ಕಥೆ –  ದೀಪಾ ಶರಣ್‌ 

ವಿವಾಹವಾಗಿ, 1 ತಿಂಗಳು ಕಳೆದದ್ದು ಶೋಭಿನಿಗೆ ಅರಿವಾಗಲೇ ಇಲ್ಲ. ಬೆಂಗಳೂರಿನ ಹೆಸರಾಂತ, ಶ್ರೀಮಂತ, ಕುಲೀನ ಮನೆತನದ ಸೊಸೆಯಾಗಿ ಬಂದುದಕ್ಕೆ ಅವಳಿಗೆ ಹೆಮ್ಮೆ ಎನಿಸಿತ್ತು. ಸಮಾರಂಭವೊಂದರಲ್ಲಿ ಅವಳನ್ನು ನೋಡಿ ಮೆಚ್ಚಿದ ಗೋಪಿನಾಥ್‌ ಮತ್ತು ಉಮಾ ಅವಳನ್ನು ಸೊಸೆಯಾಗಿ ತಂದುಕೊಳ್ಳುವ ತೀರ್ಮಾನ ಮಾಡಿದ್ದರು.

ಕುಟುಂಬದಲ್ಲಿ  ಗೋಪಿನಾಥ್‌, ಪತ್ನಿ ಉಮಾ, ಮಗ ಅಜಯ್‌, ತಮ್ಮ ರಘುನಾಥ್‌ ಹಾಗೂ ಅವರ ಪತ್ನಿ ಲತಾ ಎಲ್ಲರೂ ಒಟ್ಟಾಗಿ  ವಾಸಿಸುತ್ತಿದ್ದು, ತಮ್ಮ ಬಿಸ್‌ನೆಸ್‌ ವ್ಯವಹಾರವನ್ನು ಅಣ್ಣ ತಮ್ಮಂದಿರು ಒಟ್ಟಿಗೆ ನೋಡಿಕೊಳ್ಳುತ್ತಿದ್ದರು. ಉಮಾ ಮತ್ತು ಲತಾ ಪರಸ್ಪರ ಪ್ರೀತಿಯಿಂದ ಹೊಂದಿಕೊಂಡು ನಡೆಯುತ್ತಿದ್ದರು. ರಘುನಾಥ್‌ ಮತ್ತು ಲತಾರಿಗೆ ಮಕ್ಕಳಿರಲಿಲ್ಲ. ತಮ್ಮೆಲ್ಲ ಪ್ರೀತಿಯನ್ನು ಮನೆಯ ಏಕಮಾತ್ರ ಪುತ್ರನಾದ ಅಜಯ್‌ ಮೇಲೆಯೇ ಹರಿಸುತ್ತಿದ್ದರು.

ಅಜಯ್‌ ತನ್ನ ವಿದ್ಯಾಭ್ಯಾಸ ಮುಗಿಸಿದ ಮೇಲೆ ತಂದೆ ಮತ್ತು ಚಿಕ್ಕಪ್ಪನ ಎಕ್ಸ್ ಪೋರ್ಟ್‌ ಬಿಸ್‌ನೆಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಬಿಸ್‌ನೆಸ್‌ ಸಂದರ್ಭದಲ್ಲಿ ಇತರೆ ನಗರ ಅಥವಾ ಹೊರದೇಶಗಳಿಗೆ ಟೂರ್‌ ಹೊರಡುವ ಕೆಲಸ ಅವನದಾಗಿತ್ತು.

ವಿವಾಹವಾದ ನಂತರ ಪಾರ್ಟಿ, ಪಿಕ್ನಿಕ್‌, ಹನಿಮೂನ್‌ ಎಂದು ತಿರುಗಾಡುವಷ್ಟರಲ್ಲಿ ತಿಂಗಳು ಕಳೆದುಹೋಗಿತ್ತು. ಒಂದು ದಿನ ಆಫೀಸ್‌ನಿಂದ ಮನೆಗೆ ಬಂದ ಅಜಯ್‌ ಪತ್ನಿಗೆ ಹೇಳಿದ, “ಮುಂದಿನ ವಾರ ನಾನು ಜರ್ಮನಿಗೆ ಬಿಸ್‌ನೆಸ್‌ ಟ್ರಿಪ್‌ ಹೋಗಬೇಕಾಗಿದೆ.”

“ನನ್ನನ್ನೂ ಕರೆದುಕೊಂಡು ಹೋಗುವಿರಾ?”

“ನಿನಗೆ ಪಾಸ್‌ಪೋರ್ಟ್‌ ಇಲ್ಲವಲ್ಲ. ಮೊದಲು ನಿನ್ನ ಪಾಸ್‌ಪೋರ್ಟ್‌ ಮಾಡಿಸೋಣ. ಮುಂದಿನ ಸಲ ಜೊತೆಯಾಗಿ ಹೋಗಬಹುದು.”

ಶೋಭಿನಿಯ ಮುಖ ಸಪ್ಪೆಯಾಯಿತು. ಮನೆಯವರೆಲ್ಲ ಅದನ್ನು ಗಮನಿಸಿದರು. ಉಮಾ ಹೇಳಿದರು, “ಮದುವೆಯ ಓಡಾಟದಲ್ಲಿ ಪಾಸ್‌ಪೋರ್ಟ್‌ ವಿಷಯ ಜ್ಞಾಪಕವೇ ಬರಲಿಲ್ಲ. ಮುಂದಿನ ಸಲ ಹೋದರಾಯಿತು ಬಿಡು. ಅಜಯ್‌ ಟೂರ್‌ ಮಾಡುತ್ತಲೇ ಇರುತ್ತಾನೆ. ಅವನು ಇಲ್ಲದಿರುವಾಗ ನಾವೇ ಚೆನ್ನಾಗಿ ಎಂಜಾಯ್‌ ಮಾಡೋಣ.”

ಅತ್ತೆಯ ಸ್ನೇಹಪೂರ್ಣ ಮಾತುಗಳನ್ನು ಕೇಳಿ ಶೋಭಿನಿ ನಗುಮುಖ ಮಾಡಿದಳು.

ರಾತ್ರಿ ಮಲಗುವಾಗ ಅಜಯ್‌ ಪತ್ನಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ, “ನಿನ್ನನ್ನು ಬಿಟ್ಟು ಹೋಗುವುದಕ್ಕೆ ನನಗೂ ಮನಸ್ಸಿಲ್ಲ. ಆದರೆ ಅದು ನನ್ನದೇ ಕೆಲಸವಾದ್ದರಿಂದ ಹೋಗಲೇಬೇಕಾಗಿದೆ. ಬೇಗನೆ ಮುಗಿಸಿ ಬರಲು ಪ್ರಯತ್ನಿಸುತ್ತೇನೆ ಬೇಜಾರು ಮಾಡಿಕೊಳ್ಳಬೇಡ,” ಎಂದ.

ಪತಿಯ ಬೆಚ್ಚನೆಯ ಸ್ಪರ್ಶ ಶೋಭಿನಿಯ ಮನಸ್ಸಿಗೆ ಮುದ ನೀಡಿತು. ಅವನ ಬಾಹುಬಂಧನದಲ್ಲಿ ಸುರಕ್ಷತೆಯ ಅನುಭವದಿಂದ ಹಾಯಾಗಿ ಮಲಗಿದಳು. ಆದರೆ ಬೆಳಗ್ಗೆ ಎದ್ದ ನಂತರ ತಾನೇ ಬೇಸರ ಆವರಿಸಿತು.

2 ದಿನಗಳ ನಂತರ ಅಜಯ್‌ ಹೊರಟಹೋದ. ಮನೆಯವರೆಲ್ಲರೂ ಇದ್ದರೂ ಶೋಭಿನಿಗೆ ಒಂಟಿತನ ಕಾಡಿತು, `ಇದೆಂತಹ ಸಂಬಂಧ ಪತಿಪತ್ನಿಯರದು! ಕೆಲವೇ ದಿನಗಳ ಹಿಂದೆ ಅಪರಿಚಿತರಾಗಿದ್ದೆವು. ಇಂದು ಅವರಿಲ್ಲದೆ ಒಂದು ನಿಮಿಷ ಕಳೆಯುವುದೂ ಕಷ್ಟವಾಗಿದೆ. ಮನಸ್ಸೆಲ್ಲ ಅವರ ಸುತ್ತಲೇ ಸುತ್ತುತ್ತಿದೆ,’ ಎಂದು ಶೋಭಿನಿ ಯೋಚಿಸುತ್ತಿದ್ದಳು.

ಸೊಸೆಯ ಕಳಾಹೀನ ಮುಖವನ್ನು ನೋಡಲಾಗದೆ ಉಮಾ ಹೇಳಿದರು, “ಶೋಭಾ, ನಿನ್ನ ತವರುಮನೆಗೆ ಹೋಗಿದ್ದು ಬಾ. ತವರುಮನೆ ಒಂದೇ ಊರಿನಲ್ಲಿದ್ದುಬಿಟ್ಟರೆ ಅಲ್ಲಿ ಹೋಗಿ ಉಳಿಯುವುದಕ್ಕೆ ಅವಕಾಶವೇ ಆಗುವುದಿಲ್ಲ. ನೀನು ಹೋದಾಗೆಲ್ಲ ಸ್ವಲ್ಪ ಹೊತ್ತು ಇದ್ದು ಬರುತ್ತಿದ್ದೆ. ಈಗ ಹೋಗಿ ನಾಲ್ಕಾರು ದಿನಗಳು ನಿನ್ನ ತಂದೆ ತಾಯಿಯರ ಜೊತೆ ಕಾಲ ಕಳೆದು ಬಾ. ನಿನಗೂ ಒಂದು ಬದಲಾವಣೆ ಆಗುತ್ತದೆ.”

ಮಗಳು ಮನೆಗೆ ಬಂದುದನ್ನು ಕಂಡು ರಮೇಶ್‌ ಮತ್ತು ಸುಧಾ ಸಂತಸಗೊಂಡರು. ತಾವಾಗಿ ಸೊಸೆಯನ್ನು ತವರಿಗೆ ಕಳುಹಿಸಿಕೊಟ್ಟ ಗೋಪಿನಾಥ್‌ ಮತ್ತು ಉಮಾರ ಹೃದಯ ವೈಶಾಲ್ಯಕ್ಕೆ ಮಾರುಹೋದರು.

“ಶೋಭಾ, ಅವರು ಬಹಳ ಒಳ್ಳೆಯ ಜನರು. ಅವರೊಂದಿಗೆ ಪ್ರೀತಿಯಿಂದ ನಡೆದುಕೊ. ಎಲ್ಲರಿಗೂ ಇಂತಹ ಉತ್ತಮ ಸಂಬಂಧ ಸಿಗುವುದಿಲ್ಲ,” ಎಂದು ಸುಧಾ ಮೆಚ್ಚುಗೆಯಿಂದ ಮಗಳಿಗೆ ತಿಳಿಹೇಳಿದರು.

ಅಜಯ್‌ ನಿತ್ಯ ಫೋನ್‌ ಮಾಡಿ ಪತ್ನಿಯೊಂದಿಗೆ ಮಾತನಾಡುತ್ತಿದ್ದ. ಉಮಾ ಸಹ ಆಗಾಗ ಫೋನ್‌ ಮೂಲಕ ವಿಚಾರಿಸಿಕೊಳ್ಳುತ್ತಿದ್ದರು.

ಶೋಭಿನಿ ತವರಿಗೆ ಬಂದಿರುವ ಸುದ್ದಿ ತಿಳಿದೊಡನೆ ಅವಳ ಸ್ನೇಹಿತರು ಉತ್ಸಾಹಗೊಂಡರು. ಅವರೆಲ್ಲ ಶೋಭಿನಿಗಾಗಿ ಒಂದು ಪಾರ್ಟಿ ಇಟ್ಟುಕೊಳ್ಳುವ ಯೋಜನೆ ಹಾಕಿದರು.

