ವ್ಯಂಗ್ಯ –  ವಾಣಿ ಪ್ರಸಾದ್‌ 

“ರೇಖಾ…… ಸ್ವಲ್ಪ ಗಂಭೀರವಾಗಿರುವುದನ್ನು ಈಗಾದರೂ ಕಲಿ….. ಮಾತು ಮಾತಿಗೆ ಹಲ್ಲು ಬಿಡುತ್ತಾ ನಿಲ್ಲಬೇಡ….. ಮದುವೆ ಮಂಟಪದಲ್ಲಿ ಕೊಂಚ ಕತ್ತು ಬಗ್ಗಿಸಿ ನಿಂತುಕೊ…… ಎಲ್ಲಕ್ಕಿಂತ ಮುಖ್ಯವಾಗಿ, ಶಾಸ್ತ್ರಗಳೆಲ್ಲ ಮುಗಿದು ಬೀಳ್ಕೊಡುವ ಸಮಯದಲ್ಲಿ ನೀನು ಚೆನ್ನಾಗಿ ಅಳಬೇಕು. ಇಲ್ಲದಿದ್ದರೆ ನೆಂಟರಿಷ್ಟರು ತಪ್ಪು ತಿಳಿಯುತ್ತಾರೆ. `ಮಗಳಿಗೆ ಸರಿಯಾಗಿ ಪ್ರೀತಿ ತೋರಿಸಲಿಲ್ಲ. ಅದಕ್ಕೇ ತವರನ್ನು ಬಿಟ್ಟು ಹೋಗುವಾಗ ಅವಳಿಗೆ ಅಳುವೇ ಬರಲಿಲ್ಲ’ ಅಂತ ಮಾತನಾಡಿಕೊಳ್ಳುತ್ತಾರೆ. ನಾನು ಹೇಳಿದ್ದರ ಕಡೆ ಗಮನ ಇರಲಿ, ಇಲ್ಲದ್ದಿದರೆ ಆ ಹೊತ್ತಿನಲ್ಲೂ ಹ್ಹಿ…..ಹ್ಹೀ….. ಅಂತ ನಕ್ಕು ನಾವು ತಲೆ ತಗ್ಗಿಸುವ ಹಾಗೆ ಮಾಡುತ್ತೀಯಾ,” ಮನೆಗೆ ಬಂದಿದ್ದ ಗೆಳತಿ ಸ್ನೇಹಾಳ ಸಂಗಡ ತಮಾಷೆಯಾಗಿ ಮಾತನಾಡಿ ನಂತರ ಅವಳನ್ನು ಕಳುಹಿಸಿ ಒಳಗೆ ಬರುತ್ತಿದ್ದಂತೆ ಅಮ್ಮ ಭಾಷಣ ಪ್ರಾರಂಭಿಸಿದರು.

ನನ್ನ ಮದುವೆಗೆ ಇನ್ನು ಒಂದು ವಾರವಷ್ಟೇ ಉಳಿದಿತ್ತು. ಕೆಲಸದ ಗಡಿಬಿಡಿಯಲ್ಲಿದ್ದ ಅಮ್ಮನಿಗೆ ನನ್ನ ಹುಡುಗಾಟಿಕೆ ಸ್ವಭಾವದ ಬಗ್ಗೆ ಆತಂಕ.

“ಅಮ್ಮಾ, ಅಳುತ್ತಾ ಏಕೆ ಹೋಗಬೇಕು? ನಾನು ಮೆಚ್ಚಿದ ಹುಡುಗನನ್ನೇ ಮದುವೆಯಾಗುತ್ತಿದ್ದೇನೆ. ಒಳ್ಳೆ ಕೆಲಸದಲ್ಲಿದ್ದಾನೆ. ಅತ್ತೆ ಮನೆಯವರು ಅದೆಷ್ಟು ಸರಳ ಅಂದರೆ ನಾನು ಅತ್ತರೆ ಅವರೂ ಜೊತೆಯಲ್ಲಿ ಅತ್ತುಬಿಡುತ್ತಾರೆ ಅಷ್ಟೇ.”

