ಕಥೆ – ಕಾತ್ಯಾಯನಿ 

ಸೌಮ್ಯಾಳ ಅನಿಮೇಶನ್‌ ಫಿಲಂನ ಯಶಸ್ಸಿಗಾಗಿ ಅವಳನ್ನು ಅಭಿನಂದಿಸಲು ಸಹಪಾಠಿ ಅನಂತ್‌ ಅವಳ ಮನೆಗೆ ಬಂದ. ಜೊತೆಯಲ್ಲಿ ಅವನ ಸ್ನೇಹಿತ ಮಧುಕರ್‌ ಕೂಡ ಇದ್ದ.

ಗೆಳೆಯನನ್ನು ಪರಿಚಯಿಸುತ್ತಾ ಅನಂತ್‌ ಹೇಳಿದ, “ಇವನು ನನ್ನ ಸ್ನೇಹಿತ ಮಧುಕರ್‌, ಚೆನ್ನೈನಿಂದ ಬಂದಿದ್ದಾನೆ. ನನ್ನ ರೂಮಿನಲ್ಲಿ ಉಳಿದುಕೊಂಡಿದ್ದಾನೆ. ಅವನೊಬ್ಬನನ್ನೇ ಬಿಟ್ಟು ಬರಬೇಕಲ್ಲ ಅಂತ ನಿನಗೆ ವಿಶ್‌ ಮಾಡಲು ಬರುವಾಗ ಅವನನ್ನೂ ಕರೆದುಕೊಂಡು ಬಂದೆ.”

“ಒಳ್ಳೆಯದಾಯಿತು ಅನಂತ್‌. ನನಗೂ ಇವರ ಭೇಟಿ ಆದಂತಾಯಿತು,” ಎನ್ನುತ್ತಾ ಸೌಮ್ಯಾ ಅತ್ತ ತಿರುಗಿ ಮಧುಕರನನ್ನು ಕೇಳಿದಳು, “ಅಂದಹಾಗೆ ನೀವು ಬೆಂಗಳೂರಿಗೆ ಬಂದಿರುವ ಕಾರಣ?”

“ಕೆಲಸ ಹುಡುಕಲು ಬಂದಿದ್ದೇನೆ.”

“ಉತ್ತಮ ಕೆಲಸ ಅಂತ ಹೇಳು,” ಅನಂತ್‌ ಮಧ್ಯೆ ಮಾತನಾಡಿದ.

“ಇವನು ಜನಪ್ರಿಯ ಟಿವಿ ಚಾನೆಲ್‌ನಲ್ಲಿ ಪ್ರೋಗ್ರಾಂ ಪ್ಲಾನರ್‌ ಆಗಿದ್ದಾನೆ. ಅದರಲ್ಲಿ ಸೀರಿಯಲ್‌ಗಳು ವರ್ಷಗಟ್ಟಲೆ ಮುಂದುವರಿಯುತ್ತಿರುತ್ತವೆ. ಅದರಿಂದ ಇವನಿಗೆ ಹೊಸದೇನಾದರೂ ಮಾಡಲು ಅವಕಾಶವೇ ಇರುವುದಿಲ್ಲ. ಹೀಗಾಗಿ ಚ್ಯಾನೆಲ್‌ ಬದಲಾಯಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾನೆ.”

“ಹಾಗಾದರೆ ನೀವು ನಮ್ಮ ಲೈನ್‌ನಲ್ಲಿ ಇದ್ದೀರಿ ಅಂತ ಆಯಿತು.”

“ಹೌದು. ಅದರಿಂದಲೇ ಅನಂತನ ಜೊತೆ ಸ್ನೇಹ ಇರುವುದು.”

“ಸೌಮ್ಯಾ, ನಿನ್ನ ಸಕ್ಸೆಸ್‌ಗಾಗಿ ಒಂದು ಪಾರ್ಟಿ ಏರ್ಪಡಿಸಿ ಇವನನ್ನೂ ಇನ್‌ವೈಟ್‌ ಮಾಡಿದರೆ, ನಿನ್ನ ಸ್ನೇಹವನ್ನೂ ಇಟ್ಟುಕೊಳ್ಳುತ್ತಾನೆ. ಏನಂತೀಯಾ?” ಅನಂತ್‌ ನಗೆಚಟಾಕಿ ಹಾರಿಸಿದ.

“ಆಗಲಿ ಮೊದಲು ನಮ್ಮ ಮನೆಯಲ್ಲೇ ಅಮ್ಮ ಮಾಡಿರುವ ಕೇಸರಿಭಾತ್‌ ತಿನ್ನಿ. ಆಮೇಲೆ ಹೊರಗಡೆ ಊಟಕ್ಕೆ ಹೋಗೋಣ.”

ಮೂವರೂ ಡೈನಿಂಗ್‌ ಟೇಬಲ್‌ನತ್ತ ನಡೆದರು. ಸುಶೀಲಾ ಅವರಿಗೆಲ್ಲ ತಿಂಡಿ ಕಾಫಿ ಕೊಟ್ಟು ಉಪಚರಿಸಿದರು.

“ತಿಂಡಿ ಬಹಳ ಚೆನ್ನಾಗಿತ್ತು,” ಮಧುಕರ್‌ ಕೈ ತೊಳೆದುಕೊಳ್ಳುತ್ತಾ ಹೇಳಿದ.

“ಹೊರಗೆ ಊಟ ಮಾಡುವ ಬದಲು ಮನೆಯಲ್ಲೇ ಮಾಡಿದರೆ ಹೇಗೆ? ನಾನಂತೂ ಹೋಟೆಲ್‌‌ಗೆ ಊಟ ತಿಂಡಿ ತಿಂದು ರೋಸಿಹೋಗಿದ್ದೇನೆ.”

“ಸೌಮ್ಯಾ…. ನಿನಗೆ ತೊಂದರೆ ಬರುವುದಿಲ್ಲ ಅನ್ನುವುದಾದರೆ ನನಗೂ ಮನೆಯಲ್ಲೇ ಬಿಸಿಬೇಳೆ ಭಾತ್‌ ತಿನ್ನುವುದಕ್ಕೆ ಇಷ್ಟ.”

ಕೂಡಲೇ ಸುಶೀಲಾ ಹೇಳಿದರು, “ಅವಳಿಗೇನು ತೊಂದರೆ ಆಗುತ್ತದೆ? ನಾನಿದ್ದೇನಲ್ಲ ಮಾಡಿಕೊಡುವುದಕ್ಕೆ… ಬಿಸಿಬೇಳೆ ಬಾತ್‌ ಜೊತೆಗೆ ಏನು ಮಾಡಲಿ?”

“ಒಂದಿಷ್ಟು ಹಪ್ಪಳ, ಸಂಡಿಗೆ ಕರಿದು, ಜಾಮೂನು ಮಾಡಿಬಿಡಿ ಆಂಟಿ ಅಷ್ಟು ಸಾಕು. ಆಮೇಲೆ ಸೌಮ್ಯಾಳ ಮದುವೆ ಫಿಕ್ಸ್ ಆದಾಗ ಇನ್ನೂ ದೊಡ್ಡ ಪಾರ್ಟಿ ಕೇಳೋಣ,” ಅನಂತ್‌ ಚುಡಾಯಿಸಿದ.

“ಓಹೋ! ನನ್ನ ಮದುವೆಯ ಪ್ರಶ್ನೆಯೇ ಇಲ್ಲ. ಮೊದಲು ಅಣ್ಣನ ಮದುವೆ ಆಗಬೇಕು. ಆಮೇಲೆ ನನ್ನ ವಿಷಯ…… ನಾನು ಒಪ್ಪಿದ ಹುಡುಗಿಯನ್ನೇ ಮದುವೆಯಾಗುವುದಾಗಿ ಅಣ್ಣ ಹೇಳಿಬಿಟ್ಟಿದ್ದಾನೆ. ಆದರೆ ನಾನು ನನ್ನ ಕೆರಿಯರ್‌ ರೂಪಿಸಿಕೊಳ್ಳುವುದರಲ್ಲಿ ಎಷ್ಟು ಮಗ್ನಳಾಗಿದ್ದೇನೆಂದರೆ ಅಣ್ಣನಿಗೆ ಹುಡುಗಿಯನ್ನು ನೋಡುವುದಕ್ಕೆ ನನಗೆ ಬಿಡುವೇ ಇಲ್ಲದಂತಾಗಿದೆ.”