ಗೆಳತಿ ರೇಖಾ ಹೇಳಿದಳು, “ನಿನಗೋಸ್ಕರ ಪಾರ್ಟಿ ಇಟ್ಟಿದ್ದೇವೆ. ಅಜಯ್‌ ಇಲ್ಲದೆ ನಿನಗೆ ಬಹಳ ಬೋರ್‌ ಆಗಿದೆಯಲ್ಲವೇ? ಚೆನ್ನಾಗಿ ಮಜಾ ಮಾಡೋಣ. ಆಗ ನಿನ್ನ ಬೇಸರ ಓಡಿಹೋಗುತ್ತದೆ.”

ಶೋಭಿನಿ ಪತಿಗೆ ಫೋನ್‌ನಲ್ಲಿ ಪಾರ್ಟಿಯ ವಿಷಯ ತಿಳಿಸಿದಳು. ಅದನ್ನು ಕೇಳಿ ಅವನಿಗೆ ಸಂತೋಷವಾಯಿತು, “ಖಂಡಿತಾ ಹೋಗು, ಎಂಜಾಯ್‌ ಮಾಡು,” ಎಂದ.

ಶೋಭಿನಿಯ ಕಾಲೇಜು ಸ್ನೇಹಿತರ ಗುಂಪಿನಲ್ಲಿ ಹುಡುಗ ಹುಡುಗಿಯರಿಬ್ಬರೂ ಇದ್ದರು. ಸಂಜಯ್‌ನ ಫಾರ್ಮ್ ಹೌಸ್‌ನಲ್ಲಿ ಪಾರ್ಟಿ ಏರ್ಪಡಿಸಲಾಗಿತ್ತು. ತುಮಕೂರು ರಸ್ತೆಯಲ್ಲಿದ್ದ ಫಾರ್ಮ್ ಹೌಸ್‌ಗೆ ನಗರದಿಂದ 1 ಗಂಟೆಯ ಪ್ರಯಾಣ.

ಪಾರ್ಟಿಯ ವಿಷಯ ತಿಳಿದ ರಮೇಶ್‌ ಮಗಳಿಗೆ, “ಆಗಲಿ ಹೋಗು,” ಎಂದು ಹೇಳಿದರು. ಆದರೆ ಸುಧಾಗೆ ಅದು ಇಷ್ಟವಾಗಲಿಲ್ಲ.

“ಹಗಲಿನಲ್ಲಿ ಹೋಗಿ ಸುತ್ತಾಡಿ ಬಾ. ಆದರೆ ರಾತ್ರಿಯ ಹೊತ್ತು ಬೇರೆ ಕಡೆ ಉಳಿಯುವುದು ಸರಿಯಲ್ಲ.”

“ಅಮ್ಮಾ, ನಮ್ಮ ಹಳೆಯ ಸ್ನೇಹಿತರ ಗುಂಪು ಹೋಗುತ್ತಿದ್ದೇವೆ. ಅಲ್ಲದೆ ನಾನೀಗ ಮದುವೆಯಾಗಿರುವ ಹುಡುಗಿ. ನೀವೇನೂ ಯೋಚನೆ ಮಾಡಬೇಡಿ.”

“ಇಲ್ಲ ಶೋಭಾ, ಈ ರೀತಿ ರಾತ್ರಿ ಉಳಿಯುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ.”

ತಾಯಿಯನ್ನು ಒಪ್ಪಿಸಿ ಶೋಭಿನಿ ರೇಖಾಳ ಮನೆಗೆ ಹೋದಳು. ಅಲ್ಲಿ ಆಗಲೇ ಅನಿತಾ, ಸುಮನ್‌, ಮಂಜು, ಸೋನಿಯಾ, ರೀಟಾ, ಸಂಜಯ್‌, ಅನಿಲ್‌, ಕೃಪಾಕರ್‌, ರೋಹನ್‌ ಎಲ್ಲ ಬಂದಿದ್ದರು. ಅವರೆಲ್ಲ ಕಾಲೇಜು ಸಹಪಾಠಿಗಳು. 2 ಕಾರುಗಳಲ್ಲಿ ಎಲ್ಲರೂ ಫಾರ್ಮ್ ಹೌಸ್‌ ತಲುಪಿದರು. ಇವರಲ್ಲಿ ರೋಹನ್‌, ರೀಟಾ ಮತ್ತು ಶೋಭಿನಿ ವಿವಾಹಿತರು.

ಬಹಳ ದಿನಗಳ ನಂತರ ಒಟ್ಟಾಗಿ ಸೇರಿದ್ದ ಸ್ನೇಹಿತರು ಸಮಯದ ಪರಿವೆ ಇಲ್ಲದೆ ಹರಟಿದರು. 6 ಗಂಟೆಗೆ ಮೊದಲ ಸುತ್ತಿನ ಕೂಲ್‌ಡ್ರಿಂಕ್ಸ್ ಸಮಾರಾಧನೆ ಪ್ರಾರಂಭವಾಯಿತು. ಎಲ್ಲರೂ ಮಾತು, ನಗು, ಹವ್ಯಾಸಗಳ ನಡುವೆ ಪರಸ್ಪರರ ಗ್ಲಾಸ್‌ಗಳನ್ನು ತುಂಬಿಸುತ್ತಿದ್ದರು. ಕೊಂಚ ಹೊತ್ತಿನ ಬಳಿಕ ಶೋಭಿನಿಗೆ ತಲೆ ಭಾರವಾದಂತಾಯಿತು. ಅವಳು ಒಂದು ಕಡೆ ಸುಮ್ಮನೆ ಕುಳಿತುಬಿಟ್ಟಳು.

ಮ್ಯೂಸಿಕ್‌ ಹಾಕಿ ಎಲ್ಲರೂ ನರ್ತಿಸತೊಡಗಿದರು. ಕಾಲೇಜು ವಿದ್ಯಾರ್ಥಿಗಳಂತೆ ಮಜಾ ಮಾಡುವ ಮೂಡ್‌ನಲ್ಲಿದ್ದರು. ಶೋಭಿನಿ ಮಾತ್ರ ಆಯಾಸಗೊಂಡವಳಂತೆ ಸೋಫಾದ ಮೇಲೆ ಕುಳಿತಿದ್ದಳು.

ರೇಖಾ ಅವಳ ಬಳಿಗೆ ಬಂದು, “ನೀನು ಯಾವುದಾದರೂ ರೂಮಿಗೆ ಹೋಗಿ ಸ್ವಲ್ಪ ರೆಸ್ಟ್ ಮಾಡು,” ಎಂದಳು.

ಅದನ್ನು ಕೇಳಿಸಿಕೊಂಡ ಸಂಜಯ್‌, ತನ್ನ ಫಾರ್ಮ್ ಹೌಸ್‌ನ್ನು ನೋಡಿಕೊಳ್ಳುತ್ತಿದ್ದ ಮಾದಯ್ಯನ ಪತ್ನಿಯನ್ನು ಕರೆದು, “ಸಾವಿತ್ರಮ್ಮ, ಶೋಭಿನಿಯ ಆರೋಗ್ಯ ಸರಿ ಇಲ್ಲ. ಅವರನ್ನು ಒಂದು ರೂಮಿಗೆ ಕರೆದುಕೊಂಡು ಹೋಗಿ. ಅವರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ.”

ರೇಖಾ ಜೊತೆಗೆ ಹೋಗಿ ಶೋಭಿನಿ ಮಲಗಲು ಸಹಕರಿಸಿದಳು. ನಂತರ ಅವಳು ಹಾಲ್‌ಗೆ ಬಂದು ಡ್ಯಾನ್ಸ್ ನಲ್ಲಿ ಮಗ್ನಳಾದಳು. ಎಲ್ಲರೂ ಡ್ಯಾನ್ಸ್ ಮಾಡಿ ದಣಿದು ಕುಳಿತಾಗ ಮಾದಯ್ಯ ಮತ್ತು ಸಾವಿತ್ರಮ್ಮ ಊಟದ ಟೇಬಲ್ ಸಿದ್ಧಪಡಿಸಿದರು. ಎಲ್ಲರೂ ಶೋಭಿನಿಯನ್ನು ಊಟಕ್ಕಾಗಿ ಎಬ್ಬಿಸಿದರು. ಆದರೆ ಅವಳು ಗಾಢ ನಿದ್ರೆಯಲ್ಲಿದ್ದಳು.

ರೇಖಾ ಹೇಳಿದಳು, “ಮಲಗಲಿ ಬಿಡಿ. ಎಚ್ಚರವಾದಾಗ ಊಟ ಮಾಡುತ್ತಾಳೆ. ಮದುವೆಯಾದ ಮೇಲೆ ಬಹಳ ಸೂಕ್ಷ್ಮವಾಗಿಬಿಟ್ಟಿದ್ದಾಳೆ.” ಅವಳ ಹಾಸ್ಯಕ್ಕೆ ಎಲ್ಲರೂ ನಕ್ಕರು.

ಡಿನ್ನರ್‌ ಮುಗಿಸಿದ ನಂತರ ಸ್ನೇಹಿತರೆಲ್ಲ ಮಾತನಾಡುತ್ತಲೇ ಇದ್ದರು. ಆಮೇಲೆ ಮಲಗಲು ಹೊರಟರು. ಆ ಫಾರ್ಮ್ ಹೌಸ್‌ನಲ್ಲಿ 3 ಕೋಣೆಗಳಿದ್ದವು. ಹುಡುಗಿಯರೆಲ್ಲ ಒಂದು ರೂಮಿಗೆ ಹೋಗಿ ಮಲಗಿದರು.

ಶೋಭಿನಿಗೆ ಎಚ್ಚರವೇ ಇಲ್ಲ. ಅವಳು ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. 3 ಗಂಟೆ ರಾತ್ರಿಯಲ್ಲಿ ಸಂಜಯ್‌ ಅತ್ತಿತ್ತ ನೋಡಿ ಎಲ್ಲರೂ ಗಾಢ ನಿದ್ರೆಯಲ್ಲಿರುವುದನ್ನು ಖಾತ್ರಿಪಡಿಸಿಕೊಂಡು ಶೋಭಿನಿ ಮಲಗಿದ್ದ ಕೋಣೆಗೆ ಹೋದ.

ಸಂಜಯ್‌ಗೆ ಮೊದಲಿನಿಂದಲೂ ಶೋಭಿನಿಯ ಮೇಲೆ ಕಣ್ಣಿತ್ತು. ಆ ದಿನ ಅವನು ಶೋಭಿನಿಯ ಡ್ರಿಂಕ್ಸ್ ನಲ್ಲಿ ಮತ್ತು ತರಿಸುವ ಪದಾರ್ಥ ಬೆರೆಸಿದ್ದ. ಇದನ್ನು ಅವನು ಮೊದಲೇ ಪ್ಲಾನ್‌ ಮಾಡಿದ್ದ.

ಶೋಭಿನಿಯತ್ತ ಕಾಮುಕ ದೃಷ್ಟಿ ಬೀರಿ ಸಂಜಯ್‌ ಕೋಣೆಯ ಬಾಗಿಲಿನ ಚಿಲಕ ಹಾಕಿದ. ಮತ್ತಿನಲ್ಲಿ ಮಲಗಿದ್ದ ಶೋಭಿನಿ ಅವನ ಆಕ್ರಮಣವನ್ನು ಪ್ರತಿಭಟಿಸಿದಳು. ಆದರೆ ಕಣ್ಣು ತೆರೆಯಲೂ ಶಕ್ತಿಯಿಲ್ಲದೆ, ಕೈ ಕಾಲು ಆಡಿಸಲೂ ಆಗದೆ ಮಲಗಿದ್ದ ಅವಳು ಅಸಹಾಯಕಳಾಗಿ ಬಿದ್ದಿರಬೇಕಾಯಿತು.