“ಹೇಳಿದಷ್ಟು ಮಾಡುವುದನ್ನು ಕಲಿತುಕೊ. ಅಳುವುದೊಂದು ಸಂಪ್ರದಾಯ ಅಂದ ಮೇಲೆ ಅಳಬೇಕು. ಹೋದ ವರ್ಷ ಸುಷ್ಮಾಳ ಮದುವೆಯಾದಾಗ ಅವಳು ಹೇಗೆ ಅಳುತ್ತಿದ್ದಳು ಅಂತ ನೋಡಲಿಲ್ಲವೇನು….?”

ಸುಷ್ಮಾ ನನ್ನ ಚಿಕ್ಕಪ್ಪನ ಮಗಳು. ಅಮ್ಮ ಅವಳನ್ನು ಉದಾಹರಿಸಿದಾಗ ನನಗೆ ಬೇಸರವಾಯಿತು.

“ಅಮ್ಮಾ , ಸುಷ್ಮಾ ಮದುವೆ ಮಂಟಪಕ್ಕೆ ಕಾಲಿಟ್ಟಾಗಿನಿಂದ ಬೀಳ್ಕೊಡುವವರೆಗೂ ಅಳುತ್ತಿದ್ದಳು. ಏಕೆ….? ನೀವೆಲ್ಲ ಸೇರಿ ಅವಳು ಪ್ರೀತಿಸಿದ ಹುಡುಗನನ್ನು ನಿರಾಕರಿಸಿ ಬೇರೆಯವರ ಜೊತೆ ಮದುವೆ ಮಾಡಿದಿರಿ….. ಮತ್ತೆ ಅವಳು ಅಳದೆ ಇನ್ನೇನು ಮಾಡುತ್ತಾಳೆ?”

ನಮ್ಮ ಮಾತನ್ನು ಕೇಳುತ್ತಾ ಕುಳಿತಿದ್ದ ಸೋದರತ್ತೆ ಮಧ್ಯೆ ಬಾಯಿ ಹಾಕಿದರು, “ನಿಮ್ಮಮ್ಮ ಹೇಳುತ್ತಿರುವುದನ್ನು ಅರ್ಥ ಮಾಡಿಕೊ ರೇಖಾ. ಮನೆ ಮರ್ಯಾದೆಗೋಸ್ಕರ ಅವರು ಆತಂಕ ಪಡುತ್ತಿರುವುದು.”

ನನಗೆ ಚಿಂತೆ ಹತ್ತಿತು. ಬೀಳ್ಕೊಡುಗೆಯ ಸಮಯದಲ್ಲಿ ಅಳು ಬರಿಸಿಕೊಳ್ಳುವುದು ಹೇಗೆ ಎಂಬ ಯೋಚನೆಯಿಂದ ನನಗೆ ಈಗಲೇ ಅಳು ಬಂದಿತು. ಗೆಳತಿ ಸ್ನೇಹಾಳಿಗೆ ಮತ್ತೆ ಮಧ್ಯಾಹ್ನ ಮನೆಗೆ ಬರುವಂತೆ ಫೋನ್‌ ಮಾಡಿದೆ.

“ಈಗ ತಾನೇ ಬಂದಿದ್ದೆನಲ್ಲ……” ಅವಳಿಗೆ ಆಶ್ಚರ್ಯವಾಯಿತು.

“ಒಂದು ಸಮಸ್ಯೆ ಹುಟ್ಟಿಕೊಂಡಿದೆ. ನಿನ್ನ ಹತ್ತಿರ ಕನ್ಸಲ್ಟೇಶನ್‌ ಮಾಡಬೇಕಾಗಿದೆ.”

