನೆಯಲ್ಲಿ ದೀಪಾ ಯಾವಾಗಲೂ ಜಗಳವಾಡುತ್ತಾಳೆ. ಅಲ್ಲದೆ ಮಂಜುಗಡ್ಡೆಯಂಥ ಹೆಣ್ಣು.” ಶಿಲ್ಪಾಳ ಮನದಲ್ಲಿ ಸಹಾನುಭೂತಿ ಮೂಡಿಸಿ, ತನ್ನ ಬಗ್ಗೆ ಕೋಮಲ ಭಾವನೆಗಳನ್ನು ಉದಯಿಸುವಂತೆ ಮಾಡುವುದು ವಿಕಾಸ್‌ನ ಉದ್ದೇಶವಾಗಿತ್ತೇನೋ! ಅವನು ಹೇಳುತ್ತಿರುವುದು ನಿಜವೋ ಸುಳ್ಳೋ ಎಂಬುದು ಶಿಲ್ಪಾಳಿಗೆ ಅರ್ಥವಾಗಲಿಲ್ಲ.
ಶಿಲ್ಪಾ ಇದ್ದಕ್ಕಿದ್ದಂತೆ ತನ್ನ ವರ್ತನೆಯನ್ನು ಬದಲಾಯಿಸಿದಳು. “ವಿಕಾಸ್, ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತೇವೆ,” ಎಂದು ಹೇಳುತ್ತ ಶಿಲ್ಪಾ ತಾನೇ ವಿಕಾಸ್‌ನ ಬಳಿ ಸರಿದು ಅವನ ಕೈಯನ್ನು ಹಿಡಿದುಕೊಂಡು, “ನಾನು ಮನೋಜನನ್ನು ತ್ಯಜಿಸಬಲ್ಲೆ, ಅವರು ನನ್ನನ್ನು ತಡೆಯುವುದೂ ಇಲ್ಲ. ನನಗಾಗಿ ನೀವು ದೀಪಾಳನ್ನು ಬಿಡಬಲ್ಲಿರಾ?” ಎಂದು ಉತ್ತೇಜಿತ ಸ್ವರದಲ್ಲಿ ಹೇಳಿದಳು.
“ಶಿಲ್ಪಾ, ನಮ್ಮಿಬ್ಬರ ನಡುವೆ ಅಂತರವಿರುವುದು ನಿಜ. ಆದರೆ ಈ ವಿಷಯವಾಗಿ ನಾನು ಎಂದಿಗೂ ಯೋಚಿಸಿಲ್ಲ” ವಿಕಾಸ್ ಬಹಳ ಕಷ್ಟದಿಂದ ನುಡಿದ.
ಅದನ್ನು ಕೇಳಿ ಅವನಿಂದ ದೂರ ಸರಿಯುತ್ತಾ ಶಿಲ್ಪಾ ಹೇಳಿದಳು “ವಿಕಾಸ್, ಕಳ್ಳತನದಿಂದ ನಿಮ್ಮ ಸಂಬಂಧ ಇರಿಸಿಕೊಂಡು ಇಟ್ಟುಕೊಂಡವಳಂತೆ ಇರಲು ನನ್ನಿಂದ ಸಾಧ್ಯವಿಲ್ಲ. ಇದೇ ವಿಷಯವೇ ನನ್ನ ಮನೋಜ್‌ನ ನಡುವೆ ಬಿರುಕುಂಟು ಮಾಡಿತು, ನೀವು ಚೆನ್ನಾಗಿ ಯೋಚಿಸಿ.”