ಸಂಜಯ್‌ನ ಕಾಮೇಚ್ಛೆ ಪೂರ್ಣಗೊಂಡಿತ್ತು. ತನ್ನ ಯೋಜನೆ ಸಫಲಗೊಂಡ ತೃಪ್ತಿಯಿಂದ ಹೊರ ನಡೆದು ಸದ್ದಿಲ್ಲದೆ ಗೆಳೆಯರ ಮಧ್ಯೆ ಹೋಗಿ ಮಲಗಿದ. ನಸುಕಿನಲ್ಲಿ ನಶೆಯ ಪ್ರಭಾವ ಇಳಿದಾಗ ಶೋಭಿನಿ ಕಣ್ಣುತೆರೆದಳು. ಕಳೆದ ರಾತ್ರಿ ತನ್ನೊಂದಿಗೆ ಏನು ನಡೆಯಿತೆಂದು ನಿಧಾನವಾಗಿ ಅರಿವಾಗತೊಡಗಿತು. ಅಳು ನಾಚಿಕೆ, ಭಯ, ಕೋಪಗಳಿಂದ ನಡುಗಿದಳು. ಕೋಪದಿಂದ ಕನಲಿ ಬಲಾತ್ಕಾರಿಯ ಪ್ರಾಣ ತೆಗೆಯುವೆನೆಂದು ಹಾಸಿಗೆ ಬಿಟ್ಟು ಎದ್ದಳು. ನಡುಗುವ ಹೆಜ್ಜೆ ಇಡುತ್ತಾ ತಲೆಯನ್ನು ಕೈಯಲ್ಲಿ ಹಿಡಿದು ಡ್ರಾಯಿಂಗ್‌ ರೂಮಿಗೆ ಬಂದಳು. ಡ್ರಾಯಿಂಗ್‌ ರೂಮ್ ಮತ್ತು ಬೆಡ್‌ರೂಮುಗಳಲ್ಲಿ ಎಲ್ಲರೂ ಮಲಗಿದ್ದರು.

ಶೋಭಿನಿಯ ಕಾಲು ನಡುಗಿತು. ಇದೇನಾಗಿ ಹೋಯಿತು. ತನ್ನನ್ನು ರೇಪ್‌ ಮಾಡಿದವರು ಯಾರು ಎಂದು ಸಹ ತಿಳಿದಿಲ್ಲ…. ಏನೆಂದು ಹೇಳುವುದು…. ಯಾರನ್ನು ಕೇಳುವುದು…. ಏನು ಮಾಡುವುದು….. ಒಂದೂ ತಿಳಿಯದೆ ಅವಳು ಆಯಾಸಗೊಂಡು ಕೋಣೆಯಲ್ಲಿ ಹಾಸಿಗೆಯ ಮೇಲೆ ಬಂದು ಬಿದ್ದಳು. ಕಣ್ಣೀರು ಒಂದೇ ಸಮನೆ ಹರಿಯುತ್ತಿತ್ತು. ತನಗಾದ ಅನ್ಯಾಯವನ್ನು ಕೂಗಿ ಕೂಗಿ ಎಲ್ಲರಿಗೂ ಹೇಳುವ ಮನಸ್ಸಾಗುತ್ತಿತ್ತು.

ಬೆಳಕು ಹರಿದ ಮೇಲೆ ಎಲ್ಲರೂ ಒಬ್ಬೊಬ್ಬರಾಗಿ ಏಳತೊಡಗಿದರು. ಶೋಭಿನಿಯ ಬಳಿಗೆ ಬಂದು ಅವಳ ಆರೋಗ್ಯದ ಬಗ್ಗೆ ಕೇಳತೊಡಗಿದರು. ಅವಳು ಗಂಡು ಹುಡುಗರ ಮುಖಗಳನ್ನು ಪರೀಕ್ಷಾರ್ಥ ದೃಷ್ಟಿಯಿಂದ ನೋಡಿದಳು. ಆದರೆ ಏನೂ ತಿಳಿಯಲಿಲ್ಲ.

ಸಂಜಯ್‌ ಎಂದಿನಂತೆಯೇ ಇದ್ದ. ಎಲ್ಲರೂ ಫ್ರೆಶ್‌ಅಪ್‌ ಆದ ನಂತರ, “ಬನ್ನಿ, ತಿಂಡಿ ತಿಂದು ಹೊರಡೋಣ…. ಶೋಭಿನಿಯ ಆರೋಗ್ಯ ಇನ್ನೂ ಸರಿ ಇರುವಂತಿಲ್ಲ…… ಅವಳು ಮನೆಗೆ ಹೋಗಿ ಡಾಕ್ಟರ್‌ಗೆ ತೋರಿಸಲಿ,” ಎಂದ.

ಶೋಭಿನಿ ಸಂಜಯ್‌ನ ಮುಖವನ್ನು ಗಮನಿಸಿ ನೋಡಿದಳು. ಆದರೆ ಅವನು ಎಂದಿನಂತೆ ಹಸನ್ಮುಖನಾಗಿಯೇ ಇದ್ದ. ಮನದಲ್ಲೇ ಮಿಡುಕುತ್ತಾ, ತೊಳಲುತ್ತಾ ಅವಳು ಹೋಗಿ ಕಾರಿನಲ್ಲಿ ಕುಳಿತಳು. ಅವಳನ್ನು ಬಿಡಲು ಎಲ್ಲರೂ ಮೊದಲು ಅವಳ ಮನೆಗೇ ಹೋದರು.

ತಾಯಿಯನ್ನು ಕಂಡೊಡನೆಯೇ ಶೋಭಿನಿ ಅವರ ಭುಜಕ್ಕೊರಗಿ ಅತ್ತುಬಿಟ್ಟಳು. ಅದನ್ನು ಕಂಡು ರಮೇಶ್‌ ಗಾಬರಿಯಿಂದ, “ಏನಾಯಿತು ಶೋಭಾ,” ಎಂದು ಕೇಳಿದರು.

“ಅಂಕಲ್, ನಿನ್ನೆ ರಾತ್ರಿಯಿಂದಲೇ ಅವಳ ಆರೋಗ್ಯ ಸರಿಯಿಲ್ಲ,” ರೋಹನ್‌ ಹೇಳಿದ.

“ಹೊರಡುವಾಗ ಚೆನ್ನಾಗಿಯೇ ಇದ್ದಳಲ್ಲ. ಮತ್ತೆ ಏಕೆ ಫೋನ್‌ ಮಾಡಲಿಲ್ಲ?” ಸುಧಾ ಕೇಳಿದರು.

“ಅಮ್ಮಾ, ನಾನು ಬೇಗನೆ ಮಲಗಿಬಿಟ್ಟೆ. ತಲೆ ನೋಯುತ್ತಿತ್ತು.”

“ನಡಿ, ಡಾಕ್ಟರ್‌ ಹತ್ತಿರ ಹೋಗೋಣ,” ರಮೇಶ್‌ ಅಲವತ್ತುಗೊಂಡರು.

“ಇಲ್ಲ, ಈಗ ಸರಿಯಾಗಿದ್ದೇನೆ. ಕೊಂಚ ರೆಸ್ಟ್ ತೆಗೆದುಕೊಳ್ಳುತ್ತೇನೆ.”

ವಿಷಯ ತಿಳಿದು ಅಜಯ್‌ಗೆ ಸಹ ಬೇಸರಾಯಿತು. ಉಮಾ ಮತ್ತು ಲತಾ ಬಂದು ಅವಳ ಆರೋಗ್ಯ ವಿಚಾರಿಸಿದರು. ಎಲ್ಲರ ಕಾಳಜಿ ಕಂಡು ಶೋಭಿನಿಯ ಹೃದಯ ತುಂಬಿ ಬಂದಿತು.

ಉಮಾ ಹೇಳಿದರು, “ರೆಸ್ಟ್ ತೆಗೆದುಕೊ, ನಿನಗೆ ಬರಬೇಕು ಅನ್ನಿಸಿದಾಗ ಬಾ. ನೀನಿಲ್ಲದೆ ಮನೆ ಎಲ್ಲ ಖಾಲಿಯಾಗಿರುವಂತೆ ಅನ್ನಿಸುತ್ತದೆ.” ಕೊಂಚ ಹೊತ್ತು ಕುಳಿತು ಮಾತನಾಡಿ ಅವರು ಹಿಂದಿರುಗಿ ಹೋದರು.

ಮನಸ್ಸಿನ ತುಮುಲವನ್ನು ತಡೆಯಲಾಗದೆ ಶೋಭಿನಿ ತಾಯಿಯೊಡನೆ ಸತ್ಯಸಂಗತಿಯನ್ನು ಹೇಳಿಬಿಡುವ ಯೋಚನೆ ಮಾಡಿದಳು. ಆದರೆ ಅವಳು ಫಾರ್ಮ್ ಹೌಸ್‌ನಲ್ಲಿ ರಾತ್ರಿ ಉಳಿಯುವ ಬಗೆಗೆ ಸುಧಾ ಮೊದಲೇ ವಿರೋಧ ವ್ಯಕ್ತಪಡಿಸಿದ್ದುದರಿಂದ ಅವಳಿಗೆ ಮಾತನಾಡಲು ಧೈರ್ಯವಾಗಲಿಲ್ಲ. ತಾಯಿಯ ಅವ್ಯಕ್ತ ಭಯ ಸತ್ಯವೆಂದು ಸಾಬೀತಾಗಿರುವಾಗ ಅವಳು ಯಾವ ಬಾಯಿಯಿಂದ ಹೇಳಿಯಾಳು?

ಶೋಭಿನಿ ಒಳಗೆ ಸಂಕಟಪಡುತ್ತಿದ್ದರೂ ತಂದೆ ತಾಯಿಯರ ಮುಂದೆ ಸಾಮಾನ್ಯವಾಗಿರುವಂತೆ ವ್ಯವಹರಿಸಿದಳು. ಶಾಂತವಾಗಿ ಒಂದೆಡೆ ಕುಳಿತಿರಲು ಅವಳಿಗಾಗುತ್ತಿರಲಿಲ್ಲ. ಮನಸ್ಸಿನಾಳದಲ್ಲಿ ಏನೋ ಭಯ, ತಳಮಳ.

1-2 ದಿನಗಳು ಕಳೆದ ನಂತರ ಅವಳು ತಾಯಿಯೊಡನೆ, “ಅಮ್ಮಾ, ನಾನಿನ್ನು ಅತ್ತೆಮನೆಗೆ ಹೋಗುತ್ತೇನೆ. ಅಜಯ್‌ ಇಲ್ಲದೆ ಬೇಸರವಾಯಿತು ಎಂದು ಬಂದೆ. ಹೆಚ್ಚು ದಿನ ಇರುವುದು ಸರಿಯಲ್ಲ,” ಎಂದಳು.

“ಆಗಲಿ ಮಗಳೇ, ನಿನ್ನಿಷ್ಟ.”

ತಂದೆಯ ಜೊತೆಯಲ್ಲಿ ಅವಳು ಮನೆಗೆ ಹಿಂದಿರುಗಿದಳು. ಅವಳನ್ನು ನೋಡಿದೊಡನೆ ಎಲ್ಲರ ಮುಖಗಳೂ ಅರಳಿದವು.

“ನೀನು ಬಂದದ್ದು ಒಳ್ಳೆಯದಾಯಿತು ಶೋಭಾ. ಮನೆಯಲ್ಲಿ ಕಳೆಯೇ ಇರಲಿಲ್ಲ,” ಉಮಾ ಹೇಳಿದರು.