“ಅಣ್ಣನ ಎಣಿಕೆ ಏನು ಅಂದರೆ, ಅವನು ಮದುವೆಯಾಗುವ ಹುಡುಗಿಯನ್ನು ನಾನೇ ಆರಿಸಿ ಹೊಂದಾಣಿಕೆಯಿಂದ ಇದ್ದರೆ ಮುಂದೆ ನಮ್ಮ ನಮ್ಮ ಸಂಬಂಧ ಬಲವಾಗಿರುತ್ತದೆ ಅಂತ. ಅವಳು ಮನೆಯವರ ಜೊತೆಗೂ ಹೊಂದಿಕೊಳ್ಳಬೇಕು ಮತ್ತು ಬಿಸಿನೆಸ್‌ನ ಜವಾಬ್ದಾರಿಯಲ್ಲಿ ಭಾಗಿಯಾಗಬೇಕು ಅನ್ನುವುದು ಅವನ ಆಸೆ. ನಾನು ಅಂತಹ ಸುಂದರ ಸ್ಮಾರ್ಟ್‌ ಹುಡುಗಿಯನ್ನು ಆರಿಸಬೇಕಾಗಿದೆ.”

“ಓಹೋ! ನಮ್ಮಿಬ್ಬರ ಕುಟುಂಬದವರೂ ಒಂದೇ ರೀತಿ ಯೋಚಿಸುತ್ತಿರುವ ಹಾಗಿದೆ,” ಮಧುಕರ ಹೇಳಿದ, “ನನ್ನ ಅಣ್ಣನಿಗೆ ಹುಡುಗಿಯನ್ನು ನನ್ನ ಅಕ್ಕ ಮತ್ತು ನಾನು ಆರಿಸುತ್ತಿದ್ದೇವೆ. ಆಮೇಲೆ ಮನೆಗೆ ಬರುವ ಅತ್ತಿಗೆ ನನ್ನ ಹುಡುಗಿಯನ್ನು ಆರಿಸುತ್ತಾರೆ. ಏಕೆಂದರೆ ಮನೆಯಲ್ಲಿ ವಾರಗಿತ್ತಿಯರು ಹೊಂದಿಕೊಂಡು ನಡೆದರೆ ಸಂಸಾರ ಸುಗಮವಾಗಿ ಸಾಗುತ್ತದೆ ಅಲ್ಲವೇ?”

“ಪರವಾಗಿಲ್ಲವೇ, ಬಹಳ ಮುಂದಾಲೋಚನೆ ಮಾಡಿದ್ದೀಯಾ….. ಆದರೆ ನೀನು ಹಗಲೂ ರಾತ್ರಿ ಹುಡುಗಿಯರ ಜೊತೆಗೇ ಕೆಲಸ ಮಾಡುತ್ತಿರುತ್ತೀಯಾ… ಯಾರಾದರೂ ನಿನಗೇ ಮೆಚ್ಚುಗೆಯಾದರೆ ಏನು ಮಾಡುತ್ತೀಯಾ?” ಅನಂತ್‌ ಕೇಳಿದ.

“ಅದಕ್ಕೇ ನಾನು ಹುಡುಗಿಯರ ಜೊತೆ ಹಾಯ್‌ಬಾಯ್‌ಗಿಂತ ಹೆಚ್ಚು ಮುಂದುವರಿಯುವುದಿಲ್ಲ….. ಅಕ್ಕ, ತಂಗಿ ಅಂತ ಹೇಳಿಕೊಂಡು ಮಾತನಾಡಿಸುತ್ತೇನೆ. ಹೀಗಾಗಿ ನನಗೆ ಪುಕ್ಕಲ, ಡರ್‌ಪೋಕ್‌ ಅಂತೆಲ್ಲ ಹೆಸರಿಟ್ಟಿದ್ದಾರೆ…. ಅತ್ತಿಗೆಯೊಬ್ಬಳು ಬಂದುಬಿಡಲಿ, ಆಮೇಲೆ ಸೋದರಿ ಭಾವನೆಯನ್ನು ದೂರ ಮಾಡಿ ಅತ್ತಿಗೆಗೆ ತಕ್ಕವಳಾದ ಹುಡುಗಿ ಇದ್ದಾಳಾ ಅಂತ ನೋಡುತ್ತೇನೆ,” ಮಧುಕರ್‌ ನಕ್ಕ.

ಮೂವರೂ ಹೊರಗೆ ಹೋಗಿ ಕೊಂಚ ಸುತ್ತಾಡಿ ಬಂದು ಟಿ.ವಿ ನೋಡಿದರು. ಸುಶೀಲಾ ಬಡಿಸಿದ ರುಚಿಕರಾದ ಊಟವನ್ನು ಹೊಟ್ಟೆ ತುಂಬ ತಿಂದರು.

“ಹೊಟ್ಟೆ ಭರ್ತಿ ಆಯಿತು ಆಂಟಿ….. ನಾಳೆ ಚೆನ್ನೈಗೆ ಹಿಂದಿರುಗಿ ಹೋಗುತ್ತಿದ್ದೇನೆ. ಆದರೆ ಮತ್ತೆ ಬಂದಾಗ ನಿಮ್ಮ ಕೈ ಅಡುಗೆಯನ್ನೇ ಊಟ ಮಾಡುತ್ತೇನೆ.”

ಮಧುಕರನ ಸರಳ ಮನಸ್ಸಿಗೆ ಸುಶೀಲಾ ಮಾರುಹೋದರು.

ಒಂದೆರಡು ತಿಂಗಳ ನಂತರ, ಮಧುಕರ್‌ ಭಾನುವಾರದ ದಿನ ಬೆಂಗಳೂರಿಗೆ ಬರುತ್ತಿರುವುದಾಗಿ ಅನಂತ್‌ ತಿಳಿಸಿದ.

“ಓ! ಅಣ್ಣನಿಗೆ ಒಂದು ಸಂಬಂಧದ ಪ್ರಸ್ತಾಪ ಬಂದಿದೆ. ಅವರು ಬೆಳಗಾವಿಯವರು. ಹುಡುಗಿಯನ್ನು ಮೈಸೂರಿಗೆ ಕರೆದುಕೊಂಡು ಬಂದು ತೋರಿಸುತ್ತಾರೆ. ಅದಕ್ಕೇ ನಾವು ಶುಕ್ರವಾರ ಸಾಯಂಕಾಲ ಮೈಸೂರಿಗೆ ಹೊರಡಬೇಕಾಗಿದೆ,” ಸೌಮ್ಯಾ ಹೇಳಿದಳು.

“ನೀನೂ ಹೋಗಬೇಕೇನು?”

“ಹೌದು, ನಾನು ಒಪ್ಪಿದ ಹುಡುಗಿಯನ್ನೇ ಅಣ್ಣ ಮದುವೆಯಾಗುವುದು.”

“ನೀನು ವಾಪಸ್‌ ಬರುವುದು ಯಾವಾಗ?”

“ಹುಡುಗಿಯನ್ನು ಶನಿವಾರದ ದಿನ ನೋಡುತ್ತೇವೆ. ಎಲ್ಲ ಸರಿಹೋದರೆ ಭಾನುವಾರ ಒಪ್ಪಿಗೆ ಶಾಸ್ತ್ರ, ಎಂಗೇಂಜ್‌ಮೆಂಟ್‌ ಕಾರ್ಯಕ್ರಮ ಇರುತ್ತದೆ. ಅದನ್ನೆಲ್ಲ ಮುಗಿಸಿ ಸೋಮವಾರ ಹಿಂದಿರುಗುತ್ತೇವೆ.”

“ಭಾನುವಾರ ಮಧ್ಯಾಹ್ನ ಕಾರ್ಯಕ್ರಮ ಮುಗಿಯುತ್ತದೆ ತಾನೇ, ಭಾನುವಾರ ಸಂಜೆ ವಾಪಸ್‌ ಬಂದುಬಿಡಬಹುದಲ್ಲ,” ಅನಂತ್‌ ಒತ್ತಾಯ ಪೂರ್ವಕವಾಗಿ ಹೇಳಿದ, “ಇಲ್ಲದಿದ್ದರೆ ನಾನು ನಿನಗೆ ವಿಷಯ ತಿಳಿಸಿಯೇ ಇಲ್ಲ ಅಂತ ಮಧು ಅಂದುಕೊಳ್ಳುತ್ತಾನೆ.”