“ಶಿಲ್ಪಾ, ನೀವು ಬೇಜಾರು ಮಾಡಿಕೊಳ್ಳಬೇಡಿ. ನಿಮಗಾಗಿ ನಾನು ದೀಪಾಳನ್ನು ಬಿಟ್ಟು ಬಿಡುತ್ತೇನೆ. ನೀವು ಚಿಂತಿಸುವುದನ್ನೂ ನಾನು ಇಷ್ಟಪಡುವುದಿಲ್ಲ,” ಎನ್ನುತ್ತಾ ವಿಕಾಸ್ ಶಿಲ್ಪಾಳ ಕೈ ಹಿಡಿದ. ಇದನ್ನು ಇನ್ನು ಮುಂದುವರಿಸಲು ಇಷ್ಟಪಡದೆ, ಮೇಜಿನ ಮೇಲಿದ್ದ ಬೀಗದ ಕೈಯನ್ನು ಎತ್ತಿಕೊಂಡು ಶಿಲ್ಪಾ ಹೇಳಿದಳು, “ಇಂದಿಗೆ ಇಷ್ಟು ಸಾಕು ವಿಕಾಸ್, ಪಕ್ಕದ ಮನೆಯಾಕೆ ನನಗಾಗಿ ಕಾಯುತ್ತಿರುತ್ತಾಳೆ. ಅವಳೊಂದಿಗೆ ಆಸ್ಪತ್ರೆಗೆ ಬರುವೆನೆಂದು ಹೇಳಿದ್ದೆ. ಅದೂ ಅಲ್ಲದೆ ಊರಿಗೆ ಹೋದ ಮನೋಜ್ ಇಂದೇ ಬರುವುದಿಲ್ಲ. ನೀವು ಮತ್ತೆ ನಾಳೆ ಬನ್ನಿ. ಅಲ್ಲಿಯವರೆಗೂ ನಿಮಗೆ ಯೋಚಿಸಲು ಸಮಯವಿರುತ್ತದೆ,” ಇಷ್ಟು ಹೇಳುತ್ತಾ ಶಿಲ್ಪಾ ಎದ್ದು ಬಾಗಿಲೆಡೆಗೆ ನಡೆದಳು.
ವಿಕಾಸ್ ಇನ್ನೂ ಮಾತನಾಡಬೇಕೆಂದಿದ್ದ, ಶಿಲ್ಪಾ ಬಹಳ ಪ್ರಯಾಸದಿಂದ ಅವನನ್ನು ಕಳುಹಿಸಿದಳು. ಅವಳು ಒಳಗೆ ಬಂದೊಡನೆ ಚಿಂತಾಕ್ರಾಂತನಾಗಿ ಕುಳಿತಿದ್ದ ಮನೋಜ್‌ನನ್ನು ಕಂಡಳು. ಅವನು ಗಾಢವಾದ ಯೋಚನೆಯಲ್ಲಿ ಮುಳುಗಿದ್ದ. ಇದನ್ನು ನೋಡಿ ಶಿಲ್ಪಾಳ ತುಟಿಗಳ ಮೇಲೆ ವ್ಯಂಗ್ಯ ನಗೆ ಮೂಡಿತು.
“ಮಿತ್ರನಾಗಿದ್ದುಕೊಂಡು ಇವನು ಇಂತಹ ನೀಚ ಕೆಲಸವನ್ನು ಮಾಡುತ್ತಾನೆಂದು ನಾನು ತಿಳಿದಿರಲಿಲ್ಲ,” ಮನೋಜ್ ತನ್ನ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಪಡುತ್ತಾ ಹೇಳಿದ.
“ವಿಕಾಸ್‌ನೊಬ್ಬನನ್ನೇ ಏಕೆ ದೂರುತ್ತೀರಿ? ಅವನಂಥವರು ಎಷ್ಟೋ ಜನರಿದ್ದಾರೆ. ನಾನು ಮನಸ್ಸು ಮಾಡಿದರೆ ವಾಸು, ರಾಕೇಶ್ ಮುಂತಾದವರನ್ನೂ ಕರೆಯಬಹುದು. ಅವರೆಲ್ಲರೂ ನಿಮ್ಮ ಹಾಗೇ ಹೆಣ್ಣುಗಳೆಂದರೆ ಹಲ್ಲುಗಿಂಜುತ್ತಾರಲ್ಲದೆ, ಅವಕಾಶ ಸಿಕ್ಕಿದರೆ ಇನ್ನೂ ಹೆಚ್ಚು ಮುಂದುವರಿಯುತ್ತಾರೆ,” ಶಿಲ್ಪಾ ತೀಕ್ಷ್ಣ ಸ್ವರದಲ್ಲಿ ಹೇಳಿದಳು.