ರಮೇಶ್‌ ನಗುತ್ತಾ, “ನಿಮ್ಮ ಸೊಸೆಯನ್ನು ಕರೆದುಕೊಳ್ಳಿ. ಈಗ ಇವಳಿಗೆ ತವರಿನಲ್ಲಿ ಮನಸ್ಸು ನಿಲ್ಲುತ್ತಿಲ್ಲ,” ಎಂದರು.

ಶೋಭಿನಿ ಬಂದದ್ದು ಎಲ್ಲರಿಗೂ ಸಂತಸ ತಂದಿತು. ಅದು ಎಲ್ಲರ ಮುಖದಲ್ಲಿಯೂ ವ್ಯಕ್ತವಾಗುತ್ತಿತ್ತು. ಆದರೂ ಉಮಾರಿಗೆ ಏನೋ ಆತಂಕ.

“ಶೋಭಾ, ನೀನು ಬಂದಾಗಿನಿಂದ ನಿನ್ನ ಮುಖದಲ್ಲಿ ಉತ್ಸಾಹವೇ ಇಲ್ಲ. ನಿನ್ನ ಆರೋಗ್ಯ ಇನ್ನೂ ಸರಿಯಿಲ್ಲವೇ?” ಎಂದು ಕೇಳಿದರು.

“ಏನಿಲ್ಲ ಅತ್ತೆ, ಚೆನ್ನಾಗಿದ್ದೇನೆ.”

ರಘುನಾಥ್‌ ಅಣ್ಣನಿಗೆ ಹೇಳಿದರು, “ಅಣ್ಣಾ, ಇನ್ನು ಮುಂದೆ ಅಜಯ್‌ ಟೂರ್‌ಗೆ ಹೋಗುವುದನ್ನು ಕಡಿಮೆ ಮಾಡಿಸಬೇಕು. ಅವನಿಲ್ಲದೆ ಶೋಭಾ ಬೇಸರಿಸಿಕೊಳ್ಳುತ್ತಾಳೆ. ಇಲ್ಲವಾದರೆ ಅವಳನ್ನೂ ಜೊತೆಯಲ್ಲಿ ಕಳುಹಿಸಿಕೊಡಬೇಕು.”

“ಹೌದು, ನೀನು ಹೇಳುವುದು ಸರಿಯಾಗಿದೆ,” ಎಂದರು ಗೋಪಿನಾಥ್‌.

ನಡೆದ ಘಟನೆಯನ್ನು ಮರೆಯಲು ಶೋಭಿನಿ ಪ್ರಯತ್ನಿಸುತ್ತಲೇ ಇದ್ದಳು. ಹಗಲು ಹೇಗೋ ಕೆಲಸದಲ್ಲಿ ತೊಡಗಿಕೊಂಡು ಇದ್ದರೆ,  ರಾತ್ರಿಯನ್ನು ಕಳೆಯುವುದು ಕಷ್ಟಕರವಾಗುತ್ತಿದ್ದಿತು. ಎಲ್ಲರಿಂದ ವಿಷಯವನ್ನು ಮುಚ್ಚಿಟ್ಟಿದ್ದೇನೆಂಬ ಅಪರಾಧೀ ಪ್ರಜ್ಞೆ ಅವಳನ್ನು ಕಾಡುತ್ತಿತ್ತು. ಯಾರೊಂದಿಗಾದರೂ ವಿಷಯವನ್ನು ಹಂಚಿಕೊಂಡರೆ ಮನಸ್ಸು ಕೊಂಚ ಹಗುರಾಗಬಹುದು ಎನಿಸುತ್ತಿತ್ತು. ಆದರೆ ಯಾರೊಂದಿಗೆ ಹೇಳುವುದು ಎನ್ನುವುದು ಅವಳಿಗೆ ತಿಳಿಯಲಿಲ್ಲ.

ಅಜಯ್‌ ಹಿಂದಿರುಗಿ ಬಂದಾಗ ಎಲ್ಲರಿಗೂ ಮನಸ್ಸು ನಿರಾಳವಾಯಿತು. ಲತಾ ಹೇಳಿದರು, “ನೋಡು, ನಿನ್ನ ಹುಡುಗಿ ನೀನಿಲ್ಲದೆ ಹೇಗಾಗಿದ್ದಾಳೆ. ಇನ್ನು ಅವಳನ್ನು ಬಿಟ್ಟು ಎಲ್ಲಿಗೂ ಹೋಗಬೇಡ.”

ಅಜಯ್‌ ಶೋಭಿನಿಯತ್ತ ನೋಡಿದ. ಅವಳ ಕಣ್ಣುಗಳಲ್ಲಿ ನೀರಿತ್ತು. ಇಷ್ಟು ದಿನಗಳ ಅಗಲಿಕೆಗಾಗಿ ಕಣ್ಣೀರು ಎಂದು ಅವನು ಭಾವಿಸಿದನು. ರಾತ್ರಿ ರೂಮಿನಲ್ಲಿ ಅಜಯ್‌ನ ಎದೆಯ ಮೇಲೆ ಮುಖವಿಟ್ಟು ಶೋಭಿನಿ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು.

“ನಾನಿಲ್ಲದಿರುವಾಗ ನಿನಗೆ ಏನಾದರೂ ತೊಂದರೆ ಆಯಿತೇನು?” ಅಜಯ್‌ ಚಿಂತೆಯಿಂದ ಕೇಳಿದ.

“ಇಲ್ಲ, ಹಾಗೇನಿಲ್ಲ,” ಎಂದ ಶೋಭಿನಿ, ತನ್ನನ್ನು ಇಷ್ಟು ಪ್ರೀತಿಸುವ ಪತಿಯಿಂದ ಏನನ್ನೂ ಮುಚ್ಚಿಡಬಾರದು ಎಂದುಕೊಂಡರೂ, ಪರಿಣಾಮವನ್ನು ನೆನೆದು ಅಧೀರಳಾದಳು. ಕೆಲವು ದಿನಗಳು ಕಳೆದವು. ಶೋಭಿನಿ ಮನದಲ್ಲೇ ಕೊರಗುತ್ತಿದ್ದಳು. ಎಲ್ಲರೊಡನೆ ಮಾತು, ನಗುವಿನಲ್ಲಿ ಬೆರೆಯಲು ಅವಳಿಂದಾಗುತ್ತಿರಲಿಲ್ಲ. ಸದಾಕಾಲ ಒಂದು ಬಗೆಯ ಅಪರಾಧೀಭಾವ ಅವಳ ಮನಸ್ಸನ್ನು ಮುಸುಕಿರುತ್ತಿತ್ತು.

ಈ ಬಾರಿ ನಿಗದಿತ ಸಮಯದಲ್ಲಿ ಅವಳ ಪೀರಿಯಡ್ಸ್ ಆಗಲಿಲ್ಲ. ಅವಳ ಎದೆ ಢವಗುಟ್ಟಿತು. ಮತ್ತೆ ಕೆಲವು ದಿನ ಕಾದಳು. ಅದರ ಸೂಚನೆಯೇ ಇಲ್ಲದಿದ್ದಾಗ ಗಾಬರಿಗೊಂಡಳು.

ಮರುದಿನ ಬೆಳಗ್ಗೆ ಅಜಯ್‌ಗೆ ತಿಂಡಿ, ಕಾಫಿ ಕೊಟ್ಟು ಅವನ ಲಂಚ್‌ ಬಾಕ್ಸ್ ಸಿದ್ಧಪಡಿಸಿದಳು. ಅವನು ಆಫೀಸಿಗೆ ಹೋದ ನಂತರ ಅತ್ತೆಗೆ ಏನೋ ಕಾರಣ ಹೇಳಿ ಹೊರನಡೆದಳು. ಮೆಡಿಕಲ್ ಶಾಪ್‌ಗೆ ಹೋಗಿ ಪ್ರೆಗ್ನೆನ್ಸಿ ಕಿಟ್‌ ಖರೀದಿಸಿದಳು.

ಮನೆಗೆ ಬಂದು ಎಲ್ಲರೊಡನೆ ಊಟ ಮಾಡಿದಳು. ಮಧ್ಯಾಹ್ನ ಉಮಾ ಮತ್ತು ಲತಾ ಕೊಂಚ ಮಲಗಲೆಂದು ತಮ್ಮ ತಮ್ಮ ರೂಮುಗಳಿಗೆ ಹೋದ ಮೇಲೆ ಶೋಭಿನಿ ತಾನೂ ತನ್ನ ರೂಮ್ ಸೇರಿಕೊಂಡಳು. ನಡುಗುವ ಕೈ ಕಾಲುಗಳು, ಡವಗುಟ್ಟುವ ಎದೆಯೊಡನೆ ಬಾತ್‌ರೂಮಿಗೆ ನಡೆದು ಸ್ವತಃ ಟೆಸ್ಟ್ ಮಾಡಿಕೊಂಡಳು. ಪಾಸಿಟಿವ್ ರಿಸಲ್ಟ್! ಅವಳು ಗರ್ಭವತಿಯಾಗಿದ್ದಳು. ಧೊಪ್ಪನೆ ಹಾಸಿಗೆಯ ಮೇಲೆ ಕುಳಿತಳು. ಮೈ ಪೂರ್ತಿ ಬೆವರು, ತಲೆ ಸುತ್ತಿ ಬರುವಂತಾಗುತ್ತಿತ್ತು.

ತನ್ನ ಹಿಂದಿನ ಪೀರಿಯೆಡ್‌, ಪತಿಯೊಂದಿಗಿನ ತನ್ನ ಮೌನ ಸಂಬಂಧ ಮತ್ತು ತನಗಾದ ಬಲಾತ್ಕಾರ ಲೆಕ್ಕವನ್ನು ಮತ್ತೆ ಮತ್ತೆ ಮಾಡಿ ನೋಡಿದಳು. ಹೇಗೆ ಲೆಕ್ಕ ಹಾಕಿದರೂ ತನ್ನ ಗರ್ಭದಲ್ಲಿರುವ ಶಿಶು ಅಜಯ್‌ನದಲ್ಲ, ತನ್ನ ಪ್ರಜ್ಞೆ ತಪ್ಪಿಸಿ ರೇಪ್‌ ಮಾಡಿದ ಬಲಾತ್ಕಾರಿಯದು ಎಂದು ಅವಳಿಗೆ ತಿಳಿದು ಬಂದಿತು. ಈಗೇನು ಮಾಡಲಿ ಎಂದು ತಲೆಯ ಮೇಲೆ ಕೈ ಹೊತ್ತು ಚಿಂತಿಸಿ ಅಳುತ್ತಾ ಕುಳಿತಳು.

ಶೋಭಿನಿಗೆ ತನ್ನ ಬಗ್ಗೆಯೇ ಅಸಹ್ಯವೆನಿಸಿತು. ಈ ಪಾಪದ ಪಿಂಡ ತನಗೆ ಬೇಡವೇ ಬೇಡ, ಅಬಾರ್ಶನ್‌ ಮಾಡಿಸಿಕೊಂಡು ಬಿಡುತ್ತೇನೆ ಎಂದು ಯೋಚಿಸಿದಳು.

ಸಾಯಂಕಾಲ ಕಾಫಿ ಸಮಯದಲ್ಲಿ ಸೊಸೆಯ ಊದಿದ ಕಣ್ಣುಗಳನ್ನು ಕಂಡು ಉಮಾ ಕೇಳಿದರು, “ಯಾಕೆ ಶೋಭಾ, ಏನಾಯಿತು?”

“ಏನಿಲ್ಲ ಅತ್ತೆ, ತಲೆ ನೋಯುತ್ತಿದೆ.”

“ಯಾಕೋ ಈಚೆಗೆ ನಿನ್ನ ಆರೋಗ್ಯವೇ ಸರಿಯಿಲ್ಲ. ನಾಳೆ ಡಾಕ್ಟರ್‌ ಹತ್ತಿರ ಕರೆದುಕೊಂಡು ಹೋಗುವುದಕ್ಕೆ ಅಜಯ್‌ಗೆ ಹೇಳುತ್ತೇನೆ.”