“ಯಾವ ವಿಷಯ?” ಸೌಮ್ಯಾಳ ಎದೆಬಡಿತ ತೀವ್ರವಾಯಿತು.

“ಹೋಮ್ಲಿ ಫೀಲ್‌ಗಾಗಿ ನಿಮ್ಮ ಮನೆಯಲ್ಲೇ ಕಾಲ ಕಳೆಯುವ ಆಸೆ ಅವನಿಗೆ.”

ಸೌಮ್ಯಾಳ ಮನಸ್ಸಿಗೆ ಹಿತವೆನಿಸಿತು, “ಅಂದರೆ ನನ್ನ ಮನೆ ಅವನಿಗೆ ತನ್ನ ಮನೆಯ ಅನುಭವವನ್ನು ನೀಡುತ್ತಿದೆ ಎಂಬ ಅರ್ಥವದು. ಅಲ್ಲದೆ, ಅನಂತನೊಡನೆ ಅವನು ಮತ್ತಿನ್ನೇನು ಹೇಳಲು ಸಾಧ್ಯ?”

“ಓ.ಕೆ. ನಾನು ಭಾನುವಾರ ಸಾಯಂಕಾಲದ ಹೊತ್ತಿಗೆ ಬಂದುಬಿಡುತ್ತೇನೆ,” ಎಂದು ಸೌಮ್ಯಾ ಹೇಳಿದಳು. ಆದರೆ ಮದುವೆ ನಿಶ್ಚಯವಾದರೆ ಬರಲು ಸಾಧ್ಯವಾಗದು ಎಂಬುದು ಅವಳಿಗೆ ತಿಳಿದಿತ್ತು. ಏಕೆಂದರೆ ಅಣ್ಣ ಸುನೀಲ್‌, ಹುಡುಗಿಯ ಫೋಟೊ ಮತ್ತು ಬಯೋಡೇಟಾ ನೋಡಿಯೇ ಆಕರ್ಷಿತನಾಗಿ ಉಳಿದ ಪ್ರಸ್ತಾಪಗಳನ್ನೆಲ್ಲಾ ನಿರಾಕರಿಸಿಬಿಟ್ಟಿದ್ದ.

ಮಾನಸಿ ಸುಂದರ, ವಿದ್ಯಾವಂತ ಯುವತಿ. ಮದುವೆಯ ಬಗ್ಗೆ ಅವಳಿಗೆ ತನ್ನದೇ ಆದ ಕಲ್ಪನೆಗಳಿದ್ದವು. ಚಿಕ್ಕ ಕುಟುಂಬಕ್ಕಿಂತ ಒಟ್ಟು ಕುಟುಂಬವನ್ನು ಸೇರಬೇಕೆಂಬ ಆಸೆ ಅವಳಿಗೆ. ವಧು ಪರೀಕ್ಷೆಗಾಗಿ ತಂದೆ ತಾಯಿಯರ ಜೊತೆ ಮೈಸೂರಿಗೆ ಬಂದಳು.

ಮಧ್ಯಸ್ತಿಕೆ ನಡೆಸುತ್ತಿದ್ದ ರಾಘವೇಂದ್ರ ಶನಿವಾರ ರಾತ್ರಿ ಸೌಮ್ಯಾಳ ತಂದೆ ಕೃಪಾನಿಧಿಗೆ ಫೋನ್‌ ಮಾಡಿ ಅವರು ಮೈಸೂರಿಗೆ ಬಂದಿರುವುದನ್ನು ಖಚಿತಪಡಿಸಿಕೊಂಡರು.

“ಎಷ್ಟು ಹೊತ್ತಿಗೆ ತಲುಪಿದಿರಿ….? ಹ್ಞಾಂ…..ಹ್ಞಾಂ….. ಒಳ್ಳೆಯದಾಯಿತು. ನೀವು ಬರುವುದು ಖಂಡಿತ ಎಂದಾದ ಮೇಲೆಯೇ ನಾನು ದೇವರಾಜರಿಗೆ ಹುಡುಗಿಯನ್ನು ಕರೆತರುವಂತೆ ತಿಳಿಸಿದೆ. ಅವರು ಮಗಳಿಗೆ ಬೇಗನೆ ಮದುವೆ ಮಾಡಬೇಕೆಂಬ ಆತುರದಲ್ಲಿದ್ದಾರೆ. ನಾಳೆಯ ದಿವಸ ನಿಮ್ಮ ಕಡೆಯಿಂದ ಒಪ್ಪಿಗೆ ಆಗದಿದ್ದರೆ, ಅವರು ತಮ್ಮ ಮಗಳಿಗೆ ಬಂದಿರುವ ಮತ್ತೊಂದು ಪ್ರಸ್ತಾಪದ ಬಗ್ಗೆ ಮುಂದುವರಿಯಬೇಕಾಗಿದೆ.”

“ನೋಡಿ, ನಾವು ಫೋಟೊ ನೋಡಿ ಒಪ್ಪಿಗೆ ಆಗಿರುವುದರಿಂದಲೇ ಬಂದಿದ್ದೇವೆ,” ಕೃಪಾನಿಧಿ ಸ್ಪಷ್ಟವಾಗಿ ಹೇಳಿದರು, “ಸೌಮ್ಯಾಳಿಗೆ ಬಿಡುವು ಇಲ್ಲದಿದ್ದುದರಿಂದ ತಡವಾಯಿತು ಅಷ್ಟೇ. ಸರಿ, ನಾಳೆ ಭೇಟಿ ಮಾಡೋಣ.”

ಸೌಮ್ಯಾಳಿಗೆ ನಿರಾಳಾಯಿತು. ಇನ್ನೊಂದು ಪಾರ್ಟಿಯವರು ಆತುರದಲ್ಲಿದ್ದಾರೆ. ಹೀಗಾಗಿ ಕಾರ್ಯಕ್ರಮವೆಲ್ಲ ಬೇಗನೆ ಮುಗಿದು ತಾನು ಬೆಂಗಳೂರಿಗೆ ಹಿಂದಿರುಗಬಹುದು.

ನಿಗದಿಯಾಗಿದ್ದಂತೆ ಎರಡೂ ಕಡೆಯವರು ಶನಿವಾರ ಬೆಳಗ್ಗೆ ಭೇಟಿಯಾದರು. ಮಾನಸಿ ಫೋಟೋದಲ್ಲಿ ಇದ್ದದಕ್ಕಿಂತ ಹೆಚ್ಚಾಗಿ ಆಕರ್ಷಕಳಾಗಿದ್ದಳು. ಸುನೀಲ್‌ ತನ್ನ ಭಾವನೆಗಳನ್ನು ಪ್ರಯಾಸದಿಂದ ಹಿಡಿದಿಟ್ಟಿದ್ದನು.

ಮಾನಸಿಯ ತಮ್ಮ ಮೋಹನ್‌ ಬಹಳ ಆಸಕ್ತಿಯಿಂದ ಸೌಮ್ಯಾಳೊಂದಿಗೆ ಅನಿಮೇಶನ್‌ ಫೋಟೊಗ್ರಫಿಯ ಬಗ್ಗೆ ವಿಚಾರಿಸುತ್ತಿದ್ದ.

“ಫೋಟೊಗ್ರಫಿಯ ಕಡೆಗೆ ನಿನಗೆ ಹೆಚ್ಚಿನ ಒಲವು ಇರುವ ಹಾಗಿದೆ?” ಸೌಮ್ಯಾ ಅವನನ್ನು ಕೇಳಿದಳು.

“ನಮ್ಮ ಮನೆಯಲ್ಲಿ ಎಲ್ಲರಿಗೂ ಫೋಟೊಗ್ರಫಿಯ ಆಸಕ್ತಿ ಇದೆ. ನಮ್ಮ ತಂದೆ ಮಾನಸಿಗೆ ಎಂಬಿಎ ಬದಲು ಫೋಟೊಗ್ರಫಿಯ ಪ್ರೊಫೆಶನಲ್ ಕೋರ್ಸ್‌ ಮಾಡು ಅಂತಲೇ ಹೇಳಿದ್ದರು.”

“ಹಾಗಿದ್ದರೆ ಯಾಕೆ ಮಾಡಲಿಲ್ಲ?” ಮಾನಸಿಯತ್ತ ತಿರುಗಿ ಸೌಮ್ಯಾ ಕೇಳಿದಳು.