“ಹಾಗಾದರೆ ಕನ್ಸಲ್ಟೇಶನ್‌ ಫೀಸ್‌ ಕೊಡಬೇಕು,” ಅವಳಿಗೆ ತಮಾಷೆ ನನಗೆ ಸಂಕಟ. ಅವಳು ಬಂದಾಗ ನನ್ನ ಸಮಸ್ಯೆ ಮುಂದಿಟ್ಟೆ.

“ನಿನಗೆ ಅಳುವುದನ್ನು ನಾನು ಹೇಗೆ ಹೇಳಿಕೊಡಲಿ….. ಒಂದೆರಡು ದಿನ ಪ್ರಾಕ್ಟೀಸ್‌ ಮಾಡು….”

“ಅಯ್ಯೋ…. ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್‌ ಮಾಡಿದೆ. ಆದರೆ ಅಳು ಬರಲೇ ಇಲ್ಲ. ಆ ದಿವಸ ಗಂಡನ ಮನೆಗೆ ಹೊರಡುವಾಗ ಅಳುವುದು ಸಂಪ್ರದಾಯವಂತೆ……”

“ಸಂಪ್ರದಾಯ ಇದೆ ಅಂತ ಅಳುವುದಕ್ಕೆ ಆಗುತ್ತೇನು? ಅಳು ಬಂದಾಗ ಅಳಬೇಕು ಅಷ್ಟೇ. ಅಲ್ಲ….. ನಾನೇನು ಅಳುವ ವಿಷಯವಾಗಿ ಪಿ.ಎಚ್‌.ಡಿ ಮಾಡಿದ್ದೀನೇನು? ನಿನಗೆ ಟಿಪ್ಸ್ ಕೊಡುವುದಕ್ಕೆ…..?”

“ಪ್ಲೀಸ್‌… ಏನಾದರೂ ಮಾಡೇ…..? ಅಳದೇ ಇದ್ದರೆ ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ನಾಲ್ಕು ವರ್ಷದ ಹಿಂದೆ ನನ್ನ ಮಾಮನ ಮಗಳು ಮದುವೆಯಾಗುವಾಗ ಅದೆಷ್ಟು ಅತ್ತಳು ಅಂತೀಯಾ. ವಿಷಯ ಏನು ಅಂದರೆ ಶ್ರೀಮಂತ ವಿಧುರನ ಜೊತೆಗೆ ಅವಳ ಮದುವೆ ಮಾಡಿದ್ದರು. ಅವಳು ನನಗೆ ಇಷ್ಟವಿಲ್ಲ ಅಂತ ಎಷ್ಟು ಹೇಳಿದರೂ ಕೇಳಲಿಲ್ಲ. ಅವಳಿಗೆ ಅಳುವುದಲ್ಲದೆ, ಬೇರೆ ದಾರಿ ಇರಲಿಲ್ಲ. ಆದರೆ ನನ್ನ ವಿಷಯ ಹಾಗಲ್ಲವಲ್ಲ. ನಾನು ಪ್ರೀತಿಸಿದ ಹುಡುಗನನ್ನು ಹಿರಿಯರ ಒಪ್ಪಿಗೆಯಿಂದ ಮದುವೆಯಾಗುತ್ತಿದ್ದೇನೆ. ಯಾವ ಒತ್ತಾಯ ಇಲ್ಲ, ಯಾವ ಅಡ್ಡಿ ಇಲ್ಲ. ಮತ್ತೆ ನಾನು ಅಳುವುದು ಹೇಗೆ?”

ನನ್ನ ದುಃಖವನ್ನು ಕಂಡು ಸ್ನೇಹಾಳ ಮನ ಕರಗಿತು.

“ಸರಿ. ಏನು ಮಾಡಬಹುದು ನೋಡುತ್ತೇನೆ. ಸಮಯ ಕಡಿಮೆ ಇದೆ,” ಎಂದು ಅವಳು ಲಗುಬಗೆಯಿಂದ ಹೊರಟಳು.