“ಅವರನ್ನು ಉತ್ತೇಜಿಸುವುದರಲ್ಲಿ ನೀನೂ ಹಿಂದೆ ಬೀಳಲಿಲ್ಲವಲ್ಲ?” ಕೋಪದಿಂದ ಮನೋಜ್ ಕಿರುಚಿದ.
“ಈ ಒಂದು ಸಣ್ಣ, ಆದರೆ ಮಹತ್ವಪೂರ್ಣ ವಿಷಯವನ್ನು ನಿಮಗೆ ತಿಳಿಸಲು, ನಮ್ಮ ವೈವಾಹಿಕ ಜೀವನದ ಈ ಹತ್ತು ತಿಂಗಳಲ್ಲಿ, ನನಗೆ ಸಾಧ್ಯವಾಗಲೇ ಇಲ್ಲ. ಯಾವುದೇ ಸುಂದರಿಯಾದ ಹೆಣ್ಣಿನ ವಿಷಯ ಬಿಡಿ. ಒಬ್ಬ ಸಾಧಾರಣ ಸ್ತ್ರೀ ಕೂಡ ತನ್ನ ಯೌವನ ತುಂಬಿದ ಶರೀರದ ಆಸೆ ತೋರಿಸಿ ಎಂತಹ ಗಂಡಸನ್ನಾದರೂ ಬಲೆಗೆ ಬೀಳಿಸಬಹುದು. ಅದೇ ಒಬ್ಬ ಸುಶೀಲೆಯಾದ ಹೆಣ್ಣನ್ನು ತನ್ನತ್ತ ಆಕರ್ಷಿಸಲು ಅತ್ಯಂತ ರೂಪವಂತ ಗಂಡಸಿಗೂ ಸಾಧ್ಯವಾಗುವುದಿಲ್ಲ.
“ಅನೈತಿಕ ಸಂಬಂಧಗಳ ಆಟದ ನಿಯಂತ್ರಣ ಹೆಣ್ಣಿನ ಕೈಯಲ್ಲೇ ಇರುತ್ತದೆ. ಪುರುಷರು ತಮ್ಮ ರೂಪ, ಐಶ್ವರ್ಯಗಳಿಂದ ಹೆಣ್ಣುಗಳನ್ನು ಮರಳು ಮಾಡಿದ್ದೇವೆಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ತಾವೇ ಹೆಣ್ಣುಗಳ ಮೋಹದ ಜಾಲದಲ್ಲಿ ಸಿಲುಕಿರುತ್ತಾರೆ.”
ಮನೋಜ್ ಏನೂ ಮಾತನಾಡದೆ ಸುಮ್ಮನಿದ್ದ. ಶಿಲ್ಪ ತನ್ನ ಮಾತನ್ನು ಮುಂದುವರಿಸುತ್ತ ಹೇಳಿದಳು.
“ಈ ದಿನ ನೀವು ವಿಕಾಸ್‌ನ ಮೇಲೆ ಕೋಪಗೊಂಡಿರಲ್ಲವೇ? ಸ್ನೇಹಿತನ ಹೆಂಡತಿಯನ್ನು ಅವನು ಬಯಸುತ್ತಿದ್ದಾನೆ ಎನ್ನುವುದು ತಪ್ಪಾದರೆ, ನಿಮ್ಮ ಅಧಿಕಾರಿಯ ಹೆಂಡತಿಯನ್ನು ನೀವು ಬಯಸುತ್ತಿಲ್ಲವೇ? ನಾವಿಬ್ಬರೂ ಹೀಗೆ ಒಬ್ಬರಿಗೊಬ್ಬರು ಬೇಸರಪಡಿಸುವ ಬದಲು ಇಂದೇ ಬೇರೆ ಬೇರೆಯಾಗಿ ನಮ್ಮ ದಾರಿಯಲ್ಲಿ ನಾವು ಏಕೆ ನಡೆಯಬಾರದು? ನೀವು ಚೆನ್ನಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ,” ಶಿಲ್ಪಾಳ ಗಂಟಲು ಒತ್ತಿದಂತಾಗುತ್ತಿತ್ತು. ಆದರೆ ತನ್ನ ದುಃಖವನ್ನು ಮನೋಜ್‌ನಿಗೆ ತೋರ್ಪಡಿಸಬಾರದೆಂದು ಅವಳು ಉದ್ದೇಶಿಸಿದ್ದಳು. ಅವಳು ತನ್ನ ಕೋಣೆಗೆ ಹೊರಟು ಹೋದಳು. ಮನೋಜ್‌ನಿಗೆ ಮಾತನಾಡಲು ಆಗಲಿಲ್ಲ.