“ನನಗೆ ಒಟ್ಟು ಕುಟುಂಬದಲ್ಲಿ ಇರುವುದಕ್ಕೆ ಇಷ್ಟ. ಆ ಪ್ರೊಫೆಷನಲ್‌ನಲ್ಲಿ ಅದು ಕಷ್ಟವಾಗುತ್ತದೆ.”

“ಏಕೆ? ಸಂಸಾರದಲ್ಲಿ ಇದ್ದುಕೊಂಡೇ ನಿಮ್ಮ ಪ್ರತಿಭೆಯನ್ನು ವಿಕಾಸಗೊಳಿಸಬಹುದು.”

“ಇಂತಹ ಫ್ರೀಲ್ಯಾನ್ಸ್ ಜಾಬ್‌ ತೆಗೆದುಕೊಂಡರೆ ಮನೆಯ ಕಡೆ ಹೆಚ್ಚಿನ ಗಮನ ಕೊಡುವುದಕ್ಕೆ ಆಗುವುದಿಲ್ಲ. ಅಂಥವರಿಗೆ ನ್ಯೂಕ್ಲಿಯರ್‌ ಫ್ಯಾಮಿಲಿ ಸರಿಹೊಂದುತ್ತದೆ. ಆದರೆ ಈಚಿನ ಬೆಳವಣಿಗೆಯನ್ನು ನೋಡಿದರೆ ಒಟ್ಟು ಕುಟುಂಬಗಳಿಗಿಂತ ನ್ಯೂಕ್ಲಿಯರ್‌ ಫ್ಯಾಮಿಲಿಗಳಲ್ಲಿ ವಿಚ್ಛೇದನದ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತವೆ.”

“ಓಹೋ! ನೀವು ಅಲ್ಲಿಯವರೆಗೆ ಯೋಚನೆ ಮಾಡಿದ್ದೀರಾ?”

“ಹೌದು. ಪ್ರೀತಿಗೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ.”

“ವೆರಿಗುಡ್‌, ನೀವು ನನ್ನ ಅಣ್ಣನನ್ನು ಸಂತೋಷವಾಗಿ ಇರಿಸುತ್ತೀರಿ ಅಂದ ಹಾಗಾಯಿತು,” ಸೌಮ್ಯಾ ನಗುತ್ತಾ ಹೇಳಿದಳು.

“ನಾನು ಒಬ್ಬರ ಸಂತೋಷವನ್ನಲ್ಲ, ಇಡೀ ಕುಟುಂಬದ ಸಂತೋಷವನ್ನು ಗಮನಿಸುತ್ತೇನೆ.”

ಅಷ್ಟರಲ್ಲಿ ಊಟಕ್ಕೆ ಎಬ್ಬಿಸಿದರು. ಎಲ್ಲರೂ ಅಡುಗೆಯನ್ನು ಹೊಗಳುತ್ತಾ ಊಟ ಮಾಡಿದರು.

“ಊಟದ ರುಚಿಯನ್ನು ಹೊಗಳುವುದಿರಲಿ. ನಮ್ಮ ಹುಡುಗಿಯ ವಿಷಯವನ್ನು ಮಾತನಾಡೋಣ. ಅವಳು ನಿಮಗೆ ಒಪ್ಪಿಗೆಯಾದಳೇನು?” ರಾಘವೇಂದ್ರ ತಮಾಷೆಯಾಗಿ ಕೇಳಿದರು.

“ಅವಳನ್ನು ಒಪ್ಪದಿರುವ ಮಾತೇ ಇಲ್ಲ,” ಸೌಮ್ಯಾಳೂ ಅದೇ ರೀತಿ ನಗುತ್ತಾ ಉತ್ತರಿಸಿದಳು.

“ಹೌದು, ದೇವರಾಜ್‌ ಅವರೇ. ನಿಮ್ಮ ಮಗಳು ಇನ್ನು ಮುಂದೆ ನಮ್ಮವಳು,” ಕೃಪಾನಿಧಿಯೂ ಒಪ್ಪಿಗೆ ಸೂಚಿಸಿದರು.

“ಹಾಗಾದರೆ ತಡವೇಕೆ? ಹೂ ವೀಳ್ಯ ಅಥವಾ ಎಂಗೇಜ್‌ಮೆಂಟ್‌ ಕಾರ್ಯಕ್ರಮ ಮಾಡೋಣವೇ?” ರಾಘವೇಂದ್ರ ಕೇಳಿದರು.

“ಓಹೋ, ಖಂಡಿತ,” ಎಂದು ತಂದೆ ಹೇಳಿದಾಗ ಸುನೀಲ್ ಉತ್ಸಾಹಿತನಾದ.

“ಹಾಗಾದರೆ ನಾಳೆ ಸಾಯಂಕಾಲ ಒಂದು ಒಳ್ಳೆಯ ಕಾರ್ಯಕ್ರಮ ಏರ್ಪಾಟು ಮಾಡೋಣ. ನಮ್ಮ ನೆಂಟರೆಲ್ಲ ಮೈಸೂರಿನಲ್ಲಿ ಇದ್ದಾರೆ. ಬೆಳಗಾವಿಯಲ್ಲಿ ನಾವು ಯಾವುದೇ ಕಾರ್ಯಕ್ರಮ ಏರ್ಪಡಿಸಿದರೂ ಅವರಿಗೆಲ್ಲ ಅಲ್ಲಿಗೆ ಬರಲು ಆಗುವುದಿಲ್ಲ. ನಮಗೆ ಇರುವವಳು ಒಬ್ಬಳೇ ಮಗಳು. ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಿ ಒಳ್ಳೆಯ ಪಾರ್ಟಿ ಏರ್ಪಾಡು ಮಾಡೋಣ.”

ಸೌಮ್ಯಾ ಯೋಚನೆಗೀಡಾದಳು. ಭಾನುವಾರ ರಾತ್ರಿ ಪಾರ್ಟಿ ಏರ್ಪಾಟು ಮಾಡುವುದಾದರೆ ಅವಳು ಅಂದು ಹೊರಡುವಂತಿಲ್ಲ. ಹೇಗಾದರೂ ಮಾಡಿ ಮರುದಿನ ಹೊರಡಬೇಕೆಂಬ ತುಡಿತ ಅವಳಿಗೆ.

“ಒಂದು ದಿನದಲ್ಲಿ ಇಷ್ಟು ಗಡಿಬಿಡಿ ಮಾಡಿಕೊಂಡು ಏರ್ಪಾಟು ಮಾಡುವುದು ಏಕೆ? ಮೊದಲು ಹುಡುಗ ಹುಡುಗಿ ಇಬ್ಬರೂ 1-2 ಸಲ ಮಾತನಾಡಲಿ. ಆಮೇಲೆ ಮುಂದಿನ ವೀಕೆಂಡ್‌ನಲ್ಲಿ  ಆರಾಮವಾಗಿ ಕಾರ್ಯಕ್ರಮ ಇಟ್ಟುಕೊಳ್ಳೋಣ,” ಸೌಮ್ಯಾ ಹೇಳಿದಳು. “ಇಲ್ಲ, ಮುಂದಿನ ವಾರದವರೆಗೆ ನಾವು ಇಲ್ಲಿರುವುದಕ್ಕೆ ಆಗುವುದಿಲ್ಲ,” ಮಾನಸಿಯ ತಂದೆ ಹೇಳಿದರು, “ನನಗೆ ಆಫೀಸಿನ ಕೆಲಸಗಳಿವೆ. ಮೋಹನನಿಗೂ ಪ್ರಾಜೆಕ್ಟ್ ಪ್ರೆಸೆಂಟೇಶನ್‌ ಇದೆ.”

“ಹಾಗಿದ್ದರೆ ನಾಳೆ ಹೊರಟುಬಿಡಿ ಅಂಕಲ್. ನಾನೂ ಸಹ ನಾಳೆ ಹೊರಡುತ್ತೇನೆ. ಮುಂದಿನ ವೀಕೆಂಡ್‌ ಪಾರ್ಟಿಗೆ ನಾವೆಲ್ಲ ಮತ್ತೆ ಸೇರೋಣ,” ಸೌಮ್ಯಾ ಹೇಳಿದಳು.