ಅಜಯ್‌ ಹೆಸರು ಹೇಳಿದ್ದನ್ನು ಕೇಳಿ ಶೋಭಿನಿ ಅಳುಕಿದಳು. ಡಾಕ್ಟರ್‌ ಬಳಿಗೇನೋ ಹೋಗಬೇಕು. ಆದರೆ ಅಜಯ್‌ ಬಂದರೆ ಕೆಲಸ ಕೆಡುತ್ತದೆ ಎಂದುಕೊಂಡು ತಕ್ಷಣ ಹೇಳಿದಳು, “ಬರಿಯ ತಲೆನೋವಿಗೇಕೆ ಅವರು ಆಫೀಸ್‌ ಬಿಟ್ಟು ಬರಬೇಕು. ನಾನೇ ಹೋಗಿಬರುತ್ತೇನೆ.”

ಸುಳ್ಳು ಹೇಳಬೇಕಾಗಿ ಬಂದುದಕ್ಕೆ ಅವಳಿಗೆ ಮುಜುಗರವಾಯಿತು. ಆದರೆ ಹೇಗೋ ಇದರಿಂದ ತನಗೆ ಆಸ್ಪತ್ರೆಗೆ ಹೋಗಲು ಕಾರಣ ಮತ್ತು ಅನುಮತಿ ಎರಡೂ ದೊರೆತಂತಾಯಿತು, ಎಂದು ಸಮಾಧಾನಗೊಂಡಳು. ಬೆಳಿಗ್ಗೆಯೇ ಹೋಗಿ ಅಬಾರ್ಶನ್‌ ಮಾಡಿಸಿಕೊಳ್ಳುವ ತೀರ್ಮಾನ ಮಾಡಿಕೊಂಡು ಮಲಗಿದಳು.

ರಾತ್ರಿ ಉಮಾರಿಗೆ ಜ್ವರ ಬಂದುಬಿಟ್ಟಿತು. ಮಾತ್ರೆ ತೆಗೆದುಕೊಂಡರೂ ಬೆಳಗಿನ ಹೊತ್ತಿಗೆ ಅತಿ ಹೆಚ್ಚಾಗಿ ಪ್ರಜ್ಞೆ ಇಲ್ಲದೆ ಮಲಗಿದರು. ಅವರನ್ನು ಪರೀಕ್ಷಿಸಿದ ಡಾಕ್ಟರ್‌ ಆಸ್ಪತ್ರೆಗೆ ದಾಖಲಿಸಲು ಹೇಳಿದರು. ಮನೆಯಲ್ಲೆಲ್ಲ ಇದೆ ಗಡಿಬಿಡಿಯಾಯಿತು. ಶೋಭಿನಿಯೂ ತನ್ನ ಸಮಸ್ಯೆಯನ್ನೆಲ್ಲ ಪಕ್ಕಕ್ಕಿಟ್ಟು ಅತ್ತೆಯ ಸೇವೆಯಲ್ಲಿ ತೊಡಗಿದಳು.

3 ದಿನಗಳ ನಂತರ ಅವರ ಪರಿಸ್ಥಿತಿ ಸುಧಾರಿಸಿತು. ಮೂರನೆಯ ದಿನ ಮನೆಗೆ ಕಳುಹಿಸುವುದಾಗಿ ಡಾಕ್ಟರ್‌ ಹೇಳಿ ಹೋದರು.

ಶೋಭಿನಿ ಅತ್ತೆಯ ಜೊತೆಗೇ ಇದ್ದಳು. `ಈಗ ಅವರ ಆರೋಗ್ಯ ಸುಧಾರಿಸಿತು. ಇನ್ನು 2-3 ದಿನಗಳಲ್ಲಿ ನಾನು ಅಬಾರ್ಶನ್‌ ಮಾಡಿಸಿಕೊಂಡುಬಿಡಬೇಕು,’ ಎಂದು ಯೋಚಿಸಿದಳು.

ಸಾಯಂಕಾಲ ಲತಾ ಕಾಫಿ ತೆಗೆದುಕೊಂಡು ಬಂದರು. ಅವರು ಕಾಫಿಯನ್ನು ಲೋಟಗಳಿಗೆ ಬಸಿಯುತ್ತಿದ್ದರೆ, ಶೋಭಿನಿಗೆ ವಾಕರಿಕೆ ಬಂದಂತಾಯಿತು. ಅವಳು ಎದ್ದು ಬಾತ್‌ರೂಮಿನತ್ತ ಓಡಿದಳು.

“ಲತಾ, ನೋಡು ಅವಳಿಗೇನಾಯಿತು?” ಎಂದರು ಉಮಾ. ಲತಾ ಬಾತ್‌ರೂಮಿನಲ್ಲಿ ಇಣುಕಿದರು. ಶೋಭಿನಿ ವಾಂತಿ ಮಾಡಿ ಸುಸ್ತಾಗಿ ನಿಂತಿದ್ದಳು. ಅವಳಿಗೆ ತಲೆ ಸುತ್ತಿ  ಬಂದಂತಾಯಿತು. ಲತಾ ಅವಳ ಕೈ ಹಿಡಿದು ಕರೆತಂದು ಕುರ್ಚಿಯ ಮೇಲೆ ಕುಳ್ಳಿರಿಸಿದರು. ಕುಡಿಯಲು ನೀರು ಕೊಟ್ಟರು.

ಶೋಭಿನಿಯ ಬಿಳಿಚಿದ ಮುಖವನ್ನು ನೋಡಿ ಉಮಾ ಗಾಬರಿಗೊಂಡರು. “ಶೋಭಾ, ಎರಡು ದಿನಗಳಿಂದ ಆಸ್ಪತ್ರೆಗೆ ಓಡಾಡಿ ಆಯಾಸ ಮಾಡಿಕೊಂಡು ಇದ್ದೀಯ. ಈಗ ಹೇಗಿದೆ?”

“ಏನಿಲ್ಲ ಅತ್ತೆ, ಸ್ವಲ್ಪ ತಲೆ ಸುತ್ತಿದಂತಾಯಿತು.”

ಲತಾ ನಕ್ಕರು, “ಸುಮ್ಮನೆ ತಲೆ ಸುತ್ತು ಬಂದಿತೋ ಅಥವಾ ವಿಶೇಷವೇ?”

“ಇಲ್ಲ. ಬಹಳ ಹೊತ್ತಿನಿಂದ ವಾಂತಿ ಬರುವ ಹಾಗಾಗುತ್ತಿತ್ತು ಅಷ್ಟೇ.”

“ಓಹೋ! ಇವೆಲ್ಲ ಶುಭ ಲಕ್ಷಣಗಳು ಹುಡುಗಿ. ಇಲ್ಲೇ ನಮ್ಮ ಮಾಲತಿ ಡಾಕ್ಟರ್‌ ಇದ್ದಾರೆ. ಅವರಿಗೆ ತೋರಿಸೋಣ. ಅಕ್ಕಾ, ನನಗಂತೂ ಸಿಹಿ ಸುದ್ದಿ ಸಿಗುವ ಭರವಸೆ ಇದೆ.”

ಉಮಾ ಸಹ ಉತ್ಸಾಹಿತರಾದರು, “ಲತಾ, ಈಗಲೇ ಕರೆದುಕೊಂಡು ಹೋಗಿ ತೋರಿಸು. ನಾನು ಚೆನ್ನಾಗಿದ್ದೇನೆ. ನನ್ನ ಬಗ್ಗೆ ಯೋಚಿಸಬೇಡ.”

ಡಾಕ್ಟರ್‌ ಬಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಶೋಭಿನಿ ಬಹಳ ಪ್ರಯತ್ನಿಸಿದಳು. ಆದರೆ ಅದೇನೂ ನಡೆಯಲಿಲ್ಲ.

ಅವಳನ್ನು ಪರೀಕ್ಷಿಸಿದ ಡಾಕ್ಟರ್‌ ಮಾಲತಿ ಅವಳು ಗರ್ಭಿಣಿಯಾಗಿರುವಳೆಂದು ಹೇಳಿದರು. ಸಂತಾನವಿಲ್ಲದೆ ನೊಂದಿದ್ದ ಲತಾ ಬಹಳ ಸಂತೋಷಪಟ್ಟರು, “ಕಂಗ್ರಾಟ್ಸ್ ಶೋಭಾ, ಇಷ್ಟು ವರ್ಷಗಳಾದ ಮೇಲೆ ಈಗ ಮನೆಗೆ ಒಬ್ಬ ಪುಟ್ಟ ಪಾಪು ಬರುತ್ತಾನೆ.”

ವಿಷಯ ತಿಳಿದ ಉಮಾ ಮಂಚದಿಂದ ಇಳಿದೇಬಿಟ್ಟರು. “ಸಿಹಿ ಸುದ್ದಿಯಂತೂ ನನ್ನ ಆಯಾಸವನ್ನೆಲ್ಲ ಓಡಿಸಿಬಿಟ್ಟಿತು,” ಎಂದು ಅವರು ಸೊಸೆಯನ್ನು ಆಲಿಂಗಿಸಿಕೊಂಡರು.

ಎಲ್ಲರ ಮನದಲ್ಲಿ ಸಂತಸ, ಸಂಭ್ರಮ ತುಂಬಿದ್ದರೆ ಶೋಭಿನಿ ತನ್ನ ಯೋಜನೆ ಅಸಫಲವಾದುದನ್ನು ನೆನೆದು ಸಂಕಟಪಟ್ಟಳು. ಅವಳ ಸೊರಗಿದ ಮುಖದ ಕಡೆಗೆ ಯಾರಿಗೂ ಗಮನಹರಿಯಲಿಲ್ಲ. ತಾನಿನ್ನು ಅಬಾರ್ಶನ್‌ ಮಾಡಿಸಿಕೊಳ್ಳುವಂತೆಯೇ ಇಲ್ಲ ಎಂದು ಚಿಂತಿಸುತ್ತಿದ್ದ ಅವಳಿಗೆ ಅವರೆಲ್ಲರ ಸಂತಸದ ಸ್ವರಗಳು ಕಿವಿಗೆ ಬೀಳಲಿಲ್ಲ.

ತನ್ನದೇ ಯೋಚನೆಯಲ್ಲಿ ಮುಳುಗಿದ್ದ ಅವಳನ್ನು ಲತಾ ಎಚ್ಚರಿಸಿದರು. “ಏನು, ಹೆದರಿದೆಯಾ? ಇದು ಬಹಳ ಸಂತೋಷದ ದಿನ. ನೀನೇನೂ ಯೋಚನೆ ಮಾಡಬೇಡ. ನಿನ್ನನ್ನು ನೋಡಿಕೊಳ್ಳುವುದಕ್ಕೆ ನಾವೆಲ್ಲ ಇದ್ದೇವೆ.”

ಉಮಾರಿಗೆ ಕೊಂಚ ಆಯಾಸವಿದ್ದರೂ ಈ ಸುದ್ದಿ ಅವರನ್ನು ಉತ್ಸಾಹಗೊಳಿಸಿತು. ಮನೆಗೆ ಬಂದ ಮೇಲೆ ಅವರು ರಮೇಶ್‌ ಮತ್ತು ಸುಧಾಗೆ ಫೋನ್‌ ಮಾಡಿ ವಿಷಯ ತಿಳಿಸಿದರು. ತಾವು ಶೀಘ್ರದಲ್ಲೇ ಅಜ್ಜ ಅಜ್ಜಿ ಆಗುವುದನ್ನು ನೆನೆದು ಅವರಿಗೂ ಬಹಳ ಖುಷಿಯಾಯಿತು.

ಶೋಭಿನಿಗೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಕೊಂಡಂತಾಯಿತು. ಅವಳು ಅಬಾರ್ಶನ್‌ ಮಾಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಮನೆಯಲ್ಲಿ ಎಲ್ಲರೂ ಸಂಭ್ರಮವನ್ನಾಚರಿಸುತ್ತಿದ್ದರು. ಬರಲಿರುವ ಪುಟ್ಟ ಅತಿಥಿಯ ವಿಷಯವಾಗಿ ಮಾತನಾಡುತ್ತಿದ್ದರು. ಇಷ್ಟೊಂದು ಪ್ರೀತಿ ತೋರುವ ಕುಟುಂಬಕ್ಕೆ ಮೋಸ ಮಾಡುತ್ತಿರುವ ಅಪರಾಧೀ ಭಾವದಿಂದ ಹೊರಬರಲಾರದೆ ಅವಳು ತೊಳಲಿದಳು.

ಅವಳ ನೀರಸ ಮುಖಮುದ್ರೆಯನ್ನು ಗಮನಿಸುತ್ತಿದ್ದ ಅಜಯ್‌, “ಶೋಭಾ, ನೀನು ಮೊದಲಿನಂತಿಲ್ಲ. ನಿನ್ನ ನಗು ಎಲ್ಲಿ ಹೋಯಿತು? ನೀನು ಸದಾ ಏನೋ ಯೋಚಿಸುತ್ತಿರುತ್ತೀಯಾ. ಹಿಂದಿನಂತೆ ಮಾತನಾಡುವುದಿಲ್ಲ. ಏನಾಯಿತು ಶೋಭಾ?” ಎಂದು ಕೇಳಿದ.

ಅಜಯ್‌ ಪ್ರೀತಿಯಿಂದ ತಲೆ ಸವರಿ ವಿಚಾರಿಸುವಾಗ ಶೋಭಿನಿಗೆ ಪತಿಯೊಂದಿಗೆ ಮನದ ದುಗುಡವನ್ನು ಹಂಚಿಕೊಳ್ಳಬೇಕು. ಎಲ್ಲರೂ ಕಾತರದಿಂದ ಕಾಯುತ್ತಿರುವ ತನ್ನ ಗರ್ಭದ ಭ್ರೂಣ ಯಾರ ಸಂತಾನ ಎಂದು ತನಗೇ ತಿಳಿದಿಲ್ಲ ಎಂದು ಹೇಳಿಬಿಡುವ ಆಲೋಚನೆ ಬಂದಿತು. ಆದರೆ ಹಾಗೆ ಮಾಡಲಾರದೆ ಸುಮ್ಮನೆ ಕಣ್ಣೀರು ಹರಿಸಿದಳು. ಅಜಯ್‌ ಗಾಬರಿಗೊಂಡು ಅವಳನ್ನು ತನ್ನೆದೆಗಾನಿಸಿಕೊಂಡು, “ನಡಿ, ಡಾಕ್ಟರ್‌ ಬಳಿಗೆ ಹೋಗೋಣ,” ಎಂದ.

“ಬೇಡ, ಏಕೋ ಬಹಳ ಆಯಾಸವಾಗುತ್ತಿದೆ…. ಸುಮ್ಮನೆ ಹೆದರಿಕೆಯಾಗುತ್ತದೆ.”

“ಹೌದು, ಪ್ರೆಗ್ನೆನ್ಸಿ ಇರುವಾಗ ಹೀಗೆಲ್ಲ ಆಗುವುದುಂಟು ಎಂದು ಅಮ್ಮ ಸಹ ಹೇಳುತ್ತಿದ್ದರು. ಇನ್ನು ಸ್ವಲ್ಪ ದಿನ, ಎಲ್ಲ ಸರಿ ಹೋಗುತ್ತದೆ ನೀನು ಆರಾಮವಾಗಿರು.”

ಶೋಭಿನಿ ಕಣ್ಣುಮುಚ್ಚಿ ಸುಮ್ಮನೆ ಮಲಗಿದಳು. ಅಜಯ್‌ ಅವಳ ಬೆನ್ನು, ಭುಜ ನೇವರಿಸುತ್ತಾ ಮನಸ್ಸಿನಲ್ಲೇ ಒಂದು ಯೋಜನೆ ರೂಪಿಸಿದ. ಶೋಭಿನಿಯ ಸ್ನೇಹಿತರ ಪರಿಚಯ ಅವನಿಗಿತ್ತು. ಒಂದೆರಡು ಸಲ ಅವರನ್ನು ಭೇಟಿ ಮಾಡಿದ್ದನು. ಅವನಲ್ಲಿ ರೋಹನ್‌ನ ಫೋನ್‌ ನಂಬರ್‌ ಇತ್ತು. ಈಗ ಅವಳಿಗೊಂದು ಸರ್‌ಪ್ರೈಸ್‌ ಕೊಡುವ ಯೋಚನೆ ಮಾಡಿದ.

ರೋಹನ್‌ಗೆ ಫೋನ್‌ ಮಾಡಿ ಅಜಯ್‌ ಅವನೊಂದಿಗೆ ಚರ್ಚಿಸಿದ, “ರೋಹನ್‌, ನಿನ್ನ ಫ್ರೆಂಡ್‌ ಒಂದು ಸಿಹಿ ಸುದ್ದಿ ಕೊಡುವವಳಿದ್ದಾಳೆ. ಆ ನೆಪದಲ್ಲಿ ಒಂದು ಪಾರ್ಟಿ ಏರ್ಪಡಿಸಿದರೆ ಹೇಗೆ….?”

“ವಾವ್‌! ಕಂಗ್ರಾಟ್ಸ್. ಖಂಡಿತಾ ಪಾರ್ಟಿ ಮಾಡೋಣ.”

“ಹಾಗಾದರೆ ನೀನು ಉಳಿದ ಸ್ನೇಹಿತರ ಜೊತೆ ಮಾತನಾಡು. ಇದು ಶೋಭಾಳಿಗೆ ಒಂದು ಸರ್‌ಪ್ರೈಸ್‌ ಪಾರ್ಟಿ. ಅವಳು ಸ್ವಲ್ಪ ಆಯಾಸಗೊಂಡಿದ್ದಾಳೆ. ಹೊರಗಡೆ ಹೋಗುವುದಕ್ಕೆ ತೊಂದರೆ ಆಗಬಹುದು. ಆದ್ದರಿಂದ ನೀವೆಲ್ಲರೂ ಭಾನುವಾರದ ದಿನ ನಮ್ಮ ಮನೆಗೆ ಡಿನ್ನರ್‌ಗೆ ಬಂದುಬಿಡಿ.”

“ಓಹೋ! ನಾನು ಎಲ್ಲರಿಗೂ ವಿಷಯ ತಿಳಿಸುತ್ತೇನೆ.”

“ನನ್ನ ಪರವಾಗಿ ನಿನ್ನ ಪತ್ನಿ ಮತ್ತು ರೀಟಾಳ ಪತಿಯನ್ನೂ ಆಹ್ವಾನಿಸಬೇಕು.”

“ಹಾಗೇ ಆಗಲಿ, ಎಲ್ಲರೂ ಬರುತ್ತೇವೆ.”

ರೋಹನ್‌ ಸ್ನೇಹಿತರಿಗೆಲ್ಲ ಪಾರ್ಟಿ ಬಗ್ಗೆ ತಿಳಿಸಿದ. ಅದನ್ನು ಕೇಳಿ ಎಲ್ಲರೂ ಸಂತೋಷಿಸಿದರು.

ಅಜಯ್‌ ಮನೆಯಲ್ಲಿ ಬೇರೆಲ್ಲರಿಗೂ ಸಂಡೆ ಡಿನ್ನರ್‌ ವಿಷಯ ಹೇಳಿದ. ಶೋಭಿನಿಗೆ ಮಾತ್ರ ಗೋಪಿನಾಥರ ಪರಿಚಿತರು ಬರುವವರೆಂದು ತಿಳಿಸಲಾಗಿತ್ತು. ಅವಳೂ ಅತ್ತೆಯೊಂದಿಗೆ ಸಣ್ಣ ಪುಟ್ಟ ಕೆಲಸಗಳಿಗೆ ಕೈ ಹಾಕಿದಳು.

ಸಾಯಂಕಾಲ ಲತಾ, “ಶೋಭಾ ಹೋಗಿ ಸಿದ್ಧಳಾಗು. ಅತಿಥಿಗಳು ಬರುವ ಸಮಯವಾಯಿತು.

”ಕತ್ತಲಾಗುತ್ತಾ ಬಂದಿತು. ಮನೆಯನ್ನೆಲ್ಲ ಸುಂದರವಾಗಿ ಅಲಂಕರಿಸಲಾಗಿತ್ತು. 7 ಗಂಟೆಯ ಹೊತ್ತಿಗೆ ರೋಹನ್‌ ಮತ್ತು ಅವನ ಪತ್ನಿ ಮಂಜು, ರೀಟಾ ಮತ್ತು ಅವಳ ಪತಿ ಸುಜಯ್‌ ಜೊತೆಯಾಗಿ ಬಂದರು. ಶೋಭಿನಿಗೆ ಅವರನ್ನು ನೋಡಿ ಆಶ್ಚರ್ಯವಾಯಿತು. ಜೊತೆಗೆ ಸಂತೋಷ ಆಯಿತು. “ಇಷ್ಟೊಂದು ದಿನಗಳಾದ ಮೇಲೆ ನಿಮ್ಮನ್ನು ನೋಡಿ ಖುಷಿಯಾಯಿತು,” ಎಂದಳು.

ಉಳಿದ ಸ್ನೇಹಿತರು ಬರುತ್ತಿರುವ ಬಗ್ಗೆ ರೋಹನ್‌ ಮತ್ತು ರೀಟಾ ಹೇಳಲಿಲ್ಲ. ಅವರೆಲ್ಲ ಡ್ರಾಯಿಂಗ್‌ ರೂಮಿನಲ್ಲಿ ಆರಾಮವಾಗಿ ಕುಳಿತು ಮಾತನಾಡತೊಡಗಿದರು. ಶೋಭಿನಿ ಸಿಹಿಸುದ್ದಿ ನೀಡುತ್ತಿರುವುದಕ್ಕಾಗಿ ನಾಲ್ವರೂ ಅವಳನ್ನು ಅಭಿನಂದಿಸಿದರು. ಅನಿರೀಕ್ಷಿತವಾಗಿ ಸ್ನೇಹಿತರನ್ನು ನೋಡಿ ಕೆಲಕಾಲ ಎಲ್ಲವನ್ನೂ ಮರೆತಿದ್ದ ಶೋಭಿನಿಗೆ, ಆ ವಿಷಯದ ಪ್ರಸ್ತಾಪದಿಂದ ಮನ ಮುದುಡಿತು.

ಮತ್ತೆ  ಸ್ವಲ್ಪ ಹೊತ್ತಿಗೆ ಅನಿತಾ, ಸುಮನ್‌, ಸೋನಿಯಾ, ಸಂಜಯ್‌, ಅನಿಲ್‌ ಮತ್ತು ಕೃಪಾಕರ್‌ ಸಹ ಬಂದರು. ಆಗ ಶೋಭಿನಿಗೆ ತನ್ನನ್ನು ಮುದಗೊಳಿಸಲು ಅಜಯ್‌ ಸ್ನೇಹಿತರನ್ನು ಸೇರಿಸಿದ್ದಾರೆ ಎಂಬುದು ಅರಿವಿಗೆ ಬಂದಿತು. ಈ ಎಲ್ಲ ಮಿತ್ರರನ್ನು ಒಟ್ಟಾಗಿ ನೋಡಿ ಅವಳಿಗೆ ಆ ದುರ್ದಿನ ನೆನಪಿಗೆ ಬಂದಿತು. ಇವರಲ್ಲಿ ಯಾರೋ ಒಬ್ಬರು ತನಗೆ ವಿಶ್ವಾಸಘಾತ ಮಾಡಿರುವರು ಎಂಬ ಕಹಿ ಸತ್ಯ ಮತ್ತೆ ಮನಸ್ಸನ್ನು ಅಪ್ಪಳಿಸಿತು.