ಶಿಲ್ಪಾ ಹಾಸಿಗೆಯ ಮೇಲೆ ಬೋರಲಾಗಿ ಮಲಗಿದಳು. ಕಣ್ಣೀರಿನಿಂದ ದಿಂಬು ತೊಯ್ದು ಹೋಯಿತು. ಮನೋಜ್ ಆಳವಾಗಿ ಯೋಚಿಸಿದ. ತಾನು ರೇಖಾಳೊಂದಿಗೆ ಸರಸವಾಡುತ್ತಿದ್ದಾಗ ತನ್ನ ಪುರುಷತ್ವಕ್ಕೆ ಹೆಮ್ಮೆ ಎಂದು ತಿಳಿದಿದ್ದೆ. ಶಿಲ್ಪಾಳ ಕಡೆ ತನಗೆ ಗಮನವಿರಲಿಲ್ಲ. ಈಗ ಅವಳು ವಿಕಾಸ್‌ನೊಡನೆ ಪ್ರೀತಿಯ ಮಾತುಗಳಾಡಿದಾಗ ತನಗೇಕೆ ಹೊಟ್ಟೆಯಲ್ಲಿ ಬೆಂಕಿ ಸುರಿದ ಹಾಗಾಯಿತು? ಅಂದರೆ ಶಿಲ್ಪಾಳಲ್ಲಿ ನನಗೆ ಪ್ರೀತಿಯಿತ್ತೇ? ಹಾಗಾದರೆ ರೇಖಾಳ ಸಂಗಕ್ಕೆ ನಾನೇಕೆ ಬಿದ್ದೆ? ನನ್ನ ಅಹಂ ಮೆರಸಲೆಂದೇ? ಇಂದು ವಿಕಾಸನೊಡನೆ ಶಿಲ್ಪಾ ಮಾತನಾಡಿದ್ದರಿಂದಲೇ ಇಷ್ಟು ಸಿಟ್ಟು ಬಂತಲ್ಲ, ತಾನು ರೇಖಾಳೊಡನೆ ಸುತ್ತುತ್ತಿದ್ದಾಗ ಶಿಲ್ಪಾಳಿಗೆ ಹೇಗಾಗಿರಬಹುದು? ಜೀವನವೊಂದು ಸರೋವರದಂತೆ, ಅದನ್ನು ಕದಡಿದರೆ ಮೇಲೆ ಬರುವುದು ಕೆಸರಷ್ಟೇ ಎಂದು ಮನೋಜ್‌ಗೆ ಅರಿವಾಯಿತು. ಅವನ ಮನದಲ್ಲಿ ತುಂಬಿದ್ದ ಅಹಂ ಕರಗಿತ್ತು. ಕಣ್ಣಿಗೆ ಅಂಟಿದ್ದ ಧೂಳು ಮರೆಯಾಗಿ ಬಾಳಿನ ದಾರಿ ಸ್ಪಷ್ಟವಾಯಿತು. ಅವನು ಶಿಲ್ಪಾಳ ಬಳಿ ಬಂದ.