“ಮತ್ತೆ, ನೀನು ಹೇಳಿದೆಯಲ್ಲ  ಹುಡುಗ ಹುಡುಗಿ ಭೇಟಿ ಮಾಡಿ ಮಾತನಾಡಲಿ ಅಂತ. ಅದು ಹೇಗೆ?” ರಾಘವೇಂದ್ರ ಕೇಳಿದರು.“ಹುಡುಗಿಯನ್ನು ಇ್ಲೀ ಉಳಿಸಿಕೊಳ್ಳಿ ಅಂಕಲ್. ಅದು ಆಗದಿದ್ದರೆ ಅಣ್ಣನನ್ನು ಬೆಳಗಾವಿಗೇ ಕಳಿಸಿಕೊಡೋಣ,” ಸೌಮ್ಯಾ ಸಲಹೆಯಿತ್ತಳು.

“ಅದೂ ಒಳ್ಳೆಯದೇ ಸುನೀಲ್‌. ಜೊತೆಗೆ ನೀವು ಬನ್ನಿ. ನಮ್ಮ ಮನೆಯನ್ನು ನೋಡಿದಂತಾಗುತ್ತದೆ,” ದೇವರಾಜ್‌ ಆಹ್ವಾನಿಸಿದರು.

ಸುನೀಲ್‌ ಮಧ್ಯೆ ಮಾತನಾಡಿದ, “ನನಗೆ ಹೊರಗೆ ಹೋಗುವುದಕ್ಕಾಗುವುದಿಲ್ಲ. ಈ ವಾರ ನಮ್ಮ ಫ್ಯಾಕ್ಟರಿ ಇನ್‌ಸ್ಪೆಕ್ಷನ್‌ಗೆ ಪೊಲ್ಯೂಶನ್‌ ಕಂಟ್ರೋಲ್ ಬೋರ್ಡ್‌ನಿಂದ ಅಧಿಕಾರಿಗಳು ಬರುತ್ತಾರೆ.”

“ಅದನ್ನು ಡ್ಯಾಡಿ ನೋಡಿಕೊಳ್ಳುತ್ತಾರೆ ಬಿಡು ಅಣ್ಣಾ,” ಎಂದಳು ಸೌಮ್ಯಾ.

“ಇಲ್ಲ ಸೌಮ್ಯಾ, ನನಗೆ ಪೊಲ್ಯೂಶನ್‌ ಕಂಟ್ರೋಲ್‌ ಬಗ್ಗೆ ಏನೂ ಗೊತ್ತಿಲ್ಲ,” ಕೃಪಾನಿಧಿ ಹೇಳಿದರು.

“ಅಣ್ಣ ತಿಳಿಸಿಕೊಡುತ್ತಾನೆ ಡ್ಯಾಡಿ….. ಈಗ ಹೊರಡಿ….. ಅವರೂ ಕೂಡ ಬೆಳಗಾವಿಗೆ ಹೊರಡಬೇಕಾಗಿದೆ,” ಸೌಮ್ಯಾ ಎದ್ದು ನಿಂತಳು,

“ಮುಂದಿನ ವಾರ ಮತ್ತೆ ಎಲ್ಲರೂ ಸೇರೋಣ.’

‘ಕಾರ್ಯಕ್ರಮವನ್ನು ಮುಂದೂಡಿದ್ದು ಸುನೀಲ್‌ಗಾಗಲಿ, ತಾಯಿ ತಂದೆಯರಿಗಾಗಲಿ ಇಷ್ಟವಾಗಲಿಲ್ಲ ಎಂದು ಸೌಮ್ಯಾಳಿಗೆ ಅನ್ನಿಸಿತು. ಆದರೆ ಅವಳಿಗೆ ಆ ಸಮಯದಲ್ಲಿ ತನ್ನ ಸಂತೋಷದ ಕಡೆಗೆ ಮಾತ್ರ ಗಮನವಿತ್ತು. ಆದಷ್ಟು ಬೇಗ ಬೆಂಗಳೂರಿಗೆ ಹೋಗಿ ಮಧುಕರನನ್ನು ಭೇಟಿ ಮಾಡುವ ಕಾತರ ಅವಳದು.

ಹಿಂದಿರುಗಿದ ದಾರಿಯಲ್ಲಿ ತಂದೆ ತಾಯಿಯರು ಎಂಗೇಜ್‌ಮೆಂಟ್‌ಗೆ ಆಮಂತ್ರಣ ನೀಡುವ ವಿಷಯ ಚರ್ಚಿಸಿದರು. ಹೋಟೆಲ್‌ ರೂಮ್ ತಲುಪಿದ ನಂತರ ಆಮಂತ್ರಿಕರ ಪಟ್ಟಿ ತಯಾರಿಸುತ್ತಿರುವಾಗಲೇ ಫೋನ್‌ ರಿಂಗಣಿಸಿತು.

ಫೋನ್‌ನಲ್ಲಿ ಮಾತನಾಡಿ ಬಂದ ಸುನೀಲ್ ನಿರ್ಭಾವ ಸ್ವರದಲ್ಲಿ ಹೇಳಿದ, “ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಯಬೇಕಾಗಿಲ್ಲ. ದೇವರಾಜ್‌ ಫೋನ್‌ ಮಾಡಿದ್ದರು. ಮಾನಸಿಯನ್ನೂ ನನಗೆ ಮದುವೆ ಮಾಡಿಕೊಡಲು ಆಗುವುದಿಲ್ಲ ಅಂತ ವಿಷಾದ ವ್ಯಕ್ತಪಡಿಸಿದರು.”

“ಯಾಕೆ ಮಾಡುವುದಿಲ್ಲವಂತೆ?” ಸೌಮ್ಯಾ ಆವೇಶದಲ್ಲಿ ಕಿರಿಚಿದಳು.

“ಅದಕ್ಕೇನು ಕಾರಣ?”

“ಕಾರಣ ಕೇಳಿದರೆ ನಿನಗೆ ಬೇಸರವಾಗುತ್ತದೆ.”

“ಅಂತಹದೇನು ಹೇಳಿದರು?”

“ಅವರು ಹೇಳುತ್ತಾರೆ, ನಮ್ಮ ಮನೆಯಲ್ಲಿ ತಂದೆ ತಾಯಿಗಿಂತ ನಿನ್ನ ಮಾತೇ ಹೆಚ್ಚಾಗಿ ನಡೆಯುತ್ತದೆಯಂತೆ. ತಂಗಿಯ ಮಾತಿನಂತೆ ನಡೆಯುವ ವರನಿಗೆ ಅವರು ಮಗಳನ್ನು ಕೊಡುವುದಿಲ್ಲವಂತೆ. ಈವತ್ತು ನಡೆದದ್ದು ನೋಡಿದರೆ ಅವರು ಹೇಳುತ್ತಿರುವುದು ಸರಿ ಅನ್ನಿಸುತ್ತದೆ,” ಹೇಳುತ್ತಾ ಸುನೀಲನ ಧ್ವನಿ ಉಡುಗಿತು.

“ಹೌದು. ಸೌಮ್ಯಾಳ ಬಾಯಿಯೇ ಮುಂದಾಗಿತ್ತು.” ತಾಯಿಯೂ ದನಿಗೂಡಿಸಿದರು.

“ನಾನು ಹೇಳಿದ್ದು ತಪ್ಪಾಗಿದ್ದರೆ ನೀವು ಸರಿಯಾಗಿ ಹೇಳಬಹುದಿತ್ತಲ್ಲ…. ಎಲ್ಲ ಕೆಲಸವನ್ನು ಬಿಟ್ಟು ಇಲ್ಲಿಗೆ ಬಂದಿದ್ದಾಯಿತು. ಈಗ ಮಾತು ಬೇರೆ ಕೇಳಬೇಕಾಯಿತು,” ಸೌಮ್ಯಾ ಮುಖ ಊದಿಸಿಕೊಂಡು ಹೊರನಡೆದಳು.

ಸ್ವಲ್ಪ ಸಮಯದ ನಂತರ ಸೌಮ್ಯಾಳ ತಾಯಿ, “ಮದುವೆಯೆಲ್ಲ ಋಣಾನುಬಂಧ. ನಮ್ಮ ಇಷ್ಟದಂತೆ ನಡೆಯುವುದಿಲ್ಲ,” ಎಂದು ಹೇಳಿ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದರು.