2 ಗಂಟೆ ಬಿಟ್ಟು ಹಾಗೇ ಅವಸರವಾಗಿ ಬಂದಳು, “ನಿನಗೊಂದು ಗುಡ್‌ ನ್ಯೂಸ್‌! ನಿನ್ನ ಅಳುವಿಗೋಸ್ಕರ ಒಂದು ಟ್ರೇನಿಂಗ್‌ ಕ್ಲಾಸ್‌ ಇದೆ. ಅದು 7 ದಿನಗಳ ಕೋರ್ಸ್‌. ನಮಗೆ ಹೆಚ್ಚು ಸಮಯ ಇಲ್ಲವಾದ್ದರಿಂದ ಫಾಸ್ಟ್ ಟ್ರ್ಯಾಕ್‌ಗೆ ಒಪ್ಪಿದ್ದಾರೆ. ಆದರೆ ಡಬಲ್ ಚಾರ್ಜ್‌ ತೆಗೆದುಕೊಂಡು ರಿಜಿಸ್ಟರ್‌ ಮಾಡಿಕೊಳ್ಳುತ್ತಾರೆ.”

“ಏನು ಹೇಳುತ್ತಿದ್ದೀಯಾ? ಅಳುವುದಕ್ಕೂ ಟ್ರೇನಿಂಗಾ?” ನಾನು ಆಶ್ಚರ್ಯದಿಂದ ಕಣ್ಣು ಬಾಯಿಬಿಡುತ್ತಾ ನಿಂತೆ.

“ಮತ್ತೇನು? ಈಗ ವಿವಾಹ ಬೀಳ್ಕೊಡುಗೆ ಅನ್ನುವುದು ಕೇವಲ ನಿನ್ನ ಸಮಸ್ಯೆಯಲ್ಲ ಅದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಈಗೆಲ್ಲ ಹುಡುಗಿಯರು ತಮ್ಮ ಮೆಚ್ಚಿನ ಗಂಡುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಿರುವಾಗ ಅವರಿಗೆ ಅಳು ಬರುವುದಾದರೂ ಹೇಗೆ? ಈ ಸಮಸ್ಯೆ ಪರಿಹಾರಕ್ಕಾಗಿ ಆರಂಭವಾಗಿರುವುದೇ ಈ ಟ್ರೇನಿಂಗ್‌ ಸೆಂಟರ್‌. ಇಲ್ಲಿ ಮದುವೆ ಹೆಣ್ಣಿನ ಜೊತೆಗೆ ಅವಳ ಸಖಿಯರಿಗೂ ಬೀಳ್ಕೊಡುಗೆ ಸಮಯದಲ್ಲಿ ಅಳುವುದನ್ನು ಕಲಿಸಿಕೊಡಲಾಗುತ್ತದೆ.”

“ಅಂದರೆ…. ನನಗೆ ಆ ದಿನ ಸರಿಯಾಗಿ ಅಳುವುದಕ್ಕೆ ಆಗುತ್ತೆ ಅನ್ನು,” ನನಗೆ ಖುಷಿಯೋ ಖುಷಿ!

ನಾವು ನಗರದ ಪ್ರಸಿದ್ಧ ಮಾಲ್ ಒಂದರಲ್ಲಿ ನಡೆಸಲಾಗುತ್ತಿದ್ದ ಟ್ರೇನಿಂಗ್‌ ಸೆಂಟರ್‌ಗೆ ತಲುಪಿದೆವು. ಅಲ್ಲಿದ್ದ ರಿಸೆಪ್ಶನಿಸ್ಟ್ ನಮ್ಮನ್ನು ನಗುಮೊಗದಿಂದ ಸ್ವಾಗತಿಸಿ ವಿವರಣೆ ನೀಡಿದರು.