ಹಳೆಯ ಗೆಳೆಯ ವೃಂದ ಒಟ್ಟಿಗೆ ಸೇರಿದ ಮೇಲೆ ಮೆಲು ಮಾತಿಗೆ ಎಡೆಯೆಲ್ಲಿ! ಅವರ ಹಾಸ್ಯ ನಗುವಿನ ಅಬ್ಬರ ಅಲೆಯಾಗಿ ಹರಿಯಿತು. ಉಮಾ ಮತ್ತು ಲತಾ ಆಳಿನ ಜೊತೆಗೆ ಸೇರಿ ವೆಲ್‌ಕಮ್ ಡ್ರಿಂಕ್ಸ್ ಮತ್ತು ಸ್ನ್ಯಾಕ್ಸ್ ನೀಡಿ ಉಪಚರಿಸಿದರು. ನಂತರ ಗೆಳೆಯರ ಗುಂಪಿಗೆ ಅಡ್ಡಿ ಮಾಡದಂತೆ ಗೋಪಿನಾಥ್‌, ರಘುನಾಥ್‌ ಒಳಗೆ ಸರಿದರು. ಅಜಯ್‌ ಎಲ್ಲರೊಡನೆ ಸೇರಿ ತಾನೂ ಮಾತಿನಲ್ಲಿ ತೊಡಗಿದ.

ಶೋಭಿನಿಯ ಮನಸ್ಸಿನಲ್ಲಿ ಬಿರುಗಾಳಿ ಎದ್ದಿತು. ಅವಳು ರೋಹನ್‌, ಕೃಪಾಕರ್‌, ಸಂಜಯ್‌ ಮತ್ತು ಅನಿಲ್‌ರ ಮುಖಗಳನ್ನು ಮತ್ತೆ ಮತ್ತೆ ನೋಡಿದಳು. ರೋಹನ್‌ ವಿವಾಹಿತ, ಅವನಾಗಲು ಸಾಧ್ಯವಿಲ್ಲ. ಸಂಜಯ್‌ ತನ್ನ ಬಾಲ್ಯ ಸ್ನೇಹಿತ, ಚಿಕ್ಕಂದಿನಿಂದಲೂ ಜೊತೆಯಾಗಿದ್ದವನು. ಅವನು ಇಂತಹ ದೃಷ್ಕೃತ್ಯ ಮಾಡಲಾರ. ಅನಿಲ್‌ ಮತ್ತು ಕೃಪಾಕರ್‌ ಇಬ್ಬರೂ ಅತ್ಯಂತ ಮರ್ಯಾದಸ್ಥರು. ಮೊದಲಿನಿಂದಲೂ ಮನೆಗೆ ಬಂದು ಹೋಗುತ್ತಿದ್ದರು. ಹಾಗಾದರೆ ಆ ರಾತ್ರಿ ದುಷ್ಕೃತ್ಯ ಎಸಗಿದವರು ಯಾರಿರಬಹುದು. ಯೋಚಿಸಿ ಯೋಚಿಸಿ ಶೋಭಿನಿ ತಲೆಯ ನರಗಳು ಸಿಡಿಗುಟ್ಟುವಂತಹ ಅನುಭವವಾಗತೊಡಗಿತು.

ಊಟದ ಕಾರ್ಯಕ್ರಮ ಪ್ರಾರಂಭವಾಯಿತು. ಎಲ್ಲರೂ ಅಡುಗೆಯ ರುಚಿಯನ್ನು ಹೊಗಳುತ್ತಾ ಬಾಯಿ ಚಪ್ಪರಿಸಿಕೊಂಡು ಊಟ ಮಾಡಿದರು. ಆದರೆ ಶೋಭಿನಿಗೆ ಆ ಕಡೆ ಗಮನವಿರಲಿಲ್ಲ. ಅವಳ ಮನಸ್ಸು ಚೀರುತ್ತಿತ್ತು….. ಈ ಹುಡುಗರಲ್ಲಿ ಯಾರಿರಬಹುದು…. ಆ ರಾತ್ರಿ….? ಇದರಲ್ಲಿ ಯಾರ ಅಂಶ ತನ್ನ ಗರ್ಭದಲ್ಲಿ ರೂಪುಗೊಂಡಿರಬಹುದು…. ಅತೀ ಚಿಂತೆಯಿಂದ ಅವಳು ಬಳಲಿದಳು. ಹಾಗೆಯೇ ಅರೆ ಪ್ರಜ್ಞಾವಸ್ಥೆಯಲ್ಲಿ ಕುಸಿದಳು. ಪಕ್ಕದಲ್ಲೇ ಕುಳಿತಿದ್ದ ರೇಖಾ ಅವಳನ್ನು ಹಿಡಿದು ಒರಗಿಸಿಕೊಂಡಳು.

ಶೋಭಿನಿಯ ಸ್ಥಿತಿಯನ್ನು ಕಂಡು ಎಲ್ಲರೂ ಗಾಬರಿಗೊಂಡರು. “ಅಜಯ್‌, ಬೇಗ ಡಾಕ್ಟರ್‌ ಮಾಲತಿಗೆ ಫೋನ್‌ ಮಾಡು,” ಎಂದರು ಉಮಾ.

ಅಜಯ್‌ ಮತ್ತು ಲತಾ ಮೆಲ್ಲನೆ ಶೋಭಿನಿಯನ್ನು ಬೆಡ್‌ರೂಮಿಗೆ ಕರೆದೊಯ್ದು ಮಲಗಿಸಿದರು. ಸ್ನೇಹಿತರೆಲ್ಲ ಮೌನವಾಗಿ ನಿಂತಿದ್ದರು. ಸಂಜಯ್‌ ಸಹ ಅವರೊಡನೆ ಇದ್ದ. ಶೋಭಿನಿಯ ಗರ್ಭದಲ್ಲಿ ತನ್ನ ಸಂತಾನವಿದೆ ಎಂದು ಅವನಿಗೆ ತಿಳಿದಿರಲಿಲ್ಲ. ಆದರೆ ತಾನು ಎಸಗಿದ ದುಷ್ಕೃತ್ಯಕ್ಕಾಗಿ ಅವನಿಗೆ ನಾಚಿಕೆಯೇನೂ ಇರಲಿಲ್ಲ.

ಡಾಕ್ಟರ್‌ ಮಾಲತಿ ಬಂದು ಶೋಭಿನಿಯನ್ನು ಪರೀಕ್ಷಿಸಿ, “ಉಮಾ, ಇವಳಿಗೆ ಹೈ ಬ್ಲಡ್‌ ಪ್ರೆಶರ್‌ ಇದೆಯಲ್ಲ….. ಯಾವುದಾದರೂ ಟೆನ್ಶನ್‌ನಲ್ಲಿದ್ದಾಳೆಯೇ?” ಎಂದು ಕೇಳಿದರು.

ಅಜಯ್‌, “ಇಲ್ಲವಲ್ಲ, ಸ್ನೇಹಿತರ ಜೊತೆ ಮಾತನಾಡಿಕೊಂಡು ಆರಾಮವಾಗಿ ಕುಳಿತಿದ್ದಳು. ಇದ್ದಕ್ಕಿದ್ದ ಹಾಗೆ ಹೀಗೇಕಾಯಿತು ಗೊತ್ತಿಲ್ಲ. ಆದರೆ ಈಚೆಗೆ ಬಹಳ ಆಯಾಸಗೊಂಡಿರುತ್ತಾಳೆ,” ಎಂದ.

ವೈದ್ಯರು ಕೆಲವು ಸೂಚನೆಗಳನ್ನೂ, ಔಷಧವನ್ನೂ ಕೊಟ್ಟು ಹೊರಟುಹೋದರು. ಎಲ್ಲ ಸ್ನೇಹಿತರು ಉತ್ತಮ ಆರೋಗ್ಯವನ್ನೂ ಹಾರೈಸಿ, ಬೀಳ್ಕೊಂಡರು.

ಶೋಭಿನಿಯ ಸ್ಥಿತಿ ಮನೆಯಲ್ಲಿ ಎಲ್ಲರಿಗೂ ದುಃಖವನ್ನುಂಟು ಮಾಡಿತು. “ಇವಳಿಗೆ ಏನಾಯಿತು, ಅದೇನು ಯೋಚನೆ ಮಾಡುತ್ತಾಳೋ, ಏನು ಚಿಂತೆಯೋ, ಒಂದೂ ತಿಳಿಯುತ್ತಿಲ್ಲ,” ಎಂದು ಉಮಾ ಅಲವತ್ತುಗೊಂಡರು.

“ಸ್ವಲ್ಪ ರೆಸ್ಟ್ ತೆಗೆದುಕೊಂಡರೆ ಸರಿಹೋಗುತ್ತಾಳೆ. ಡಾಕ್ಟರ್‌ ಮಾತ್ರೆ ಕೊಟ್ಟಿದ್ದಾರಲ್ಲ….. ನೀವೇನು ಯೋಚನೆ ಮಾಡಬೇಡಿ,” ಎಂದು ಲತಾ ಸಮಾಧಾನ ಹೇಳಿದರು.

“ಅಳಬೇಡಮ್ಮ, ಈ ಸಮಯದಲ್ಲಿ ಒಮ್ಮೊಮ್ಮೆ ಆರೋಗ್ಯ ಹೀಗೆ ಹದಗೆಡುತ್ತದೆ. ನೀನು ಅದನ್ನು ತಲೆಗೆ ಹಚ್ಚಿಕೊಳ್ಳದೆ ಆರಾಮವಾಗಿರು.”

ಅತ್ತೆಗೆ ಬೇಸರವಾಗದಿರಲೆಂದು ಶೋಭಿನಿ ನಗುಮುಖ ಮಾಡಿಕೊಂಡಳು. ಆಗ ಎಲ್ಲರಿಗೂ ಕೊಂಚ ನೆಮ್ಮದಿಯಾಯಿತು.

ಅಂದು ರಾತ್ರಿ ಪತ್ನಿಯ ಮನಸ್ಸನ್ನು ತಿಳಿಗೊಳಿಸಲು ಅಜಯ್‌, ಅವಳ ಸ್ನೇಹಿತರ ಕುರಿತು ಮಾತು ತೆಗೆದನು. ಕೂಡಲೇ ಶೋಭಿನಿ, “ಅಜಯ್‌ ಪ್ಲೀಸ್‌, ನಮ್ಮ ವಿಷಯ ಮಾತನಾಡಿ. ಬೇರೆಯವರ ಬಗ್ಗೆ ಬೇಡ,” ಎಂದಳು.

“ಸರಿ. ಆದರೆ ಒಂದು ವಿಷಯ ನಿಜ ಹೇಳು. ನಿನಗೆ ಏನು ಚಿಂತೆ ಹತ್ತಿದೆ?”

“ಚಿಂತೆ ಏನೂ ಇಲ್ಲ. ಬಹಳ ಆಯಾಸ ಆಗುತ್ತದೆ. ನೀವೇನೂ ಯೋಚನೆ ಮಾಡಬೇಡಿ. ನಾನು ಜೋಪಾನವಾಗಿರುತ್ತೇನೆ,” ಎನ್ನುತ್ತಾ ಶೋಭಿನಿ ಪತಿಯನ್ನು ಬಳಸಿಹಿಡಿದು ಮಲಗಿದಳು.