ಸುನೀಲ್‌ ತನ್ನ ಮನಸ್ಸಿನ ಭಾವನೆಯನ್ನು ತೋರ್ಪಡಿಸದೆ ಸಾಮಾನ್ಯವಾಗಿ ವ್ಯವಹರಿಸಲು ಪ್ರಯತ್ನಿಸುತ್ತಿದ್ದ. ಆದರೆ ಅವನಿಗೆ  ಆಘಾತವಾಗಿದೆಯೆಂದು ತಿಳಿಯುತ್ತಿತ್ತು. ಆದರೆ ಸೌಮ್ಯಾ ಸಂತೋಷದಿಂದಿದ್ದಳು. ಇನ್ನು ಮೈಸೂರಿನಲ್ಲಿ ಉಳಿಯಬೇಕಾಗಿಲ್ಲ ಎನ್ನುವುದೇ ಅವಳ ಸಂತೋಷಕ್ಕೆ ಕಾರಣವಾಗಿತ್ತು.

ಬೆಂಗಳೂರಿಗೆ ಹಿಂದಿರುಗಿದಾಗ ಅವಳ ಸಂತೋಷ ದ್ವಿಗುಣವಾಯಿತು. ಮಧುಕರನಿಗೆ ಇಲ್ಲೇ ಕೆಲಸ ದೊರೆತಿತ್ತು.

“ಯಾವಾಗ ಜಾಯಿನ್‌ ಆಗಬೇಕು?”

“ಮುಂದಿನ ವಾರ. ಫ್ಲಾಟ್‌ ಮತ್ತು ಕಾರ್‌ನ ಬೀಗದ ಕೈಗಳು ನಾಳೆಯೇ ಸಿಗುತ್ತವೆ. ಆದರೆ ಸದ್ಯದಲ್ಲಿ ಅನಂತನ ಜೊತೆಯಲ್ಲೇ ಇರುತ್ತೇನೆ…. ಚೆನ್ನೈನಿಂದ ಸಾಮಾನು ತಂದ ಮೇಲೆ ನನ್ನ ಫ್ಲಾಟ್‌ಗೆ ಶಿಫ್ಟ್ ಆಗುತ್ತೇನೆ.”

“ಫ್ಲಾಟ್‌ ಎಲ್ಲಿದೆ?” ಸೌಮ್ಯಾ ಉತ್ಸುಕತೆಯಿಂದ ವಿಚಾರಿಸಿದಳು.

“ನಿಮ್ಮ ಪಕ್ಕದ ಬಡಾವಣೆಯಲ್ಲಿ,” ಅನಂತ್‌ ಹೇಳಿದನು.

“ಅಂದರೆ….?”

“ಶಾಂತಿನಗರದಲ್ಲಿ. ಆದರೆ ದೂರದಲ್ಲಿ ಇದ್ದರೂ ನಡೆಯುತ್ತಿತ್ತು. ಏಕೆಂದರೆ ಭೇಟಿ ಮಾಡುವ ಮನಸ್ಸಿದ್ದರೆ ಹತ್ತಿರ ದೂರ ಎನ್ನುವ ವ್ಯತ್ಯಾಸ ಬರುವುದಿಲ್ಲ,” ಮಧುಕರ್‌ ಹೇಳಿದ.

“ಭೇಟಿ ಮಾಡಲು ದೂರ ಅಲ್ಲ, ಸಮಯದ ಪ್ರಶ್ನೆ ಬರುತ್ತದೆ,” ಎಂದ ಅನಂತ್‌.

“ನೀನು ಹೇಳುವುದು ಸರಿಯಾಗಿದೆ ಅನಂತ್‌. ಸೌಮ್ಯಾ ತನ್ನ ಅಣ್ಣನ ಮದುವೆಯ ಗಡಿಬಿಡಿಯಲ್ಲಿದ್ದರೆ, ಭೇಟಿ ಮಾಡಲು ಸಮಯ ಸಿಗಬೇಕಲ್ಲ. ನಿನ್ನ ಅಣ್ಣನಿಗೆ ಹುಡುಗಿ ನೋಡಲು ಹೋಗಿದ್ದೆ,” ಎಂದು ಅನಂತ್‌ ಹೇಳಿದ.

“ಏನಾಯಿತು ಆ ವಿಷಯ?”

“ಆದರೆ ಅಣ್ಣನಿಗೆ ಈಗಲೇ ಮದುವೆಯಾಗುವ ಮೂಡ್‌ ಇಲ್ಲ,” ಸೌಮ್ಯಾ ತೊದಲಿದಳು.

ಮರುದಿನ ಸಾಯಂಕಾಲ ಫೋನ್‌ ಮಾಡುವುದಾಗಿ ಮಧುಕರ್‌ ಹೇಳಿಹೋದ. ಆದರೆ ಅವನ ಫೋನ್‌ಕಾಲ್ ಬಂದಿದ್ದು 10 ದಿನಗಳ ನಂತರವೇ.

“ಸಾರಿ ಸೌಮ್ಯಾ, ನಿನಗೆ ಫೋನ್‌ ಮಾಡಿ ಹೇಳಿ ಹೋಗುವುದಕ್ಕೆ ಆಗಲಿಲ್ಲ. ಬಾಸ್‌ ನನ್ನನ್ನು ಮಡಿಕೇರಿಯಲ್ಲಿ ಲೊಕೇಶನ್‌ ಹಂಟಿಂಗ್‌ ಪ್ರೋಗ್ರಾಂಗೆ ಕಳುಹಿಸಿಬಿಟ್ಟರು. ಮಾರನೆಯ ದಿನವೇ ಹೋಗಬೇಕಾಯಿತು. ಅಲ್ಲಿಂದ ಮನೆಗೆ ಹೋದೆ. ನನ್ನ ಅಣ್ಣ ಸುಧಾಕರನ ಎಂಗೇಜ್‌ಮೆಂಟ್‌ ಇತ್ತು. ಅದನ್ನು ಮುಗಿಸಿಕೊಂಡು ಚೆನ್ನೈಗೆ ಹೋಗಿ ಸಾಮಾನು ತೆಗೆದುಕೊಂಡು ಬಂದೆ. ಈಗ ನನ್ನ ಫ್ಲಾಟ್‌ನಲ್ಲಿ ಇದ್ದೇನೆ. ಸಾಯಂಕಾಲ ನಿಮ್ಮ ಮನೆಗೆ ಬರುತ್ತೇನೆ.

”ಮಧುಕರ್‌ ಬೆಂಗಳೂರಿಗೇ ಬಂದು ನೆಲೆಸಿದ ನಂತರ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಫೋನ್‌ನಲ್ಲಿ ದಿನ ಮಾತನಾಡುತ್ತಿದ್ದರು, ಆದರೆ ಮರ್ಯಾದೆಯ ಮಿತಿ ಮೀರುತ್ತಿರಲಿಲ್ಲ.

ಕೆಲವು ತಿಂಗಳುಗಳ ನಂತರ ಮಧುಕರ್‌ ತನ್ನ ಅಣ್ಣನ ಮದುವೆಗಾಗಿ ಹೋದಾಗ ಸೌಮ್ಯಾಳಿಗೆ ಒಂದು ವಾರ ಕಳೆಯುವುದು ಅಸಾಧ್ಯವೆನಿಸಿತು. ತಾಯಿಯ ಅನ್ಯಮನಸ್ಕತೆ, ಸುನೀಲನ ನಿರ್ಭಾವ ವ್ಯವಹಾರ ಅವಳಿಗೆ ಅಸಹನೀಯವಾಯಿತು.

“ಮಮ್ಮಿ, ಅಣ್ಣನಿಗೆ ಹುಡುಗಿ ನೋಡುದಿಲ್ಲವೇ?”

“ಅವನು ಒಪ್ಪಿದರೆ ತಾನೇ ನೋಡುವುದು,” ಎಂದಳು ತಾಯಿ.

“ನಾನು ಒಪ್ಪಿಸುತ್ತೇನೆ,” ಎಂದು ಹೇಳಿ ಸೌಮ್ಯಾ ಅಣ್ಣನೊಡನೆ ಮಾತನಾಡಿದಳು.

“ಮೊದಲು ನಿನ್ನ ಮದುವೆ ಆಗಲಿ. ಆಮೇಲೆ ನನ್ನ ವಿಷಯ ಯೋಚಿಸುತ್ತೇನೆ,” ಸುನೀಲ್‌ ಸಪ್ಪೆಯಾದ ಸ್ವರದಲ್ಲಿ ಹೇಳಿದ.

ಮಧುಕರ್‌ ಹಿಂದಿರುಗಿ ಬಂದ ಮೇಲೆ ಸೌಮ್ಯಾ ಅಣ್ಣನ ತೀರ್ಮಾನ ತಿಳಿಸಿದಳು.