“ನೋಡಿ, ಮೊದಲು ಈ ಚಾರ್ಟ್‌ನ್ನು ಚೆನ್ನಾಗಿ ಓದಿಕೊಳ್ಳಿ. ಇದರಲ್ಲಿ ಅಳುವ ಬೇರೆ ಬೇರೆ ವಿಧಾನಗಳಿವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಚಾರ್ಜ್‌ ಇರುತ್ತದೆ.”

ರಿಸೆಪ್ಶನಿಸ್ಟ್ ಮೇಡಂ ಕೊಟ್ಟ ಚಾರ್ಟ್‌ ನೋಡಿ ನಾನು ಆಶ್ಚರ್ಯದಿಂದ ಕಣ್ಣರಳಿಸಿದೆ.

ಸಿಂಪಲ್ ಕ್ರೈಯಿಂಗ್‌, ನಮ್ರತೆಯಿಂದ ಅಳುವುದು 5000 ರೂ. ಮೊಸಳೆ ಕಣ್ಣೀರು, ಕಣ್ಣೀರಿಲ್ಲದೆ ಅಳುವುದು 4000 ರೂ. ಪ್ರವಾಹದ ಅಳು, ಕಣ್ಣೀರಿನ ಪ್ರವಾಹ ಹರಿಸುವುದು 3500 ರೂ.

ಚೀರುವ ಅಳು, ಚೀರುತ್ತಾ, ನಿಲ್ಲಿಸುತ್ತಾ ಅಳುವುದು 3000 ರೂ. ಬಿಕ್ಕಳಿಕೆಯ ಅಳು, ಬಿಕ್ಕಳಿಸುತ್ತಾ ಅಳುವುದು 2500 ರೂ.

ಜೊತೆಗೂಡಿ ಅಳು, ಗೆಳತಿಯರೊಟ್ಟಿಗೆ ಅಳುವುದು 2000 ರೂ.

ಸ್ನೇಹಾಳೊಂದಿಗೆ ಚರ್ಚಿಸಿ ನಾನು ಮೊಸಳೆ ಕಣ್ಣೀರನ್ನು ಆರಿಸಿಕೊಂಡೆ. ಏಕೆಂದರೆ ನಿಜವಾಗಿ ಅಳುವುದು ನನ್ನ ಉದ್ದೇಶವಾಗಿರಲಿಲ್ಲ. ಅಳುವಿನ ಶಬ್ದ ಎಲ್ಲರಿಗೂ ಕೇಳಿಸಿದರೆ ಸಾಕಲ್ಲ. ಡಬಲ್ ಚಾರ್ಜ್‌ ಅಂದರೆ 8000 ರೂ. ಕಟ್ಟಿ ಟ್ರೇನಿಂಗ್‌ ಕೊಡುವ ಜಾಗಕ್ಕೆ ಹೋದೆ.

ಒಳಗೆ ಹಾಲ್‌ನಲ್ಲಿ ದೊಡ್ಡ ದೊಡ್ಡ ಕನ್ನಡಿಗಳನ್ನು ಅಳವಡಿಸಲಾಗಿತ್ತು. ಮದುವೆಯ ಹುಡುಗಿಯರು ಅದರಲ್ಲಿ ನೋಡಿಕೊಂಡು ತಮ್ಮ ತಮ್ಮ ವಿಧಾನದಲ್ಲಿ ಅಳುವನ್ನು ಅಭ್ಯಾಸಿಸುತ್ತಿದ್ದರು. ಅವರ ಆ ಬಗೆಯ ಅಳು ಎದುರಿಗಿರುವವರಿಗೆ ನಗು ತರಿಸುತ್ತಿತ್ತು. ಅದನ್ನು ಕಟ್ಟಿಕೊಂಡು ನನಗೇನು…. ನಾನಂತೂ ನನ್ನ ಅಳುವಿನ ಅಭ್ಯಾಸ ಪ್ರಾರಂಭಿಸಿದೆ.