ಮನೆಯಲ್ಲಿ ಎಲ್ಲರೂ ಮಗುವಿನ ಆಗಮನನ್ನು ನಿರೀಕ್ಷಿಸುತ್ತಿದ್ದರು. ಶೋಭಿನಿಯ ತಂದೆ ತಾಯಿಯರೂ ಆಗಾಗ ಬಂದು ಅವಳನ್ನು ನೋಡಿಕೊಂಡು ಹೋಗತ್ತಿದ್ದರು. `ಇದೆಂತಹ ಅವಸ್ಥೆ ನನ್ನದು. ಹುಟ್ಟಲಿರುವ ಮಗುವನ್ನು ನಾನು ಹೇಗೆ ನೋಡಿಕೊಳ್ಳುವೆನೋ ಗೊತ್ತಿಲ್ಲ. ನನಗಂತೂ ಅದರ ಮೇಲೆ ಕೊಂಚವೂ ಮಮತೆ ಹುಟ್ಟುತ್ತಿಲ್ಲ,’ ಎಂದು ಶೋಭಿನಿ ಆತಂಕಪಟ್ಟುಕೊಳ್ಳುತ್ತಿದ್ದಳು.

ದಿನ ತುಂಬಿ ಬಂದು ಶೋಭಿನಿ ಒಂದು ಮುದ್ದಾದ ಆರೋಗ್ಯವಂತ ಶಿಶುವಿಗೆ ಜನ್ಮವಿತ್ತಳು. ಬಹಳ ಕಾಲದಿಂದ ಸಂತಾನಕ್ಕಾಗಿ ಹಂಬಲಿಸಿ ನೊಂದಿದ್ದ ಲತಾ ಮಗುವನ್ನು ಬಿಗಿದಪ್ಪಿ ಸಂತೋಷದ ಕಣ್ಣೀರು ಹರಿಸಿದರು. ರಮೇಶ್‌ ಮತ್ತು ಸುಧಾ ಸಂಭ್ರಮದಿಂದ ಎಲ್ಲರಿಗೂ ಸಿಹಿ ಹಂಚಿದರು.

ಉಮಾ ಮಗುವನ್ನು ನೋಡಿ, “ಇದಂತೂ ಅಜಯ್‌ನ ಹಾಗೇ ಇದೆ,” ಎಂದರು.

ಲತಾ ಹೇಳಿದರು, “ಶೋಭಿನಿಯ ಹೋಲಿಕೆ ಕಾಣುತ್ತದೆ ನೋಡಿ.”

“ನನಗೇನೋ ನನ್ನ ಅಮ್ಮನ ಹಾಗೇ ಕಾಣಿಸುತ್ತಿದೆ,” ಎಂದು ಗೋಪಿನಾಥ್‌ ನಗುತ್ತಾ ನುಡಿದರು.

ಎಲ್ಲರೂ ಮಗುವನ್ನು ನೋಡಲು, ಎತ್ತಿಕೊಳ್ಳಲು ಪೈಪೋಟಿ ನಡೆಸುತ್ತಿದ್ದರೆ, ಶೋಭಿನಿಗೆ ಅದರ ಕಡೆ ತಿರುಗಿ ನೋಡುವ ಆಸಕ್ತಿಯೂ ಇರಲಿಲ್ಲ. ಅವಳಿಗೆ ಎದೆಯ ಮೇಲೆ ಕಲ್ಲುಗುಂಡನ್ನಿರಿಸಿರುವಂತೆ ಭಾಸವಾಗುತ್ತಿತ್ತು.

ಎಲ್ಲರೂ ಮಗುವಿನತ್ತ ಆಕರ್ಷಿತರಾಗಿದ್ದುದರಿಂದ ಶೋಭಿನಿಯನ್ನು ಅಷ್ಟಾಗಿ ಯಾರೂ ಗಮನಿಸಲಿಲ್ಲ. ಒಂದಷ್ಟು ಹೊತ್ತಾದ ನಂತರ ಅಜಯ್‌ ಪತ್ನಿಯ ಬಳಿಗೆ ಬಂದು, “ಹೇಗಿದ್ದೀಯಾ?” ಎಂದು ಕೇಳಿದ.

ಶೋಭಿನಿ ತಲೆಯಲುಗಿಸಿ ಮೆಲುನಗೆ ಬೀರಿದಳು.

“ಇನ್ನೂ ಮುಂದೆ ನಿನ್ನ ಆರೋಗ್ಯ ಚೆನ್ನಾಗಿರಲೇಬೇಕು. ಚಿಂತೆ, ಬೇಸರ ಯಾವುದೂ ನಡೆಯುವುದಿಲ್ಲ. ತಿಳಿಯಿತಾ?” ಎಂದು ಅಜಯ್‌ ನಕ್ಕ.

`ಎಲ್ಲರೂ ಮಗುವನ್ನು ನೋಡಿ ಇಷ್ಟೊಂದು ಸಂತೋಷಪಡುತ್ತಿದ್ದಾರೆ. ಆದರೆ ಅದರ ತಂದೆ ಯಾರೆಂದು ನನಗೂ ಗೊತ್ತಿಲ್ಲ. ನನ್ನ ಕುಟುಂಬಕ್ಕೆ ನಾನು ಮಾಡಿರುವ ಮೋಸವನ್ನು ಈ ಮಗು ಸದಾ ನೆನಪಿಸಿಕೊಡುತ್ತದೆ. ನಾನಿದನ್ನು ಹೇಗೆ ಸಾಕಲಿ….?’ ಎಂದು ಅವಳು ಯೋಚಿಸುತ್ತಿದ್ದಳು.

ಶೋಭಿನಿ ಬಹಳ ಆಯಾಸಗೊಂಡಿದ್ದಳು. ಆದ್ದರಿಂದ ಅವಳು ಕಣ್ಣು ಮುಚ್ಚಿ ಮಲಗಿದ್ದಳು. ಆಗ ಹೊರಗಡೆ ಏನೋ ಗಲಿಬಿಲಿಯ ಸದ್ದು ಕೇಳಿ ಬಂತು. ಕೊಂಚ ಹೊತ್ತಿನ ನಂತರ ಒಳಗೆ ಬಂದ ನರ್ಸನ್ನು ಕೇಳಿದಳು.

“ಏನಾಯಿತು?”

“ನಿನ್ನೆ ಒಂದು ಹುಡುಗಿ ಇಲ್ಲಿ ಅಡ್ಮಿಟ್‌ ಆಗಿದ್ದಳು. ರಾತ್ರಿ ಅವಳಿಗೆ ಹೆರಿಗೆಯಾಯಿತು. ಈಗ ನೋಡಿದರೆ ಅವಳು ಮಗುವನ್ನು ಬಿಟ್ಟು ಓಡಿಹೋಗಿದ್ದಾಳೆ. ಅವಳು ಇಲ್ಲಿ ಸೇರುವಾಗ ಸುಳ್ಳು ವಿಳಾಸ ಮತ್ತು ಫೋನ್‌ ನಂಬರ್‌ ಕೊಟ್ಟಿದ್ದಾಳೆ. ಅವಳನ್ನು ಪತ್ತೆ ಹಚ್ಚುವುದು ಸಾಧ್ಯವಿಲ್ಲ. ಈಗ ಮಕ್ಕಳಿಲ್ಲದಿರುವ ಒಬ್ಬ ಪತಿ ಪತ್ನಿ ಆಸ್ಪತ್ರೆಗೆ ಯಾರನ್ನೋ ನೋಡಲು ಬಂದಿದ್ದರು. ವಿಷಯ ತಿಳಿದು ಅವರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.”

ಇನ್ನೊಬ್ಬ ನರ್ಸ್‌ ಹೇಳಿದಳು, “ಹೆತ್ತ ತಾಯಿ ಮಗುವನ್ನು ಬಿಟ್ಟು ಹೊರಟುಹೋದಳು. ಇನ್ನು ಯಾರೋ ಬೇರೆಯವರು ಆ ಮಗುವನ್ನು ಸಾಕಿಕೊಳ್ಳಲು ಎಷ್ಟು ಉತ್ಸಾಹ ತೋರಿಸುತ್ತಿದ್ದಾರೆ. 10 ವರ್ಷಗಳಿಂದ ಅವರಿಗೆ ಮಗು ಇಲ್ಲದೆ, ಈಗ ಅವರಿಗೆ ನಿಧಿ ಸಿಕ್ಕ ಹಾಗೆ ಆಗಿದೆ. ಆ ಮಗು ಯಾರದು? ಎಂತಹವರು ಅನ್ನುವ ಬಗ್ಗೆ ಅವರಿಗೇನೂ ಯೋಚನೆ ಇಲ್ಲ.”

ಶೋಭಿನಿ ಉಸಿರು ಬಿಗಿಹಿಡಿದು ಅವರ ಮಾತುಗಳನ್ನು ಕೇಳಿದಳು. ಅವಳ ಬುದ್ಧಿ ತಿಳಿಯಾಯಿತು, ಕಣ್ಣು ತೆರೆಯಿತು. `ಅಲ್ಲಿ  ಯಾರದೋ ಬೇರೆಯವರ ಮಗುವಿಗಾಗಿ ಅವರು ಕಾತರಿಸುತ್ತಿದ್ದಾರೆ. ಇಲ್ಲಿ ನಾನು ನನ್ನದೇ ಮಗುವಿನಿಂದ ಮುಖ ತಿರುಗಿಸಿ ಮಲಗಿದ್ದೇನೆ. ಇದರ ತಂದೆ ಯಾರೇ ಆಗಿರಲಿ, ತಾಯಿಯಂತೂ ನಾನೇ. ನನ್ನದೇ ರಕ್ತ ಮಾಂಸವನ್ನು ಹಂಚಿಕೊಂಡು ಹುಟ್ಟಿರುವ ಕಂದ ಇದು. ತಾಯಿಯ ಪ್ರೀತಿಯನ್ನು ಪಡೆಯುವ ಹಕ್ಕು ಇದಕ್ಕೂ ಇದೆಯಲ್ಲವೇ? ತಾಯಿಯಷ್ಟೇ ಏಕೆ ಪ್ರತಿಯೊಂದು ಸಂಬಂಧವನ್ನೂ ಬೆಸೆಯುವ ಕುಡಿ ಇದು. ತಂದೆ, ಅಜ್ಜಿ, ತಾತಾ, ಎಲ್ಲರ ಸಂತೋಷಕ್ಕೆ ಕಾರಣವಾಗುವ ಕಂದ ಇದು. ಮಗುವಿನ ತಪ್ಪು ಏನೂ ಇಲ್ಲದಿರುವಾಗ ಅದರ ಹಕ್ಕನ್ನು ಕಸಿಯುವ ಅಧಿಕಾರ ತನಗೆಲ್ಲಿಯದು….?’ ಅಪರಿಚಿತ ದಂಪತಿಯ ಬಗ್ಗೆ ಮತ್ತು ತನ್ನ ಮಗುವಿನ ಬಗ್ಗೆ ಯೋಚಿಸುತ್ತಾ ಯೋಚಿಸುತ್ತಾ ಶೋಭಿನಿಯ ಮಾನಸಿಕ ಸಂತಾಪ ಕರಗುತ್ತಾ ಬಂದಿತು.

ಅವಳು ಮೆಲ್ಲನೆ ಪಕ್ಕಕ್ಕೆ ತಿರುಗಿದಳು. ಮಗ್ಗುಲಲ್ಲೇ ಮಲಗಿದ್ದ ಮಗುವಿನ ಮುಖವನ್ನು ನೋಡುತ್ತಾ ಅದನ್ನು ಮೃದುವಾಗಿ ಎದೆಗಾನಿಸಿಕೊಂಡಳು. ಆ ಕೋಮಲ ಸ್ಪರ್ಶ ಕಳೆದ ಕೆಲವು ತಿಂಗಳುಗಳಿಂದ ಅವಳ ತನುಮನಗಳನ್ನು ಕುದಿಸುತ್ತಿದ್ದ ಧಗೆಯನ್ನು ಶಮನಗೊಳಿಸಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