“ಹಾಗಾದರೆ ನಮ್ಮ ಮನೆಯಲ್ಲಿ ಲೈನ್‌ ಕ್ಲಿಯರಿದೆ. ನಿಮ್ಮ ಮನೆಯಲ್ಲಿ ಓ.ಕೆ. ಮತ್ತೆ ತಡವೇಕೆ? ನಾನು ಅತ್ತಿಗೆಗೆ ನಿನ್ನ ವಿಷಯವನ್ನೆಲ್ಲ ಹೇಳಿದ್ದೇನೆ. ಹುಡುಗಿಯ ಕಡೆಯಿಂದ ಪ್ರಸ್ತಾಪ ಬರಲಿ ಎಂದು ಅವರು ಹೇಳಿದ್ದಾರೆ. ನನ್ನ ಅತ್ತಿಗೆ ಬಹಳ ಬುದ್ಧಿವಂತೆ ಮತ್ತು ಸ್ನೇಹಮಯಿ. ನಿನ್ನ ಸ್ವಭಾವ ಸಹ ಅಂತಹದೇ. ಇಬ್ಬರಿಗೂ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಈಗ ನಿಮ್ಮ ಕಡೆಯಿಂದ ಪ್ರಸ್ತಾಪ ಬಂದರೆ ನಾವು ಮುಂದುರಿಯಬಹುದು.”

“ಆದರೆ ನಾನು ಹೇಗೆ ಮನೆಯಲ್ಲಿ ಅದನ್ನು ಹೇಳಲಿ? ಬೇಕಾದರೆ ಅಣ್ಣನಿಗೆ ನಿನ್ನ ಜೊತೆ ಫೋನ್‌ನಲ್ಲಿ ಈ ಬಗ್ಗೆ ಮಾತನಾಡುವಂತೆ ಹೇಳಬಲ್ಲೆ.”

“ಹಾಗೇ ಮಾಡು,” ಎಂದ ಮಧುಕರ್‌.

ನಂತರ ಎಲ್ಲ ವೇಗವಾಗಿ ನಡೆದುಹೋದವು. ಮೊಬೈಲ್‌ ಮೂಲಕ ಮಾತುಕತೆ, ಇಮೇಲ್‌ ಮೂಲಕ ಫೋಟೋ ಮತ್ತು ಬಯೊಡೇಟಾ.

ಮಧುಕರನ ತಂದೆ ಜಾನಕಿರಾಮ್ ಕಡೆಯಿಂದ ಕೃಪಾನಿಧಿಗೆ ಫೋನ್‌ ಬಂದಿತು. “ಹುಡುಗ ಹುಡುಗಿಯ ಭೇಟಿ ಅಗತ್ಯವೇ ಇಲ್ಲ. ಆದರೆ ನಾವು ಹುಡುಗಿಯನ್ನು ನೋಡಬೇಕಲ್ಲವೇ? ಏನು ಹೇಳುತ್ತೀರಿ?”

“ನೀವು ಹೇಳುವುದು ಖಂಡಿತ ಸರಿಯಾಗಿದೆ. ನೀವು ಬೆಂಗಳೂರಿಗೆ ಬರಲು ಸಾಧ್ಯವಾದರೆ ಬನ್ನಿ ಅಥವಾ ನಾವೆಲ್ಲರೂ ದಾವಣಗೆರೆಗೇ ಬರುತ್ತೇವೆ,” ಕೃಪಾನಿಧಿ ಹೇಳಿದರು.

“ನೀವೇನೂ ಚಿಂತಿಸಬೇಡಿ. ನನ್ನ ಪತ್ನಿ ಮತ್ತು ಸೊಸೆ ಇಬ್ಬರೂ ಮೋಹನನ ಮನೆಗೆ, ಬೆಂಗಳೂರಿಗೆ ಹೋಗುತ್ತಿದ್ದಾರೆ. ನನ್ನ ಸೊಸೆಗೆ ಸೌಮ್ಯಾ ಒಪ್ಪಿಗೆಯಾದಳೆಂದರೆ, ನಾನೂ ಅಲ್ಲಿಗೆ ಬರುತ್ತೇನೆ.”

ಕೃಪಾನಿಧಿ ಮಗಳಿಗೆ ವಿಷಯನ್ನು ತಿಳಿಸಿದರು, “ಮಧುಕರನಿಗೆ ಒಪ್ಪಿಗೆಯಾಗಿರುವಾಗ ಅವನ ಅತ್ತಿಗೆ ಒಪ್ಪುವುದೆಂದರೇನು?”

“ಮಧುಕರ್‌ ನಮ್ಮ ಅತ್ತಿಗೆಗೆ ನನ್ನ ವಿಷಯವನ್ನೆಲ್ಲ ತಿಳಿಸಿದ್ದಾರೆ. ಅವರು ಶುಭಸ್ಯ ಶೀಘ್ರಂ ಎಂದು ಆಶ್ವಾಸನೆಯಿತ್ತಿದ್ದಾರೆ.”

“ಆದರೆ ಅವನ ಅತ್ತಿಗೆ ನಿನ್ನನ್ನು ಒಪ್ಪದಿದ್ದರೆ ಮಧುಕರ್‌ ಏನು ಮಾಡುತ್ತಾನೆ?”

“ಆ ಬಗ್ಗೆ ಅವನನ್ನೇ ಕೇಳಬೇಕು.”

“ಕೇಳುವ ಅಗತ್ಯವೇನಿದೆ ಸೌಮ್ಯಾ?” ಸುನೀಲ್ ಹೇಳಿದ, “ನೀನೂ ಮಾನಸಿಯಂತೆ ಧೈರ್ಯ ಮಾಡು. ಅತ್ತಿಗೆಯ ಒಪ್ಪಿಗೆ ಇಲ್ಲವೆಂದು ಪ್ರೀತಿ ನಿರಾಕರಿಸುವ ಯುವಕನ ಸಂಬಂಧವನ್ನು ನೀನೇ ಸ್ವತಃ ದೂರ ಮಾಡು.”

ಅಣ್ಣ ಈಗಲೂ ಮಾನಸಿಯನ್ನು ಮರೆತಿಲ್ಲವೆಂದು ತಿಳಿದು ಸೌಮ್ಯಾ ಖಿನ್ನಳಾದಳು.

“ಸುನೀಲ್‌ ಹೇಳುತ್ತಿರುವುದು ಸರಿಯಾಗಿದೆ. ಅತ್ತಿಗೆಯ ಆಜ್ಞಾಕಾರಿ ಮೈದುನನೊಡನೆ ಜೀವನ ನಡೆಸುವ ಹಾಗಾದರೆ, ಸಂಬಂಧ ಕೂಡುವ ಮೊದಲೇ ಮುರಿಯುವುದು ಒಳ್ಳೆಯದು,” ತಾಯಿಯೂ ದನಿಗೂಡಿಸಿದರು.

ಸೌಮ್ಯಾಳಿಗೆ ಅವರ ನಕಾರಾತ್ಮಕ ಯೋಚನಾ ವಿಧಾನ ಇಷ್ಟವಾಗಲಿಲ್ಲ. ಆದರೂ ಸುಮ್ಮನಿದ್ದಳು. ಮೂರು ದಿನಗಳ ನಂತರ ಒಂದು ಸಾಯಂಕಾಲ ಮಧುಕರ್‌ ತನ್ನ ತಾಯಿ ಮತ್ತು ಅತ್ತಿಗೆಯನ್ನು ಕರೆತರುವುದಾಗಿ ಸೌಮ್ಯಾಳಿಗೆ ತಿಳಿಸಿದ. ಆದ್ದರಿಂದ ಅವಳು ಅಂದು ಆಫೀಸಿನಿಂದ ಬೇಗನೆ ಮನೆಗೆ ಬಂದಳು. ಕರೆಗಂಟೆಯಾದಾಗ ಸೌಮ್ಯಾ ಬಾಗಿಲು ತೆರೆದಳು, ಎದುರಿಗೆ ಮಾನಸಿಯನ್ನು ನೋಡಿ ಬೆಚ್ಚಿದಳು. ಅವಳ ವೇಷಭೂಷಣಗಳನ್ನು ನೋಡಿದರೆ ವಿವಾಹಿತಳೆಂದು ಕಂಡು ಬಂದಿತು.