ಮದುವೆ ದಿನ ಬಂದಿತು. ವಿವಾಹ ಸಂಬಂಧೀ ಶಾಸ್ತ್ರಗಳು ಮುಗಿದು ವಧುವನ್ನು ಬೀಳ್ಕೊಡುವ ಸಮಯ ಸನ್ನಿಹಿತವಾಯಿತು. ರಾತ್ರಿಯ ಅರೆನಿದ್ರೆ ಮತ್ತು ಬೆಳಗಿನ ಹತ್ತಾರು ಶಾಸ್ತ್ರವಿಧಿಗಳಿಂದಾಗಿ ನಾನು ಅದೆಷ್ಟು ಬಳಲಿದ್ದೆನೆಂದರೆ ಮಾತನಾಡಿದರೆ ಅಳು ಬರುವಂತಾಗಿತ್ತು.

ನನ್ನ ಮುಖ ಇತರರಿಗೆ ಕಾಣಿಸದೆ ಕೇವಲ ನನ್ನ ಅಳುವಿನ ಶಬ್ದ ಮಾತ್ರ ಕೇಳುವಂತಿರಲಿ ಎಂಬ ಹಂಚಿಕೆಯಿಂದ ನಾನು ಮುಖ ಮರೆ ಮಾಡಿಕೊಳ್ಳಲು ಒಂದು ತೆಳುವಾದ ಟವೆಲ್‌ನ್ನು ತೆಗೆದಿರಿಸಿಕೊಂಡಿದ್ದೆ.

ಬೀಳ್ಕೊಡುವ ಸಮಯ ಬಂದೇಬಿಟ್ಟಿತು. ಅಮ್ಮ ಜೋರಾಗಿ ಅಳುತ್ತಾ ನನ್ನನ್ನು ಅಪ್ಪಿಕೊಂಡು ನಾನೂ ಅಳುವಂತೆ ಪ್ರಚೋದಿಸತೊಡಗಿದರು. ನಾನು ಟವೆಲ್‌ನಿಂದ ಮುಖ ಮುಚ್ಚಿಕೊಂಡು ಅಭ್ಯಾಸ ಮಾಡಿದ್ದಂತೆ ಜೋರಾಗಿ ಅಳತೊಡಗಿದೆ. ಆದರೆ ಅಳುವಿನ ವಾಲ್ಯೂಮ್ ಬಹಳ ಹೆಚ್ಚಾಗಿ, ಅಲ್ಲಿದ್ದವರಿಗಲ್ಲದೆ ನನಗೂ ಅದು ವಿಚಿತ್ರವಾಗಿ ಕೇಳಿಸಿತು. ಆಗ ನಾನು ವಾಲ್ಯೂಮ್ ಇಳಿಸಲೇಬೇಕಾಯಿತು.

ಅಲ್ಲೇ ಪಕ್ಕದಲ್ಲಿ ನಿಂತಿದ್ದ 8-10 ವರ್ಷದ ಪುಟ್ಟ ಹುಡುಗನೊಬ್ಬ, “ಅಮ್ಮಾ, ಅಕ್ಕ ಎಷ್ಟೊಂದು ಅಳುತ್ತಿದ್ದಾರೆ! ಆದರೆ ಅವರ ಕಣ್ಣಲ್ಲಿ ನೀರೇ ಬರುತ್ತಿಲ್ಲ.” ಎಂದುಬಿಡುವುದೇ? ಅವನು ನನ್ನ ಟವೆಲ್‌ನ ಕೆಳ ಸಂದಿಯಿಂದ ನನ್ನ ಮುಖವನ್ನು ಗಮನಿಸಿಬಿಟ್ಟಿದ್ದ. ನನ್ನ ಅಳು ಅವನಿಗೆ ವಿಚಿತ್ರವಾಗಿ, ತಮಾಷೆಯಾಗಿ ತೋರಿತ್ತು.