“ಶಿಲ್ಪಾ, ನಾನು ನನ್ನ ತಪ್ಪನ್ನು ಅರಿತುಕೊಂಡಿದ್ದೇನೆ. ಗಂಡ ಹೆಂಡಿರಲ್ಲಿ, ತಮ್ಮ ಸುಖಕ್ಕಾಗಿ ಒಬ್ಬರು ಮತ್ತೊಬ್ಬರನ್ನು ಬಲಿ ಕೊಡುವುದು ತಪ್ಪು. ದುರಾಸೆಯ ಬೆನ್ನು ಹತ್ತಿ ವಿವೇಚನೆಯಿಂದ ನಡೆದುಕೊಳ್ಳದಿದ್ದರೆ ದುರಂತ ಕಟ್ಟಿಟ್ಟ ಬುತ್ತಿ ಎಂದು ತಿಳಿದುಕೊಂಡಿದ್ದೇನೆ. ಶಿಲ್ಪಾ ನನ್ನನ್ನು ಕ್ಷಮಿಸು,” ಎಂದ. ಮನೋಜ್‌ನ ಸ್ವರದಲ್ಲಿ ಯಾವುದೇ ನಾಟಕೀಯತೆ ಇರಲಿಲ್ಲ.
ಇದನ್ನು ಕೇಳಿ ಶಿಲ್ಪಾಳ ಕಣ್ಣಲ್ಲೂ ಆಶಾಕಿರಣ ಮೂಡಿತು. ಆದರೂ ಅವಳಿಗೆ ಪೂರ್ತಿ ನಂಬಿಕೆ ಬರಲಿಲ್ಲ. ಅವಳು ಮನೋಜ್‌ನನ್ನು ನೆಟ್ಟ ದೃಷ್ಟಿಯಿಂದ ನೋಡತೊಡಗಿದಳು.
ಮನೋಜ್ ಅವಳಿಗೆ ವಿಶ್ವಾಸ, ನೀಡುತ್ತಾ ಹೇಳಿದ “ನಾನು ಪ್ರಮಾಣ ಮಾಡುತ್ತೇನೆ, ಇನ್ನೆಂದಿಗೂ ನಿನ್ನ ಮನಸ್ಸಿಗೆ ಬೇಸರವನ್ನು ಉಂಟು ಮಾಡುವುದಿಲ್ಲ.” ಈ ಮಾತುಗಳನ್ನು ಕೇಳಿ ಶಿಲ್ಪಾಳ ಮನ ಸಂತಸದಿಂದ ತುಂಬಿತು. ಮದುವೆಯಾದ ಹೊಸತರಲ್ಲಿ ಹೊಮ್ಮುತ್ತಿದ್ದ ಪ್ರೀತಿಯೇ, ಇಂದು ಮನೋಜ್‌ನ ಕಣ್ಣುಗಳಲ್ಲಿ ತುಂಬಿತ್ತು. ಉಕ್ಕಿ ಬಂದ ಭಾವೋನ್ಮಾದದಿಂದ ಶಿಲ್ಪಾ ಅವನ ಕೊರಳನ್ನು ತನ್ನ ಕೈಗಳಿಂದ ಬಳಸಿದಳು. ಇಬ್ಬರೂ ಸ್ನಲ್ಪ ಹೊತ್ತು ಹಾಗೇ ಕುಳಿತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೋಜ್, “ನಾವಿಬ್ಬರೂ ಮುಂಬಯಿಗೆ ಹೋಗೋಣ. ಅಲ್ಲಿ ಹೊಸದಾಗಿ ಜೀವನವನ್ನು ಆರಂಭಿಸೋಣ,” ಎಂದು ಹೇಳಿ, “ಇನ್ನೂ ಇಲ್ಲಿ ನಿನ್ನೊಬ್ಬಳನ್ನೇ ಬಿಡುವುದು ಅಪಾಯ. ಹೀಗೆ ಬಿಟ್ಟರೆ ನಿನ್ನ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿಬಿಡುತ್ತದೆ,’’ ಎಂದು ಹಾಸ್ಯ ಮಾಡಿದ.