“ಸೌಮ್ಯಾ, ನಿಗದಿತ ಸಮಯಕ್ಕಿಂತ ಮೊದಲೇ ಇದ್ದಕ್ಕಿದ್ದಂತೆ ಬಂದಿರುವುದಕ್ಕೆ ಕ್ಷಮೆ ಕೇಳುತ್ತೇನೆ. ನಾನು ಮಧುಕರನ ಅತ್ತಿಗೆ, ನಿನ್ನ ಜೊತೆ ಕೊಂಚ ಮಾತನಾಡುವುದಿತ್ತು. ಆದ್ದರಿಂದ ಬಂದೆ.”

“ಓ….! ಬನ್ನಿ ಕುಳಿತುಕೊಳ್ಳಿ,” ಸೌಮ್ಯಾ ತೊದಲಿದಳು.

“ನೀನು ಮೈಸೂರಿನಲ್ಲಿ ಭಾನುವಾರದ ದಿನ ಎಂಗೇಜ್‌ಮೆಂಟ್‌ ಆಗುವುದನ್ನು ತಡೆದೆ. ಏಕೆಂದರೆ ಆ ದಿನ ನೀನು ಬೆಂಗಳೂರಿನಲ್ಲಿ ಮಧುಕರನನ್ನು ಭೇಟಿಯಾಗಬೇಕಿತ್ತು ಅಲ್ಲವೇ….?” ಮಾನಸಿ ಯಾವುದೇ ಪೀಠಿಕೆ ಇಲ್ಲದೆ ಕೇಳಿದಳು.

“ಹ್ಞಾಂ…. ಆದರೆ ನಿಮಗೆ…. ಹೇಗೆ….?” ಸೌಮ್ಯಾ ತಡಬಡಾಯಿಸಿದಳು.

“ಊಹೆ ಮಾಡಿದೆ,” ಮಾನಸಿ ನಕ್ಕಳು.

“ಮಧುಕರ್‌ ನನಗೆ ನಿಮ್ಮಿಬ್ಬರ ಮೊದಲನೆಯ ಮತ್ತು ಅದರ ಮುಂದಿನ ಭೇಟಿಯ ವಿಷಯವನ್ನು ವಿವರವಾಗಿ ತಾರೀಖು ಮತ್ತು ಸಮಯದೊಂದಿಗೆ ತಿಳಿಸಿದ. ಆಮೇಲೆ ನಿನ್ನ ಫೋಟೊ ನೋಡಿದ ಮೇಲೆ 2 ಮತ್ತು 2 ಸೇರಿಸಿದಾಗ 4 ಆಗುವುದು ಕಷ್ಟವಾಗಲಿಲ್ಲ. ಎನಿವೇ, ಎವೆರಿಥಿಂಗ್‌ ಈಸ್‌ ಫೇರ್‌ ಇನ್‌ ಲವ್ ಅಂಡ್‌ ವಾರ್‌. ಇದರಿಂದ ನನಗೂ ಒಳ್ಳೆಯದಾಯಿತು. ಪ್ರಿಯಾಂಕ್‌ನ ಕಂಪೆನಿ ಉತ್ತಮವಾಗಿದೆ. ಅಲ್ಲಿ ನನ್ನ ಪ್ರತಿಭೆ ಮತ್ತು ಸಾಮರ್ಥ್ಯದ ಪೂರ್ಣ ವಿಕಸನಕ್ಕೆ ಅವಕಾಶವಿದೆ. ಅವರ ಕುಟುಂಬದೊಡನೆ ನನಗೆ ಬಹಳ ಚೆನ್ನಾಗಿ ಹೊಂದಾಣಿಕೆಯಾಗಿದೆ. ಇದರ ಶ್ರೇಯಸ್ಸು ನಿನ್ನ ಮತ್ತು ಮಧುಕರನ ಪ್ರೀತಿಗೆ ಸಲ್ಲುತ್ತದೆ. ನಿನ್ನ ಬಗ್ಗೆ ನನ್ನ ಮನಸ್ಸಿನಲ್ಲಿ ಕೊಂಚ ಬೇಸರವಿಲ್ಲ.”

“ಆದರೆ ನನ್ನ ಅಣ್ಣನಿಗೆ ನನ್ನ ಮೇಲೆ ಇನ್ನೂ ಬೇಸರವಿದೆ,” ಎಂದು ಸೌಮ್ಯಾ ನಡೆದ ವಿಷಯ ತಿಳಿಸಿದಳು.

“ನಿನ್ನ ಅಣ್ಣ ಇಷ್ಟಪಡುವಂತಹ ಒಬ್ಬ ಸ್ನೇಹಿತೆ ನನಗಿದ್ದಾಳೆ. ನಿನ್ನ ಮದುವೆಯಲ್ಲಿ ಅವಳನ್ನು ಭೇಟಿ ಮಾಡಿಸುತ್ತೇನೆ.”

“ಆದರೆ ನೀವು ನಮ್ಮ ಮದುವೆಗೆ ಒಪ್ಪಿಗೆ ಕೊಡುತ್ತೀರಾ? ಏಕೆಂದರೆ ನಾನು, ಆಗಬಹುದಾಗಿದ್ದ ನಿಮ್ಮ ಮದುವೆಯನ್ನು ತಡೆದಿದ್ದೇನಲ್ಲ…..”

“ಖಂಡಿತ ಒಪ್ಪುತ್ತೇನೆ ಸೌಮ್ಯಾ. ಏಕೆಂದರೆ ನೀನು ಏಕೆ ಹಾಗೆ ಮಾಡಿದೆ ಎಂದು ನನಗೆ ಅರ್ಥವಾಗಿದೆ. ಜೊತೆಗೆ ನೀನು ನಮ್ಮ ಕುಟುಂಬಕ್ಕೆ ಸರಿಹೊಂದುವವಳು ಎಂದು ಮಧುಕರ್‌ ಸಹ ನಿನ್ನ ಮೇಲೆ ಬಹಳ ಪ್ರೀತಿಯಿರಿಸಿಕೊಂಡಿದ್ದಾನೆ. ಜೀವನದಲ್ಲಿ ಸಂತೋಷದಿಂದಿರಬೇಕಾದರೆ ಹಳೆಯ ಕಹಿ ನೆನಪುಗಳನ್ನು ಬಿಟ್ಟು ಬಾಳಬೇಕು. ನನ್ನನ್ನು ಮೊದಲು ಭೇಟಿಯಾಗಿದ್ದೆ ಎಂಬುದನ್ನು ಮರೆತುಬಿಡು.”

ಅಷ್ಟರಲ್ಲಿ ಸೌಮ್ಯಾಳ ತಾಯಿ ಅಲ್ಲಿಗೆ ಬಂದರು. ಮಾನಸಿ ಅವರಿಗೂ ಇದನ್ನೇ ಕೇಳಿದಳು, “ಆಂಟಿ, ನಾನು ಸೌಮ್ಯಾಳ ಜೊತೆ ಮಾತನಾಡಿದ್ದೇನೆ. ನೀವು ಸಹ ನನ್ನನ್ನು ಅಪರಿಚಿತಳಂತೆ ಮಾತನಾಡಿಸಿ. ನಿಮ್ಮ ಮನೆಯ ಇತರರೂ ಹಾಗೇ ಮಾಡಲಿ. ನಾನು ನನ್ನ ತವರು ಮನೆಯವರಿಗೂ ಇದೇ ರೀತಿ ನಡೆದುಕೊಳ್ಳುವಂತೆ ಹೇಳುತ್ತೇವೆ.”

“ಆಗಲಿ, ನೀನು ನನ್ನ ಸೊಸೆ ಆಗಲಿಲ್ಲವಲ್ಲ ಎನ್ನುವುದೇ ನನಗೆ ದುಃಖ. ಹೋಗಲಿ ಬಿಡು. ನನ್ನ ಮಗಳಿಗೆ ಅತ್ತೆಯ ಮನೆಯಲ್ಲಿ ನಿನ್ನಂತಹ ಸಹೃದಯಿ ವಾರಗಿತ್ತಿ ಸಿಗುತ್ತಿದ್ದಾಳೆನ್ನುವುದೇ ಒಂದು ಸಮಾಧಾನ,” ತಾಯಿ ದುಃಖದ ಧ್ವನಿಯಲ್ಲಿ ಹೇಳಿದರು.

“ನಿಜ ಅಮ್ಮ, ಮಾನಸಿ ಅತ್ಯಂತ ಸಹೃದಯಿ ಯುವತಿ,” ಎಂದು ಸೌಮ್ಯಾ ದನಿಗೂಡಿಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