ಆ ಹುಡುಗನ ಮಾತಿನಿಂದ ನನಗೆ ಅತೀ ಕೋಪ ಬಂದಿತು. ನಾನು ಟ್ರೇನಿಂಗ್‌ ಪಡೆದು ಇಷ್ಟು ಕಷ್ಟಪಟ್ಟು ಅಳುತ್ತಿದ್ದರೆ, ಇವನು ಎಲ್ಲರ ಮುಂದೆ ನಗೆಗೀಡು ಮಾಡುತ್ತಿದ್ದಾನೆ. ಆದರೆ ಸಂದರ್ಭದ ಔಚಿತ್ಯವನ್ನರಿತು ನಾನು ಪ್ರತಿಕ್ರಿಯಿಸದೆ ಉಳಿದೆ. ನನ್ನ ಅಮ್ಮ ಅಪ್ಪನ ಸರದಿ ಮುಗಿದ ಮೇಲೆ ನನ್ನ ಚಿಕ್ಕಮ್ಮ ಮುಂದೆ ಬಂದರು, “ಇಷ್ಟೊಂದು ಅಳಬೇಡ್ವೆ… ನಿನ್ನನ್ನು ಬೇಗನೆ ಕರೆಸಿಕೊಳ್ಳುತ್ತೇವೆ,” ಎನ್ನುತ್ತಾ ಅವರು ನನ್ನನ್ನು ತಬ್ಬಿಕೊಂಡು ಬೆನ್ನು ಸವರತೊಡಗಿದರು.

ನಾನು “ಹ್ಞಾಂ….. ಅಮ್ಮಾ,….” ಎನ್ನುತ್ತಾ ಜೋರಾಗಿ ಚೀರಿ ಅತ್ತುಬಿಟ್ಟೆ. ನನಗೆ ನಿಜವಾಗಿ ಕಣ್ಣೀರು ಬಂದಿತು. ವಿಷಯವೇನೆಂದರೆ ಅವರು ಸೀರೆಗೆ ಸಿಕ್ಕಿಸಿಕೊಂಡಿದ್ದ ಸ್ಯಾರಿಪಿನ್‌ ನನಗೆ ಬಲವಾಗಿ ಚುಚ್ಚಿಬಿಟ್ಟಿತ್ತು.

ಪಿನ್‌ ಚುಚ್ಚಿದ ನೋವಿನಿಂದಲೋ ಅಥವಾ ಅಳುವಿನ ಸಾಂಕ್ರಾಮಿಕ ಗುಣದಿಂದಲೋ, ನನ್ನ ಕಣ್ಣೀರ ಕೋಡಿ ಹರಿಯಿತು. ಸಾಕೆನಿಸಿದರೂ ನನ್ನಿಂದ ಅಳುವನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಸ್ನೇಹಾಳಿಗಂತೂ ನನ್ನ ಅಳು ನೋಡಿ ಆಶ್ಚರ್ಯವೋ ಆಶ್ಚರ್ಯ!

ಆ ಚಿಕ್ಕ ಹುಡುಗ ಈಗ ಮತ್ತೊಂದು ಬಾಣ ಎಸೆದ, “ಅಮ್ಮಾ, ಅಕ್ಕ ಈಗ ನಿಜವಾಗಲೂ ಅಳುತ್ತಿದ್ದಾರೆ.”

ಸಧ್ಯ, ಕಡೆಗೂ ಅಳು ಬಂತಲ್ಲ ಎಂದು ಸಮಾಧಾನವಾಯಿತು.

ಮದುವೆಯ ವಿಡಿಯೋ ಬಂದಾಗ ಒಂದೊಂದಾಗಿ ಎಲ್ಲವನ್ನೂ ನೋಡುತ್ತಾ ಕಡೆಯಲ್ಲಿ ಬೀಳ್ಕೊಡುಗೆಯ ದೃಶ್ಯವನ್ನು ನೋಡಿ “ಅಬ್ಬಾ, ಎಷ್ಟೊಂದು ಅತ್ತಿದ್ದೇನೆ ನಾನು….” ನಾನೇ ಉದ್ಗರಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